
ಹಿರಿಯ ಸಿನಿಮಾ ಛಾಯಾಗ್ರಾಹಕ
ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ವೃತ್ತಿಬದುಕಿನ ಆರಂಭದಲ್ಲಿ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದರು. ಆಗೊಮ್ಮೆ ನಟ ಶಶಿಕಪೂರ್ ಅವರೊಂದಿಗೆ ಕಾರಿನಲ್ಲಿ ಕುಳಿತುಕೊಳ್ಳುವ ಅವಕಾಶ ಅವರಿಗೆ ಒದಗಿಬಂದಿತ್ತು. ಶಶಿಕಪೂರ್ ಜನ್ಮದಿನದ (ಮಾರ್ಚ್ 18) ನೆನಪಿನಲ್ಲಿ ಬಸವರಾಜ್ ಅವರು ಆ ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ.
ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್‍ನಲ್ಲಿ ಸಿನಿಮಾಟೋಗ್ರಫಿ ಕಲಿತ ನಂತರ ನಾನು ಮುಂಬೈಗೆ (1965) ಹೋದೆ. ಅಲ್ಲಿ ಮೈಸೂರು ಮೂಲದ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರಲ್ಲಿ ಸಹಾಯಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮೂರ್ತಿಯವರು ಮತ್ತೊಬ್ಬ ಹಿಂದಿ ಛಾಯಾಗ್ರಾಹಕ ರಾಜೇಂದ್ರ ಮಲಾನಿ ಅವರಿಗೆ ನನ್ನನ್ನು ಪರಿಚಯಿಸಿದರು. ಬಸಂತ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ `ವೀರ್ ಭಜರಂಗ್’ ಚಿತ್ರಕ್ಕೆ ಮಲಾನಿ ಛಾಯಾಗ್ರಹಣ ಮಾಡುತ್ತಿದ್ದರು. ಅವರಿಗೆ ಸಹಾಯಕನಾಗಿ ದುಡಿಯುವ ಅವಕಾಶ ನನ್ನದಾಯ್ತು. ಶಶಿಕಪೂರ್ ಈ ಚಿತ್ರದ ಹೀರೋ.
ಅದೊಂದು ದಿನ ಶೂಟಿಂಗ್ ಮುಗಿಯುವ ಹೊತ್ತಿಗೆ ರಾತ್ರಿ ಒಂದೂವರೆ ಗಂಟೆಯಾಗಿತ್ತು. ಶಶಿಕಪೂರ್ ಅವರ ಪರ್ಸನಲ್ ಮೇಕಪ್‍ಮ್ಯಾನ್ ಶ್ಯಾಂ, `ಮನೆಗೆ ಹೇಗೆ ಹೋಗುತ್ತೀಯಾ?’ ಎಂದು ಕೇಳಿದರು. ಮುಂಬೈಗೆ ಹೊಸಬನಾದ ನಾನು ಏನೂ ಗೊತ್ತಾಗದೆ ಸುಮ್ಮನೆ ನಿಂತಿದ್ದೆ. ನನ್ನನ್ನು ಶಶಿಕಪೂರ್ ಅವರ ಬಳಿ ಕರೆದೊಯ್ದ ಶ್ಯಾಂ, `ನೀವು ಹೇಗಿದ್ದರೂ ದಾದರ್ ಮೇಲೆ ಹೋಗುತ್ತಿದ್ದೀರಿ, ಈ ಹುಡುಗನನ್ನು ಅಲ್ಲಿ ಬಿಟ್ಟುಬಿಡಿ’ ಎಂದರು. ಮರುಮಾತನಾಡದೆ `ಓಕೆ’ ಎಂದ ಶಶಿಕಪೂರ್ ಕಾರಿನಲ್ಲಿ ತಮ್ಮ ಪಕ್ಕ ನನ್ನನ್ನು ಕೂರಿಸಿಕೊಂಡರು! ನಾನು ಆಗಷ್ಟೇ ಸಿನಿಮಾಗೆ ಪರಿಚಯವಾದವ. ಸ್ಟಾರ್ ಹೀರೋ ಶಶಿಕಪೂರ್ ಜೊತೆ ಕಾರಿನಲ್ಲಿ ಕುಳಿತು ಹೋಗಿದ್ದನ್ನು ನೆನಪು ಮಾಡಿಕೊಂಡಾಗ ಇಂದಿಗೂ ರೋಮಾಂಚನವಾಗುತ್ತದೆ.
