ಹಿರಿಯ ಮೇಕಪ್ ಕಲಾವಿದ ಎನ್.ಕೆ.ರಾಮಕೃಷ್ಣ ಅವರ ಬಣ್ಣದ ಬದುಕಿಗೀಗ ನಾಲ್ಕು ದಶಕ. ಕಲಾತ್ಮಕ, ಕಮರ್ಷಿಯಲ್ ಎರಡೂ ಶೈಲಿಯ ಚಿತ್ರಗಳಲ್ಲಿ ಅವರದು ದಟ್ಟ ಅನುಭವ. ಮೇಕಪ್ ಆರ್ಟಿಸ್ಟ್ ಆಗಿ ರಾಮಕೃಷ್ಣ ಕೆಲಸ ಮಾಡಿರುವ ಚಿತ್ರಗಳ ಸಂಖ್ಯೆ 500 ದಾಟುತ್ತದೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಚೋಮನ ದುಡಿ’ ಸಿನಿಮಾ ಸಂದರ್ಭದ ಘಟನೆಯೊಂದನ್ನು ಅವರಿಲ್ಲಿ ಸ್ಮರಿಸಿಕೊಂಡಿದ್ದಾರೆ.
`ಚೋಮನ ದುಡಿ’ (1975) ಸಿನಿಮಾ ಸಂದರ್ಭ. ಬೆಳ್ತಂಗಡಿ ಸಮೀಪದ ಗ್ರಾಮವೊಂದರಲ್ಲಿ ಚಿತ್ರಕ್ಕೆ ಶೂಟಿಂಗ್ ನಡೆದದ್ದು. ಬಿ.ವಿ.ಕಾರಂತ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಾಸುದೇವರಾವ್ ಅಭಿನಯಿಸಿದ್ದರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರ ಕೃತಿಯನ್ನು ಆಧರಿಸಿದ ಚಿತ್ರವಿದು. `ಚೋಮನ ದುಡಿ’ ಚಿತ್ರದ ಮುಹೂರ್ತಕ್ಕೆ ಶಿವರಾಮ ಕಾರಂತರು ಆಗಮಿಸಿದ್ದರು. ನಾನು ಅವರನ್ನು ಮಾತನಾಡಿಸಲು ಸರಿಯಾದ ಸಂದರ್ಭಕ್ಕಾಗಿ ಆಸೆಯಿಂದ ಕಾಯುತ್ತಿದ್ದೆ. ಮುಹೂರ್ತದ ಸಮಾರಂಭ ಮುಗಿದದ್ದೇ ಕಾರಂತರು ತಮ್ಮ ಛತ್ರಿ ಬಿಡಿಸಿಕೊಂಡು ಹೊರಟರು. ಇದೇ ಸರಿಯಾದ ಸಮಯವೆಂದು ನಾನು ಅವರತ್ತ ಓಡಿದೆ. `ಸರ್, ನನ್ನ ಹೆಸರು ರಾಮಕೃಷ್ಣ. ನಾನು ಈ ಚಿತ್ರದ ಮೇಕಪ್ ಕಲಾವಿದ’ ಎಂದು ಹೆಮ್ಮೆಯಿಂದ ಹೇಳಿಕೊಂಡೆ. ನನ್ನನ್ನು ತೀಕ್ಷ್ಣವಾಗಿ ದಿಟ್ಟಿಸಿದ ಕಾರಂತರು, `ನನ್ನ ಚೋಮ ಬಿಳಿಯ ಚೋಮನಲ್ಲ, ಕರಿಯ ಚೋಮ’ ಎಂದರು!
ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ನನಗೆ ಭಯವಾಯ್ತು. ಆತಂಕದಿಂದಲೇ ನಿರ್ದೇಶಕರ ಬಿ.ವಿ.ಕಾರಂತರಲ್ಲಿಗೆ ಧಾವಿಸಿ `ವಿಷಯ’ ತಿಳಿಸಿದೆ. ಅಂದು ಮುಹೂರ್ತದ ದಿನ `ಚೋಮ’ನ ಪಾತ್ರಧಾರಿ ವಾಸುದೇವರಾವ್ ಮೈಬಣ್ಣ ಬಿಳಿಯಿತ್ತು. ಇದೇ ಶಿವರಾಮ ಕಾರಂತರ ಕೋಪಕ್ಕೆ ಕಾರಣವಾಗಿದ್ದು. ಚೋಮನನ್ನು ಕಪ್ಪು ಮಾಡಬೇಕೆಂದು ನಿಶ್ಚಯಿಸಿದೆವು. ತಮ್ಮ ಚೋಮ ಹೇಗಿರಬೇಕೆಂದು ಶಿವರಾಮ ಕಾರಂತರೂ ಸಲಹೆ ಕೊಟ್ಟರು. ಅಂದು ಸಂಜೆಯೇ ಮಂಗಳೂರಿಗೆ ಹೋಗಿ ಚೋಮನನ್ನು ಕಪ್ಪು ಮಾಡಲು ಬೇಕಾದ ಪರಿಕರಗಳನ್ನು ತಂದೆ. ಕೊನೆಗೆ ಕಾರಂತರ ಆಶಯದ ಚೋಮ ಮೈದಾಳಿದ. ಮುಂದೆ ಬಿ.ವಿ.ಕಾರಂತರ ಶ್ರೇಷ್ಠ ನಿರ್ದೇಶನದಲ್ಲಿ ತಯಾರಾದ ಚಿತ್ರಕ್ಕೆ ಸ್ವರ್ಣ ಕಮಲ ಸಂದಿತು. ಉತ್ತಮ ಅಭಿನಯಕ್ಕಾಗಿ ನಟ ವಾಸುದೇವರಾವ್ ಅವರು ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.
