
ನಟ
`ತೆಲುಗಿನಲ್ಲಿ ಕಾಳಿದಾಸ ಪಾತ್ರವನ್ನು ನಾಗೇಶ್ವರರಾವ್ ಮಾಡಿದ್ದಾರೆ. ಭೋಜರಾಜನ ಪಾತ್ರವನ್ನು ರಂಗರಾಯರು ಮಾಡಿದ್ದರು. ಅವರು ಬಹಳ ದೊಡ್ಡ ನಟ. ಅಂಥ ಪಾತ್ರವನ್ನು ಕನ್ನಡದಲ್ಲಿ ನೀವು ಮಾಡುತ್ತಿದ್ದೀರಿ. ಐ ವಾಂಟೆಂಡ್ ಟು ಕಂಗ್ರಾಚ್ಯುಯೇಟ್ ಯೂ’ ಎಂದು ಎನ್‍ಟಿಆರ್ ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ.
`ಕವಿರತ್ನ ಕಾಳಿದಾಸ’ ಚಿತ್ರದ ಸಂದರ್ಭ. ಭೋಜರಾಜನ ಪಾತ್ರಕ್ಕೆ ಪ್ರಮುಖ ನಟರ ಹೆಸರುಗಳ ಪ್ರಸ್ತಾಪವಾದ ನಂತರ ಅಂತಿಮವಾಗಿ ನಾನು ಆಯ್ಕೆಯಾದೆ. ನಾಟಕಗಳಲ್ಲಿ ನನ್ನನ್ನು ನೋಡಿದ್ದ ವರದಪ್ಪನವರು (ರಾಜ್ ಸಹೋದರ) ಪಾತ್ರಕ್ಕೆ ನಾನೇ ಸೂಕ್ತವೆಂದು ನನ್ನ ಆಯ್ಕೆಗೆ ಬಲವಾದ ಶಿಫಾರಸು ಮಾಡಿದ್ದರು. ಮದರಾಸಿನ ಸ್ಟುಡಿಯೋವೊಂದರ ಬಿ ಫ್ಲೋರ್‌ನಲ್ಲಿ `ಕವಿರತ್ನ ಕಾಳಿದಾಸ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಪಕ್ಕದ ಎಫ್ ಫ್ಲೋರ್‌ನಲ್ಲಿ ಎನ್.ಟಿ.ರಾಮರಾವ್ ಅವರ `ವೈಯಾರಿ ಭಾಮಲು ವಗಲಮಾರಿ ಭರ್ತಲು’ ಶೂಟಿಂಗ್ ನಡೆಯುತ್ತಿತ್ತು.
ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಎನ್‍ಟಿಆರ್ ಅವರನ್ನು ನೋಡಲು ರಾಜ್ ಅಲ್ಲಿಗೆ ಹೋಗಿದ್ದರು. ನಮ್ಮ ಚಿತ್ರದ ಬಗ್ಗೆ ವಿಚಾರಿಸಿಕೊಂಡ ಎನ್‍ಟಿಆರ್, ಭೋಜರಾಜನ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ವಿಚಾರಿಸಿದ್ದಾರೆ. `ಶ್ರೀನಿವಾಸಮೂರ್ತಿ ಅಂತ ಸ್ಟೇಜ್ ಆ್ಯಕ್ಟರ್ರು..’ ಎಂದಿದ್ದಾರೆ ರಾಜ್. `ಐ ವಾಂಟ್ ಟು ಸೀ ಹಿಮ್’ ಎಂದು ಎನ್‍ಟಿಆರ್, ರಾಜ್ ಜೊತೆಗೂಡಿ ನಮ್ಮ ಫ್ಲೋರ್‌ಗೆ ಬಂದಿದ್ದಾರೆ. ನಾನು ದರ್ಬಾರ್ ಸೆಟ್‍ನ ಕಂಬದ ಹಿಂದೆ ಅಡಗಿಕೊಂಡು ಲೆಜೆಂಡರಿ ನಟ ಎನ್‍ಟಿಆರ್ ಅವರನ್ನು ನೋಡುತ್ತಾ ನಿಂತಿದ್ದೆ.
ಅವರಿಗೆ ನನ್ನನ್ನು ಪರಿಚಯಿಸಲು ರಾಜ್ ಕರೆಯುತ್ತಿದ್ದಂತೆ, ಸಂಕೋಚದಿಂದ ಬಂದು ಎನ್‍ಟಿಆರ್ ಕಾಲಿಗೆರಗೆ ತೆಲುಗಿನಲ್ಲೇ ಮಾತನಾಡಿಸಿದೆ. `ತೆಲುಗಿನಲ್ಲಿ ಕಾಳಿದಾಸ ಪಾತ್ರವನ್ನು ನಾಗೇಶ್ವರರಾವ್ ಮಾಡಿದ್ದಾರೆ. ಭೋಜರಾಜನ ಪಾತ್ರವನ್ನು ರಂಗರಾಯರು ಮಾಡಿದ್ದರು. ಅವರು ಬಹಳ ದೊಡ್ಡ ನಟ. ಅಂಥ ಪಾತ್ರವನ್ನು ಕನ್ನಡದಲ್ಲಿ ನೀವು ಮಾಡುತ್ತಿದ್ದೀರಿ. ಐ ವಾಂಟೆಂಡ್ ಟು ಕಂಗ್ರಾಚ್ಯುಯೇಟ್ ಯೂ. ಕಮ್, ಲೆಟ್ ಅಸ್ ಹ್ಯಾವ್ ಎ ಸ್ನ್ಯಾಪ್’ ಎಂದು ಎನ್‍ಟಿಆರ್ ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ. ಕಲಾವಿದನಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೇನಿದೆ ಎಂದುಕೊಳ್ಳುತ್ತಾ ಫೋಟೋಗೆಂದು ಅವರ ಹಿಂದೆ ನಿಂತೆ!