
ನಟ
ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ ಆಟೋ ನಿಲ್ಲಿಸಿ, `ಕ್ಯಾ ಬಾ ಸಾಠ್, ಮೇ ಆದಾ ಸಾಠ್ ದೇತಾ ಹೂ..’ ಎಂದು ಹೇಳಿದ್ದಾನೆ.
`ಶಂಕರ್ ಗುರು’ ಚಿತ್ರೀಕರಣಕ್ಕೆಂದು ವಜ್ರಮುನಿ ಕಾಶ್ಮೀರಕ್ಕೆ ಹೋಗಬೇಕಿತ್ತು. ಬೆಂಗಳೂರಿನಿಂದ ದಿಲ್ಲಿಗೆ ಹೋಗಿ, ಅಲ್ಲಿಂದ ಕಾಶ್ಮೀರಕ್ಕೆ ಮತ್ತೊಂದು ವಿಮಾನ ಹಿಡಿಯಬೇಕು. ವಜ್ರಮುನಿ ಜೊತೆ ಚಿತ್ರದ ಇತರೆ ನಟರಾದ ತೂಗುದೀಪ ಶ್ರೀನಿವಾಸ್ ಮತ್ತು ಪ್ರಭಾಕರ್ ಕೂಡ ದಿಲ್ಲಿಗೆ ಹೋಗಿ ಇಳಿದಿದ್ದಾರೆ. ಕಾಶ್ಮೀರಕ್ಕೆ ವಿಮಾನ ಹತ್ತಬೇಕಿದ್ದುದು ಮರುದಿನ ಮುಂಜಾನೆ. ಹಾಗಾಗಿ ಅಂದು ದಿನವಿಡೀ ದಿಲ್ಲಿ ನೋಡುವುದೆಂದು ನಿರ್ಧಾರವಾಗಿದೆ. ಹೋಟೆಲ್‍ನಲ್ಲಿ ಲಗೇಜ್ ಇಟ್ಟು ಫ್ರೆಶ್ ಆಗಿ ಮೂವರೂ ರಸ್ತೆಗಿಳಿದಿದ್ದಾರೆ. `ಆಟೋದವನ ಹತ್ರ ನಾನು ಮಾತನಾಡ್ತೀನಿ. ನೀವ್ಯಾರೂ ಮಾತನಾಡಬೇಡಿ’ ಎಂದು ವಜ್ರಮುನಿ ಇವರಿಬ್ಬರಿಗೆ ತಾಕೀತು ಮಾಡಿದ್ದಾನೆ. (ವಜ್ರಮುನಿಗೆ ತಮಿಳು, ತೆಲುಗು ಮತ್ತು ಸುಮಾರಾಗಿ ಹಿಂದಿ ಭಾಷೆ ಬರ್ತಿತ್ತು).
ರಸ್ತೆಯಲ್ಲಿ ಕೈ ಅಡ್ಡ ಹಾಕಿ ಒಂದು ಆಟೋ ನಿಲ್ಲಿಸಿದ್ದಾರೆ. `ಕ್ಯಾಬಾ ಆತಿ?’ (ಏನಪ್ಪಾ ಬರ್ತೀಯಾ?) ಎಂದು ವಜ್ರಮುನಿ ಆಟೋದವನನ್ನು ಕೇಳಿದ್ದಾನೆ. `ಕಹಾ ಕೋ?’ (ಎಲ್ಲಿಗೆ?) ಎಂದು ಆಟೋದವನು ಪ್ರಶ್ನೆ ಮಾಡಿದ್ದಾನೆ. ಆಗ ವಜ್ರಮುನಿ ಆಕಾಶದತ್ತ ಕೈ ತೋರಿಸಿ ಆ್ಯಕ್ಷನ್ ಮಾಡುತ್ತಾ, `ಡೆಲ್ಲಿ ಪೂರಾ ಸುತ್ನಾ! ಕ್ಯಾ ದೇನಾ?’ ಎಂದು ಕೇಳಿದ್ದಾನೆ. ಹಿಂದಿ – ಕನ್ನಡ ಮಿಕ್ಸ್ ಆಗಿದ್ದ ಈ ಭಾಷೆ ಕೇಳಿದ ಆಟೋದವ ನಗುತ್ತಾ, `ಸಾಠ್’ (ಅರವತ್ತು) ಎಂದನಂತೆ. ಆಟೋ ಹತ್ತಿ ಕುಳಿತ ನಂತರ ವಜ್ರಮುನಿ, `ಸಾಠ್ ಅಂದರೆ ಎಷ್ಟೋ?’ ಎಂದು ತನ್ನ ಜತೆಗಿದ್ದವರನ್ನು ಕೇಳಿದ್ದಾನೆ. ಅರವತ್ತು ಎಂದು ಗೊತ್ತಾಗುತ್ತಿದ್ದಂತೆ ಆಟೋ ನಿಲ್ಲಿಸಿ, `ಕ್ಯಾ ಬಾ ಸಾಠ್, ಮೇ ಆದಾ ಸಾಠ್ ದೇತಾ ಹೂ..’ ಎಂದು ಹೇಳಿದ್ದಾನೆ. ಇದು ಮುಗಿಯದ ಕತೆ ಎಂದು ಜೊತೆಯಲ್ಲಿದ್ದವರು ವಜ್ರಮುನಿಯನ್ನು ಸುಮ್ಮನೆ ಕೂರಿಸಿಕೊಂಡಿದ್ದಾರೆ.
ಇವರು ಚಿತ್ರೀಕರಣಕ್ಕೆಂದು ಬಂದ ಸಿನಿಮಾ ಕಲಾವಿದರು ಎಂದು ತಿಳಿಯುತ್ತಿದ್ದಂತೆ ಆಟೋ ಡ್ರೈವರ್‍ಗೆ ಹೆಮ್ಮೆ ಎನಿಸಿದೆ. ಅವನು ಇಡೀ ದಿನ ಖುಷಿಯಿಂದ ದಿಲ್ಲಿ ತೋರಿಸಿದ್ದಾನೆ. ಆಟೋ ಹತ್ತುವಾಗ ತನಗೆ ಗೊತ್ತಿದ್ದ ಭಾಷೆಯಲ್ಲೇ ಎಷ್ಟೊಂದು ಚೌಕಾಸಿ ಮಾಡಿದ್ದ ವಜ್ರಮುನಿ ಸಂಜೆಯ ಹೊತ್ತಿಗೆ ಆಟೋದವನ ಗೆಳೆಯನಾಗಿ ಹೋಗಿದ್ದ. ಸಂಜೆ ಆತನಿಗೆ ಊಟ ಕೊಡಿಸಿ, ಮಾತನಾಡಿದ್ದಕ್ಕಿಂತ ಹೆಚ್ಚಿಗೆ ದುಡ್ಡು ಕೊಟ್ಟು ಅವನನ್ನು ಕಳುಹಿಸಿದ್ದಾನೆ. ಇದು ಆತನೇ ನನ್ನಲ್ಲಿ ಹೇಳಿಕೊಂಡ ಘಟನೆ.