- ಮನೋರಮ ಅವರ ಜನ್ಮನಾಮ ಗೋಪಿಶಾಂತ. ತಂದೆ ಕಾಶಿ ಕಿಲಕುಡಯ್ಯಾರ್, ತಾಯಿ ರಾಮಮಿರ್ತಂ. ತಂಜಾವೂರು ಜಿಲ್ಲೆಯ ಮನ್ನಾರ್‌ಗುಡಿ ಅವರ ಹುಟ್ಟೂರು. ಮೊದಲ ಬಾರಿ ನಾಟಕದಲ್ಲಿ ಅಭಿನಯಿಸಿದಾಗ ಅವರಿಗೆ ಹನ್ನೆರೆಡು ವರ್ಷ. ರಂಗ ನಿರ್ದೇಶಕ ತಿರುವೆಂಕಟಂ ಮತ್ತು ಹಾರ್ಮೋನಿಯಂ ಕಲಾವಿದ ತ್ಯಾಗರಾಜನ್ ‘ಗೋಪಿಶಾಂತ’ ಹೆಸರನ್ನು ‘ಮನೋರಮ’ ಎಂದು ಬದಲಿಸಲು ಸೂಚಿಸಿದರು.

- ‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ ಸಾವಿರ ಸಿನಿಮಾಗಳಲ್ಲಿ ನಟಿಸಿದ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು. ಪ್ರಮುಖವಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಅವರು ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳ 1300ಕ್ಕೂ ಹೆಚ್ಚು ಸಿನಿಮಾಗಳು, ಸಾವಿರಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.

- ಶಿವಾಜಿ ಗಣೇಶನ್ ಮತ್ತು ಪದ್ಮಿನಿ ಅಭಿನಯದ ‘ತಿಲ್ಲಾನ ಮೋಹನಾಂಬಳ್’ (1968) ಮನೋರಮ ವೃತ್ತಿಬದುಕಿನ ಮೈಲುಗಲ್ಲು. ಈ ಚಿತ್ರದಲ್ಲಿನ ಅವರ ನಟನೆ ಪ್ರೇಕ್ಷಕರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಖ್ಯಾತ ತಮಿಳು ನಟರಾದ ನಾಗೇಶ್, ರಾಮಸ್ವಾಮಿ, ತೆಂಗೈ ಶ್ರೀನಿವಾಸನ್ ಅವರ ಜೋಡಿಯಾಗಿ ಮನೋರಮ ಅವರ ಹಾಸ್ಯಪಾತ್ರಗಳು ಬಹುಜನಪ್ರಿಯ.

- ತಮಿಳುನಾಡು ಮುಖ್ಯಮಂತ್ರಿಗಳಾಗಿದ್ದ ಸಿ.ಎನ್.ಅನ್ನಾದೊರೈ ಮತ್ತು ಎಂ.ಕರುಣಾನಿಧಿ ಅವರು ರಚಿಸಿ – ನಿರ್ದೇಶಿಸಿದ ನಾಟಕಗಳಲ್ಲಿ ಮನೋರಮ ನಟಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಎಂ.ಜಿ.ರಾಮಚಂದ್ರನ್ ಮತ್ತು ಜಯಲಲಿತಾ ಹಾಗೂ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಎನ್‌ಟಿಆರ್ ಅವರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

- ಪ್ರೀತಿಯಿಂದ ‘ಆಚ್ಚಿ’ ಎಂದು ಕರೆಸಿಕೊಳ್ಳುವ ಮನೋರಮ ನೂರಕ್ಕೂ ಹೆಚ್ಚು ನಾಟಕಗಳ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟಿ ‘ಪುದಿಯ ಪಥೈ’ (1989) ತಮಿಳು ಚಿತ್ರದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
