ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕೃತಜ್ಞತೆಯ ನೆನಕೆ ಕೃಷ್ಣೇಗೌಡ್ರೆ…

ಪೋಸ್ಟ್ ಶೇರ್ ಮಾಡಿ
ನಾಗೇಂದ್ರ ಶಾನ್‌
ನಟ – ನಿರ್ದೇಶಕ

ಕನ್ನಡ ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕೃಷ್ಣೇಗೌಡರು ಗಮನಾರ್ಹ ಸಾಧನೆ ಮಾಡಿದ್ದಾರೆ. ನಟ – ನಿರ್ದೇಶಕ ನಾಗೇಂದ್ರ ಶಾನ್‌ ಅವರಿಗೆ ಆಪ್ತ ರಂಗಭೂಮಿ ಒಡನಾಡಿಯಾಗಿದ್ದವರು ಕೃಷ್ಣೇಗೌಡ್ರು. ಅಗಲಿದ ನಟನಿಗೆ ನಾಗೇಂದ್ರ ಶಾನ್‌ ಅವರ ಅಕ್ಷರ ನಮನ.

‘ಪಂಚಮವೇದ’ ಸಿನಿಮಾ ಚಿತ್ರೀಕರಣದ ತಯಾರಿ. ಪುಟ್ಟಣ್ಣ ಕಣಗಾಲರ ಶಿಷ್ಯ ಪಿ.ಎಚ್‌.ವಿಶ್ವನಾಥ್‌ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ನಾನು ಮತ್ತು ನೀರ್ನಳ್ಳಿ ರಾಜು ಆ ಚಿತ್ರಕ್ಕೆ ಸಹ ನಿರ್ದೇಶಕರು. ಸುಧಾರಾಣಿ, ರಮೇಶ್‌, ರಾಮಕೃಷ್ಣ ಹೊರತಾಗಿ ಇನ್ನೂ ಅನೇಕ ಮುಖ್ಯ ಪಾತ್ರಗಳ ಆಯ್ಕೆಗೆ ನಮಗೆ ಹೇಳಿದ್ದರು. ಆದ್ರೆ ಚಿತ್ರೀಕರಣದ ಅಷ್ಟೂ ದಿವಸ ಅವರು ನಮ್ಮೊಟ್ಟಿಗೆ ಇರಬೇಕು. ಅಂದಾಜು 40 ದಿನ. ಅಂಥವರನ್ನು ಹುಡುಕಿ ಅಂದಿದ್ರು.

ಸ್ವತಂತ್ರ ನಿರ್ದೇಶಕರಾಗಿ ವಿಶ್ವನಾಥ್ ಅವರಿಗೂ ಇದು ಮೊದಲ ಸಿನಿಮಾ. “ಯಾವಾಗ ಯಾವ ದೃಶ್ಯಗಳನ್ನು ಚಿತ್ರೀಕರಿಸ್ತೀನೋ ಗೊತ್ತಿಲ್ಲ. ಆದ್ದರಿಂದ ಎಲ್ಲ ಮುಖ್ಯ ಕಲಾವಿದರೂ ಅಷ್ಟೂ ದಿವಸ ಜೊತೆಗಿರಲಿ” ಅಂದಿದ್ರು. ನಾಯಕಿಯ ತಂದೆಯ ಪಾತ್ರಕ್ಕೆ ನಾನು ಕೃಷ್ಣೆಗೌಡ್ರನ್ನ ಸೂಚಿಸಿದ್ದೆ. “ಪಾತ್ರಕ್ಕೆ ಸರಿಯಾದ ಆಯ್ಕೆ. ನಮ್ಮ ಕಂಡೀಷನ್‌ಗೆ ಅವರು ಒಪ್ತಾರಾ ಅಂತ ತಿಳ್ಕೊಳಿ” ಅಂದ್ರು ನಿರ್ದೇಶಕರು.

 ಆಗಿನ್ನೂ ಉದ್ಯೋಗದಲ್ಲಿದ್ರು ಗೌಡ್ರು. ರಂಗಭೂಮಿಯ ಗೆಳೆತನವಿದ್ದುದರಿಂದ ನಾನು ಅವರಲ್ಲಿ ಹೋಗಿ ಹೀಗೀಗೆ ಅಂದೆ. ಮರುದಿನ ತಿಳಿಸುವುದಾಗಿ ಹೇಳಿದ್ರು. ಮಾರನೆ ದಿನ ಹೋದ್ರೆ ಆಗಲಿ ಅಂತ ಒಪ್ಪಿದರು. ಸಂಭಾವನೆ ವಿಚಾರ ಅಂದಾಗ, “ಅದೆಲ್ಲಾ ಆಮೇಲೆ ನೋಡಣ. ಯಾವತ್ತಿಂದ ಚಿತ್ರೀಕರಣ? ಯಾಕಂದ್ರೆ ಅಷ್ಟೂ ದಿನ ರಜಾ ಹಾಕೋದಕ್ಕೆ ನಾನು ಇಲ್ಲಿ ಮುಂಚಿತವಾಗಿ ತಯಾರಿ ನಡೆಸಬೇಕು” ಅಂದ್ರು. ಆಗ ಮುಖ್ಯ ಪಾತ್ರದ ಆಯ್ಕೆಯ ದೊಡ್ಡ ನಿರಾಳತೆ ನಮಗೆಲ್ಲ.

ಕುಂದಾಪುರದಲ್ಲಿ 35 ದಿನಗಳ ಚಿತ್ರೀಕರಣವಾಯ್ತು. ಅಷ್ಟೂ ದಿವಸ ಅವರ ಪಾತ್ರದ ಚಿತ್ರೀಕರಣವಿರಲಿ ಇಲ್ಲದಿರಲಿ ಬೆಳಗ್ಗೆ ವಾಕಿಂಗ್‌ ಮುಗಿಸಿ 6ಕ್ಕೆಲ್ಲಾ ಸಿದ್ಧವಾಗಿ ನಮ್ಮೊಟ್ಟಿಗೆ ಬಂದ್ಬಿಡೋರು. ಒಂದು ದಿವಸಕ್ಕೂ “ನನ್ನ ಶೂಟಿಂಗ್‌ ಮಾಡ್ಲಿಲ್ಲ ನೀವು… ನಂದ್ಯಾವಾಗ” ಅಂತ ಕೇಳ್ಲಿಲ್ಲ. ಒಟ್ಟಾರೆ ಅವರ ಪಾತ್ರದ ಕೆಲಸವಾಗಿದ್ದು ಹತ್ತನ್ನೆರಡು ದಿನಗಳು.  ಸಜ್ಜನತೆಯ ಮೂರ್ತಿಯಾಗಿದ್ದರು ಗೌಡ್ರು.

ಉಪಸಂಹಾರ: ಆ ಚಿತ್ರದ ಉತ್ತಮ ನಟನೆಗಾಗಿ ಅವರು ರಾಜ್ಯ ಪ್ರಶಸ್ತಿಯ ಪಟ್ಟಿಯಲ್ಲಿದ್ದರು. ಆದರೆ ಅದಾಗಲೆ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳನ್ನು ನಿರ್ಧರಿಸಲಾಗಿದೆ. ಮತ್ತೆ ಅವರಿಗೆ ಕೊಟ್ರೆ ವಶೀಲಿ ಅಂದ್ಕೋತಾರೆ ಅಂತ ಅವರಿಗೆ ಸಲ್ಲಬೇಕಿದ್ದ ಪ್ರಶಸ್ತಿಯನ್ನು ಕೈ ಬಿಟ್ರು.  ಆದರೇನು… ಪ್ರತಿಭೆಗೆ ಯಾವತ್ತಿದ್ರೂ ಬೆಲೆ ಬಂದೇ ಬರತ್ತೆ. ಮುಂದೆ ಅವರಿಗೆ ಬೇರೆ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಬಂತು.

ಸಜ್ಜನಿಕೆಯ ಸೌಹಾರ್ದದ ಸಾಕಾರ ವ್ಯಕ್ತಿ. ಕೃತಜ್ಞತೆಯ ನೆನಕೆ ಕೃಷ್ಣೇಗೌಡ್ರೆ…

(ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಬಹುಭಾಷಾ ತಾರೆ ಚಂದ್ರಕಲಾ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು

ಬಿ.ಎನ್.ಹರಿದಾಸ್

ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ