ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಹಾಡೋ ಸುಸ್ವರಗಳ ಸಂಗೀತ

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಸಂಗೀತ ಸಂಯೋಜಕರಾದ ರಾಜನ್‌ – ನಾಗೇಂದ್ರ ಕನ್ನಡದ 218 ಚಿತ್ರಗಳೂ ಸೇರಿದಂತೆ ಸುಮಾರು 450 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇಂದು (ಮೇ 27) ರಾಜನ್ ಅವರ ಜನ್ಮದಿನ. ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಮೇರು ಸಂಗೀತ ನಿರ್ದೇಶಕನನ್ನು ಸ್ಮರಿಸಿದ್ದಾರೆ.

ಅದು 1940ನೇ ಇಸವಿಯ ಕಾಲ. ಮೈಸೂರಿನ ಶಿವರಾಂ ಪೇಟೆ ಆಗ ಸಣ್ಣ ಹಳ್ಳಿ ಆಗಿತ್ತು. ಮೈಸೂರು ಕೂಡ ಈಗಿನಷ್ಟು ಬೆಳೆದಿರಲಿಲ್ಲ ಬಿಡಿ. ಅಲ್ಲಿ ಇಬ್ಬರು ಪುಟ್ಟ ಬಾಲಕರು ಇದ್ದರು. ಅವರ ಕಿವಿಗಳು ಸದಾ ಆ ಊರಿನಲ್ಲಿ ಇದ್ದ ಚಿತ್ರಮಂದಿರದ ಹಿಂಬದಿಯ ಗೋಡೆಗಳಿಗೆ ಸದಾ ಅಂಟಿ ಕೊಂಡು ಇರ್ತಾ ಇದ್ದವು. ಆ ಕಿವಿಗಳು ಅಲ್ಲಿನ ಸಿನಿಮಾ ಡೈಲಾಗ್ ಕೇಳ್ತಾ ಇರಲಿಲ್ಲ. ಬದಲಾಗಿ ಅಲ್ಲಿ ಪ್ರಸಾರ ಆಗ್ತಾ ಇದ್ದ ಹಾಡುಗಳನ್ನು ಕೇಳ್ತಾ ಇದ್ದವು. ಅದು ಯಾವ ಭಾಷೆಯೇ ಇರಲಿ, ಹಾಡು ಕೇಳಿದ ಕೂಡಲೇ ಈ ಬಾಲಕರಿಗೆ ಬಂದು ಬಿಡ್ತಾ ಇತ್ತು. ಅದನ್ನು ತಿರುಗಾ ಮುರುಗಾ ಹಾಡಿದ್ದೇ ಹಾಡಿದ್ದು.

ಈ ಇಬ್ಬರೂ ಹುಡುಗರು ಬರೀ ಹಾಡನ್ನು ಕೇಳಿ ಅದರ ಸಾಹಿತ್ಯ ಟ್ಯೂನ್ ಮಾತ್ರ ಕಲಿತು ಕೊಳ್ತಾ ಇರಲಿಲ್ಲ. ಅದರಲ್ಲಿ ಬಳಸಿದ ವಾದ್ಯ ಯಾವುದು ಅಂತ ಕೂಡ ಪತ್ತೆ ಮಾಡ್ತಾ ಇದ್ದರು. ಅಷ್ಟೇ ಅಲ್ಲ ಅವರ ಮನೆಯಲ್ಲಿ ಹಾರ್ಮೋನಿಯಂ ಇತ್ತು. ಕೇಳಿದ ಕೂಡಲೇ ಅದನ್ನು ಮನೆಯಲ್ಲಿ ಬಂದು ಪ್ಲೇ ಮಾಡೋಕೆ ನೋಡ್ತಾ ಇದ್ದರು. ಆಗಲಿಲ್ಲ ಅಂದರೆ ಮತ್ತೆ ಚಿತ್ರಮಂದಿರದ ಕಡೆಗೆ ಓಡ್ತಾ ಇದ್ದರು.

ಈ ಇಬ್ಬರು ಬಾಲಕರು ಕನ್ನಡ ಚಿತ್ರರಂಗದ ಅಸೀಮ ಸಂಗೀತ ನಿರ್ದೇಶಕರು ಎನ್ನಿಸಿ ಕೊಂಡರು. ಕನ್ನಡದಲ್ಲಿ ಮೊದಲಿಗೆ ನೂರು ಮತ್ತು ಇನ್ನೂರು ಚಿತ್ರಗಳಿಗೆ ಸಂಗೀತ ಕೊಟ್ಟ ಸಾಧನೆ ಮಾಡಿದರು. ಈ ಬಾಲಕರೇ ರಾಜನ್ – ನಾಗೇಂದ್ರ. ರಾಜನ್ – ನಾಗೇಂದ್ರ ಜೋಡಿಯಲ್ಲಿ ರಾಜನ್ 1936ರ ಮೇ 27ರಂದು ಜನ್ಮ ತಳೆದರು. ಇವತ್ತು ಅವರ 86ನೇ ಜನ್ಮದಿನ ಅವರಿಲ್ಲದ ಮೊದಲ ಜನ್ಮದಿನ.

‘ಪರಾಜಿತ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ, ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಜಯಚಂದ್ರನ್, ನಾಗೇಂದ್ರ ಮತ್ತು ರಾಜನ್. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ರಾಜನ್ – ನಾಗೇಂದ್ರ ಅವರ  ತಂದೆ ರಾಜಪ್ಪನವರು ಆ ಕಾಲದಲ್ಲಿಯೇ ಪ್ರಭಾವಿ ಸಂಗೀತಗಾರರಾಗಿದ್ದರು. ತುಂಬಾ ಸೊಗಸಾಗಿ ಹಾರ್ಮೋನಿಯಂ ಮತ್ತು ಕೊಳಲು ನುಡಿಸುತ್ತಾ ಇದ್ದರು. ರಾಜನ್ – ನಾಗೇಂದ್ರ ಇಬ್ಬರೂ ಬಾಲಕರಾಗಿದ್ದಗಿಂದಲೇ ಸಿನಿಮಾ ಕುರಿತು ಈ ಕಾರಣಕ್ಕೆ ಆಸಕ್ತಿ ಬೆಳೆಸಿ ಕೊಂಡರು. ಸುತ್ತಮುತ್ತಲಿನ ಜನ ತಮ್ಮ ತಂದೆಯವರಿಗೆ ಕೊಡ್ತಾ ಇದ್ದ ಗೌರವ ನೋಡಿ ಆದರೆ ತಾವೂ ಸಂಗೀತ ನಿರ್ದೇಶಕರೇ ಆಗ್ಬೇಕು ಅಂತ ನಿರ್ಧರಿಸಿದರು.

ದೊಡ್ಡವರಾದ ರಾಜನ್ ಬಹಳ ಬೇಗ ತಂದೆ ನುಡಿಸ್ತಾ ಇದ್ದ ಹಾರ್ಮೋನಿಯಂ ನೋಡಿ ಕಲಿತುಬಿಟ್ಟರು. ತಾವೂ ಎಂಟನೇ ವರ್ಷದಲ್ಲಿ ಸಲೀಸಾಗಿ ತಂದೆಯ ಸಮಕ್ಕೆ  ಹಾರ್ಮೋನಿಯಂ ನುಡಿಸಿ ಕೇಳಿದವರಿಗೆ ಅಚ್ಚರಿ ಕೊಡ್ತಾ ಇದ್ದರು. ಮುಂದೆ ರಾಜನ್ ಸಂಗೀತ ನಿರ್ದೇಶನ ಮಾಡುವಾಗ ಕೂಡ ಹಾರ್ಮೋನಿಯಂ, ತಂಬೂರಿ ಕೊನೆಗೆ ಒಂದು ಶೃತಿ ಪೆಟ್ಟಿಗೆ ಕೂಡ ಇಟ್ಟು ಕೊಳ್ತಾ ಇರಲಿಲ್ಲ. ಸಂಗೀತ ಅವರ ತಲೆಯೊಳಗೆ ಇತ್ತು. ಅಂತಹ ಜ್ಞಾಪಕ ಶಕ್ತಿ ಅವರದು. ಹಾಗೆ ನೊಟೇಷನ್ ಹೇಳಿ ಬಿಡ್ತಾ ಇದ್ದರು.

1940 ಅಂದರೆ ಆಗಿನ್ನೂ ದೇಶಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಮೈಸೂರು ಒಡೆಯರ ಆಳ್ವಿಕೆಯಲ್ಲಿ ಇತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಕಲಾ ಪ್ರೇಮಿಗಳು, ಸ್ವತ: ಸಂಗೀತ ಸಾಧಕರು. ಅವರ ಕಾಲದಲ್ಲಿ ಅನೇಕ ಪ್ರಮುಖ ಸಂಗೀತಗಾರರು ಮೈಸೂರಿನಲ್ಲಿ ಬೆಳೆದರು. ಅವರ ನಂತರ ಬಂದ ಜಯಚಾಮರಾಜೇಂದ್ರ ಒಡೆಯರ್ ಅದನ್ನು ಮುಂದುವರೆಸಿದರು. ಅವರೂ ಕೂಡ ಸ್ವತ: ಸಂಗೀತ ಗಾರರೇ. ಅವರ ಆಸ್ಥಾನದಲ್ಲಿ ದೊಡ್ಡ ದೊಡ್ಡ ಸಂಗೀತಗಾರರು ಇದ್ದರು, ಮಾತ್ರವಲ್ಲ ದೊಡ್ಡ ಸಂಗೀತಗಾರರನ್ನೇ ತಮ್ಮ ಆಸ್ಥಾನಕ್ಕೆ ಆಹ್ವಾನಿಸುತ್ತಾ ಇದ್ದರು. ಮೈಸೂರಿನ ಸಂಗೀತ ವಲಯದಲ್ಲಿ ಹೆಸರು ಮಾಡಿದ್ದ ರಾಜಪ್ಪನವರಿಗೆ ಇಂತಹ ಸಂಗೀತ ಸಭೆಗಳಿಗೆ ಆಹ್ವಾನ ಇರುತ್ತಿತ್ತು.

ರಾಜಪ್ಪನವರು ತಾವು ಹೋಗುವಾಗಲೆಲ್ಲಾ ಸಾಧ್ಯವಾದಷ್ಟು ಮಟ್ಟಿಗೆ ಮಗ ರಾಜನ್ ಅವರನ್ನು ಕರೆದುಕೊಂಡು ಹೋಗ್ತಾ ಇದ್ದರು. ಭಾರತದ ಪ್ರಮುಖ ಸಂಗೀತಗಾರರು ಬಂದರಂತೂ ತಪ್ಪಿಸದೆ ಕರೆದು ಕೊಂಡು ಹೋಗ್ತಾ ಇದ್ದರು. ದೊರೆಗಳನ್ನು ಪ್ರತ್ಯಕ್ಷ  ನೋಡುವುದು, ಸಂಗೀತ ಕೇಳುವುದು ಎರಡೂ ಬಾಲಕ ರಾಜನ್ ಅವರಿಗೆ ಬಹಳ ಸಂತೋಷ ಕೊಡ್ತಾ ಇದ್ದ ಸಂಗತಿಗಳು. ಇದರಿಂದ ರಾಜನ್ ಅವರಿಗೆ ಹಿಂದೂಸ್ತಾನಿ, ಕರ್ನಾಟಕಿ, ಜನಪದ ಎಲ್ಲಾ ಶೈಲಿಗಳ ಪರಿಚಯ ಆಯಿತು. ಪ್ರತಿಯೊಂದು ಕಚೇರಿಯನ್ನೂ ಅವರು ಒಂದು ಪಾಠ ಅಂತ್ಲೇ ಅಂದು ಕೊಳ್ತಾ ಇದ್ದರು. ಹಸಿವು ಬಾಯಾರಿಕೆಯನ್ನು ಮರೆತು ಅವರು ಸಂಗೀತವನ್ನು ಕೇಳ್ತಾ ಇದ್ದರು. ಹೀಗಾಗಿ ಅವರ ಮನಸ್ಸಿನಲ್ಲಿ ಕಲಾವಿನದಾಗಿ ಜನರಿಂದ ಪ್ರಶಂಸೆ ಪಡೆಯ ಬೇಕು, ಸಂಗೀತಕ್ಕೇ ತಮ್ಮ ಜೀವನನ್ನು ಮುಡಿಪಾಗಿ ಇಡಬೇಕು ಅನ್ನೋ ಆಸೆ ಚಿಕ್ಕ ವಯಸ್ಸಿನಿಂದಲೇ ಬೆಳೆದು ಬಂದಿತು.

ಅನೇಕ ಸಂಗೀತ ವಿದ್ವಾಂಸರ ಕಚೇರಿಯನ್ನು ಕೇಳುತ್ತಾ ರಾಜನ್ ಸ್ವಯಂ ವಯೋಲಿನ್ ಕಲಿತು ಬಿಟ್ಟರು. ಹಾರ್ಮೋನಿಯಂ ಅನ್ನು ಕೂಡ ಅವರು ಹಾಗೇ ಕಲಿತಿದ್ದರು. ಅವರ ವಯೋಲಿನ್ ವಾದನವನ್ನು ಕೇಳಿ ಇಬ್ಬರು ಗುರುಗಳು ಅವರಿಗೆ ಸಿಕ್ಕರು. ಒಬ್ಬರು ಆರ್.ಆರ್.ಕೇಶವ ಮೂರ್ತಿಗಳು. ಅವರ ಬಳಿ ಕೆಲವು ಕಾಲ ರಾಜನ್ ಸಂಗೀತಾಭ್ಯಾಸ ನಡೆಸಿದರು. ಮುಂದೆ ತಮ್ಮ ಆರಾಧ್ಯ ದೈವವಾದ ಪಿಟೀಲ್ ಚೌಡಯ್ಯನವರ ಬಳಿಯೇ ವಯೋಲಿನ್ ಕಲಿಯುವ ಅವಕಾಶ ಕೂಡ ಸಿಕ್ಕಿತು. ನಂತರ ರಾಜನ್ ರಾಜ್ಯಮಟ್ಟದ ವಯೋಲಿನ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್‌ ಮತ್ತು ಬಂಗಾರದ ಪದಕವನ್ನು ಪಡೆದುಕೊಂಡಿದ್ದರು.

ಆದರೆ ರಾಜನ್ ಅವರ ವಾದ್ಯಗಳ ಕುರಿತ ಆಸಕ್ತಿ ಇಲ್ಲಿಗೇ ಮುಗಿಯಲಿಲ್ಲ. ಮುಂದೆ ವೀಣೆಯ ಕುರಿತು ಆಸಕ್ತಿ ಮೂಡಿತು.ಆ ಕಾಲಕ್ಕೇ 25 ರೂಪಾಯಿ ಕೊಟ್ಟು ವೀಣೆಯನ್ನು ಕೊಂಡುಕೊಂಡು ಬಂದರು. ಅದರ ನಾದಕ್ಕೆ ಮನ ಸೋತರು. ಈ ವಾದ್ಯವನ್ನೂ ಕೂಡ ಸ್ವಯಂ ಕಲಿಯತೊಡಗಿದರು. ಒಮ್ಮೆಮ್ಮೆ ಇಡೀ ರಾತ್ರಿ ಅವರು ವೀಣೆಯನ್ನು ಕಲಿತಿದ್ದೂ ಕೂಡ ಇದೆ. ಮುಂದೆ ಅವರು ಕಲಿತ ವಾದ್ಯ ಕೊಳಲು ಇದನ್ನೂ ಕೂಡ ಅವರು ಒಂದು ವರ್ಷ ಸತತವಾಗಿ ನುಡಿಸಿದರು. ವಾದ್ಯಗೋಷ್ಟಿಯಲ್ಲಿ ಸಹ ಕಲಾವಿದರ ಸಹಾಯದಿಂದ ತಬಲಾ ಮತ್ತು ಸೆಲ್ಲೋ ಕೂಡ ಕಲಿತು ಕೊಂಡರು.

ಹೀಗೆ ಹದಿನೈದು ತುಂಬುವುದರೊಳಗಾಗಿ ರಾಜನ್ ಅವರಿಗೆ ಹದಿನೈದು ವಾದ್ಯಗಳನ್ನು ನುಡಿಸುವಲ್ಲಿ ನಿಪುಣತೆ ಬಂದಿದ್ದು. ಇದೇ ವೇಳೆಯಲ್ಲಿ ಅವರು ಗೋವಿಂದ ಸ್ವಾಮಿ ಅವರ ಬಳಿ ಸಂಗೀತವನ್ನು ಕಲಿತರು. ಅವರು ಮೂರು ತಿಂಗಳ ಕಾಲ ಸತತವಾಗಿ ತಂಬೂರಿ ಮೀಟುವ ಕೆಲಸವನ್ನು ಕೊಟ್ಟಿದ್ದರಂತೆ. ಬಹಳ ಕಷ್ಟದ ಈ ಕೆಲಸವನ್ನೂ ರಾಜನ್ ಬಹು ಶ್ರದ್ದೆಯಿಂದ ಮಾಡಿದರು.ಸಂಗೀತದ ಸೂಕ್ಷ್ಮಗಳನ್ನು ಅರಿತು ಕೊಂಡರು. ಸ್ವರಗಳ ಮೇಲೆ ಹಿಡಿತ ಸಾಧಿಸಿದರು. ರಾಜನ್ ಮುಂದೆ ದೇವೇಂದ್ರಪ್ಪನವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದರು.

ರಾಜನ್ – ನಾಗೇಂದ್ರ ಸೋದರರು ಕ್ರಮೇಣ ತಮ್ಮ ಮನೆಯ ಬಳಿ ಇದ್ದ ದೇವಸ್ಥಾನದಲ್ಲಿ ಕಚೇರಿಯನ್ನು ಕೊಡಲು ಆರಂಭಿಸಿದರು. ಅದು ಜನರ ಜೊತೆಗಿನ ಅವರ ಮೊದಲ ಮುಖಾಮುಖಿ. ಇಬ್ಬರ ವಯಸ್ಸು ಕೂಡ ಚಿಕ್ಕದಾದರೂ ಯಾವ ಭಯವೂ ಇಲ್ಲದೆ ಕಚೇರಿಯನ್ನು ಕೊಡ್ತಾ ಇದ್ದರು. ಪ್ರೇಕ್ಷಕರ ಪ್ರೋತ್ಸಾಹ ಮತ್ತು ತಂದೆಯವರ ಬೆಂಬಲ ಎರಡೂ ಕೂಡ ಅವರನ್ನು ಹೆಚ್ಚಿನ ಸಾಧನೆಗೆ ಅನುವು ಮಾಡಿಕೊಟ್ಟಿತು.

ಆ ಕಾಲದಲ್ಲಿ ಬಹು ಪ್ರಸಿದ್ಧವಾಗಿದ್ದ ‘ಜಯಮಾರುತಿ ವಾದ್ಯಗೋಷ್ಠಿ’ನಾಗೇಂದ್ರ ಅವರನ್ನು ಗಾಯಕರನ್ನಾಗಿ ಸೇರಿಸಿ ಕೊಂಡಿತು. ರಾಜನ್ ಅವರನ್ನು ವಾದ್ಯಗಾರರನ್ನಾಗಿ ಸೇರಿಸಿಕೊಂಡಿತು. ಹೀಗೆ ಅವರಿಬ್ಬರ ಸಂಗೀತ ವೃತ್ತಿ ಆರಂಭವಾಯಿತು. ಈ ವಾದ್ಯಗೋಷ್ಠಿ ಮದ್ರಾಸಿನಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿತು. ಆಗ ಅವರಿಗೆ ಪದ್ಮನಾಭ ಶಾಸ್ತ್ರಿಗಳ ಪರಿಚಯವಾಯಿತು. 1953ರಲ್ಲಿ ತೆರೆ ಕಂಡ ‘ಸೌಭಾಗ್ಯ ಲಕ್ಷ್ಮಿ’ಈ ಸಹೋದರರು ಸ್ವತಂತ್ರವಾಗಿ ಸಂಗೀತ ನೀಡಿದ ಮೊದಲ ಚಿತ್ರವಾಯಿತು. ಆಗ ರಾಜನ್ ಅವರ ವಯಸ್ಸು ಹದಿನೆಂಟು ವರ್ಷಗಳಾದರೆ, ನಾಗೇಂದ್ರ ಅವರ ವಯಸ್ಸು ಕೇವಲ ಹದಿನಾರು. ಅಷ್ಟು ಚಿಕ್ಕ ವಯಸ್ಸಿಗೇ ಸಂಗೀತ ನಿರ್ದೇಶನ ನೀಡಿದ ಹೆಗ್ಗಳಿಕೆ ಈ ಸಹೋದರರಾಯಿತು. ಅವರಿಬ್ಬರೂ ಸಂಗೀತ ನೀಡಿದ ಮೊದಲ ಗೀತೆ ‘ನಿನ್ನ ಕಣ್ಣ ಹೊಂಗಿರಣ’ಇದನ್ನು ಹಾಡಿದವರು ಎ.ಎಂ.ರಾಜಾ. ಮೊದಲ ಚಿತ್ರದಲ್ಲಿ ಗೀತೆಗಳನ್ನು ಬರೆದವರು ಹುಣಸೂರು ಕೃಷ್ಣಮೂರ್ತಿಗಳು.

ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭವೊಂದರಲ್ಲಿ ಗಾಯಕಿ ಮಂಜುಳಾ ಗುರುರಾಜ್ ಅವರೊಂದಿಗೆ ರಾಜನ್-ನಾಗೇಂದ್ರ.

ಈ ಸಿನಿಮಾ ಆದ ಮೇಲೆ ಅವರಿಗೆ ಮತ್ತೆ ಮತ್ತೆ ಸಿನಿಮಾಗಳು ಸಿಕ್ತಾನೆ ಹೋದವು. ‘ಚಂಚಲಕುಮಾರಿ’, ‘ಕನ್ಯಾದಾನ’ ‘ರಾಜಲಕ್ಷ್ಮಿ’ ‘ಮುತ್ತೈದೆ ಭಾಗ್ಯ’ ಹೀಗೆ ಒಂದರ ಹಿಂದೆ ಒಂದು ಸಿನಿಮಾಗಳು ಸಿಕ್ತಾನೆ ಹೋದವು. ಹಾಗೆ ನೋಡಿದರೆ ರಾಜನ್ – ನಾಗೇಂದ್ರ ಸರಳತೆಯಲ್ಲಿ ಗೆದ್ದರು. ಅವರು ಬಳಸಿರೋದು ಹೆಚ್ಚಾಗಿ ಮೂರು – ನಾಲ್ಕು ರಾಗ. ಆದರೆ ಜನರ ನಾಡಿಮಿಡಿತವನ್ನು ಸಂಪೂರ್ಣ ಅರಿತಿದ್ದರು. ಸಂಪೂರ್ಣ ಔಡವ ರಾಗ ಅಭೇರಿಯ ಅರೋಹಣದ ಪೂರ್ಣತೆ ಬಳಸಿ ಅವರು ‘ಆಕಾಶವೇ ಬೀಳಲಿ ಮೇಲೆ’ರೂಪಿಸಿದರು. ಮೋಹನದ ಸಂಪೂರ್ಣ ನಡೆ ಬಳಸಿ ‘ನಾವಾಡುವ ನುಡಿಯೆ ಕನ್ನಡ ನುಡಿ’ ರೂಪಿಸಿದರು. ಅವರು ಕೆಲವು ಅಪರೂಪದ ರಾಗಗಳನ್ನು ಬಳಸಿದ್ದಾರೆ. ತನ್ನ ಹೆಸರಿನಲ್ಲೇ ಎತ್ತರವನ್ನು ಸಂಕೇತಿಸುವ ‘ಪಹಾಡಿ’ಯಲ್ಲಿ ಸೃಷ್ಟಿಸಿರುವ ‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’  ಇದಕ್ಕೆ ಉದಾಹರಣೆ. ಉದಯ ರಾಗ ಮಾಯಮಾಳವಗೌಳದಲ್ಲಿ ಸೃಷ್ಟಿಸಿರುವ ‘ಪೂಜಿಸಲೆಂದೆ ಹೂಗಳ ತಂದೆ’ಯಲ್ಲಿ ಶಿವರಂಜಿನಿಯ ಛಾಯೆಯನ್ನು ತಂದು ಪ್ರೇಮ ನಿವೇದನೆಗೂ ಸಲ್ಲುವಂತೆ ಮಾಡಿದ್ದಾರೆ. ಇದೇ ಚಿತ್ರದ ‘ಇಂದು ಎನಗೆ ಗೋವಿಂದ’ ರಾಘವೇಂದ್ರ ಸ್ವಾಮಿಗಳ ರಚನೆ ನಟಭೈರವಿಯಲ್ಲಿ ಆರಂಭವಾದರೂ ಕೊನೆಯ ಚರಣ ನಿವೇದನೆಯ ಶಿವರಂಜಿನಿಯಲ್ಲಿದೆ. ಕುತೂಹಲದ ಸಂಗತಿ ಎಂದರೆ ಇದೇ ರಚನೆಯನ್ನು ರಾಜನ್ -ನಾಗೇಂದ್ರ ಅವರೇ ‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಅಳವಡಿಸಿದ್ದರು.

ಎಲ್ಲಾ ಸಂಗೀತ ನಿರ್ದೇಶಕರಿಗೂ ಒಂದು ಫೇವರೇಟ್ ರಾಗ ಇರುತ್ತೆ. ರಾಜನ್ – ನಾಗೇಂದ್ರ ಅವರಿಗೆ ಯಾವುದು ಗೊತ್ತಿರಲಿಲ್ಲ. ಅವರೂ ಇದರ ಕುರಿತು ಎಲ್ಲಿಯೂ ಹೇಳಿ ಕೊಂಡಿರಲಿಲ್ಲ. ಕಾರ್ಯಕ್ರಮದಲ್ಲಿ ‘ಪವಡಿಸು ಪರಮಾತ್ಮ’ಕೇಳಿದಾಗ ಅಹಿರ್ ಭೈರವ್ ಅವರ ಫೇವರೇಟ್ ರಾಗ ಇರಬಹುದಾ ಎನ್ನಿಸಿತು. ‘ಮಾತೊಂದ ಹೇಳುವೆ’ಗೀತೆಯಲ್ಲಿ ಅದನ್ನು ಅವರು ಪ್ರಯೋಗಶೀಲವಾಗಿ ಬಳಸಿದ್ದೂ ಕಾಣಿಸಿತು.‘ನಾ ಹಾಡಲು ನೀನು ಹಾಡ ಬೇಕು’, ‘ಎಂದೆಂದೂ ನಿನ್ನನು ಮರೆತು’ಮೊದಲಾದ ಹಾಡುಗಳು ಸಿಕ್ಕವು. ಅವರ ಕೆಲವು ಗೀತೆಗಳಲ್ಲಿ ಅದರ ಛಾಯೆ ಕಾಣಿಸಿತು. ಹೌದಾ ಎಂದು ರಾಜನ್ ಅವರ ಬಳಿ ಕೇಳಿದೆ. ಅವರು ಹೌದು ಎಂದಿದ್ದು ಮಾತ್ರವಲ್ಲ ಅಹಿರ್ ಭೈರವ್ ಕುರಿತು ಹಲವು ಕತೆಗಳನ್ನೂ ಹೇಳಿದರು. ದುರದೃಷ್ಟವಶಾತ್ ಅದೇ ಅವರ ಜೊತೆ ನಾನು ನಡೆಸಿದ ಕೊನೆಯ ಸಂಭಾಷಣೆಯಾಯಿತು.

ತಮ್ಮ ಕಾಲದ ಎಲ್ಲಾ ಶ್ರೇಷ್ಠ ಗಾಯರಿಂದಲೂ ರಾಜನ್ – ನಾಗೇಂದ್ರ ಗೀತೆಗಳನ್ನು ಹಾಡಿಸಿದ್ದಾರೆ. ಡಾ.ರಾಜ್ ಕುಮಾರ್,  ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಜೆ.ಯೇಸುದಾಸ್, ಪಿ.ಸುಶೀಲಾ ಎಲ್ಲರಿಂದಲೂ ಉತ್ತಮ ಗೀತೆಗಳನ್ನು ಹಾಡಿಸಿದ್ದಾರೆ. ರಾಜನ್ – ನಾಗೇಂದ್ರ ಸೋದರರಿಗೆ ‘ಪರಸಂಗದ ಗೆಂಡೆತಿಮ್ಮ’ ಮತ್ತು ‘ಎರಡು ಕನಸು’ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಅವರಿಗೆ ಆಂಧ್ರ ಪ್ರದೇಶ ಸರ್ಕಾರ ‘ಪಂತುಲಮ್ಮ’ಚಿತ್ರಕ್ಕಾಗಿ ನಂದಿ ರಾಜ್ಯ ಪ್ರಶಸ್ತಿಯನ್ನು ನೀಡಿದೆ. ಕನ್ನಡದ 218 ಚಿತ್ರಗಳೂ ಸೇರಿದಂತೆ ಸುಮಾರು 450 ಸಿನಿಮಾಗಳಿಗೆ ಸಂಗೀತವನ್ನು ನೀಡಿದ್ದಾರೆ. ಇದರಲ್ಲಿ ತಮಿಳು, ತೆಲುಗು, ಮಲೆಯಾಳಂ ಮತ್ತು ಸಿಂಹಳಿ ಸಿನಿಮಾಗಳೂ ಕೂಡ ಸೇರಿವೆ. ಕನ್ನಡ ಬಿಟ್ಟರೆ ರಾಜನ್ – ನಾಗೇಂದ್ರ ಅತಿ ಹೆಚ್ಚು ಸಂಗೀತ ನೀಡಿದ್ದು ತೆಲುಗು ಚಿತ್ರಗಳಿಗೆ ಅಲ್ಲಿ ಸುಮರು 70 ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ.

ರಾಜನ್ – ನಾಗೇಂದ್ರ ಪರಸ್ಪರ ಅರ್ಥ ಮಾಡಿಕೊಂಡು ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಬಾಳಿದ ಜೋಡಿ. ನಲವತ್ತು ವರ್ಷ ನಿಕಟವಾಗಿ ಬದುಕಿ ಸಂಗೀತ ನೀಡಿದ ಹೆಗ್ಗಳಿಕೆ ಇವರದು. ಸಂಗೀತದ ವಿಷಯದಲ್ಲಿ ಇಬ್ಬರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದ್ದರೂ ಸ್ವಭಾವದಲ್ಲಿ ಇಬ್ಬರೂ ತೀರಾ ಭಿನ್ನ. ರಾಜನ್ ಮಹಾಮೌನಿ. ಅವರಿಂದ ಮಾತು ಹೊರಡಿಸುವುದೇ ಕಷ್ಟ. ಆದರೆ ನಾಗೇಂದ್ರ ಮಾತುಗಾರ. ಇವರಿಬ್ಬರ ಸಂದರ್ಶನ ನಡೆದರೆ ನಾಗೇಂದ್ರ ಅವರೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹೇಳಿ ಬಿಡುತ್ತಿದ್ದರು. ಗಾಯಕರಿಗೆ ವಾದ್ಯಗೋಷ್ಟಿಯವರಿಗೆ ಸೂಚನೆ ಕೊಡ್ತಾ ಇದ್ದಿದ್ದು ನಾಗೇಂದ್ರ ಅವರೇ. ಕೊನೆಗೆ ಸಿನಿಮಾ ಕುರಿತ ಪತ್ರಿಕಾಗೋಷ್ಟಿ ಇದ್ದರೆ ಅಲ್ಲಿ ಮಾತಾಡ್ತಾ ಇದ್ದವರೂ ನಾಗೇಂದ್ರ ಅವರೇ.

ಗಂಧದ ಗುಡಿ ಶತದಿನೋತ್ಸವ ಸಮಾರಂಭದಲ್ಲಿ ನಿರ್ದೇಶಕ ಪುಟ್ಟಣ್ಣ ಅವರಿಂದ ರಾಜನ್-ನಾಗೇಂದ್ರ ಅವರಿಗೆ ಸ್ಮರಣಿಕೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ರಾಜನ್ ಆಹಾರದ ವಿಷಯದಲ್ಲಿ ಅತಿ ಕಟ್ಟುನಿಟ್ಟಿನವರು. ದಿನಕ್ಕೆ ಎರಡು ಸಲ ಕಾಫಿ ಬಿಟ್ಟರೆ ಸೆಟ್‌ನಲ್ಲಿ ಇನ್ನೇನನ್ನು ಮುಟ್ಟುತ್ತಾ ಇರಲಿಲ್ಲ. ಮನೆಯಲ್ಲಿ ಕೂಡ ತೂಕ ಹಾಕಿದಂತೆ ಮಿತಾಹಾರ. ಆದರೆ ನಾಗೇಂದ್ರ ಆಹಾರ ಪ್ರಿಯರು. ಇದರಿಂದಲೇ ವಯಸ್ಸಾದ ಹಾಗೆ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿ ಕೊಳ್ತಾ ಇತ್ತು. 2000ನೇ ಇಸವಿಯಲ್ಲಿ ಅನೇಕ ತೊಂದರೆಗಳು ಕಾಣಿಸಿ ಕೊಂಡವು. ಡಯಾಬಿಟೀಸ್ ಸಮಸ್ಯೆ ಉಲ್ಭಣಿಸಿತು. ಹರ್ನಿಯಾ ರೋಗಕ್ಕೆ ಕೂಡ ತುತ್ತಾದರು. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳಲ್ಲಿ ಅಪರೇಷನ್ ಕೂಡ ನಡೆಯಿತು. ಹೀಗಿದ್ದರೂ ಕೋಮಾಕ್ಕೆ ಹೋದರು. 2000ದ ನವಂಬರ್ 4ರಂದು ನಾಗೇಂದ್ರ ನಮ್ಮನ್ನು ಅಗಲಿದರು. ರಾಜನ್ ಒಂಟಿಯಾದರು. ಆದರೂ ಕೊನೆಯವರೆಗೂ ತಮ್ಮನ್ನು ರಾಜನ್ – ನಾಗೇಂದ್ರ ಜೋಡಿ ಎಂದೇ ಕರೆದು ಕೊಂಡರು.

ನಾಗೇಂದ್ರ ಅವರ ಅಗಲಿಕೆಯ ನಂತರ ರಾಜನ್ ಚಿತ್ರಗಳಿಗೆ ಸಂಗೀತ ನೀಡುವುದನ್ನು ಕಡಿಮೆ ಮಾಡಿದರು. ತಮ್ಮ ಅನುಭವವನ್ನು ಹೊಸ ಪೀಳಿಗೆಯ ಜೊತೆಗೆ ಹಂಚಿಕೊಳ್ಳಲು ತೊಡಗಿದರು. ‘ಹಾಡೋ ಸುಸ್ವರಗಳ ಸಂಗೀತ’ಅವರ ಅನುಭವದ ಕೃತಿಯಾಗಿ ಮೂಡಿ ಬಂದು ಹೊಸ ಪೀಳಿಗೆಗೆ ಮಾರ್ಗದರ್ಶಕ ಗ್ರಂಥವಾಯಿತು. ‘ಸಪ್ತಸ್ವರಾಂಜಲಿ’ ಎಂಬ ಶಾಲೆಯನ್ನು ಆರಂಭಿಸಿದರು. ಕೊನೆಯವರೆಗೂ ರಾಜನ್ ಇಲ್ಲಿ ಪಾಠ ಹೇಳುತ್ತಿದ್ದರು. ಕೊರೊನಾ ಕಾಲದಲ್ಲಿ ಕೂಡ ಅನ್‌ಲೈನ್ ಕ್ಲಾಸ್ ನಡೆಸುತ್ತಿದ್ದರು. ಕೊನೆಯ ದಿನವೂ ಪಾಠ ಹೇಳಿದ್ದರು. ಆರೋಗ್ಯವಾಗಿಯೇ ಇದ್ದ ಅವರು 2020ರ ಅಕ್ಟೊಬರ್ 11ರ ಮಧ್ಯರಾತ್ರಿ 11.35ಕ್ಕೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು.

ಆಕಾಶವಾಣಿಯ ‘ರಜತಾಂತರಂಗ’ ಕಾರ್ಯಕ್ರಮದ ಹೊಸ ಸರಣಿಗೆ.. ರಾಜನ್ – ನಾಗೇಂದ್ರ ಅವರು ಸಂಗೀತ ನೀಡಿದ್ದ  ‘ಅಟೋರಾಜ’ಮತ್ತು ‘ಬೆಂಕಿಯ ಬಲೆ’ಎರಡು ಚಿತ್ರಗಳಿದ್ದವು. ಈ ಕುರಿತು ಅವರನ್ನು ಮಾತನಾಡಿಸಬೇಕಿತ್ತು. ಆಗಲೂ ಕರೋನದ ಅಬ್ಬರ ಇನ್ನೂ ಇಳಿದಿರಲಿಲ್ಲ. ಅವರನ್ನು ಸ್ಟುಡಿಯೋಕ್ಕೆ ಕರೆಸುವುದು ಬೇಡ. ಮೊಬೈಲ್‌ನಲ್ಲಿಯೇ ಅವರ ಮಾತನ್ನು ರೆಕಾರ್ಡ್ ಮಾಡೋಣ ಎಂದುಕೊಂಡೆವು. ಈ ಹೊಣೆಯನ್ನು ಅವರ ನೆಚ್ಚಿನ ಶಿಷ್ಯೆ ಸ್ಮಿತಾ ಕಾರ್ತಿಕ್ ಅವರಿಗೆ ವಹಿಸಿದೆ. ಅಕ್ಟೋಬರ್ 10ರ ಸಂಜೆಯ ವೇಳೆಗೆ ಸ್ಮಿತಾ ರಾಜನ್ ಅವರ ಮಾತುಗಳನ್ನು ಕಳುಹಿಸಿದರು. ನನಗೆ ಅವತ್ತು ನೂರೆಂಟು ಕೆಲಸಗಳ ನಡುವೆ ನೋಡಲು ಆಗಲೇ ಇಲ್ಲ. ಅಕ್ಟೋಬರ್ 11 ರಾತ್ರಿ ಅವರ ಮಾತುಗಳನ್ನು ಕೇಳಿದೆ. ಬೆಳಿಗ್ಗೆ ರಾಜನ್ ಅವರಿಗೆ ಪೋನ್ ಮಾಡಿ ಕೃತಜ್ಞತೆ ಅರ್ಪಿಸಬೇಕು ಎನ್ನುವುದು ಎಂದುಕೊಂಡೆ ಆದರೆ ಕೆಲ ಹೊತ್ತಿನಲ್ಲಿಯೇ ರಾಜನ್ ಅವರ ನಿಧನದ ಸುದ್ದಿ ಬಂದಿತು. ಆಡ ಬೇಕಾಗಿದ್ದ ನೂರಾರು ಮಾತುಗಳು  ಎದೆಯಲ್ಲಿಯೇ ಉಳಿದವು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು