ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು, ನಾಟಕದತ್ತ ಅವರ ಮನಸ್ಸು ಹರಿದಿತ್ತು. ಓದಿದ್ದು ಒಂಬತ್ತನೇ ತರಗತಿಯಷ್ಟೇ. ಕುಣಿಗಲ್‌ನಲ್ಲಿ ಸಣ್ಣ ಕೆಲಸಕ್ಕೆ ಸೇರಿದ ಅವರು ಅವಕಾಶ ಸಿಕ್ಕ ವೇದಿಕೆಗಳಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದರು. ಒಮ್ಮೆ ಕುಣಿಗಲ್ ನಾಗಭೂಷಣ್ ಅವರ ತಂದೆ ಕುಣಿಗಲ್ ಶ್ರೀಕಂಠಯ್ಯನವರು ಇವರ ನಾಟಕ ನೋಡಿ ಪ್ರಭಾವಿತರಾಗಿ ಗಜಾನನ ನಾಟಕ ಮಂಡಳಿಗೆ ಸೇರಿಸಿದರು.

ಮುಂದೆ ವಸಂತಕಲಾ ನಾಟ್ಯಸಂಘ, ಜಯಲಕ್ಷ್ಮಿ ನಾಟ್ಯಸಂಘ, ಅಮರೇಶ್ವರ ನಾಟ್ಯಸಂಘ, ಗುಡಿಗೇರಿ ಸೇರಿದಂತೆ ಹಲವು ಕಂಪನಿಗಳ ವಿವಿಧ ಪಾತ್ರಗಳನ್ನು ನಿರ್ವಹಿಸಿ ಹೆಸರು ಗಳಿಸಿದರು. ‘ಸರ್ವಮಂಗಳ ನಾಟಕ ಸಭಾ’ದಲ್ಲಿನ ಟಿಪ್ಪು ಸುಲ್ತಾನ್, ಎಚ್ಚೆಮನಾಯಕ, ಮುದುಕನ ಮದುವೆ ಪಾತ್ರಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ನಾಟಕದ ನಂಟು ಚಿತ್ರರಂಗಕ್ಕೆ ಕರೆದೊಯ್ದಿತು. ಸಿ.ವಿ.ಶಿವಶಂಕರ್ ನಿರ್ದೇಶನದ ‘ಮಹಡಿ ಮನೆ’ ನಟಿಸಿದ ಮೊದಲ ಸಿನಿಮಾ. ಅವರದ್ದೇ ‘ರಾಗಸಂಗಮ’ ಚಿತ್ರದಲ್ಲಿ ಕಾಮಿಡಿ ವಿಲನ್ ಪಾತ್ರದಲ್ಲಿ ಮಿಂಚಿದರು. ‘ನಾಗರಹಾವು’, ಪಡುವಾರಹಳ್ಳಿ ಪಾಂಡವರು’ ಚಿತ್ರಗಳು ಚಿತ್ರರಂಗದಲ್ಲ ಭದ್ರ ನೆಲೆ ಕಲ್ಪಿಸಿದವು.

ರಂಗನಾಯಕಿ, ಅಮರನಾಥ್, ಅತ್ತೆಗೆ ತಕ್ಕ ಸೊಸೆ, ರಾಜೇಶ್ವರಿ, ಗಜಪತಿ ಗರ್ವಭಂಗ, ಸಿಂಹಜೋಡಿ, ನಾಗ ಕಾಳ ಭೈರವ, ಅಣ್ಣಯ್ಯ ಅವರ ಕೆಲವು ಜನಪ್ರಿಯ ಚಿತ್ರಗಳು. ಸುಮಾರು 180 ಸಿನಿಮಾಗಳ ಹಾಸ್ಯ, ಖಳ, ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಧೀರೇಂದ್ರ ಗೋಪಾಲ್ ಹಾಸ್ಯ ಕ್ಯಾಸೆಟ್ ಲೋಕದಲ್ಲಿ ದೊಡ್ಡ ಹೆಸರು ಗಳಿಸಿದ್ದವರು. ಅವರ ಹಾಸ್ಯ ಮಾತು, ನಾಟಕಗಳ ನೂರಾರು ಕ್ಯಾಸೆಟ್‌ಗಳು ತಯಾರಾಗಿವೆ.
ಧೀರೇಂದ್ರ ಗೋಪಾಲ್ | ಜನನ: 12/04/1944 | ನಿಧನ: 25/12/2000
(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ)