ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಟ್ರ್ಯಾಜಿಡಿ ಕ್ವೀನ್’ ಮೀನಾಕುಮಾರಿ

ಪೋಸ್ಟ್ ಶೇರ್ ಮಾಡಿ

ಮೊಗದ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‌ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ ‘ಟ್ರ್ಯಾಜಿಡಿ ಕ್ವೀನ್’ ಎನ್ನುವ ಪಟ್ಟವೂ ಅವರ ಹೆಸರಿಗೆ ಅನ್ವರ್ಥವಾಗಿತ್ತು. ಅಂದಿನ ದಿನಗಳ ಅತ್ಯಂತ ಸುಂದರ ನಾಯಕಿಯರಲ್ಲಿ ಮೀನಾ ಕುಮಾರಿ ಅಗ್ರ ಪಂಕ್ತಿಯಲ್ಲಿದ್ದವರು. ಮೀನಾ ಕುಮಾರಿ ಅವರ ನಿಜ ನಾಮಧೇಯ ಮೆಹಜಬೀನ್. ಮುಂಬಯಿಯಲ್ಲಿ 1932, ಆಗಸ್ಟ್‌  1ರಂದು ಜನಿಸಿದ್ದು. ಗಂಡು ಮಗುವಿನ ನಿರೀಕ್ಷಿಸಿದ್ದ ತಂದೆ ಅಲಿ ಬಕ್ಷ್‌ಗೆ ಮೆಹಜಬೀನ್ ಜನನ ಬೇಸರ ತಂದಿತ್ತು. ಆತ ಪುಟ್ಟ ಹೆಣ್ಣು ಮಗುವನ್ನು ಮುಸ್ಲಿಂ ಅನಾಥಾಲಯಕ್ಕೆ ಕೊಟ್ಟು ಬಂದಿದ್ದರು! ಅದೇನಾಯ್ತೋ, ಕೆಲವೇ ಗಂಟೆಗಳಲ್ಲಿ ಅನಾಥಾಲಯಕ್ಕೆ ಹೋಗಿ ಮೆಹಜಬೀನ್‌ಳನ್ನು ಮತ್ತೆ ಮನೆಗೆ ಎತ್ತಿಕೊಂಡುಬಂದಿದ್ದರು.

ಮೆಹಜಬೀನ್ ತಂದೆ ಅಲಿ ಬಕ್ಷ್ ಪಾರ್ಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಾರ್ಮೋನಿಯಂ ಕಲಾವಿದ. ಉರ್ದು ಕವಿಯೂ ಹೌದು. ‘ಈದ್ ಕಾ ಚಾಂದ್’ ಸೇರಿದಂತೆ ಐದಾರು ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ಶಾಹಿ ಲೂಟೇರೆ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಮೆಹಜಬೀನ್ ತಾಯಿ ಪ್ರಭಾವತಿ ದೇವಿ ಕೂಡ ರಂಗ ಕಲಾವಿದೆ ಮತ್ತು ನೃತ್ಯಗಾರ್ತಿ. ಆಕೆ ಆಲಿ ಬಕ್ಷ್‌ರ ಎರಡನೇ ಪತ್ನಿ. ಮದುವೆ ನಂತರ ಮುಸ್ಲಿ ಧರ್ಮಕ್ಕೆ ಮತಾಂತರಗೊಂಡ ಪ್ರಭಾವತಿ ತಮ್ಮ ಹೆಸರನ್ನು ಇಕ್ಬಾಲ್ ಬೇಗಂ ಎಂದು ಬದಲಿಸಿಕೊಂಡಿದ್ದರು.

ಬಾಲನಟಿಯಾಗಿ

ಮೆಹಜಬೀನ್ ಬೆಳ್ಳಿತೆರೆಗೆ ಪರಿಚಯವಾದಾಗ ಆಕೆಗೆ 6 ವರ್ಷ. ಸಿನಿಮಾ ಇಷ್ಟವಿಲ್ಲ ಎಂದು ಅತ್ತಿದ್ದರಂತೆ. ಆದರೆ ತಂದೆಯ ಒತ್ತಾಯದ ಮೇರೆಗೆ ‘ಫರ್ಜಂದ್‌ ಎ ವತನ್‌’ (1939) ಚಿತ್ರದೊಂದಿಗೆ ಬಾಲನಟಿಯಾಗಿ ಸಿನಿಮಾಗೆ ಪರಿಚಯವಾದರು. ಮುಂದೆ ‘ವೀರ್ ಘಟೋತ್ಕಚ್’ (1949), ‘ಶ್ರೀ ಗಣೇಶ ಮಹಿಮಾ’ (1950) ಪೌರಾಣಿಕ ಚಿತ್ರಗಳೂ ಸೇರಿದಂತೆ ಆರೇಳು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ‘ಬೈಜು ಬಾವ್ರಾ’ (1952) ಚಿತ್ರದೊಂದಿಗೆ ಮೀನಾಕುಮಾರಿ ದಿನ ಬೆಳಗಾಗುವುದರೊಳಗೆ ಜನಪ್ರಿಯರಾದರು. ಆ ವೇಳೆಗಾಗಲೇ ಅವರ ಮೆಹಜಬೀನ್ ಜನ್ಮನಾಮ ಬದಲಾಗಿತ್ತು. ಮಧ್ಯ ಭಾರತದ ಹೆಸರಾಂತ ಗಾಯಕ ಬೈಜು ಬಾವ್ರಾ ಜೀವನಕಥೆಯನ್ನು ತೆರೆಗೆ ಅಳವಡಿಸಲಾಗಿತ್ತು. ಈ ಚಿತ್ರದ ನಾಯಕಿ ತಾನು ಪ್ರೀತಿಸುವ ವ್ಯಕ್ತಿಗಾಗಿ ತನ್ನ ಆಸೆ – ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾಳೆ. ಅತ್ಯುತ್ತಮ ಅಭಿನಯಕ್ಕಾಗಿ ಮೀನಾಕುಮಾರಿಗೆ ಫಿಲ್ಮ್‌ಫೇರ್‌ (1953, ಚೊಚ್ಚಲ ಫಿಲ್ಮ್‌ಫೇರ್‌) ಪುರಸ್ಕಾರ ಸಂದಿತ್ತು. ವಿಜಯ್ ಭಟ್ ನಿರ್ದೇಶನದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಮುಂಬಯಿಯ ಥಿಯೇಟರ್‌ವೊಂದರಲ್ಲಿ ಚಿತ್ರ ನೂರು ವಾರ ಪ್ರದರ್ಶನ ಕಂಡಿತ್ತು! ಚಿತ್ರದ ಗೆಲುವಿನೊಂದಿಗೆ ಮೀನಾಕುಮಾರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

‘ಕೊಹಿನೂರ್‌’ ಚಿತ್ರದಲ್ಲಿ ದಿಲೀಪ್ ಕುಮಾರ್ ಜೊತೆ

ಮುಂದೆ ಮೀನಾಕುಮಾರಿ, ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ‘ಪರಿಣೀತಾ’ (1953), ‘ಡಯಿರಾ’ (1953), ‘ಏಕ್ ಹೀ ರಾಸ್ತಾ’ (1956), ‘ಶಾರದಾ’ (1957), ‘ದಿಲ್ ಅಪ್ರಾ ಔರ್ ಪ್ರೀತ್ ಪರಾಯಿ’ (1960) ಚಿತ್ರಗಳೊಂದಿಗೆ ಆಕೆಗೆ ‘ಟ್ರ್ಯಾಜಿಡಿ ಹಿರೋಯಿನ್’ ಹಣೆಪಟ್ಟಿ ಅಂಟಿತು. 1962ರಲ್ಲಿ ಮೀನಾಕುಮಾರಿ ಅವರ ಹೆಸರಿನಲ್ಲಿ ವಿಶಿಷ್ಟ ದಾಖಲೆಯೊಂದು ಬರೆಯಲ್ಪಟ್ಟಿತು. ‘ಆರತಿ’, ‘ಮೇ ಚುಪ್ ರಹೇಂಗಿ’ ಮತ್ತು ‘ಸಾಹಿಬ್ ಬೀಬಿ ಔರ್ ಗುಲಾಮ್’ ಮೂರು ಚಿತ್ರಗಳ ಉತ್ತಮ ಅಭಿನಯಕ್ಕಾಗಿ ಅವರ ಹೆಸರು ಫಿಲ್ಮ್‌ಫೇರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು. ಕೊನೆಗೆ ‘ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರದ ಅಭಿನಯಕ್ಕೆ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು.

‘ಪಾಕೀಜಾ’ ಚಿತ್ರದಲ್ಲಿ ರಾಜ್‌ಕುಮಾರ್ ಜೊತೆ

ಮೀನಾಕುಮಾರಿ 1952ರಲ್ಲಿ ನಿರ್ದೇಶಕ ಕಮಲ್ ಅಮ್ರೋಹಿ ಅವರ ಎರಡನೇ ಪತ್ನಿಯಾದರು. ಕಮಲ್ ಆಕೆಗಿಂತ 15 ವರ್ಷಕ್ಕೆ ಹಿರಿಯರು. ಆನಂತರ ‘ದಿಲ್ ಏಕ್ ಮಂದಿರ್’ (1963), ‘ಕಾಜಲ್’ (1965), ‘ಫೂಲ್ ಔರ್ ಪತ್ಥರ್ (1966) ಚಿತ್ರಗಳೊಂದಿಗೆ ಮೀನಾ ಯಶಸ್ಸಿನ ಪಯಣ ಮುಂದುವರೆಯಿತು. 1964ರಲ್ಲಿ ಕಮಲ್‌ರಿಂದ ವಿಚ್ಛೇದನ ಪಡೆದ ನಂತರ ಮೀನಾ ಮಧ್ಯಪಾನಕ್ಕೆ ಮೊರೆಹೋದರು. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಮೀನಾಕುಮಾರಿ ಯಕೃತ್ ದುರ್ಬಲವಾಯ್ತು. ಚಿಕಿತ್ಸೆಗೆಂದು ಮೀನಾಕುಮಾರಿ ಅವರನ್ನು ಲಂಡನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಕರೆದೊಯ್ಯಲಾಗಿತ್ತು.

ಆರೋಗ್ಯ ಸುಧಾರಿಸಿಕೊಂಡು ಭಾರತಕ್ಕೆ ಮರಳಿದ ಮೀನಾಕುಮಾರಿ ಫೋಷಕ ಪಾತ್ರಗಳಲ್ಲಿ ನಟಿಸಿದರು. ‘ಜವಾಬ್’ (1970), ‘ಮೇರೆ ಅಪ್ನೇ’ (1971), ‘ದುಷ್ಮನ್’ (1972) ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರಗಳು. ಹಿಂದೆ ಮೀನಾಕುಮಾರಿ ತಮ್ಮ ಪತಿ ಕಮಲ್ ಅವರೊಡಗೂಡಿ ‘ಪಾಕೀಜಾ’ ಸಿನಿಮಾ ಆರಂಭಿಸಿದ್ದರು. ಅದು ಆಕೆಯ ಮಹತ್ವಾಕಾಂಕ್ಷೆಯ ಚಿತ್ರವೂ ಆಗಿತ್ತು. ದಂಪತಿಯ ವಿಚ್ಛೇದನದ ನಂತರ ಚಿತ್ರವೂ ನನೆಗುದಿಗೆ ಬಿದ್ದಿತ್ತು. ಕೊನೆಗೆ 14 ವರ್ಷಗಳ ನಂತರ 1972, ಫೆಬ್ರವರಿ 4ರಂದು ‘ಪಾಕೀಜಾ’ ತೆರೆಕಂಡಿತು. ಮೊದಲು ಚಿತ್ರವನ್ನು ಫ್ಲಾಪ್‌ ಎಂದು ಘೋಷಿಸಲಾಗಿತ್ತು. ಆದರೆ 1972, ಮಾರ್ಚ್ 31ರಲ್ಲಿ ಮೀನಾಕುಮಾರಿ ನಿಧನರಾದ ನಂತರ ಒಮ್ಮೆಗೇ ‘ಪಾಕೀಜಾ’ ಗೆಲುವಿನ ಹಾದಿ ಹಿಡಿಯಿತು! ಸಾವಿನೊಂದಿಗೆ ಮೀನಾಕುಮಾರಿ ಅವರ ಗೆಲುವಿನ ಕನಸು ಕೂಡ ಕೈಗೂಡಿತ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ

ಫಾರೂಕ್ ಶೇಕ್

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾ ಯಾದಿಯಲ್ಲಿ ನಟ ಫಾರೂಕ್ ಶೇಕ್‌ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ, ಸಿನಿಮಾ ಮತ್ತು