ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿರಂತನ ಸ್ಕೂಲ್ ಮಾಸ್ಟರ್ ಬಿ.ಆರ್.ಪಂತಲು

ನಟ, ನಿರ್ದೇಶಕ, ನಿರ್ಮಾಪಕ
ಪೋಸ್ಟ್ ಶೇರ್ ಮಾಡಿ

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಹಿರಿಯ ಪತ್ರಕರ್ತ – ಲೇಖಕ)

ಅದ್ಧೂರಿ ಚಿತ್ರಗಳ ನಿರ್ಮಾಣದ ಜೊತೆಗೆ ಪಂತಲು ಅವರು ಸಾಲಾಗಿ ಸದಭಿರುಚಿ ಚಿತ್ರಗಳನ್ನು ನಿರ್ಮಿಸಿ, ಅಭಿನಯಿಸಿದರು. ಕನ್ನಡ ಚಿತ್ರರಂಗಕ್ಕೆ ಅಗತ್ಯವಾಗಿದ್ದ ಬಹುಮುಖಿ ವ್ಯಾಪ್ತಿಯನ್ನು ದೊರಕಿಸಿಕೊಟ್ಟ ಈ ಚಿತ್ರಗಳಿಂದ ಹಲವಾರು ಪ್ರತಿಭಾವಂತರು ಬೆಳಕಿಗೆ ಬಂದರು.

ಬಿ.ಆರ್.ಪಂತಲು 1911ರ ಜುಲೈ 26ರಂದು ಬಂಗಾರಪೇಟೆಯ ಬಳಿ ಇರುವಕುಪ್ಪುಂನಿಂದ ಹನ್ನೊಂದು ಕಿ.ಮೀ ದೂರದಲ್ಲಿರುವ ಕುಗ್ರಾಮ ಬಡಗೂರಿನಲ್ಲಿ ಜನಿಸಿದರು. ಅವರ ತಂದೆ ವೆಂಕಟಾಚಲಯ್ಯ ಸಾಹಿತ್ಯ ಮತ್ತು ನೃತ್ಯದಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿದ್ದರು. ತಂದೆಯವರ ಬೆಂಬಲದಿಂದಲೇ ಪಂತಲು ಅವರಿಗೆ  ರಂಗಭೂಮಿಯತ್ತ ಆಸಕ್ತಿ ಬೆಳೆದು ಬಂದಿತು. ಎಸ್.ಎಸ್.ಎಲ್.ಸಿಯ ನಂತರ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿಯೂ ಮಕ್ಕಳಿಗೆ ಪಾಠ ಮಾಡಿದ್ದಕ್ಕಿಂತ ನಾಟಕ ಕಲಿಸಿದ್ದೇ ಹೆಚ್ಚು. ಒಮ್ಮೆ ನಾಟಕ ಕಲಿಸುವ ಸಮಯದಲ್ಲಿಯೇ ಬಂದ ಇನ್‌ಸ್ಪೆಕ್ಟರ್‌ ಇದು ಸರಿಯಲ್ಲವೆಂದೂ, ಇನ್ನೊಮ್ಮೆ ಹೀಗಾದರೆ ವಜಾ ಮಾಡಬೇಕಾಗುತ್ತದೆ ಎಂದೂ ನೋಟೀಸ್ ಜಾರಿಗೊಳಿಸಿದರು. ಇದರಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿ ಪಂತಲು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ಬೆಂಗಳೂರಿನಲ್ಲಿ ಅವರ ಹಿರಿಯರಾದ ಪಾಪಯ್ಯನವರು ಪೀರ್‌ಅವರ ಚಂದ್ರಕಲಾ ನಾಟಕ ಮಂಡಳಿಯಲ್ಲಿ ಇದ್ದರು. ಅವರನ್ನು ಭೇಟಿ ಮಾಡಿದ ಪಂತಲು ಅವರು ತಾವೂ ಅದೇ ಕಂಪನಿಯನ್ನು ಸೇರಿದರು. ಅವರಿಗೆ ಹೆಸರು ತಂದುಕೊಟ್ಟ ಪಾತ್ರ ‘ಸಂಸಾರ ನೌಕೆ’ಯ ಸುಂದರನದು. ಚಂದ್ರಕಲಾ ಕಂಪನಿಯಲ್ಲಿ ಪೌರಾಣಿಕ ನಾಟಕಗಳಿಗೇ ಮಹತ್ವ. ಅಲ್ಲಿ ಕಂದ – ಸೀಸ ಪದ್ಯಗಳನ್ನು ಹೇಳುವುದೇ ದೊಡ್ಡ ಸವಾಲಾಗಿತ್ತು. ಇದರಲ್ಲಿ ಪಂತಲು ಗೆದ್ದರು. ಆದರೆ ತಾತ್ವಿಕ ವಿಚಾರಗಳ ಕುರಿತು ಉಂಟಾದ ಭಿನ್ನಾಭಿಪ್ರಾಯಗಳಿಂದ ತಮ್ಮ ಸ್ವಂತ ಕಂಪನಿ ‘ಕಲಾ ಸೇವಾ ನಾಟಕ ಮಂಡಳಿ’ಯನ್ನು ಸ್ಥಾಪಿಸಿದರು.

ಈ ನಡುವೆ ಅವರ ಅಭಿನಯದ ‘ಸಂಸಾರ ನೌಕಾ’ ಚಲನಚಿತ್ರವಾಯಿತು. ಕನ್ನಡದ ಮೊದಲ ಸಾಂಸಾರಿಕ ಚಿತ್ರ ಎನ್ನುವ ಹೆಗ್ಗಳಿಕೆಯನ್ನು ಪಡೆದ ಇದರಲ್ಲಿ ಪಂತಲು ಅವರು ಸುಂದರನ ಪಾತ್ರವನ್ನು ನಿರ್ವಹಿಸಿ ಬೆಳ್ಳಿತೆರೆಗೆ ಬಂದರು. ಈ ಚಿತ್ರದ ನಂತರ ‘ರಾಜಭಕ್ತಿ’ ಎನ್ನುವ ತಮಿಳು ಚಿತ್ರದಲ್ಲಿ ದುರ್ಜಯನ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರ ಯಶ ಕಂಡ ಮೇಲೆ ಅವರು ಚಿತ್ರರಂಗದಲ್ಲಿಯೇ ಹೆಚ್ಚು ಸಕ್ರಿಯರಾದರು. ಸಮಯ ಸಿಕ್ಕಾಗ ಟಿ.ಆರ್.ಮಹಾಲಿಂಗಂ ಅವರ ನಾಟಕ ಮಂಡಳಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ‘ಸುಕುಮಾರ ಪ್ರೊಡಕ್ಷನ್’ ಲಾಂಛನದಲ್ಲಿ ‘ಮಚ್ಚೈ ರೇಖಾ’ ಚಿತ್ರವನ್ನು ನಿರ್ಮಿಸಿದರು. ಆದರೆ ಚಿತ್ರ ಸೋಲನ್ನು ಕಂಡಿದ್ದರಿಂದ ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿದರು. ಅದೇ ಸಂದರ್ಭದಲ್ಲಿ ಎಂ.ವಿ.ರಾಜಮ್ಮನವರು ‘ರಾಧಾರಮಣ’ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದರು. ಅದನ್ನು ನಿರ್ದೇಶಿಸಲು ಜ್ಯೋತಿಸಿಂಹ ಅವರನ್ನು ಗೊತ್ತು ಪಡಿಸಲಾಗಿತ್ತು. ಆದರೆ ಪಾಲುದಾರರ ನಡುವಿನ ಭಿನ್ನಾಭಿಪ್ರಾಯದಿಂದ ಅವರು ಅರ್ಧಕ್ಕೇ ಹೊರಟು ಹೋದರು. ಚಿತ್ರ ನಿಲ್ಲುವ ಸ್ಥಿತಿ ಬಂದಾಗ ರಾಜಮ್ಮನವರು ಪಂತಲು ಅವರನ್ನು ಆಹ್ವಾನಿಸಿದರು. ಅದರಂತೆ ಬಂದ  ಪಂತಲು ಚಿತ್ರವನ್ನು ಪೂರ್ಣಗೊಳಿಸಿ ಕೊಟ್ಟಿದ್ದಲ್ಲದೆ ಮುಖ್ಯವಾದ ಅನಯನ ಪಾತ್ರವನ್ನು ನಿರ್ವಹಿಸಿದರು.

ಸ್ಕೂಲ್ ಮಾಸ್ಟರ್‌

ಈ ಚಿತ್ರದ ಮೂಲಕ ಪಂತಲು ಮತ್ತು ರಾಜಮ್ಮನವರ ಸಂಬಂಧ ಗಟ್ಟಿಯಾಗಿದ್ದಲ್ಲದೆ ದಕ್ಷಿಣ ಭಾರತದಲ್ಲಿ ಅಮೋಘ ಇತಿಹಾಸ ಸೃಷ್ಟಿಸಿದ ‘ಪದ್ಮಿನಿ ಪಿಕ್ಚರ್ಸ್’ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು. ಇವರ ಜೊತೆಗೆ ಪಿ.ನೀಲಕಂಠನ್‌ ಎನ್ನುವ ಮಹನೀಯರ ಸಹಕಾರವೂ ದೊರಕಿತು. ಈ ಸಂಸ್ಥೆಯ ಮೂಲಕ ನಿರ್ಮಾಣವಾದ ಮೊದಲ ಚಿತ್ರ ‘ಕಲ್ಯಾಣಂ ಪಣ್ಣಿಯಂ ಬ್ರಹ್ಮಚಾರಿ’. ಈ ಚಿತ್ರ ಯಶ ಕಂಡ ಮೇಲೆ ಪಂತಲು ಅವರು ಕನ್ನಡ ಚಿತ್ರ ‘ಮೊದಲ ತೇದಿ’ ಪ್ರಜ್ಞಾ ಪ್ರವಾಹ ತಂತ್ರವನ್ನು ಬಳಸಿದ ಮೊದಲ ಕನ್ನಡಚಿತ್ರ ಎನ್ನುವ ಹೆಗ್ಗಳಿಕೆ ಇದರದಾಯಿತು. ಚಿ.ಸದಾಶಿವಯ್ಯ ಈ ಚಿತ್ರದ ಮೂಲಕ ಪೂರ್ಣಪ್ರಮಾಣದಲ್ಲಿ ಚಿತ್ರ ಸಾಹಿತಿಯಾದರು. ಮುಂದೆ ನಿರ್ಮಿಸಿದ ‘ಶಿವ ಶರಣೆ ನಂಬೆಕ್ಕ’ ಚಿತ್ರ ಸಾಹಿತಿ ಪ.ಗುಂಡೂರಾಯರ ತಪ್ಪಿನಿಂದಾಗಿ ವಿವಾದಕ್ಕೆ ಕಾರಣವಾಯಿತು. ಚಿತ್ರ ಸೋತಿತು ಎನ್ನುವುದಕ್ಕಿಂತ ಈ ವಿವಾದ ಪಂತಲು ಅವರ ವರ್ಚಸ್ಸಿಗೆ ಪೆಟ್ಟುಕೊಟ್ಟಿತು.

ಕುಸಿದ ವರ್ಚಸ್ಸನ್ನು ಗಳಿಸಲು ಪಂತಲು ಅವರು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು. ಅದಕ್ಕಾಗಿ ಅವರು ಆರಿಸಿ ಕೊಂಡಿದ್ದು ಜಾನಪದ ಕಥೆಯನ್ನು. ಚಿತ್ರಾ ಕೃಷ್ಣಮೂರ್ತಿಯವರು ಇದನ್ನು ಚಿತ್ರಕಥೆಯ ರೂಪಕ್ಕೆ ತಂದರು. ‘ರತ್ನಗಿರಿ ರಹಸ್ಯ’ ಚಿತ್ರದ ಹೆಸರು. ಟಾರ್ಜನ್ ಮಾದರಿಯ ಸಾಹಸದ ವಸ್ತುವನ್ನು ಹೊಂದಿದ್ದ ಇದರಲ್ಲಿ ರಾಜಮನೆತನದ ಒಳರಾಜಕೀಯಗಳ ಚಿತ್ರಣವಿತ್ತು. ಫ್ಯಾಂಟಸಿ ಅಂಶಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗಿತ್ತು. ಈ ಚಿತ್ರದಲ್ಲಿ ಮುಖ್ಯವಾದ ಸಂಗತಿ ಗೀತೆಗಳು. ಒಂದು ಅರ್ಥದಲ್ಲಿ ಚಿತ್ರವನ್ನು ಗೆಲ್ಲಿಸಿದ್ದು ಗೀತೆಗಳೇ. ಅಮರ ಮಧುರ ಪ್ರೇಮ, ಅನುರಾಗದ ಅಮರಾವತಿ, ಕಲ್ಯಾಣ ನಮ್ಮಕಲ್ಯಾಣ, ಯೌವನವೇ ಮೊದಲಾದ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ. ಆ ಕಾಲಕ್ಕೆ ಮೂವತ್ತೆಂದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು ಹನ್ನೊಂದೂವರೆ ಲಕ್ಷ ರೂಪಾಯಿಗಳನ್ನು ಗಳಿಸಿ ಕೊಟ್ಟಿತು. ಈ ಚಿತ್ರವು ತಮಿಳಿನಲ್ಲೂ ನಿರ್ಮಾಣವಾಗಿ ಗೆಲುವನ್ನು ಪಡೆದುಕೊಂಡಿತು. ಇಂತಹ ಚಾರಿತ್ರಿಕ ಗೆಲುವು ಪಾಲುದಾರರಲ್ಲಿ ಒಡಕನ್ನುತಂದಿದ್ದು ವಿಪರ್ಯಾಸವಾದರೂ ಸತ್ಯ. ಪಿ.ನೀಲಕಂಠರಾಯರು ಇಂತಹ ಅಮೋಘ ಚಿತ್ರವನ್ನು ನಿರ್ಮಿಸಿದ ನಂತರ ನಿರೀಕ್ಷೆಗಳು ಹೆಚ್ಚಾಗುವುದರಿಂದ ಪದ್ಮಿನಿ ಪಿಕ್ಚರ್ಸ್ ಅನ್ನು ನಿಲ್ಲಿಸಿಬಿಡಬೇಕು ಎಂದು ಬಯಸಿದ್ದರು. ಆದರೆ ಪಂತಲು ಅದಕ್ಕೆ ಒಪ್ಪಲಿಲ್ಲ. ಇಲ್ಲಿಂದ ಮುಂದೆ ಪಂತಲು ಅವರೊಬ್ಬರೇ ಪದ್ಮಿನಿ ಪಿಕ್ಚರ್ಸ್ ಅನ್ನು ಮುನ್ನಡೆಸಿದರು.

‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ರಾಜಕುಮಾರ್, ಜಯಂತಿ

1958ರಲ್ಲಿ ಕನ್ನಡಚಿತ್ರರಂಗದ ಬೆಳ್ಳಿಹಬ್ಬದ ಆಚರಣೆಗಳು ಆರಂಭವಾದವು. ಮೇ 12ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಡಿ.ವಿ.ಜಿಯವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, ಈ ಆಚರಣೆ ಶಾಶ್ವತವಾಗಿ ಉಳಿಯ ಬೇಕಾದರೆ ಇದರ ನೆನಪಲ್ಲಿ ಒಂದು ಸ್ಮರಣೀಯ ಚಿತ್ರ ಬಂದರೆ ಚೆನ್ನ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಪಂತಲು ಅವರು ಅದನ್ನು ಅಪ್ಪಣೆ ಎಂದು ಸ್ವೀಕರಿಸಿ ಆ ಕಾಲದಲ್ಲಿ ಸಮಾಜದ ಬೆನ್ನೆಲುಬಾಗಿ ಬೆಳೆಯುತ್ತಿದ್ದ ಶಿಕ್ಷಣ ವೃತ್ತಿಯ ಘನತೆಯನ್ನುಎತ್ತಿ ಹಿಡಿಯುವಂತಹ ‘ಸ್ಕೂಲ್ ಮಾಸ್ಟರ್’ ಎಂಬ ಚಿತ್ರವನ್ನು ನಿರ್ಮಿಸಿದರು. ಇದು ಇಪ್ಪತ್ತೈದು ವಾರಗಳ ದಾಖಲೆಯ ಪ್ರದರ್ಶನವನ್ನು ಕಂಡಿತಲ್ಲದೆ ರಾಷ್ಟ್ರಪತಿಗಳ ರಜತ ಪದಕವನ್ನು ತನ್ನದಾಗಿಸಿಕೊಂಡಿತು. ಈ ಗೌರವಕ್ಕೆ ಪಾತ್ರವಾದ ಮೊದಲ ಕನ್ನಡಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಮುಂದೆ ಪಂತಲು ‘ವೀರ ಪಾಂಡೆ ಕಟ್ಟಬೊಮ್ಮನ್” ಚಿತ್ರವನ್ನು ನಿರ್ದೇಶಿಸಿದರು. ಅಪಾರ ಯಶಸ್ಸನ್ನು ಪಡೆದ ಈ ಚಿತ್ರ ಆಫ್ರೋ – ಏಷಿಯಾ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ಅತ್ಯುತ್ತಮ ಭಾರತೀಯ ಚಿತ್ರ ಗೌರವವನ್ನು ಪಡೆದುಕೊಂಡಿತು. ಮುಂದೆ ಪಂತಲು ಅವರು ಎಂ.ವಿ.ಆರ್. ಲಾಂಛನದಲ್ಲಿ ‘ಮಕ್ಕಳ ರಾಜ್ಯ’ ಚಿತ್ರ ನಿರ್ದೇಶಿಸಿದರು.

‘ವೀರಪಾಂಡೆ ಕಟ್ಟಬೊಮ್ಮೆನ್’ ಗೆಲುವಿನ ನಂತರ ಕನ್ನಡದಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚಿತ್ರ ಮಾಡಬೇಕು ಎನ್ನುವುದು ಪಂತಲು ಅವರ ಅಭಿಲಾಷೆಯಾಗಿತ್ತು. ಇದಕ್ಕೆ ಸೂಕ್ತವೆನ್ನಿಸುವ ವಸ್ತುವಾಗಿ ದೊರಕಿದ್ದು ‘ಕಿತ್ತೂರುಚೆನ್ನಮ್ಮ’ನ ಕಥಾನಕ. ಉಜ್ವಲ ಸಂಭಾಷಣೆಗಳು ಮತ್ತು ಬಿ.ಸರೋಜಾದೇವಿಯವರ ಅಮೋಘ ಅಭಿನಯದ ಮೂಲಕ ‘ಕಿತ್ತೂರುಚೆನ್ನಮ್ಮ’ ಪಂತಲು ಅವರ ಕಿರೀಟದಲ್ಲಿ ಇನ್ನೊಂದು ಯಶದ ಗರಿಯಾಯಿತು. ಈ ಚಿತ್ರದ ನಂತರ ಜಿ.ವಿ.ಅಯ್ಯರ್‌ ಅವರ ‘ಪೋಸ್ಟ್ ಮಾಸ್ಟರ್’ ಚಿತ್ರದಲ್ಲಿ ಪಂತಲು ಅಭಿನಯಿಸಿದರು. ಇಲ್ಲಿಂದ ಮುಂದೆ ಅದ್ಧೂರಿ ಚಿತ್ರಗಳನ್ನು ಬಿಟ್ಟು ಸಾಲು ಸಾಲಾಗಿ ಸದಭಿರುಚಿ ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡ ಚಿತ್ರರಂಗಕ್ಕೆ ಅಗತ್ಯವಾಗಿದ್ದ ಬಹುಮುಖಿ ವ್ಯಾಪ್ತಿಯನ್ನು ದೊರಕಿಸಿಕೊಟ್ಟ ಈ ಚಿತ್ರಗಳಿಂದ ಹಲವಾರು ಪ್ರತಿಭಾವಂತರು ಬೆಳಕಿಗೆ ಬಂದರು. ಗಾಳಿಗೋಪುರ, ಸಾಕು ಮಗಳು, ಚಿನ್ನದ ಗೊಂಬೆ, ದುಡ್ಡೇದೊಡ್ಡಪ್ಪ, ಎಮ್ಮೆತಮ್ಮಣ್ಣ, ಗಂಗೆ-ಗೌರಿ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಈ ಹಂತದಲ್ಲಿ ಮೂಡಿ ಬಂದ ಚಿತ್ರಗಳು. ಇವುಗಳಲ್ಲಿ ‘ಗಂಡೊಂದು ಹೆಣ್ಣಾರು’ ವಿಶಿಷ್ಟವಾದ ವಸ್ತುವನ್ನು ಹೊಂದಿತ್ತು. ಭಾರತೀಯ ಪರಂಪರೆಯಲ್ಲಿ ಹೆಣ್ಣಿಗೆ ಆರು ಗುಣಗಳಿರುವ ನಂಬಿಕೆ ಇದೆ. ಇದರ ಹುಡುಕಾಟ ಇಲ್ಲಿದೆ. ಈ ಆರು ಗುಣಗಳು ರೂಪಕ್ಕೆ ಸಂಬಂಧಿಸಿದ್ದೇ, ಅರೂಪದ್ದೇಎನ್ನುವ ಪ್ರಶ್ನೆ ಇಲ್ಲಿ ಮಥಿತವಾಗಿದೆ.

ಶಿವಾಜಿ ಗಣೇಶನ್ ಅವರೊಂದಿಗೆ ಪಂತುಲು

ಈ ನಡುವೆ ಪಂತಲು ಅವರು ತಮಿಳು ಮತ್ತು ತೆಲುಗಿನಲ್ಲಿ ಅದ್ಧೂರಿ ಚಿತ್ರಗಳನ್ನು ತಯಾರಿಸಿ ಕನ್ನಡದಲ್ಲಿ ಮಾತ್ರ ಸರಳ ಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ ಎನ್ನುವ ಅಪಾದನೆ ಕೇಳಿ ಬಂದಿತು. ಇದಕ್ಕೆ ಉತ್ತರ ಎನ್ನುವಂತೆ ಅವರು ನಿರ್ಮಿಸಿದ ಚಿತ್ರ ‘ಶ್ರೀಕೃಷ್ಣ ದೇವರಾಯ’. ಚಿತ್ರದ ಪ್ರಮುಖ ಸನ್ನಿವೇಶಗಳನ್ನು ದೂರದ ಜಯಪುರದಲ್ಲಿ ಚಿತ್ರೀಕರಣ ನಡೆಸಿದರು. ಅಲ್ಲಿನ ಶೇಷ ಮಹಲ್‌ನಲ್ಲಿ ‘ಮೋಘಲ್-ಎ-ಆಜಂ’, ‘ಕರ್ಣನ್’ನಂತಹ ಚಾರಿತ್ರಿಕ ಚಿತ್ರಗಳ ಚಿತ್ರೀಕರಣ ನಡೆದಿತ್ತು. ಅಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಅದ್ಧೂರಿತನಕ್ಕೆ ಕಲಶವಿಟ್ಟರು. ತಿರುಪತಿ ಗಿರಿವಾಸ ಗೀತೆಯ ಚಿತ್ರೀಕರಣಕ್ಕಾಗಿ ತಿರುಪತಿ ವೆಂಕಟೇಶ್ವರನ ಸನ್ನಿಧಿಯ ಯಥಾವತ್ ಸೆಟ್ ಹಾಕಿಸಿದರು. ರಾಜ್‌ಕುಮಾರ್, ಪಂತಲು, ರಾಜಮ್ಮ, ಭಾರತಿ, ಜಯಂತಿ, ನರಸಿಂಹರಾಜು ಮೊದಲಾದವರ ಅಮೋಘ ಅಭಿನಯದಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿತು. ಮಹತ್ವದ ಸಂಗತಿ ಎಂದರೆ ಈ ಚಿತ್ರಕ್ಕಾಗಿ ಪಂತಲು ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ದೊರಕಿತ್ತು. ಆದರೆ ಅದು ಕೃಷ್ಣ ದೇವರಾಯನ ಪಾತ್ರವನ್ನು ವಹಿಸಿದ್ದ ರಾಜ್‌ಕುಮಾರ್‌ ಅವರಿಗೆ ಬರಬೇಕಿತ್ತು ಎಂದು ನಿರಾಕರಿಸಿದರು. ಶ್ರೀಕೃಷ್ಣ ದೇವರಾಯ ವಾಣಿಜ್ಯಿಕವಾಗಿ ಕೂಡ ಬಹಳ ಯಶಸ್ವಿಯಾದ ಚಿತ್ರ. ಬೆಂಗಳೂರಿನ ಸಾಗರ್‌ ಚಿತ್ರಮಂದಿರದಲ್ಲಿ ಇಪ್ಪತ್ತಾರು ವಾರ ಮತ್ತು ಮೈಸೂರಿನ ಪ್ರಭುದೇವ ಚಿತ್ರಮಂದಿರದಲ್ಲಿ ಮೂವತ್ತು ವಾರಗಳ ದಾಖಲೆ ಪ್ರದರ್ಶನವನ್ನು ಕಂಡಿತ್ತು. ‘ಶ್ರೀಕೃಷ್ಣ ದೇವರಾಯ’ದ ನಂತರ ಪಂತಲು ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತು. ಈ ಕಾರಣದಿಂದ ಅವರು ಅಳಿಯ ಗೆಳೆಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆಯಂತಹ ಸರಳ ಚಿತ್ರಗಳನ್ನು ನಿರ್ಮಿಸಿದರು.

‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ಪಂತುಲು, ಎಂ.ವಿ.ರಾಜಮ್ಮ

ಪಂತಲು ಅವರಿಗೆ ಬಿ.ಜಿ.ಎಲ್.ಸ್ವಾಮಿಯವರ ‘ಕಾಲೇಜುರಂಗ’ ಕಾದಂಬರಿಯನ್ನು ಬೆಳ್ಳಿತೆರೆಗೆ ತರಬೇಕು ಎನ್ನುವ ತೀವ್ರವಾದ ಹಂಬಲವಿತ್ತು. ವಿಶ್ವವಿದ್ಯಾಲಯದ ಶಿಕ್ಷಣ ಪದ್ದತಿಯಲ್ಲಿನ ಕೊರತೆಗಳನ್ನು ವಿಡಂಬನಾತ್ಮಕವಾಗಿ ಹೇಳುವ ಮೂಲಕ ಹೊಸ ಸಿನಿಮಾ ಈಡಿಯಂ ಕಟ್ಟುವ ಹಂಬಲವೂ ಅವರಿತ್ತು. ಆಗ ಅವರು ‘ಮಧುರೈ ಮಟ್ಟಿಯ ಸುಂದರ್ ಪಾಂಡ್ಯನ್’ ಎಂಬ ತಮಿಳು ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದರು. ಅದಕ್ಕೆ ಬೇಕಾದ ವೇಷಭೂಷಣಗಳ ಖರೀದಿಗಾಗಿ ಬೆಂಗಳೂರಿಗೆ ಬಂದು ವುಡ್‌ಲ್ಯಾಂಡ್ಸ್ ಹೋಟಲ್‌ನಲ್ಲಿ ತಂಗಿದ್ದರು. ಪ್ರತಿ ತಿಂಗಳ ಏಳನೇ ತಾರೀಖಿನಂದು ಪದ್ಮಿನಿ ಪಿಕ್ಚರ್ಸ್‌ನಲ್ಲಿ ಸಂಬಳದ ದಿನ. ಅದು ಎಂದಿಗೂ ತಪ್ಪುತ್ತಿರಲಿಲ್ಲ. ಆದರೆ ಅರ್ಥಿಕ ಮುಗ್ಗಟ್ಟಿನ ಕಾರಣದಿಂದ ಅದು ಸಾಧ್ಯವಾಗಲಿಲ್ಲ ಎನ್ನುವ ವಿಷಯ 1974ರ ಅಕ್ಟೋಬರ್ 8ರಂದು ಅವರಿಗೆ ತಿಳಿಯಿತು. ಇದರಿಂದ ಅಘಾತಗೊಂಡ ಅವರು ತೀವ್ರ ಹೃದಯಾಘಾತಕ್ಕೆ ಒಳಗಾದರು. ಆಗ ಅವರಿಗೆ 63 ವರ್ಷ. ದಕ್ಷಿಣ ಭಾರತದ ಪ್ರಮುಖ ವ್ಯಕ್ತಿಯ ಅನಿರೀಕ್ಷಿತ ನಿರ್ಗಮನವಾಯಿತು. ಎಂ.ಜಿ.ರಾಮಚಂದ್ರನ್‌ ಅವರು ‘ಮಧುರೈ..’ ಚಿತ್ರವನ್ನು ಪೂರ್ತಿ ಮಾಡಿದ್ದಲ್ಲದೆ ಪಂತಲು ಅವರು ಮಾಡಿದ್ದ ಸಾಲಗಳನ್ನೂ ತೀರಿಸಿದರು. ‘ಕಾಲೇಜುರಂಗ’ ಚಿತ್ರವನ್ನು ಅವರ ಶಿಷ್ಯ ಪುಟ್ಟಣ್ಣ ಕಣಗಾಲ್ ಪೂರ್ಣಗೊಳಿಸಿದರು. ಬಿ.ಆರ್.ಪಂತಲು ಪುತ್ರ ರವಿಶಂಕರ್ ಅವರು ಗೋಪಾಲ ರತ್ನಂ (ಮಣೀರತ್ನಂ ಅವರ ತಂದೆ) ಜೊತೆ ಸೇರಿ ‘ಬಂಗಾರದ ಗಣಿ’ ಎಂಬ ಚಿತ್ರದ ತಯಾರಿಕೆಯನ್ನು ಆರಂಭಿಸಿದರು. ಆದರೆ ಅದು ಹಲವು  ಕಾರಣಗಳಿಂದ ಪೂರ್ಣಗೊಳ್ಳಲಿಲ್ಲ. ಪಂತಲು ಅವರ ಮಗಳು  ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದರು. ಕಿರುತೆರೆ ಧಾರಾವಾಹಿಗಳನ್ನು ನಿರ್ಮಾಣ ಮಾಡಿದರು. ‘ರತ್ನಗಿರಿ ರಹಸ್ಯ’ ಎನ್ನುವ ಧಾರಾವಾಹಿಯನ್ನು ಪದ್ಮಿನಿ ಪಿಕ್ಚರ್ಸ್ ಎನ್ನುವ ಲಾಂಛನದಲ್ಲಿಯೇ ನಿರ್ಮಿಸಿ – ನಿರ್ದೇಶಿಸಿದ್ದು ಅದರಲ್ಲಿ ಮುಖ್ಯವಾದದ್ದು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪ್ರತಿಮ ನಾಟಕಕಾರ ಬಿ.ಪುಟ್ಟಸ್ವಾಮಯ್ಯ

ಪುಟ್ಟಸ್ವಾಮಿಯ್ಯನವರಿಗೂ ನಾಟಕರಂಗಕ್ಕೂ ನಿಕಟ ಬಾಂಧವ್ಯವಿತ್ತು. ಪತ್ರಿಕೋದ್ಯಮದಿಂದ ಬೇಸತ್ತ ಅವರು ನಾಟಕರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡರು. ನಾಟಕ ಕ್ಷೇತ್ರದಲ್ಲಿ ಅವರು ಬಳಸಿಕೊಂಡ ವಸ್ತು