ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸ್ವರ ಸಾಮ್ರಾಟ್ ವಿಜಯಭಾಸ್ಕರ್

ಪೋಸ್ಟ್ ಶೇರ್ ಮಾಡಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ, ಲೇಖಕ)

ಕನ್ನಡದ ಸಂಗೀತ ನಿರ್ದೇಶಕರಲ್ಲಿ  ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಇಳಯ ರಾಜಾ ಅವರಿಗಿಂತ ಮೊದಲು ದಕ್ಷಿಣಭಾರತದಲ್ಲಿ ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದವರು ಎನ್ನಿಸಿಕೊಂಡಿದ್ದ ಸಂಗೀತ ನಿರ್ದೇಶಕರು ವಿಜಯಭಾಸ್ಕರ್. ನಾನು ಅವರನ್ನು ಮೊದಲ ಸಲ ನೋಡಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ ಹೋಟೆಲ್ ಜನಾರ್ದನದಲ್ಲಿ ಅವರು ಉಳಿದುಕೊಂಡಿದ್ದರು. ಆಗ ‘ಮಲ್ಲಿಗೆ’ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿದ್ದ ಕೆ.ಸಿ.ಶಿವಪ್ಪ ವಿಜಯಭಾಸ್ಕರ್ ಅವರ ಬೆಂಗಳೂರಿನ ಮನೆ ರೂಪಿಸುವ ಹೊಣೆ ಹೊತ್ತಿದ್ದರು. ಈ ಸಂಬAಧ ಮಾತನಾಡಲು ಅವರು ಹೋದಾಗ ನಾನು ಕುತೂಹಲಕ್ಕೆಂದು ಅವರ ಜೊತೆ ಹೋಗಿದ್ದೆ. ಮೊದಲ ನೋಟದಲ್ಲಿ ವಿಜಯಭಾಸ್ಕರ್ ಬಿಗುವಿನ ಮನುಷ್ಯ ಎಂದು ಕಾಣಿಸಿದರು. ತೂಕ ಹಾಕಿದಂತೆ ಮಾತು, ಸೂಟುಬೂಟು ಧರಿಸಿ ಶಿಸ್ತಿನ ಸಿಪಾಯಿ ರೀತಿಯಂತೆ ಇದ್ದ ಅವರನ್ನು ಪಕ್ಕನೆ ಯಾರೂ ಚಿತ್ರರಂಗದವರು ಎಂದು ಹೇಳುವುದೇ ಕಷ್ಟವಿತ್ತು. ಹೀಗಾಗಿ ಭಯದಲ್ಲಿಯೇ ನಮಸ್ಕಾರಕ್ಕಿಂತ ಹೆಚ್ಚು ಮಾತಾಡಲು ಆಗಲಿಲ್ಲ.

ವಿಜಯಭಾಸ್ಕರ್, ಆರ್.ಎನ್.ಜಯಗೋಪಾಲ್ ಅವರ ನಿಕಟ ಒಡನಾಡಿಗಳು. ಗೀತೆಗಳಿಗೆ ಹಕ್ಕು ಬೇಕು ಎನ್ನುವ ಹೋರಾಟದಲ್ಲಿ ಇಬ್ಬರೂ ರಾಷ್ಟçಮಟ್ಟದಲ್ಲಿ ಕೆಲಸ ಮಾಡಿದವರು. ಮುಂದೆ ಜಯಗೋಪಾಲ್ ಅವರ ಜೊತೆ ವಿಜಯಭಾಸ್ಕರ್ ಅವರನ್ನು ಭೇಟಿ ಮಾಡುವ ಅವಕಾಶಗಳು ಸಿಕ್ಕವು. ಆಗ ಕೂಡ ಹೆಚ್ಚು ಮಾತು ಸಾಧ್ಯವಾಗಲಿಲ್ಲ. ಒಂದು ದಿನ ಅಚಾನಕ್ಕಾಗಿ  ಒಬ್ಬನೇ ವಿಜಯಭಾಸ್ಕರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಗ ಅವರು ಭೀಮ್ ಪಲಾಸ್ ರಾಗವನ್ನು ಬಳಸಿದ ಕ್ರಮದ ಬಗ್ಗೆ ಬಹಳ ದಿನಗಳಿಂದ ಇದ್ದ ಕುತೂಹಲವನ್ನು ಪ್ರಶ್ನೆಯ ರೂಪದಲ್ಲಿ ಅಂಜುತ್ತಲೇ ಕೇಳಿದೆ ‘ನೀವು  “ಬಾರೆ ಬಾರೆ ಚಂದದ ಚೆಲುವಿನ ತಾರೆ”ಯಲ್ಲಿ ಭೀಮ್ ಪಲಾಸ್‌ನ ಶುದ್ದ ನಡಿಗೆ ಬಳಸಿದ್ದೀರಿ  ಅದೇ “ಪಂಚಮ ವೇದ ಪ್ರೇಮದ ನಾದ”ದಲ್ಲಿ ಚತುಶ್ರುತ ರಿಷಭದ ಜೊತೆಗೆ ಶುದ್ಧ ರಿಷಭವನ್ನು ಬಿಟ್ಟಿದ್ದೀರಿ ಭೀಮ್ ಪಲಾಸ್‌ಗೆ ದೈವಿಕ ರಾಗ ಅನ್ನೋ ಹೆಸರಿದೆ. ಸಿನಿಮಾ ಕಥೆಯಲ್ಲಿ ಪ್ರೇಮ ಊನ ಅಗಿದೆ ಅಂತ ತೋರಿಸೋಕೆ ಈ ಎಕ್ಸಪಿರಿಮೆಂಟ್ ಮಾಡಿದ್ದೀರಾ. ಅದೇ ಗೆಜ್ಜೆಪೂಜೆ ಸಿನಿಮಾದ  ‘ಗಗನವು ಎಲ್ಲೋ’ ಹಾಡಿನಲ್ಲಿ  ಜೀವಸ್ವರ ದೈವತವನ್ನೇ ಬಿಟ್ಟಿದ್ದೀರಿ. ನಾಯಕಿಯ ಉನ್ಮಾದ ಕ್ಷಣಿಕ ಅನ್ನೋದನ್ನ ಅದು ತೋರಿಸುತ್ತದೆ ಅಲ್ಲವೆ’ ಈ ಪ್ರಶ್ನೆ ಅವರಿಗೆ ಬಹಳ ಇಷ್ಟವಾಗಿ ಬಿಟ್ಟಿತು. ‘ಆ ಸಿನಿಮಾಗಳು ಬಂದಾಗ ಕೂಡ ಯಾರೂ ಇಂತಹ ಪ್ರಶ್ನೆ ಕೇಳಿರಲಿಲ್ಲ’ ಎಂದು ಸಡಿಲವಾದರು. ಅವತ್ತು ಅವರ ಇಡೀ ದಿನದ ಮಾತು ಭೀಮ್ ಪಲಾಸ್ ಸುತ್ತಲೇ ಇತ್ತು. ಮುಂದಿನ ಹಲವು ಭೇಟಿಗಳಿಗೆ ಇದು ನಾಂದಿ ಹಾಡಿತು. ಅಲ್ಲಿಂದ ಮುಂದೆ ಹಲವು ಸಲ ಅವರ ನೆನಪುಗಳ  ಪ್ರವಾಹಕ್ಕೆ ಕಿವಿಯಾಗುವ ಅದೃಷ್ಟ ನನಗೆ ಸಿಕ್ಕಿತು. ಹೀಗಾಗಿಯೇ ಅವರ ಪ್ರಮುಖ ಹಾಡುಗಳು ಹುಟ್ಟಿದ ರೀತಿಯ ಕುರಿತು ಒಂದು ಮಾಲಿಕೆ ರೂಪಿಸುವ ಕನಸು ಹುಟ್ಟಿ ಕೊಂಡಿತು. ಅದಕ್ಕಾಗಿ ಪಟ್ಟಿಯೂ ಸಿದ್ದವಾಯಿತು. ಒಂದಿಷ್ಟು ಬರವಣಿಗೆಯೂ ಸಾಗಿತು. ಎಲ್ಲವೂ ಚೆನ್ನಾಗಿ ಸಾಗುತ್ತಿದ್ದಾಗಲೇ ವಿಜಯಭಾಸ್ಕರ್ ಇದ್ದಕಿದ್ದ ಹಾಗೆ ಬದುಕಿನಿಂದ ಎದ್ದು ಹೋಗಿಬಿಟ್ಟರು. ಅವರು ತಮ್ಮ ಮಾತಿನಲ್ಲಿ ಕಟ್ಟಿಕೊಟ್ಟಿದ್ದ ನುಡಿಚಿತ್ರಣವನ್ನು ಇಲ್ಲಿ ಲೋಕಸಾಕ್ಷಿಗಾಗಿ ದಾಖಲಿಸಿದ್ದೇನೆ.

**

1931ರ ಸೆಪ್ಟಂಬರ್ 7ರಂದು ಬೆಂಗಳೂರಿನಲ್ಲಿ ಜನಿಸಿದ ವಿಜಯಭಾಸ್ಕರ್ ಅವರ ತಂದೆ ಕೃಷ್ಣಮೂರ್ತಿ ಚೀಫ್ ಇಂಜಿನಿಯರ್ ಆಗಿದ್ದವರು. ತಾಯಿ ಜೀಜಾಬಾಯಿ ಕೂಡ ಸಂಗೀತದಲ್ಲಿ ಆಸಕ್ತಿ ಇದ್ದವರೇ. ವಿಜಯಭಾಸ್ಕರ್ ಅವರ ಮನೆ ಇದ್ದಿದ್ದು ಮಲ್ಲೇಶ್ವರಂನಲ್ಲಿ. ಅಲ್ಲಿ ಮನೆ ಸಮೀಪ ಇದ್ದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಲೆಗ್ ಹಾರ್ಮೋನಿಯಂ ಮೂಲಕ ಸಂಗೀತ ನೀಡುತ್ತಿದ್ದ ಕ್ರಮ ಅವರನ್ನು ಆಕರ್ಷಿಸಿತು. ಅಲ್ಲಿಂದಲೇ ಸಂಗೀತದ ಕುರಿತು ಸೆಳೆತ ಆರಂಭವಾಯಿತು. ವಿಜಯಭಾಸ್ಕರ್ ಅವರ ತಂಗಿಯರಿಗೆ ವಿದ್ವಾನ್ ರತ್ನಗಿರಿ ಸುಬ್ಬಾಶಾಸ್ತಿçಗಳ ಬಳಿ ಸಂಗೀತ ಕಲಿಸುವ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಕೇಳುತ್ತಲೇ ಸಂಗೀತ ಕಲಿತರು. ತಂದೆಗೆ ಮಗ ಸಂಗೀತದ ಕಡೆ ಬರುವುದು ಇಷ್ಟ ಇರಲಿಲ್ಲ. ತಮ್ಮ ಹಾಗೇ ಇಂಜಿನಿಯರ್ ಆಗಲಿ ಅಂತ ಆಸೆ. ಕೈ ತುಂಬಾ ನಂಬರ್ ಬೇರೆ ವಿಜಯಭಾಸ್ಕರ್ ಅವರಿಗೆ ಬಂದಿತ್ತು. ಸುಲಭವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಸೀಟ್ ಸಿಕ್ಕಿತು. ತಂದೆಯ ಆಸೆಯಂತೆ ಇಂಜಿನಿಯಿರಿಂಗ್ ಸೇರಿದರೂ ಸಂಗೀತದ ಆಸಕ್ತಿ ದೂರ ಆಗಿರಲಿಲ್ಲ. ಶೇಷಾದ್ರಿಪುರಂನಲ್ಲಿ ಶ್ಯಾಮಲಾ ಭಾವೆ ಅವರ ತಂದೆ ಜಿ.ವಿ.ಭಾವೆ ಅವರ ಹತ್ತಿರ ಹಿಂದೂಸ್ತಾನಿ ಸಂಗೀತ ಕಲಿಯಲು ಆರಂಭಿಸಿದರು. ಎಷ್ಟೋ ದಿನ ಮಗ ಹೀಗೆ ಸಂಗೀತ ಕಲೀತಾ ಇರೋ ವಿಷಯ ತಂದೆಗೆ ಗೊತ್ತೇ ಇರಲಿಲ್ಲ. ವಿಜಯಭಾಸ್ಕರ್ ಅವರ ಸಂಗೀತದ ಆಸಕ್ತಿ ಎಷ್ಟು ತೀವ್ರವಾಗಿತ್ತು ಅಂದರೆ ಮೈಸೂರು ಅರಮನೆ ಆರ್ಕಸ್ಟ್ರಾ ಹ್ಯಾಂಡಲ್ ಮಾಡ್ತಾ ಇದ್ದ ಲೀನ್ ಹಂಟ್ ಅವರ ಹತ್ತಿರ ವೆಸ್ಟ್ರನ್‌ ಮ್ಯೂಸಿಕ್ ಕಲಿತರು. ಅದರಲ್ಲೂ ಪಿಯಾನೋ ಪ್ಲೇ ಮಾಡೋದ್ರಲ್ಲಿ ಮಾಸ್ಟರ್ ಎನ್ನಿಸಿ ಕೊಂಡರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ವಿಜಯಭಾಸ್ಕರ್ ಸಂಗೀತದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಪಿಯೋನಾ ನುಡಿಸೋದ್ರಲ್ಲಿ ಅವರನ್ನ ಮೀರಿಸೋರೆ ಇಲ್ಲ ಅನ್ನೋ ಮಾತು ಎಲ್ಲಾ ಕಡೆ ಕೇಳಿ ಬರುತ್ತಾ ಇತ್ತು. ಈಗ ತಂದೆ ಕೃಷ್ಣಮೂರ್ತಿ ಅವರಿಗೂ ಮಗನ ಹಾದಿ ಸಂಗೀತವೇ ಅನ್ನೋದು ಕ್ಲಿಯರ್ ಆಗಿತ್ತು. ಆಗೆಲ್ಲ ಇಂಜಿನಿಯರಿಂಗ್ ಓದುವವರೇ ಕಡಿಮೆ. ವಿಜಯಭಾಸ್ಕರ್ ಅವರಿಗೆ ಜಾಬ್ ಅಪರ್ಚುನಿಟಿಗೆ ಏನು ಕೊರತೆ ಇರಲಿಲ್ಲ. ಆದರೆ ಅವರಿಗೆ ಸಂಗೀತದಲ್ಲಿಯೇ ಏನನ್ನಾದರೂ ಸಾಧಿಸಬೇಕು ಅನ್ನುವ ಹಂಬಲ ಬಂದು ಬಿಟ್ಟಿತ್ತು. ಬಾಲಿವುಡ್‌ನಲ್ಲಿ ಏನಾದರೂ ಮಾಡ್ಬೇಕು ಅನ್ನೋ ಹಂಬಲದಲ್ಲಿ ಮುಂಬೈಗೆ ಹೋದರು. ಅಲ್ಲಿ ಮಾಧವ ಲಾಲ್ ಮಾಸ್ಟರ್ ಎನ್ನುವವರಿಗೆ ಅಸೋಸಿಯೇಟ್ ಆಗುವ ಅವಕಾಶ ಸಿಕ್ಕಿತು. ಅವರ ಮೂಲಕವೇ ಹಿಂದಿ ಚಿತ್ರರಂಗದ ದಿಗ್ಗಜ ನೌಷಾದ್ ಅವರ ಪರಿಚಯವಾಯಿತು. ಅವರಿಬ್ಬರ ಸಂಬಂಧ ಗುರು – ಶಿಷ್ಯ ಸಂಬAಧದಷ್ಟು ನಿಕಟವಾಯಿತು. ನೌಷಾಧ್ ಅವರ ಕ್ಲಾಸಿಕ್ ಅಂತ್ಲೇ ಕರೆಸಿಕೊಂಡಿರುವ ‘ಬೈಜುಬಾವ್ರ’ ಸಿನಿಮಾಕ್ಕೆ ವಿಜಯಭಾಸ್ಕರ್ ಅಸೋಸಿಯೇಟ್ ಆಗಿ ಕೆಲಸ ಮಾಡಿದರು. ಬಾಲಿವುಡ್‌ನಲ್ಲಿ ಅವರು ಫೇಮಸ್ ಕೂಡ ಆಗಿದ್ದರು. ಮದನ್ ಮೋಹನ್ ಅವರ ಅಸೋಸಿಯೇಟ್ ಆಗುವ ಅವಕಾಶ ಕೂಡ ಸಿಕ್ಕಿತು. ಹೀಗೆ ಅಸೋಸಿಯೇಟ್ ಆಗಿಯೇ ವಿಜಯಭಾಸ್ಕರ್ ಅವರಿಗೆ ಕೈತುಂಬಾ ಕೆಲಸಗಳು. ಆಗಿನ ಹಿಂದಿಯ ಟಾಪ್ ಹೀರೋ ದಿಲೀಪ್ ಕುಮಾರ್,  ವಿಜಯಭಾಸ್ಕರ್ ಪಿಯಾನೋ ಕೈಚಳಕ ನೋಡಿ ‘ನಿಮಗೆ ಮುಂಬೈನಲ್ಲಿ ಮನೆ ಕೊಡಿಸ್ತೀನಿ. ನನ್ನ ಸಿನಿಮಾಗಳಿಗೆ ಇನ್ನು ನಿಮ್ಮನ್ನೇ ರೆಕಮೆಂಡ್ ಮಾಡ್ತೀನಿ’ ಎಂದಿದ್ದರು.

ವಿಜಯಭಾಸ್ಕರ್ ಬಾಲಿವುಡ್‌ನಲ್ಲಿಯೇ ಇದ್ದು ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬಿಡ್ತಾ ಇದ್ದರೇನೋ. ಆದರೆ ತಂದೆಗೇನೋ ಮಗ ಹ್ಯಾಗೋ ಹೆಸರು ಮಾಡ್ತಾ ಇದ್ದಾನೆ. ಎಲ್ಲಿದ್ದರೆ ಏನು? ಕೈ ತುಂಬಾ ದುಡೀತಾನೋ ಇದ್ದಾನೆ ಎನ್ನುವ ನೆಮ್ಮದಿ. ಆದರೆ ತಾಯಿ ಮಗನನ್ನು ಬಿಟ್ಟಿರೋಕೆ ಆಗದೆ ಚಡಪಡಿಸ್ತಾ ಇದ್ದರು. ಬೆಳೆದು ನಿಂತಿರೋ ತಂಗಿಯರು. ಅವರ ಮದ್ವೆ ಮಾಡ್ಬೇಕಾದ ಇವನು ಅಲ್ಲಿ ದೂರದ ಮುಂಬೈಗೆ ಹೋಗಿ ಕುಳಿತರೆ ಹೇಗೆ ಅನ್ನೋದು ಅವರ ಅಳಲು. ಅದಕ್ಕೆ ಸರಿಯಾಗಿ ಮುಂಬೈನಲ್ಲಿ ಪರಿಚಿತರಾಗಿದ್ದ ಬಿ.ಆರ್.ಕೃಷ್ಣಮೂರ್ತಿ “ಕನ್ನಡದಲ್ಲಿ ಒಂದು ಸಿನಿಮಾ ಮಾಡ್ತಾ ಇದ್ದೀನಿ ನಿಮ್ ಹೆಲ್ಪ್ ಬೇಕು” ಅಂತ ಕೇಳಿದರು. ವಿಜಯಭಾಸ್ಕರ್ ಅವರಿಗೂ ಕನ್ನಡದಲ್ಲಿ ಒಂದು ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇತ್ತು. ಹೀಗಾಗಿ ಒಪ್ಪಿಕೊಂಡು ಬಂದರು. ‘ಶ್ರೀರಾಮಪೂಜಾ’ ಸಿನಿಮಾ ಹೆಸರು. ಆಗ ಮದ್ರಾಸಿನಲ್ಲಿ ಸೌತ್ ಇಂಡಿಯಾದ ನಾಲ್ಕೂ ಭಾಷೆಗಳ ಕಂಪೋಸಿಂಗ್ ನಡೀತಾ ಇತ್ತು. ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದ ವಿಜಯಭಾಸ್ಕರ್‌ಗೆ ಈ ಆರ್ಕೆಸ್ಟ್ರಾ ಜೊತೆ ಕೆಲಸ ಮಾಡೋದೇ ಕಷ್ಟ ಆಯತು. ಜೊತೆಗೆ ಆರ್ಕೆಸ್ಟ್ರಾದವರಿಗೆ ಕನ್ನಡ ಬೇರೆ ಸರಿಯಾಗಿ ಬರ್ತಾ ಇರಲಿಲ್ಲ. ಬರೀ ಬಾಲಿವುಡ್ ಟ್ಯೂನ್ ಕಾಪಿ ಮಾಡ್ತಾ ಇದ್ದರು. ಕೊನೆಗೆ ಅವರ ಜೊತೆ ಒದ್ದಾಡೋಕೆ ಆಗದೆ ಮೈಸೂರಿನ ಜೈಮಾರುತಿ ಆರ್ಕೆಸ್ಟಾçದವರನ್ನೇ ಮದ್ರಾಸಿನ ರೇವತಿ ಸ್ಟುಡಿಯೋಕ್ಕೆ ಕರೆದುಕೊಂಡು ಹೋದ ವಿಜಯಭಾಸ್ಕರ್ ತಮಗೆ ಬೇಕಾದ ಎಫೆಕ್ಟ್ ಪಡೆದುಕೊಂಡರು. ಇದಾದ ಮೇಲೆ 1956ರಲ್ಲಿ ಅವರಿಗೆ ‘ಭಾಗ್ಯಚಕ್ರ’ ಅನ್ನೋ ಸಿನಿಮಾ ಸಿಕ್ಕಿತು. ಇದಕ್ಕೆ ವಿಜಯಭಾಸ್ಕರ್ ಬರೀ ಸಂಗೀತ ಮಾತ್ರ ಕೊಡ್ಲಿಲ್ಲ, ಸ್ಕೀನ್ ಪ್ಲೇ ಕೂಡ ಬರೆದರು. ಮುಂಬೈನಲ್ಲಿ ಕೆಲಸ ಮಾಡಿದ್ದರಿಂದ ಅವರಿಗೆ ಶಾಟ್ ಡಿವಿಜನ್ ಗೊತ್ತಿತ್ತು. ಅದನ್ನ ಕನ್ನಡದಲ್ಲಿ ಬಳಸಿದ ಮಾಡಿದ ಮೊದಲಿಗರು ಅವರು.

ಈ ಎರಡು ಸಿನಿಮಾಗಳು ಹಿಟ್ ಆಗದಿದ್ದರೂ ವಿಜಯಭಾಸ್ಕರ್ ಕನ್ನಡಕ್ಕೆ ಸಿಕ್ಕಿದರು. ಆಗ ಕನ್ನಡದಲ್ಲಿ ತಯರಾಗುತ್ತಾ ಇದ್ದ ಸಿನಿಮಾಗಳೇ ಕಡಿಮೆ. ಹೀಗಿದ್ದರೂ ಅವರು ಇಲ್ಲಿಯೇ ಉಳಿದರು. ‘ರಾಣಿ ಹೊನ್ನಮ್ಮ’ ಸಿನಿಮಾಕ್ಕೆ ಕು.ರ.ಸೀ ಮಲೆಷಿಯಾದಿಂದ ಒಂದು ಟ್ಯೂನ್ ತಂದಿದ್ದರು. ಅದಕ್ಕೆ ಹೊಸ ರೂಪ ಕೊಟ್ಟು ವಿಜಯಭಾಸ್ಕರ್ ಬಳಸಿದರು. ಅಲ್ಲಿಯವರೆಗೂ ಕನ್ನಡದಲ್ಲಿ ಯಾರೂ ಗಿಟಾರ್ ಬಳಸಿರಲಿಲ್ಲ. ಈ ಹಾಡಿನಲ್ಲಿ ಬಳಸಿದರು. ‘ಹಾರುತ ದೂರ ದೂರ’ ತುಂಬಾ ಚೆನ್ನಾಗಿ ಮೂಡಿಬಂದು ಫೇಮಸ್ ಆಯಿತು. ವಿಜಯಭಾಸ್ಕರ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಸಖತ್ ಫೇಮಸ್ ಮಾಡಿದ ಸಿನಿಮಾ ಎಂದರೆ ‘ಸಂತ ತುಕಾರಾಂ’. ಈ ಸಿನಿಮಾದ ಹಾಡುಗಳೆಲ್ಲಾ ಫೇಮಸ್ ಆದವು. ಅದರಲ್ಲೂ ‘ಜಯತು ಜಯ ವಿಠಲ’ ಮತ್ತು ‘ಬೇಡ ಕೃಷ್ಣ ರಂಗಿನಾಟ’ ಇವತ್ತಿಗೂ ಫೇಮಸ್ ಆಗಿವೆ.

ಕಡಿಮೆ ವಾದ್ಯಗಳನ್ನು ಇಟ್ಟುಕೊಂಡು ವಿಜಯಭಾಸ್ಕರ್ ಬಹಳ ಅದ್ಭುತವಾದ ಟ್ಯೂನ್ ಮಾಡ್ತಾ ಇದ್ದರು. ‘ನಾಂದಿ’ ಸಿನಿಮಾದ ಹಾಡು ಕಂಪೋಸಿಂಗ್ ನಡೀತಾ ಇತ್ತು. ಆಗೆಲ್ಲಾ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾತ್ರ. ಕಂಪೋಸಿಂಗ್ ಸಿನಿಮಾಕ್ಕೆ ಎಂದು ತೆಗೆದುಕೊಂಡ ಬಾಡಿಗೆ ಮನೆಯಲ್ಲಿ ನಡೀತಾ ಇತ್ತು. ಈ ಸಿನಿಮಾದ ಲಿರಿಕ್ ರೈಟರ್ ಜಯಗೋಪಾಲ್ ಮತ್ತು ವಿಜಯಭಾಸ್ಕರ್ ಅಡುಗೆ ಮನೆಯಲ್ಲಿ ಕಾಫಿ ಮಾಡಲು ಹೋದರು. ಅಲ್ಲೇ ಲೋಟ ಮತ್ತು ತಟ್ಟೆ ಬಳಸಿ ವಿಜಯಭಾಸ್ಕರ್ ಟ್ಯೂನ್ ಮಾಡಿದರೆ ಜಯಗೋಪಾಲ್ ಹಾಡು ಬರೆದರು. ಹೀಗೆ ಕ್ರಿಯೇಟ್ ಆದ ‘ಹಾಡೊಂದು ಹಾಡುವೆ ನೀ ಕೇಳು ಮಗುವೆ’ ಎರಡೇ ನಿಮಿಷದಲ್ಲಿ ರೆಡಿ ಆದರೂ ಐವತ್ತು ವರ್ಷ ಕಳೆದ ಮೇಲೆ ಕೂಡ ಪಾಪ್ಯೂಲರ್ ಆಗಿದೆ.  ‘ಮಣ್ಣಿನ ಮಗ’ ಸಿನಿಮಾದಲ್ಲಿ  ಒಂದು ಸಣ್ಣ ಸೈಲೆನ್ಸ್ ಕೊಟ್ಟು ‘ಇದೇನು ಸಭ್ಯತೆ ಇದೇನು ಸಂಸ್ಕೃತಿ’ ಸಾಂಗ್ ಕ್ರಿಯೇಟ್ ಮಾಡಿದರು. ಅದೂ ಕೂಡ ಪಾಪ್ಯೂಲರ್ ಆಯಿತು.

‘ಅನಿರೀಕ್ಷಿತ’ ಚಿತ್ರದ ಹಾಡಿನ ಧ್ವನಿಮುದ್ರಣದ ಸಂದರ್ಭದಲ್ಲಿ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತ ಸಂಯೋಜಕ ವಿಜಯಭಾಸ್ಕರ್‌, ಚಿತ್ರದ ನಿರ್ದೇಶಕ ನಾಗೇಶ್ ಬಾಬ.

ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ ಅವರಿಗೆ ವಿಜಯಭಾಸ್ಕರ್ ಫೇವರೇಟ್ ಮ್ಯೂಸಿಕ್ ಡೈರೆಕ್ಟರ್. ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರಿಗಂತೂ ಮೊದಲು ವಿಜಯಭಾಸ್ಕರ್ ಕಾಲ್‌ಶೀಟ್ ಸಿಗಬೇಕು. ಅಮೇಲೆ ಸ್ಟಾರ್‌ಗಳು ಅನ್ನೋ ಭಾವನೆ. ಪುಟ್ಟಣ್ಣನವರ 24 ಸಿನಿಮಾಗಳಲ್ಲಿ 17ಕ್ಕೆ ವಿಜಯಭಾಸ್ಕರ್ ಅವರದೇ ಮ್ಯೂಸಿಕ್. ಕವಿಗೀತೆಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡು ಟ್ಯೂನ್ ಮಾಡೋದರಲ್ಲಿ ಕೂಡ ವಿಜಯಭಾಸ್ಕರ್ ಅವರದು ಎತ್ತಿದ ಕೈ. ‘ಬೆಳ್ಳಿಮೋಡ’ ಸಿನಿಮಾದ ಬೇಂದ್ರೆ ಅವರ ‘ಮೂಡಣ ಮನೆಯ ಮತ್ತಿನ ನೀರಿನ’, ‘ಶರಪಂಜರ’ ಸಿನಿಮಾದ ‘ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ’, ‘ಅರಿಶಿನ ಕುಂಕುಮ’ ಸಿನಿಮಾದ ‘ಇಳಿದು ಬಾ ತಾಯೇ’ ಜಿ.ಎಸ್.ಎಸ್ ಅವರ ‘ವೇದಾಂತಿ ಹೇಳಿದನು’, ‘ಹಾಡು ಹಳೆಯದಾದರೇನು’, ಸುರಂ ಎಕ್ಕುಂಡಿ ಅವರ ‘ಯಾವ ಕಾಣಿಕೆ ನೀಡಲಿ ನಿನಗೆ’, ಕೈಯ್ಯಾರ ಕಿಞಣ ರೈ ಅವರ ‘ಸಾಗಿದೆ ಸಂಗ್ರಾಮ’ ಹೀಗೆ ಹಲವು ಕವಿ ಗೀತೆಗಳನ್ನು ಸಿನಿಮಾದಲ್ಲಿ ಅಳವಡಿಸಿ ದೃಶ್ಯ ಕಾವ್ಯ ಮಾಡಿದ್ದು ವಿಜಯಭಾಸ್ಕರ್ ಅವರ ಹೆಗ್ಗಳಿಕೆ. ‘ನಾಗರ ಹಾವು’ ಸಿನಿಮಾದ ಸಾಂಗ್ ಕಂಪೋಸಿಷನ್ ಆಗುವಾಗ ರಷ್ಯಾದ ಉಲಿಕುಲಿ ಅನ್ನೋ ಇನ್‌ಸ್ಟ್ರ್ಯುಮೆಂಟ್‌ ವಿಜಯಭಾಸ್ಕರ್ ಅವರ ಕೈಗೆ ಸಿಕ್ಕಿತು. ಅದನ್ನು ಬಳಸಿ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’ ತರಹದ ಎವರ್‌ಗ್ರೀನ್ ಸಾಂಗ್ ಕ್ರಿಯೇಟ್ ಮಾಡಿದರು.

ಪುಟ್ಟಣ್ಣ ಮತ್ತು ವಿಜಯಭಾಸ್ಕರ್ ಇಬ್ಬರೂ ಮದ್ರಾಸಿಗೆ ಬಂದ ಕಾಲದಿಂದಲೂ ಪರಿಚಿತರು. ‘ಬೆಳ್ಳಿ ಮೋಡ’ದಿಂದ ಆರಂಭಿಸಿ ‘ಮಸಣದ ಹೂವು’ವರೆಗೂ ಈ ನಿಕಟ ಸಂಬಂಧ ಬೆಳೆದುಬಂದಿತು. ಪುಟ್ಟಣ್ಣನವರು ಯಾವಾಗ್ಲೂ ಹೇಳ್ತಾ ಇದ್ದರು, ‘ನನ್ನ ಸಿನಿಮಾಗಳಲ್ಲಿ ಉದ್ವೇಗ ಮತ್ತು ಉತ್ಕಟತೆ ಇರುತ್ತೆ. ಅದನ್ನು ಬ್ಯಾಲೆನ್ಸ್ ಮಾಡಿ ಕ್ಲಾಸಿಕ್ ಮಾಡಿದ್ದು ವಿಜಯಭಾಸ್ಕರ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ.’ ‘ಉಪಾಸನೆ’ ಅನ್ನುವ ಸಂಗೀತವನ್ನೇ ಬೇಸ್ ಆಗಿಟ್ಟು ಕೊಂಡ ಸಿನಿಮಾ ಮಾಡುವಾಗ ವಿಜಯಭಾಸ್ಕರ್ ತುಂಬಾ ಶ್ರಮ ತೆಗೆದುಕೊಂಡಿದ್ದರು. ವೀಣೆ ಬೇಸ್ ಆಗಿರೋ ಸಿನಿಮಾ ಆಗಿದ್ದರಿಂದ ದೊರೆಸ್ವಾಮಿ ಅಯ್ಯಂಗಾರ್ ಅವರನ್ನು ಕನ್ಸಲ್ಟ್ ಮಾಡಿ ಟ್ರ್ಯಾಕ್‌ ಕ್ರಿಯೇಟ್ ಮಾಡಿದ್ದರು. ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಮ್ಯೂಸಿಕ್ ಬಿಟ್‌ಗಳನ್ನು ಸಿನಿಮಾ ಉದ್ದಕ್ಕೂ ಅವರು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು. ಪುಟ್ಟಣ್ಣನವರ ಮನಸ್ಸಿನಲ್ಲಿ ಏನು ಓಡ್ತಾ ಇದೆ ಎನ್ನೋದು ವಿಜಯಭಾಸ್ಕರ್ ಅವರಿಗೆ ಖಚಿತವಾಗಿ ಗೊತ್ತಾಗಿ ಬಿಡ್ತಾ ಇತ್ತು. ‘ಮಾನಸ ಸರೋವರ’ ಸಿನಿಮಾ ಮಾಡುವಾಗ ಪುಟ್ಟಣ್ಣನವರಿಗೆ ಡಿಫರೆಂಟ್ ಆದ ಪ್ಯಾಥೋ ಫೀಲ್ ಬೇಕಿತ್ತು. ಅದನ್ನ ಹೇಳುವುದಕ್ಕೆ ಒದ್ದಾಡ್ತಾ ಇದ್ದರು. ‘ನೀನೆ ಸಾಕಿದ ಗಿಳಿ’ ಹಮ್ಮಿಂಗ್ ಮೂಡಿಸಿದಾಗ ಪುಟ್ಟಣ್ಣ ಕಣ್ಣೀರು ಸುರಿಸುತ್ತಾ ‘ನೀನು ನನ್ನ ಮನಸ್ಸನ್ನೇ ಹಿಡಿದುಬಿಟ್ಟೆ ಕಣೋ’ ಎಂದಿದ್ದರು. ಕೊನೆಯ ಸಿನಿಮಾ ‘ಮಸಣದ ಹೂವು’ನಲ್ಲಿ ‘ಮಸಣದ ಹೂವೆಂದು ನೀನೇಕೆ ಕೊರಗುವೆ’ ಹಾಡು ತಂದಾಗ ವಿಜಯಭಾಸ್ಕರ್ ಅವರಿಗೆ ಇಷ್ಟವಾಗಲಿಲ್ಲ. ‘ಏಕೋ ಇದು ಬೇಡ ಅನ್ನಿಸುತ್ತೆ ಪುಟ್ಟು, ಬೇರೆ ಬರೆಸು’ ಅಂದರು. ಆದರೆ ಹಠವಾದಿ ಪುಟ್ಟಣ್ಣ ಒಪ್ಪಲಿಲ್ಲ. ಅನ್‌ಫಾರ್ಚುನೇಟ್ಲೀ ಅದೇ ಅವರ ಕಾಂಬಿನೇಷನ್‌ನ ಕೊನೆಯ ಹಾಡು ಆಗಿಬಿಟ್ಟಿತು.

ಕೆ.ಎಸ್.ಎಲ್.ಸ್ವಾಮಿಯವರಿಗೂ ವಿಜಯಭಾಸ್ಕರ್ ಅಂದರೆ ಬಹಳ ಪ್ರೀತಿ. ‘ಮಲಯ ಮಾರುತ’ ಇವರ ಕಾಂಬಿನೇಷನ್‌ನಲ್ಲಿ ಬಂದ ಬೆಸ್ಟ್ ಫಿಲಂ ಎನ್ನಿಸಿ ಕೊಂಡಿದೆ. ವಿಜಯಭಾಸ್ಕರ್ ಅವರ ಕೈಚಳಕದಿಂದ ‘ಮಲಯಮಾರುತ’ ಸಂಗೀತದ ಕಣಜವಾಗಿ ಮಾರ್ಪಟ್ಟಿತ್ತು. ಈ ಚಿತ್ರದಲ್ಲಿ ಇರುವ ಹದಿನೈದು ಗೀತೆಗಳಲ್ಲಿ ಹತ್ತು ಗೀತೆಗಳನ್ನು ಕೆ.ಜೆ.ಯೇಸುದಾಸ್ ಅವರೇ ಹಾಡಿದ್ದರು. ಚೆಂಬೈ ವೈದ್ಯನಾಥ ಭಾಗವತರ್ ಅವರ ನೇರ ಶಿಷ್ಯರಾದ ಅವರು ಗುರುಭಕ್ತಿಯನ್ನು ತುಂಬಿ ಗೀತೆಗಳನ್ನು ಶ್ರೀಮಂತಗೊಳಿಸಿದ್ದರು. ಎಲ್ಲೆಲ್ಲೂ ಸಂಗೀತವೇ, ಶಾರದೆ ನೀ ದಯೆ ತೋರಿದೆ, ನಟನ ವಿಶಾರದಾ ಮೊದಲಾದ ಗೀತೆಗಳಂತೂ ಶಾಸ್ತ್ರೀಯ ಸಂಗೀತದ ವೈಭವವನ್ನೇ ಬಿಂಬಿಸುತ್ತಿದ್ದವು. ಕನಕದಾಸರ ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ’ ಕೀರ್ತನೆಯನ್ನು ಪಾಶ್ಚಾತ್ಯ ಶೈಲಿಯಲ್ಲಿ ಸಂಯೋಜಿಸಿದ್ದು, ‘ಅಧರಂ ಮಧುರಂ’ನಂತಹ ಭಕ್ತಿಭಾವದ ಕೀರ್ತನೆಯನ್ನು ಶಾಸ್ತಿçಯ ಸಂಗೀತದ ಚೌಕಟ್ಟಿಗೆ ತಂದಿದ್ದು ವಿಜಯಭಾಸ್ಕರ್ ಅವರ ಹೆಗ್ಗಳಿಕೆಯಾಗಿತ್ತು. ಅಕ್ಕ ಮಹಾದೇವಿಯವರ ವಚನ, ಮುತ್ತುಸ್ವಾಮಿ ದೀಕ್ಷಿತರ ಮತ್ತು ತ್ಯಾಗರಾಜ ಭಾಗವತರ ಕೀರ್ತನೆಗಳನ್ನು ವಿಜಯಭಾಸ್ಕರ್ ಸಮರ್ಥವಾಗಿ ಚಿತ್ರದ ಚೌಕಟ್ಟಿಗೆ ತಂದಿದ್ದರು. ಚಿತ್ರೀಕರಣಕ್ಕೆ ಮೊದಲೇ ಗೀತೆಗಳ ಸಂಯೋಜನೆಯನ್ನು ಮಾಡಿದ್ದ ರವೀಯವರು ಅವುಗಳನ್ನು ಚಿತ್ರದುದ್ದಕ್ಕೂ ಸಂಗೀತದ ಓಟ ದೊರಕುವಂತೆ ಬಳಸಿಕೊಂಡರು. ಅಷ್ಟೇ ಅಲ್ಲ ಇನ್ನೂ ಎಂಟು ಗೀತೆಗಳು ಧ್ವನಿಮುದ್ರಣಗೊಂಡು ಚಿತ್ರದಲ್ಲಿ ಬಳಕೆಯಾಗದೆ ಉಳಿದವು. ಈ ಅಂಶವೇ ವಿಜಯಭಾಸ್ಕರ್ ಅವರ ರೇಂಜ್ ಎಷ್ಟರ ಮಟ್ಟಿಗಿನದು ಎನ್ನುವುದಕ್ಕೆ ನಿದರ್ಶನವಾಗಿದೆ.

ಗೀತಪ್ರಿಯ ಅವರನ್ನು ಚಿತ್ರರಂಗಕ್ಕೆ ತಂದವರು ವಿಜಯಭಾಸ್ಕರ್ ಅವರೇ. ‘ಭಾಗ್ಯಚಕ್ರ’ ಸಿನಿಮಾದಲ್ಲಿ ಸಂಭಾಷಣೆ-ಹಾಡುಗಳನ್ನ ಬರೆಸಿದ್ದರು. ಗೀತಪ್ರಿಯ ‘ಮಣ್ಣಿನ ಮಗ’ ಸಿನಿಮಾ ಮೂಲಕ ನಿರ್ದೇಶಕರಾದಾಗ ಅವರ ಬೆನ್ನು ತಟ್ಟಿ ಸಂಗೀತ ನೀಡಿದ್ದರು. ವಿಜಯಭಾಸ್ಕರ್ ಅವರು ಸಂಗೀತ ಕೊಟ್ಟ ಕೊನೆಯ ಸಿನಿಮಾ ಗೀತಪ್ರಿಯ ಅವರ ನಿರ್ದೇಶನದ ‘ಶ್ರಾವಣ ಸಂಭ್ರಮ’ವೇ ಆಗಿತ್ತು. ಕಮರ್ಷಿಯಲ್ ಸಿನಿಮಾ ಮಾತ್ರ ಅಲ್ಲ ಆರ್ಟ್ ಸಿನಿಮಾಗಳಿಗೂ ಕೂಡ ವಿಜಯಭಾಸ್ಕರ್ ಬೇಕು ಅನ್ನೋ ಬೇಡಿಕೆ ಇದ್ದೇ ಇತ್ತು. ‘ಸಂಕಲ್ಪ’ದಿಂದ ಆರಂಭಿಸಿ ಕನ್ನಡದಲ್ಲಿ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಬಂದ ಬಹುತೇಕ ಆರ್ಟ್ ಫಿಲಂಗಳಿಗೆ ವಿಜಯಭಾಸ್ಕರ್ ಅವರದೇ ಮ್ಯೂಸಿಕ್. ಪಿ.ಲಂಕೇಶ್ ಅವರ ‘ಎಲ್ಲಿಂದಲೂ ಬಂದವರು ಸಿನಿಮಾ’ದಲ್ಲಿ ‘ಎಲ್ಲಿದ್ದೆ ಇಲ್ಲಿತನಕ’, ‘ಕೆಂಪಾದವೂ ಎಲ್ಲಾ ಕೆಂಪಾದವೂ’ ಗೀತೆಗಳು ಯಾವ ಕಮರ್ಷಿಯಲ್ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಫೇಮಸ್ ಆಗಿದ್ದು ವಿಜಯಭಾಸ್ಕರ್ ಅವರ ಕೈಚಳಕದಿಂದ. ಕನ್ನಡ ಮಾತ್ರ ಅಲ್ಲ. ಮಲೆಯಾಳಂನಲ್ಲಿ ಕೂಡ ಆಡೂರು ಗೋಪಾಲಕೃಷ್ಣನ್ ಎಲ್ಲಾ ಸಿನಿಮಾಗಳಿಗೂ ವಿಜಯಭಾಸ್ಕರ್ ಅವರಿಂದಲೇ ಸಂಗೀತ ಮಾಡಿಸಿದ್ದರು. ವಿಜಯಭಾಸ್ಕರ್ ಅವರನ್ನು ‘ನ್ಯೂಸ್ ಪೇಪರ್ ಎಡಿಟೊರಿಯಲ್’ಗೆ ಕೂಡ ಮ್ಯೂಸಿಕ್ ಮಾಡ್ತಾರೆ ಅಂತ ಲೇವಡಿ ಮಾಡುವವರು ಇದ್ದರು. ಆದರೆ ಅವರಿಗೆ ಸಂಗೀತ ಎಷ್ಟರ ಮಟ್ಟಿಗೆ ಒಲಿದಿತ್ತು ಎಂದರೆ ಯಾವುದೇ ಸಂದರ್ಭಕ್ಕೆ ಸಂಗೀತ ಮೂಡಿಸುವುದು ಅವರಿಗೆ ಸಹಜವಾಗಿ ಬಂದು ಬಿಡ್ತಾ ಇತ್ತು.

‘ಶುಭಮಂಗಳ’ ಸಿನಿಮಾದ ಹಾಡುಗಳ ಸಂಗೀತ ಸಂಯೋಜನೆಯ ಸಂದರ್ಭ. ಚಿತ್ರದ ನಿರ್ಮಾಪಕ ರವೀ, ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಸಂಗೀತ ಸಂಯೋಜಕ ವಿಜಯಭಾಸ್ಕರ್ ಇದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಆರ್.ಸಿ.ಬೋರಾಲ್ ಮತ್ತು ಮುಕುಲ್ ಮೆಹ್ತಾ ಅವರು ನೀಡುತ್ತಿದ್ದಂತೆ ‘ಥೀಮ್ ಮ್ಯೂಸಿಕ್’ ಅನ್ನು ಕನ್ನಡದಲ್ಲಿ ತರಲು ವಿಜಯಭಾಸ್ಕರ್ ಪ್ರಯತ್ನಿಸಿದರು. ‘ಬೆಳ್ಳಿ ಮೋಡ’, ‘ಗೆಜ್ಜೆಪೂಜೆ’, ‘ನಾಗರ ಹಾವು’, ‘ಮಲಯ ಮಾರುತ’, ‘ಮಣ್ಣಿನ ಮಗ’ ಹೀಗೆ ವಿವಿಧ ಚಿತ್ರಗಳಿಗೆ ಅವರು ಪಾತ್ರಕ್ಕೆ ಸನ್ನಿವೇಶಕ್ಕೆ ಹೊಂದುವ ರಾಗಗಳನ್ನು ಬಳಸಿ ಚಿತ್ರವನ್ನು ಪ್ರಭಾವಿಯಾಗಿಸಿದರು. ಅದು ಮುಂದೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ಟ್ರೆಂಡ್ ಆಗಿ ಬೆಳೆಯಿತು. ಪ್ರಯೋಗಶೀಲತೆಗೆ ಹೆಸರಾಗಿದ್ದ ಅವರು ಕ್ಯಾಬರೆ ಹಾಡಿಗೆ ಕ್ಲಾಸಿಕಲ್ ಆದ ಭೈರವಿ ರಾಗವನ್ನು ಪ್ರಯೋಗಿಸಿದರು. ಅದನ್ನು ಗುರುತಿಸಿ ಮೆಚ್ಚಿ ಕೊಂಡವರು ಹಿಂದಿ ಚಿತ್ರರಂಗದ ರಾಜ್ ಕಪೂರ್. 1964ರಲ್ಲಿ ಬಂದ ‘ಸಂಗಂ’ ಸಿನಿಮಾ ನಂತರ ತಮ್ಮ ಮುಂದಿನ ಎಲ್ಲಾ ಸಿನಿಮಾಗಳ ಮ್ಯೂಸಿಕ್ ಡೈರೆಕ್ಟರ್ ಯಾರೇ ಆಗಿದ್ದರೂ ವಿಜಯಭಾಸ್ಕರ್ ಅವರ ಸಲಹೆ ಪಡೆಯುತ್ತಾ ಇದ್ದರು. ಅವರಿಂದ ಬಿ.ಜಿ.ಎಂ ಪಡೆಯುತ್ತಾ ಇದ್ದರು. ಅವರಿಂದ ಒಂದು ಸಿನಿಮಾ ಮಾಡಿಸಬೇಕು ಅನ್ನೋ ರಾಜ್ ಕಪೂರ್ ಆಸೆ ಈಡೇರಲೇ ಇಲ್ಲ. ಕಾರಣ ಅವರ ಸಿನಿಮಾಗಳ ಪ್ರೊಡಕ್ಷನ್ 3-4 ವರ್ಷ ಹಿಡಿಯುತ್ತಾ ಇತ್ತು. ಆದರೆ ಸೌತ್ ಇಂಡಿಯಾದಲ್ಲಿ ಲೀಡಿಂಗ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದ ವಿಜಯಭಾಸ್ಕರ್ ಅಷ್ಟು ಕಾಲ ಮುಂಬೈಗೆ ಹೋಗಿ ಇರಲು ಸಾಧ್ಯ ಆಗ್ತಾ ಇರಲಿಲ್ಲ.

ಟೈಟಲ್ ಕಾರ್ಡ್ ತೋರಿಸುವಲ್ಲಿಯೂ ವಿಜಯಭಾಸ್ಕರ್ ಹೊಸತನವನ್ನು ತಂದರು ‘ಮನ ಮೆಚ್ಚಿದ ಮಡದಿ’ ಚಿತ್ರದ ಟೈಟಲ್ ಕಾರ್ಡ್ ಹಿನ್ನೆಲೆಯಲ್ಲಿ ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ಕವಿತೆ ಬಳಿಸಿದರು. ಮುಂದೆ ಅದು ಜನಪ್ರಿಯವಾಗಿ ನಾಡಗೀತೆಯಾಯಿತು. ‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಕ್ಷೇಪವಾಗಿ ತೋರಿಸಿದರು. ಹಾಗೆ ಕನ್ನಡದ ಸಂಗೀತಗಾರರನ್ನು, ವಾದ್ಯ ಕಲಾವಿದರನ್ನ, ಗಾಯಕರನ್ನು ಪ್ರೋತ್ಸಾಹಿಸಿದರು. ‘ಗೆಜ್ಜೆಪೂಜೆ’ಯಲ್ಲಿ ಬಿ.ಕೆ.ಸುಮಿತ್ರಾ, ‘ಕಥಾಸಂಗಮ’ದಲ್ಲಿ ಕಸ್ತೂರಿ ಶಂಕರ್, ‘ಅಮೃತಘಳಿಗೆ’ಯಲ್ಲಿ ಬಿ.ಆರ್.ಛಾಯಾ ಅವರ ಬಳಿ ಹಾಡಿಸಿ ಅವರು ಪ್ರಮುಖ ಗಾಯಕರಾಗಿ ಬೆಳೆಯುವುದಕ್ಕೆ ಕಾರಣ ಆದರು. ಇಂತಹ ಉದಾಹರಣೆಗಳು ಸಾಕಷ್ಟಿವೆ.

ಬೆಳ್ಳಿಮೋಡ, ಯಾವ ಜನ್ಮದ ಮೈತ್ರಿ, ಸಂಕಲ್ಪ,  ಮುರುಳಿಗಾನ ಅಮೃತಪಾನ, ಪತಿತಪಾವನಿ ಹೀಗೆ ಆರು ಚಿತ್ರಗಳಿಗೆ ವಿಜಯಭಾಸ್ಕರ್‌ ರಾಜ್ಯ ಪ್ರಶಸ್ತಿ ಪಡೆದರು. ಇದುವರೆಗೂ ಇದು ದಾಖಲೆಯಾಗಿಯೇ ಉಳಿದಿದೆ. ಅದಲ್ಲದೆ ವಿವಿಧ ರಾಜ್ಯಗಳ 38 ವಿವಿಧ ಪುರಸ್ಕಾರಗಳನ್ನು ಪಡೆದಿರುವ ವಿಜಯಭಾಸ್ಕರ್ ಮೂರು ಸುರ್ ಸಿಂಗಾರ್ ಗೌರವ ಪಡೆದ ದೇಶದ ಏಕೈಕ ಸಂಗೀತ ನಿರ್ದೇಶಕರಾಗಿದ್ದಾರೆ. ‘ಮಲಯ ಮಾರುತ’ ಸಿನಿಮಾಕ್ಕಾಗಿ ಈ ಅವಾರ್ಡ್ ಪಡೆದಾಗ ಅವರು ಇದನ್ನು ಪಡೆದ ಮೊದಲ ಸೌತ್ ಇಂಡಿಯನ್ ಮ್ಯೂಸಿಕ್ ಡೈರೆಕ್ಟರ್ ಎನ್ನಿಸಿ ಕೊಂಡಿದ್ದರು. 2001ರಲ್ಲಿ ಅವರಿಗೆ ಜೀವಮಾನದ ಸಾಧನೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ಕೂಡ ಬಂದಿತು.

ಸದಾ ಹಸನ್ಮುಖಿ, ಸೂಟು ಬೂಟುದಾರಿಯಾಗಿದ್ದ ವಿಜಯಭಾಸ್ಕರ್ ಸಂಗೀತದ ವಿಷಯದಲ್ಲಂತೂ ಶಿಸ್ತಿನ ಸಿಪಾಯಿ ಆಗಿದ್ದರು. ಒಂದು ನೋಟ್ ಆಚೆ ಈಚೆ ಆದರೂ ಸಹಿಸುತ್ತಾ ಇರಲಿಲ್ಲ. ಪ್ರತಿ ವಿಷಯದಲ್ಲಿಯೂ ಪರ್‌ಫೆಕ್ಷನಿಸ್ಟ್. ಸಾಂಗ್ಸ್ ಮಾತ್ರ ಅಲ್ಲ ಸಿನಿಮಾದ ಪ್ರತಿ ಸೀನ್‌ಗಳ ವಿಷಯದಲ್ಲಿ ಕೂಡ ಇದೇ ಎಚ್ಚರಿಕೆ ವಹಿಸುತ್ತಾ ಇದ್ದರು. ರೆಕಾರ್ಡಿಂಗ್ ಸಮಯದಲ್ಲಿ ಇರ ಬಹುದು, ಬೇರೆ ವಿಷಯದಲ್ಲೇ ಇರಬಹುದು ಒಂದು ಅಗತ್ಯಕ್ಕಿಂತ ಒಂದು ಶಬ್ದ ಹೆಚ್ಚು ನುಡಿಯದ ಸಂಯಮ ಅವರದ್ದು. ಲೂಸ್ ಟಾಕ್ ಮಾಡುವವರನ್ನು ಹತ್ತಿರಕ್ಕೆ ಕೂಡ ಸೇರಿಸ್ತಾ ಇರಲಿಲ್ಲ. ಯಾವ ವಿವಾದಗಳಿಗೂ ಒಳಗಾದವರಲ್ಲ. ಪ್ರೋಗ್ರಾಂ, ಸನ್ಮಾನ ಎಲ್ಲವೂ ದೂರವೇ ಉಳಿಯಿತು. ಆದರೆ ಚಿತ್ರಗೀತೆಗಳ ಹಕ್ಕುಗಳ ವಿಷಯ ಬಂದಾಗ ದೊಡ್ಡ ಹೋರಾಟಗಾರರು. ದಕ್ಷಿಣ ಭಾರತದಲ್ಲಿ ಮ್ಯೂಸಿಕ್ ಡೈರೆಕ್ಟರ್ ಮತ್ತು ಲಿರಿಕ್ಸ್ ರೈಟರ್ಸ್‌ಗೆ ಕೂಡ ಹಕ್ಕುಗಳು ಬೇಕು ಎಂದು ಹೋರಾಡಿದ ಮೊದಲಿಗರು. ಅವರು ಅದಕ್ಕಾಗಿ ಅವರು ರಾಷ್ಟ್ರಮಟ್ಟದಲ್ಲಿಯೇ ಇಂಡಿಯನ್ ಪರ್‌ಫಾರ್ಮೆನ್ಸ್ ಸೊಸೈಟಿ ಕಟ್ಟಿದರು. ತಮ್ಮ ಗುರುಗಳಾದ ನೌಷಾದ್ ಅವರನ್ನು ಪ್ರೆಸಿಡೆಂಟ್ ಮಾಡಿದರು. ಕೊನೆಯವರೆಗೂ ತಾವು ವೈಸ್ ಪ್ರೆಸಿಡೆಂಟ್ ಆಗಿಯೇ ಉಳಿದರು. ಕನ್ನಡ ಚಿತ್ರರಂಗ ಬಹಳ ಕಾಲ ಚೆನ್ನೈನಲ್ಲಿಯೇ ಇದ್ದಿದ್ದರಿಂದ ವಿಜಯಭಾಸ್ಕರ್ ಕೂಡ ಅಲ್ಲಿಯೇ ನೆಲೆ ನಿಂತಿದ್ದರು. ಕ್ರಮೇಣ ಚಿತ್ರರಂಗ ಬೆಂಗಳೂರಿಗೆ ಬಂದಿತು. ಇಲ್ಲಿಯೇ ರೆಕಾರ್ಡಿಂಗ್‌ಗಳೂ ಆರಂಭವಾದವು. ಬೆಂಗಳೂರಿಗೆ ಬಂದಾಗಲೆಲ್ಲಾ ವಿಜಯಭಾಸ್ಕರ್ ಖಾಯಂ ಆಗಿ ಉಳಿಯುತ್ತಾ ಇದ್ದಿದ್ದು ಹೋಟಲ್ ಜನಾರ್ದನದಲ್ಲಿ. ಚೆನ್ನೆöÊನಲ್ಲಿ  ಮಡದಿ ಜಯಲಕ್ಷ್ಮಿ ಅವರ ಜೊತೆಗೆ ಸಂತಸದ ಜೀವನವನ್ನು ವಿಜಯಭಾಸ್ಕರ್ ನಡೆಸುತ್ತಾ ಇದ್ದರು. ಅವರ ಮಗ ಆಸ್ಟ್ರೇಲಿಯಾದಲ್ಲಿ ನೆಲೆ ನಿಂತರೆ ಇಬ್ಬರೂ ಹೆಣ್ಣು ಮಕ್ಕಳಲ್ಲಿ ಶಂಕರಿ ಅನಂತ್ ಬೆಂಗಳೂರಿನಲ್ಲಿ ಮತ್ತು ಮಂಗಳ ಗೌರಿ ಪಾಂಡುಚೇರಿಯಲ್ಲಿ ನೆಲೆ ನಿಂತಿದ್ದರು. ವಿಜಯಭಾಸ್ಕರ್ ಅವರಿಗೂ ಬೆಂಗಳೂರಿಗೆ ಬರುವ ಹಂಬಲ ಮೂಡಿ ಚೆನ್ನೈನಲ್ಲಿ ಸ್ವಂತ ಮನೆ ಇದ್ದರೂ  ಜೆ.ಪಿ.ನಗರದಲ್ಲಿ ತಮ್ಮ ಕಲ್ಪನೆಯ ಮನೆಯನ್ನು ಕಟ್ಟಿಸಿ ಕೊಂಡು ಇಲ್ಲಿಯೇ ವಾಸಕ್ಕೆ ಬಂದರು.  ಆದರೆ ಈ ಮನೆಯಲ್ಲಿ ಹೆಚ್ಚು ಕಾಲ ಇರುವ ಅದೃಷ್ಟ ಅವರಿಗೆ ಇರಲಿಲ್ಲ. 2002ರ ಮಾರ್ಚಿ 3ರಂದು ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ ಅವರಿಂದ ಪಡೆಯಬೇಕಾದ ಬಹಳಷ್ಟನ್ನು ಕಳೆದು ಕೊಂಡಿತು. ಅವರು ಮಧುರವಾಗಿ ಮೂಡಿಸಿದ ಸಾವಿರಾರು ಹಾಡುಗಳು ಮಾತ್ರ ಇಂದಿಗೂ ಅವರ ನೆನಪಾಗಿ ನಮ್ಮ ಜೊತೆಯಲ್ಲಿ ಉಳಿದುಕೊಂಡಿವೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮಮ್ತಾಜ್‌ ಬೇಗಮ್

ಹಿಂದಿ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಚಿರಪರಿಚಿತ ನಟಿ ಮಮ್ತಾಜ್ ಬೇಗಮ್‌. ವಿ.ಶಾಂತಾರಾ ನಿರ್ದೇಶನದ ‘ದಹೇಜ್‌’ (1950) ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್

ದಾಖಲೆಗಳ ನಿರ್ದೇಶಕ ದಾಸರಿ

ದಾಸರಿ ನಾರಾಯಣರಾವು 150 ಚಿತ್ರಗಳನ್ನು ನಿರ್ದೇಶಿಸಿ, 25 ಚಿತ್ರಗಳನ್ನು ನಿರ್ಮಿಸಿದ್ದಾರೆ. ನಟನಾಗಿ, ರಾಜಕಾರಣಿಯಾಗಿ, ಪರ್ತಕರ್ತನಾಗಿ ತಮ್ಮದೇ ಆದ ಛಾಪು ಮೂಡಿಸಿದ

ಮರೆಯಲಾಗದ ಮಿನುಗುತಾರೆ

`ಶರಪಂಜರ’ ಚಿತ್ರ ವೀಕ್ಷಿಸಿದ ಹಿಂದಿ ತಾರೆ ಶರ್ಮಿಳಾ ಟ್ಯಾಗೋರ್, `ಕಲ್ಪನಾರ ಪಾತ್ರವನ್ನು ಅಷ್ಟೇ ಚೆನ್ನಾಗಿ ಮಾಡಲು ನನ್ನಿಂದ ಆದೀತೋ, ಇಲ್ಲವೋ?’