ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಿಸ್ತು, ಶ್ರದ್ಧೆಗೆ ಇನ್ನೊಂದು ಹೆಸರು ಎಂ.ವಿ.ಸುಬ್ಬಯ್ಯನಾಯ್ಡು

ಪೋಸ್ಟ್ ಶೇರ್ ಮಾಡಿ

ಸುಬ್ಬಯ್ಯನಾಯ್ಡು ಅವರ ಬಗ್ಗೆ ಬರೆಯಬೇಕಾದರೆ ನನಗೆ ಸ್ವಲ್ಪ ಕಷ್ಟವೇ ಆಗುತ್ತದೆ. ಏಕೆಂದರೆ ನನಗೆ ಅವರ ಒಡನಾಟ ಅಷ್ಟು ಹೆಚ್ಚಿಲ್ಲ. ಅದು ನನ್ನ ದುರದೃಷ್ಟ. ನಾನು ಅವರೊಟ್ಟಿಗೆ ಪಾತ್ರ ಮಾಡಿದ್ದೂ ಕಡಿಮೆ. ಇದ್ದುದರಲ್ಲಿ ಅವರೊಡನೆ ನನ್ನ ಒಡನಾಟದಲ್ಲಿ ಕೆಲವು ವಿಷಯಗಳನ್ನು ನೆನಪು ಮಾಡಿಕೊಂಡು ಬರೆಯುತ್ತಿದ್ದೇನೆ. ನಾನು ಮೊದಲು ಚಿತ್ರದಲ್ಲಿ ಅಭಿನಯಿಸಿದ್ದು, ಅವರೊಟ್ಟಿಗೆ ಅವರ ಜತೆ ಪಾತ್ರ ಮಾಡಿದ್ದು ಅದೇ ನನ್ನ ಮೊದಲ ಅನುಭವ. ಏಕೆಂದರೆ ಆಗ ನಾನು ಬಹಳ ಚಿಕ್ಕವನು. ಸುಮಾರು ಹತ್ತು, ಹನ್ನೊಂದು ವಯಸ್ಸಿರಬಹುದು. ಅದರಲ್ಲಿ ನಾನು ಪ್ರಹ್ಲಾದನ ಪಾತ್ರ ಮಾಡಿದ್ದೆ. ಅನಂತರ ನಾಟಕಗಳಲ್ಲಿ ಅವರ ಜತೆ ಮಾಡಿದ್ದು. ಅವರಲ್ಲಿ ನಾನು ಮೂಲಭೂತವಾಗಿ ಗಮನಿಸಿದ್ದು ಅವರಲ್ಲಿನ ಶ್ರದ್ಧೆ ರಿಹರ್ಸಲ್‌ಗೆ ಯಾರಾದರೂ ಲೇಟಾಗಿ ಬಂದರೆ ಸಿಟ್ಟು ಮಾಡಿಕೊಳ್ಳುತ್ತಿದ್ದರು. ‘ಪ್ರಹ್ಲಾದ’ ಸಮಯದಲ್ಲಿ ಒಂದು ಘಟನೆ ನೆನಪಿಗೆ ಬರುತ್ತದೆ. ಆಗ ಹಾಡುಗಳ ಧ್ವನಿಮುದ್ರಣ ಮಾಡಬೇಕಾದಲ್ಲಿ ಅದಕ್ಕೆ ಮೊದಲು ರಿಹರ್ಸಲ್ ಅಂತ ಇತ್ತು. ಈಗ ಅದೆಲ್ಲಾ ಇಲ್ಲವೇ ಇಲ್ಲಾಂತ ಕಾಣುತ್ತೆ. ಆ ರಿಹರ್ಸಲ್ ಮಾಡಬೇಕಾದರೆ ವಾದ್ಯಗಾರರ ಜತೆಯಲ್ಲಿ ಎಲ್ಲಾ ರಾಗಸಂಯೋಜನೆ ಮಾಡಿ, ಆನಂತರ ರೆಕಾರ್ಡಿಂಗ್‌ ಸಮಯದಲ್ಲಿ ನನ್ನನ್ನು ಕರೆದು ಕೂಡಿಸಿಬಿಟ್ಟು “ಆ ಹಾಡುಗಳನ್ನು ಅಭ್ಯಾಸ ಮಾಡಿಕೋ. ಶೂಟಿಂಗ್ ಸಮಯದಲ್ಲಿ ಅನುಕೂಲವಾಗುತ್ತೆ” ಅಂತಿದ್ರು.

ನಮಗೋ ಚಿಕ್ಕ ವಯಸ್ಸು. ಹುಡುಗತನ ಬೇರೆ. ನಮ್ಮ ಪಾಡಿಗೆ ಆಟ ಆಡಿಕೊಂಡಿದ್ದು ತಲೆತಪ್ಪಿಸಿಕೊಂಡು ಹೋಗುತ್ತಿದ್ದೆವು. ಹೀಗಾಗಿ ಒಂದು ಸಲ ಪ್ರಹ್ಲಾದನ ಶ್ಲೋಕದ ಚಿತ್ರೀಕರಣ ನಡೆಯಬೇಕಾಗಿತ್ತು. ಆ ಸಮಯದಲ್ಲಿ ಅದು ನನಗೆ ಬಾಯಿಗೆ ಬರಲಿಲ್ಲ. ಶ್ಲೋಕ ಬೇರೆ, ಎರಡು ಮೂರು ಸಲ ಪ್ರಯತ್ನ ಪಟ್ಟೆ. ಮಾತನಾಡೋಕೇ ಆಗದಿದ್ದಾಗ ಬಹಳ ಸಿಟ್ಟು ಮಾಡಿಕೊಂಡು ಬೈದುಬಿಟ್ಟರು. “ನಾನು ನಿನಗೆ ಆಗಲೇ ಹೇಳಿದೆ. ಅಲ್ಲೆಲ್ಲಾ ಪ್ರಾಕ್ಟೀಸ್‌ ಮಾಡುವಾಗ ಇರಬೇಕು. ಶ್ರದ್ಧೆಯಿಂದ ಗಮನವಿಟ್ಟು ಹೇಳಬೇಕೂಂತ ಹೇಳಿದ್ರೂ ನೀನು ನಿನ್ನ ಪಾಡಿಗೆ ಆಟ ಆಡಿಕೊಂಡಿದ್ದುಬಿಟ್ಟೆ” ಎಂದು ರೇಗಿದರು. ಅವರು ಬೈದಿದ್ದರಿಂದ ಅಳೋಕೆ ಶುರು ಮಾಡಿ ಮೇಕಪ್ಪೆಲ್ಲಾ ಅಳಿಸಿ ಹೋಗಿ ತಿರುಗಿ ಮೇಕಪ್‌ ಹಾಕಿ, ರೀಟಚ್‌ ಮಾಡಿ ರೀಶೂಟ್ ಮಾಡುವ ಹೊತ್ತಿಗೆ ಒಂದು ಒಂದೂವರೆ ಗಂಟೆ ಕಾಲ ಕಳೆದುಹೋಯಿತು. ಅದೇ ರೀತಿ ಬೆಂಗಳೂರಿನಲ್ಲಿ ‘ಶ್ರೀರಾಮ ಜನನ’ ನಾಟಕ ಆಡಬೇಕಾದರೂ ಅಷ್ಟೆ. ಎಲ್ಲರಿಗೂ ಪ್ರಾಕ್ಟೀಸ್‌ಗೆ 6 ಗಂಟೆಗೆ ಬರಲು ಹೇಳಿದರೆ, ತಾವೇ 5.30 ಗಂಟೆಗೇ ಬರುತ್ತಿದ್ದರು. ನಾವು ಏನಾದರೂ ಅಲ್ಲಿ ಇಲ್ಲಿ ಹೋಗಿ ಪಿಕ್ಚರ್ ನೋಡಿಕೊಂಡು ಇನ್ನೆಲ್ಲಾದ್ರೂ ಹೋಗಿ ಅಲ್ಲಿಗೆ ಬಂದರೆ ಅಲ್ಲಿ ಆರಾಮ ಖುರ್ಚಿಯಲ್ಲಿ ಕೋಟು, ಟೋಪಿ ಇರುವುದನ್ನು ನೋಡಿದ್ರೆ ಅವರು ಇದ್ದಾರೇಂತ ಅರ್ಥ. ಟೈಮ್ ಬಗ್ಗೆ ಅವರು ಅಷ್ಟು ಕರೆಕ್ಟ್ ಆಗಿರುತ್ತಿದ್ದರು. ಯಾರಾದರೂ ಲೇಟಾಗಿ ಬಂದರೆ ಅಷ್ಟೇ ನಿಷ್ಠೂರವಾಗಿ ಹೇಳುತ್ತಿದ್ದರು. “ಮೊದಲು ಇದನ್ನು ಕಲೀದಿದ್ರೆ, ಇನ್ನು ಪಾತ್ರ ಏನು ಮಾಡ್ತೀರ” ಅಂತ. ಹೀಗಾಗಿ ಈ ವಿಷಯಗಳಲ್ಲಿ ಅವರ ಶ್ರದ್ಧೆ ಎಷ್ಟಿತ್ತು ಎಂಬುದು ನಾನೇ ಮೂಲಭೂತವಾಗಿ ಗುರುತಿಸಿದ ವಿಷಯ.

ಏನಾದರೂ ಹೇಳಿಕೊಡಬೇಕಾದರೂ ಅಷ್ಟೆ. ನನಗೆ ಇಂದಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ ಆ ಘಟನೆ. ಆ ಹೆಣ್ಣು ಪಾತ್ರ ಒಯ್ಯಾರವಾಗಿ ನಡೆಯುತ್ತಾ ಬಂದು ಒಂದು ಡೈಲಾಗ್‌ ಹೇಳಬೇಕು. ಆಕೆ ಬಂದು ನಿಂತು ಮಾತು ಹೇಳಬೇಕಾದರೆ ನಾಯ್ಡು ಅವರು ಬಹಳ ಸಿಟ್ಟು ಮಾಡಿಕೊಂಡರು. “ಏನಮ್ಮ ಹೆಣ್ಣಿನ ತರಹ ಬರಬೇಕೂ ಅಂದರೆ ನೀನು ಗಂಡಿನ ತರಹ ಬರುತ್ತಿದ್ದೀಯಲ್ಲ” ಎಂದು ಹೇಳಿ ಆಕೆಗೆ ಇತ್ಲಾಗೆ ನಿಂತುಕೋ ಎಂದು ಮುಂದೆ ನಿಲ್ಲಿಸಿ ತಾವೇ ನಡೆದುಕೊಂಡು ಬಂದು ಡೈಲಾಗ್‌ ಹೇಳಿದರು. ಆಗ ಅವರಿಗೆ ಸುಮಾರು 64 – 65 ವರ್ಷ ವಯಸ್ಸು. ಆ ವಯಸ್ಸಿನಲ್ಲಿ ಸ್ವಲ್ಪ ದಪ್ಪಕ್ಕಿದ್ದರು. ಆದರೂ ಅವರು ಹೆಣ್ಣಿನಂತೆ ನಡೆದುಕೊಂಡು ಬಂದುದನ್ನು ನೋಡಿ ಆ ವಯಸ್ಸಿನಲ್ಲೂ ಅಷ್ಟೊಂದು ಫ್ಲೆಕ್ಸಿಬಿಲಿಟಿ ಹೇಗೆ ಸಾಧ್ಯ ಆಗುತ್ತೇಂತ ನಮಗೆ ಅರ್ಥವಾಗಲಿಲ್ಲ. ಅವರು ಹೇಳಿಕೊಡುವ ರೀತಿ ಅಷ್ಟು ಚೆನ್ನಾಗಿತ್ತು. ಯಾರೇ ಆಗಲಿ, ಸಣ್ಣ ಪಾತ್ರದಿಂದ ದೊಡ್ಡ ಪಾತ್ರದವರೆಗೆ ಎಲ್ಲರಿಗೂ ಒಂದೇ ರೀತಿಯಲ್ಲಿ ಹೇಳಿಕೊಡುತ್ತಾ ಇದ್ದದ್ದು ಗಣನೀಯ ವಿಷಯ. ಅದೇ ರೀತಿ ಪಾತ್ರ ಮಾಡುವಾಗಲೂ ಅಷ್ಟೆ. ತನ್ನ ಪಾತ್ರ, ಅದರಲ್ಲಿ ತನ್ಮಯತೆ, ಬೇರೆಯ ಪಾತ್ರಧಾರಿಗಳು ಅದಕ್ಕೆ ಎಷ್ಟರಮಟ್ಟಿಗೆ ಪೂರಕವಾಗಿರುತ್ತಾರೆ ಇವೆಲ್ಲವನ್ನೂ ಬಹಳ ಯೋಚನೆ ಮಾಡಿ ಹೇಳಿಕೊಡುತ್ತಿದ್ದರು. ‘ಶ್ರೀರಾಮ ಜನನ’ ನಾಟಕವನ್ನು ಒಂದು ವರ್ಷ ಕಾಲ ಪ್ರಾಕ್ಟೀಸ್ ಮಾಡಿಸಿದರು ಅಂದರೆ ಅವರ ಶ್ರದ್ಧೆ ಎಷ್ಟು ಅಂತ ಗೊತ್ತಾಗುತ್ತದೆ. ಇನ್ನೊಂದು ವೈಯಕ್ತಿಕವಾಗಿ ಹೇಳಬೇಕೂಂದರೆ ಅವರು ಬಹಳ ಕೋಪಿಷ್ಟರು. ಸಿಟ್ಟು ಬಂದರೆ ಬಹಳ ಕಷ್ಟ. ಎಲ್ಲರಿಗೂ ಆಶ್ಚರ್ಯವೆಂದರೆ ನಮ್ಮ ಮನೆಯಲ್ಲಿ ಅವರ ಕೈಲಿ ಏಟು ತಿಂದಿಲ್ಲದೋನು ನಾನೊಬ್ಬನೇ ಯಾಕೆಂದರೆ, ನಾನು ಯಾವ ರೀತಿ ತಪ್ಪು ಮಾಡಲೂ ಹೋಗುತ್ತಿರಲಿಲ್ಲ. ಮೊದಲಿನಿಂದ ಈ ತರಹ ಸ್ವಭಾವ ಬೆಳೆದು ಬಂದಿರುವುದರಿಂದ ಈಗಲೂ ಬಹಳ ಜನ ನನ್ನನ್ನು ಬೈಕೋತಾರೆ. “ಇವನೇನೋ ಹೆಚ್ಚಿಗೆ ಮಾತಾಡೋದೇ ಇಲ್ಲ. ಗುಮ್ಮನ ಗುಸುಗನ ಹಾಗೆ ಇರುತ್ತಾನೆ” ಎಂದು ಆಡಿಕೊಳ್ಳುತ್ತಾರೆ.

‘ಭಕ್ರಪ್ರಹ್ಲಾದ’ (1958) ಚಿತ್ರದಲ್ಲಿ ಲೋಕೇಶ್, ಸುಬ್ಬಯ್ಯನಾಯ್ಡು

ಸಿಟ್ಟಿನ ಜತೆಯಲ್ಲಿ ಅವರಲ್ಲಿ ಅಷ್ಟೇ ಮನುಷ್ಯತ್ವ ಇತ್ತೂಂತ ನನಗೆ ಖಾತ್ರಿ. ಎರಡು ಮೂರು ಘಟನೆಗಳಿಂದ ನನಗೆ ಆ ಭಾವನೆ ಉಂಟಾಗಿದೆ. ಆಗ ‘ಶ್ರೀ ರಾಮ ಜನನ’ ನಾಟಕ ಆಡಿ ಭಾರಿ ನಷ್ಟ ಅನುಭವಿಸಿ ತೊಂದ್ರೇಲಿದ್ದ ಕಾಲ ಅದು. ಆ ಪರಿಸ್ಥಿತಿಯಲ್ಲೂ ಮನೆಯಿಂದ ಹೊರಡಬೇಕಾದರೆ ಸರಿಯಾದ ಟೈಮ್‌ನಲ್ಲಿ ಸಿದ್ಧರಾಗಬೇಕು. ದಿನಾ ಬೆಳಗ್ಗೆ ಎದ್ದು ಸ್ನಾನ, ಪೂಜೆ ಮಾಡಿ, ಹರಕಲು ಷರ್ಟು ಹರಕಲು ಕೋಟನ್ನೇ ಶುಭ್ರವಾಗಿ ಒಗೆದಿಟ್ಟುಕೊಂಡು, ಟೈಮ್‌ಗೆ ಸರಿಯಾಗಿ ಛತ್ರಿ ಹಿಡಿದುಕೊಂಡು ಹೊರಡುತ್ತಿದ್ದರು. ಹೊರಗೆ ಹೋಗುವಾಗ ಮನೆಗೆ ಖರ್ಚಿಗೇನಾದರೂ ಕಾಸು ಕೊಡಬೇಕಲ್ಲ. ಅವತ್ತು ಏನೋ ಜೇಬಿನಲ್ಲಿದ್ದುದನ್ನು ಕೊಟ್ಟು ಇನ್ನೇನು ಹೊರಡಲಿದ್ದಾಗ ಥಟ್ಟನೆ ಒಬ್ಬ ವ್ಯಕ್ತಿ ಬದ್ರು. ಈ ರೀತಿ ನನ್ನವರಿಗೆ ಮೈ ಹುಷಾರಿಲ್ಲ. ಊರಿಗೆ ಹೋಗಬೇಕು ಕಾಸಿಲ್ಲ ಎಂದರು. ನಾಯ್ಡು ಅವರು ನಮ್ಮ ಅಮ್ಮನನ್ನು ಕರೆದು “ಆ ದುಡ್ಡು ಕೊಡೇ ಇಲ್ಲಿ” ಅಂದರು. “ಅದು ಮನೆ ಖರ್ಚಿಗೆ ಕೊಟ್ಟಿದ್ದೀರಲ್ಲಾ?” ಎಂದರೆ “ಪರವಾಗಿಲ್ಲ ಕೊಡು” ಎಂದು ತೆಗೆದುಕೊಂಡು ಆ ವ್ಯಕ್ತಿಗೆ ಕೊಟ್ಟುಬಿಟ್ಟರು. ಮನೆಗೆ ಅಡುಗೆಗೆ ಏನೂ ಇಲ್ಲವಲ್ಲ ಎಂದಾಗ, “ಹೇಗೋ ಆಗುತ್ತೆ ಬಿಡು” ಎಂದು ಹೋದವರು, ಅದೇನೋ ಕಾಕತಾಳೀಯ ಅಂತಾರಲ್ಲ ಹಾಗೆ ಥಿಯೇಟರ್‌ ಬಾಡಿಗೆ ಕೊಡುವುದಿತ್ತು. ಅದೇ ರಾಜರಾಜೇಶ್ವರಿ ಥಿಯೇಟರ್ಸ್‌, ಅಭಿನಯ ಚಿತ್ರಮಂದಿರ ಇತ್ತಲ್ಲ, ಅಲ್ಲಿತ್ತು. ಅಲ್ಲಿಗೆ ಹೋದ ತಕ್ಷಣ, ಮಾರನೆಯ ದಿನಕ್ಕೋ ಏನೋ ನಾಟಕ ಬುಕ್ ಆಯಿತು. ಒಬ್ಬ ಶಿಷ್ಯನನ್ನು ಕರೆದು ಮನೆಗೆ ದುಡ್ಡು ಕೊಟ್ಟು ಬಾ ಅಂತ ಕಳುಹಿಸಿದುದು ಇಂದಿಗೂ ನನಗೆ ನೆನಪಿದೆ. ಹೀಗೆ ಅವರಲ್ಲಿ ಮಾನವೀಯ ಅನುಕಂಪ ಬಹಳ.

ಹೆಚ್ಚಿಗೆ ನನಗೂ ಅವರಿಗೂ ಕಮ್ಯೂನಿಕೇಷನ್ ಇರಲಿಲ್ಲ. ಏನಿದ್ದರೂ ಅಬ್ಸರ್ವೇಶನ್‌ ಅಷ್ಟೆ. ಅವರ ಇಡೀ ಆತ್ಮಚರಿತ್ರೆಯನ್ನು ನಮ್ಮ ಅಕ್ಕ ಬರೆದಿದ್ದಾರೆ. ಅವರಿಗೆ ‘ಅಪ್ಪ’ ಅವರ ಜತೆ ಒಡನಾಟವೂ, ಅನುಭವವೂ ಇತ್ತು. ತಂದೆಯವರು ಚಲನಚಿತ್ರಗಳಲ್ಲಿ ಪಾತ್ರ ಮಾಡುವಾಗಲೂ ಅಷ್ಟೆ. ‘ವಸಂತ ಸೇನೆ’ ಚಿತ್ರದಲ್ಲಿ ಬರುವ ಪಾತ್ರ ನನಗಂತೂ ಬಹಳ ಮೆಚ್ಚುಗೆ ಆಯಿತು. ಯಾವ ತರಹ ಅತಿರೇಕವೂ ಇರಲಿಲ್ಲ. ಆದರೆ ತಂದೆಯವರಿಗೆ ಅದು ಅಷ್ಟಾಗಿ ಹಿಡಿಸಲಿಲ್ಲ. ಏಕೆಂದರೆ ‘ಭೂಕೈಲಾಸ’, ‘ಹರಿಶ್ಚಂದ್ರ’ ಚಿತ್ರಗಳ ಪಾತ್ರಗಳಲ್ಲಿ ತೋರಿಸಲು ಸಾಧ್ಯವಿದ್ದಂಥ ಅಭಿನಯಕ್ಕೆ ಇದರಲ್ಲಿ ಅವಕಾಶವಿರಲಿಲ್ಲ ಎಂದು ಅವರ ಅಭಿಪ್ರಾಯ. “ಏನು ಯಾವಾಗ ನೋಡಿದರೂ ಮುಖ ಸಪ್ಪೆ ಹಾಕಿಕೊಂಡು ಅಲ್ಲಿ ಹೋಗೋದು. ಕಳ್ಳ ಮನೆಗೆ ಬಂದು ಕದ್ದುಕೊಂಡು ಹೋದಾಗ ಅಯ್ಯಯ್ಯೋ ಮನೆಯಲ್ಲಿ ಏನೂ ಇಲ್ಲಾಂತ ಕೊರಗೋದು ಇಷ್ಟೇ ಹೊರತು ವೀರತ್ವಕ್ಕಾಗಲೀ, ಭಕ್ತಿ ಪ್ರಧಾನತೆಗಾಗಲೀ ಸ್ಕೋಪ್ ಇರಲಿಲ್ಲ” ಎಂದು ಅವರ ಕೊರಗು. ಆದರೆ ನನಗೆ ಹಿಡಿಸಿದ್ದು ಆ ಪಾತ್ರವೇ. ಅದು ಎಷ್ಟು ಸಹಜವಾಗಿದೇಂದ್ರೆ ಯಾವುದೇ ರೀತಿಯ ಸೋಗಿಲ್ಲ. ಅತಿರೇಕ ಇಲ್ಲ. ಪಾತ್ರದ ಬೆಳವಣಿಗೆ ಸಹಜವಾಗಿ ಬೆಳೆಯುತ್ತಾ ಹೋಗುತ್ತದೆ. ಆ ತರಹ ಪಾತ್ರ ಮಾಡೋದು ಕಷ್ಟ ಎಂದು ನನಗನ್ನಿಸುತ್ತೆ. ಯಾಕೇಂದ್ರೆ ಏನಾದ್ರೂ ಮಾಡಲು ಸಾಧ್ಯ ಇದ್ದರೆ ಮಾಡಿದರೆ ಅದು ಹೆಚ್ಚಲ್ಲ. ಏನು ಮಾಡಲೂ ಸಾಧ್ಯವಿಲ್ಲದಿರುವಾಗ ಜನರ ಮನಸ್ಸಿಗೆ ತಲುಪೋ ರೀತಿ ಮಾಡುವುದು ಕಷ್ಟ.

ಬೇರೆ ಚಿತ್ರಗಳಲ್ಲಿ ಚೆನ್ನಾಗಿಲ್ಲ ಅಂತಲ್ಲ. ‘ಹರಿಶ್ಚಂದ್ರ’ದಲ್ಲಿ ಚೆನ್ನಾಗಿ ಮಾಡಿದ್ದಾರೆ. ‘ಭೂಕೈಲಾಸ’ ನಾನು ನೋಡಿಲ್ಲ. ಅದು ತೆಲುಗು. ಅವರ ‘ಕಬೀರ್‌’ ಬಹಳ ಖುಷಿ ಕೊಟ್ಟ ಚಿತ್ರ. ‘ವಸಂತಸೇನೆ’ ಇವತ್ತಿಗೂ ಎಷ್ಟು ಚೆನ್ನಾಗಿ ಪ್ರಿಂಟ್ ಆಗುತ್ತಿದೆ. ಅದೇ ಆಶ್ಚರ್ಯ. ನಾಗೇಂದ್ರರಾಯರ ಪ್ರಕಾರ ಮೈತ್ರೇಯನ ಪಾತ್ರ ಬಹಳ ಜೀವಂತವಾಗಿದೆ. ಅದು ಬಹಳ ಕಷ್ಟ. ಏಕೆಂದರೆ ಅದರಲ್ಲಿ ಏನು ಮಾಡಲಿಕ್ಕೂ ಸಾಧ್ಯವಿಲ್ಲ. ಭಾವುಕವಾಗಿ ನಟಿಸಲು ಸನ್ನಿವೇಶವೇ ಇಲ್ಲ. ಅಂಥದ್ದರಲ್ಲಿ ಪರಿಣಾಮಕಾರಿಯಾಗಿ ಪಾತ್ರ ಮಾಡೋದು ಅಂದ್ರೆ ಬಹಳ ಕಷ್ಟ. ಮೈತ್ರೇಯ ಆಗಲೀ, ಶಕಾರ ಆಗಲಿ ಯಾವತ್ತಿಗೂ ಮನಸ್ಸಿನಲ್ಲಿ ನಿಲ್ಲೋ ಪಾತ್ರಗಳು. ಅಂಥ ಪಾತ್ರಗಳ ಜತೆ ಇದು ಏನು ಮಾಡಲೂ ಸಾಧ್ಯವಿಲ್ಲದಂಥ ಚಾರುದತ್ತನ ಪಾತ್ರ ಅದೇ ಮಟ್ಟಕ್ಕೆ ನಿಂತುಕೊಳ್ಳಬೇಕಾದರೆ ಎಷ್ಟು ಕಷ್ಟ. ಅದೂ ಅಷ್ಟು ಸಹಜವಾಗಿ, ನೈಜವಾಗಿ ಜನರ ಮನಸ್ಸಿಗೆ ಮುಟ್ಟೋ ತರಹ ಮಾಡಿದ್ದಾರೆ. ಅಲ್ಲಿ ಆತನಿಗೂ ಹೆಂಡ್ತಿಗೂ ಇದ್ದಂಥ ಕಾಂಟ್ಯಾಕ್ಟ್‌ನ ಎಲ್ಲೂ ಎಸ್ಟಾಬ್ಲಿಷ್‌ ಮಾಡೋದಿಲ್ಲ. ಅಂದ ಮೇಲೆ ನಮ್ಮ ಮಾಡ್ರನ್ ಅಪ್ರೋಚ್ ಏನು ಅನ್ನೋದನ್ನು ಅವರು ಆಗಲೇ ಮಾಡಿಬಿಟ್ಟಿದ್ದರು.

ಅವರ ಪಾತ್ರಗಳ ಕೆಲವನ್ನೇ ನೋಡಿರುವ ನನಗೆ ಇಷ್ಟು ಪರಿಣಾಮಕಾರಿಯಾಗಿ ಮನಸ್ಸಿನಲ್ಲಿ ನಿಂತಿರಬೇಕಾದರೆ ಅವರ ಬಹಳಷ್ಟು ವೀರವೇಶ, ಭಕ್ತಿರಸ ಪ್ರಧಾನ ಪಾತ್ರಗಳನ್ನು ನೋಡಿರೋ ಅನುಭವಸ್ಥರಿಗೆ ಹೇಗಿರುತ್ತದೋಂತ. ನಾನು ನೋಡಿರುವುದು ಅವರಿಗೆ 60 ವಯಸ್ಸು ದಾಟಿದ ನಂತರದ ಪಾತ್ರಗಳು. ಅಲ್ಲಿಯವರೆಗೆ ನನ್ನ ಅವರ ಸಂಪರ್ಕ ಅಷ್ಟಕ್ಕಷ್ಟೆ. ನಾನಾಯಿತು, ಮನೆಯಾಯಿತು ಕ್ಯಾಂಪ್ ಆಯಿತು. ನಾನು ಅವರ ಜತೆಗೆ ಮೊದಲು ಪಾತ್ರ ಮಾಡಿದ್ದು ಮೊದಲೇ ಹೇಳಿದಂತೆ ಪ್ರಹ್ಲಾದನ ಪಾತ್ರ. ಅದೂ ಒಂದು ಆಕಸ್ಮಿಕವೇ. ಪ್ರಹ್ಲಾದನ ಪಾತ್ರಕ್ಕೆ ಯಾರೂ ಸರಿ ಹೋಗುತ್ತಿಲ್ಲಾಂತ ಶೂಟಿಂಗ್ ನಿಲ್ಲಿಸಿಬಿಟ್ಟಿದ್ದರು. ಆ ವಿಷಯ ಗೊತ್ತಾದ ಮೇಲೆ ನಮ್ಮ ತಾಯಿಯವರಿಗೆ ‘ಯಾಕೆ ನಮ್ಮ ಲೋಕನ್ನ ಪಾತ್ರ ಮಾಡಿಸಬಾರದು’ ಎಂದು ಆಸೆಯಾಯಿತು. ನನಗೆ ಅದರ ಯೋಚನೇನೆ ಇರಲಿಲ್ಲ. ಸರಿ, ಆಗ ಮೈಸೂರಿನಿಂದ ಮೇಕಪ್ ಸುಬ್ಬಣ್ಣನವರ ಕೈಲಿ ಮೇಕಪ್ ಮಾಡಿಸಿ, ಆ ಫೋಟೋನ ಮದರಾಸಿಗೆ ಕಳುಹಿಸಿಕೊಟ್ಟು “ಇಲ್ಲೊಂದು ಹೆಣ್ಣು ಮಗು ಇದೆ. ನೀವೇನಾದ್ರೂ ಒಪ್ಪಿಗೆ ಕೊಡೋದಾದರೆ ಅವರ ಮನೆಯಿಂದ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು. ತಂದೆಯವರು ಅದನ್ನು ಸ್ಟುಡಿಯೋದಲ್ಲಿ ಎಲ್ಲರಿಗೂ ತೋರಿಸಿದಾಗ “ಅರರೆ ನಿಮ್ಮ ಮುಖಕ್ಕೆ ಇದು ಬಹಳ ಹತ್ತಿರವಾಗಿದೆ” ಎಂದರು. ಇವರಿಗೆ ಅಲ್ಲಿಯವರೆಗೂ ನಿಜ ಹೊಳೆದಿರಲಿಲ್ಲ. ಮನೆಗೆ ಬಂದ ಮೇಲೆ ಈ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಯೋಚನೆ ಮಾಡಿ ಅನಂತರ ಕಾಗದ ತೆಗೆದುಕೊಂಡು ಯಾರದು ಅಂತ ನೋಡಿದ ಮೇಲೆ ನಿಜ ಸಂಗತಿ ಗೊತ್ತಾಯಿತು.

‘ಭೂಕೈಲಾಸ’ ತೆಲುಗು ಚಿತ್ರದಲ್ಲಿ

ಆದರೆ ನಿರ್ಧಾರವನ್ನು ವಾಪಸು ತೆಗೆದುಕೊಳ್ಳುವ ಹಾಗಿರಲಿಲ್ಲ. ಎಲ್ಲರ ಅಪ್ರೂವಲ್‌ ಪಡೆದಾಗಿತ್ತು. ಹೀಗೆ ಆಕ್ಸಿಡೆಂಟಾಗಿ ನಾನು ಚಿತ್ರದಲ್ಲಿ ಪಾತ್ರ ಮಾಡಿದೆ. ಅದರ ಅನುಭವಗಳೇನು ಎಂದು ನನಗೆ ನೆನಪಿಲ್ಲ. ಫೊಟೋ ತೆಗೆಸಿದ್ದೊಂದು ನೆನಪಿದೆ. ತಂದೆಯವರಿಗಂತೂ ಇದು ಸಮಾಧಾನವಿರಲಿಲ್ಲ. ನನ್ನನ್ನು ಡಾಕ್ಟರ್ ಅಥವಾ ಎಂಜಿನಿಯರ್ ಮಾಡಿಸಬೇಕೆಂದಿದ್ದರು. ಆದರೆ ನನ್ನ ತಾಯಿಯವರಿಗೆ ಅದು ಇಷ್ಟವಿರಲಿಲ್ಲ. ಮದರಾಸಿನಿಂದ ಬಂದ ಮೇಲೆ ನಾಟಕ ಮಾಡುವಾಗಲೂ ಅಷ್ಟೆ. ಆದಷ್ಟು ನನ್ನನ್ನು ಕ್ಯಾಂಪ್‌ಗಳಿಂದ ದೂರ ಇಡುತ್ತಿದ್ದರು. ಬೆಂಗಳೂರಿನಲ್ಲೇ ಕ್ಯಾಂಪ್‌ ಇದ್ದದ್ದರಿಂದ ಅವರು ನನ್ನನ್ನು ತಪ್ಪಿಸಲು ಆಗುತ್ತಿರಲಿಲ್ಲ. ಸಂಜೆ ರಿಹರ್ಸಲ್‌ ಟೈಮ್‌ಗೆ ಅಲ್ಲಿಗೆ ಹೋಗುತ್ತಿದ್ದೆ. ಅದರಲ್ಲಿ ಒಂದು ರೀತಿ ಅನುಭವ. ಅವರು ಯಾವುದೇ ರೀತಿಯ ಪಾತ್ರವಾದರೂ ಮಾಡಬೇಕೂಂತ ಹೇಳುತ್ತಿದ್ದರು. ಇಂತಹ ಪಾತ್ರವನ್ನೇ ಮಾಡುತ್ತೀನಿ ಅನ್ನೋದು ಇರಬಾರದು ಎನ್ನುತ್ತಿದ್ದರು. ಒಂದೊಂದು ಸಾರಿ ನಾನು ನಾಟಕದಲ್ಲಿ ಐದು ಆರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಸೇವಕನಾಗಿ, ಇನ್ನೊಂದು ದೃಶ್ಯದಲ್ಲಿ ಪುರಜನರಲ್ಲೊಬ್ಬನಾಗಿ ಆಮೇಲೆ ದೈವೀಕ ಪಾತ್ರ, ಕಡೆಯ ದೃಶ್ಯದಲ್ಲಿ ವಿಷ್ಣುವಿನ ಪಾತ್ರ ಮಾಡುತ್ತಿದ್ದೆ. ಹೀಗೆ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾ ಹೋದಾಗ ಅನುಭವ ಆಗುತ್ತದೆ. ಇದನ್ನು ಮಾತ್ರ ಅವರು ಬಹಳ ಸಾಫ್ಟ್‌ ಆಗಿ ಹೇಳುವರು: ಪಾತ್ರ ಮಾಡಬೇಕಾದರೆ ಶಿಸ್ತು, ಶ್ರದ್ಧೆ, ಭಕ್ತಿಯಿಟ್ಟುಕೊಂಡು ಮಾಡಬೇಕು. ಕೆಲವು ವಿಷಯಗಳಲ್ಲಿ, ನಾವು ಬಹಳ ಮಡಿವಂತಿಕೆ ಅಂತೀವಲ್ಲ ಅದನ್ನು ಸಾಧಿಸುತ್ತಿದ್ದರು. ರಂಗಭೂಮಿಯಲ್ಲಿ ಯಾರಾದರೂ ಕನ್ನಡಿ ಒಡೆಯುವುದು, ಮಡಕೆ ಒಡೆಯುವುದು ಅಥವಾ ಪರಕೆ ತರುವುದು ನಿಷಿದ್ಧ. ಯಾರಾದರೂ ಬೇರೆಯವರು ನಾಟಕ ಆಡುತ್ತಿದ್ದಾಗ ಆಕಸ್ಮಾತ್ ಮಡಕೆಯೋ, ಕನ್ನಡಿಯೋ ಒಡೆದರೆ ಇವರು ಎದ್ದು ಹೋಗಿ ಬಿಡುತ್ತಿದ್ದರು. ಜತೆಗೆ ಏನು ಹೀಗೆಲ್ಲಾ ಮಾಡ್ತಾರೇಂತ ದುರ್ದಾನ ತಗೊಂಡೋರ ತರಹ ಆಡುತ್ತಿದ್ದರು. ಅದೇ ರೀತಿ ಅವಾಚ್ಯ ಶಬ್ಧಗಳು, ಯಾರಾದರೂ ಕೆಟ್ಟ ಮಾತಾಡಿದರೆ “ರಂಗಭೂಮಿ ಅನ್ನೋದು ಬಹಳ ಪವಿತ್ರ ಅಲ್ಲವಾ” ಎಂದು ಅವರಿಗವರೇ ಹೇಳಿಕೊಂಡು ಹೊರಟುಹೋಗುತ್ತಿದ್ದರು.

ಅಭಿನಯದ ಜತೆಗೆ ಮಾತುಗಳಿಗೆ, ಸಾಹಿತ್ಯಕ್ಕೆ ಬಹಳ ಪ್ರಾಧಾನ್ಯತೆ ಕೊಡುತ್ತಿದ್ದರು. ಅವರ ಹತ್ತಿರ ಪಳಗಿದ ಮೇಲೆ ಯಾರು ಬೇಕಾದರೂ ಎಲ್ಲಿ ಬೇಕಾದರೂ ನಿಭಾಯಿಸಬಹುದು ಎಂಬ ಮಾತಿದೆ. ಆ ವಿಷಯ ಹೇಳಬೇಕಾದರೆ ಅನುಭವ ಇರೋರೇ ಹೇಳಬೇಕು. ಶ್ರೀ ರಾಜಕುಮಾರ್ ಅವರು ಅನೇಕ ಸಲ ಅವರ ನೆನಪುಗಳು ಬಂದಾಗ ಹೇಳುತ್ತಿರುತ್ತಾರೆ. ನಾಟಕದಲ್ಲಿ ಪಾತ್ರ ಮಾಡೋ ಆಸೆಗೆ ಬಹಳ ಜನ ಬರುತ್ತಿದ್ದರು. ಎಲ್ಲಾ ಡಬ್ಬಲ್‌ ಗ್ರಾಜ್ಯುಯೇಟ್‌ಗಳು. ಆ ಪೈಕಿ ಒಬ್ಬಾತ ಎಂಎ ಗ್ರಾಜ್ಯೂಯೇಟ್ ಅಂತ ಕಾಣುತ್ತದೆ. ಬಂದು, “ನಿಮ್ಮ ಕಂಪನಿಯಲ್ಲಿ ಪಾತ್ರ ಮಾಡಬೇಕೂಂತ ಬಹಳ ಆಸೆ ಇದೆ. ನಾನು ಕೆಲಸದಲ್ಲಿದ್ದೇನೆ. ಇದನ್ನು ಹವ್ಯಾಸವಾಗಿಟ್ಟುಕೊಳ್ಳೊಣ ಎಂದಿದ್ದೇನೆ” ಎಂದರು. ಸರಿ ಒಂದು ಡೈಲಾಗ್ ಕೊಟ್ಟು ಅದನ್ನು ಹೇಳಿ ಅಂದರು. ಆತನಿಗೆ ಶ, ಸ, ಕ, ರಗಳ ಅಭಾವ. ಮತ್ತೆ ಕರೆದು, “ಹೊರಗೆ ಹೋಗಿ ಕಂಪೆನಿಯ ಬ್ಯಾನರ್ ಓದಿ ಅಲ್ಲೇನಿದೆ, ಎಂದು ಹೇಳಿ” ಎಂದರು. “ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿ” – ನಮ್ಮ ಕಂಪೆನಿಯ ಹೆಸರಲ್ಲೇ ಸಾಹಿತ್ಯಕ್ಕೆ ಅಷ್ಟು ಪ್ರಾಧಾನ್ಯವಿದೆ. ನೀವು ಸಾಹಿತ್ಯಾನೇ ಬಿಟ್ಟರೆ ಹೇಗೆ ಪಾತ್ರ ಮಾಡಲು ಸಾಧ್ಯವಾಗುತ್ತೆ ಎಂದು ಹೇಳಿದರು. ಯಾವ ಕಲಾವಿದರೇ ಆಗಲಿ ಸಂಭಾ‍ಷಣೆಯಲ್ಲಿ ಹೆಚ್ಚು ಕಮ್ಮಿಯಾದರೆ ಸಿಟ್ಟು ಮಾಡಿಕೊಳ್ಳುತ್ತಿದ್ದರು. “ಏನಯ್ಯಾ ಬಿಸಿ ಬಿಸಿ ಗಸಗಸೆ ಪಾಯಸ ಅನ್ನೋ ತರಹ, ಶುದ್ಧವಾಗಿ ಮಾತನಾಡು. ನಾಲಗೇನ ದಿನಾ ಸ್ವಲ್ಪ ಹುಣಿಸೆಹಣ್ಣು ಹಾಕಿ ಉಜ್ಜು” ಎಂದು ಬಯ್ಯುತ್ತಿದ್ದರು.

ಅವರನ್ನು ಒಂದಷ್ಟು ದಿನ ಹತ್ತಿರದಿಂದ ನೋಡಿದಾಗ ನನಗೆ ಅನ್ನಿಸಿದ್ದೇನೆಂದರೆ ಅವರಿಗೆ ಚಲನಚಿತ್ರದಲ್ಲಿ ಹೆಚ್ಚು ಹೆಸರು ಬಂದಿದ್ದರೂ, ಚಿತ್ರರಂಗ ಪ್ರವೇಶಿಸಿದ ಮೊದಲಿಗರೆಂದು ಹೆಸರಿದ್ದರೂ ಅವರ ಒಲವು ರಂಗಭೂಮಿಯ ಕಡೆಗೇ ಇತ್ತು. ಎಂತಹ ವಿಪರ್ಯಾಸ ಎಂದರೆ ಈ ಐವತ್ತು ವರ್ಷಗಳ ಸಾಧನೆಗಳನ್ನು ಮೆಲುಕು ಹಾಕುವುದಾಗಿದ್ದರೆ ಇದೊಂದು ವಿಪರ್ಯಾಸನೇ ಅಂತೀನಿ. ಅವರೇನಾದರೂ ಇಂದು ಇದ್ದಿದ್ದಿದ್ದರೆ ರಂಗಭೂಮಿಯಲ್ಲೇ ಉಳಿದುಬಿಡುತ್ತಿದ್ದರೇನೋ. ಅವರು ಸಿನಿಮಾ ಮಾಡಿದ್ದೆ ರಂಗಭೂಮಿಗೆ ದುಡ್ಡು ಬೇಕು ಅನ್ನೋ ಕಾರಣಕ್ಕಾಗಿ. ಅವರೂ ಮತ್ತು ನಾಗೇಂದ್ರರಾಯರೂ ಒಟ್ಟಿಗೆ ಸೇರಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಮಾಡಿದಾಗ ಬಹಳ ಕಷ್ಟಕ್ಕೆ ಈಡಾದರು. ಕಂಪೆನಿ ನಡೆಸಲು ದುಡ್ಡಿಲ್ಲವಲ್ಲಾ ಏನು ಮಾಡುವುದು ಇದಕ್ಕೆ ಹೇಗಾದರೂದುಡ್ಡು ಮಾಡಬೇಕು ಅನ್ನೋ ಕಾಲದಲ್ಲಿ ಮೊದಲನೇ ಟಾಕಿ ‘ಸತಿ ಸುಲೋಚನಾ’ದಲ್ಲಿ ಇಬ್ಬರೂ ಒಟ್ಟಿಗೆ ಪಾತ್ರ ಮಾಡಿದರು. ಯಾವ ಕಾರಣಕ್ಕಾಗಿ ಅಂದರೆ ರಂಗಭೂಮಿಗೆ ದುಡ್ಡು ಒದಗಿಸಲಿಕ್ಕಾಗಿ. ಹೀಗಾಗಿ ಮತ್ತೆ ನಾಟಕ ಕಂಪೆನಿ ಬೆಳೆಸಲು ಪ್ರಯತ್ನಪಟ್ಟರು. ಕಡೆಗೆ 13, 14 ವರ್ಷಗಳ ನಂತರ ನಾಗೇಂದ್ರರಾಯರು ಮತ್ತು ಇವರು ಪಾರ್ಟ್ನರ್‌ಷಿಪ್‌ ಬೇರೆಯಾದಾಗ ಇವರು ನಾಟಕವನ್ನು ಆಯ್ಕೆ ಮಾಡಿಕೊಂಡರು. ನಾಗೇಂದ್ರರಾಯರು ಸಿನಿಮಾ ಆಯ್ಕೆ ಮಾಡಿಕೊಂಡರು.

ಮತ್ತೆ ಕೊನೇನಲ್ಲಿ ಯಥಾಪ್ರಕಾರ ರಂಗಭೂಮಿಗೆ ದುಡ್ಡು ಬೇಕೂಂತ ಸಿನಿಮಾ ಮಾಡಲು ಶುರು ಮಾಡಿದ್ರು. ಆದರೆ ಅಷ್ಟುಹೊತ್ತಿಗೆ ಎಲ್ಲಾ ಕಳೆದುಕೊಂಡುಬಿಟ್ಟಿದ್ದರು. ರಂಗಭೂಮಿ ವ್ಯಾಮೋಹಕ್ಕಾಗಿ ಚಿತ್ರ ಮಾಡಿದರು ಅಂದುಕೊಂಡಾಗ ಅದು ಬಹಳ ವಿಪರ್ಯಾಸ ಎನ್ನಿಸುತ್ತದೆ. ಈಗಲೂ ಬಹಳ ಜನ ಚಿತ್ರರಂಗವನ್ನು ಗ್ಲಾಮರ್‌ಗಾಗೇ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಶ್ರದ್ಧೆಯಿಂದ ಕೆಲಸ ಮಾಡುವವರು ಸಿಗುವುದು ಬಹಳ ಕಷ್ಟ. ಏಕ್‌ದಂ ಹೆಸರು ಬಂದು ಬಿಡುಬೇಕು ಎಂದು ಹೊರಟಾಗ ಶ್ರದ್ಧೆ ಉಳಿಯುವುದಿಲ್ಲ. ರಂಗಭೂಮಿಯಲ್ಲಿ ಯಾವಾಗಲೂ ಕಷ್ಟಗಳನ್ನೇ ಅನುಭವಿಸಿ ಬೆಳೆದಿರುತ್ತೇವೆ. ಎಷ್ಟೋ ದಿನ ಊಟವಿಲ್ಲದೆ ಕಳ್ಳೆಪುರಿ ತಿಂದು ಕಾಲ ಕಳೆದಿದ್ದೇವೆ. ನನ್ನ ಅನುಭವ ಏನೂಂದ್ರೆ 3 ರೂಪಾಯಿಗಳಿಗೆ ನಾಟಕ ಆಡಿದ ಜನ ನಾವು. ಒಂದು ಸಾರಿ ನಾಟಕ ಅನೌನ್ಸ್‌ ಮಾಡಿದ್ದೆವು. ಮೂರು ಜನ ಒಂದೊಂದು ರೂ. ಕೊಟ್ಟು ಟಿಕೆಟ್ ತೆಗೆದುಕೊಂಡು ಬಂದರು. ಬಣ್ಣದ ಖರ್ಚೂ ಆಗಲ್ಲ, ಟಿಕೆಟ್‌ ವಾಪಸು ಕೊಟ್ಟುಬಿಡಿ ಎಂದಾಗ, “ಯಾಕ್ರೀ ಅನೌನ್ಸ್ ಮಾಡಿದ್ರಿ. ಹಳ್ಳಿಯಿಂದ ಬಂದಿದ್ದೇವೆ. ನಾವೆಲ್ಲಿಗೆ ಹೋಗೋದು ನಾಟಕ ಆಡ್ರಿ” ಎಂದರು. ಸ್ವಲ್ಪ ಹೊತ್ತು ಯೋಚನೆ ಮಾಡಿ ಇದು ಒಂದು ತರಹ ಅನುಭವ ಇರಲಿ ಎಂದುಕೊಂಡು ಅವರನ್ನು ಸೋಫಾದಲ್ಲಿ ಕೂಡಿಸಿ ನಾಟಕ ಆಡಿದೆವು. ಇದು ನಡೆದದ್ದು ಚಿತ್ರದುರ್ಗದಲ್ಲಿ. ಆದ್ದರಿಂದ ಪಾತ್ರ ಮಾಡೋದು ಶೋಕಿ ಆಗಬಾರದು. ಅದರ ಬಗ್ಗೆ ಶ್ರದ್ಧೆ ಇರಬೇಕು, ಭಕ್ತಿ ಇರಬೇಕು. ಅದಕ್ಕೇ ಯಾವಾಗಲೂ ನಾಟಕದಿಂದ ಸಿನಿಮಾಗೆ ಹೋದವರಿಗೆ ಶ್ರದ್ಧೆ ಜಾಸ್ತಿ ಇರುತ್ತೇಂತ ನನಗೆ ಅನ್ಸುತ್ತೆ. ಆದ್ದರಿಂದಲೇ ಅವರಿಗೆ ಒಳ್ಳೆಯ ಚಿತ್ರಗಳನ್ನು ಮಾಡಲು ಸಾಧ್ಯವಾಯ್ತೇನೋ ಎಂದು ನನಗೆ ತೋರುತ್ತದೆ.

ಈ ನಾಟಕದ ವಿಷಯ ಬಂದಾಗ ಒಂದು ಕಡೆ ಮಹದೇವ ಸ್ವಾಮಿಗಳು ಹೇಳಿದ್ದು ಜ್ಞಾಪಕ ಬರುತ್ತದೆ. “ವೀರಣ್ಣೋರ ಮಾಲೀಕತ್ವ, ಸುಬ್ಬಯ್ಯನಾಯ್ಡು ಅವರ ನಾಟಕ ನಿರ್ದೇಶನ ಮತ್ತು ನನ್ನ ಮ್ಯಾನೇಜ್‌ಮೆಂಟ್‌… ಈ ಮೂರೂ ಸೇರಿಕೊಂಡುಬಿಟ್ರೆ ಇಡೀ ಈ ಜಗತ್ತನ್ನು ಸುತ್ತುಹಾಕಿಕೊಂಡು ಬರಬಹುದು” ಎಂದು ಮಹದೇವಸ್ವಾಮಿ ಹೇಳಿದ್ದರು. ಆದರೆ ಅದು ಸಾಧ್ಯವೇ ಇಲ್ಲದ ಮಾತು. ಆದರೆ ಅವರು ಎಷ್ಟು ಚೆನ್ನಾಗಿ ಅನಲೈಸ್‌ ಮಾಡಿದ್ದಾರೆ. ಯಾಕೇಂದ್ರೆ ಯಾರ್ಯಾರು ಏನೇನು ಮಾಡಲು ಸಾಧ್ಯ ಎಂಬುದನ್ನು ಅವರು ವಿಶ್ಲೇಷಿಸಿದ್ದಾರೆ. ಮಾಲಿಕರಾಗಿ ಸಂಸ್ಥೆಯ ಅಭ್ಯುದಯಕ್ಕೆ ವೀರಣ್ಣೋರು ಏನು ಬೇಕಾದರೂ ಮಾಡಲು ಸಿದ್ಧ. ಅಷ್ಟೇ ನಿಷ್ಠೂರವಾಗಿ ನಾಟಕ ತರಬೇತಿ ಕೊಡುವುದರಲ್ಲಿ ನಾಯ್ಡು ಅವರು ಸಿದ್ಧಹಸ್ತರು. ಎಷ್ಟೋ ಸಾರಿ ಅವರಿಗೂ, ನಾಗೇಂದ್ರರಾಯರಿಗೂ ಜಗಳವಾಗುತ್ತಿತ್ತು. ಅವರು ಒಟ್ಟಿಗೆ ಪಾರ್ಟ್ನರ್‌ಶಿಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನಾಗೇಂದ್ರರಾಯರು ಹೊರಗಿನ ಕೆಲಸ ಮಾಡಿಕೊಂಡು ಪಾತ್ರ ಮಾಡಬೇಕಾಗಿತ್ತು. ಇವರು ನಿರ್ದೇಶನ ಮತ್ತು ಪಾತ್ರ ಮಾಡಬೇಕಾಗಿತ್ತು. ನಾಗೇಂದ್ರರಾಯರು ರಿಹರ್ಸಲ್‌ಗೆ ಲೇಟ್ ಆಗಿ ಬಂದರೆ, “ಏನಯ್ಯಾ ನೀನು ರಿಹರ್ಸಲ್‌ಗೆ ಸರಿಯಾಗಿ ಬರುತ್ತಿಲ್ಲ” ಎಂದು ರೇಗುತ್ತಿದ್ದರು. ಹೊರಗಡೆ ಎಲ್ಲಾ ಕೆಲಸಗಳನ್ನು ಮುಗಿಸಿ ಬರಬೇಕಾಗುತ್ತದೆಂದು ರಾಯರು ಹೇಳಿದರೆ, “ಆ ಕೆಲ್ಸ ನಿಂದು. ನನಗೆ ರಿಹರ್ಸಲ್‌ಗೆ ಸರಿಯಾಗಿ ಬಂದುಬಿಡಬೇಕು, ಟೈಮ್‌ ಅಂದರೆ ಟೈಮ್‌” ಎನ್ನುತ್ತಿದ್ದರು. ಇಷ್ಟು ನಿಷ್ಠೂರವಾಗಿ ನಾಟಕ ತರಬೇತಿ ಕೊಡುವಂಥ ವ್ಯಕ್ತಿಗಳು ಸಿಗುವುದು ಅಪರೂಪ.

‘ಮಹಾತ್ಮಾ ಕಬೀರ್‌’ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಕಾಲಿಕವಾಗಿ ಅಗಲಿದ ನಟ ರಂಗಾ

ಬೆಂಗಳೂರು ಮೂಲದ ರಂಗಾ ಎಸ್ಸೆಸ್ಸೆಲ್ಸಿ ಓದಿದ ನಂತರ ಸರ್ಕಾರದ ಹೌಸಿಂಗ್‌ ಬೋರ್ಡ್‌ನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಆಗಿನ್ನೂ ಅವರಿಗೆ 19