ಕಾಶ್ಮೀರ ಮೂಲದ ದಯಾ ಕಿಶನ್ ಸಪ್ರು ಹಿಂದಿ ಸಿನಿಮಾ ನಟ. ಆರಂಭದಲ್ಲಿ ನಾಯಕನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಸಪ್ರು ಮುಂದೆ ಪೋಷಕ, ಖಳ ಪಾತ್ರಗಳಲ್ಲಿ ಅಭಿನಯಿಸಿದರು. ಸಿನಿಮಾ ನಟನಾಗುವ ಇರಾದೆಯಿಂದ ಪ್ರಭಾತ್ ಸ್ಟುಡಿಯೋಗೆ ಬಂದಿದ್ದ ಸಪ್ರು ಅವರನ್ನು ಮೊದಲು ಗುರುತಿಸಿದ್ದು ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ. ನಿರ್ದೇಶಕ ಶಾಂತಾರಾಂ ಶಿಫಾರಸಿನ ಮೇಲೆ ನೀಲಿ ಕಂಗಳ ಸುಂದರ ಯುವಕ ಸಪ್ರು ‘ರಾಮ್ ಶಾಸ್ತ್ರಿ’ (1944) ಚಿತ್ರದ ಪೇಶ್ವೆ ಪಾತ್ರದಲ್ಲಿ ನಟಿಸಿದರು. ಪ್ರಭಾತ್ ಕಂಪನಿ ಸಪ್ರು ಅವರಿಗೆ ತಿಂಗಳಿಗೆ 3000 ರೂಪಾಯಿ ವೇತನ ಕೊಟ್ಟು ಒಪ್ಪಂದ ಮಾಡಿಕೊಂಡಿತು. ಅದು ಆ ಕಾಲಕ್ಕೆ ದುಬಾರಿ ಸಂಭಾವನೆ.
ನರ್ಗಿಸ್ ಜೊತೆ ಸಪ್ರು ನಟಿಸಿದ ‘ರೋಮಿಯೋ ಜ್ಯೂಲಿಯಟ್’ ಯಶಸ್ಸು ಕಂಡಿತು. ಈ ಚಿತ್ರದ ಗೆಲುವಿನೊಂದಿಗೆ ಸಪ್ರು ಸಾಲು, ಸಾಲು ಚಿತ್ರಗಳಲ್ಲಿ ಅವಕಾಶ ಪಡೆದರು. ಝಾನ್ಸಿ ಕಿ ರಾಣಿ, ಕಾಲಾಪಾನಿ, ಹಮ್ ಹಿಂದೂಸ್ತಾನಿ, ಸಾಹಿಬ್ ಬೀಬಿ ಔರ್ ಗುಲಾಮ್, ಮುಝೆ ಜೀನೆ ದೋ, ಲೀಡರ್, ಶಾಹಿದ್, ನಯಾ ದೌರ್, ಪ್ರೇಮ್ ಪೂಜಾರಿ, ಜ್ಯೂವೆಲ್ ಥೀಫ್, ಕ್ರೋಧಿ, ಕುದ್ರತ್, ಧರ್ಮ್ ವೀರ್, ಡ್ರೀಮ್ ಗರ್ಲ್, ಜಂಜೀರ್, ಪಕೀಝಾ… ಅವರು ಅಭಿನಯಿಸಿರುವ ಕೆಲವು ಪ್ರಮುಖ ಸಿನಿಮಾಗಳು.

60ರ ದಶಕದಲ್ಲಿ ಸಿನಿಮಾ ಚಿತ್ರಕಥೆ ರಚಿಸುವಾಗ ಚಿತ್ರಕಥೆಗಾರರು ಸಪ್ರು ಅವರಿಗೆಂದೇ ಚಿತ್ರದಲ್ಲಿ ಪಾತ್ರ ಸೃಷ್ಟಿಸುತ್ತಿದ್ದರು ಎನ್ನಲಾಗುತ್ತದೆ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ ಸಪ್ರು ಕ್ರಮೇಣ ಪೋಷಕ ಪಾತ್ರ, ಖಳ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದರು. ಹಿಂದಿ ಮಾತ್ರವಲ್ಲದೆ ಗುಜರಾತಿ ಮತ್ತು ಪಂಜಾಬಿ ಭಾಷೆಯ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಪ್ರು ನಟಿಸಿದ್ದಾರೆ. ಮರಾಠಿ ರಂಗಭೂಮಿ – ಸಿನಿಮಾ ನಟಿ ಹೇಮಾವತಿ ಅವರನ್ನು ಸಪ್ರು ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಯ ಪುತ್ರ ತೇಜ್ ಸಪ್ರು ಮತ್ತು ಪುತ್ರಿ ಪ್ರೀತಿ ಸಪ್ರು ಹಿಂದಿ ಮತ್ತು ಪಂಜಾಬಿ ಸಿನಿಮಾ ತಾರೆಯರು.

ನಟನಾಗಿ ಜನಪ್ರಿಯತೆ ಗಳಿಸಿದ್ದ ಡಿ.ಕೆ.ಸಪ್ರು ‘ಪತೀತ ಪಾವನ್’ (1955) ಚಿತ್ರದೊಂದಿಗೆ ಚಿತ್ರನಿರ್ಮಾಣಕ್ಕಿಳಿದಿದ್ದರು. ಈ ಸಿನಿಮಾ ಗೆಲುವು ಕಂಡಿತಾದರೂ ಅವರ ನಿರ್ಮಾಣದ ಮುಂದಿನ ಸಿನಿಮಾ ಸೋಲಿನಿಂದ ಸಪ್ರು ಸಂಕಷ್ಟಕ್ಕೀಡಾದರು. 60, 70ರ ದಶಕಗಳಲ್ಲಿ ಪೋಷಕ ನಟನಾಗಿ ಅವರು ನೂರಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಪ್ರಿಯರಿಗೆ ಸಪ್ರು ಅವರು ಜಮೀನ್ದಾರ, ಪೊಲೀಸ್ ಕಮಿಷನರ್, ಜಡ್ಜ್ ಪಾತ್ರಗಳಲ್ಲಿ ಹೆಚ್ಚು ನೆನಪಾಗುತ್ತಾರೆ. 1979ರ, ಅಕ್ಟೋಬರ್ 20ರಂದು 63ನೇ ವಯಸ್ಸಿನಲ್ಲಿ ಸಪ್ರು ಇಹಲೋಕ ತ್ಯಜಿಸಿದರು.
