ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪ್ಪಟ ಸಿನಿಮಾ ತಂತ್ರಜ್ಞ ಬಾಲು ಮಹೇಂದ್ರ

ಪೋಸ್ಟ್ ಶೇರ್ ಮಾಡಿ
ರಾಘವನ್ ಚಕ್ರವರ್ತಿ
ಸಿನಿಮಾ ವಿಶ್ಲೇಷಕ

ಮಹೇಂದ್ರರ ಪಾತ್ರ ಸೃಷ್ಟಿ, ಕಥಾ ಸಂವಿಧಾನ, ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲಿ ತೋರಿಸುತ್ತಿದ್ದ ಸೂಕ್ಷ್ಮತೆ, ಕಥೆಯನ್ನು ’ಹೇಳು’ತ್ತಿದ್ದ ರೀತಿ, ಇಳಯರಾಜಾರನ್ನು ಬಳಸಿಕೊಂಡ ವಿಧಾನ  ಅವಿಸ್ಮರಣೀಯ. – ಲೇಖಕ ರಾಘವನ್ ಚಕ್ರವರ್ತಿ ಮೇರು ನಿರ್ದೇಶಕನನ್ನು ಸ್ಮರಿಸಿದ್ದಾರೆ.

ಚಿತ್ರ 1 : ಆಕೆಯ ಹೆಸರು ಸುಧಾ. ಇನ್ನೂ ಅವಿವಾಹಿತೆ. ಮದರಾಸಿನ (ಆಗಿನ್ನೂ ’ಚೆನ್ನೈ’ ಆಗಿರಲಿಲ್ಲ) ಕವಕವಗುಟ್ಟುವ ಪ್ರದೇಶವೊಂದರಲ್ಲಿನ ವಠಾರದಲ್ಲಿ ವಾಸ. ಜೊತೆಯಲ್ಲಿ ತಂಗಿ ಮತ್ತು ತಾತ. ಮದರಾಸಿನ ಪಾದರಸದಂತಹ ದೈನಂದಿನ ಬದುಕಿಗೆ ಹೊಂದಿಕೊಂಡ ಕಷ್ಟಜೀವಿಗಳ ಕುಟುಂಬ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸುಧಾಗೆ ಅವಳ ಸಹೋದ್ಯೋಗಿಯೊಂದಿಗೆ ನಿಶ್ಚಿತಾರ್ಥವಾಗಿದೆ. ಜೀವನ ಹೇಗೋ ಸಾಗುತ್ತಿದೆ. ವರ್ಷಗಳಿಂದ, ಪ್ರತಿತಿಂಗಳು ನೂರೋ – ನೂರೈವತ್ತೋ ಬಾಡಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿರುವ ವಠಾರವಾಸಿಗಳ ಕಂಡು ಕನಲುತ್ತಿರುವ ವಠಾರದ ಯಜಮಾನನಿಗೆ ದುರಾಸೆ. ಒಂದು ದಿನ ವಠಾರದ ನಿವಾಸಿಗಳನ್ನೆಲ್ಲಾ ಕರೆಸಿ, ಅವರೆಲ್ಲಾ ಆದಷ್ಟು ಬೇಗ ಬೇರೆ ಮನೆಗಳನ್ನು ನೋಡಿಕೊಳ್ಳಬೇಕೆಂದೂ, ಇಡೀ ವಠಾರವನ್ನು ಕೆಡವಿ ದೊಡ್ಡ ಕಟ್ಟಡ (ಅಪಾರ್ಟ್ ಮೆಂಟ್) ಕಟ್ಟಲು ತಾನು ನಿರ್ಧರಿಸಿರುವುದಾಗಿಯೂ ತಿಳಿಸುತ್ತಾನೆ. ಸುಧಾಗೆ ಕಂಟಕವೇರ್ಪಡುತ್ತದೆ.

ಮದರಾಸಿನಲ್ಲೆಲ್ಲಾ ಅಲೆದಾಡಿದರೂ ಸುಧಾಗೆ ಮತ್ತೊಂದು ಮನೆ ಸಿಗುತ್ತಿಲ್ಲ. ದೊಡ್ಡ ಮನೆಯ ಯಜಮಾನರುಗಳಿಗೆ ’ಅಪಾರ್ಟ್ ಮೆಂಟ್’ಕಟ್ಟುವ ಹುಚ್ಚು. ನಗರೀಕರಣ, ಅದರ ಪರಿಣಾಮವಾಗಿ ಉಂಟಾಗಿರುವ ದುರಾಸೆಯಿಂದ ಮನೆಯ ಬಾಡಿಗೆ ಗಗನಕ್ಕೇರಿದೆ. ಬಾಡಿಗೆ ಒಂದೈನೂರು ರುಪಾಯಿಯಾದರೂ ಪರವಾಗಿಲ್ಲ ಎಂದು ಮನೆ ಹುಡುಕಲಾರಂಭಿಸುವ ಸುಧಾಗೆ ನಿರಾಶೆಯೇ ಎದುರಾಗುತ್ತದೆ. ಸುಧಾಳ ತಾತ ಹಾಲು ಹಾಕುವವನಾತನಿಗೂ ಮನೆ ಇದ್ದರೆ ತಿಳಿಸಲು ಕೇಳಿಕೊಳ್ಳುತ್ತಾನೆ. “ಈವಾಗ ಎಲ್ಲಾ ಕಡೆ ಅಪಾರ್ಟ್ ಮೆಂಟ್ ಕಟ್ತಾ ಇದಾರೆ… ಕನಿಷ್ಟ ಸಾವಿರದಿನ್ನೂರು-ಸಾವಿರದೈನೂರು ಬಾಡಿಗೆ…..ಆಗುತ್ತಾ?” ಎಂಬ ಪ್ರಶ್ನೆಗೆ ತಾತ ತೆಪ್ಪಗಾಗುತ್ತಾನೆ. ವಠಾರದ ಯಜಮಾನನ ಒತ್ತಡ ದಿನೇದಿನೇ ಹೆಚ್ಚುತ್ತಲಿದೆ. “ಸುಧಾ…ನೀನೆ ಯಾಕೆ ಒಂದ್ ಮನೆ ಕಟ್ಟಿಸ್ಬಾರ್ದು…ಈ ಬಾಡಿಗೆ ಗೋಳೆಲ್ಲಾ ಬೇಡವೇ ಬೇಡಾ..” ಎಂಬ ಪುಕ್ಕಟೆ ಸಲಹೆಯೊಂದನ್ನು ಸಹೋದ್ಯೋಗಿಯೊಬ್ಬರು ನೀಡಿದಾಗ ಸುಧಾಗೆ ಹೊಸ ಆಸೆ ಚಿಗುರುತ್ತದೆ. ಜಾಣ ತಾತನಿಗೆ ಮದರಾಸಿನ ಹೊರವಲಯದಲ್ಲಿ ಎರಡು ಸೈಟುಗಳಿವೆ. ಒಂದರಲ್ಲಿ ಮನೆ ಕಟ್ಟುವುದು ಮತ್ತೊಂದನ್ನು ಮಾರಿ, ಬಂದ ಹಣವನ್ನು ಮನೆ ಕಟ್ಟಲು ಬಳಸುವುದು ಎಂಬ ನಿರ್ಧಾರಕ್ಕೆ ಎಲ್ಲರೂ ಒಪ್ಪುತ್ತಾರೆ. ವಠಾರದ ಯಜಮಾನನಿಗೆ ಸ್ವಲ್ಪ ಹೆಚ್ಚು ಸಮಯ ಕೇಳಿ ಸುಧಾ ಮನೆ ನಿರ್ಮಾಣಕ್ಕೆ ಸಿದ್ದಳಾಗುತ್ತಾಳೆ.

ಸೈಟು ಮಾರಿದ ಹಣದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ ಎಂಬ ಅರಿವು ಮೂಡಲು ಸುಧಾಗೆ ಹೆಚ್ಚು ಸಮಯವಾಗಲಿಲ್ಲ. ಮನೆಸಾಲಕ್ಕೆ ಅರ್ಜಿ ಗುಜರಾಯಿಸಿದ ಸುಧಾ ತನ್ನಲ್ಲಿದ್ದ ಅಲ್ಪ – ಸ್ವಲ್ಪ ಒಡವೆಗಳನ್ನೂ ಅಡವಿಟ್ಟು ಹಣ ಹೊಂದಿಸಿಕೊಳ್ಳುತ್ತಾಳೆ. ಕಟ್ಟಡ ಗುತ್ತಿಗೆದಾರನೊಬ್ಬನಿಂದ ಮನೆಯ ಯೋಜನೆ(ಪ್ಲಾನ್) ಬರೆಸಿದ ಸುಧಾಳ ಸಂತೋಷಕ್ಕೆ ಪಾರವಿಲ್ಲ. ಯೋಜನೆಗೆ ಒಪ್ಪಿಗೆ ಪಡೆಯಲು ಸಂಬಂಧಿಸಿದ ಇಲಾಖೆಗಳಿಗೆ ಎಡತಾಕಲು ಆರಂಭಿಸಿದಾಗ ಸುಧಾಗೆ ಸರ್ಕಾರಿ ಇಲಾಖೆಗಳ ಭ್ರಷ್ಟಲೋಕದ ಪರಿಚಯವಾಗುತ್ತದೆ. ತನಗಾದ ಸಂತೋಷ ಕ್ಷಣಿಕ ಎಂಬ ಅರಿವಾಗುತ್ತದೆ. ಮನೆ ನಿರ್ಮಾಣ ಕಾರ್ಯವೇನೋ ಆರಂಭವಾಗುತ್ತದೆ. ಆದರೆ ಮದರಾಸಿನಲ್ಲಿ ವಿಪರೀತ ಮಳೆ ಸುರಿಯಲಾಂಭಿಸಿ ನಿರ್ಮಾಣ ವೆಚ್ಚ ಅಧಿಕವಾಗುತ್ತದೆ. ಸುಧಾ ಕಂಗಾಲಾಗುತ್ತಾಳೆ. ಕಂಟ್ರಾಕ್ಟರ್, ಮನೆಯ ಸಾಮಾನುಗಳನ್ನು ಕದಿಯಲಾರಂಭಿಸುತ್ತಾನೆ. ಸುಧಾಗೆ ಇದರ ಅರಿವಿಲ್ಲ. ಕಟ್ಟಡ ಕೆಲಸದ ಹೆಣ್ಣಾಳು ಮಂಗಮ್ಮ, ಸುಧಾಗೆ ಕಂಟ್ರಾಕ್ಟರ್ ನ ಕೃತ್ರಿಮಗಳನ್ನೆಲ್ಲಾ ಹೇಳಿದಾಗ, ಆತನನ್ನು ಸುಧಾ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಕಂಟ್ರಾಕ್ಟರ್ ಮಧ್ಯದಲ್ಲೇ ಬಿಟ್ಟು ಹೋಗಿಬಿಡುತ್ತಾನೆ. ಮನೆಕಟ್ಟಲು ಹುರಿದುಂಭಿಸಿದ್ದ ಸಹೋದ್ಯೋಗಿ ಮತ್ತು ಮಂಗಮ್ಮ ಇಬ್ಬರೂ ಒತ್ತಾಸೆಯಾಗಿ ನಿಲ್ಲುತ್ತಾರೆ. ಮನೆ ಕಟ್ಟುವ ಕೆಲಸ ಪುನರಾರಂಭವಾಗುತ್ತದೆ. ಮತ್ತೆ ಹಣದ ಅಡಚಣೆ.. ಸುಧಾಗೆ ಸಾಲವಿನ್ನೂ ಮಂಜೂರಾಗಿಲ್ಲ. ಇಲಾಖೆಗೆ ಅಲೆದು ಹೈರಾಣಾಗುವ ಸುಧಾ, ತನ್ನ ಕಂಪನಿಯ ಮೇನೇಜರ್ ನನ್ನು ಹಣಕ್ಕಾಗಿ ವಿನಂತಿಸಿಕೊಳ್ಳುತ್ತಾಳೆ. ಆದರೆ ಆ ಮೇನೇಜರ್ ಒಬ್ಬ ಹೆಣ್ಣುಬಾಕ. ಸುಧಾಗೆ ಜಿಗುಪ್ಸೆಯಾಗುತ್ತದೆ. ಮನೆನಿರ್ಮಾಣ ನಿಲ್ಲಿಸಿಯೇ ಬಿಡೋಣ ಎಂದು ಹತಾಶಳಾದಾಗ, ಸುಧಾಳ ಕೈಹಿಡಿಯಲಿರುವ ಅವಳ ಸಹೋದ್ಯೋಗಿ ಸಹಾಯಹಸ್ತ ಚಾಚುತ್ತಾನೆ. ಮಂಗಮ್ಮ ಧೈರ್ಯತುಂಬುತ್ತಾಳೆ. ಮನೆ ನಿರ್ಮಾಣ ಒಂದು ಮಟ್ಟ ತಲುಪುತ್ತದೆ.

ಸುಧಾಳ ಬಗ್ಗೆ ತಾತನಿಗೆ ಬಹಳ ಅಭಿಮಾನ. ಇನ್ನೂ ನಿರ್ಮಾಣ ಹಂತ ಪೂರೈಸುತ್ತಿರುವ ಮನೆಗೆ ಒಂದುದಿನ ಭೇಟಿನೀಡುವ ತಾತ ಮನೆಯನ್ನೆಲ್ಲಾ ಸುತ್ತು ಹೊಡೆದು ಭಾವುಕನಾಗುತ್ತಾನೆ. ಹೊರನಡೆಯುವಾಗ ಕುಸಿದುಬೀಳುವ ತಾತ ಮತ್ತೆ ಮೇಲೇಳುವುದಿಲ್ಲ. ಸುಧಾಗೆ ಮತ್ತೆ ಕಂಟಕ. ಸುಧಾಳ ಭಾವಿ ಪತಿ ಧೈರ್ಯ ತುಂಬುತ್ತಾನೆ…

ಮತ್ತೆ ಮನೆ ಕೆಲಸ ಆರಂಭವಾಗಬೇಕು….

ಮದರಾಸಿನ ’ಮೆಟ್ರೋ ವಾಟರ್ ಅಥಾರಿಟಿ’ (ಜಲಮಂಡಳಿ) ಅಧಿಕಾರಿಗಳು ಸುಧಾ ಮುಂದೆ ಪ್ರತ್ಯಕ್ಷವಾಗುತ್ತಾರೆ. ’ನೀವು ಮನೆಕಟ್ಟಿಸ್ತಾ ಇರೋ ಜಾಗ ನಮ್ಮ ಇಲಾಖೆಗೆ ಸೇರಿದ್ದು…ಅದು ಹ್ಯಾಗೆ ನೀವಲ್ಲಿ ಮನೆ ಕಟ್ಟಿಸ್ತಾ ಇದೀರಾ?’ ಎಂದು ದಾಖಲೆಗಳನ್ನು ಹಿಡಿದಾಗ ಸುಧಾ ದಿಗ್ಭ್ರಮೆಗೊಳಗಾಗುತ್ತಾಳೆ. ಗೃಹ ಪ್ರಾಧಿಕಾರದ ಅಧಿಕಾರಿಗೆ ಆ ಭೂಮಿ ಜಲಮಂಡಳಿಯದು ಎಂಬ ಸತ್ಯ ಗೊತ್ತಿರುತ್ತದೆ. ಸರ್ಕಾರಿ ದಾಖಲೆಗಳನ್ನು ನೋಡಿದಾಗ ಆತನಿಗೆ ಸತ್ಯ ಮನದಟ್ಟಾಗಿರುತ್ತದೆ. ಆದರೂ ’ಆ ಸೈಟಿನಲ್ಲಿ ಜಲಮಂಡಳಿಯವರು ಇಷ್ಟು ಬೇಗ ಯಾವ ನಿರ್ಮಾಣವನ್ನೂ ಮಾಡಲಾರರು.. ನಮಗ್ಗೊತ್ತಿಲ್ವಾ ಅವ್ರ ಕಥೆ’ಎಂಬ ಉಡಾಫೆಯಿಂದ ಸುಧಾಳಿಂದ ಲಂಚ ಪಡೆದು ಒಪ್ಪಿಗೆ ನೀಡಿಬಿಟ್ಟಿರುತ್ತಾನೆ. “ತನ್ನ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸದೇ ಸರ್ಕಾರಕ್ಕೆ ಸೇರಿದ ಜಾಗವನ್ನು ದುರುದ್ದೇಶ್ಯ ಪೂರ್ವಕವಾಗಿ ಮನೆನಿರ್ಮಾಣಕ್ಕೆ ಒಪ್ಪಿಗೆನೀಡಿದ” ಭ್ರಷ್ಟಾಧಿಕಾರಿಗೆ ಸೆರೆಮನೆವಾಸ ಪ್ರಾಪ್ತಿಯಾಯಿತೆಂದು ಹಿನ್ನಲೆಯಲ್ಲಿ ಧ್ವನಿಯೊಂದು ನುಡಿಯುತ್ತದೆ….

ಸುಧಾಳ ಮನೆ ಏನಾಯಿತು?

ಚಿತ್ರ 2 : ಅದೊಂದು ಟೀವಿ ಧಾರಾವಾಹಿ. ’ಮಂಗೈ’ ಹೆಸರಿನ ಈ ದೈನಂದಿನ ಧಾರಾವಾಹಿಯ ’ಉಗ್ರ’ ಅಭಿಮಾನಿಯಾದ, ಸೈನ್ಯದಲ್ಲಿ ನರ್ಸ್ ಆಗಿರುವ ಈಕೆ ಅಮೆರಿಕಕ್ಕೆ ಹೋಗುವ ಕಾರ್ಯಕ್ರಮವಿದೆ. ಆದರೆ ’ಮಂಗೈ’ಸರಣಿಯನ್ನು ಬಿಡಲು ಇಷ್ಟವಿಲ್ಲ. ಇನ್ನೇನು ಸ್ವಲ್ಪದಿನಗಳಲ್ಲಿ ಮುಗಿದೇಹೋಗುವ ಟೀವಿ ಸರಣಿಯ ಕ್ಲೈಮಾಕ್ಸ್ ಗಾಗಿ ಆಕೆ ತಪಿಸುತ್ತಿದ್ದಾಳೆ. ಅಮೆರಿಕ ಯಾತ್ರೆ ಮುಂದೂಡಿದ್ದಾಳೆ. ಊಟಿಯ ಹೊರವಲದ ದೊಡ್ಡ ಬಂಗಲೆಯಲ್ಲಿ ಒಬ್ಬಳೇ ವಾಸ. ಹೀಗಿರುವಾಗ ಒಂದುದಿನ ಧಾರಾವಾಹಿಯ ಕರ್ತೃ ಬಾಲಕುಮಾರನ್ ಕ್ಲೈಮಾಕ್ಸ್ ದೃಶ್ಯಗಳನ್ನು ಬರೆಯಲು ಏಕಾಂತ ತಾಣ ಅರಸಿ ಊಟಿಗೆ ಬರುತ್ತಾನೆ. ಊಟಿ ಹೊರವಲಯದಲ್ಲಿ ಕಾರು ಅಪಘಾತವಾಗುತ್ತದೆ. ಹತ್ತಿರವಿದ್ದ ಸ್ವತಃ ನರ್ಸ್ ಆದ ಈಕೆ ಅಪಾರ ಕಾಳಜಿಯಿಂದ ಶುಶ್ರೂಷೆ ಮಾಡುತ್ತಾಳೆ. ಕಥೆಗಾರ ಬಾಲಕುಮಾರನ್ ನ ಉತ್ಕಟ ಅಭಿಮಾನಿ ಈಕೆ. ಉಪಚಾರ-ಶುಶ್ರೂಷೆಗಳಿಂದ ಬಾಲ ಮುದಗೊಳ್ಳುತ್ತಾನೆ. ಕ್ರಮೇಣ ಆತನಿಗೆ ತಾನಲ್ಲಿ ಬಂಧಿಯಾಗಿರುವುದು ಸ್ಪಷ್ಟವಾಗುತ್ತದೆ. ಸತ್ಯದ ಅರಿವಾಗುತ್ತದೆ. ಈಕೆ ತೀವ್ರ ಮಾನಸಿಕ ಅಸ್ವಸ್ಥೆ. ತೀವ್ರ ಖಿನ್ನತೆಯಿಂದ ಬಳಲುತ್ತಿರುವಾಕೆ. ಅಪಘಾತದಲ್ಲಿ ಕಾಲು ಮುರಿದುಕೊಂಡಿರುವ ಬಾಲನಿಗೆ, “ಮಂಗೈ” ನ ಕ್ಲೈಮಾಕ್ಸ್ ಏನೆಂದು ತಿಳಿಸುವಂತೆ ನರ್ಸ್ ಬಲವಂತ ಮಾಡುತ್ತಾಳೆ. ಬಾಲನಿಗೆ ಈಕೆಯ ಮನೋವಿಕಾರದ ಪರಿಚಯವಾಗುತ್ತದೆ. ಬಾಲನಿಂದ ಕ್ಲೈಮಾಕ್ಸ್ ದೃಶ್ಯಗಳ ಚಿತ್ರಣವಿದ್ದ ಹಾಳೆಗಳನ್ನು ಕಿತ್ತುಕೊಂಡು ಓದುವ ನರ್ಸ್, ದೃಶ್ಯಗಳನ್ನು ಬದಲಿಸಿ ಬರೆಯಬೇಕೆಂದೂ, ಈಗ ಬರೆದಿರುವ ದೃಶ್ಯಗಳು ತನಗೆ ಹಿಡಿಸಲಿಲ್ಲವೆಂದೂ ಬಲವಂತಮಾಡುತ್ತಾಳೆ. ಬಾಲ ಒಪ್ಪದಿದ್ದಾಗ, ತೀವ್ರ ಆವೇಶ, ಮನೋವಿಕಾರಕ್ಕೆ ಒಳಗಾಗುತ್ತಾಳೆ. ಕಾಲು ಮುರಿದುಕೊಂಡ ಬಾಲ, ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಇಂಜೆಕ್ಷನ್ ಗಳನ್ನು ಚುಚ್ಚಿ ಮೇಲೇಳದಂತೆ ಮಾಡುತ್ತಾಳೆ. ಬಾಲನಿಗೆ ಗತ್ಯಂತರವಿಲ್ಲ. ಕ್ಲೈಮಾಕ್ಸ್ ಬದಲಿಸಿ ಬರೆಯುತ್ತಾನೆ.

ಇಷ್ಟರಲ್ಲಿ ಬಾಲ ಕಾಣೆಯಾಗಿದ್ದರಿಂದ ಪೋಲೀಸ್ ತನಿಖೆ ಆರಂಭವಾಗುತ್ತದೆ. ನರ್ಸ್ ನ ’ಮಂಗೈ’ಹುಚ್ಚು ಊರಲೆಲ್ಲಾ ತಿಳಿದ ವಿಚಾರವಾದ್ದರಿಂದ, ಕಾನ್‌ಸ್ಟೇಬಲ್‌ ಒಬ್ಬ ನರ್ಸ್ ಮನೆಗೆ ಬರುತ್ತಾನೆ. ಬಾಲ ಅಲ್ಲಿ ಬಂದಿಯಾಗಿರುವುದನ್ನು ಕಂಡಾಗ ನರ್ಸ್ ಉನ್ಮಾದಕ್ಕೊಳಗಾಗಿ ಕಾನ್‌ಸ್ಟೇಬಲ್‌ ನನ್ನು ಕೊಲ್ಲುತ್ತಾಳೆ. ’ನಾನು ನಿನ್ನ ಪರಮ ಅಭಿಮಾನಿ….ಬದುಕ್ಕಿದ್ದು ಸಾಕು..ನಾವಿಬ್ಬರೂ ಒಟ್ಟಿಗೆ ಸಾಯೋಣ ಬಾ..’ ಎಂದು ನರ್ಸ್ ಪೀಡಿಸಲಾರಂಭಿಸಿದಾಗ, ಬಾಲ ’ಕ್ಲೈಮಾಕ್ಸ್ ಸ್ವಲ್ಪ ಬಾಕಿ ಇದೆ..ಮುಗಿಸಿಬಿಡ್ತೀನಿ’ಎಂದು ನೆಪವೊಡ್ಡಿ ತಪ್ಪಿಸಿಕೊಳ್ಳಲು ಹೊಸಮಾರ್ಗ ಹುಡುಕುತ್ತಾನೆ..

ಬಾಲ ಕ್ಷೇಮವಾಗಿ ಮರಳಿದನೇ…ನರ್ಸ್ ಏನಾದಳು?

—-

ಸಂಪೂರ್ಣ ವಿಭಿನ್ನ ನೆಲೆಗಟ್ಟಿನ ಕಥಾಹಂದರವಿರುವ ಈ ಎರಡೂ ಚಿತ್ರಗಳು ಚಿತ್ರ(ನಿಜ) ರಸಿಕರಿಗೆ, ’ಸಿನಿಮಾ’ವನ್ನು ಸೀರಿಯಸ್ ಆಗಿ ತೆಗೆದುಕೊಂಡ ಸಿನಿಮಾ ವಿದ್ಯಾರ್ಥಿಗಳ ಮೇಲೆ ಮಾಡಿದ್ದ ಮೋಡಿ ಕಡಿಮೆಯೇನಲ್ಲ. ಇದಲ್ಲದೇ ಇನ್ನೂ ಹಲವು ಅರ್ಥಪೂರ್ಣ, ಅಧ್ಯಯನ ಯೋಗ್ಯ ಚಿತ್ರಗಳನ್ನು ನೀಡಿದ ನಿರ್ದೇಶಕ ಬಾಲು ಮಹೇಂದ್ರ.

ಮೇಲೆ ವಿವರಿಸಿರುವ ಮೊದಲ ಚಿತ್ರ ’ವೀಡು’. ಮೊದಲಬಾರಿ ಮಹೇಂದ್ರ ಯಾವುದೇ ಕಮರ್ಷಿಯಲ್ ಅಂಶಗಳನ್ನೂ ಬಳಸದೇ ಅಪ್ಪಟ ಕಲಾತ್ಮಕವಾಗಿ ಚಿತ್ರಿಸಿದ ’ವೀಡು’, ಸುಧಾ ಪಾತ್ರಧಾರಿ ಅರ್ಚನಾರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. (’ನಾಯಗನ್’ ರ ಅದ್ಭುತ ಅಭಿನಯಕ್ಕಾಗಿ ಕಮಲ್ ಅದೇ ವರ್ಷ ’ಶ್ರೇಷ್ಟ ನಟ’ ಪ್ರಶಸ್ತಿ ಪಡೆದರು). ಪಾತ್ರವೇ ತಾವಾದ ಅರ್ಚನಾ, ಮಧ್ಯಮವರ್ಗದ ಉದ್ಯೋಗಸ್ಥೆ ಹೆಣ್ಣೊಬ್ಬಳ ಅಸಹಾಯಕತೆ, ಅದನ್ನು ಮೀರಿ ಬದುಕಲು ಆಕೆಯ ಯತ್ನ, ವ್ಯವಸ್ಥೆಯ ವಿರುದ್ಧದ ತಣ್ಣಗಿನ ಹೋರಾಟಗಳನ್ನು ತಮ್ಮ ಅಭಿನಯದಲ್ಲಿ ಮನೋಜ್ಞವಾಗಿ ಹೊಮ್ಮಿಸಿದ್ದರು. ಚಿತ್ರದ ಕೊನೆಯ ದೃಶ್ಯಗಳಲ್ಲಿ, ಭ್ರಷ್ಟ ಸರ್ಕಾರಿ ಅಧಿಕಾರಿ ಜೈಲು ಸೇರಿದನೆಂಬ ಮಾತೊಂದು ಕೇಳಿಬರುತ್ತದೆ. ಭಾರತದಂತಹ ದೇಶದಲ್ಲಿ, ಸರ್ಕಾರಿ ಅಧಿಕಾರಿಯೊಬ್ಬ ವಿಚಾರಣೆಗೊಳಗಾಗಿ ಜೈಲು ಸೇರುವ ಪ್ರಕ್ರಿಯೆ ಎಷ್ಟು ತಿಂಗಳು/ವರ್ಷ ಹಿಡಿಸೀತೆಂಬುದು ವೀಕ್ಷಕರ ಊಹೆಗೆ ಬಿಟ್ಟಿದ್ದು. ಆದರೂ ’ಸುಧಾ’ಎಡಬಿಡದೇ ಹೋರಾಡುತ್ತಾಳೆ. ಆಕೆಯ ಮನೆಯ ವಿವಾದವೂ ಕೋರ್ಟಿನ ಮುಂದೆ ಬರುತ್ತದೆ. ಮಹೇಂದ್ರ ಪ್ರೇಕ್ಷಕರನ್ನು ಚಿಂತಿಸುವಂತೆ ಮಾಡುತ್ತಾರೆ. ವ್ಯವಸ್ಥೆಯಲ್ಲಿನ ಭ್ರಷ್ಟತೆ, ರಾಜಕೀಯದ ವಿರುದ್ಧ ಮಧ್ಯಮವರ್ಗದ ಹೋರಾಟ ನಿರಂತರ ಎಂಬ ಮಾತು ಧ್ವನಿಪೂರ್ಣವಾಗಿ ನಿರೂಪಿತವಾಗಿತ್ತು. ಮಹೇಂದ್ರರ ಸಂಕಲನ ಕೂಡಾ ತಂತ್ರಜ್ಞರನ್ನು ಅಚ್ಚರಿಗೊಳಿಸಿತ್ತು. ಸ್ವತಃ ಉತ್ತಮ ಸಂಕಲನಕಾರರಾಗಿದ್ದ ಮಹೇಂದ್ರ, ಚಿತ್ರಕಥೆ ಬರೆಯುವ ಸಂದರ್ಭದಲ್ಲೇ ಚಿತ್ರ ಸಂಕಲನದ ರೂಪು – ರೇಷೆಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು. ನೆರಳು – ಬೆಳಕಿನ ಆಳ ಒಳನೋಟ ಹೊಂದಿದ್ದರು. ತಮ್ಮೆಲ್ಲಾ ಚಿತ್ರಗಳಿಗೆ ತಾವೇ ಛಾಯಾಗ್ರಾಹಕರೂ ಆಗಿದ್ದರು.

ಎರಡನೆಯ ಚಿತ್ರ ’ಜೂಲಿ ಗಣಪತಿ’. ಸರಿತಾ ನಿರ್ವಹಿಸಿದ ನರ್ಸ್ ಪಾತ್ರದ ಹೆಸರೂ ಅದೇ. ’ಅಚ್ಚಮಿಲ್ಲೈ ಅಚ್ಚಮಿಲ್ಲೈ’(ಬಾಲಚಂದರ್ ನಿರ್ದೇಶನ) ನಂತರ ಸರಿತಾ ನೀಡಿದ ಜೀವಮಾನ ಶೇಷ್ಠ ಅಭಿನಯ ಎಂದರೆ ಉತ್ಪ್ರೇಕ್ಷೆಯಲ್ಲ. ಅವಿವಾಹಿತೆ, ತೀವ್ರ ಮನಃಸ್ಥಿತಿ ತಲುಪಿಬಿಡುವ, ಮಧ್ಯವಯಸ್ಸು ದಾಟುತ್ತಿದ್ದ ನರ್ಸ್ ಪಾತ್ರವನ್ನು ಸರಿತಾ ’ಅನುಭವಿಸಿ’ ಅಭಿನಯಿಸಿದರು. ಬಾಲಕುಮಾರನ್ ಆಗಿ ಮಲಯಾಳೀ ನಟ ಜಯರಾಂ ಕೂಡಾ ಹೃದಯಸ್ಪರ್ಶಿಯಾಗಿ ಅಭಿನಯಿಸಿದ್ದರೂ ಮುನ್ನಲೆಗೆ ಬಂದು ನಿಲ್ಲುವುದು ಸರಿತಾರ ಪಾತ್ರ ನಿರ್ವಹಣೆ. ನಿರ್ದೇಶಕ ಬಾಲು ಮಹೇಂದ್ರ ಕೂಡಾ ’ಜೂಲಿ ಗಣಪತಿ’ ಪಾತ್ರಕ್ಕೆ ಸ್ವಲ್ಪ ಹೆಚ್ಚು ಗಮನವಹಿಸಿ ಪೋಷಿಸಿದ್ದು ಗಮನಾರ್ಹ. ಕೋಪ – ಪ್ರೀತಿ – ಹತಾಶೆ – ವಿಹ್ವಲತೆಗಳನ್ನು ಸರಿತಾ ವ್ಯಕ್ತಪಡಿಸಿರುವ ಪರಿ ಒಮ್ಮೆ ನೋಡಬೇಕು. ತಾಯ ಪ್ರೀತಿ ಹರಿಸುತ್ತಾ ಮರುಕ್ಷಣದಲ್ಲೇ, ಚಳಿ ತರಿಸುವ ಬೀಭತ್ಸತೆಯನ್ನೂ ತೋರಿಬಿಡುವ ಸರಿತಾ, ’ದಕ್ಷಿಣ’ದಿಂದಾಚೆ ಹೋಗಲಾರದಿದ್ದು ಚಿತ್ರರಂಗದ ದುರಂತ.

ಇಡೀ ಚಿತ್ರವನ್ನು ಮಹೇಂದ್ರ ಸ್ವಾಭಾವಿಕ (Natural light) ಬೆಳಕಿನಲ್ಲೇ ಚಿತ್ರಿಸಿದರು. ಊಟಿಯ ಪ್ರಕೃತಿಸಹಜ ಸೌಂದರ್ಯದ ಸುಂದರ ನಿರ್ಜನ ತಾಣದಲ್ಲಿನ ದೊಡ್ಡ ಬಂಗಲೆ, ಮಹೇಂದ್ರರ ಆಯ್ಕೆಯ ಸೂಕ್ಷ್ಮತೆಗೆ ಉದಾಹರಣೆ. ಚಿತ್ರದ ಬೀಭತ್ಸ ದೃಶ್ಯಗಳ ಚಿತ್ರಣದಲ್ಲಿನ ಇಳಯರಾಜಾ ಹಿನ್ನಲೆ ಸಂಗೀತವೂ ಚೇತೋಹಾರಿ. ಬಹುತೇಕ ಚಿತ್ರ ಒಂದೇ ಬಂಗಲೆಯಲ್ಲಿ, ಜಯರಾಮ್ – ಸರಿತಾ ಪಾತ್ರಗಳಲ್ಲೇ ನಡೆಯುತ್ತದೆ. ಛಾಯಾಗ್ರಾಹಕ – ಸಂಕಲನಕಾರರಿಬ್ಬರಿಗೂ ಚಾಲೆಂಜ್ ಎನಿಸುವ ಈ ಚಿತ್ರ, ತಮಿಳು ಸಿನಿಮಾದ ಅತ್ಯುತ್ತಮ ’ಸೈಕೋ-ಥ್ರಿಲ್ಲರ್’. ಮಹೇಂದ್ರರ ತಮ್ಮ ’ಮೂಡುಪನಿ’ ಚಿತ್ರದ ಛಾಯೆಯನ್ನು ಅಲ್ಲಲ್ಲಿ ಉಳಿಸಿಕೊಂಡಿದ್ದರೂ, ಇಡೀ ಚಿತ್ರ ವಿಭಿನ್ನವಾಗಿ ಮೂಡಿಬಂತು. ಸ್ಟೀಫನ್ ಕಿಂಗ್ ಬರೆದ ’ಮಿಸರಿ’ ಎಂಬ ಥ್ರಿಲ್ಲರ್ ಕಾದಂಬರಿ ಆಧರಿಸಿದ್ದರೂ, ಮಹೇಂದ್ರ ಅದನ್ನು ಅಪ್ಪಟ ತಮಿಳು ವಾತಾವರಣಕ್ಕೆ ಒಗ್ಗಿಸಿದರು.

1977ರಲ್ಲಿ ಕನ್ನಡದ ’ಕೋಕಿಲಾ’ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದ ಮಹೇಂದ್ರ, ಆ ಚಿತ್ರಕ್ಕೆ ’ಶ್ರೇಷ್ಠ ಛಾಯಾಗ್ರಾಹಕ’ರೆಂದು ರಾಷ್ಟ್ರಪ್ರಶಸ್ತಿಗೂ ಭಾಜನರಾದರು. ಕಮಲ್ – ಶೋಭಾ – ಮೋಹನ್ ಅಭಿನಯದ ಈ ಚಿತ್ರ ತಮಿಳಿಗೆ ಡಬ್ ಆಗದೆಯೇ ಪಕ್ಕದ ಮದರಾಸಿನಲ್ಲಿ 140 ದಿನ ಸತವಾಗಿ ಓಡಿತು. ನಂತರ ಮತ್ಯಾವ ಕನ್ನಡ ಚಿತ್ರಗಳೂ ತಮಿಳುನಾಡಿನಲ್ಲಿ ಅಂತಹ ಯಶಸ್ಸು ಕಂಡಿದ್ದಿಲ್ಲ. ಅವರ ನಿರ್ದೇಶನದ ’ಸತಿ-ಲೀಲಾವತಿ’ಕನ್ನಡದಲ್ಲಿ ’ರಾಮಶಾಮಭಾಮ’ಆಗಿ ಯಶಸ್ಸು ಕಂಡಿತು. ’ವೀಡು’ ಚಿತ್ರಕ್ಕೆಂದೇ ಮನೆ ಕಟ್ಟಲು ಆರಂಭಿಸಿದ ಮಹೇಂದ್ರ ನಂತರ ಅದನ್ನು ತಮ್ಮ ’ಸಿನಿಮಾ ಶಾಲೆ’ ಮಾಡಿದರು. ಇಳಿವಯಸ್ಸಿನ – ತಿರಸ್ಕಾರಕ್ಕೊಳಗಾದ ಚೊಕ್ಕಲಿಂಗಮ್ ಎಂಬ (ಚೊಕ್ಕಲಿಂಗ ಭಾಗವತರ್) ವೃದ್ಧನ ಕಥೆಯನ್ನು ಹೆಚ್ಚು ಮೆಲೋಡ್ರಾಮಾಗಳಿಲ್ಲದೇ ಚಿತ್ರಿಸಿದ ’ಸಂಧ್ಯಾರಾಗಮ್’, ಮಹೇಂದ್ರ ನಿರ್ದೇಶಿಸಿದ ಮತ್ತೊಂದು ಸ್ಮರಣೀಯ ಚಿತ್ರ. ಈ ಚಿತ್ರ ಕೊನೆಗೂ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ಆದರೆ ಚೆನ್ನೈನ ದೂರದರ್ಶನ (ಪೊದಿಗೈ) ನಲ್ಲಿ ಆಗಾಗ ಪ್ರಸಾರವಾಗುತ್ತಿರುತ್ತದೆ.

ಮಹೇಂದ್ರರ ಪಾತ್ರ ಸೃಷ್ಟಿ, ಕಥಾ ಸಂವಿಧಾನ, ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲಿ ತೋರಿಸುತ್ತಿದ್ದ ಸೂಕ್ಷ್ಮತೆ, ಕಥೆಯನ್ನು ’ಹೇಳು’ತ್ತಿದ್ದ ರೀತಿ, ಇಳಯರಾಜಾರನ್ನು ಬಳಸಿಕೊಂಡ ವಿಧಾನ…. ಅವಿಸ್ಮರಣೀಯ. ’ಮೂಂಡ್ರಾಂ ಪಿರೈ’ನ ಕಮಲ್, ’ವೀಡು’ ವಿನ ಅರ್ಚನ, ’ಸಂಧ್ಯಾರಾಗಂ’ನ ಚೊಕ್ಕಲಿಂಗ ಭಾಗವತರ್.. ನಿಜಕ್ಕೂ ಆ ಪಾತ್ರಗಳನ್ನು ಅಭಿವ್ಯಕ್ತಿಸಲೇ ಹುಟ್ಟಿದರೇನೋ. ಮಹೇಂದ್ರ ಸೃಷ್ಟಿಸಿದ ಅದ್ಭುತ ಪಾತ್ರಗಳಿವು. ’ವೀಡು’ಮತ್ತು ’ಸಂಧ್ಯಾರಾಗಮ್’ ಬಗ್ಗೆ ಸ್ವತಃ ಮಹೇಂದ್ರ ಬಹಳ ಸಂದರ್ಶನಗಳಲ್ಲಿ ಮಾತನಾಡಿದ್ದರು. ಅವರಿಗೇ ಇಷ್ಟವಾಗಿದ್ದ ಚಿತ್ರಗಳಿವು.

ಮಣಿರತ್ನಂ ತಮ್ಮ ಮೊದಲ ಚಿತ್ರ ’ಪಲ್ಲವಿ ಅನುಪಲ್ಲವಿ’ ಮಾಡಲು ಹೊರಟಾಗ, ಛಾಯಾಗ್ರಹಣಕ್ಕೆ ಅವರು ಮಾಡಿದ ಆಯ್ಕೆ ಪಿ.ಸಿ.ಶ್ರೀರಾಂ. ಆದರೆ ಚಿತ್ರದ ನಿರ್ಮಾಪಕರು ’ಮೊದಲ ಚಿತ್ರ ಬೇರೆ… ಯಾರಾದರೂ ಒಳ್ಳೆಯ ಕಸುಬುದಾರರನ್ನ ಹುಡುಕು…’ ಎಂದರು. ಶ್ರೀರಾಂ ಇಂದು ಭಾರತೀಯ ಸಿನಿಮಾ ಕಂಡ ಶ್ರೇಷ್ಠ ತಂತ್ರಜ್ಞರಲ್ಲೊಬ್ಬರು. ಆದರೆ ಅಂದು ಅವರಿಗೆ ಅವಕಾಶಗಳು ಸಿಕ್ಕಿರಲಿಲ್ಲ. ಭಯ – ಸಂಕೋಚಗಳಿಂದ ಮಣಿರತ್ನಂ, ಬಾಲು ಮಹೇಂದ್ರರನ್ನು ಭೇಟಿಯಾದರು. ’ನನ್ನ ಮೊದಲ್ ಸಿನಿಮಾ ಸಾರ್… ಕ್ಯಾಮೆರಾ ಕೆಲಸ ಪೂರ್ತಿ ನಿಮ್ಮದೇ…ದಯವಿಟ್ಟು ಇಲ್ಲಾ ಎನ್ನಬೇಡಿ’ ಎಂದು ವಿನಂತಿಸಿಕೊಂಡರು. ಮಣಿರತ್ನಂರನ್ನು ಮೇಲಿಂದ ಕೆಳಗೆ ಒಮ್ಮೆ ನೋಡಿದ ಮಹೇಂದ್ರ ಚಿತ್ರದ ಕಥೆ ಕೇಳಿದರು. ’ಗುಡ್…ಸಂಗೀತ ರಾಜಾದು ತಾನೇ’ ಎಂದು ದೃಢಪಡಿಸಿಕೊಂಡರು..’ ಸಿನಿಮಾ ಬ್ಯಾಂಗ್ಳೂರ್ ನಲ್ಲೇ ಮಾಡೋಣ..ನಿನ್ನ ಸ್ಕ್ರಿಪ್ಟ್ ನ ಮೂಡ್ ಗೆ ಬಹಳ ಹೊಂದುತ್ತೆ’ ಎಂದರು. ಮಣಿರತ್ನಂ ಚಿತ್ರೀಕರಣ ಆರಂಭಿಸಿಯೇ ಬಿಟ್ಟರು. 80ರ ದಶಕದ ಅಂದಿನ ಬೆಂಗಳೂರನ್ನು (ಮಹೇಂದ್ರರ ಬ್ಯಾಂಗ್ಳೂರ್ ) ನೋಡಲೆಂದೇ ನಾನು ಆಗಾಗ ಈ ಚಿತ್ರ ನೋಡುತ್ತಿರುತ್ತೇನೆ. ಮಹೇಂದ್ರರ ದೃಶ್ಯಚಿತ್ರಣದಲ್ಲೇ ಒಂದು ಮಾದಕತೆ ಇದೆ.

ಮಹೇಂದ್ರರ ಬಾಳಿನಲ್ಲಿ ಪ್ರತಿಭಾವಂತ ನಟಿ ಶೋಭಾ ಪ್ರವೇಶಿಸಿ ಮಿಂಚಿಮಾಯವಾದ ಪರಿಯೇ ’ಮೂಂಡ್ರಾಂ ಪಿರೈ’ನಲ್ಲಿ ಕಥಿತವಾಯಿತು. ಶ್ರೀದೇವಿ ’ಶೋಭ’ ಆದರೋ ಇಲ್ಲವೋ.. ಕಮಲ್ ಮಹೇಂದ್ರರ ಹತಾಶೆ, ಅಸಹಾಯಕತೆಗಳನ್ನೆಲ್ಲಾ ಚಿತ್ರದ ಕೊನೆಯ ಆ ಐದು ನಿಮಿಷಗಳಲ್ಲಿ ಹೊರಹೊಮ್ಮಿಸಿದರು. ಹಿಚ್ ಕಾಕ್ ರ ’ಸೈಕೋ’ನಿಂದ ’ಪ್ರೇರಿತ’ರಾಗಿ ’ಮೂಡುಪನಿ’ ಮಾಡಿದ ಮಹೇಂದ್ರ, ಪ್ರತಾಪ್ ಪೋತನ್. ಮೋಹನ್ ರಿಬ್ಬರಿಗೂ ತಮಿಳುಸಿನಿಮಾದಲ್ಲಿ ಸ್ಥಾನವೊಂದನ್ನು ಕಲ್ಪಿಸಿದರು. ಭಾರತಿರಾಜ ’ಸಿಗಪ್ಪು ರೋಜಾಗಳ್’ ಎಂಬ ಭಾರಿ ಯಶಸ್ಸಿನ ಚಿತ್ರ ಮಾಡಿದ್ದಕ್ಕೆ ಪ್ರೇರಣೆಯೇ ಮಹೇಂದ್ರರ ’ಮೂಡುಪನಿ’. ಬಹುತೇಕ ತಮ್ಮೆಲ್ಲಾ ಚಿತ್ರಗಳಿಗೂ ತಾವೇ ಸ್ವತಃ ಕಥೆಗಾರ – ಸಂಕಲನಕಾರ – ಛಾಯಾಗ್ರಾಹಕ – ನಿರ್ದೇಶಕರಾಗಿದ್ದ ಮಹೇಂದ್ರ, ಕಪ್ಪು- ಬಿಳಿಪು, ವರ್ಣ ಛಾಯಾಗ್ರಹಣಗಳೆರಡೂ ವಿಭಾಗಗಳಲ್ಲಿ (ಕೋಕಿಲ – ಮೂಂಡ್ರಾಂ ಪಿರೈ) ರಾಷ್ಟ್ರಪ್ರಶಸ್ತಿ ಪಡೆದ ಅಪರೂಪದ ತಂತ್ರಜ್ಞ.

ಎಮ್.ಜಿ.ಆರ್. ತರಹ ಮಹೇಂದ್ರ ಕೂಡಾ ಮೂಲತಃ ಶ್ರೀಲಂಕಾದಲ್ಲಿ ಹುಟ್ಟಿ ಬೆಳೆದ ಸಿಂಹಳೀಯ ತಮಿಳ. ಇಂಗ್ಲೆಂಡ್‌ನಲ್ಲಿ ಪದವಿ ಪಡೆದು ಭಾರತಕ್ಕೆ ಬಂದು, ಪುಣೆಯ FTTI ಶಾಲೆಯಲ್ಲಿ ಸಿನಿಮಾ ಕಲಿತ ಮಹೇಂದ್ರ ತಾವೇ ಒಂದು ಶಾಲೆಯಾದರು. ಬಾಲ – ಚೇರನ್ –ವೆಟ್ರಿಮಾರನ್ – ಅಮೀರ್ ತರಹದ ನಿರ್ದೇಶಕರನ್ನು ಬೆಳಕಿಗೆ ತಂದ, ಸಂತೋಷ್ ಶಿವನ್ – ರವಿಚಂದ್ರನ್ -ಶ್ರೀರಾಮ್ ತರಹದ ತಂತ್ರಜ್ಞರಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಮಹೇಂದ್ರ, ಬೆಂಗಳೂರಿನಲ್ಲಿರಲು (ಬಹುತೇಕ ತಮಿಳರಂತೆ) ಇಷ್ಟಪಡುತ್ತಿದ್ದರು. ಅವರಿಗೆ ಅಪಾರ ಹೆಸರು ತಂದುಕೊಟ್ಟ ’ಕೋಕಿಲಾ’ ಮತ್ತು ’ಮೂಡುಪನಿ’ಬೆಂಗಳೂರಿನಲ್ಲೇ ಚಿತ್ರಿತವಾದವು.

“ನಮ್ ಸಿನಿಮಾದು ತುಂಬಾ ಡಿಫರೆಂಟ್ ಕಾನ್ಸೆಪ್ಟು ಸಾರ್… ಈ ತರದ್ ಕಾನ್ಸೆಪ್ಟ್ ಯಾರೂ ಇವತ್ ವರ್ಗೂ ಮಾಡಿಲ್ಲಾ… ಮೂರು ಟ್ರ್ಯಾಕ್ ಗಳಲ್ಲಿ ಸ್ಟೋರೀ ಒಡ್ತಾಇರುತ್ತೆ…” ಎಂದೆಲ್ಲಾ ಇನ್ನೂ ಬಿಡುಗಡೆಯಾಗದ ತಮ್ಮ ಚಿತ್ರಗಳ ಬಗ್ಗೆ ಹೃದಯವಿದ್ರಾವಕವಾಗಿ ಕೊಚ್ಚುವ ಹೊಸ ತಲೆಮಾರಿನ ನಿರ್ದೇಶಕರೆಲ್ಲಾ ಒಮ್ಮೆ ಬಾಲು ಮಹೇಂದ್ರರ ಸಿನಿಮಾ, ಅವರ ಮೇಕಿಂಗ್ ಅನ್ನು ಅಭ್ಯಸಿಸಬೇಕು.

ದುರದೃಷ್ಟವಶಾತ್, ಅವರ ’ಸಂಧ್ಯಾರಾಗಂ’ಚಿತ್ರದ ನೆಗಟಿವ್ ಗಳು ಲಬ್ಧವಿಲ್ಲ. ಬಾಲಚಂದರ್ ರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟ ’ತಣ್ಣೀರ್-ತಣೀರ್’ ಚಿತ್ರ ದ ನೆಗಟಿವ್ ಗಳೂ ಇಲ್ಲ. ಕನ್ನಡ ಸಿನಿಮಾವನ್ನು ಒಂದು ವಿಶಿಷ್ಟ ಹಂತಕ್ಕೆ ಕೊಂಡುಹೋದ ’ಒಂದಾನೊಂದು ಕಾಲದಲ್ಲಿ’ಚಿತ್ರದ ನೆಗಟಿವ್ ಗಳೂ ಕೂಡಾ ಇಲ್ಲ… ಇಳಯರಾಜಾ’ಎಂಬಾತ ಇಲ್ಲದಿದ್ದರೆ ನಾನು ಸಿನಿಮಾನೇ ಮಾಡುತ್ತಿರಲಿಲ್ಲ’ ಎಂದು ಮಹೇಂದ್ರ ಒಮ್ಮೆ ಭಾವುಕರಾಗಿ ನುಡಿದಿದ್ದರು. ಮಹೇಂದ್ರ ಚಿತ್ರಗಳ ಅವಿಭಾಜ್ಯ ಅಂಗ, ರಾಜಾರ ಸಂಗೀತ ಸಂಯೋಜನೆ.

ಊಟಿಯಲ್ಲಿ ‘ಮೂಂಡ್ರಂ ಪಿರೈ’ (1982) ತಮಿಳು ಸಿನಿಮಾ ಚಿತ್ರೀಕರಣದ ಸಂದರ್ಭ. ಕಲಾವಿದರಾದ ಕಮಲ ಹಾಸನ್ ಮತ್ತು ಶ್ರೀದೇವಿ ಅವರೊಂದಿಗೆ ಚಿತ್ರದ ನಿರ್ದೇಶಕ ಬಾಲು ಮಹೇಂದ್ರ ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.