
ಶ್ರೀಧರಮೂರ್ತಿ
ಹಿರಿಯ ಪತ್ರಕರ್ತ, ಲೇಖಕ
ಡೋಲಕ್‍ನಿಂದ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದ ಜಗತ್ತಿನ ಏಕೈಕ ಸಂಗೀತ ನಿರ್ದೇಶಕ ಸತ್ಯಂ. ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ 36 ವರ್ಷಗಳಲ್ಲಿ 312 ತೆಲುಗು, 131 ಕನ್ನಡ, 10 ತಮಿಳು ಮತ್ತು ತಲಾ ಒಂದೊಂದು ಹಿಂದಿ ಮತ್ತು ಮಲೆಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಈಗಂತೂ ಸಿನಿಮಾದಲ್ಲಿ ಸಾಮಾನ್ಯವಾಗಿ ಮ್ಯೂಸಿಕ್ ಕಂಪೋಸ್ ಆಗುವುದು ಕೀ ಬೋರ್ಡ್‍ನಿಂದ, ಹಿಂದೆಲ್ಲಾ ಹಾರ್ಮೋನಿಯಂನಿಂದ ಕಂಪೋಸ್ ಮಾಡ್ತಾ ಇದ್ದರು. ವೀಣೆ, ಪಿಯಾನೋ, ಗಿಟಾರ್‍ಗಳಿಂದಲೂ ಕಂಪೋಸ್ ಮಾಡುವವರು ಇದ್ದರು. ಆದರೆ ಡೋಲಕ್‍ನಿಂದ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದ ಜಗತ್ತಿನ ಏಕೈಕ ಸಂಗೀತ ನಿರ್ದೇಶಕ ಎಂದರೆ ಸತ್ಯಂ. ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ 36 ವರ್ಷಗಳಲ್ಲಿ 312 ತೆಲುಗು, 131 ಕನ್ನಡ, 10 ತಮಿಳು ಮತ್ತು ತಲಾ ಒಂದೊಂದು ಹಿಂದಿ ಮತ್ತು ಮಲೆಯಾಳಂ ಚಿತ್ರಗಳಿಗೆ ಸಂಗೀತ ನೀಡಿದ್ದ ದಾಖಲೆ ಅವರದು.
ಸತ್ಯಂ ಜನಿಸಿದ್ದು 1931ರ ಮೇ 17ರಂದು ಸ್ವರಘಟ್ಟಂ ಎನ್ನುವ ಆಂದ್ರಪ್ರದೇಶದ ಕುಗ್ರಾಮದಲ್ಲಿ. ಅವರ ತಂದೆ ಹನುಮಂತಂ ಭಾಗವತ ಮೇಳಗಳಿಗೆ ಪ್ರಸಿದ್ಧರು. ಅವರ ಹಾಡುಗಾರಿಕೆ ಎಂದರೆ ಹತ್ತೂರು ಸೇರುತ್ತಿತ್ತು. ತಾತ ಕೂಡ ಹಾಡುಗಾರಿಕೆಗೆ ಹೆಸರಾದವರು. ತಂದೆ ಹಾಡುಗಾರಿಕೆಯಲ್ಲಿ ಮಾತ್ರವಲ್ಲ ಸಿರಿವಂತಿಕೆಯಲ್ಲಿಯೂ ಹೆಸರು ಮಾಡಿದವರು. ಹತ್ತು ಹಳ್ಳಿಗೆ ಹೆಸರಾದ ಜಹಗೀರುದಾರರು. ತಂದೆಗೆ ಮಗ ಉನ್ನತ ಸರ್ಕಾರಿ ಅಧಿಕಾರಿ ಆಗಲಿ ಎನ್ನುವ ಕನಸು. ಮಗನಿಗೂ ಓದಿಗಿಂತಲೂ ಸಂಗೀತದತ್ತಲೇ ಆಸಕ್ತಿ. ಕುಂಟುತ್ತಲೇ ಸಾಗಿದ ವಿದ್ಯಾಭ್ಯಾಸ ಹೈಸ್ಕೂಲ್‍ಎರಡನೇ ವರ್ಷದಲ್ಲಿ ನಪಾಸಾಗುವುದರೊಂದಿಗೆ ನಿಂತಿತು. ತಂದೆಯ ಉಗ್ರಶಿಕ್ಷೆಗಳ ಅನುಭವ ಪಡೆದಿದ್ದ ಬಾಲಕ ಸತ್ಯಂ ಮನೆ ಬಿಟ್ಟು ಓಡುವ ನಿರ್ಧಾರಕ್ಕೆ ಬಂದರು. ಸಕಲ ಐಶ್ವರ್ಯದ ಬದುಕನ್ನು ತ್ಯಜಿಸಿ ಕಾಕಿನಾಡದ ‘ಹ್ಯಾಪಿ ಹೋಂ’ನಲ್ಲಿ ಅನಾಥ ಎಂದು ಸುಳ್ಳು ಹೇಳಿ ಸೇರಿಕೊಂಡರು. ಬಡ ವಿದ್ಯಾರ್ಥಿಗಳಿಗೆ ಫೀಸ್, ಬಟ್ಟೆ, ಊಟ ಎಲ್ಲವನ್ನೂ ನೀಡುತ್ತಿತ್ತು.
ಆಗ ಇದೇ ಸಂಸ್ಥೆಯಲ್ಲಿ ಮುಂದೆ ಖ್ಯಾತರಾದ ಎಸ್.ವಿ.ರಂಗರಾವ್, ಅಂಜಲಿದೇವಿ, ರೇಲಂಗಿ ಮೊದಲಾದವರು ಕಲಿಯುತ್ತಿದ್ದರು. ಅವರೆಲ್ಲರ ಒಡನಾಟ ಸತ್ಯಂ ಅವರನ್ನು ಸಂಗೀತ ಕ್ಷೇತ್ರದಲ್ಲಿ ಬೆಳೆಯುವಂತೆ ಮಾಡಿತು.‘ಕುಹೋ ಕುಹೋ ಬೋಲೇಕೋ ಇನಿಯಾ’ದಂತಹ ಅಮರಗೀತೆ ನೀಡಿದ ಆದಿ ನಾರಾಯಣರಾವ್ ಸತ್ಯಂ ಅವರನ್ನು ಮುಂದೆ ತಮ್ಮ ಸಹಾಯಕರಾಗಿ ನೇಮಿಸಿ ಕೊಂಡರು. ಅಲ್ಲಿ ಸಹಾಯಕ ಸಂಗೀತ ನಿರ್ದೇಶಕನಿಂದ ಪ್ರೊಡಕ್ಷನ್ ಬಾಯ್‍ವರೆಗೆ ಸತ್ಯಂ ಅವರದು ದಶಾವತಾರ. ಯಾವ ವಾದ್ಯಗಾರ ಬಾರದಿದ್ದರೂ ಅವನ ಬದಲಿಗೆ ನುಡಿಸುವ ನಿಪುಣತೆಯನ್ನು ಪಡೆದುಕೊಂಡರು. ಡೋಲಕ್‍ನಿಂದ ಅವರು ಹೆಸರು ಮಾಡಿದ್ದೂ ಕೂಡ ಈ ಹಂತದಲ್ಲಿಯೇ. ಆಗ ತೆಲುಗಿನಿಂದ ಸಾಕಷ್ಟು ಚಿತ್ರಗಳು ಹಿಂದಿಗೆ ಡಬ್ ಆಗುತ್ತಿದ್ದವು. ಹಿಂದಿ ಚಿತ್ರರಂಗದ ಒಡನಾಟ ಕೂಡ ಸತ್ಯಂ ಅವರಿಗೆ ಈ ಮೂಲಕವೇ ದೊರಕಿತು.
ಮದ್ರಾಸಿನಲ್ಲಿರುವ ‘ಫಿಲಂ ಸೆಂಟರ್ ಸ್ಟುಡಿಯೋ’ ಕಲಾಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಎಲ್ಲಾ ಭಾಷೆಯ ಪ್ರತಿಭಾವಂತರೂ ಅಲ್ಲಿ ಸೇರುತ್ತಿದ್ದರು. ಇಲ್ಲಿ ಸತ್ಯಂ ಅವರ ಪ್ರತಿಭೆಯನ್ನು ಕಂಡ ಸಂಕಲನಕಾರ ಬಾಲ್‍ಜಿ ಯಾದವ್ ಚಿತ್ರನಿರ್ಮಾಣಕ್ಕೆ ಸಿದ್ದರಾಗಿದ್ದ ಎಂ.ಎಸ್.ನಾಯಕ್ ಅವರ ಗಮನಕ್ಕೆ ತಂದರು. ಹೀಗೆ ಸತ್ಯಂ ‘ಶ್ರೀರಾಮಾಂಜನೇಯ ಯುದ್ಧ’ದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಈ ಚಿತ್ರದ ‘ಹನುಮನ ಪ್ರಾಣ ಪ್ರಭುರಘರಾಮ’ ‘ಜಗದೀಶನಾಡುವ ಜಗವೇ ನಾಟಕರಂಗ’ಮೊದಲಾದ ಗೀತೆಗಳು ಜನಪ್ರಿಯವಾಗಿ ಸತ್ಯಂ ಹೆಸರು ಎಲ್ಲಿಲ್ಲೆಯೂ ಕೇಳಿ ಬಂದಿತು. ಹಿಂದಿ ಚಿತ್ರರಂಗದೊಂದಿಗೆ ಹೊಂದಿದ್ದ ಬಾಂದವ್ಯದಿಂದ ‘ಒಂದೇ ಬಳ್ಳಿಯ ಹೂಗಳು’ಚಿತ್ರದಲ್ಲಿ ಸತ್ಯಂ ಮಹಮದ್ ರಫಿಯವರಿಂದ ‘ನೀನೆಲ್ಲಿ ನಡೆವೆ ದೂರ’ಗೀತೆಯನ್ನು ಹಾಡಿಸಿದರು. ‘ಗಾಂಧಿನಗರ’ ಚಿತ್ರಕ್ಕೆಅವರು ಸಂಯೋಜಿಸಿದ ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ’ ಇನ್ನೊಂದು ಜನಪ್ರಿಯಗೀತೆ ಎನ್ನಿಸಿಕೊಂಡಿತು. ಚದುರಂಗ ‘ಸರ್ವಮಂಗಳ’ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನಾಗಿ ಸತ್ಯಂ ಅವರನ್ನುಆಯ್ಕೆ ಮಾಡಿದಾಗ ಹಲವರು ಟೀಕಿಸಿದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಸತ್ಯಂ ‘ಉಂಡಾಡ ಬಹುದು’ಎನ್ನುವ ದಾಸರ ಕೀರ್ತಿನೆ, ‘ಕತ್ತೆಯ ಮರಿ ಚಂದ’ಎನ್ನುವ ಜನಪದ ಗೀತೆ, ‘ನನ್ನವಳು ನನ್ನದೆಯ ಹೊನ್ನಾಡನಾಡುವಳು’ಎನ್ನುವ ಭಾವಗೀತೆ ಹೀಗೆ ವೈವಿದ್ಯಮಯ ಗೀತೆಗಳನ್ನು ಆ ಚಿತ್ರಕ್ಕೆ ಸಂಯೋಜಿಸಿ ತಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟರು.

‘ಭಲೇ ಭಾಸ್ಕರ್’ಚಿತ್ರದಲ್ಲಿ ‘ಏಳೇಳು ಶರಧಿಯ’ ಎಂಬ ರಂಗಗೀತೆಯನ್ನು ಸೊಗಸಾಗಿ ಸಂಯೋಜಿಸಿದ ಸತ್ಯಂ ‘ನಾಗ ಕನ್ಯೆ’ಚಿತ್ರದಲ್ಲಿ ‘ಸಾಗಲಿ ಗುರಿ ಸೇರಲಿ’ ಎನ್ನುವ ತತ್ವಪದವನ್ನು ಸಂಯೋಜಿಸಿದರು. ಫಾಸ್ಟ್‌ಟ್ರ್ಯಾಕ್ ಗೀತೆಗಳನ್ನು ಸಂಯೋಜಿಸುವಲ್ಲಿ ಕೂಡ ಅವರದು ಹೊಸತನ. ‘ಅಪರಾಧಿ’ಸಿನಿಮಾದಲ್ಲಿನ ‘ಓ ರಮ್ಮಿ ಬಾರಮ್ಮಿಕೂಡಿ ಆಡೋಣ’ಗೀತೆಯನ್ನು ವಿಭಿನ್ನವಾಗಿ ಸಂಯೋಜಿಸಿದ್ದರು. ಗಂಭೀರ ಗೀತೆಗಳನ್ನೇ ಬರೆಯುವಲ್ಲಿ ಹೆಸರು ಮಾಡಿದ್ದ ಅವರ ಆತ್ಮೀಯ ಗೆಳೆಯ ವಿಜಯನಾರಸಿಂಹ ಅವರಿಂದ ಈ ಗೀತೆ ಬರೆಸುವಲ್ಲಿ ಸತ್ಯಂ ಯಶಸ್ವಿಯಾಗಿದ್ದರು. ‘ನಾಗರಹೊಳೆ’ಚಿತ್ರದ ಕಾಡು ಜನರ ಹಾಡು ‘ಜೈಗಿರಿಜೆ ಅಬ್ಬೆ ನಕ್ಕಾಳ’ ಅವರ ಇನ್ನೊಂದು ವಿಶಿಷ್ಟ ಪ್ರಯೋಗ. ‘ಸಹೋದರರ ಸವಾಲ್’ ಚಿತ್ರದ ‘ಓ ನಲ್ಲನೆ ಸವಿ ಮಾತೊಂದ’ಸೆಕೆಂಡ್ ಫಾಲೋ ಮಾದರಿಯ ಅತ್ಯುತ್ತಮ ಸಂಯೋಜನೆ ಎನ್ನಿಸಿಕೊಂಡಿದೆ. ‘ಸೀತಾರಾಮು’, ‘ಸವತಿಯ ನೆರಳು’, ‘ತಾಯಿಯ ಮಡಲಿಲ್ಲ’ಇದೇ ಹಂತದಲ್ಲಿ ಅವರಿಗೆ ಅಪಾರ ಜನಪ್ರಿಯತೆಯನ್ನುತಂದುಕೊಟ್ಟಂತಹ ಚಿತ್ರಗಳು. ದಾಸರಿ ನಾರಾಯಣರಾವ್ ಅವರ ನಿರ್ದೇಶನದ ‘ಸಪ್ನ’ವಂತೂ ಅವರ ಸಂಗೀತ ವೈವಿಧ್ಯಕ್ಕೆ ಅತ್ಯುತ್ತಮ ಉದಾಹರಣೆ ಎನ್ನಿಸುವಂತಹ ಚಿತ್ರವಾಗಿದೆ.
ವಿಷ್ಣುವರ್ಧನ್ ಅಭಿನಯದ ‘ಸಾಹಸಸಿಂಹ’ ಮತ್ತು ಡಾ.ರಾಜ್‍ಕುಮಾರ್ ಅಭಿನಯದ ‘ಕೆರಳಿದ ಸಿಂಹ’ ಇಬ್ಬರೂ ಮೇರುನಟರ ಅಭಿಮಾನಿಗಳ ನಡುವೆ ಇರಸು ಮುರುಸಿನ ಘಟನೆಗೆ ಕಾರಣವಾದ ಚಿತ್ರಗಳು. ವಿಶೇಷ ಎಂದರೆ ಈ ಎರಡೂ ಚಿತ್ರಗಳಿಗೆ ಸಂಗೀತ ನೀಡಿದ್ದವರು ಸತ್ಯಂ ಅವರೇ. ಎರಡೂ ಚಿತ್ರದ ಗೀತೆಗಳು ವಿಭಿನ್ನವಾಗಿದ್ದವು ಹಾಗೆ ಜನಪ್ರಿಯವಾದವು ಕೂಡ. ‘ಧರ್ಮ’ಚಿತ್ರದ ‘ಆಕಾಶ ಭೂಮಿಗಳ ಒಂದು ಮಾಡಿ ನಿಂತ’ ‘ಬೆಟ್ಟದತಾಯಿ’ಚಿತ್ರದ ‘ಅಯಗಿರಿ ನಂದಿನಿ’ ಮೊದಲಾದ ಭಕ್ತಿಗೀತೆಗಳನ್ನೂ ಕೂಡ ಅವರು ಬಹಳ ಸೊಗಸಾಗಿ ಸಂಯೋಜನೆ ಮಾಡಿದ್ದರು. ‘ಕನ್ನಡದ ರವಿ ಮೂಡಿ ಬಂದ’, ‘ಕನ್ನಡಮ್ಮನದೇವಾಲಯ’, ‘ಇದೇ ನಾಡುಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ’ ಮೊದಲಾದ ಕನ್ನಡಪರ ಗೀತೆಗಳನ್ನೂ ಅವರು ಮಧುರವಾಗಿ ನೀಡಿದ್ದಾರೆ. ‘ತಿರುಗು ಬಾಣ’ ಚಿತ್ರದ ‘ಇದೇ ನಾಡು ಇದೇ ಭಾಷೆ’ ಗೀತೆಯಲ್ಲಿ ಅವರು ಆರ್ಕೆಸ್ಟ್ರಾ ನಿಯಂತ್ರಣ ಮಾಡುವ ದೃಶ್ಯವನ್ನುತೆರೆಯ ಮೇಲೆ ಇಂದಿಗೂ ನೋಡ ಬಹುದಾಗಿದೆ.
ತೆಲುಗಿನಲ್ಲಿ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದರೂ ಸತ್ಯಂ ಕನ್ನಡಕ್ಕೆ ಆದ್ಯತೆ ನೀಡಿದರು. ‘ಕನ್ನಡದಲ್ಲಿ ಸಿಕ್ಕಷ್ಟು ಮಧುರತೆಯ ಅವಕಾಶ ನನಗೆ ಬೇರೆ ಭಾಷೆಗಳಲ್ಲಿ ದೊರಕಿಲ್ಲ’ಎಂದು ಸ್ಪಷ್ಟವಾಗಿಯೇ ಹೇಳಿದ್ದರು. ಯಾಂತ್ರೀಕೃತ ಸಂಗೀತ ಸಂಯೋಜನೆ ಅದರಲ್ಲಿಯೂ ಕಂಪ್ಯೂಟರ್‍ಗಳಿಂದ ಆರಂಭವಾದಾಗ ವಿರೋಧಿಸಿದವರಲ್ಲಿ ಸತ್ಯಂ ಅವರೇ ಮೊದಲಿಗರು. ‘ಇದರಿಂದ ಸ್ವಂತಿಕೆ ಕಳೆದು ಹೋಗುತ್ತದೆ, ಲಿರಿಕ್ಸ್‍ಗೆ ಪ್ರಾಧಾನ್ಯತೆ ಕಳೆದು ಹೋಗುತ್ತದೆ’ಎಂದು ಒತ್ತಿ ಹೇಳಿದ್ದರು. ಅವರ ಮಾತಿನ ನಿಜವಾದ ಅರ್ಥವನ್ನು ನಾವು ಇವತ್ತು ಕಾಣುತ್ತಿದ್ದೇವೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಕೂಡ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮೇರುಗಾಯಕರಾಗಿ ಬೆಳೆಯಲು ಸತ್ಯಂ ಸಂಗೀತ ಕಾರಣವಾಗಿತ್ತು. ಕನ್ನಡದಲ್ಲಿ ‘ರೌಡಿರಂಗಣ್ಣ’ದಿಂದ ಆರಂಭಿಸಿ ‘ಅಪರಾಧಿ’ ‘ನಾಗರಹೊಳೆ’ ‘ಸಹೋದರರ ಸವಾಲ್’ ‘ತಾಯಿಯ ಮಡಿಲಲ್ಲಿ’ ‘ಸಪ್ನ’ ‘ದೇವರ ಆಟ’ ‘ಚೆಲ್ಲಿದರಕ್ತ’ ‘ಸಾಹಸಿಂಹ’ ‘ಗರುಡರೇಖೆ’ ‘ತಿರುಗುಬಾಣ’ ‘ಬ್ರಹ್ಮಾಸ್ತ್ರ’ ಹೀಗೆ ಹಲವಾರು ಚಿತ್ರಗಳಲ್ಲಿ ಅವರ ಕಾಂಬಿನೇಷನ್ ಯಶಸ್ವಿಯಾಗಿರುವುದನ್ನು ನಾವು ನೋಡ ಬಹುದು.
ಸಂಗೀತವನ್ನೇ ಆರಾಧಿಸಿದ ಸತ್ಯಂ ಎಂದಿಗೂ ಅದನ್ನು ವ್ಯವಹಾರಿಕವಾಗಿ ನೋಡಲಿಲ್ಲ. ಬಡ ನಿರ್ಮಾಪಕರ ಪಾಲಿಗೆ ಹೀಗಾಗಿ ಅವರು ‘ಕಾಮಧೇನು’ಎನ್ನಿಸಿ ಕೊಂಡಿದ್ದರು. ಎಷ್ಟೋ ಚಿತ್ರಗಳಿಗೆ ಅವರು ನಿಧಾನಕ್ಕೆ ಹಣ ಕೊಡಿ ಪರವಾಗಿಲ್ಲಎನ್ನುತ್ತಿದ್ದ ಸಹೃದಯತೆ ಅವರದು. ಆದರೆ ಸತತ ಕೆಲಸದ ಒತ್ತಡವನ್ನು ಅವರ ದೇಹ ತಡೆದು ಕೊಳ್ಳಲಿಲ್ಲ. 1989ರ ಜನವರಿ 14ರಂದು ತೀವ್ರ ಹೃದಯಾಘಾತಕ್ಕೆ ಬಲಿಯಾದಾಗ ಅವರಿಗೆ ಕೇವಲ 58 ವರ್ಷಗಳು ಮಾತ್ರ. ‘ನ್ಯಾಯಕ್ಕಾಗಿ ನಾನು’ ಅವರು ಸಂಗೀತ ಸಂಯೋಜನೆಯ ಕೊನೆಯ ಚಿತ್ರ ಅವರ ನಿಧನದ ನಂತರ ತೆರೆಕಂಡಿತು. ಅವರ ಅಪೂರ್ಣವಾಗಿಸಿದ್ದ ‘ಪುಂಡರಗಂಡ’ ಚಿತ್ರವನ್ನುಉಪೇಂದ್ರಕುಮಾರ್ ಪೂರ್ಣಗೊಳಿಸಿದರು. ತಮ್ಮದೇ ಆದ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ಸತ್ಯಂ ಭಾರತೀಯ ಚಿತ್ರರಂಗದಲ್ಲಿ ತಮ್ಮ ಸಾವಿರಾರು ಗೀತೆಗಳಿಂದ ಎಂದಿಗೂ ಮರೆಯದ ಹೆಸರಾಗಿ ಉಳಿದುಕೊಂಡಿದ್ದಾರೆ.