ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಫ್ಯಾಂಟಸಿ ಸಿನಿಮಾಗಳ ನಿರ್ದೇಶಕ ವಿಠಲಾಚಾರ್ಯ

ಪೋಸ್ಟ್ ಶೇರ್ ಮಾಡಿ
ಶಶಿದರ ಚಿತ್ರದುರ್ಗ
ಪತ್ರಕರ್ತ

ದಕ್ಷಿಣ ಭಾರತದಲ್ಲಿ ಫ್ಯಾಂಟಸಿ ಸಿನಿಮಾಗಳ ಟ್ರೆಂಡ್ ಆರಂಭಿಸಿದ ನಿರ್ದೇಶಕರು ಬಿ.ವಿಠಲಾಚಾರ್ಯ. ಕನ್ನಡಿಗರಾದ ಅವರು ತೆಲುಗು, ತಮಿಳು ಚಿತ್ರರಂಗಗಳಲ್ಲಿ ದೊಡ್ಡ ಹೆಸರು ಮಾಡಿದರು. ಇಂದು (ಮೇ 28) ವಿಠಲಾಚಾರ್ಯ (18/01/1920 – 28/05/1999) ಅವರ ಸಂಸ್ಮರಣಾ ದಿನ.

ವರ್ಷಗಳ ಹಿಂದೆ ತೆರೆಕಂಡ ‘ಬಾಹುಬಲಿ’ ಫ್ಯಾಂಟಸಿ ಸರಣಿ ಸಿನಿಮಾಗಳು ಭಾರತದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲೂ ಸದ್ದುಮಾಡಿದವು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡ ನಿರ್ದೇಶಕ ರಾಜಮೌಳಿ ತೆರೆಯ ಮೇಲೆ ಅದ್ಭುತವನ್ನೇ ಸೃಷ್ಟಿಸಿದ್ದರು. ಆದರೆ 50ರ ದಶಕದಲ್ಲಿ ಆಗಿದ್ದ ಅಲ್ಪ ತಂತ್ರಜ್ಞಾನವನ್ನೇ ಸೂಕ್ತವಾಗಿ ಬಳಸಿಕೊಂಡು ಬೆಳ್ಳೆತೆರೆಯಲ್ಲಿ ಇಂಥ ಅಚ್ಚರಿಗಳನ್ನು ಸೃಷ್ಟಿಸಿ ಯಶಸ್ಸು ಕಂಡವರು ಬಿ.ವಿಠಲಾಚಾರ್ಯ.

1954ರಲ್ಲಿ ಅವರು ನಿರ್ಮಿಸಿ, ನಿರ್ದೇಶಿಸಿದ ಜಾನಪದ ಶೈಲಿಯ ಫ್ಯಾಂಟಸಿ ಕನ್ನಡ ಸಿನಿಮಾ ‘ರಾಜಲಕ್ಷ್ಮಿ’ ಉದ್ಯಮದವರ ಗಮನ ಸೆಳೆದಿತ್ತು. ತಮಿಳು ಮತ್ತು ತೆಲುಗು ಚಿತ್ರೋದ್ಯಮಿಗಳೂ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಇವರು ನಿರ್ಮಿಸಿದ ‘ಪಾಲಾಳಮೋಹಿನಿ’, ‘ಮೋಹಿನಿ ಭಸ್ಮಾಸುರ’ ತೆಲುಗು ಫ್ಯಾಂಟಸಿ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದವು. ದಕ್ಷಿಣ ಭಾರತ ಮಾತ್ರವಲ್ಲ ಹಿಂದಿ ಚಿತ್ರರಂಗದವರೂ ಅವರ ಸಿನಿಮಾ ತಂತ್ರಗಳನ್ನು ಹೊಗಳಿದ್ದರು.

ಮೂಲತಃ ಉಡುಪಿಯವರಾದ ವಿಠಲಾಚಾರ್ಯರು ಕೆಲಸದ ನಿಮಿತ್ತ ಚಿಕ್ಕ ವಯಸ್ಸಿನಲ್ಲೇ ಊರು ಬಿಟ್ಟು ಅರಸೀಕೆರೆ ಸೇರಿದರು. ಅವರು ಓದಿದ್ದು ಏಳನೇ ತರಗತಿಯಷ್ಟೆ. ಶಾಲೆ ಬಿಟ್ಟು ಹೋಟೆಲ್ ಸೇರಿದ ಅವರು ಕೆಲವು ವರ್ಷಗಳ ನಂತರ ಮೈಸೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಹೋಟೆಲ್ ಉದ್ಯಮಿಯಾದರೂ ಅವರ ಆಸಕ್ತಿ ಇದ್ದುದು ಸಿನಿಮಾರಂಗದೆಡೆ. ಮೊದಲ ಪ್ರಯತ್ನವಾಗಿ ಸಿ.ವಿ.ರಾಜು ನಿರ್ದೇಶನದ ‘ಶ್ರೀಕೃಷ್ಣಲೀಲಾ’ ಸಿನಿಮಾದ ಸಹನಿರ್ಮಾಪಕರಾದರು. ಮುಂದೆ ಡಿ.ಶಂಕರ್‍ಸಿಂಗ್ ಅವರ ಮಹಾತ್ಮಾ ಪಿಕ್ಚರ್ಸ್‍ನೊಂದಿಗೆ ವಿಠಲಾಚಾರ್ಯರು ಗುರುತಿಸಿಕೊಂಡರು. 1952ರಲ್ಲಿ ತಯಾರಾದ ಮಹಾತ್ಮಾ ಪಿಕ್ಚರ್ಸ್‍ನ ‘ಸೌಭಾಗ್ಯ ಲಕ್ಷ್ಮಿ’ ಸಿನಿಮಾ ನಿರ್ದೇಶಿಸುವ ಮೂಲಕ ಸ್ವತಂತ್ರ್ಯ ನಿರ್ಮಾಪಕರಾದರು. ಮರುವರ್ಷ 1953ರಲ್ಲಿ ತಮ್ಮದೇ ವಿಠಲ್ ಪ್ರೊಡಕ್ಷನ್ಸ್ ಆರಂಭಿಸಿದರು. ಈ ಸಂಸ್ಥೆಯಡಿ ವಿಠಲಾಚಾರ್ಯರು ‘ಕನ್ಯಾದಾನ’ (1954) ನಿರ್ಮಿಸಿ, ನಿರ್ದೇಶಿಸಿದರು. ಫ್ಯಾಂಟಸಿ ಸಿನಿಮಾ ಮಾಡಬೇಕೆನ್ನುವ ಅವರ ಮಹದಾಸೆ ಕೈಗೂಡಿದ್ದು ‘ರಾಜಲಕ್ಷ್ಮಿ’ ಚಿತ್ರದ ಮೂಲಕ.

ಇದಾದ ನಂತರ ‘ಮುತ್ತೈದೆ ಭಾಗ್ಯ’ (1956), ‘ಮನೆ ತುಂಬಿದ ಹೆಣ್ಣು’ (1958) ಚಿತ್ರಗಳನ್ನು ಮಾಡಿದರು. ‘ಮುತ್ತೈದು ಭಾಗ್ಯ’ ಚಿತ್ರದಲ್ಲಿ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ನಾಯಕರಾಗಿದ್ದರು ಎನ್ನುವುದು ವಿಶೇಷ. ಅದೇಕೋ ಈ ಸಿನಿಮಾಗಳು ಗೆಲ್ಲಲಿಲ್ಲ. ಇದರಿಂದ ತೆಲುಗು ಸಿನಿಮಾರಂಗದತ್ತ ಮುಖಮಾಡಿದ ವಿಠಲಾಚಾರ್ಯರು ಅಲ್ಲಿ ಫ್ಯಾಂಟಸಿ ಸಿನಿಮಾಗಳ ಮೂಲಕವೇ ದೊಡ್ಡ ಹೆಸರು ಮಾಡಿದರು. ತಮಿಳಿನಲ್ಲಿ ಅವರು ನಿರ್ಮಿಸಿ, ನಿರ್ದೇಶಿಸಿದ ‘ಪೆಣ್‍ಕುಲತ್ತಿನ್’, ‘ತೇನ್‍ವಿಳಕ್ಕು’ ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ಕನ್ನಡ, ತೆಲುಗು ಮತ್ತು ತಮಿಳಿನ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ವಿಠಲಾಚಾರ್ಯರು 1999, ಮೇ 28ರಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

ಚಿತ್ರನಿರ್ಮಾಣ, ನಿರ್ದೇಶನದ ಜೊತೆ ಹಲವಾರು ತಂತ್ರಜ್ಞರು ಮತ್ತು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆಯೂ ವಿಠಲಾಚಾರ್ಯರಿಗೆ ಸಲ್ಲಬೇಕು. ಆಗ ಸಿನಿಮಾ ಸೇರುವ ಆಸೆಯಿಂದ ಕನ್ನಡ ನಾಡಿನಿಂದ ಮದರಾಸಿಗೆ ಆಗಮಿಸುವವರಿಗೆ ಅವರು ನೆರವಾಗುತ್ತಿದ್ದರು. ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಸಿದ್ದಲಿಂಗಯ್ಯನವರು ಮೊದಲು ತರಬೇತಿ ಪಡೆದದ್ದೇ ವಿಠಲಾಚಾರ್ಯರಲ್ಲಿ. ಹೀಗೆ, ಪರೋಕ್ಷವಾಗಿಯೂ ಅವರು ಕನ್ನಡ ಚಿತ್ರರಂಗದ ಬೆಳವಣಿಗೆಗಳಲ್ಲಿ ಪ್ರೇರಕ ಶಕ್ತಿಯಾಗಿದ್ದರು. ಐವತ್ತು, ಅರವತ್ತರ ದಶಕದಲ್ಲಿ ಅವರು ತಯಾರಿಸಿದ ಫ್ಯಾಂಟಸಿ ಸಿನಿಮಾಗಳು ಮುಂದಿನ ದಿನಗಳಲ್ಲಿ ಅಂತಹ ಸಿನಿಮಾಗಳನ್ನು ನಿರ್ಮಿಸುವವರಿಗೆ ಸ್ಫೂರ್ತಿಯಾದವು. ಇಂದಿಗೂ ದಕ್ಷಿಣ ಭಾರತದ ಫ್ಯಾಂಟಸಿ ಸಿನಿಮಾಗಳ ಬಗ್ಗೆ ಮಾತನಾಡುವಾಗ ವಿಠಲಾಚಾರ್ಯರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ.

ಬಿ.ವಿಠಲಾಚಾರ್ಯ | ಜನನ: 18/01/1920 | ನಿಧನ: 28/05/1999

‘ಚಂಚಲ ಕುಮಾರಿ’ (1953) ಚಿತ್ರದ ಮುಹೂರ್ತದ ಸಂದರ್ಭ. ನಿರ್ದೇಶಕ ಡಿ.ಶಂಕರ್‌ಸಿಂಗ್‌, ಬಿ.ವಿಠಲಾಚಾರ್ಯ ಇದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ