ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬೆಳ್ಳಿತೆರೆ ಬೆರಗು ಕೆ.ಬಾಲಚಂದರ್

ಪೋಸ್ಟ್ ಶೇರ್ ಮಾಡಿ
ಹೃದಯಶಿವ
ಚಿತ್ರಸಾಹಿತಿ

ಎಷ್ಟು ಬೇಕೋ ಅಷ್ಟು ಮಾತು, ಅತಿ ಎನಿಸದ ಹಾಡು, ಸಹಜವಾಗಿ ತೇಲಿ ಬರುವ ದೃಶ್ಯಗಳು, ಅವಕ್ಕೆ ಇಂಬು ಕೊಡುವ ಹಿತಮಿತ ಹಿನ್ನೆಲೆ ಸಂಗೀತ; ಬಾಲಚಂದರ್ ಉದ್ದೇಶವನ್ನು ರಕ್ಷಿಸಿಕೊಂಡು ಮನುಕುಲದ ಒಳಗನ್ನು ಕೆದಕುವಂತೆ ಪ್ರತಿಭಾಪೂರ್ಣವಾಗಿ ಪ್ರಸ್ತುತಗೊಳ್ಳುತ್ತದೆ.

ಕೆ.ಬಾಲಚಂದರ್ ಪೂರ್ಣಹೆಸರು ಕೈಲಾಸಂ ಬಾಲಚಂದರ್. ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸ್ಕ್ರಿಪ್ಟ್  ಬರಹಗಾರರಾಗಿ ಪ್ರಖ್ಯಾತರಾದವರು. ‘ಮರೋ ಚರಿತ’, ‘ಎದಿರ್ ನೀಚಲ್’, ‘ಉನ್ನಾಲ್ ಮುಡಿಯುಂ ತಂಬಿ’, ‘ಮನ್ಮಥ ಲೀಲಾ’,  ‘ಆರಂಗೇಟ್ರಂ’, ‘ತಣ್ಣೀರ್ ತಣ್ಣೀರ್’, ‘ಪುನ್ನಗೈ ಮಣ್ಣನ್’ ಮುಂತಾದ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಮಹತ್ವದ ನಿರ್ದೇಶಕ ಎನಿಸಿಕೊಂಡಿದ್ದಾರೆ. ಚಿತ್ರರಂಗದ ಮಂದಿ ಪ್ರೀತಿ, ಗೌರವಗಳಿಂದ ಅವರನ್ನು ‘ಕೆ.ಬಿ. ಸಾರ್’ ಅನ್ನುತ್ತಿದ್ದರು. ಬಾಲಚಂದರ್ ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ನನ್ನಿಲಂನಲ್ಲಿ. ಈ ಊರು ಈಗ ತಿರುವಾರೂರು ಜಿಲ್ಲೆಗೆ ಸೇರಿಕೊಂಡಿದೆ. ಚಿಕ್ಕಂದಿನಲ್ಲೇ ಸಿನಿಮಾದತ್ತ ಆಸಕ್ತಿ ಮೂಡಿ ತಮ್ಮ ಹನ್ನೆರಡನೆ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿ ಒಂದಿಷ್ಟು ನಾಟಕಗಳನ್ನು ಬರೆದು, ನಿರ್ದೇಶಿಸುವುದರ ಜೊತೆಗೆ ಪಾತ್ರಗಳನ್ನೂ ಮಾಡಿ ಸೈ ಅನ್ನಿಸಿಕೊಂಡ ಕೆ.ಬಿ. ಹೆಚ್ಚೂ ಕಡಿಮೆ ತಾವು 1949ರಲ್ಲಿ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಪ್ರಾಣಿಶಾಸ್ತ್ರದ ಪದವಿ ಪಡೆಯುವವರೆಗೆ ನಾಟಕ ಲೋಕದಲ್ಲಿ ತೊಡಗಿಸಿಕೊಂಡಿದ್ದರು. ಹಾಗೆಯೇ ಸ್ವತಃ ತಾವೇ ಹೇಳಿದಂತೆ, “ನನ್ನ ಎಂಟನೆ ವಯಸ್ಸಿನಿಂದಲೇ ನಾನು ಸಿನಿಮಾ ನೋಡಲು ಶುರುಮಾಡಿಕೊಂಡೆ” ಎನ್ನುವ ಮಾತು ಕಲೆಯೆಡೆಗೆ ಇವರಿಗಿದ್ದ ಆಸಕ್ತಿಯನ್ನು ಒತ್ತಿ ಹೇಳುತ್ತದೆ.

ಯಾವಾಗ ಪದವಿ ಸಿಕ್ಕಿತೋ ಬಾಲಚಂದರ್ ಮುತ್ತುಪೇಟೆ ಎಂಬ ಊರಲ್ಲಿ ಶಾಲಾಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರು. ಆರಾಮಾಗಿ ಮೇಷ್ಟ್ರು ಕೆಲಸ ಮಾಡಿಕೊಂಡಿದ್ದ ಬಾಲಚಂದರ್ ಬದುಕಿನಲ್ಲಿ ಸಿಕ್ಕ ದೊಡ್ಡತಿರುವು ಎಂದರೆ 1950ರಲ್ಲಿ ಮದರಾಸಿಗೆ ಹೋಗಿದ್ದು. ಇಷ್ಟಕ್ಕೂ ಇವರು ಮದರಾಸಿಗೆ ಹೋಗಿದ್ದು ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಗುಮಾಸ್ತನ ಹುದ್ದೆ ನಿರ್ವಹಿಸುವ ಸಲುವಾಗಿ. ಆ ಸುಸಂದರ್ಭದಲ್ಲಿ ಕೆ.ಬಿ.ಯೊಳಗಿನ ಕಲಾವಿದ ಮತ್ತೆ ಜಾಗೃತನಾಗತೊಡಗಿದ. ‘ಯುನೈಟೆಡ್ ಅಮೆಚೂರ್ ಆರ್ಟಿಸ್ಟ್ಸ್’ ಎಂಬ ನಾಟಕದ ಕಂಪನಿಗೆ ಸೇರ್ಪಡೆಯಾಗುವಲ್ಲಿ ಯಶಸ್ವಿಯಾದರು. ರಂಗದ ಮೇಲಿನ ಕತ್ತಲು-ಬೆಳಕಿನಾಟದ ಚೋದ್ಯಕ್ಕೆ ಮತ್ತೆ ಮತ್ತೆ ಪುಳಕಗೊಂಡರು. ಯಾವಾಗ ಬಾಲಚಂದರ್ ಅವರಿಗೆ ಇಂಥದೊಂದು ಮಹತ್ವಪೂರ್ಣ ವೇದಿಕೆ ಸಿಕ್ಕಿತೋ ತಮ್ಮದೇ ಒಂದು ತಂಡ ರೂಪಿಸಿಕೊಂಡು ತಾವೇ ನಾಟಕ ಬರೆದು ತಮ್ಮೊಳಗಿನ ಕನುಸುಗಾರನನ್ನು ರಂಗದ ಮೇಲೆ ನಿಲ್ಲಿಸಲು ಸಾಧ್ಯವಾಯಿತು. ‘ಮೇಜರ್ ಚಂದ್ರಕಾಂತ್’, ‘ಸರ್ವರ್ ಸುಂದರಂ’, ‘ನೀರ್ ಕುಮಿಳಿ’, ‘ಮೆಳುಗುವರ್ತಿ’, ‘ನಾಣಲ್’, ‘ನವಗ್ರಹಂ’ ತರಹದ ನಾಟಕಗಳು ಇವರ ನಿರ್ದೇಶನ, ನಿರ್ಮಾಣದಲ್ಲಿ ತಮಿಳು ಕಲಾರಸಿಕರನ್ನು ರಂಜಿಸಲು ಸಾಧ್ಯವಾಯಿತು. ಬಾಲಚಂದರ್ ಎಂಬ ಸಂವೇದನಾಶೀಲ ವ್ಯಕ್ತಿ ರಂಗಕರ್ಮಿಯಾಗಿ ಹುಟ್ಟಿಕೊಳ್ಳಲು ದಾರಿಯಾಯಿತು.

ಕ್ರಿಯಾಶೀಲ ಜೀವವಾಗಿದ್ದ ಬಾಲಚಂದರ್ ಕಣ್ಣು ಅಷ್ಟರಲ್ಲಿ ಚಿತ್ರರಂಗದತ್ತ ಹೊರಳಿತು. ಗುಮಾಸ್ತರಾಗಿದ್ದುಕೊಂಡೇ ಪ್ರವೃತ್ತಿಯನ್ನಾಗಿ ನಾಟಕವನ್ನಪ್ಪಿಕೊಂಡಿದ್ದ ಇವರಿಗೆ 1965ರಲ್ಲಿ ‘ದೇಯ್ವತ್ತಾಯ್’ ಎಂಬ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಬಂತು. ಎಂ.ಜಿ.ರಾಮಚಂದ್ರನ್ ನಾಯಕನಟರಾಗಿ ನಟಿಸುತ್ತಿದ್ದ ಆ ಚಿತ್ರಕ್ಕೆ ಬಾಲಚಂದರ್ ಚಿತ್ರಕತೆ ಬರೆಯುವುದರ ಜೊತೆಗೆ ಸಂಭಾಷಣಾಕಾರರೂ ಆದರು. ಅದೇ ವೇಳೆಗೆ ತಾವು ಕೆಲಸ ಮಾಡುತ್ತಿದ್ದ ಅಕೌಂಟೆಂಟ್ ಜನರಲ್ ಕಚೇರಿಯ ಗುಮಾಸ್ತಗಿರಿಯಿಂದ ಸೂಪರ್ ಇನ್‌ಟೆಂಡೆಂಟ್ ಹುದ್ದೆಗೆ ಭಡ್ತಿ ಸಿಕ್ಕಿತು. ಆ ಖುಷಿಯ ಜೊತೆಗೆ ಕೆ.ಬಿ.ಯವರ ಪಾಲಿಗೆ ದೊರೆತ ಮತ್ತೊಂದು ಸಂತಸದ ಸಂಗತಿಯೆಂದರೆ ತಮ್ಮ ಪ್ರಸಿದ್ದ ನಾಟಕ ‘ಸರ್ವರ್ ಸುಂದರಂ’ ಅನ್ನು ಆಧರಿಸಿ ಸಿನಿಮಾವಾಗಿಸಲು ಅವಿಚಿ ಮೆಯ್ಯಪ್ಪ ಚೆಟ್ಟಿಯಾರ್ ಅವರು ಮುಂದೆ ಬಂದಿದ್ದು. ಬಾಲಚಂದರ್‌ರಿಂದ ಆ ನಾಟಕದ ಹಕ್ಕುಗಳನ್ನು ಕೊಂಡುಕೊಂಡ ಈ ಚೆಟ್ಟಿಯಾರ್ ಬೇರೆ ಯಾರೂ ಅಲ್ಲ, ಇವತ್ತಿಗೂ ಮದರಾಸಿನ ವಡಪಳನಿಯಲ್ಲಿ ಸ್ಥಿತಗೊಂಡಿರುವ ದಕ್ಷಿಣಭಾರತದ ಪ್ರಸಿದ್ದ ಸ್ಟುಡಿಯೋಗಳಲ್ಲಿ ಒಂದಾದ ಎ.ವಿ.ಎಂ ಸ್ಟುಡಿಯೋದ ಸಂಸ್ಥಾಪಕರು. ಹೋಟೆಲ್ ಸರ್ವರೊಬ್ಬನ ಪಾತ್ರದ ಸುತ್ತ ಹೆಣೆಯಲ್ಪಟ್ಟಿರುವ ಈ ಚಿತ್ರದ ಕಥಾನಾಯಕನಾಗಿ ನಾಗೇಶ್ ಕಾಣಿಸಿಕೊಂಡಿದ್ದರು. ಕನ್ನಡದ ‘ಮಕ್ಕಳ ರಾಜ್ಯ’, ‘ಗಡಿಬಿಡಿ ಗಂಡ’, ‘ಪ್ರೀತ್ಸು ತಪ್ಪೇನಿಲ್ಲ’ ಚಿತ್ರಗಳಲ್ಲಿ ತಮ್ಮ ಚುರುಕುತನದ ಅಭಿನಯದಿಂದ ಮನಗೆದ್ದಿದ್ದರಲ್ಲಾ… ಅದೇ ನಾಗೇಶ್ ಇವರು.

ಯಾವ ಘಳಿಗೆಯಲ್ಲಿ ಬಾಲಚಂದರ್ ಅವರ ‘ಸರ್ವರ್ ಸುಂದರಂ’ ನಾಟಕವು ಸಿನಿಮಾವಾಯಿತೋ, ಅದೇ ದೆಸೆಯಲ್ಲಿ ಅವರ ‘ಮೇಜರ್ ಚಂದ್ರಕಾಂತ್’ ನಾಟಕ ಹಿಂದಿಯಲ್ಲಿ ‘ಊಂಚೇ ಲೋಗ್’ ಹೆಸರಿನಲ್ಲಿ ಸಿನಿಮಾ ಆಗಿದ್ದಷ್ಟೇ ಅಲ್ಲದೆ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿತು. ಅಷ್ಟರಲ್ಲಿ ತಾವೇ ಸ್ವತಂತ್ರವಾಗಿ ಸಿನಿಮಾವೊಂದನ್ನು ನಿರ್ದೆಶಿಸುವಷ್ಟು ಅನುಭವ ಮತ್ತು ಅದಕ್ಕೆ ಬೇಕಾದ ಆತ್ಮವಿಶ್ವಾಸ, ಹುಮ್ಮಸ್ಸು ಕೆ.ಬಿ.ಯವರಲ್ಲಿ ಹುಟ್ಟಿಕೊಂಡಿತ್ತು. 1965ರಲ್ಲಿ ಸೆಟ್ಟೇರಿದ ‘ನೀರ್ ಕುಮಿಳಿ’ ಸಿನಿಮಾ ಬಾಲಚಂದರ್ ನಿರ್ದೇಶನದ ಚೊಚ್ಚಲ ಚಿತ್ರ ಅನ್ನಿಸಿಕೊಂಡಿತು. ಅಲ್ಲಿಂದ ಶುರುವಾಯಿತು ಬಾಲಚಂದರ್ ಯುಗ. ಅಲ್ಲಿಂದಾಚೆಗೆ ತಮಿಳು ಚಿತ್ರರಂಗದ ದೆಸೆಯೂ ಬದಲಾಗತೊಡಗಿತು. ತಮಿಳು ಸಿನಿಮಾ ಆಗಸದಲ್ಲಿ ಬಾಲಚಂದರ್ ಎಂಬ ಪ್ರಕಾಶಮಾನ ತಾರೆಯ ಪ್ರಜ್ವಲತೆಗೆ ನಾಂದಿಯಾಯಿತು. ಆವರೆಗೆ ಕಂಡರಿಯದ ತಾಜಾತನ ಬೆಳ್ಳಿಪರದೆಯ ಮೇಲೆ ಮೂಡತೊಡಗಿತು. ‘ಸಿನಿಮಾ ಅಂದರೆ ಹೀಗೂ ಇರಲು ಸಾಧ್ಯ’ ಎಂದು ಪ್ರೇಕ್ಷಕ ಬೆರಗುಗೊಳ್ಳುವಂತಾಯಿತು. ಮೊದಮೊದಲಿಗೆ ತಮ್ಮವೇ ನಾಟಕಗಳನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದ ಬಾಲಚಂದರ್ ಎಪ್ಪತ್ತನೆ ದಶಕದ ಆರಂಭದ ಹೊತ್ತಿಗೆ ನಾಟಕದ ಗುಂಗಿನಿಂದ ಬಚಾವಾಗಿ ಒಬ್ಬ ಪ್ರೊಫೆಷನಲ್ ಫಿಲಂ ಮೇಕರ್ ಅನ್ನಿಸಿಕೊಳ್ಳುವತ್ತ ದಾಪುಗಾಲು ಹಾಕಿದ್ದು ಈಗ ಇತಿಹಾಸ.

ನಟರಾದ ಕಮಲಹಾಸನ್ ಮತ್ತು ರಜನೀಕಾಂತ್‌ ಅವರೊಂದಿಗೆ ಕೆಬಿ

ಫಿಲಂ ಮೇಕಿಂಗ್ ಬಗ್ಗೆ ಅಪಾರ ಅರಿವು ಹೊಂದಿದ್ದ ಬಾಲಚಂದರ್ ‘ಆರಂಗ್ರೇಟ್ರಂ’ ಹೊತ್ತಿಗೆ ಬೇರೆಯದೇ ಬಗೆಯಲ್ಲಿ ಅರಳಿಕೊಂಡಿದ್ದರು. 1970ರಲ್ಲಿ ರೂಪುಗೊಂಡ ಈ ಚಿತ್ರದ ಮೂಲಕ ಕಮಲ್ ಹಾಸನ್ ಎಂಬ ನಟ ಬಾಲನಟನಿಂದ ಹೀರೋ ಆಗಿ ಭಡ್ತಿ ಪಡೆದಿದ್ದರು. ಬಡತನ, ವೇಶ್ಯಾವಾಟಿಕೆಯ ಸುತ್ತ ಬೆಳೆದು ನಿಂತ ಈ ಚಿತ್ರ ವಿವಾದಕ್ಕೂ ಗುರಿಯಾಗಿತ್ತು. ಈ ಚಿತ್ರದ  ಕೇಂದ್ರಪಾತ್ರವಾದ ಬ್ರಾಹ್ಮಣ ಕುಟುಂಬದ ಹೆಣ್ಣು ಮಗಳೊಬ್ಬಳು ತನ್ನ ಕುಟುಂಬ ನಿರ್ವಹಣೆ ನಿಮಿತ್ತ ವೇಶ್ಯಾವಾಟಿಕೆಗೆ ಇಳಿಯುವ ಮೂಲಕ ಸಂಪ್ರದಾಯಸ್ಥ ಭಾರತೀಯ ಮನಸ್ಥಿತಿಗೆ ಶಾಕ್ ನೀಡುತ್ತಾಳೆ. ಇಂಥದೊಂದು ವಿವಾದಾತ್ಮಕ ಕಥಾವಸ್ತು ಇಟ್ಟುಕೊಂಡು ಅಲ್ಲಿಯತನಕ ತಮಿಳಿನಲ್ಲಿ ಯಾವುದೇ ಚಿತ್ರ ಬಂದಿರಲಿಲ್ಲ. ಹಾಗಾಗಿ ಈ ಚಿತ್ರ ಸಾಕಷ್ಟು ವಿವಾದಗಳು ಸೃಷ್ಟಿಯಾಗಲು ಮೂಲವಾಯಿತು. ದಿನನಿತ್ಯದಲ್ಲಿ ಕಣ್ಣಿಗೆ ಕಾಣುವ, ಹೃದಯಕ್ಕೆ ನಾಟುವ ಸಾಮಾಜಿಕ ಸಂಗತಿಗಳನ್ನೇ ತಮ್ಮ ಚಿತ್ರಗಳ ವಸ್ತುವಾಗಿ ಆಯ್ಕೆ ಮಾಡಿಕೊಂಡು, ಆ ಅಂಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಪರದೆಯ ಮೇಲೆ ತರುವಲ್ಲಿ ಕೆ.ಬಿ. ಸಕ್ಸಸ್ ಆಗಿದ್ದರು. ಸ್ವತಃ ತಾವೇ ಕಥೆ ಬರೆದು ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ಮರಾಠಿ, ಬಂಗಾಳಿಯಂತಹ ಭಾಷೆಗಳಲ್ಲಿ ತಯಾರಾದ ಕೆಲವೊಂದು ಚಿತ್ರಗಳನ್ನು ತಮಿಳಿಗೆ ತರುವಲ್ಲಿಯೂ ಇವರು ಸಿದ್ಧಹಸ್ತರಾಗಿದ್ದರು. ಆ ಪೈಕಿ ಜೆಮಿನಿ ಗಣೇಶನ್, ಲಕ್ಷ್ಮಿ, ಕಮಲ್ ಹಾಸನ್ ಮುಂತಾದವರನ್ನು ಹಾಕಿಕೊಂಡು ಮಾಡಿದ ‘ನಾನ್ ಅವನ್ ಇಲ್ಲೈ’ ಚಿತ್ರಕ್ಕೆ ಮರಾಠಿ ನಾಟಕ ‘ತೋ ಮಿ ನವ್ ಹೆಚ್’ ಪ್ರೇರಣೆಯಾದಂತೆಯೇ, ‘ಮೇಘೆ ಢಾಕಾ ತಾರಾ’ ಎಂಬ ಬಂಗಾಳಿ ಚಿತ್ರವನ್ನು ಆಧಾರವಾಗಿಟ್ಟುಕೊಂಡು ‘ಅವಳ್ ಒರು ತೊಡರ್ ಕಥೈ’ ಚಿತ್ರವನ್ನು ಮಾಡಿದ್ದರು. ಈ ಚಿತ್ರದ ಮೂಲಕ ಬಾಲಚಂದರ್ ‘ಆರಂಗೇಟ್ರಂ’ ನಂತರ ಮತ್ತೆ ಸ್ತ್ರೀಪಾತ್ರವನ್ನು ಸಿನಿಮಾದ ಕೇಂದ್ರವಾಗಿಸಲು ಮುಂದಾದರು. ದುಡಿಯುವ ಹೆಣ್ಣೊಬ್ಬಳು ತನ್ನ ಕುಟುಂಬವನ್ನು ನಿಭಾಯಿಸಲು ಏನೆಲ್ಲಾ ಪರಿಪಾಟಲು ಪಡುತ್ತಾಳೆ ಎಂಬುದನ್ನು ಈ ಚಿತ್ರ ತೆರೆದಿಡುತ್ತದೆ.

ಬಾಲಚಂದರ್ ಯಾವತ್ತೂ ಹೆಣ್ಣನ್ನು ಅಬಲೆ ಎಂದಾಗಲೀ, ಅಶಕ್ತೆ ಎಂದಾಗಲೀ ತಮ್ಮ ಚಿತ್ರಗಳಲ್ಲಿ ತೋರಿಸಿಲ್ಲ. ಹೆಣ್ಣನ್ನು ಧೃಢಚಿತ್ತದವಳೂ, ಪುರುಷಪ್ರಧಾನ ಸಮಾಜದ ಶೋಷಣೆ, ನಿಂದನೆಯನ್ನು ದಿಟ್ಟವಾಗಿ ಎದುರಿಸಿ ತಾನೂ ಗಂಡಸಿಗೆ ಸಮಾನಳಾಗಿ ಬದುಕಬಲ್ಲೆನು, ತನ್ನ ಅನ್ನ, ಬಟ್ಟೆಗಳನ್ನು ತಾನೇ ಹುಟ್ಟಿಸಿಕೊಳ್ಳಬಲ್ಲೆನು, ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ತನ್ನ ಕುಟುಂಬವನ್ನು ಸಾಕಬಲ್ಲೆನು, ಸ್ವಾಭಿಮಾನದಿಂದ ಬದುಕಿ ತೋರಬಲ್ಲೆನು ಎಂಬ ಸಕಾರಾತ್ಮಕ ಆಶಯ ಹೊತ್ತ ಪಾತ್ರಗಳನ್ನು ಅವರು  ಸೃಷ್ಟಿಸಿದರು. ಆ ಮೂಲಕ ಸ್ತ್ರೀ ಸಮುದಾಯದಲ್ಲಿ ಸಂಚಲನ ಉಂಟುಮಾಡಿದರು. ಭರವಸೆಯತ್ತ ಹೆಜ್ಜೆ ಹಾಕುವಲ್ಲಿ ಸ್ಪೂರ್ತಿಯಾದರು. ಇಷ್ಟಕ್ಕೂ ಒಬ್ಬ ಚಿತ್ರನಿರ್ದೇಶಕನ ಜವಾಬ್ಧಾರಿಗಳೇನು? ತಾನು ವಾಸಿಸುತ್ತಿರುವ ಸಮಾಜಕ್ಕೆ, ಕಾಲಮಾನಕ್ಕೆ ತಾನು ಹೇಗೆ ಸ್ಪಂದಿಸಬೇಕು? ತನ್ನ ಚಿತ್ರಗಳ ಮೂಲಕ ತನ್ನ ಸುತ್ತಣ ಜಗತ್ತಿಗೆ ಯಾವ ಸಂದೇಶವನ್ನು, ಚಿಂತನೆಯನ್ನು, ಬೆಳಕನ್ನು ರವಾನಿಸಬೇಕು? ಎಂಬುದನ್ನು ಬಾಲಚಂದರ್ ಥರದವರಿಂದ ಅರಿಯಬೇಕಾಗುತ್ತದೆ. ಒಬ್ಬ ನಿರ್ದೇಶಕ ತನ್ನ ಸಿನಿಮಾ ಮೂಲಕ ಜಗತ್ತಿಗೆ ಹೇಳಬೇಕಾದುದೇನೆಂಬುದನ್ನು ಯಾವ ಇನ್ಸ್ ಟಿಟ್ಯೂಟ್ ಗಳೂ ಹೇಳಿಕೊಡಲಾರವು. ಯಾವೊಂದು ಕೊರ್ಸುಗಳೂ ಮನವರಿಕೆ ಮಾಡಿಕೊಡಲಾರವು. ಹಾಗೆಯೇ  ನಿರ್ದೇಶಕ ಜನಮನ್ನಣೆಯ ಅಮಲಿನಲ್ಲಿ ತೇಲುತ್ತಾ ಹೋದಂತೆಲ್ಲಾ ಆತನ ಕ್ರಿಯಾಶೀಲತೆ ಕಮರುತ್ತಾ ಹೋಗುತ್ತದೆ. ಯಾಕೆಂದರೆ ನಿರ್ದೇಶಕ ಏಕಾಂಗಿಯಾಗಿ ಧ್ಯಾನಿಸಿ ತನ್ನ ಅನಂತತೆ ಮತ್ತು ಮಿತಿಗಳನ್ನು ಲೆಕ್ಕ ಹಾಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಸಮರ್ಥ ನಿರ್ದೇಶಕನಿಗೆ ತನ್ನ ಒಂದೊಂದು ಚಿತ್ರವೂ ಹೊಚ್ಚಹೊಸದೆ. ತನ್ನನ್ನೇ ದಾಟುವ ಪ್ರಕ್ರಿಯೆ. ತನ್ನನ್ನೇ ಮೀರಿ ನಿಲ್ಲುವ ಅನಿವಾರ್ಯತೆ. ಆತ ಹೆಜ್ಜೆ ಮೂಡದ ಹಾದಿಯಲ್ಲಿ ಸಂಚರಿಸಲು ಪ್ರಯತ್ನಿಸಬೇಕಾಗುತ್ತದೆ; ತನ್ನನ್ನು ನುಂಗಿಹಾಕಬಲ್ಲ ಕ್ಲೀಷೆ, ಏಕತಾನತೆಗಳನ್ನು ಮೆಟ್ಟಿ ಮುನ್ನುಗ್ಗಬೇಕು, ಅವಲೋಕಿಸಬೇಕು, ಗ್ರಹಿಸಬೇಕು, ಸೃಷ್ಟಿಸಬೇಕು, ಭ್ರಮೆಯಲ್ಲಿ ಮುಳುಗಬಾರದು… ಆದ್ದರಿಂದ ಈ ನಿಟ್ಟಿನಲ್ಲಿ ಬಾಲಚಂದರ್ ಕ್ರಮಿಸಿದ ಹಾದಿ ಅದೆಷ್ಟೋ ಯುವನಿರ್ದೇಶಕರಿಗೆ ಮಾರ್ಗಸೂಚಿ.

ಕಮಲ್ ಹಾಸನ್, ರಜನಿಕಾಂತ್, ಸುಜಾತ, ಸರಿತಾ, ಪ್ರಕಾಶ್ ರೈ, ವಿವೇಕ್ ಮುಂತಾದವರನ್ನು ಲೈಮ್ ಲೈಟಿನ ಬೆಳಕಿಗೆ ತಂದ ಬಾಲಚಂದರ್ ಒಂದು ರೀತಿಯಲ್ಲಿ ವಿಷ್ಣುವರ್ಧನ್, ಅಂಬರೀಶ್ ಥರದವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕನ್ನಡದ ಪುಟ್ಟಣ್ಣ ಕಣಗಾಲ್. ಒಂದು ಗಂಭೀರ ವಸ್ತುವನ್ನು ಮನರಂಜನೆ, ಲವಲವಿಕೆಯ ಡೈಲಾಗ್ಸ್, ಪರಿಪಕ್ವ ನಿರ್ದೇಶನದ ಮೂಲಕ ಪ್ರೇಕ್ಷಕನಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ಬಾಲಚಂದರ್ ಮನುಷ್ಯನ ಆಳದ ಮಿಡಿತಗಳನ್ನು ಅರಿತಿದ್ದರು. ಬದುಕಿನ ನಿಗೂಢತೆ, ಮಾಂತ್ರಿಕತೆಯನ್ನು ಗ್ರಹಿಸಿದ್ದರು. ನೀವು ಇವರ ಒಂದು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಾಲಚಂದರ್ ಕಣ್ಣಿನಲ್ಲಿ ನೋಡತೊಡಗಿದಾಗ ಒಬ್ಬ ನಿರ್ದೇಶಕ ಯಾಕಾಗಿ ಸಿನಿಮಾ ಮಾಡಬೇಕು ಎಂಬುದರ ಅರಿವು ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ಆ ಅರಿವಿನ ಆಳಕ್ಕೆ ಇಳಿದಾಗ ಬೆಚ್ಚಿ ಬೀಳುವಂಥ ಬೆರಗು ಆವರಿಸುತ್ತದೆ. ಅಲ್ಲಿಯ ಎಷ್ಟು ಬೇಕೋ ಅಷ್ಟು ಮಾತು, ಅತಿ ಎನಿಸದ ಹಾಡು, ಸಹಜವಾಗಿ ತೇಲಿ ಬರುವ ದೃಶ್ಯಗಳು, ಅವಕ್ಕೆ ಇಂಬು ಕೊಡುವ ಹಿತಮಿತ ಹಿನ್ನೆಲೆ ಸಂಗೀತ; ಬಾಲಚಂದರ್ ಉದ್ದೇಶವನ್ನು ರಕ್ಷಿಸಿಕೊಂಡು ಮನುಕುಲದ ಒಳಗನ್ನು ಕೆದಕುವಂತೆ ಪ್ರತಿಭಾಪೂರ್ಣವಾಗಿ ಪ್ರಸ್ತುತಗೊಳ್ಳುತ್ತದೆ.

ಹಾಗಾದರೆ ಬಾಲಚಂದರ್ ಮುಟ್ಟಿದ್ದೆಲ್ಲ ಚಿನ್ನವಾಯಿತೆ? ಇಲ್ಲ- ಎಲ್ಲಾ ಸಾಧಕರಂತೆ ಬಾಲಚಂದರ್ ಕೂಡ ಗೆಲುವಿನಂತೆ ಸೋಲನ್ನೂ ಕಂಡವರೇ. ಯಾವತ್ತಿಗೂ ಸ್ಟಾರ್ ನಟರ ಬೆನ್ನು ಹತ್ತದ, ಸ್ಟಾರ್ ಗಳನ್ನೇ ಹುಟ್ಟುಹಾಕುತ್ತಿದ್ದ ಈ ಕಿಂಗ್ ಮೇಕರ್ 1989ರಲ್ಲಿ ನಿರ್ದೇಶಿಸಿದ ‘ಪುದು ಪುದು ಅರ್ಥಂಗಳ್’ ಚಿತ್ರದ ತರುವಾಯ ‘ಅಳಗನ್’, ‘ವಾನಮೇ ಎಲ್ಲೈ’, ‘ಜಾತಿ ಮಲ್ಲಿ’ ತರಹದ ಚಿತ್ರಗಳನ್ನು ಮಾಡಿದರೂ ಈ ಚಿತ್ರಗಳಲ್ಲಿ ತಮ್ಮ ಹಿಂದಿನ ಚಿತ್ರಗಳಲ್ಲಿದ್ದ ಚಾರ್ಮ್ ಇರಲಿಲ್ಲವೆಂದೇ ಹೇಳಬಹುದು. ಇನ್ನು ‘ಡ್ಯೂಯೆಟ್’, ‘ಪಾರ್ಥಲೇ ಪರವಶಂ’, ‘ಪೊಯ್’ ಸುದ್ದಿಯನ್ನಂತೂ ಮಾಡಿದ್ದವು. ಇಷ್ಟಕ್ಕೂ ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಭಾರತವೇ ಬೆಚ್ಚಿ ಬೀಳುವಂಥ ಚಿತ್ರಗಳನ್ನು ನೀಡಿದ್ದ ಬಾಲಚಂದರ್ ತರುವಾಯದ ದಶಕಗಳಲ್ಲಿ ತಮ್ಮ ಎಂದಿನ ಖದರ್ ಉಳಿಸಿಕೊಳ್ಳುವಲ್ಲಿ ಹೆಣಗಾಟ ನಡೆಸಲೇಬೇಕಾಯಿತು. ಹೊಸಬರ ಪ್ರವೇಶ ಹಾಗೂ ಮೆಲ್ಲ ಮೆಲ್ಲ ಕವಿಯುತ್ತಿದ್ದ ಮುಪ್ಪು ಇದಕ್ಕೆ ಕಾರಣವೆನ್ನಬಹುದೇನೋ. ಹಾಗಂತ ಬಾಲಚಂದರ್ ಸುಮ್ಮನೆ ಕೂರಲಿಲ್ಲ. ಮೊದಲೆಲ್ಲಾ ತಮ್ಮ ಚಿತ್ರಗಳನ್ನು ನೋಡುತ್ತಿದ್ದ ಪ್ರೇಕ್ಷಕ ಥಿಯೇಟರು ಮರೆತು ಟಿವಿಯತ್ತ ತಿರುಗುತ್ತಿದ್ದಂತೆಯೇ ತಾವೂ ಒಂದಿಷ್ಟು ಧಾರಾವಾಹಿಗಳನ್ನು ಮಾಡಿದ್ದಲ್ಲದೇ,  ತಮ್ಮ ಕೊನೆಕೊನೆಯ ದಿನಗಳಲ್ಲಿ ಅದೇಕೋ ತಮ್ಮ ಕಲಾಬದುಕು ಆರಂಭವಾದ ರಂಗಭೂಮಿಯತ್ತಲೂ ಆಸಕ್ತಿ ತಳೆದಿದ್ದರು. ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿ, ತಾವು ಆರಂಭಿಸಿದ ಪ್ರತಿಷ್ಟಿತ ‘ಕವಿತಾಲಯ ಪ್ರೊಡಕ್ಷನ್’ ಅಡಿಯಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿ, ಸಾವಿರಾರು ಹೊಸಪ್ರತಿಭೆಗಳಿಗೆ ಅವಕಾಶ ಒದಗಿಸಿಕೊಟ್ಟು, ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿಯನ್ನೂ, ಹದಿಮೂರು ಬಾರಿ ಫಿಲಂ ಫೇರ್ ಪ್ರಶಸ್ತಿಯನ್ನೂ, ನಾಲ್ಕು ಬಾರಿ ನಂದಿ ಅವಾರ್ಡನ್ನೂ, ಎ.ಎನ್.ಆರ್ ನ್ಯಾಷನಲ್ ಅವಾರ್ಡ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಭಾರತದ ನಾಲ್ಕನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ಪಡೆದ ಕೆ.ಬಾಲಚಂದರ್ ಚಿತ್ರರಸಿಕರ ಹೃದಯಗಳಲ್ಲಿ ಯಾವತ್ತಿಗೂ ಜೀವಂತ.

ಸರಿತಾ, ಕಮಲಹಾಸನ್‌, ಕೆಬಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ