‘ಮೆಥೆಡ್ ಆಕ್ಟರ್’ ಎಂದೇ ಕರೆಸಿಕೊಂಡಿದ್ದ ಹಿಂದಿ ತಾರೆ ಸಂಜೀವ್ ಕುಮಾರ್ ರಂಗಭೂಮಿ ಹಿನ್ನೆಲೆಯ ಕಲಾವಿದ. ಸಿನಿಮಾರಂಗದ ಆರಂಭದ ದಿನಗಳ ಪಯಣ ಅವರಿಗೆ ಸುಗಮವೇನೂ ಆಗಿರಲಿಲ್ಲ. ರಂಗಭೂಮಿ ಅನುಭವವಿದ್ದರೂ ಅವರು ಫಿಲ್ಮಾಲಯ ಅಭಿನಯ ಶಾಲೆಯಲ್ಲಿ ತರಬೇತಿ ಪಡೆದರು. ಫಿಲ್ಮಾಲಯದಿಂದ ನಿರ್ಮಿಸಿದ ‘ಹಮ್ ಹಿಂದೂಸ್ತಾನಿ’ (1960) ಚಿತ್ರದ ಮೂಲಕವೇ ಅವರು ಬೆಳ್ಳಿತೆರೆಗೆ ಪರಿಚಯವಾದರು. ಸಂಜೀವ್ ಕುಮಾರ್ ಜನ್ಮನಾಮ ಹರಿಭಾಯ್ ಜರಿವಾಲಾ. ಹುಟ್ಟಿದ್ದು 1938, ಜುಲೈ 9ರಂದು ಮುಂಬಯಿಯಲ್ಲಿ. ಆರಂಭದಲ್ಲಿ ಪುಟ್ಟ ಪಾತ್ರಗಳ ಮೂಲಕ ಸಿನಿಮಾಗೆ ಬಂದ ಸಂಜೀವ್ ಕುಮಾರ್ ‘ನಿಶಾನ್’ (1965) ಚಿತ್ರದೊಂದಿಗೆ ನಾಯಕರಾದರು. ಆದರೆ ಅವರಿಗೆ ಮೊದಲ ದೊಡ್ಡ ಯಶಸ್ಸು ತಂದುಕೊಟ್ಟದ್ದು ‘ಸಂಘರ್ಷ್’ (1968). ‘ಖಿಲೋನಾ’ (1970) ಚಿತ್ರದ ಪ್ರೀತಿಯಲ್ಲಿ ನೊಂದು ಮಾನಸಿಕ ಸ್ಥಿಮಿತ ಕಳೆದುಕೊಂಡ ಯುವಕನ ಪಾತ್ರ ಸಂಜೀವ್‌ಗೆ ದೊಡ್ಡ ಮನ್ನಣೆ ತಂದುಕೊಟ್ಟಿತು. ಮುಂದೆ ‘ದಸ್ತಕ್’ ಚಿತ್ರದ ಅತ್ಯುತ್ತಮ ನಟನೆಗಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.

ಸ್ಟಾರ್ ನಟನಾಗಿದ್ದಾಗಲೂ ಸಂಜೀವ್ ಕುಮಾರ್ ಸವಾಲಿನ ಪಾತ್ರಗಳನ್ನು ಮಾಡಲು ಹಿಂಜರಿಯಲಿಲ್ಲ. ಜನಪ್ರಿಯ ಚಿತ್ರದ ಚೌಕಟ್ಟಿನಿಂದ ಹೊರತಾದ ‘ಅನುಭವ್’ (1971), ‘ಪರಿಚಯ್’ (1972), ‘ಕೋಶಿಶ್’ (1972) ಅವರಿಗೆ ಹೆಸರು ತಂದುಕೊಟ್ಟವು. ‘ಕೋಶಿಶ್’ ಚಿತ್ರಕ್ಕಾಗಿ ಅವರು ಎರಡನೇ ಬಾರಿ ರಾಷ್ಟ್ರ ಪ್ರಶಸ್ತಿಯ ಪುರಸ್ಕಾರಕ್ಕೆ ಭಾಜನರಾದರು. ಈ ಚಿತ್ರದ ನಂತರ ಅವರು ನಿರ್ದೇಶಕ ಗುಲ್ಜಾರ್ ಜೊತೆಗೂಡಿದರು. ಗುಲ್ಜಾರ್- ಸಂಜೀವ್ ಜೋಡಿಯಲ್ಲಿ ಮುಂದೆ ಶ್ರೇಷ್ಠ ಚಿತ್ರಗಳಾದ ‘ಆಂಧಿ’ (1975), ‘ಮೌಸಮ್’ (1975), ‘ಅಂಗೂರ್’ (1981), ‘ನಮ್ಕೀನ್’ (1982) ತಯಾರಾದವು.ಗಂಭೀರ ನಟನೆಂದು ಹೆಸರು ಮಾಡುವುದರ ಜೊತೆಗೇ ಅವರು ಮುಖ್ಯವಾಹಿನಿ ಚಿತ್ರಗಳಲ್ಲೂ ಮಿಂಚಿದರು. ‘ಮನ್‌ಚಲಿ’ (1973), ‘ಸೀತಾ ಔರ್ ಗೀತಾ’ (1972), ‘ಮನೋರಂಜನ್’ (1974), ‘ಪತಿ, ಪತ್ನಿ ಔರ್ ವೋ’ (1978), ‘ಅಂಗೂರ್’ ಕೆಲವು ಪ್ರಮುಖ ಉದಾಹರಣೆ. ‘ನಯಾ ದಿನ್ ನಯೀ ರಾತ್’ (1974) ಚಿತ್ರದಲ್ಲಿ ಅವರ ಅಗಾಧ ಪ್ರತಿಭೆ ಸಾಬೀತಾಯಿತು.

ಜಯಾ ಬಾಧುರಿ ಮತ್ತು ಸಂಜೀವ್ ಕುಮಾರ್ ಅಭಿನಯದ ‘ಅನಾಮಿಕ’, ‘ಪರಿಚಯ್’ ಜನಪ್ರಿಯ ಸಿನಿಮಾಗಳು. ಪೋಷಕ ನಟನಾಗಿ ಅವರು ನಟಿಸಿದ ಹಲವು ಚಿತ್ರಗಳಲ್ಲಿ ನಮಗೆ ಪ್ರಮುಖವಾಗಿ ಕಾಣಿಸುವುದು ‘ವಿಧಾತಾ’ (1982) ಮತ್ತು ‘ಹೀರೋ’ (1983). ಇವೆರಡೂ ಸುಭಾಷ್ ಘೈ ನಿರ್ದೇಶನದ ಚಿತ್ರಗಳು. ಸಂಜೀವ್ ಕುಮಾರ್ ಮೂರು ಬಾರಿ (ಶಿಕಾರ್, ಆಂಧಿ, ಅರ್ಜುನ್ ಪಂಡಿತ್) ಫಿಲ್ಮ್‌ಫೇರ್ ಪುರಸ್ಕಾರಕ್ಕೆ ಪಾತ್ರರಾದರು. 80ರ ದಶಕದಲ್ಲಿ ಅವರು ನಟಿ ಹೇಮಾ ಮಾಲಿನಿ ಅವರಲ್ಲಿ ಅನುರಕ್ತರಾಗಿದ್ದರು. ಆದರೆ ಹೇಮಾರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ನಂತರ ಕೆಲವು ವರ್ಷ ಸಂಜೀವ್ ಮತ್ತು ನಟಿ ಸುಲಕ್ಷಣಾ ಪಂಡಿತ್ ಜೊತೆಯಾಗಿದ್ದರು. ಆದರೆ ಇಬ್ಬರೂ ದಂಪತಿಯಾಗಲಿಲ್ಲ. ಸಂಜೀವ್ ಕುಮಾರ್ 1985, ನವೆಂಬರ್ 6ರಂದು ನಿಧನರಾದರು. ಸಂಜೀವ್ ನಟಿಸಿದ್ದ ಸುಮಾರು ಹತ್ತು ಸಿನಿಮಾಗಳು ಅವರ ನಿಧನಾನಂತರ ತೆರೆಕಂಡವು.
