ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆಡಿಸಿದಾತ…

ಚಿತ್ರಸಾಹಿತಿ
ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕನ್ನಡ ಸಿನಿಮಾರಂಗದ ಮಹತ್ವದ ಚಿತ್ರಸಾಹಿತಿ ಚಿ.ಉದಯಶಂಕರ್ (18/02/1934 – 02/07/1993) ನಮ್ಮನ್ನಗಲಿದ ದಿನವಿದು. ಅವರೊಂದಿಗೆ ಹತ್ತಿರದಿಂದ ಒಡನಾಡಿದವರು ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ. ತಾವು ಕಂಡ ಉದಯ ಶಂಕರ್‌ರನ್ನು ಅವರು ಸ್ಮರಿಸಿಕೊಂಡಿದ್ದಾರೆ.

‘ಚಿ.ಉದಯಶಂಕರ್’

ಈ ಹೆಸರನ್ನು ನಾನು ಬಾಲ್ಯದಲ್ಲಿ ಅಸಂಖ್ಯಾತ ಸಲ ಕೇಳಿದ್ದು ಆಕಾಶವಾಣಿಯ ಮೂಲಕ. ಆಗ ಪ್ರಸಾರವಾಗುತ್ತಿದ್ದ ಬಹುತೇಕ ಚಿತ್ರಗೀತೆಗಳು ಅವರ ರಚನೆಗಳೇ, ಅಂತಹ ಮಧುರ ಗೀತೆಗಳ ಸೃಷ್ಟಿಕರ್ತ ನಮ್ಮ ಪಾಲಿಗೆ ಗಂಧರ್ವರೇ! ಇಂತಹ ಉದಯ ಶಂಕರ್‌ ಅವರನ್ನು ನೋಡಬೇಕು ಎನ್ನುವುದು ನನ್ನ ಬಾಲ್ಯದ ಮಹದಾಸೆಗಳಲ್ಲಿ ಒಂದು. ಬೆಂಗಳೂರಿಗೆ ಬಂದ ನಂತರ ಅದು ಸರಳವಾಗಿಯೇ ಸಾಧ್ಯವಾಗಿ ಬಿಟ್ಟಿತ್ತು. ನನ್ನ ಬಾಲ್ಯದ ಗಂಧರ್ವರು ಎರಡನೇ ಭೇಟಿಯಲ್ಲಿಯೇ ಆತ್ಮೀಯರೂ ಆಗಿ ಬಿಟ್ಟರು. ಅವರ ಖಾಯಂ ತಾಣ ಹೋಟಲ್‌ ಜನಾರ್ಧನದ 232ನೇ ನಂಬರ್‌ಕೊಠಡಿಯಲ್ಲಿ ಆಡಿದ ಮಾತುಗಳು, ಕಂಡ ಕನಸುಗಳಿಗೆ ಕೊನೆಯೇ ಇರಲಿಲ್ಲ. ಆದರೆ ಉದಯಶಂಕರ್‌ ಒಡನಾಟ ಬಹಳ ಕಾಲ ಉಳಿಯಲಿಲ್ಲ. ಅವರ ಆಯಸ್ಸುಅಪೂರ್ಣವಾಗಿ ಹಲವು ಕನಸುಗಳು ಹಾಗೇ ಉಳಿದುಕೊಂಡವು.

ಮೂವತ್ತು ವರ್ಷಗಳಲ್ಲಿ ಚಿ.ಉದಯಶಂಕರ್ ಬರೆದಿದ್ದು 3,340 ಗೀತೆಗಳು. ಸಂಭಾಷಣೆ ರಚಿಸಿದ್ದು 330 ಚಿತ್ರಗಳಿಗೆ. ಕನ್ನಡ ಚಿತ್ರರಂಗದ ಮಟ್ಟಿಗೆ ‘ಅಲ್ಲಾವುದ್ದೀನನ ಅದ್ಭುತ ದೀಪ’ ಎಂದು ಅವರು ಕರೆಸಿಕೊಂಡಿದ್ದರು. ರಾಜ್‌ಕುಮಾರ್ ಅಭಿನಯಿಸಿದ 92 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಉದಯಶಂಕರ್‌ ಅಣ್ಣಾವ್ರ ವೃತ್ತಿಜೀವನರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಉದಯಶಂಕರ್‌ಅವರ ಮುತ್ತಾತ  ನಂಜುಂಡಯ್ಯ ಅಭಿನಯ ಮತ್ತು ಬರವಣಿಗೆ ಎರಡರಲ್ಲಿಯೂ ಹೆಸರು ಮಾಡಿದವರು. ಪವನಪುರೀ ನಾಟಕ ಸಭಾದ ಸ್ಥಾಪಕರು. ತಾತ ಶ್ರೀಕಂಠಯ್ಯ ಕವಿಗಳು ಗಣಿತದಲ್ಲಿ ಪರಿಣಿತರು. ಉದಯಶಂಕರ್‌ಅವರ ತಂದೆ ಚಿ.ಸದಾಶಿವಯ್ಯ ಬರಹಗಾರರು. ಬರಹಗಾರರ ವಂಶದಲ್ಲಿ ಜನಿಸಿದ ಉದಯಶಂಕರ್ ಹುಟ್ಟಿದ್ದು 1934ರ ಫೆಬ್ರವರಿ 18ರಂದು. ಬಾಲ್ಯದಿಂದಲೇ ಅವರಿಗೆ ಬರವಣಿಗೆಯ ಹವ್ಯಾಸ ಬಂದಿತು. ಆರನೇ ವಯಸ್ಸಿನಲ್ಲಿಯೇ ‘ನಾನು ಚಂದೂ ಕೆರೆಕಟ್ಟಿದೆವು’ ಕಥೆಯನ್ನು ಬರೆದರು. ಹನ್ನೊಂದನೇ ವಯಸ್ಸಿನಲ್ಲಿ ಅವರು ಬರೆದ ‘ಕರಡಿಗಳ ಸಿನಿಮಾ’  ಕಥೆ ‘ಕಥಾವಳಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಹದಿಮೂರನೇ ವಯಸ್ಸಿಗೆ ಉದಯಶಂಕರ್ ‘ಅಖಿಲ ಕರ್ನಾಟಕ ಮಕ್ಕಳ ಕೂಟ’ದ ‘ಮಕ್ಕಳ ಬಾವುಟ’ ಪತ್ರಿಕೆಯ ಸಂಪಾದಕರಾದರು. ಚಾಮರಾಜಪೇಟೆಯ ಪತ್ರಿಕೆಯ ಕಚೇರಿಯ ಹತ್ತಿರದಲ್ಲಿಯೇ ಇದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ಹೋಗಿ ಬರುವ ಪರಿಪಾಠ ಬೆಳೆಯಿತು. ಹದಿನಾರನೇ ವಯಸ್ಸಿಗೇ ‘ಸಕ್ಕರೆ ಅಚ್ಚು’ ಕವಿತೆಗಳ ಸಂಕಲನ ಅಚ್ಚಾಯಿತು. ಇದಕ್ಕೆ ವರಕವಿ ಬೇಂದ್ರೆ ಮುನ್ನುಡಿ ಬರೆದಿದ್ದರು. ಅವರ ‘ಕಡ್ಲೇಕಾಯಿ ಚರಿತ್ರೆ’ ಕಾದಂಬರಿ ದೇವಡು ಸಂಪಾಕದರಾಗಿದ್ದ ಕಥಾವಳಿಯಲ್ಲಿ ಪ್ರಕಟವಾಯಿತು. ಬಯಕೆಯ ಬಲಿ, ಚಂದ್ರಿಕೆಯ ಚೆಲುವಿನಲ್ಲಿ, ವಿಜಯ ವೈಭವ ಹೀಗೆ ಹದಿನೆಂಟು ತುಂಬುವಷ್ಟರಲ್ಲಿ ಉದಯಶಂಕರ್ ಹತ್ತು ಕಾದಂಬರಿಗಳನ್ನು ಬರೆದಿದ್ದರು.

ಸಾಹಿತ್ಯಲೋಕದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದರೂ ಉದಯಶಂಕರ್‌ ಅವರ ಒಲವು ಇದ್ದಿದ್ದು ಚಿತ್ರರಂಗದ ಕಡೆಗೇ. ಬಿಡುಗಡೆಯಾದ ಚಿತ್ರಗಳನ್ನೆಲ್ಲಾ ಅವರು ತಪ್ಪದೇ ನೋಡುತ್ತಿದ್ದರು. ನಿರ್ದೇಶಕ ವಿಠಾಲಾಚಾರ್ಯರು ‘ಕನ್ಯಾದಾನ’ ಚಿತ್ರಕ್ಕಾಗಿ ಕಲಾವಿದರು ಬೇಕು ಎಂದು ಜಾಹಿರಾತು ನೀಡಿದಾಗ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಇವರನ್ನು ನೋಡಿದ ವಿಠಲಾಚಾರ್ಯರು ‘ತುಂಬಾ ತೆಳ್ಳಗಿದ್ದಿ, ಸ್ವಲ್ಪದಪ್ಪ ಆಗಿ ಬಾ’ ಎಂದರು. ಮುಂದೆ ತಂದೆಯವರು ಸಂಭಾಷಣೆ ಬರೆದ ‘ಮಾಯಾ ಬಜಾರ್’ ಚಿತ್ರಕ್ಕೆ ವಿಠಲಾಚಾರ್ಯರೇ ನಿರ್ದೇಶಕರು. ಉದಯಶಂಕರ್ ಹಿಂದಿನ ಭೇಟಿ ನೆನಪಿಸಿ ಅವಕಾಶ ಕೇಳಿದರು. ಈಗ ಅವರು ದಪ್ಪಗಾಗಿದ್ದರು. ವಿಠಲಾಚಾರ್ಯರು ‘ದಪ್ಪಾ ಅಂದರೆ ಇಷ್ಟು ದಪ್ಪ ಅಲ್ಲಪ್ಪ, ಈಗ ನಿನಗೆ ಘಟೋದ್ಗಜನ ಪಾತ್ರಕೊಡಲು ಸಾಧ್ಯ” ಎಂದು ಹಾಸ್ಯ ಮಾಡಿದ್ದರು. ಕಲಾವಿದನಾಗುವ ಅದೃಷ್ಟ ಸಿಗಲಿಲ್ಲ, ಗಾಯಕನಾಗೋಣ ಎಂದುಕೊಂಡು ಸಾಹಿತ್ಯ ಪರಿಷತ್‌ನ ಗಮಕ ಕಲಾ ಪರೀಕ್ಷೆ ಕಟ್ಟಿದರು. ಎರಡನೇ ರ್ಯಾಂಕ್ ಕೂಡ ಬಂದರು. ಆದರೆ ಗಾಯಕರಾಗಲೂ ಛಾನ್ಸ್ ಸಿಕ್ಕಲಿಲ್ಲ. ಛಾಯಾಗ್ರಾಹಕರಾಗೋಣ ಎಂದುಕೊಂಡು ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮೋ ಮಾಡಿದರು. ಆದರೆ ಕ್ಯಾಮರಾ ಹಿಡಿಯುವ ಅವಕಾಶವೂ ಸಿಕ್ಕಲಿಲ್ಲ.

ತಂದೆ ಚಿ.ಸದಾಶಿವಯ್ಯ ಅವರೊಂದಿಗೆ ಚಿ.ಉದಯಶಂಕರ್‌ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಸಿನಿಮಾ ಪ್ರವೇಶಿಸುವ ಎಲ್ಲಾ ದಾರಿಗಳೂ ವಿಫಲವಾದ ನಂತರ ಜೀವನೋಪಾಯಕ್ಕೆ ಉದ್ಯೋಗ ಹಿಡಿಯುವುದು ಅನಿವಾರ್ಯವಾಗಿತ್ತು. ಜೀವವಿಮಾ ನಿಗಮದಲ್ಲಿ ಆರು ತಿಂಗಳ ಕಾಲ ಗುಮಾಸ್ತರಾಗಿ ಕೆಲಸ ಮಾಡಿದರು. ನಂತರ ನ್ಯಾಷನಲ್ ಮಿಡ್ಲಸ್ಕೂಲ್‌ನಲ್ಲಿ ಮೇಷ್ಟ್ರು ಕೆಲಸ ಸಿಕ್ಕಿತು. ಅಲ್ಲಿ ನೆಲೆಯೂರುವ ಮುನ್ನವೇ ‘ಮೊದಲ ತೇದಿ’ ಚಿತ್ರದಲ್ಲಿ ಇನ್ಷೂರೆನ್ಸ್ ಏಜೆಂಟನ ಪಾತ್ರ ಸಿಕ್ಕಿತು. ಚಿತ್ರರಂಗದ ಕಡೆ ಆಕರ್ಷಕರಾಗಿದ್ದ ಉದಯಶಂಕರ್‌ಅಭಿನಯದ ಅವಕಾಶವನ್ನೇ ಒಪ್ಪಿಕೊಂಡರು. ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಶಾಸ್ತ್ರಿಗಳ ಪಾತ್ರ, ‘ಮಹಿಷಾಸುರ ಮರ್ಧಿನಿ’ ಚಿತ್ರದಲ್ಲಿ ‘ವಿಷ್ಣು’ವಿನ ಪಾತ್ರ ಹೀಗೆ ಚಿಕ್ಕಚಿಕ್ಕ ಪಾತ್ರಗಳು ಸಿಕ್ಕುತ್ತಿದ್ದವು. ಜೊತೆಗೆ ಆಗಾಗ ಬರವಣಿಗೆಯ ಅವಕಾಶಗಳು ಸಿಕ್ಕುತ್ತಿದ್ದವು. ಇದನ್ನುಕಂಡ ತಂದೆ ‘ನೋಡು ಶಂಕ್ರು ಸಾಹಿತ್ಯ, ಅಭಿನಯ ಹೀಗೆ ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಮಾಡುವುದು ಸರಿಯಲ್ಲ. ಯಾವುದಾದರೂ ಒಂದನ್ನು ಆರಿಸಿಕೋ’ ಎಂದರು. ಉದಯಶಂಕರ್, ‘ಸಾಹಿತ್ಯವೇ ನನ್ನಆಯ್ಕೆ’ ಎಂದರು.

ಸದಾಶಿವಯ್ಯನವರು ಮಗನ ಆಸೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿರ್ಮಾಪಕ ಭಾವ ನಾರಾಯಣರಿಗೆ ಮಗನ ಆಸೆ ಹೇಳಿದರು. ಅವರು ‘ಒಂದು ಸ್ಕಿಪ್ಟ್ ಬರಿ ನೋಡೋಣ’  ಎಂದು 116 ರೂಪಾಯಿಗಳಿಗೆ ಚೆಕ್ ನೀಡಿದರು. ಉದಯ ಶಂಕರ್ ಹಗಲು ರಾತ್ರಿ ಕುಳಿತು ‘ಸತ್ಯ ಹರಿಶ್ಚಂದ್ರ’ ಚಿತ್ರದ ಸ್ಕಿಪ್ಟ್ ಬರೆದರು. ಆದರೆ ಚಿತ್ರ ಸೆಟ್ಟೇರಲೇ ಇಲ್ಲ. ಇನ್ನೊಬ್ಬ ಪರಿಚತರ ಬಳಿ ಅವಕಾಶ ಕೇಳಿದಾಗ ‘ಸ್ನೇಹ ಬೇರೆ ವೃತ್ತಿ ಬೇರೆ’ ಎಂದು ಕಡ್ಡಿ ತುಂಡಾಗುವಂತೆ ಹೇಳಿದರು. ಮರುದಿನ ‘ಮಹಿಷಾಸುರ ಮರ್ಧಿನಿ’ ಚಿತ್ರದ ಸೆಟ್‌ನಲ್ಲಿ ಮಂಕಾಗಿದ್ದ ಉದಯಶಂಕರ್‌ ಅವರನ್ನು ರಾಜ್‌ಕುಮಾರ್‌ ಕಾರಣ ಕೇಳಿದರು. ಮೊದಲು ಹಿಂಜರಿದರೂ ವಿಷಯ ತಿಳಿಸಿದಾಗ ರಾಜ್‌ಕುಮಾರ್ ಬೆನ್ನುತಟ್ಟಿ“ನಿನ್ನಲ್ಲಿ ಪ್ರತಿಭೆ ಇದೆ, ಇಂದಲ್ಲ ನಾಳೆ ಹೊರ ಬರುತ್ತದೆ. ನೀನು ನನಗಿಂತಲೂ ಬ್ಯುಸಿಯಾಗುತ್ತಿ’ ಎಂದರು. ಮುಂದೆ ಆ ದಿನಗಳೂ ಬಂದವು. ‘ಅದಕ್ಕೆ ರಾಜ್‌ಕುಮಾರ್‌ ಅವರೇ ಕಾರಣರಾದರು’  ಎಂದು ಉದಯಶಂಕರ್ ನೆನಪಿಸಿಕೊಳ್ಳುತ್ತಿದ್ದರು. ‘ಸಂತ ತುಕಾರಾಂ’ ಚಿತ್ರೀಕರಣದಲ್ಲಿ ಸೆಟ್‌ನಲ್ಲಿಯೇ ಸಂಭಾಷಣೆ ಬರೆಯಬೇಕಾಗಿತ್ತು. ಆಗ ರಾಜ್‌ಕುಮಾರ್‌, ಉದಯಶಂಕರ್ ಹೆಸರು ಸೂಚಿಸಿದರು. ಈ ಜವಾಬ್ದಾರಿಯನ್ನು ಉದಯಶಂಕರ್ ಯಶಸ್ವಿಯಾಗಿ ನಿರ್ವಹಿಸಿ ಸಂಭಾಷಣೆಕಾರರು ಎನ್ನಿಸಿಕೊಂಡರು. ‘ಅನ್ನಪೂರ್ಣ’ ಚಿತ್ರದಲ್ಲಿ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿತು. ಇಲ್ಲಿಂದ ಮುಂದೆ ಉದಯಶಂಕರ್‌ ಅವರ ವಿಜಯಯಾತ್ರೆ ಮುಂದುವರೆಯಿತು.

ಎರಡೇ ವರ್ಷದಲ್ಲಿ ಉದಯಶಂಕರ್‌ ಇಪ್ಪತ್ತು ಚಿತ್ರಗಳಿಗೆ ಸಂಭಾಷಣೆ ಬರೆದರು. ಭಾವ ನಾರಾಯಣ ಅವರಿಗೆ ಎರಡೇ ಗಂಟೆಯಲ್ಲಿ ‘ಬೆಂಗಳೂರು ಮೈಲ್’ ಚಿತ್ರದ ಸಂಭಾಷಣೆ ಬರೆದರು. ಭಾವನಾರಾಯಣ ಸಂತೋಷದಿಂದ ಸಿಹಿ ಎಂದು ಇಷ್ಟ ಪಡುತ್ತಿದ್ದ ಉದಯಶಂಕರ್‌ಅವರಿಗೆ ಬೋನಸ್ ಸಂಭಾವನೆ ಎಂದು ಒಂದು ಕೆ.ಜಿ ಮೈಸೂರು ಪಾಕ್ ತರಿಸಿದರು. ಹತ್ತೇ ನಿಮಿಷದಲ್ಲಿ ಉದಯಶಂಕರ್‌ ಇಡೀ ಪ್ಯಾಕ್ ಕಾಲಿ ಮಾಡಿದರು. ಇದಾದ ಮರುದಿನವೇ ಅವರಿಗೆ ಡಯಾಬಿಟೀಸ್‌ ಇರುವುದು ಗೊತ್ತಾಯಿತು. ಆಗ ಅವರಿಗೆ ಕೇವಲ 34 ವರ್ಷ ವಯಸ್ಸು ಅಷ್ಟೇ. ದಿನಕ್ಕೆ ಹದಿನೆಂಟು ಗಂಟೆ ದುಡಿಯುತ್ತಿದ್ದ ಅವರನ್ನು ಒಂದೊಂದಾಗಿ ಖಾಯಿಲೆಗಳು ಸೇರಲು ಆರಂಭಿಸಿದವು. ಕೊನೆಯಲ್ಲಿ ಅವರು ಹದಿನೈದು ಮಾತ್ರೆಗಳನ್ನು ನುಂಗುವ ಸ್ಥಿತಿಗೆ ಬಂದರು. ಇದರ ಜೊತೆಗೆ 1970-80ರ ದಶಕ ಎಂದರೆ ಉದಯ ಶಂಕರ್‌ ಅವರ ದಶಕ ಎಂದೇ ಕರೆಯುವಷ್ಟರ ಮಟ್ಟಿಗೆ ಅವರು ಬೇಡಿಕೆಯ ಬರಹಗಾರರಾದರು. 1982ರಲ್ಲಿ ಬಿಡುಗಡೆಯಾಗಿದ್ದು 68 ಚಿತ್ರಗಳು ಅವುಗಳ ಪೈಕಿ 39 ಚಿತ್ರಗಳಿಗೆ ಉದಯಶಂಕರ್ ಸಂಭಾಷಣೆ ಬರೆದಿದ್ದರು. ಇದು ಭಾರತೀಯ ಚಿತ್ರರಂಗದಲ್ಲಿಯೇ ಒಂದು ದಾಖಲೆಯಾಗಿ ಇಂದಿಗೂ ಉಳಿದಿದೆ.

ಚಿ.ಉದಯಶಂಕರ್‌, ಡಾ.ರಾಜಕುಮಾರ್

ಶಿವಾಜಿ ಗಣೇಶನ್‌ ಅವರಿಗಾಗಿ ತಮಿಳು ಬರಹಗಾರ ಜಿ.ಬಾಲಸುಬ್ರಹ್ಮಣ್ಯ ಬರೆದಿದ್ದ ಕಥೆ ಉದಯಶಂಕರ್‌ಅವರಿಗೆ ಸಿಕ್ಕಿತು. ಅದನ್ನು ಎಲ್ಲರೂ ಚಿತ್ರವಾಗಲು ಅನರ್ಹ ಎಂದು ನಿರಾಕರಿಸಿದ್ದರು. ಆದರೆ ಉದಯಶಂಕರ್‌ಅವರಿಗೆ ಅದು ರಾಜ್‌ಕುಮಾರ್‌ ಅವರಿಗೆ ಹೊಂದಬಲ್ಲ ಕಥೆ ಎನ್ನಿಸಿತು. ಅವರ ಒತ್ತಾಯದ ಮೇರೆಗೇ ಅದು ಚಿತ್ರವಾಯಿತು. ಹೀಗೆ ಮೂಡಿ ಬಂದ ‘ಕಸ್ತೂರಿ ನಿವಾಸ’ ಸರ್ವಕಾಲೀನ ಶ್ರೇಷ್ಠ ಚಿತ್ರ ಎನ್ನಿಸಿಕೊಂಡಿತು. ಈ ಘಟನೆ ನಂತರ ರಾಜಕುಮಾರ್‌, ಉದಯಶಂಕರ್‌ ಅವರನ್ನು ಕಥೆಯ ವಿಷಯದಲ್ಲಿ ಸಂಪೂರ್ಣವಾಗಿ ಅವಲಂಬಿಸಲು ಆರಂಭಿಸಿದರು. ರಾಜ್‌ಕುಮಾರ್‌ ಅವರ ಮಕ್ಕಳಾದ ಶಿವರಾಜ್ ಕುಮಾರ್‌ ಅವರ ‘ಆನಂದ್’, ‘ರಥ ಸಪ್ತಮಿ’, ‘ಮನ ಮೆಚ್ಚಿದ ಹುಡುಗಿ’, ಪುನೀತ್‌ ಅವರ ‘ಭಕ್ತ ಪ್ರಹ್ಲಾದ’, ‘ಬೆಟ್ಟದ ಹೂವು’ ಚಿತ್ರಗಳನ್ನೂ ಉದಯಶಂಕರ್ ರೂಪಿಸಿದ್ದರು. ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಗೆಲುವಿನ ಸಿಂಚನ ನೀಡಿದ ‘ನಂಜುಂಡಿ ಕಲ್ಯಾಣ’ ಉದಯಶಂಕರ್ ಲೇಖನಿಯಿಂದ ಮೂಡಿ ಬಂದಿದ್ದ ಚಿತ್ರ. ದೊಡ್ಡ ಪ್ರಮಾಣದ ಯಶಸ್ಸನ್ನು ಕಂಡ ಈ ಚಿತ್ರ ಉದಯ ಶಂಕರ್‌ ಅವರ ಪಾಲಿಗೆ ದೊಡ್ಡ ದುರಂತವನ್ನು ತಂದಿತು. ಈ ಚಿತ್ರದ ಶತದಿನೋತ್ಸವ ಸಮಾರಂಭಕ್ಕೆ ಮದ್ರಾಸಿನಿಂದ ಹೊರಟಿದ್ದ ಉದಯಶಂಕರ್‌ ಅವರ ಮಗ ರವಿಶಂಕರ್ ಹೊಸಕೋಟೆ ದೊಡ್ಡ ಏರಿ ಬಳಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಮಗನ ಸಾವು ಉದಯಶಂಕರ್‌ ಅವರನ್ನು ನಡುಗಿಸಿಬಿಟ್ಟಿತು. ಅಲ್ಲಿಂದ ಮುಂದೆ ಅವರು ಚೇತರಿಸಿಕೊಳ್ಳಲೇ ಇಲ್ಲ. ಮುಂದೆ ಅವರು ಚಿತ್ರ ಸಾಹಿತ್ಯ ರಚಿಸಿದರೂ ಮೊದಲಿನ ಉತ್ಸಾಹ ಉಳಿದಿರಲಿಲ್ಲ.

1994ರ ಫೆಬ್ರವರಿ 18ಕ್ಕೆ ಉದಯಶಂಕರ್‌ ಅವರಿಗೆ ಅರವತ್ತು ವರ್ಷಗಳು ತುಂಬುತ್ತಿದ್ದವು. ಅದಕ್ಕಾಗಿ ಅವರ ರಚನೆಯ ಐದುನೂರು ಗೀತೆಗಳ ಸಂಕಲನವನ್ನು ತರುವ ಯೋಜನೆ ರೂಪುಗೊಂಡಿತು. ಅದರ ಸಂಪಾದಕತ್ವದ ಹೊಣೆಯನ್ನು ಉದಯಶಂಕರ್‌ ಅವರೇ ನನಗೆ ವಹಿಸಿದರು. ಹಾಡುಗಳ ಆಯ್ಕೆಯ ನಂತರ ಅದರ ಹಿಂದಿನ ಕಥೆಯನ್ನು ಉದಯಶಂಕರ್ ಹೇಳುತ್ತಿದ್ದರು. ಅದನ್ನು ನಾನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಈ ಕೆಲಸ ಬಹಳ ಉತ್ಸಾಹದಿಂದಲೇ ಸಾಗುತ್ತಿತ್ತು. 1993ರ ಫೆಬ್ರವರಿ 18ರಂದು ತಮ್ಮ ಹುಟ್ಟುಹಬ್ಬವನ್ನು ಉದಯಶಂಕರ್‌ ಚೆನ್ನೈನಲ್ಲಿಯೇ ಆಚರಿಸಿ ಕೊಂಡಿದ್ದರು. ಫೆಬ್ರವರಿ 19ರಂದು ಬೆಂಗಳೂರಿಗೆ ಬಂದವರು ಪೂರ್ತಿ ದಿನವನ್ನು ನನ್ನ ಜೊತೆಗೇ ಕಳೆದರು. ಅವತ್ತು ಒಂದೇ ದಿನದಲ್ಲಿ ಸುಮಾರು ನೂರು ಹಾಡುಗಳ ಕುರಿತು ಚರ್ಚೆ ಟಿಪ್ಪಣಿಗಳು ನಡೆದವು. ‘ಕಸ್ತೂರಿ ನಿವಾಸ’ದ ಹಾಡುಗಳ ಚರ್ಚೆ ನಡೆಯಿತು. ‘ಆಡಿಸಿ ನೋಡು’ ಕುರಿತು ಸುದೀರ್ಘವಾಗಿಯೇ ಉದಯಶಂಕರ್ ಮಾತನಾಡಿದರು. ನಾನು, ‘ಆಡಿಸಿದಾತ ಬೇಸರ ಮೂಡಿ ಕೂಡ ಸಂಕಲನದಲ್ಲಿ ಇರಲಿ ಸಾರ್’ ಎಂದೆ. ಉದಯಶಂಕರ್‌ಗೆ ಏನನ್ನಿಸಿತೋ ‘ ಬೇಡಪ್ಪ, ನಾನು ಸತ್ತಾಗ ಬರೆಯೋ ಹೆಡ್ಡಿಂಗ್‌ಅದು’ ಎಂದರು. ನನಗೆ ಕಸಿವಿಸಿ ಎನ್ನಿಸಿತು. ಬೆಳಗ್ಗಿನಿಂದ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತಾಯಿತು. ಅವರೇ ಮಾತು ಬದಲಾಯಿಸಿದರೂ ಮೊದಲಿನ ಉತ್ಸಾಹ ಇರಲಿಲ್ಲ. ವಿಪರ್ಯಾಸವೆಂದರೆ ಉದಯಶಂಕರ್‌ಅವರ ಜೊತೆಗಿನ ಅದೇ ನನ್ನ ಕೊನೆಯ ಭೇಟಿಯಾಯಿತು. ಮುಂದೆ ಹಲವು ಕಹಿಘಟನೆಗಳು ನಡೆದುಹೋದವು. 1993ರ ಜುಲೈ 2ರಂದು ಸಂಜೆ ಉದಯ ಶಂಕರ್‌ಅವರ ಆರೋಗ್ಯದ ಕುರಿತು ಯೋಚಿಸುತ್ತಿದ್ದ ನನಗೆ ಕಂಡಿದ್ದು ಸಂಜೆ ದಿನಪತ್ರಿಕೆಯ ಹೆಡ್ಡಿಂಗ್ ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ’.

`ದೂರದ ಬೆಟ್ಟ’ ಚಿತ್ರದಲ್ಲಿ ದ್ವಾರಕೀಶ್, ಎಂ.ಎಸ್.ಸತ್ಯ, ಕಮೆಡಿಯನ್ ಗುಗ್ಗು, ಬೆಂಗಳೂರು ನಾಗೇಶ್ ಮತ್ತು ಚಿ.ಉದಯಶಂಕರ್

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾರ್ವಭೌಮ ‘ಟಿ.ಜಿ.ಲಿಂಗಪ್ಪ’

ಶಾಸ್ತ್ರೀಯ ಸಂಗೀತದ ಅಪಾರ ಅಭಿಮಾನಿಯಾಗಿದ್ದರೂ ಜಗತ್ತಿನ ವಿಭಿನ್ನ ಶೈಲಿಯ ಸಂಗೀತದ ಪರಿಚಯ ಟಿ.ಜಿ.ಲಿಂಗಪ್ಪ ಅವರಿಗಿತ್ತು. ಅದರಲ್ಲೂ ಲ್ಯಾಟಿನ್‌ ಅಮೆರಿಕಾದ ಬುಡಕಟ್ಟು

ಕಂಚಿನಕಂಠದ ನಟ ಅರಸ್

ಕನ್ನಡ ಚಿತ್ರರಂಗದ ಕಂಚಿನಕಂಠದ ನಟ ಸುಂದರ ಕೃಷ್ಣ ಅರಸ್. ಚಾಮರಾಜನಗರ ಸಮೀಪದ ಉತ್ತವಳ್ಳಿ ಹುಟ್ಟೂರು. ಯಳಂದೂರಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ