ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಗಾನ ಗಾರುಡಿಗ

ಪೋಸ್ಟ್ ಶೇರ್ ಮಾಡಿ
ಶ್ರೀನಿವಾಸ ಪ್ರಸಾದ್‌
ಲೇಖಕ

ಭಾರತೀಯ ಸಿನಿಮಾ ಕಂಡ ಮೇರು ಗಾಯಕ ಎಸ್ಪಿಬಿ ಅವರು ಇಂದು (ಜೂನ್‌ 4) ನಮ್ಮೊಂದಿಗೆ ಇದ್ದಿದ್ದರೆ 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. – ಲೇಖಕ ಶ್ರೀನಿವಾಸ್ ಪ್ರಸಾದ್ ಅವರು ಎಸ್ಪಿಬಿ ಗಾನವೈಭವ ನೆನಪು ಮಾಡಿಕೊಂಡಿದ್ದಾರೆ.

‘ಕಾಣದ ಊರಲಿ ನೀ ಕುಳಿತಿರುವೆ, ಚೆಲುವೆಯ ಅಂದದ ಮೊಗಕೆ.. ನಿನ್ನ ಕಂಡು ಬೆರಗಾದೆನೆ, ನಮಗಾಗೇ ಈ ಲೋಕ, ಇಂದೇ ಸುಗ್ಗಿ … ನೀ ಇರಲು ಜೊತೆಯಲ್ಲಿ, ಕೇಳದೆ ನಿಮಗೀಗ..  ಆಸೆಯ ಭಾವ, ನೀರ ಬಿಟ್ಟು ನೆಲದ ಮೇಲೆ, ಎಲ್ಲರನ್ನ ಕಾಯೋ ದ್ಯಾವ್ರೇ.. ಕೋಳಿಗೆ ಹಲ್ಲಿಲ್ಲ, ಸ್ನೇಹದ ಕಡಲಲ್ಲಿ, ಚೆಲುವಾ ಪ್ರತಿಮೆ ನೀನು, ಎಲ್ಲಿರುವೆ ಮನವ ಕಾಡುವ ರೂಪಸಿಯೇ, ಇದೇ ನಾಡು,ಇದೇ ಭಾಷೆ, ಈ ದೇಶ ಚೆನ್ನ, ನಲಿವಾ ಗುಲಾಬಿ ಹೂವೇ, ಇಂಥ ಆಪಾತ ಮಧುರ ಹಾಡುಗಳ ಯಜಮಾನ ಡಾ.ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯ.

15ಕ್ಕೂ ಅಧಿಕ ಭಾಷೆಗಳಲ್ಲಿ ಕೊರಳ ಇಂಚರವನ್ನುಣಬಡಿಸಿ 53 ವರ್ಷಗಳ ಕಾಲ ಸಿನಿರಸಿಕರಿಗೆ ಭಾವ ರಸಧಾರೆಯನ್ನೇ ಈ ಪುರುಷ ಸರಸ್ವತಿ ನೀಡಿದ್ದಾರೆ. ಆಯಿರಂ ನಿಲವೇವ, ವಂದನಂ ಅಭಿವಂದನಂ, ಆಗದು ಆಗದು, ಪುಣ್ಯಭೂಮಿ ನಾ ದೇಶಂ, ಈ ಪೇಟಕುನೇನೇ ಮೇಸ್ತ್ರೀ, ಇದಿ ತೊಲಿ ರಾತ್ರಿ, ಎಂದು ತೆಲುಗು, ತಮಿಳಿನಲ್ಲಿ ಉಲಿದು, ಒಲಿದ ಕೋಗಿಲೆ ಹಿಂದಿಯಲ್ಲಿ ಸಹ ಓ ಮಾರಿಯಾ, ತೇರೇ ಮೇರೇ ಬೀಚ್ ಮೆ, ಪೆಹಲಾ ಪೆಹಲಾ ಪ್ಯಾರ್ ಹೆ, ಮೇರೆ ರಂಗ್ ಮೆ, ತುಮ್ಸೆ ಮಿಲ್ನೆ ಕಿ ತಮನ್ನಾ ಹೆ… ಹೀಗೆ ಭಾರತೀಯ ಸಿನಿಲೋಕದ  ಅತ್ಯಧಿಕ  ಗೀತೆಗಳನ್ನು ಹಾಡಿರುವ ಪುರುಷ ಗಾಯಕ. ಸಂಖ್ಯೆ ಇಲ್ಲಿ ನಗಣ್ಯ, ಆದರೆ ಎಸ್ಪಿಬಿ ಅವರ ಗಾನ ಸುಭಗತೆಗೆ ಸರಿಸಾಟಿ ಎಸ್ಪಿಬಿ ಅವರು ಮಾತ್ರ.

1946ರ ಜೂನ್ 4ರಂದು ಆಂಧ್ರದ ನೆಲ್ಲೂರಿನ ಕೊನಟಂ ಪೇಟೆಯಲ್ಲಿ ಹುಟ್ಪಿದ  ಸಾಂಬಮೂರ್ತಿಗಳ ಮಗ ತಮ್ಮ ಹದಿವಯಸ್ಸಿನಲ್ಲೇ ಘಂಟಸಾಲ, ಕೋದಂಡಪಾಣಿ ಅವರಂಥ ದಿಗ್ಗಜರೆದುರು ಸಂಗೀತ ಸ್ಪರ್ಧೆಯೊಂದರಲ್ಲಿ ‘ರಾಗಮು ಅನುರಾಗಮು..’ ಎಂಬ ಗೀತೆ ಬರೆದು, ರಾಗ ಸಂಯೋಜಿಸಿ ವಿಜೇತರಾದವರು. ಇಂಜಿನಿಯರಿಂಗ್ ದಾರಿ ಹಿಡಿಯಬೇಕಾಗಿದ್ದ ಹುಡುಗ ತಾಂತ್ರಿಕ ಲೋಕವನ್ನು ಬಿಟ್ಟು ಮುಂದೆ ತಮ್ಮ ಗಾಯನ ಜಗದಲ್ಲಿ ವಿರಾಜಮಾನರಾಗಿ ಮಿನುಗಿದರು. 70 ದಾಟಿದ ವಯೋಮಾನದಲ್ಲೂ ಸುಶ್ರಾವ್ಯ ಕಂಠಸಿರಿಯ ನುಡಿ ಮಾಲಿಕನಾಗಿಯೇ ಉಳಿದಿದ್ದರೆನ್ನುವುದು ಗಟ್ಟಿ ಪರಿಶ್ರಮದ ದ್ಯೋತಕ.

‘ನಾನು ಸಂಗೀತ  ಕಲಿತವನಲ್ಲ’ ಎನ್ನುತ್ತಿದ್ದ ಎಸ್ಪಿಬಿ ಅವರು ಹಾಡಿರುವ ಮಧ್ಯಮಾವತಿರಾಗದ ‘ಶಂಕರಾ ನಾದಶರೀರಾ ಪರಾ’ (ನಮ್ಮೂರ ಮಂದಾರ ಹೂವೇ ಹಾಡೂ ಸಹ ಮಧ್ಯಮಾವತಿಯೇ ಆಗಿದೆ), ‘ಸಾಗರ ಸಂಗಮಂ’ನ ಷಣ್ಮುಖಪ್ರಿಯ ರಾಗದ ‘ತಕಿಟತಧಿಮಿ ತಕಿಟ ತಧಿಮಿ ತಂದಾನ’, ‘ಬಾ ಬಾ ಬಾ ರಾಗವಾಗಿ’ ಹಾಡಿನ ರಾಗಮಾಲಿಕೆ, ’ನೀನು ನೀನೇ ಇಲ್ಲಿ ನಾನು ನಾನೇ’, ಹಾಡಿನ ಹಿಂದೋಳ ರಾಗಾರಂಭ ಮತ್ತೆ ರಾಗ ಮಾಲಿಕೆ, ಮರಳಿ ಹಿಂದೋಳಕ್ಕೆ ತಿರುಗುವ ಗೀತೆ, ಇಳಯರಾಜ ಅವರ ಸಂಯೋಜನೆಯ ಎಸ್ಪಿಬಿ ಅವರ ಉಸಿರು ರಹಿತ ಗೀತೆ ‘ಕೇಳಡಿ ಕಣ್ಮಣಿ’ಯ ಕೀರವಾಣಿ ರಾಗದ ‘ಮಣ್ಣಿಲ್ ಎಂದ ಕಾದಲ್’,’ನಲಿವಾ ಗುಲಾಬಿ ಹೂವೇ’, ‘ಶಿಲೆಗಳು ಸಂಗೀತವ’, ‘ಬಾ ನನ್ನ ಸಂಗೀತ’ ಎಲ್ಲವೂ ಶಿವರಂಜಿನಿ ರಾಗಾಧಾರಿತ ಗೀತೆಗಳೇ ಆಗಿವೆ. ಕಲಾವತಿ ರಾಗದ ‘ಯಾವ ಕಾಣಿಕೆ ನೀಡಲಿ ನಿನಗೆ’, ‘ರೇವತಿ ರಾಗದ ನೀನೇ ಸಾಕಿದಾ ಗಿಣಿ’, ಹಿಂದಿಯ ‘ಸಾಜನ್’ ಚಿತ್ರದ ‘’ದೇಖಾ ಹೆ ಪೆಹಲಿ ಬಾರ್’ ಹಾಡಿನ ದರ್ಬಾರಿ ಕಾನಡ ರಾಗದ ಝಲಕ್, ಇವೆಲ್ಲ ರಾಗಸಿರಿಯ ಮಾಧುರ್ಯ ಸಿಂಚನದ ಗೀತೆಗಳು. ತಿಲಂಗ್ ರಾಗದ ಎಸ್ಪಿ- ಕನ್ನಡ ಜನತೆಯ ನಿಡುಗಾಲದ ಸಂಬಂಧಕ್ಕೆ ಅನ್ವರ್ಥವಾಗಿರುವ ‘ಮಾಮರವೆಲ್ಲೋ, ಕೋಗಿಲೆಯೆಲ್ಲೋ’, ‘ಕರ್ನಾಟಕದ ಇತಿಹಾಸದಲಿ..’ ಈ ಗೀತೆಯ ಅಭೇರಿ/ಭೀಂಪಲಾಸ್ ರಾಗದ ಗಾನ ವಿಭವಕ್ಕೆ ಸರಿಸಮಾನವಾದ ಇನ್ನೊಂದು ಕಂಠ ಅಸಾಧ್ಯ.

ಅದಲ್ಲದೆ, ಮೂಲ ಕನ್ನಡದ ಗಾಯಕರಿಗೇ ಸಂಕೀರ್ಣವಾಗುವ ‘ತರಿಕೇರಿ ಏರಿ ಮೇಲೆ’,’ಕೋಳಿಗೆ ಹಲ್ಲಿಲ್ಲ’, ‘ತಾಳಿ ಕಟ್ಟುವ ಶುಭವೇಳೆ’, ‘ಮಾಮ ಮಾಮ ಮಸ್ತಿ’, ‘ಸುಂದರಿ ಸುಂದರಿ ಸುರಸುಂದರಿ’, ‘ಹೊಡಿತಾವ್ಳೆ ಬಡಿತಾವ್ಳೆ ನನ್ ಎಂಡ್ತಿ’ ಎಸ್.ಪಿ ಅವರನ್ನು ಬಿಟ್ಟುಯಾರಿಂದಲೂ ಹಾಡಲಾಗದು. ಕನ್ನಡದಲ್ಲಿ 1967ರಲ್ಲಿ ತೆರೆಕಂಡ ‘ನಕ್ಕರೆ ಅದೇ ಸ್ವರ್ಗ’ ನಟ ನರಸಿಂಹರಾಜು ಅವರ 100ನೇ ಚಿತ್ರ. ಎಸ್.ಪಿ ಮತ್ತು ಸಂಗೀತ ಸಂಯೋಜಕ ಎಂ.ರಂಗರಾವ್ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಈ ಚಿತ್ರದ ವಿಜಯನಾರಸಿಂಹ ರಚನೆಯ ‘ಕನಸಿದೋ, ನನಸಿದೋ’ ಯುಗಳ ಗೀತೆ ಎಸ್ಪಿ ಅವರ ಪ್ರಥಮ ಗೀತೆ. ಪಿ.ಸುಶೀಲ – ಎಸ್.ಪಿ  ಯುಗಳ ಗೀತೆಗೆ ಜಯಂತಿ – ಅರುಣ್ ಕುಮಾರ್ (ಗುರುರಾಜುಲು ನಾಯ್ಡು)ಅವರ ಅಭಿನಯವಿದೆ.

ತಮ್ಮನ್ನು ಘಂಟಸಾಲ ಅವರ ಏಕಲವ್ಯ ಶಿಷ್ಯ ಎಂದು ಕರೆದುಕೊಳ್ಳುತ್ತಿದ್ದ ಬಾಲಸುಬ್ರಹ್ಮಣ್ಯ ಅವರ ಮೆಚ್ಚಿನ ಗಾಯಕರು ಮೊಹಮ್ಮದ್‌ ರಫಿ. ಜಾನಕಿ ಅವರು ಹಾಡಿದ ಮೋಹನ ರಾಗಾಧಾರಿತ ಗೀತೆಯಾದ ರಾಜನ್ – ನಾಗೇಂದ್ರ ಸಂಗೀತದ ‘ಬಾನಲ್ಲೂ ನೀನೇ’ ಹಾಡನ್ನು ಅದೇ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ತೆಲುಗಿನ ಪಂತುಲಮ್ಮ ಚಿತ್ರಕ್ಕಾಗಿ ಹಾಡಿದ ಎಸ್ಪಿ ‘ಜಾನಕಿ ಅವರಷ್ಟು ಸೊಗಸಾಗಿ ಹಾಡಲು ನನ್ನಿಂದ ಆಗಲಿಲ್ಲ’ ಎಂದವರು. ಪಿ.ಸುಶೀಲ ಅವರನ್ನು ತಲ್ಲಕೋಯಿಲ ಅನ್ನುವ ಎಸ್ಪಿ ಅವರು ಪಿ.ಬಿ.ಎಸ್ ತರಹ ಹಾಡಲು ಯಾರಿಂದಲೂ ಅಸಾಧ್ಯ, ಅವರ ಹಾಡಿನ ಸವಿ ಮಾತ್ರ ಅನುಭವಿಸಬೇಕು ಎಂದಿದ್ದರು.

ಎಲ್ಲ ಗಾಯಕಿಯರ ಜೊತೆಗೂ ಎಸ್ಪಿ ಅವರ ಗಂಟಲು ಗಾನ ಮಂಜರಿಯನ್ನೇ ಬಹುಭಾಷೆಗಳಲ್ಲಿ ನೀಡಿವೆ. ಲತಾ ಜೊತೆಗೆ, ‘ತೇರೆ ಮೇರೇ ಬೀಚ್ ಮೆ’, ‘ದೀದಿ ತೇರಾ ದೇವರ್ ದೀವಾನಾ’, ಪಿ.ಸುಶೀಲ ಜೊತೆ ‘ಅಲ್ಲಿ ಇಲ್ಲಿ ಹುಡುಕುತ ಕಣ್ಣು’, ‘ಜುಮ್ಮಂದಿ ನಾದಂ’, ‘ನಾ ಕಳ್ಳು ಚಪ್ತುನ್ನಾಯಿ’, ‘ವಿರಿಂಚಿನೈ, (ಅಭೇರಿ ರಾಗಾಧಾರಿತ) ವಾಣಿ ಜಯರಾಮ್ ಅವರ ಜೊತೆ ‘ನನಸಲೂ ನೀನೆ’, ‘ವಸಂತ ಬರೆದನು ಒಲವಿನ ಓಲೆ’, ‘ಬೆಳ್ಳಿ ಮೋಡವೆ ಎಲ್ಲಿ ಓಡುವೆ’ ಈಶ್ವರಿ ಅವರೊಂದಿಗೆ ‘ನಮ್ಮೂರ್‌ನಾಗೆ ನಾನೊಬ್ನೆ ಜಾಣ’, ‘ಸಿಂಗಾಪುರಿನ ಗೊಂಬೆ’ ಇತ್ಯಾದಿ. ಆದರೆ ಎಸ್ಪಿ – ಎಸ್.ಜಾನಕಿ ಅವರ ಜೋಡಿ ಮಾಡಿದ ಮೋಡಿ ಸುವರ್ಣ ಅಧ್ಯಾಯ. ‘ಬಂದೆಯ ಬಾಳಿನ ಬೆಳಕಾಗಿ’, ‘ನನ್ನ ಆಸೆ ಹಣ್ಣಾಗಿ’, ‘ನಿನ್ನೆ ನಿನ್ನೆಗೆ’, ‘ಚಿನ್ನದ ರಾಣಿ ಬಾರೇ’, ‘ನಮ್ಮೂರು ಮೈಸೂರು’, ‘ಕನ್ನಡಮ್ಮನ ದೇವಾಲಯ’, ‘ಕಂಗಳು ವಂದನೆ ಹೇಳಿದೆ’, ‘ಒಲಿದ ಜೀವ’, ‘ನಿನ್ನ ನಗುವು ಹೂವಂತೆ’, ‘ಬಿಸಿಲಾದರೇನು’, ‘ಜೀವ ವೀಣೆ’, ‘ನೀ ಬಂದರೆ ಮೆಲ್ಲನೆ’ ಹೀಗೆ ಸಾವಿರಾರು ಗೀತೆಗಳ ಅತ್ಯಂತ ಯಶಸ್ವೀ ಜೋಡಿ.

ಸಂದರ್ಭ, ಸೌಭಾಗ್ಯಲಕ್ಷ್ಮಿ, ರಾಮಣ್ಣ ಶಾಮಣ್ಣ, ದೇವರೆಲ್ಲಿದ್ದಾನೆ, ಮುದ್ದಿನ ಮಾವ ಮೊದಲಾದ  ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ತಮಿಳಿನ ‘ಶಿಖರಂ’, ತೆಲುಗಿನ ‘ಮಯೂರಿ’, ‘ಪಡಮಟಿ ಸಂಧ್ಯಾರಾಗಂ’ ಚಿತ್ರಗಳ ಅವರ ಸಂಗೀತ ಸಂಯೋಜನೆ ನನಗೆ ಬಹಳ ಇಷ್ಟ. ಪದ್ಮ ಪ್ರಶಸ್ತಿಗಳ ಈ ಅಪ್ರತಿಮ ಗಾಯಕ ತಿರುಗುಬಾಣ, ಕಲ್ಯಾಣೋತ್ಸವ, ಮಿಥಿಲೆಯ ಸೀತೆಯರು, ಮಾಂಗಲ್ಯಂ ತಂತು ನಾನೇನ, ಬಾಳೊಂದು ಚದುರಂಗ, ಕನಸಲೂನೀನೆ ಮನಸಲೂ ನೀನೆ, ಮುದ್ದಿನ ಮಾವ ಮೊದಲಾದ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ಶಿಖರಂ’ ತಮಿಳು ಚಿತ್ರದಲ್ಲಿ ರಾಧಾ ಅವರೊಂದಿಗೆ ಎಸ್ಪಿಯವರ ಅಭಿನಯ ಚಿತ್ರದ ಸಂಗೀತ ನಿರ್ದೇಶನದಲ್ಲಿ ಎಸ್ಪಿಯವರ ಛಾಪು ಕಾಣುತ್ತದೆ. ಈ ಚಿತ್ರದಲ್ಲಿ ಚಿತ್ರಾ ಮತ್ತು ಎಸ್ಪಿ ಅವರು ಹಾಡಿರುವ ‘ಇದೋ ಇದೋ ಒರು ಪಲ್ಲವಿ’ ಹಾಡು ಬಹಳ ಸೊಗಸು. ನೃತ್ಯಗಾರ್ತಿ ಸುಧಾಚಂದ್ರನ್ ಅವರ ಜೀವನಾಧಾರಿತ ಚಿತ್ರ ‘ಮಯೂರಿ’. ಇದರ ಸಂಗೀತ ನಿರ್ದೇಶನದಲ್ಲೂ ಎಸ್ಪಿಯವರ ಪ್ರತಿಭೆ ಮಿನುಗಿದೆ.

‘ಪಡಮಟಿ ಸಂಧ್ಯಾರಾಗಂ’ ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ‘Life is Shabby Without You Baby’ ಎಂಬ ಹಾಡನ್ನೂ ಬರೆದು ಹಾಡಿರುವ  ಸೃಜನಶೀಲತೆ ಅಪಾರ ಸಂತಸವನ್ನುಂಟು ಮಾಡುತ್ತದೆ. ಸ್ಟುಡಿಯೊ ಮಾಲಿಕರೂ ಆದ ಎಸ್ಪಿ ಸೋದರಿ ಶೈಲಜ ಅವರೂ ಉತ್ತಮ ಗಾಯಕಿ. ಚರಣ್, ಪಲ್ಲವಿ ಎಸ್.ಪಿ ಅವರ ಮಕ್ಕಳು. ಕಂಠದಾನ ಕಲಾವಿದರಾಗಿಯೂ ಎಸ್ಪಿ ದುಡಿದಿದ್ದಾರೆ. 8 ಫೆಬ್ರವರಿ 1981ರಂದು ಉಪೇಂದ್ರಕುಮಾರ್  ಸಂಯೋಜನೆಯಲ್ಲಿ ಒಂದೇ ದಿನ 21 ಹಾಡುಗಳ ಧ್ವನಿ ಮುದ್ರಣ, ಹಾಗೇ ಒಂದೇ ದಿನ 16 ಹಾಗೂ ಮತ್ತೊಂದು ದಿನ ಆಗಿನ ಮದ್ರಾಸ್ ನಲ್ಲಿ 19 ಗೀತೆಗಳನ್ನು ಹಾಡಿದ್ದ ಸಾಹಸೀ ಸೃಜನಶೀಲ ಮತ್ತು ನಿತ್ಯಾಹ್ಲಾದಿತ, ಸರಸ್ವತೀ ಸಂಪನ್ನ ಎಸ್.ಪಿ.ಅವರನ್ನು  ಹಿಂದೆ ಭೇಟಿ ಮಾಡಿದ್ದ ರಸ ಚಣಗಳ ಸವಿ ಮೆಲುಕು. ನನ್ನ ಜೀವ – ಜೀವನದ  ಶಾಶ್ವತ ಮತ್ತು ಅಜಸ್ರ ಸಂಪತ್ತು. ಇಂಥ ಗಾಯಕನನ್ನುಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಎರಡು ಸಲ ಮತ್ತು ಕೋಲಾರದಲ್ಲಿ ಒಮ್ಮೆ ಭೇಟಿಯಾದ ಸುಕೃತ ನನ್ನದೆನ್ನಲು ಖುಷಿಯಾಗುತ್ತದೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಬಹುಭಾಷಾ ತಾರೆ ಚಂದ್ರಕಲಾ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ