ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಾತನಾಡಲು ಬಂದ ಬಿ.ಜಯ ಮೌನವಾಗಿದ್ದೇಕೆ?

ಪೋಸ್ಟ್ ಶೇರ್ ಮಾಡಿ
ಬಸವರಾಜು ಮೇಗಲಕೇರಿ
ಪತ್ರಕರ್ತ – ಲೇಖಕ

2012ರ ಮಾರ್ಚ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಹಿರಿಯ ನಟಿ ಬಿ.ಜಯ ಅತಿಥಿಯಾಗಿ ಪಾಲ್ಗೊಂಡಿದ್ದರು. ನಿನ್ನೆ (ಜೂನ್‌ 4) ಜಯಮ್ಮ ನಮ್ಮನ್ನು ಅಗಲಿದ್ದಾರೆ. ಅಂದು ‘ಬೆಳ್ಳಿಹೆಜ್ಜೆ’ಯಲ್ಲಿ ಜಯ ಅವರ ಕುರಿತು ತಾವು ಬರೆದ ಲೇಖನವನ್ನು ಹಿರಿಯ ಪತ್ರಕರ್ತ ಬಸವರಾಜು ಮೇಗಲಕೇರಿ ಹಂಚಿಕೊಂಡಿದ್ದಾರೆ.

ಶ್ರೀಮಂತ ಕುಟುಂಬ, ಕಟ್ಟುನಿಟ್ಟಿನ ಅಪ್ಪ, ಸ್ವೇಚ್ಛಾಚಾರದ ಮಗ… ಮಗನಿಗೆ ಹಣದ, ಹಸಿವಿನ ಬೆಲೆ ಗೊತ್ತಿಲ್ಲ. ಆದರೆ ಯಾರೋ ಬೀದಿಯಲ್ಲಿ ಹಾಡಿಕೊಂಡು ಹೋಗುತ್ತಿದ್ದ ಬದುಕಿನ ಬೆರಗನ್ನು ಬಿಡಿಸಿಡುವ ಒಗಟಿನಂತಹ ಹಾಡೊಂದು ಆತನನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅದಕ್ಕಾಗಿ ಆತ ಕಾತರಿಸುತ್ತಾನೆ. ಹಾಡುಗಾರ ಅದಕ್ಕೆ ಭಾರೀ ಕಿಮ್ಮತ್ತು ಕೊಡಬೇಕೆಂದು ಕೇಳಿದಾಗ, ಕೊಟ್ಟು ಆ ಹಾಡನ್ನು ತನ್ನದಾಗಿಸಿಕೊಳ್ಳುತ್ತಾನೆ. ಆ ಹಾಡಿಗಾಗಿ ಅಪ್ಪನನ್ನು, ಮನೆಯನ್ನು, ಶ್ರೀಮಂತಿಕೆಯನ್ನು ಕಳೆದುಕೊಳ್ಳುತ್ತಾನೆ. ಬೀದಿ ಪಾಲಾಗುತ್ತಾನೆ. ಒಬ್ಬಂಟಿಯಾಗುತ್ತಾನೆ. ಯಾರೋ ಹೇಳಿದ ಒಗಟಿನಂತಹ ಹಾಡೆ ಆತನ ತಲೆ ತುಂಬಿಕೊಳ್ಳುತ್ತದೆ. ಅದನ್ನು ಗುನುಗುತ್ತ, ಅದರ ಅರ್ಥ ಅರಿಯುತ್ತ ಥೇಟ್‌ ಬೀದಿ ಭಿಕಾರಿಯೇ ಆಗುತ್ತಾನೆ.

ಅದೇ ವೇಷದಲ್ಲಿ ತಿರುತಿರುಗಿ ತನ್ನ ಮನೆಗೇ ಬರುತ್ತಾನೆ. ಝಗಮಗಿಸುತ್ತಿರುವ ವೈಭವೋಪೇತ ಮನೆ. ಅಂದು ಅಲ್ಲಿ ತನ್ನ ಸ್ವಂತ ತಂಗಿಯ ಅದ್ದೂರಿ ಹುಟ್ಟುಹಬ್ಬದ ಆಚರಣೆ. ಎಂದಿನ ಪ್ರೀತಿಯಿಂದ ತಂಗಿಯನ್ನು ಕಾಣಲು, ಹಾರೈಸಲು ಕಾತರಿಸುವ ಅಣ್ಣನನ್ನು, ತಂಗಿ ತೀರಾ ತುಚ್ಛವಾಗಿ ಕಾಣುತ್ತಾಳೆ. ನೀನು ನನ್ನ ಅಣ್ಣನೇ ಅಲ್ಲ ಇಲ್ಲಿಂದ ಮೊದಲು ತೊಲಗು ಎನ್ನುತ್ತಾಳೆ. ಈ ಘಟ್ಟದಲ್ಲಿ ಅಣ್ಣ ಮತ್ತು ತಂಗಿಯ ನಡುವೆ ನಡೆಯುವ ಸಂಘರ್ಷಮಯ ಸಂಭಾಷಣೆಯನ್ನು- ಕೇವಲ ಒಂದು ಪಾತ್ರದ ಸಂಭಾಷಣೆಯನ್ನಲ್ಲ- ಅಣ್ಣ ತಂಗಿಯ ಎರಡೂ ಪಾತ್ರಗಳು ಆಡುವ ಸಂಭಾಷಣೆಯನ್ನು ಒಂದೇ ಒಂದು ವಾಕ್ಯವನ್ನೂ ಬಿಡದಂತೆ, ಅದೇ ಪಾತ್ರಗಳು ಎದ್ದು ಬಂದು ರಂಗದ ಮೇಲೆ ಜೀವಕಳೆ ತುಂಬಿಕೊಂಡು ಆಡಿದಂತೆ ಒಪ್ಪಿಸಿದವರು, ನೆರೆದಿದ್ದ ಪ್ರೇಕ್ಷಕರನ್ನು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿದವರು ಕನ್ನಡ ಚಿತ್ರರಂಗದ ಏಕೈಕ ಕುಳ್ಳಿ ಜಯ. ಚಿನಕುರುಳಿ ಜಯ.

ಆಗಿನ ಸಂದರ್ಭವನ್ನು, ನಾಟಕಗಳಲ್ಲಿ ಅಭಿನಯದ ಜೊತೆಗೇ ಸಂಭಾಷಣೆಯೇ ಬಹಳ ಮುಖ್ಯವಾಗಿದ್ದ ಕಾಲವನ್ನು ಜಯ ನೆನಪು ಮಾಡಿಕೊಳ್ಳುತ್ತಿದ್ದರು… ಅದು ಕನ್ನಡ ಚಿತ್ರರಂಗ ಮದ್ರಾಸ್‍ನಲ್ಲಿ ಬೀಡು ಬಿಟ್ಟಿದ್ದ ಕಾಲ. ಚಿತ್ರೀಕರಣವಿಲ್ಲದಿದ್ದಾಗ ರಂಗಭೂಮಿಯತ್ತ ನೋಡುತ್ತಿದ್ದ, ಅದರಿಂದ ಬರುವ ಅಲ್ಪಸ್ವಲ್ಪ ಹಣದಿಂದ ಬದುಕು ನೂಕುತ್ತಿದ್ದ ಕಾಲ. ಜಿ.ವಿ.ಅಯ್ಯರ್ ನಾಟಕ ಕಂಪನಿಯ ಮಾಲೀಕರಾಗಿದ್ದರು. ರಾಜಕುಮಾರ್, ಬಾಲಣ್ಣ, ನರಸಿಂಹರಾಜು ಆದಿಯಾಗಿ ಎಲ್ಲರೂ ಹೀಗೆ ಮದ್ರಾಸಿನಿಂದ ಕರ್ನಾಟಕದ ಹಳ್ಳಿಗಳತ್ತ ನುಗ್ಗಿ, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ಜನರನ್ನು ರಂಜಿಸುತ್ತಿದ್ದರು. ರಂಜನೆಯಿಂದ ಬಂದ ಹಣವನ್ನು ಎಲ್ಲರೂ ಹಂಚಿಕೊಂಡು ಏಕಕಾಲದಲ್ಲಿ ಚಿತ್ರರಂಗವನ್ನೂ, ರಂಗಭೂಮಿಯನ್ನೂ ಜೀವಂತವಾಗಿಟ್ಟಿದ್ದರು.

ಇಂಥದೇ ಸಂದರ್ಭದಲ್ಲಿ, ಉತ್ತರ ಕರ್ನಾಟಕದಲ್ಲಿ ನಾಟಕ ಕಂಪನಿ ಬೀಡುಬಿಟ್ಟಿದ್ದ ಸಮಯದಲ್ಲಿ, ರಾತ್ರಿ ಹತ್ತೂವರೆಯಿಂದ ಎರಡು ಗಂಟೆಯವರೆಗೆ ನಡೆಯುತ್ತಿದ್ದ ವೃತ್ತಿರಂಗಭೂಮಿಯ ಆ ಒಂದು ನಾಟಕದಲ್ಲಿ, ಅಣ್ಣನ ಪಾತ್ರಧಾರಿ ರಾಜಕುಮಾರ್, ತಂಗಿ ಪಾತ್ರವಾದ ಸುನಂದ ಪಾತ್ರ ಮಾಡಿದ್ದ ಜಯ ಅವರು, ಅಣ್ಣಾವ್ರಿಲ್ಲದ ಈ ಹೊತ್ತಿನಲ್ಲಿ ಅವರದೂ ಮತ್ತು ಇವರದೂ- ಎರಡನ್ನೂ ಅಂದಿನ ಆ ಕಾಲಘಟ್ಟಕ್ಕೇ ಹೋಗಿ ಸಂಭಾಷಣೆಯ ಸುರಿಮಳೆಯನ್ನೇ ಸುರಿಸುತ್ತಿದ್ದರು. ಆ ನಾಟಕವನ್ನು ಆಡಿ ಇಲ್ಲಿಗೆ ಸುಮಾರು ನಲವತ್ತು-ಐವತ್ತು ವರ್ಷಗಳೇ ಕಳೆದಿರಬಹುದು. ಆದರೂ ಆ ಊರು, ಆ ಸಂದರ್ಭ, ಆ ನಾಟಕದ ಸಂಭಾಷಣೆಯನ್ನು ಇಂದು ಇಲ್ಲಿ- ಕರ್ನಾಟಕ ಚಲನಚಿತ್ರ ಅಕಾಡೆಮಿಯವರ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಕೂತು ಮೆಲುಕು ಹಾಕುತ್ತಿದ್ದರು. ಜಯಮ್ಮನವರ ನೆನಪಿನ ಶಕ್ತಿಗೆ, ಕ್ರಿಯಾಶೀಲ ಮನಸ್ಸಿಗೆ ಅಲ್ಲಿ ನೆರೆದಿದ್ದವರೆಲ್ಲ ಒಂದು ಕ್ಷಣ ಬೆರಗಾದರು. ಏನ್ ನೆನಪು, ಆ ದನಿಯ ಏರಿಳಿತವೇನು, ಎಂಥಾ ಕತೆ ಇದು, ಅಬ್ಬಾ ಎಂದು ಆಶ್ಚರ್ಯಚಕಿತರಾದರು. ಜಯಮ್ಮನ ನೆನಪುಗಳನ್ನು ಕೇಳಲು ಬಂದಿದ್ದ, ಜಯಮ್ಮನ ಜೊತೆ ಜೊತೆಗೇ ನಟಿಸಿ ಚಿತ್ರಬದುಕಿನ ಹಾದಿ ಸವೆಸಿದ್ದ ದ್ವಾರಕೀಶ್, ಬಿ.ವಿ.ರಾಧ, ಸುದರ್ಶನ್, ಶೈಲಶ್ರೀಯವರಂತೂ ಒಂದು ಕ್ಷಣ ಸ್ಟನ್ ಆದರು.    

ಹೌದು ಬಿ.ಜಯ ಹುಟ್ಟು ಕಲಾವಿದೆ. ಕೊಳ್ಳೇಗಾಲ ಮೂಲದ ಅವರದು ಕಲಾವಿದರ ಕುಟುಂಬ. ಅಪ್ಪ ರಂಗಭೂಮಿಯಲ್ಲಿ ಪಳಗಿದ ಅಪ್ಪಟ ಕಲಾವಿದ. ಅವರ ಜೊತೆ ಜೊತೆಗೇ ರಂಗದ ಮೇಲೆ ಹೆಜ್ಜೆ ಹಾಕಿದ ಜಯ, ಆಟವಾಡುತ್ತಿದ್ದ ಸಮಯದಲ್ಲಿ ಅನಿವಾರ್ಯವಾಗಿ ಸಿಕ್ಕ ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಿದರು. ನಾಟಕಗಳ ಪಾತ್ರಗಳನ್ನು ನಿರ್ವಹಿಸುತ್ತಲೇ ಬೆಳೆದವರು. ನಟನೆಯನ್ನೇ ಬದುಕಾಗಿಸಿಕೊಂಡ, ಅದರಲ್ಲಿಯೇ ಬಾಲ್ಯ, ಯೌವನ, ವೃದ್ಧಾಪ್ಯವನ್ನೆಲ್ಲ ಕಳೆದು ಪರಿಪೂರ್ಣ ಕಲಾವಿದೆಯಾದರು. ಪುಟ್ಟ ಹುಡುಗಿಯ ಪಾತ್ರದಿಂದ ಹಿಡಿದು ಪ್ರೇಮಿ, ತಂಗಿ, ಅಕ್ಕ, ಅಮ್ಮ, ಅತ್ತೆ, ಅಜ್ಜಿಯ ಪಾತ್ರದವರೆಗೆ ಎಲ್ಲವನ್ನೂ ನಿರ್ವಹಿಸಿದರು. ಮಾಡದೇ ಇರುವ ಪಾತ್ರಗಳಿಲ್ಲ, ಇಂಥವರ ಜೊತೆ ಅಭಿನಯಿಸಿಲ್ಲ ಎನ್ನುವ ಕೊರಗೂ ಇಲ್ಲ. ಇಂತಹ ಜಯಮ್ಮರಿಗೆ ಈಗ ಅರವತ್ತೆಂಟು ವರ್ಷಗಳು. ಈಗಲೂ ಅದೇ ಉತ್ಸಾಹ, ಅದೇ ಲವಲವಿಕೆ. ಯಾರಾದರೂ ಬಂದು ಅಭಿನಯಿಸ್ತೀರಾ ಅಂದ್ರೆ ಸಾಕು, ಅವಕಾಶಕ್ಕಾಗಿ ಕಾಯ್ತಿದೀನಿ ಕೊಡಿ ಎಂದು ಚಿಗರೆಯಂತೆ ಕುಣಿದಾಡುವ ಜಯಮ್ಮ ಈಗಲೂ ಸಿನಿಮಾಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ ಬಿಡುವಿಲ್ಲದ ಬ್ಯುಸಿ ನಟಿ. ಅದರಿಂದ ಬರುವ ಹಣವೇ ಅವರ ಬತ್ತದ ಉತ್ಸಾಹಕ್ಕೂ, ಬದುಕಿನ ಬಂಡಿ ಎಳೆಯಲಿಕ್ಕೂ ಇರುವ ಬಹುಮುಖ್ಯ ಕೊಂಡಿ.

ಇಂತಹ ಜಯಮ್ಮ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1956ರಲ್ಲಿ, ಭಕ್ತ ಪ್ರಹ್ಲಾದ ಚಿತ್ರದ ಪುಟ್ಟ ಪಾತ್ರದ ಮೂಲಕ. ಅಲ್ಲಿಂದ ಇಲ್ಲಿಯವರೆಗೆ, ಸರಿ ಸುಮಾರು 56 ವರ್ಷಗಳೇ ಉರುಳಿಹೋಗಿವೆ. ಜಿ.ವಿ.ಅಯ್ಯರ್, ಬಿ.ಆರ್. ಪಂತುಲು, ಆರೆನ್ನಾರ್, ಹುಣಸೂರು ಕೃಷ್ಣಮೂರ್ತಿಗಳಂತಹ ದಿಗ್ಗಜರ ಗರಡಿಯಲ್ಲಿ; ಪಂಡರೀಬಾಯಿ, ಲಕ್ಷ್ಮೀದೇವಿಯವರಂತಹ ಮಮತಾಮಯಿಗಳ ಮಡಿಲಲ್ಲಿ; ರಾಜಕುಮಾರ್, ಬಾಲಣ್ಣ, ನರಸಿಂಹರಾಜುರಂತಹ ಪ್ರತಿಭಾವಂತ ನಟರೊಂದಿಗೆ ಸೇರಿ ಅರಿತಿದ್ದು, ಅರಗಿಸಿಕೊಂಡಿದ್ದು, ಅನುಭವಿಸಿದ್ದು ಅಷ್ಟಿಷ್ಟಲ್ಲ. ಬರೋಬ್ಬರಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಸಾಮಾನ್ಯವಾದ ಸಂಗತಿಯಲ್ಲ. ಹಾಗೆಯೇ ಮದ್ರಾಸ್-ಕರ್ನಾಟಕದ ನಡುವೆ ಓಡಾಡಿದ, ಹಿರಿಯರೊಂದಿಗೆ ಒಡನಾಡಿದ, ಸಮಕಾಲೀನ ಸಹೋದ್ಯೋಗಿಗಳೊಂದಿಗೆ ಕಲೆತ ನೆನಪುಗಳಿಗೂ ಲೆಕ್ಕವಿಲ್ಲ. ಇಂತಹ ಸುದೀರ್ಘ ಚಿತ್ರಬದುಕಿನ ಶ್ರೀಮಂತ ನೆನಪುಗಳನ್ನು ಕಾಪಿಟ್ಟುಕೊಂಡು ಬಂದಿರುವ ಜಯಮ್ಮರನ್ನು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅತಿಥಿಯನ್ನಾಗಿ ಆಹ್ವಾನಿದ್ದರಲ್ಲೂ ಅರ್ಥವಿತ್ತು. ನಟಿ ತಾರಾ ಅವರು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮವಾದ್ದರಿಂದ, ಇಬ್ಬರೂ ಮಹಿಳೆಯರಾದ್ದರಿಂದ, ಸಹಜವಾಗಿಯೇ ಆ ಬೆಳ್ಳಿ ಹೆಜ್ಜೆಗೆ ವಿಶಿಷ್ಟ ಮೆರುಗು ಬಂದಿತ್ತು. ಪ್ರೇಕ್ಷಕರ ಸಂಖ್ಯೆಯೂ ಸಾಕಷ್ಟಿತ್ತು. ಹೀಗೆ ಎಲ್ಲರೂ ಜಯಮ್ಮನವರ ಚಿತ್ರಜಗತ್ತಿನ ಜೀವನದ ಝಲಕುಗಳಿಗೆ ಕಣ್ಣು, ಕಿವಿ ಕೊಟ್ಟು ಕುತೂಹಲಿಗಳಾಗಿದ್ದರು. ಆದರೆ ಜಯಮ್ಮ ಮಾತ್ರ ನಾಟಕದ ಸನ್ನಿವೇಶವೊಂದನ್ನು ಹೊರತುಪಡಿಸಿ ಮತ್ತಿನ್ನೇನನ್ನೂ ಮಾತಾಡಲಿಲ್ಲ. ನಿರೂಪಕರು ಎಷ್ಟೆಲ್ಲ ನೆನಪುಗಳನ್ನು ಹೆಕ್ಕಿ ಹೆಕ್ಕಿ ಮುಂದಿಟ್ಟರೂ ಬಾಯನ್ನೇ ಬಿಡಲಿಲ್ಲ.

ಮಗುವಿನ ಮುಗ್ಧತೆ

ಬಡತನದ ಹಿನ್ನೆಲೆಯಿಂದ ಬಂದದ್ದರಿಂದಲೋ, ಈಗಲೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪುಟ್ಟದೊಂದು ಮನೆಯಲ್ಲಿ ವಾಸಿಸುತ್ತಿರುವ ಕಾರಣದಿಂದಲೋ, ನಾನೊಬ್ಬಳು ಪೋಷಖ ನಟಿ ಎಂಬ ಅಂಜಿಕೆ ಅಳುಕಿನಿಂದಲೋ, ಅರವತ್ತೆಂಟು ವರ್ಷಗಳ ಕಾಲ ಒಬ್ಬಂಟಿಯಾಗಿ ಬಾಳಿದ ವೈರಾಗ್ಯದಿಂದಲೋ ಅಥವಾ ಈ ಬಾಳಿನ ಇಳಿಹೊತ್ತಿನಲ್ಲಿ ಎಲ್ಲವನ್ನು ಹೇಳಿ ಏನಾಗಬೇಕಿದೆ ಎಂಬ ನಿರಾಸಕ್ತಿಯಿಂದಲೋ… ಅಂತೂ ಜಯ ಅವರು ಮಾತನಾಡಲಿಲ್ಲ. ಏನು ಕೇಳಿದರೂ ಸುಮ್ಮನೆ ಮಗುವಿನಂತೆ ನಕ್ಕುಬಿಡುತ್ತಿದ್ದರು. ನೆರೆದಿದ್ದವರನ್ನು ನೋಡಿ ಉತ್ಸಾಹಗೊಳ್ಳುವ ಬದಲು ಬೆದರಿದ ಬೊಂಬೆಯಂತಾಗಿದ್ದರು. ಬಣ್ಣದ ಜಗತ್ತಿನ ಗಿಲೀಟುಗಳನ್ನು, ನಾಟಕೀಯ ನಡೆ ನುಡಿಗಳನ್ನು, ಸತ್ಯಸಂದರ ಸಂಗತಿಗಳನ್ನು ಎಲ್ಲರಂತೆ ಅವರೂ ಬಿಚ್ಚಿಡದೆ ಬಚ್ಚಿಟ್ಟು ಒಳ್ಳೆಯವರ ಪಾಲಿಗೆ ಜಮೆಯಾದರು.   

ಡ್ರೀಮ್ ಗರ್ಲ್‌!

ಆಗ ಅವರೊಂದಿಗೆ ಆ ಕಾಲದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ನಟ, ನಿರ್ಮಾಪಕ ದ್ವಾರಕೀಶ್, ‘ಜಯಮ್ಮ… ಇವತ್ತು ನಾನು ಈ ಕಾರ್ಯಕ್ರಮಕ್ಕೆ ಬರಲೇಬೇಕು ಅಂತ ಹಠಕ್ಕೆ ಬಿದ್ದು ಬಂದೆ. ಅದು ನಿನ್ನ ಕಾರ್ಯಕ್ರಮ ಅಂತ ಗೊತ್ತಾದ ಮೇಲಂತೂ ತಪ್ಪಿಸಿಕೊಳ್ಳಬಾರದು ಅಂತ ತೀರ್ಮಾನಿಸಿದೆ. ಆಹಾ ಮೈಸೂರು ದಸರಾ ಗೊಂಬೆ ನೀನೆ ನನ್ನ ರಂಬೆ… ಎಂಥಾ ಹಾಡು? ಜಯಮ್ಮ ನಿನಗ್ಗೊತ್ತ… ನಿನ್ನ ಜೊತೆ ಆಕ್ಟ್ ಮಾಡೋದು ಅಂದ್ರೆ- ಅವತ್ತಿಗೆ ನನ್ನ ಪಾಲಿಗೆ ಡ್ರೀಮ್‌ ಗರ್ಲ್ ಹೇಮಾಮಾಲಿನಿ, ಐಶ್ವರ್ಯ ರೈ ಜೊತೆ ಮಾಡಿದಂತೆ ಅಂದ್ಕೊಂಡಿದ್ದೆ. ನಿನ್ನ ಈ ವಯಸ್ಸಿನ ಲವಲವಿಕೆ ನೋಡಿ ನನಗೂ ಹುಮ್ಮಸ್ಸು ಬರ್ತಾಯಿದೆ. ನೀರು ಕುಡಿದಷ್ಟೇ ಸಲೀಸಾಗಿ ಪಾತ್ರ ಮಾಡ್ತಿದ್ದ ನಿನ್ನ ನೋಡಿ ಸಾಕಷ್ಟು ಕಲ್ತಿದೀನಿ, ನೀನು ನಿಜಕ್ಕೂ ಗ್ರೇಟ್‌, ಮಾರ್ವಲೆಸ್…’ ಎಂದು ಬಾಯ್ತುಂಬ ಹೊಗಳಿದರು. ಹಳೆಯ ಪ್ರಸಂಗಗಳನ್ನು ನೆನಪಿಸಿ ಮಾತನಾಡಲು ಹುರಿದುಂಬಿಸಿದರು. ಹೌದು, ನಿಮ್ಮ ಜೊತೆ ಮಾಡಿದ ‘ಮಹದೇಶ್ವರ ಪೂಜಾಫಲ’ ಚಿತ್ರ ನೆನಪಾಗ್ತಿದೆ ಎಂದರು.

ಕಾಮಿಡಿ ಅಂದ್ರೆ ಕಮ್ಮಿಯಲ್ಲ

ಸಭಿಕರಲ್ಲೊಬ್ಬರು, ಬೆಟ್ಟದ ಹುಲಿ ಚಿತ್ರದ ನಿಮ್ಮ ಮತ್ತು ನರಸಿಂಹರಾಜು ಜೋಡಿ, ದೋಸೆ, ಕತ್ತೆ… ಅಂತೆಲ್ಲ ಅವರ ನೆನಪಿನಾಳಕ್ಕೆ ಹಗ್ಗ ಹಾಕಿದರು. ಸಭಿಕರ ಜೊತೆಗೆ ನಟಿ ಬಿ.ವಿ.ರಾಧ ಅವರೂ ದನಿಗೂಡಿಸಿದರು. ‘ಅವತ್ತಿನ ಕಾಲ ಹೆಂಗಿತ್ತು ಅಂದ್ರೆ ಎಲ್ಲಾ ಒಂದೇ ಮನೆಯವರ ಥರ ಇರ್ತಿದ್ವು. ಸೆಟ್‌ ಒಳಗೆ ಹೋಗಬೇಕು ಅಂದ್ರೆ ದೇವಸ್ಥಾನದೊಳಕ್ಕೆ ಹೋದ ಅನುಭವ ಆಗ್ತಿತ್ತು. ನಿನ್ನ ಮುಂದೆ ಕೂತು ಈ ಮಾತು ಹೇಳ್ತಿಲ್ಲ, ನಿನ್ನಂತ ನಟಿ ಮುಂದೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಮನಸಾರೆ ಮೆಚ್ಚಿದರು. ಆನಂತರ ಮೈಕು ನಟಿ ಶೈಲಶ್ರೀ ಅವರ ಕೈಗೆ ಹೋಯಿತು. ‘ಆಗ ನಾವೆಲ್ಲ ಚಿಕ್ಕವರು, ನಿಮ್ಮನ್ನು ನೋಡಿ ಕಲ್ತಿದ್ದು ಅಪಾರ. ನಿಮ್ಮದು ಒಳ್ಳೆಯ ಮನಸ್ಸು. ನಿಮಗೆ ಸಿಗಬೇಕಾದ ಎಲ್ಲವೂ ಸಿಗಲಿ’ ಎಂದು ಹಾರೈಸಿದರು. ನಂತರ ನಟ ಸುದರ್ಶನ್, ‘ಕಾಮಿಡಿ ಪಾತ್ರ ಮಾಡೋದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೊಂದು ವಿಶೇಷ ಸಿದ್ಧತೆ ಬೇಕಾಗ್ತದೆ, ಮನಸ್ಸು ಶಾಂತವಾಗಿರಬೇಕು. ಅಂಥದನ್ನು ಸಾಧಿಸಿದವರು ಜಯ’ ಎಂದರು.

ಡಬಲ್‌ ಮೀನಿಂಗ್ ನಂದಲ್ಲ

ಆಗ ಒಂಚೂರು ಹುರುಪುಗೊಂಡಂತೆ ಕಂಡ ಜಯ ಅವರು, ‘ಹಾಸ್ಯ ಪಾತ್ರ ಮಾಡ್ದೋರು ಯಾವ ಪಾತ್ರ ಬೇಕಾದ್ರು ಮಾಡಬಹುದು. ಅವರು ಸಹಜವಾಗಿಯೇ ಕ್ರಿಯಾಶೀಲರು, ಪ್ರತಿಭಾವಂತರಾಗಿರ್ತಾರೆ’ ಎಂದರು. ಸಭಿಕರಲ್ಲೊಬ್ಬರು, ‘ಇವತ್ತಿನ ಹಾಸ್ಯ ಹೇಗಿದೆ, ಒಂಚೂರು ಹೇಳಿ’ ಅಂದರು. ಇದೆಲ್ಲ ಜನಕ್ಕೂ ಗೊತ್ತು ಆದರೂ ಆ ಮಾತುಗಳನ್ನು ಹಾಸ್ಯ ನಟಿ ಎಂದು ಹೆಸರಾಗಿರುವ ಜಯ ಅವರಿಂದ ಕೇಳಬೇಕೆಂಬ ಆಸೆಯಿಂದ ಕೇಳುತ್ತಲೇ ಇದ್ದರು. ಅದಕ್ಕೆ ಜಯ ಅವರು, ‘ಇವತ್ತು ಹಾಸ್ಯ ಎಲ್ಲಿದೆ, ಹಾಸ್ಯ ಕಲಾವಿದರ ಪಾತ್ರಗಳನ್ನು, ಡೈಲಾಗ್‍ಗಳನ್ನು ಚಿತ್ರದ ಹೀರೋ ಹೀರೋಯಿನ್‍ಗಳೇ ಮಾಡಿಬಿಡುತ್ತಿದ್ದಾರಲ್ಲ? ಅವತ್ತು ತಿಳಿಹಾಸ್ಯವಿತ್ತು, ಮನಸ್ಸಿಗೆ ಮುದ ಕೊಡುವ ಹಾಸ್ಯವಿತ್ತು. ಇವತ್ತು ಡಬಲ್‌ ಮೀನಿಂಗ್ ಇದೆ…’ ಎಂದರು. ‘ಅದಕ್ಯಾರು ಕಾರಣ?’ ಎಂಬ ಪ್ರಶ್ನೆ ಎಸೆದರು ಸಭಿಕರು. ‘ಅದು ನನ್ನದಲ್ಲ, ಡೈಲಾಗ್ ಬರೆಯೋರನ್ನು ಕೇಳಬೇಕು ನೀವು, ಸಾಹಿತ್ಯ ಬರೀತಾರಲ್ಲ ಅವರನ್ನು ಕೇಳಬೇಕು, ಅದು ಅವರದ್ದು’ ಎಂದರು. ಅಲ್ಲೇ ಕೂತಿದ್ದ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕುಣಿಗಲ್‌  ನಾಗಭೂಷಣ್‌ ಕೊಂಚ ಕಸಿವಿಸಿಗೊಳಗಾದರು. 

ಇಲ್ಲಿ ನನಗೆ ಇನ್ನೊಂದು ಇಂಥದ್ದೇ ಪ್ರಸಂಗ ನೆನಪಾಗ್ತಿದೆ. ಹಿಂದೆ ಇದೇ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಹಿರಿಯ ಪೋಷಕ ನಟಿ ಎಂ.ಎನ್. ಲಕ್ಷ್ಮಿದೇವಿಯವರು ಕೂಡ ಇದೇ ರೀತಿ, ‘ನಾನು ಹೇಳೋದೇನಿದೆ, ಎಲ್ಲಾ ನಿಮಗೇ ಗೊತ್ತಲ್ಲ…’ ಎಂದಿದ್ದರು. ಹೆಚ್ಚು ಮಾತನಾಡದೆ ಬಂದು ಕೂತು ಹೋಗಿದ್ದರು. ಬಿ.ಜಯ ಕೂಡ ಹಾಸ್ಯ ನಟಿ, ಪೋಷಕ ನಟಿ. ಇವರೂ ಕೂಡ ಇವತ್ತು ಇದೇ ಬೆಳ್ಳಿ ಹೆಜ್ಜೆ ಕಾರ್ಯಕ್ರಮಕ್ಕೆ ಬಂದು ಹೀಗೆಯೇ ಮಾತನಾಡದೆ ಬಂದು ಕೂತು ಹೋದರು. ಹಾಗೆ ನೋಡಿದರೆ, ಎಂ.ಎನ್. ಲಕ್ಷ್ಮಿದೇವಿ ಮತ್ತು ಜಯ ಒಟ್ಟೊಟ್ಟಿಗೇ ಹಲವಾರು ಚಿತ್ರಗಳಲ್ಲಿ ನಟಿಸಿದವರು. ನೂರಾರು ಕಲಾವಿದರೊಂದಿಗೆ ಕಲೆತು ಕಲಿತವರು. ಕನ್ನಡ ಚಿತ್ರರಂಗಕ್ಕೆ ತಮ್ಮ ಕೈಲಾದ ಸೇವೆ ಸಲ್ಲಿಸಿದವರು. ಅವಿಸ್ಮರಣೀಯ ಕೊಡುಗೆಯನ್ನು ನೀಡಿದವರು. ಕನ್ನಡ ಚಿತ್ರರಂಗ ಏನೂ ಇಲ್ಲದ ದಿನಗಳಿಂದ ಹಿಡಿದು ಇವತ್ತಿನ ಬೆಟ್ಟದಂತೆ ಬೆಳೆದು ನಿಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರು. ಇಷ್ಟಾದರೂ ಅವತ್ತು ಅವರೂ ಮಾತನಾಡಲಿಲ್ಲ, ಇವತ್ತು ಇವರೂ ಮಾತನಾಡಲಿಲ್ಲ. ಇದು ಸಿನಿಮಾ ಎಂಬ ಮಾಯಾಲೋಕದಲ್ಲಿ ಮಹಿಳೆಯರ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಸೂಚಿಸುತ್ತಿದೆಯೇ, ಪೋಷಕ ನಟ-ನಟಿಯರೆಂಬ ಕೀಳರಿಮೆಯೇ, ಸ್ಥಾನಮಾನದ ಪ್ರಶ್ನೆಯೇ, ಹಣ-ಚಾಲ್ತಿಯಲ್ಲಿದ್ದವರ ಆರ್ಭಟವೇ, ಮನಬಿಚ್ಚಿ ಮಾತನಾಡುವುದು ಅವಕಾಶಗಳನ್ನು ಕಿತ್ತುಕೊಳ್ಳುತ್ತದೆಂಬ ಆತಂಕವೇ ಅಥವಾ ನಮ್ಮ ಕಲಾವಿದರ ಸೌಜನ್ಯವೇ?

‘ಮಹದೇಶ್ವರ ಪೂಜಾಫಲ’ ಚಿತ್ರದಲ್ಲಿ ಬಿ.ಜಯ, ದ್ವಾರಕೀಶ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ