ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟ – ನಿರ್ಮಾಪಕ ರಾಜಾಶಂಕರ್

ಪೋಸ್ಟ್ ಶೇರ್ ಮಾಡಿ

ರಾಜಾಶಂಕರ್ ಹಿರಿಯರ ಮೂಲಸ್ಥಳ ಮಧುಗಿರಿ ಸಮೀಪದ ಒಂದು ಗ್ರಾಮ. ಅವರ ಜನ್ಮನಾಮ ಶಂಕರ್‌. ತಂದೆ ಸಿದ್ದೇಗೌಡರು ಕಾರಣಾಂತರಗಳಿಂದ ಮೈಸೂರಿಗೆ ಬಂದು ನೆಲೆಸಿದರು. ಕೆಲಸಮಯ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದರು. ಮುಂದೆ ಸ್ಟುಡಿಯೋ ಮುಚ್ಚಿದ ನಂತರ ವುಡ್‌ಲ್ಯಾಂಡ್ ಚಿತ್ರಮಂದಿರದಲ್ಲಿ ಕೆಲಸಕ್ಕೆ ಸೇರಿ ಇಪ್ಪತ್ತು ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಶಂಕರ್‌ ಅವರಿಗೆ ನಟನೆಯೆಡೆಗಿನ ಸೆಳೆತಕ್ಕೆ ಇದೂ ಕಾರಣವಾಯ್ತು. ಶಂಕರ್‌ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ ನಾಟಕದ ನಂಟು ಬೆಳೆಯಿತು. ಹಲವು ನಾಟಕಗಳಲ್ಲಿ ಅಭಿನಯಿಸಿದರು. ಇಂಟರ್‌ಮೀಡಿಯಟ್‌ ಶಿಕ್ಷಣ ಮುಗಿಸಿದ ನಂತರ ರೆವೆನ್ಯೂ ಇಲಾಖೆಯಲ್ಲಿ ಗುಮಾಸ್ತನ ಕೆಲಸ ಸಿಕ್ಕಿತು. ಉದ್ಯೋಗದ ಜೊತೆಗೆ ನಾಟಕದ ನಂಟನ್ನೂ ಪೋಷಿಸುತ್ತಾ ಬಂದರು ಶಂಕರ್‌. ನಾಟಕದೆಡೆಗಿನ ಆಸಕ್ತಿ ಹೆಚ್ಚಾಗಿ ಉದ್ಯೋಗಕ್ಕೆ ತೊಂದರೆಯಾಗುತ್ತಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

ಒಮ್ಮೆ ನಿರ್ದೇಶಕ ಎಚ್‌.ಎಲ್‌.ಎನ್‌.ಸಿಂಹ ಅವರು ನಾಟಕವೊಂದರಲ್ಲಿ ಶಂಕರ್‌ರನ್ನು ನೋಡಿದರು. ಅದು ಶಂಕರ್‌ ನಟನಾ ಬದುಕಿಗೆ ತಿರುವಾಯ್ತು. ಇವರ ಪಾತ್ರದಿಂದ ಪ್ರಭಾವಿತರಾದ ಸಿಂಹ ಅವರು ತಮ್ಮ ‘ಅಬ್ಬಾ ಆ ಹುಡುಗಿ’ ಚಿತ್ರಕ್ಕೆ ನಾಯಕನನ್ನಾಗಿ ಶಂಕರ್‌ರನ್ನು ಆಯ್ಕೆ ಮಾಡಿದರು. ಅವರ ಹೆಸರಿನ ಹಿಂದೆ ‘ರಾಜಾ’ ಸೇರಿಸಿ ‘ರಾಜಾಶಂಕರ್‌’ ಎಂದು ಕರೆದದ್ದೂ ಸಿಂಹ ಅವರೇ. ಮುಂದೆ ‘ಅನುರಾಧ’ ಮತ್ತು ‘ಜಾಣರ ಜಾಣ’ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದರು. ಮುಂದೆ ಉಪನಾಯಕ, ಪೋಷಕ ಪಾತ್ರಗಳು ಸೇರಿದಂತೆ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ವರನಟ ರಾಜಕುಮಾರ್ ಅವರಿಗೆ ರಾಜಾಶಂಕರ್ ಆಪ್ತರು. ಕೌಟುಂಬಿಕ ಕಾರಣಗಳಿಗಾಗಿ ರಾಜ್‌ ಸಹೋದರ ವರದಪ್ಪನವರು ಮದರಾಸನ್ನು ತೊರೆದು ಬೆಂಗಳೂರಿಗೆ ಬಂದು ನೆಲೆಸಿದಾಗ, ರಾಜ್‌ ಅವರ ವ್ಯವಹಾರ, ವ್ಯವಸ್ಥೆ ನಿಭಾಯಿಸುವುದು ಪಾರ್ವತಮ್ಮ ಒಬ್ಬರಿಗೇ ಕಷ್ಟವಾಯ್ತು. ಆಗ ರಾಜಾಶಂಕರ್ ನೆರವಿಗೆ ಬಂದರು. ಸುಮಾರು ಆರೇಳು ವರ್ಷಗಳ ಕಾಲ ಅವರು ರಾಜ್‌ ಜೊತೆಗಿದ್ದರು.

ರಾಜಾಶಂಕರ್‌ ಅವರಿಗೆ ನೆರವಾಗಲು ರಾಜಕುಮಾರ್ ಡೇಟ್ಸ್ ಕೊಟ್ಟಾಗ ಸಿದ್ಧವಾಗಿದ್ದು ‘ಬಂಗಾರದ ಪಂಜರ’. ಇದು ರಾಜಾಶಂಕರ್ ನಿರ್ಮಾಣದ ಮೊದಲ ಸಿನಿಮಾ. ವಿಜಯವಾಣಿ, ಶಾಂತಿನಿವಾಸ ಚಿತ್ರಗಳ ನಿರ್ಮಾಣ ಆರಂಭಿಸಿ ಇತರರಿಗೆ ಮಾರಿದರು. ಅಮರಜೀವಿ, ಬೇವುಬೆಲ್ಲ, ಮಂಗಳ ಮುಹೂರ್ತ, ಮನಸ್ಸಿದ್ದರೆ ಮಾರ್ಗ, ರೌಡಿ ರಂಗಣ್ಣ, ಒಂದೇ ಬಳ್ಳಿಯ ಹೂಗಳು, ಕಸ್ತೂರಿ ನಿವಾಸ, ಸಂಪತ್ತಿಗೆ ಸವಾಲ್‌, ಬಹದ್ದೂರ್ ಗಂಡು, ಭಕ್ತ ಕುಂಬಾರ… ರಾಜಾಶಂಕರ್ ನಟನೆಯ ಪ್ರಮುಖ ಚಿತ್ರಗಳು. 1987ರ ಜುಲೈ 22ರಂದು ತಮ್ಮ 56ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)

ತಮ್ಮ ‘ಪ್ರಗತಿ’ ಸ್ಟುಡಿಯೋದಲ್ಲಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ರಾಜಾಶಂಕರ್ ಅವರ ಫೋಟೊ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಜಾಗತಿಕ ಸಿನಿಮಾರಂಗ ಪ್ರಭಾವಿಸಿದ ನಿರ್ದೇಶಕ ಬರ್ಗ್‌ಮನ್‌

’ಮೆಟಾಫಿಸಿಕಲ್‌ ಪ್ರಶ್ನೆಗಳು ಇಂಗ್ಮರ್‌ ಬರ್ಗ್‌ಮನ್ ಸಿನಿಮಾಗಳ ಹಾಲ್‌ಮಾರ್ಕ್‌’ ಎಂದು ಗುರುತಿಸುತ್ತಾರೆ ಕನ್ನಡದ ಹಿರಿಯ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್‌. ಇಂದು (ಜುಲೈ 14)

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,

ರಂಗಭೂಮಿ – ಸಿನಿಮಾ ನಟಿ ಶಾಂತಮ್ಮ

ಕನ್ನಡ ಚಿತ್ರರಂಗದ ಆರಂಭದ ದಿನಗಳು, ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಕಲಾವಿದೆ ಶಾಂತಮ್ಮ. ಅವರ ಪತಿ ಬಿ.ಅನಿಲ್ ಕುಮಾರ್ ವೃತ್ತಿರಂಗಭೂಮಿ ನಟ ಮತ್ತು