ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್

ಪೋಸ್ಟ್ ಶೇರ್ ಮಾಡಿ
ಶಶಿಧರ ಚಿತ್ರದುರ್ಗ
ಪತ್ರಕರ್ತ

ಜಾಗತಿಕ ಹಾಸ್ಯ ಸಿನಿಮಾ ಜಗತ್ತಿನ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌. ಮೌನದಲ್ಲೇ ಎಲ್ಲವನ್ನೂ ಹೇಳುವ ಕಲೆಗಾರ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರದು ಮಹತ್ವದ ಸಾಧನೆ. ಚಾಪ್ಲಿನ್‌ (16/04/1889 – 25/12/1977) ಜನ್ಮದಿನದ ನೆಪದಲ್ಲಿ ಅವರ ಸಿನಿಮಾ – ಜೀವನದ ಬಗೆಗಿನ ಒಂದು ಕಿರುನೋಟ.

ಸ್ಕೆಲಿಟನ್ ಹುಡುಗ!

ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ಏಪ್ರಿಲ್‌ 16, 1889ರಂದು. ಚಾರ್ಲಿ ಚಾಪ್ಲಿನ್ ಸೀನಿಯರ್ ಮತ್ತು ಹನ್ನಾ ಚಾಪ್ಲಿನ್ ಅವರ ತಂದೆ – ತಾಯಿ. ಅವರ ಜನ್ಮದಿನಕ್ಕೆ ಅಧಿಕೃತ ದಾಖಲೆಯಿಲ್ಲ. ದಕ್ಷಿಣ ಲಂಡನ್‌ನ ವಾಲ್‌ವರ್ತ್ ತಮ್ಮ ಜನ್ಮಸ್ಥಳ ಎಂದು ಚಾಪ್ಲಿನ್ ಹೇಳಿಕೊಳ್ಳುತ್ತಿದ್ದರು. ‘ಈತ ನಮ್ಮ ಕುಟುಂಬದ ಸ್ಕೆಲಿಟನ್’ ಎಂದು ಸಂಬಂಧಿಗಳು ಚಾರ್ಲಿ ಕುರಿತು ತಮಾಷೆ ಮಾಡುತ್ತಿದ್ದರಂತೆ. ಚಾರ್ಲಿ ಬಾಲ್ಯವೂ ಇದಕ್ಕಿಂದ ವ್ಯತಿರಿಕ್ತವಾಗೇನೂ ಇರಲಿಲ್ಲ. ಬಾಲ್ಯದಲ್ಲೇ ಚಾರ್ಲಿಗೆ ಸಂಕಷ್ಟಗಳು ಎದುರಾಗಿದ್ದವು. ಆತನ ಮೂರರ ಹರೆಯದಲ್ಲೇ ಅಪ್ಪ – ಅಮ್ಮ ವಿಚ್ಛೇದನ ಪಡೆದಿದ್ದರು. ಕುಟುಂಬ ನಿರ್ವಹಣೆಗಾಗಿ ಐದನೆಯ ವಯಸ್ಸಿನಲ್ಲೇ ಚಾರ್ಲಿ ರಂಗವೇರಿದ. ಒಂದಷ್ಟು ವರ್ಷಗಳ ಅಲೆಮಾರಿ ಬದುಕು ಆತನನ್ನು ಅಮೆರಿಕಾಗೆ ಕರೆತಂದಿತು. ಮುಂದಿನದ್ದು ಇತಿಹಾಸ. ನಟ, ನಿರ್ದೇಶಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ನಿರ್ಮಾಪಕನಾಗಿ ಚಾರ್ಲಿ ಜಾಗತಿಕ ಸಿನಿಮಾ ಜಗತ್ತಿನ ದಂತಕಥೆಯಾದರು. ‘ಕ್ಲಾಸಿಕಲ್ ಹಾಲಿವುಡ್’ ಯುಗದ ಪ್ರಮುಖ ತಂತ್ರಜ್ಞನೆಂದು ಹಾಲಿವುಡ್ ಆತನನ್ನು ಗುರುತಿಸಿತು.

ಟ್ರ್ಯಾಂಪ್‌

ಚಾರ್ಲಿಯ ಅತ್ಯಂತ ಜನಪ್ರಿಯ ‘ಟ್ರ್ಯಾಂಪ್‌’ ಪಾತ್ರ ಸೃಷ್ಟಿಯಾದದ್ದು ‘ಕಿಡ್ ಆಟೋ ರೇಸಸ್ ಅಟ್ ವೆನಿಸ್’ ಚಿತ್ರದಲ್ಲಿ. ಅದು ಅವರ ಎರಡನೇ ಸಿನಿಮಾ. ದೊಗಲೆ ಪ್ಯಾಂಟ್, ಬಿಗಿಯಾದ ಕೋಟ್, ದೊಡ್ಡ ಷೂ, ಡರ್ಬಿ ಹ್ಯಾಟ್, ಬಾಗಿದ ಹಿಡಿಗೋಲು ಮತ್ತು ಟೂತ್‌ಬ್ರಷ್ ಮೀಸೆಯ ಪಾತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಪಾತ್ರದೊಂದಿಗೆ ಪ್ರೇಕ್ಷಕರೂ ತಮ್ಮನ್ನು ಗುರುತಿಸಿಕೊಂಡರು. ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಕೀಸ್ಟೋನ್ ಸ್ಟುಡಿಯೋಸ್ ಸಂಸ್ಥೆಯಡಿ ಚಾರ್ಲಿಯ ‘ಟ್ರ್ಯಾಂಪ್’ ಪಾತ್ರದಲ್ಲಿ ತಯಾರಾದ ಕಿರುಚಿತ್ರಗಳು ದೊಡ್ಡ ಯಶಸ್ಸು ಕಂಡವು. ನಟನಾಗಿದ್ದ ಚಾರ್ಲಿ ಕ್ರಮೇಣ ಸಿನಿಮಾದ ಇತರೆ ತಂತ್ರಗಳನ್ನು ಕರಗತ ಮಾಡಿಕೊಂಡರು.

ಫಿಲ್ಮ್‌ ಮೇಕಿಂಗ್

ಚಾಪ್ಲಿನ್ ಸಿನಿಮಾ ಮೇಕಿಂಗ್ ಕೂಡ ವಿಚಿತ್ರವಾಗಿತ್ತು. ಚೊಚ್ಚಲ ಡೈಲಾಗ್ ಸಿನಿಮಾ ‘ದಿ ಗ್ರೇಟ್ ಡಿಕ್ಟೇಟರ್’ಗೂ ಮುನ್ನ ತಯಾರಿಸಿದ ತಮ್ಮ ಯಾವ ಚಿತ್ರಗಳನ್ನೂ ಚಾರ್ಲಿ ಸಂಪೂರ್ಣ ಸ್ಕ್ರಿಪ್ಟ್‌ನೊಂದಿಗೆ ಆರಂಭಿಸಿರಲಿಲ್ಲ. ಆದರೆ ಮನಸ್ಸಿಗೆ ತೃಪ್ತಿಯಾಗದ ಹೊರತು ನೂರಾರು ಟೇಕ್‌ಗಳಾದರೂ ಸೀನ್ ಓಕೆ ಮಾಡುತ್ತಿರಲಿಲ್ಲ. ಇದರಿಂದಾಗಿ ಅವರ ಚಿತ್ರಗಳು ಸುದೀರ್ಘ ಅವಯವರೆಗೆ ಚಿತ್ರೀಕರಣಗೊಳ್ಳುತ್ತಿದ್ದವು. ‘ಗೋಲ್ಡ್‌ ರಷ್’ ಚಿತ್ರದಲ್ಲಿನ ಸನ್ನಿವೇಶವೊಂದರಲ್ಲಿ ಚಾರ್ಲಿ ಷೂಲೇಸ್ ತಿನ್ನಬೇಕಿತ್ತು. ಲಿಕೋರೈಸ್‌ನಿಂದ ತಯಾರಿಸಿದ್ದ ಷೂಲೇಸ್‌ನಲ್ಲಿ ಸಕ್ಕರೆ ಅಂಶವಿತ್ತು. ಹಲವು ಟೇಕ್‌ಗಳಾದರೂ ಸೀನ್ ಓಕೆಯಾಗಲಿಲ್ಲ. ಹತ್ತಾರು ಷೂಲೇಸ್ ತಿಂದಿದ್ದರಿಂದ ಅತಿಯಾದ ಸಕ್ಕರೆ ಅಂಶ ದೇಹ ಸೇರಿ ಚಾರ್ಲಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಚಾರ್ಲಿ ಸಿನಿಮಾ ಮೇಕಿಂಗ್ ಶೈಲಿಗೆ ಇದೊಂದು ಉದಾಹರಣೆ. ಬದ್ಧತೆಯಿಂದ ಸಿನಿಮಾ ಮಾಡುತ್ತಿದ್ದ ಅವರು ಅಂದುಕೊಂಡದ್ದನ್ನು ತೆರೆ ಮೇಲೆ ತರಲು ಶ್ರಮವಹಿಸುತ್ತಿದ್ದರು.

ಮಾಡರ್ನ್ ಟೈಮ್ಸ್‌

ಕಿರುಚಿತ್ರಗಳೂ ಸೇರಿದಂತೆ ಚಾರ್ಲಿ ನಟಿಸಿದ ಚಿತ್ರಗಳ ಸಂಖ್ಯೆ 90ರ ಆಸುಪಾಸಿನಲ್ಲಿದೆ. ನಾಲ್ಕೈದು ಚಿತ್ರಗಳಲ್ಲಿ ಅವರು ಗೌರವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆರಂಭದಲ್ಲಿ ಕೀಸ್ಟೋನ್ ಸ್ಟುಡಿಯೋಸ್ ಸಂಸ್ಥೆಗೆ ಕೆಲಸ ಮಾಡಿದ ಚಾರ್ಲಿ ನಂತರ ಎಸ್ಸೆನೆ ಸ್ಟುಡಿಯೋಸ್, ಮ್ಯೂಚಿಯಲ್ ಫಿಲ್ಮ್‌ ಕಾರ್ಪೋರೇಷನ್, ಫಸ್ಟ್‌ ನ್ಯಾಷನಲ್, ಯುನೈಟೆಡ್ ಆರ್ಟಿಸ್ಟ್ಸ್‌ ಚಿತ್ರಸಂಸ್ಥೆಗಳೊಂದಿಗೆ ಗುರುತಿಸಿಕೊಂಡರು. ಮೂಕಿ ಚಿತ್ರಗಳಲ್ಲೇ ಮಿಂಚಿದ ಚಾರ್ಲಿಯ ಧ್ವನಿಯನ್ನು ಪ್ರೇಕ್ಷಕರು ಮೊದಲ ಬಾರಿ ಕೇಳಿದ್ದು ‘ಮಾಡ್ರರ್ನ್ ಟೈಮ್ಸ್‌’ (1936) ಚಿತ್ರದಲ್ಲಿ. ‘ದಿ ಗ್ರೇಟ್ ಡಿಕ್ಟೇಟರ್’ (1940), ‘ಮಾನ್ಸಿಯರ್ ವೆರ್ಡಕ್ಸ್‌’ (1947), ‘ಲೈಮ್‌ಲೈಟ್’ (1952) ಚಾರ್ಲಿಯ ಇತರೆ ಟಾಕಿ ಚಿತ್ರಗಳು.

ವರ್ಣರಂಜಿತ ಜೀವನ

ಚಾರ್ಲಿಯ ವೈವಾಹಿಕ, ರೊಮ್ಯಾಂಟಿಕ್ ಜೀವನವೂ ವರ್ಣರಂಜಿತ. ಡ್ಯಾನ್ಸರ್ ಹೆಟಿ ಕೆಲ್ಲಿ ಆತನ ಮೊದಲ ಪ್ರೇಯಸಿ. 1908ರಲ್ಲಿ ಕೆಲ್ಲಿ ಅವರನ್ನು ವರಿಸಿದಾಗ ಚಾರ್ಲಿ ವಯಸ್ಸು 19! ಹೆಟಿ ಕೆಲ್ಲಿ, ಮಿಲ್ಡ್‌ರೆಡ್ ಹ್ಯಾರಿಸ್, ಲಿಟಾ ಗ್ರೇ, ಪೌಲಟ್‌ ಗೋಡಾರ್ಡ್, ಓನಾ ನೀಲ್.. ಇವರು ಚಾಪ್ಲಿನ್ ಪತ್ನಿಯರು. ತಮ್ಮ ಜೀವನದುದ್ದಕ್ಕೂ ಸಂಗಾತಿಗಳನ್ನು ಬದಲಿಸುತ್ತಾ ಬಂದ ಚಾರ್ಲಿ ಸದಾ ವದಂತಿ, ವಿವಾದಗಳಿಗೆ ಸಿಲುಕಿದ್ದ ತಾರೆ. 1977, ಡಿಸೆಂಬರ್ 25ರಂದು ತಮ್ಮ 88ನೇ ವಯಸ್ಸಿನಲ್ಲಿ ಚಾರ್ಲಿ ಚಾಪ್ಲಿನ್ ಅಗಲಿದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಟಿ.ಎಂ.ಸೌಂದರರಾಜನ್

ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್‌. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು