ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಗಾನ ಮಾಂತ್ರಿಕ ಮೊಹಮ್ಮದ್ ರಫಿ

ಪೋಸ್ಟ್ ಶೇರ್ ಮಾಡಿ

‘ಸೌ ಬಾರ್ ಜನಂ ಲೇಂಗೇ, ಸೌ ಬಾರ್ ಫನಾ ಹೋಂಗೆ, ಏ ಜಾನೇ ವಫಾ ಫಿರ್ ಭಿ ಹಂ ತುಂನ ಜುದಾ ಹೋಂಗೇ..’ ಎಂದುಲಿದು ಇಂದಿಗೂ ಅವರೇ ಹಾಡಿದ ಈ ಗೀತೆಯಂತೆ ಅಮರ ಮಧುರವಾಗಿ ಉಳಿದಿರುವ ಚಿರಸ್ಮರಣೀಯ ಕಂಠದ ಒಡೆಯ ಮೊಹಮ್ಮದ್ ರಫಿ. ಜೀವನ್‌ಲಾಲ್‌ ಮಟ್ಟೂ, ವಾಹೀದ್ ಖಾನ್, ಗುಲಾಮ್ ಆಲಿ ಖಾನ್‌ರಂಥ ಸಂಗೀತ ದಿಗ್ಗಜರಿಂದ ವಿಶೇಷವಾಗಿ ಕಿರಾನಾ ಘರಾನಾದಲ್ಲಿ ನುರಿತ ರಫಿಯವರ ಗಂಟಲು ಈ ಕಾರಣ ದಿಂದಲೇ ಹಿಂದಿ ಚಿತ್ರಗೀತೆಗಳ ರಾಗಾಧಾರಿತ ಹಾಡುಗಳನ್ನು ಅತ್ಯಂತ ಸರಾಗವಾಗಿ, ಸುಲಲಿತವಾಗಿ ಅನುರಣಿಸುತ್ತಲೇ ಇರುವಂತೆ ಮಾಡಿದೆ.

‘ಓ ದುನಿಯಾ ಕೆ ರಖ್ ವಾಲೆ (ದರ್ಬಾರೀ ಕಾನಡಾ, – ಬೈಜುಬಾವ್ರಾ) ಅದೇ ಸಿನಿಮಾದ ‘ತು ಗಂಗಾ ಕೀ ಮೌಜ಼್’  – ಭೈರವಿ ರಾಗದ ಮಾಧುರ್ಯ ಮಾಸದು. ದಿಲೀಪ್ ಕುಮಾರ್ ನಾಯಕರಾಗಿದ್ದ ನೌಷಾದ್ ಸಂಗೀತದ 1960ರಲ್ಲಿ ತೆರೆಕಂಡ ‘ಕೊಹಿನೂರ್’ ಚಿತ್ರದಲ್ಲಿ ರಫಿಯವರು ಹಾಡಿದ ಹಮೀರ್/ಕೇದಾರ್ ರಾಗದ ‘ಮಧುವನ್ ಮೆ ರಾಧಿಕಾ ನಾಚೇ..’ ಮತ್ತು ‘ಬೇಟಿ ಬೇಟೆ’ ಸಿನಿಮಾದಲ್ಲಿರುವ ‘ರಾಧಿಕೆ ತೂನೇ ಬಾನ್ಸುರಿ’ (ಅದಾನ/ದರ್ಬಾರೀ ಕಾನಡ).‌ (ಕನ್ನಡದಲ್ಲಿ ತಂದೆ ಮಕ್ಕಳು.ಈ ಚಿತ್ರದಲ್ಲಿ ಇದೇ ಹಾಡನ್ನು ಎಸ್.ಪಿ.ಬಿ ‘ರಾಧಿಕೆ ನಿನ್ನ ಸರಸವಿದೇನೆ’, ಎಂದು ಹಾಡಿದ್ದಾರೆ. “ಈ ಹಾಡನ್ನು ಹಾಡುವಾಗ ನನ್ನ ಮನಸ್ಸಿನಲ್ಲಿ ರಫಿ ಅವರೇ ತುಂಬಿಕೊಂಡಿದ್ದರು. ಆದರೆ ನನಗೆ ಖಂಡಿತ ಅವರ ಮಟ್ಟಕ್ಕೆ ಹಾಡಲು ಸಾಧ್ಯವಾಗಲಿಲ್ಲ” ಎಂದು ಎಸ್.ಪಿ.ಬಿ, ರಫಿಯವರ ಗುಣಗಾನ ಮಾಡಿದ್ದರು.)

‘ದಿಲ್ ಪುಕಾರೇ ಆರೇ ಆರೇ ಆರೇ..’ ಪಹಾಡಿ, ‘ಪುಕಾರ್ ತಾ ಚಲಾ ಹೂ ಮೆ…’ ಕೀರವಾಣಿ, ಇದಲ್ಲದೆ ‘ಮನ್ ತರಪತ್ ಹರಿ ದರ್ಶನ್ ಕೋ’ ಹಿಂದೋಳ/ಮಾಲ್ ಕೌಂ ಸ್, ‘ಖೋಯಾ ಖೋಯಾ ಚಾಂದ್ ಖುಲಾ ಆಸ್ಮಾನ್’ – ಭೀಮ್ ಪಲಾಸ್/ಅಭೇರಿ, ‘ಆವಾಜ಼್ ದೇಕೇ..ಬಹಾರೋ ಫೂಲ್ ಬರ್ಸಾವೋ, ದಿಲ್ ಕೆ ಝರೋಕೆ ಮೆ ತುಝ್ಕೊ ಭಿಠಾಕರ್’ ಹಾಡುಗಳ ಶಿವರಂಜಿನಿ ರಾಗ, ‘ತೇರಿ ಆಂಖೊ ಕೆ ಸಿವಾ ದುನಿಯಾ ಮೆ ರಖಾ ಕ್ಯಾ ಹೆ..’ ಹಾಡಿನ ಜಿಂಜುಟಿ ರಾಗ, ‘ಅಭಿ ನ ಜಾವೋ ಛೋಡ್ ಕರ್..’ ಹಾಡಿನ ಕಲ್ಯಾಣಿ ರಾಗದ ರಫಿಯವರ ಇಂಚರವನ್ನು ಹೇಗೆ ಮರೆಯಲಾದೀತು.

ರಫಿ ಎಲ್ಲ ರೀತಿಯ ಭಿನ್ನ ಭಾವಧಾರೆಗಳ ಹಾಡುಗಳಿಗೂ ಅತ್ಯಂತ ಸಮರ್ಥ ಮತ್ತು ಸಮರ್ಪಕವಾಗಿ ಹೊಂದುತ್ತಿದ್ದ ಅಪ್ರತಿಮ ಗಾಯಕರು. ನಾಯಕಿಯನ್ನು ಛೇಡಿಸುವ ‘ಬದನ್ ಪೆ ಸಿತಾರೇ ಲಪೇಟೇ ಹುವೆ’, ತುಂಟತನದ ‘ತೇರೀ ಪ್ಯಾರೀ ಪ್ಯಾರೀ ಸೂರತ್ ಕೋ…’, ‘ಆಜಾರೇ ಆ ಜ಼ರಾ…’ ದಂಥ ಹಾಡುಗಳೇ ಇರಲಿ, ‘ಹಂ ಕಾಲೇ ಹೇ ತೋ ಕ್ಯಾ ಹುವಾ ದಿಲ್ವಾಲೇ ಹೈ…’ದಂಥ ಗೀತೆಗಳೇ ಆಗಲಿ, ‘ಏ ಮೇರಾ ಪ್ರೇಮ್ ಪತ್ರ್ ಪಡ್ ಕರ್’, ‘ಲಿಖೇ ಜೋ ಖತ್ ತುಝೆ’, ‘ನಿಸುಲ್ ತನ್ಹಾರೇ’, ‘ತುಮ್ ಬಿನ್ ಜಾವೂ ಕಹಾ’, ‘ದರ್ದೆ ದಿಲ್ ದರ್ದೇ ಜಿಗರ್’ ಈ ಹಾಡುಗಳಲ್ಲೂ ರಫಿ ಅವರದ್ದು ಸಾಟಿಯಿರದ ಕಂಠ. ಕೀರವಾಣಿ ರಾಗದ ‘ಯಾದ್ ನ ಜಾಯೇ…’ ದರ್ಬಾರೀ ಕಾನಡಾದಲ್ಲಿರುವ ‘ಟೂಟೇ ಹುಯೆ ಖ್ವಾಬೋಮೆ…’ ವಿಷಾದ ಗೀತೆಗಳು ಈಗಲೂ ಕಾಡುತ್ತವೆ. ‘ಪರ್ದೇಸಿಯೋಂಸೆ ನ ಆಖಿಯಾ ಮಿಲಾನಾ..’ ಶಶಿಕಪೂರ್ ಅವರ ‘ಜಬ್ ಜಬ್ ಫೂಲ್ ಖಿಲೆ…’ ಚಿತ್ರಕ್ಕಾಗಿ ಹಾಡಿದ ಈ ಹಾಡಿನ ರಫಿಯವರ ಮೋಹಕ ಧ್ವನಿಗೆ ತಲೆದೂಗದವರುಂಟೆ?

ಓಂಪ್ರಕಾಶ್ ನಯ್ಯರ್ (ಓ.ಪಿ.ನಯ್ಯರ್), “ಒಂದು ವೇಳೆ ರಫಿ ಇಲ್ಲದೇ ಹೋಗಿದಿದ್ದರೆ ನಾನೂ ಇರಲಿಕ್ಕಾಗುತ್ತಿರಲಿಲ್ಲ” ಅಂದಿದ್ದರು. ರಫಿ ‘ಆಸ್ ಪಾಸ್’ ಸಿನಿಮಾಗೆ ‘ಏ ಶ್ಯಾಂ ಕ್ಯೂ ಉದಾಸ್ ಹೆ..’ ಹಾಡನ್ನು ಹಾಡಿ ಜುಲೈ31, 1980ರ ರಾತ್ರಿ ಸುಮಾರು10:45-50ರ ಹೊತ್ತಿಗೆ 55ನೇ ವಯಸ್ಸಿಗೇ ಅಸ್ತಂಗತರಾದಾಗ ಶಮ್ಮಿಕಪೂರ್, “ನಾನು ನನ್ನ ಧ್ವನಿಯನ್ನೇ ಕಳೆದುಕೊಂಡೆ” ಎಂದು ಕಂಬನಿ ಮಿಡಿದಿದ್ದರು. ಇವರಿಬ್ಬರ ‘ಚಾಹೇ ಕೋಯಿ ಮುಝೆ ಜಂಗಲಿ ಕಾ ಹೆ…’ ಹಾಡಿನಲ್ಲಿ ‘ಯಾಹೂ’ ಎಂದು ಹಾಡಿದ್ದು ರಫಿಯವರಲ್ಲ, ಪ್ರಯಾಗ್ ರಾಜ್. ಇದನ್ನು ಸ್ವತಃ ಶಮ್ಮೀ ಕಪೂರ್ ಅವರೇ ದೃಢೀಕರಿಸಿದ್ದಾರೆ. ‘ಬಾರ್ ಬಾರ್ ದೇಖೋ’, ‘ಓ ಹಸೀನಾ ಝುಲ್ಫೋ ವಾಲಿ..’, ‘‌ಬದನ್ ಪೆ ಸಿತಾರೆ ಲಪೇಟೆ..’ ಸೇರಿದಂತೆ ಅನೇಕ ಗೀತೆಗಳ ಜೋಡಿ ಮೋಡಿ ಸದಾ ಸವಿಸ್ಮರಣೀಯ ಗೀತಗುಚ್ಛಗಳು.

ರಫಿ ಸಾಬ್ 55ವರ್ಷಕ್ಕೇ ಅಸ್ತಮಿಸಿದಾಗ ಲಕ್ಷ ಲಕ್ಷ ಜನ ಸೇರಿದ್ದರು. ರಫಿಯವರ ಅಭಿಮಾನಿಯಾಗಿದ್ದ ಪಿ.ಬಿ. ಶ್ರೀನಿವಾಸ್ ಸಹ ರಫಿ ಅವರ ಮೃತದೇಹ ನೋಡಲು ಸಾಧ್ಯವಾಗದೆ ಮೀರಿದ ಜನಜಂಗುಳಿಯ ಕಾರಣದಿಂದ ವಾಪಸ್ಸು ಬಂದುಬಿಟ್ಟಿದ್ದರು. ಅಷ್ಟೇ ಅಲ್ಲ, ಏಸುದಾಸ್ , ಎಸ್.ಪಿ.ಬಿ, ಸೋನು ನಿಗಮ್ ಎಲ್ಲರಿಗೂ ಈಗಲೂ ಮೊಹಮ್ಮದ್ ರಫಿ ಅವರೇ ಅಚ್ಚುಮೆಚ್ಚಿನ ಆರಾಧ್ಯದೈವ. ರಾಜೇಶ್ ಖನ್ನಾರಿಗೆ ಸಹ ರಫಿ ಸಾಬ್ ‘ಗುಲಾಬಿ ಆಂಖೇ ..’, ‘ಗುನ್ ಗುನಾ ರಹೀ ಹೆ ಭವರೆ ಖಿಲ್ ರಹೀ ಹೆ ಕಲಿ ಕಲಿ..’ (ಯುಗಳಗೀತೆ)ಯಂತಹ ಅನೇಕ ಮಧುರವಾದ ಹಾಡುಗಳನ್ನು ಹಾಡಿದ್ದಾರೆ.

ರಫಿ ಯುಗಳ ಗೀತೆಗಳಲ್ಲಿ ನನಗೆ ‘ವಾದಾ ಕರ್ ಲೆ ಸಾಜನಾ’, (ಹಾಥ್ ಕಿ ಸಫಾಯಿ, ವಿನೋದ್ ಖನ್ನ, ಸಿಮಿಗೆರೆವಾಲ್, ವಸಂತಮುಕರಿ ರಾಗಾಧಾರಿತ ಗೀತೆ) ‘ಚುರಾಲಿಯಾ ಹೆ ತುಂನೆ ಜೊ ದಿಲ್ ಕೋ’, (ಆಶಾ ಭೋಂಸ್ಲೆ ಅವರ ಜೊತೆ) ‘ಕಾರವಾನ್’ ಸಿನಿಮಾದ  ಆರ್.ಡಿ. ಬರ್ಮನ್ ಸಂಯೋಜನೆಯ ‘ಚಡ್ತೀ ಜವಾನಿ ತೇರೀ..’ (ಲತಾ ಅವರ ಜೊತೆ) ಹಾಡುಗಳು ಬಹಳ ಇಷ್ಟ. ‘ಕ್ಯಾ ಹುವಾ ತೇರಾ ವಾದಾ’ ಪಂಚಂದಾ ಸಂಯೋಜನೆಯ ಗೀತೆಗೆ ರಾಷ್ಟ್ರಪ್ರಶಸ್ತಿಗೆ ಭಾಜನರಾದ ರಫಿಯವರು ಕನ್ನಡದಲ್ಲಿ ‘ಒಂದೇ ಬಳ್ಳಿಯ ಹೂವುಗಳು’ ಸಿನಿಮಾಗೆ ಗೀತಪ್ರಿಯ ಅವರು ಬರೆದ ‘ನೀನೆಲ್ಲಿ ನಡೆವೆ ದೂರ..’ ಎಂಬ ಏಕೈಕ ಕನ್ನಡ ಗೀತೆಯನ್ನು ಸತ್ಯಂ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ.

ಭಲೇ ತಮ್ಮುಡು ,ಆರಾಧನಾ, ತೆಲುಗು ಚಿತ್ರಗಳಿಗೂ ಸಹ ಎನ್.ಟಿ.ರಾಮರಾವ್ ಅವರಿಗೆ ಹಾಡಿದ್ದಾರೆ. ಅವರು ತೆಲುಗಿನಲ್ಲಿ ಹಾಡಿದ ಎಂತಗಾರು ಗಾನಿ, ವೇದಾಂತುಲೈನ ಗಾನಿ (ಬಾರ್ ಬಾರ್ ದೇಖೋ..ಹಾಡಿನ ತೆಲುಗು ರೂಪ) ನಾ ಮದಿನಿನ್ನು ಪಿಲಿಚಿಂದಿ ಗಾನಮೇ .. ವೇಣುಗಾನಮೇ (ಆಜಾ ತುಝ್ ಕೋ ಪುಕಾರೇ ಮೇರೇ ಗೀತ್.. ಹಿಂದಿ ಹಾಡಿನ ತೆಲುಗು ರೂಪ) ತೆಲುಗಿನಲ್ಲಿ ಈಗಲೂ ಬಹಳ ಹಸಿರಾದ ಗೀತೆಗಳಾಗಿವೆ. ಅದಲ್ಲದೇ, ಹಿಂದಿ ಚಿತ್ರನಟ ಸಂಜೀವ್ ಕುಮಾರ್ ಅವರು ಊರ್ವಶಿ ಶಾರದಾ ಅವರ ಜೊತೆ ನಟಿಸಿರುವ ತೆಲುಗು ಚಿತ್ರ ‘ಪ್ರಿಯ ಬಾಂಧವಿ’ಯಲ್ಲೂ ಸಂಜೀವ್ ಕುಮಾರ್ ಗೆ ರಫಿ ಕಂಠ ಉಲಿದಿದೆ.

ಸೌಹಾರ್ದ ಸ್ನೇಹದ ಅರ್ಥ ತಿಳಿಸಿದ ಪ್ರಖ್ಯಾತ ಗಾಯಕ ಜೋಡಿ ಕಿಶೋರ್ ಕುಮಾರ್ – ರಫಿ ಹಿಂದಿ ಚಿತ್ರರಂಗದ ಅತ್ಯದ್ಭುತ ಗಾಯಕರು. ಇಂದಿಗೂ ಇವರಿಬ್ಬರ ಹಾಡುಗಳಿಗೆ ಬೇಡಿಕೆ – ಶ್ರೇಷ್ಠತೆಯ ಮೌಲ್ಯಗಳು ಇದ್ದೇ ಇದೆ. ಅವರ ಕಂಠದ ಮಾಧುರ್ಯದಿಂದ ಅದು ಇಂದಿಗೂ ಚಿರಸ್ಮರಣೀಯ. ಆದರೆ ಅನಾರೋಗ್ಯಕರವಾದ ಸಂಗತಿ ಮತ್ತು ವಿಪರ್ಯಾಸವೆಂದರೆ, ಇಂದಿಗೂ ಸಾಮಾಜಿಕ ಜಾಲ ತಾಣಗಳಲ್ಲಿ ಕಿಶೋರ್ ಹೆಚ್ಚೋ, ರಫಿ ಹೆಚ್ಚೋ ಎಂಬ ವೈಪರೀತ್ಯದ ಅಭಿಮಾನದ ಕಾರಣದಿಂದ ಅವರಿಬ್ಬರ ನಡುವೆ ವೈಮನಸ್ಯ ಇತ್ತೆಂದು ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಿಯ ಬಿಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿರುವ ಮಂದಿ ಇಂದಿಗೂ ಇದ್ದಾರೆ. ಆ ಮೂಲಕ ಇಬ್ಬರ ನಡುವೆ ಎಳ್ಳಷ್ಟೂ ಇರದಿದ್ದ ವೃತ್ತಿ ವೈಷಮ್ಯ ಇತ್ತೆಂದು ಹೇಳಿ, ಬದುಕಿದ್ದಷ್ಟೂ ಕಾಲ ಆತ್ಮೀಯ ಗೆಣೆಕಾರರಾಗಿ ಬಾಳಿದ ಅನ್ಯೋನ್ಯ ಗಾಯಕ ಜೋಡಿ ಕಿಶೋರ್ – ರಫಿ ಅವರ ವ್ಯಕ್ತಿತ್ವಗಳಿಗೆ ಮಸಿ ಹಚ್ಚುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ ವಾಸ್ತವ ಸಂಗತಿ ಇದಕ್ಕೆ ತದ್ವಿರುದ್ಧವಾಗಿದ್ದು, ಅವರಿಬ್ಬರ ಸ್ನೇಹದ ಆಳ ಎಷ್ಟು ಗೌರವ ಪೂರ್ಣವಾಗಿತ್ತು ಎನ್ನುವ ವಾಸ್ತವಾಂಶ ತಿಳಿಸಬಯಸುತ್ತೇನೆ. ಈ ಮೂಲಕ ಕಿಶೋರ್ – ರಫಿ ಅವರ ಚಿರಂತನ ಸ್ನೇಹದ ಘನತೆಯ ಅರಿವು ಆಗಲಿ ಎಂಬ ಸದುದ್ದೇಶ ಇಲ್ಲಿಯದ್ದು.

ರಫಿ – ಕಿಶೋರ್ ಇಬ್ಬರೂ ಭಿನ್ನ ವಿಭಿನ್ನ ಮಾದರಿಗಳ ಪ್ರತಿಭಾ ಸ್ವರೂಪಗಳು. ತಮ್ಮದೇ ಆದ ಶೈಲಿಗಳ ಮೂಲಕ ಚಿತ್ರರಸಿಕರ ಅಭಿಮಾನಕ್ಕೆ ಪಾತ್ರರಾದ ಮೇರುಗಾಯಕರು. ಕಿಶೋರ್ ಶಾಸ್ತ್ರೀಯ ಸಂಗೀತ ಕಲಿತವರೇ ಅಲ್ಲ, ಆದರೆ ರಫಿ ಗ್ವಾಲಿಯರ್ ಘರಾನಾ, ಕಿರಾನಾ ಘರಾನಾಗಳಲ್ಲಿ ನುರಿತಿದ್ದ ಶಾಸ್ತ್ರೀಯ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಕಿಶೋರ್ ಅಸಾಧಾರಣ ಮತ್ತು ಸರ್ವಾಂಗೀಣ ಪ್ರತಿಭೆ. ಅವರು ನಟ,ನಿರ್ಮಾಪಕ, ಗೀತರಚನೆಕಾರ, ಸಂಗೀತ ನಿರ್ದೇಶಕ, ನಿರ್ಮಾಪಕ, ನಿರ್ದೇಶಕ, ಸಂಕಲನಕಾರ, ಮೇಕಪ್ ಕಲೆ ಗೊತ್ತಿದ್ದ ಪ್ರಸಾಧನಾ ಕಲಾ ನಿಪುಣ, ಚಿತ್ರಕಥಾ ರಚನಾಕಾರ.. ಎಲ್ಲವೂ ಅಗಿದ್ದ ಸವ್ಯಸಾಚಿ.

ಒಮ್ಮೆ ಕಿಶೋರ್ ನಾಯಕರಾಗಿದ್ದ ‘ರಾಗಿಣಿ’ ಚಿತ್ರದ ‘ಮನ್ ಮೋರಾ ಬಾವ್ರಾ’ ಹಾಡನ್ನು ಕಿಶೋರ್ ಹಾಡಬೇಕಿತ್ತು, ಆದರೆ ಶುದ್ಧ ಶಾಸ್ತ್ರೀಯ ನೆಲೆಯ ಈ ಹಾಡನ್ನು ರಫಿ ಹಾಡಲಿ ಎಂದು ಇದರ ಸಂಗೀತ ನಿರ್ದೇಶಕರಾಗಿದ್ದ ಓ.ಪಿ.ನಯ್ಯರ್ ಗೆ ಹೇಳಿ ಕಿಶೋರ್, ರಫಿಯವರಿಂದ ತಮ್ಮ ಅಭಿನಯಕ್ಕೆ ಹಾಡಿಸಿಕೊಂಡು, ತಾವು ಕೇವಲ ತುಟಿಚಲನೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು. ಇದೇ ರೀತಿ ಕಿಶೋರ್ ನಾಯಕರಾಗಿದ್ದ ‘ಶರಾರತ್’ ಚಿತ್ರದ ‘ಅಜಬ್ ಹೈ ದಾಸ್ತಾನ್ ತೇರಿ ಹೋ ಜ಼ಿಂದಗಿ’, ‘ಭಾಗಂಭಾಗ್’ ಚಿತ್ರದ ‘ಮಸೀಹ ಬನ್ ಕೆ ಬೀಮಾರೋಂಕೆ ಚಲೇ ಹೂ ಕಹಾಂ..’ ಹಾಡುಗಳಿಗೆ ನಾಯಕ ಕಿಶೋರ್ ತುಟಿ ಚಲನೆ ರಫಿಯವರ ಗಾಯನ ಸೊಗಸಾಗಿ ಮೇಳೈಸಿದೆ.

ಇಲ್ಲಿ ಗಮನಿಸಬೇಕಾದ ವಿಷಯಗಳಿವೆ. ಕಿಶೋರ್ ಬಗ್ಗೆ ರಫಿಯವರಿಗೆಷ್ಟು ಅಭಿಮಾನವಿತ್ತೆಂದರೆ, ಕಿಶೋರ್ ನಿರ್ಮಿಸಿದ ಚಿತ್ರಕ್ಕೆ ಹಾಡಲು ರಫಿ ಕೇವಲ ಒಂದು ರೂಪಾಯಿ ತೆಗೆದುಕೊಂಡು ಹಾಡಿ ತಮ್ಮಿಬ್ಬರ ಸ್ನೇಹದ ಬಾಂಧವ್ಯವನ್ನು ಎತ್ತಿ ಹಿಡಿದಿದ್ದರು. ಮುಂದೆ, ‘ನಯಾ ಅಂದಾಜ಼್’ ಚಿತ್ರಕ್ಕಾಗಿ ‘ಮೇರೆ ನೀಂದೋ ಮೆ ತುಂ’ ಗೀತೆಯನ್ನು ಕಿಶೋರ್ – ಶಂಷಾದ್ ಬೇಗಂ ಹಾಡುತ್ತಿರುವಾಗ ಅಲ್ಲಿಗೆ ಬಂದ ರಫಿಯವರು ಕಿಶೋರ್ ಧ್ವನಿ ಕೇಳಿ ಆನಂದದಿಂದ ಕಣ್ಣೀರು ಹಾಕುತ್ತಾ ಕಿಶೋರ್ ಅವರನ್ನುಮನಸಾರೆ ಅಭಿನಂದಿಸುತ್ತಾರೆ. ಇದಷ್ಟೇ ಅಲ್ಲದೆ ‘ಮಿ.ಫಂತೂಷ್’ ಚಿತ್ರದ ‘ದುಃಖಿಮನ್ ಮೇರೆ..’ ಹಾಡನ್ನು ಕಿಶೋರ್ ಹಾಡಿದಾಗ ರಫಿಯವರು “ನಾನು ಕಿಶೋರ್ ತರಹ ಹಾಡಲು ಸಾಧ್ಯವೇ ಇಲ್ಲ, ಅವನಷ್ಟು ಚೆನ್ನಾಗಿ ಈ ಹಾಡನ್ನು ಬೇರೆ ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದ್ದರು.

ಅದೇ ರೀತಿ ‘ಲಾಲ್ ಖಿಲಾ’ ಚಿತ್ರದ ‘ನ ಕಿಸೀ ಕಿ ಆಂಖೋ ಕಾ ನೂರ್ ಹೂ..’ ಎಂಬ ರಫಿ ಹಾಡನ್ನು ಕೇಳಿದ ಕಿಶೋರ್ ಸಂದರ್ಶನವೊಂದರಲ್ಲಿ ರಫಿ ಸಾಬ್ ತರಹ ಹಾಡಲು ಇನ್ನೊಬ್ಬರಿಗೆ ಸಾಧ್ಯ ಆಗೋದಾದರೆ ಅದು ರಫಿಯವರಿಂದ ಮಾತ್ರ ಎಂದಿದ್ದರು. ‘ಆರಾಧನಾ’ ಚಿತ್ರದ ಮೂಲಕ ಕಿಶೋರ್ – ರಾಜೇಶ್ ಖನ್ನ ಜ಼ಮಾನಾ ಶುರುವಾಗಿ ಜನಪ್ರಿಯವಾಗಿ ರಫಿಯವರಿಗೆ ಅವಕಾಶಗಳು ಸ್ವಲ್ಪ ಕಡಿಮೆಯಾಯಿತು. ಆಗ ಈ ಬಗ್ಗೆ ಖುದ್ದಾಗಿ ಯಾರೋ ರಫಿಯವರನ್ನು ಕಿಶೋರ್ ಅವರಿಂದ ನಿಮಗೆ ಅವಕಾಶಗಳು ಕಡಿಮೆಯಾಗುತ್ತಿದೆಯಲ್ಲ ಅಂದಾಗ ರಫಿ ಶಾಂತ ಚಿತ್ತ ರಾಗಿ “ಈಗ ಕಿಶೋರ್ ಸಮಯ, ಅವನು ಚೆನ್ನಾಗಿ ಹಾಡ್ತಿದ್ದಾನೆ, ಹಾಡಲಿ ಬಿಡಿ” ಅಂದಾಗ ಪ್ರಶ್ನಿಸಿದವರು ತೆಪ್ಪಗಾಗಿದ್ದರು. ಒಮ್ಮೆ ಕಿಶೋರ್ ಮುಂದೆ ರಫಿಯವರನ್ನು ಒಬ್ಬ ಹಿಗ್ಗಾ ಮುಗ್ಗಾ ಬಯ್ಯತೊಡಗಿದ್ದಾಗ ಅಲ್ಲಿಗೆ ಬಂದ ಕಿಶೋರ್, “ರಫಿಯವರನ್ನು ಬಯ್ಯುತ್ತೀಯಾ ನೀನು, ಅವರ ಯೋಗ್ಯತೆ ನಿನಗೇನಿದೆ” ಅಂದು ಫಟೀರನೆ ಕೆನ್ನೆಗೆ ಬೀಸಿದ್ದರು. ಆಗ ತಕ್ಷಣವೇ ಅಲ್ಲಿಂದ ಆ ರಫಿ ನಿಂದಕ ಜಾಗ ಖಾಲಿ ಮಾಡಿ ಬಿಟ್ಟಿದ್ದ. ಕಿಶೋರ್ ಅವರ ನಿವಾಸದ ಖಾಸಗಿ ಕೋಣೆಯಲ್ಲಿ ಬೃಹತ್ತಾದ ರಫಿಯವರ ಭಾವಚಿತ್ರವಿದೆ.

ಒಂದು ಪಕ್ಷದ ಪ್ರಚಾರಕ್ಕೆ ಹೋಗಲು ಕಿಶೋರ್ ಒಪ್ಪದಿದ್ದಾಗ ಈ ಕಾರಣದಿಂದ ಆಕಾಶವಾಣಿಯಲ್ಲಿ ಕಿಶೋರ್ ಹಾಡುಗಳ ಪ್ರಸಾರ ನಿಷೇಧಕ್ಕೊಳಪಟ್ಟಿತು. ಆಗ ಆ ನಿಷೇಧ ತೆರವು ಗೊಳಿಸಲುಆ ವ್ಯಕ್ತಿಯ ಬಳಿಗೇ ತೆರಳಿ ಶ್ರಮಿಸಿ, ಸಂಗೀತ ನಿರ್ದೇಶಕ ಕಲ್ಯಾಣ್ ಜಿ (ಆನಂದಜಿ ಖ್ಯಾತಿಯ) ಜೊತೆ ಹೋಗಿ ಅದನ್ನು ಜಯಿಸಿಕೊಂಡು ಬಂದ ಉದಾರಿ ಮೊಹಮ್ಮದ್‌ ರಫಿ ಸಾಬ್. ಕಿಶೋರ್ ಟ್ಯಾಕ್ಸ್ ಕಟ್ಟಲಾರದೆ ಆರ್ಥಿಕ ಸಂಕಷ್ಟಕ್ಕೂ ಈಡಾದಾಗ, “ನೀನು ಲೈವ್ ಷೋ ಮಾಡು” ಎಂದು ಸಲಹೆ ನೀಡಿದ ಪರಿಣಾಮ ಕಿಶೋರ್ ಕುಮಾರ್ ಅವರ ಲ್ಯೆವ್ ಷೋಗಳ ವೈಭವವನ್ನು ಜಗಜ್ಜಾಹೀರುಗೊಳಿಸಿ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ.

ರಫಿಯವರು 1980 ಜುಲೈ 31ಕ್ಕೆ ತೀರಿಕೊಂಡಾಗ ಎರಡು ಲಕ್ಷಕ್ಕೂ ಅಧಿಕ ಜನ ಸೇರಿದ್ದರು.ರಫಿಯವರ ಸಾವಿನ ಸುದ್ದಿ ಹೇಳಲಾರದೆ ವೈದ್ಯರು ಕಣ್ಣೀರು ಹಾಕಿದ್ದರು. ಡಾ.ಪಿ.ಬಿ.ಶ್ರೀನಿವಾಸ್ ಅವರೂ ಸಹ ರಫಿಯವರ ಅಂತಿಮದರ್ಶನಕ್ಕೆ ಹೋಗಿ ಪಾರ್ಥಿವ ಶರೀರವನ್ನು ನೋಡಲಾಗದೆ ಅಪಾರ ಜನಸಂದಣಿಯ ಅಗಾಧತೆಯ ಕಾರಣಕ್ಕಾಗಿ ವಾಪಸ್ಸು ಬಂದುಬಿಟ್ಟಿದ್ದರು. ಆಗ ಕಿಶೋರ್ ಸಹ ಚಿಕ್ಕಮಗುವಿನ ಹಾಗೆ ಅತ್ತಿದ್ದೂ ಅಲ್ಲದೆ, ತಮ್ಮ ಮಾತೃಭಾಷೆ ಬೆಂಗಾಲಿಯಲ್ಲಿ “ಸೆ ಜಾನೋ ಆಜೋ” ಎಂಬ ಹಾಡಿನ ಮೂಲಕವೇ ಅಗಲಿದ ಗೆಳೆಯನ ಸಾವಿಗೆ ಗೀತ ಶ್ರದ್ಧಾಂಜಲಿ ಅರ್ಪಿಸಿದ್ದರು.

ರಫಿಯವರು ಏ ದುನಿಯಾ ಏ ಮೆಹಫಿಲ್ ಮೇರೆ ಕಾಮ್ ಕೀ ನಹೀ (ಹೀರ್ ರಾಂಜಾ) ಎಂಬ ತಮ್ಮದೇ ಹಾಡಿನಂತೆ ಬದುಕಿನ ಸಂಗೀತವನ್ನು ನಿಲ್ಲಿಸಿ ಚಿತ್ರರಂಗ ಮತ್ತು ಬಾಳಿನ ರಂಗಮಂಚವನ್ನು ಬಿಟ್ಟು 41 ವರ್ಷಗಳಾಗಿವೆ. ಕಿಶೋರ್ ಸಹ ತಾವೇ ಹಾಡಿದಂತೆ ‘ಗೀತ್ ಗಾತಾ ಹೂ ಮೆ’, ‘ಗುನ್ ಗುನಾತಾ ಹೂ ಮೆ’, ‘ಮೈನೆ ಹಸ್ ನೆ ಕಾ ವಾದಾ ಕಿಯಾ ಥಾ ಕಭಿ’, ‘ಇಸ್ಲಿಯೇ ಅಬ್ ಸದಾ ಮುಸ್ಕುರಾತಾ ಹು ಮೆ..’ ಎಂದು ಜನಮನ ರಂಜಿಸಿ ಅಸ್ತಮಿಸಿ ಅಣ್ಣ ಅಶೋಕ್ ಕುಮಾರ್ ಜನ್ಮದಿನದಂದೇ ಅಕ್ಟೋಬರ್ 13, 1987 ರಂದು ಕಣ್ಮರೆ -ಮಣ್ಮರೆ ಯಾಗಿ ನಿರ್ಗಮಿಸಿ 34 ವರ್ಷವಾಗಿ ಹೋಗಿದೆ.

ಆದರೆ ಇಷ್ಟು ಅಗಾಧವಾದ ಪರಸ್ಪರ ಪ್ರೀತಿ ಪರಾಕಾಷ್ಠೆಯಲ್ಲಿ ಬಾಳಿದ ಈ ಜೋಡಿಯ ಬಗ್ಗೆ ಇಲ್ಲಸಲ್ಲದ ವೈರತ್ವದ, ಕುಹಕ ಸುದ್ದಿಗಳ ಅಬ್ಬರ ಹೆಚ್ಚಿಸುವ ಹುನ್ನಾರವಿರದೆ, ಈ ಇಬ್ಬರೂ ಮಹಾನ್ ಚೇತನಗಳಿಗೆ ವಂದಿಸೋಣ. ರಫಿ, ಕಿಶೋರ್ ದಾ ಗಿಂತ ಶ್ರೇಷ್ಠ, ಕಿಶೋರ್, ರಫಿಗಿಂತ ಶ್ರೇಷ್ಠ ಎನ್ನುವವರು ಸೂರ್ಯ – ಚಂದ್ರರನ್ನು ಹೋಲಿಕೆ ಮಾಡಲಾದೀತೆ ಎನ್ನುವ ಅಂಶವನ್ನು ಅರಿತರೆ ಒಳಿತು. ರಫಿಯವರು ತೀರಿಹೋಗಿ ಈಗ 41ವರ್ಷಗಳೇ ಆಗಿ ಹೋಗಿದ್ದರೂ ಕಲೆ – ಕಲಾವಿದತನಕ್ಕೆ ಸಾವು ಸಾಧ್ಯವಿಲ್ಲ. ರಫಿ ಎಂಬ ಮಧುರ ಗಾನಮೋಡಿಗಾರನಿಗೆ ಹೀಗೊಂದು ಗೌರವಪೂರ್ವಕ ಅಕ್ಷರಾಂಜಲಿ. ‘ತೂ ಕಭೀ ಕವಿ ನ ಬನ್ ಜಾವ್, ರಾತ್ ಕೆ ಹಮ್ ಸಫರ್, ರಫಿ ಸಾಬ್ ಆಪ್ ಹರ್ ಏಕ್ ದಿನ್ ಯಾದ್ ಆತೇ ಹೆ, ಲಿಖೇ ಜೋ ಖತ್ ತುಝೆ ಓ ತೇರಿ ಯಾದ್ ಮೆಹಜಾ಼ರೋ ರಂಗ್ ಕೆ ನಜ಼ಾರೆ ಬನ್ ಗಯೇಸವೇರ ಜಬ್ ಹುವಾ ತೋ ಫೂಲ್ ಬನ್ ಗಯೆ ಜೋ ರಾತ್ ಆಯೇ ತೋ ಸಿತಾರೆ ಬನ್ ಗಯೆ.

ಚಿಕಾಗೋ ಪ್ರವಾಸದಲ್ಲಿದ್ದಾಗ ಗಾಯಕ ಮೊಹಮ್ಮದ್ ರಫಿ ಅವರಿಗೆ ಖ್ಯಾತ ಕುಸ್ತಿ ಪಟು ಮೊಹಮ್ಮದ್ ಅಲಿ ಅವರಿಂದ ಗೌರವ. (Photo Courtesy: mpositive.in)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಪರ್ವೀನ್ ಬಾಬಿ

ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದ ಯಶಸ್ವೀ ನಾಯಕನಟಿ ಎಂದು ಕರೆಸಿಕೊಂಡವರು ಪರ್ವೀನ್ ಬಾಬಿ. ಸಮಾಜದ ಸಂಪ್ರದಾಯಗಳನ್ನು ಧಿಕ್ಕರಿಸುವ ಆಧುನಿಕ ಯುವತಿ

ದೇವಿಕಾ ರಾಣಿ

ದೇವಿಕಾ ರಾಣಿ ಜನಿಸಿದ್ದು ವಿಶಾಖಪಟ್ಟಣದಲ್ಲಿ (30/03/1908). ಪೋಷಕರು ಬೆಂಗಾಲಿ ಮೂಲದವರು. ಅವರ ತಂದೆ ಹೆಸರಾಂತ ವೈದ್ಯರಾದರೆ, ಚಿಕ್ಕಪ್ಪ ದೊಡ್ಡ ಲೇಖಕ.