ಹಾಸ್ಯನಟ ಸತ್ಯ ಅವರು ನಟ ಎಂ.ಎಸ್.ಉಮೇಶ್‌ರ ಹಿರಿಯ ಸಹೋದರ. ಜನಿಸಿದ್ದು ಮೈಸೂರಿನಲ್ಲಿ. ಅವರ ಪೂರ್ವಿಕರು ಚಿಕ್ಕಮಗಳೂರು ಜಿಲ್ಲೆಯ ಅಂಬಳ ಗ್ರಾಮದವರು. ಮನೆಯಲ್ಲಿ ಆರ್ಥಿಕ ಸಂಕಷ್ಟವಿದ್ದುದರಿಂದ ಐದರ ಪುಟ್ಟ ಹರೆಯದಲ್ಲೇ ನಾಟಕ ಕಂಪನಿ ಸೇರಿದ್ದರು ಸತ್ಯ. ಶ್ರೀಕಂಠಶಾಸ್ತ್ರಿಗಳ ಕಂಪನಿ, ಶಾಕುಂತಲ ಕರ್ನಾಟಕ ನಾಟಕ ಸಭಾ, ನಟರಾಜ ನಾಟಕ ಮಂಡಳಿ, ಶೇಷಕಲಾ ಮಂಡಳಿ, ಹಿರಣ್ಣಯ್ಯ ಮಿತ್ರಮಂಡಳಿ, ಗುಬ್ಬಿ ಕಂಪನಿ, ಕನ್ನಡ ಥಿಯೇಟರ್ಸ್ ನಾಟಕ ಕಂಪನಿಗಳ ಹತ್ತಾರು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದರು. ಈ ಮಧ್ಯೆ ತಾವು ತೊಡಗಿಸಿಕೊಂಡಿದ್ದ ನಾಟಕ ಕಂಪನಿಗಳು ಸಂಕಷ್ಟಕ್ಕೀಡಾದಾಗ ಹೋಟೆಲ್‌ನಲ್ಲಿ ಕೆಲಸ, ಮಕ್ಕಳಿಗೆ ನೃತ್ಯ ಹೇಳಿಕೊಟ್ಟು ಬದುಕು ಸಾಗಿಸಿದ್ದೂ ಇದೆ.

ಮಾಸ್ಟರ್ ಹಿರಣ್ಣಯ್ಯ ಅವರ ‘ಭ್ರಷ್ಟಾಚಾರ’ ನಾಟಕದಲ್ಲಿ ಸತ್ಯ ಅವರು ನಟಿಸುತ್ತಿದ್ದ ‘ಕಾನ್ಸ್‌ಟೇಬಲ್ ಕಸ್ತೂರಿ’ ಪಾತ್ರ ಖ್ಯಾತಿ ಗಳಿಸಿತ್ತು. ಈ ಪಾತ್ರದ ಜನಪ್ರಿಯತೆ ಅವರಿಗೆ ಸಿನಿಮಾ ಅವಕಾಶ ತಂದುಕೊಟ್ಟಿತು. ಸಿನಿಮಾ ಪ್ರಚಾರ ನಿರ್ವಹಿಸುತ್ತಿದ್ದ ವೆಂಕೋಬರಾವ್ ಅವರು ಸತ್ಯರನ್ನು ಬಾವಾ ಮೂವೀಸ್‌ನ ಸಮೀವುಲ್ಲಾ ಅವರಿಗೆ ಪರಿಚಯಿಸಿದರು. ಇದು ಫಲ ಕೊಟ್ಟಿತು. ಸಮೀವುಲ್ಲಾ ಅವರ ‘ಸ್ವರ್ಣಭೂಮಿ’ ಚಿತ್ರದೊಂದಿಗೆ ಸತ್ಯ ಬೆಳ್ಳಿತೆರೆ ಪ್ರವೇಶಿಸಿದರು. ಮುಂದೆ ಸಾಲು ಸಾಲು ಸಿನಿಮಾಗಳ ಹಾಸ್ಯ ಪಾತ್ರಗಳಲ್ಲಿ ನಟಿಸಿದ ಅವರು ರಂಗಭೂಮಿಯಲ್ಲೂ ಸಕ್ತಿಯರಾಗಿದ್ದರು. ಭಲೇ ಹುಚ್ಚ, ಪುನರ್ಜನ್ಮ, ಪ್ರೀತಿ ಮಾಡು ತಮಾಷೆ ನೋಡು, ಪ್ರೇಮಜ್ವಾಲೆ, ಲಕ್ಷ್ಮೀಪ್ರಸನ್ನ, ಬಂಗಾರದ ಮನೆ, ಮನೆಬೆಳಕು, ಸುಳಿ, ಬಸವರ ಬಂಧು, ಮಹಾತ್ಯಾಗ, ಮೊಗ ಮೊಮ್ಮಗ ಬಬ್ರುವಾಹನ… ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಸತ್ಯ ಅಭಿನಯಿಸಿದ್ದಾರೆ.
ಸಿನಿಮಾಗಳಲ್ಲಿ ಬೇಡಿಕೆಯ ನಟನಾಗಿದ್ದಾಗಲೇ ಜಾಂಡೀಸ್ ಖಾಯಿಲೆ ಅವರನ್ನು ಕಾಡತೊಡಗಿತು. ‘ಮಾನಿನಿ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಖಾಯಿಲೆ ಉಲ್ಬಣಿಸಿತು. ಆಸ್ಪತ್ರೆಗೆ ದಾಖಲಾದ ಅವರು 1979ರ ಜುಲೈ 29ರಂದು ತಮ್ಮ 42ನೇ ವಯಸ್ಸಿನಲ್ಲೇ ಅಕಾಲಿಕ ನಿಧನ ಹೊಂದಿದರು. ಸತ್ಯ ಅವರ ಪುತ್ರ ಶಿವಸತ್ಯ ತಬಲ, ಕೀಬೋರ್ಡ್ ವಾದನದಲ್ಲಿ ಪರಿಣಿತರು. 50ಕ್ಕೂ ಹೆಚ್ಚು ಧಾರಾವಾಹಿ, 40ಕ್ಕೂ ಹೆಚ್ಚು ಜನಪದ ಗೀತೆಗಳ ಧ್ವನಿಸುರಳಿಗಳಿಗೆ ಸಂಗೀತ ಸಂಯೋಜಿಸಿದ್ದಾರೆ. (ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
