(ಬರಹ: ಎನ್.ಎಸ್.ಶ್ರೀಧರ ಮೂರ್ತಿ)
ಜಿ.ಕೆ.ವೆಂಕಟೇಶ್ ಅವರನ್ನು ಬಹು ವಿಶಿಷ್ಟವಾಗಿಸಿದ್ದು ಅಪಾರವಾದ ಸಂಗೀತಜ್ಞಾನ ಮತ್ತು ಪ್ರಯೋಗಶೀಲತೆ. ಭಾರತೀಯ ಸಂಗೀತ ದಿಗ್ಗಜರ ನಿಕಟ ಒಡನಾಟ ಪಡೆದಿದ್ದ ಅವರು ಚಿತ್ರಗೀತೆಗಳನ್ನು ಶಿಸ್ತು ಸಂಯಮಗಳಿಂದ ಶ್ರೇಷ್ಟತೆಯ ನೆಲೆಯಲ್ಲಿ ಬೆಳೆಸಿದರು. ಇಂದು ಜಿ.ಕೆ.ವೆಂಕಟೇಶ್ (21/09/1927 – 17/11/1993) ಅವರ ಜನ್ಮದಿನ.
ನನ್ನ ಜೀವನದಲ್ಲಿ ಕಂಡ ಅದ್ಭುತ ವ್ಯಕ್ತಿಗಳಲ್ಲಿ ಅಗ್ರಮಾನ್ಯರಾದವರು ಜಿ.ಕೆ.ವೆಂಕಟೇಶ್. ಅವರ ಜೊತೆಗಿನ ನನ್ನ ಒಡನಾಟ ಸುದೀರ್ಘ ಕಾಲದ್ದಲ್ಲ. ಆದರೆ ಅವರ ಜೊತೆಗೆ ಕಳೆದ ಪ್ರತಿ ಗಳಿಗೆಯೂ ಸ್ಮರಣೀಯವಾದದ್ದು. ಅವರು ಒಂದು ರೀತಿಯಲ್ಲಿ ಸಂಗೀತಕ್ಕಾಗಿಯೇ ಹುಟ್ಟಿದವರು. ಅವರ ಮಾತಿನಲ್ಲಿ ಸಂಗೀತ ಬಿಟ್ಟು ಇನ್ನೇನು ಬರುತ್ತಿರಲಿಲ್ಲ. ಅವರು ಹಾರ್ಮೋನಿಯಂ ಮೇಲೆ ಕೈ ಇಟ್ಟರೆ ಸಾಕು ಸ್ವರಗಳು ಕಾರಂಜಿಯ ಹಾಗೆ ಚಿಮ್ಮುತ್ತಿದ್ದವು.
ಒಂದು ಸಲ ಹೀಗೆ ಅವರ ಜೊತೆಗೆ ಯಾವುದೋ ವಿಷಯ ಮಾತನಾಡುತ್ತಿದ್ದೆ. ಆಗಿನ್ನೂ ರೇಡಿಯೋಗಳ ಕಾಲ. ಅವರ ಜೊತೆಗೆ ಪುಟ್ಟ ಟ್ರಾನ್ಸಿಸ್ಟರ್ ಸದಾ ಇರುತ್ತಿತ್ತು. ಅದರಲ್ಲಿ ಅವರೇ ರಾಗ ಸಂಯೋಜಿಸಿದ ‘ಭಕ್ತ ಕುಂಬಾರ’ ಚಿತ್ರದ ‘ಕಂಡೆ ಹರಿಯ ಕಂಡೆ’ ಎಂಬ ಹಾಡು ಆಕಾಶವಾಣಿಯಿಂದ ಪ್ರಸಾರಿತವಾಯಿತು. ಅದನ್ನು ಕೇಳಿದ ಕೂಡಲೇ ವೆಂಕಟೇಶ್ ಚುರುಕಾದರು. ಈ ಹಾಡಿನಿಂದ ಆರು ತಿಂಗಳು ಈ ಚಿತ್ರದ ಚಿತ್ರೀಕರಣವೇ ನಿಂತು ಹೋಗಿತ್ತು ಗೊತ್ತಾ? ಎಂದು ಚಂದದ ಕಥೆಯನ್ನು ಆರಂಭಿಸಿದರು. ಹಾಗೆ ಲಹರಿಯಲ್ಲಿ ಇದು ಯಾವ ರಾಗ ಗೊತ್ತಾ ಎಂದರು. ಸಾಮಾನ್ಯವಾಗಿ ಜಿ.ಕೆ.ವೆಂಕಟೇಶ್ ಅವರ ಸಂಯೋಜನೆಗೆ ರಾಗ ಹೇಳುವುದು ಕಷ್ಟ. ಅವರು ವಿಜಾತಿ ಸ್ವರಗಳನ್ನು ಬೆರೆಸುವಲ್ಲಿ ಅಗ್ರಗಣ್ಯರು. ನಾನು ಯಾವುದೋ ರಾಗ ಹೇಳಿದೆ. ಅವರು ತಲೆ ಅಲ್ಲಾಡಿಸಿ ‘ಇದು ಮೋಹನ’ ಎಂದು ಒಂದು ಕ್ಷಣ ಧ್ಯಾನದಲ್ಲಿದ್ದವರು ನಿಧಾನವಾಗಿ ಚಿತ್ರಸಂಗೀತದಲ್ಲಿ ಮೋಹನದ ಬಳಕೆಯ ಕುರಿತು ಮಾತನಾಡಲು ಆರಂಭಿಸಿದರು. ಐದೇ ಸ್ವರ ಇರುವ ಆ ರಾಗಕ್ಕೆ ಪಟದೀಪ್ ಬೆರೆಸಿದರೆ ಏನಾಗುತ್ತದೆ, ರೇವತಿ ಬೆರೆಸಿದರೆ ಏನಾಗುತ್ತದೆ. ಹೀಗೆ ಮಾತು ಮಾತು. ಸರಿ ಸುಮಾರು ಆರು ಗಂಟೆಗಳ ಕಾಲ ಮಾತನಾಡಿದರು. ಒಂದು ರಾಗದ ಕುರಿತು ಅದರಲ್ಲಿಯೂ ಚಿತ್ರರಂಗದಲ್ಲಿನ ಬಳಕೆಯ ಕುರಿತೇ ಆರು ಗಂಟೆಗಳ ಮಾತನಾಡಬಲ್ಲ ಅವರ ವಿರಾಟ್ ಪ್ರತಿಭೆ ನಿಮ್ಮ ಊಹೆಗೆ ಬಂದಿರಬಹುದು. ಅವರ ಜೊತೆ ಕಳೆದಿದ್ದೆಲ್ಲವೂ ಇಂತಹ ಅಮೃತ ಘಳಿಗೆಗಳೇ! ಆಗ ದಕ್ಕಿದ್ದನ್ನು ಈ ಪದಗಳ ಹಾರದಲ್ಲಿ ಕೆಲ ಮಟ್ಟಿಗೆ ಜೋಡಿಸುವ ಪ್ರಯತ್ನ ಮಾಡಿದ್ದೇನೆ.
ಜಿ.ಕೆ.ವೆಂಕಟೇಶ್ 1927ರ ಸೆಪ್ಟೆಂಬರ್ 21ರಂದು ಜನಿಸಿದ್ದು ಹೈದರಾಬಾದ್‌ನಲ್ಲಿ. ಅವರ ತಂದೆ ಕೃಷ್ಣದಾಸ್ ಛಾಯಾಗ್ರಾಹಕರು. ನಾವು ಸಾಮಾನ್ಯವಾಗಿ ನೋಡುವ ಮೈಸೂರು ಮಹಾರಾಜರ ಛಾಯಾಚಿತ್ರಗಳೆಲ್ಲ ಅವರು ತೆಗೆದಿದ್ದೇ. ಅಣ್ಣ ಸೀತಾಪತಿ ವೀಣಾವಾದಕರು. ಬಾಲಕ ವೆಂಕಟೇಶ್‌ಗೆ ಅವರೇ ಮೊದಲ ಗುರುಗಳು. ಆರನೇ ವಯಸ್ಸಿನಲ್ಲೇ ಸರಾಗವಾಗಿ ವೀಣೆ ನುಡಿಸಬಲ್ಲ ಪರಿಣತಿಯನ್ನು ವೆಂಕಟೇಶ್ ಗಳಿಸಿದರು. ವೆಂಕಟೇಶ್ ಅವರಿಗೆ ಹನ್ನೊಂದು ವರ್ಷವಾದಾಗ ಅವರ ಕುಟುಂಬ ಮದ್ರಾಸಿಗೆ ಬಂದು ನೆಲೆಸಿತು. ತಂದೆಗೆ ರಂಗಭೂಮಿಯ ಹಿನ್ನೆಲೆ ಇತ್ತು. ಅವರ ಪ್ರೋತ್ಸಾಹದಿಂದ ವೆಂಕಟೇಶ್ ತಮ್ಮ ಎರಡನೇ ವರ್ಷದಿಂದಲೇ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಈ ಹವ್ಯಾಸಕ್ಕೆ ಮದ್ರಾಸಿನಲ್ಲಿ ಉತ್ತಮವಾದ ಅವಕಾಶ ಸಿಕ್ಕಿತು. ಜೂಪಿಟರ್ ಸಂಸ್ಥೆಯಲ್ಲಿ ತಮ್ಮ ಮಂಡಳಿಗೆ ವೆಂಕಟೇಶ್ ಅವರನ್ನು ಸೇರಿಸಿಕೊಂಡರು. ಊಟ ವಸತಿಗಳಿಗೆ ಅವರೇ ಏರ್ಪಾಟು ಮಾಡಿ ತಿಂಗಳಿಗೆ ಮೂರು ರೂಪಾಯಿ ಸಂಬಳ ಕೊಡುತ್ತಿದ್ದರು. ತಮಿಳು ಚೆನ್ನಾಗಿ ಬರದಿದ್ದರೂ ಹೇಳಿ ಕೊಟ್ಟಿದ್ದನ್ನು ತಪ್ಪದೇ ಹೇಳುವ ಜ್ಞಾಪಕಶಕ್ತಿ, ಚಾಕಚಕ್ಯತೆ ಅವರಿಗೆ ಹಲವು ಅವಕಾಶಗಳು ದೊರೆಯುವಂತೆ ಮಾಡಿತು. ಕನ್ನಂಗಿ, ಕುಬೇರ, ಕುಚೇಲ, ಮಹಾಮಾಯೆ, ಭಕ್ತಮೀರಾ ಮೊದಲಾದ ನಾಟಕಗಳಲ್ಲಿ ಪಾತ್ರ ವಹಿಸಿ ವೆಂಕಟೇಶ್ ಹೆಸರು ಗಳಿಸಿದರು.

ಸುಪ್ರಸಿದ್ದ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥ್ ಕೂಡ ಅದೇ ಕಂಪನಿಯಲ್ಲಿ ಬಾಲಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಇವರಿಬ್ಬರಿಗೂ ಸ್ನೇಹ ಬೆಳೆಯಿತು. ಚರ್ಚಿಸುತ್ತಾ ತಮ್ಮ ಕ್ಷೇತ್ರ ಅಭಿನಯವಲ್ಲ ಎಂದು ಅರಿವಾಯಿತು. ಸಂಗೀತದಲ್ಲೇ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ನಿರ್ಧರಿಸಿದರು. ಆರ್ಕೆಸ್ಟ್ರಾದ ಕೋರಸ್‌ನಲ್ಲಿ ಹಾಡಲಾರಂಭಿಸಿದರು. ಗಾಯನದತ್ತ ಆಸಕ್ತಿ ಇದ್ದರೂ ವಾದ್ಯಗಳನ್ನು ನುಡಿಸುವವರ ಕೊರತೆ ಇದ್ದಿದ್ದರಿಂದ ಇಬ್ಬರಿಗೂ ವಾದ್ಯಗಳ ನುಡಿಸುವಿಕೆಯಲ್ಲೇ ಹೆಚ್ಚಿನ ಅವಕಾಶಗಳು ಸಿಕ್ಕಲಾರಂಭಿಸಿದವು. ಕೆ.ವಿ.ನಾಯ್ಡು ಅವರ ಆರ್ಕೆಸ್ಟಾçದಲ್ಲಿ ಸೇರಿ ಇಬ್ಬರೂ ಚಿತ್ರಗಳಿಗೆ ಕೆಲಸ ಮಾಡಲು ಆರಂಭಿಸಿದರು. ಅಲ್ಲಿ ಇವರಿಗೆ ಸಂಗೀತ ನಿರ್ದೇಶಕರಾದ ಎಸ್.ವೆಂಕಟರಾಮನ್ ಅವರ ಪರಿಚಯವಾಯಿತು. ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾ ಇನ್ನೂ ನಿಕಟವಾದ ಚಿತ್ರರಂಗದ ಸಂಪರ್ಕವನ್ನು ಪಡೆದರು. ಜಿ.ಕೆ.ವೆಂಕಟೇಶ್ ನಂತರ ಪಕ್ಷಿರಾಜ ಸ್ಟುಡಿಯೋ ಸೇರಿ ಎರಡು ವರ್ಷಗಳ ಕಾಲ ಸುಬ್ಬರಾಮನ್ ಅವರಿಗೆ ಸಹಾಯಕರಾಗಿ ಅನುಭವ ಪಡೆದರು. ಟಿ.ಜಾನಕೀರಾಂ ಅವರ ಮಲಯಾಳಂ ಚಿತ್ರ ‘ಬೇಬಿ’ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು. ‘ಸೋದರಿ’ ಚಿತ್ರಕ್ಕೆ ಪದ್ಮನಾಭ ಶಾಸ್ತ್ರಿಗಳಿಗೆ ಸಹಾಯಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರನ್ನು ಸ್ವತಂತ್ರ ಸಂಗೀತ ನಿರ್ದೇಶಕರನ್ನಾಗಿಸಿದ್ದು ಟಿ.ವಿ.ಸಿಂಗ್ ಠಾಕೂರ್. ಕನ್ನಡಿಗರ ಸ್ವಾಭಿಮಾನವನ್ನು ಹೆಚ್ಚಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ `ವಿಶ್ವಕಲಾ ಚಿತ್ರ’ ಲಾಂಛನದ ಮೂಲಕ ನಿರ್ಮಿಸಿ ನಿರ್ದೇಶಿಸಿದ ‘ಹರಿಭಕ್ತ’ ಮತ್ತು ‘ಓಹಿಲೇಶ್ವರ’ ಚಿತ್ರಗಳಿಗೆ ವೆಂಕಟೇಶ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿಸಿದರು.
ಈ ಚಿತ್ರಗಳ ಗೀತೆಗಳೆಲ್ಲ ಜನಪ್ರಿಯವಾಗುವುದರೊಂದಿಗೆ ಕನ್ನಡದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. 60ರ ದಶಕದ ದಶಾವತಾರ, ಮಹಿಷಾಸುರ ಮರ್ಧಿನಿ, ಕನ್ಯಾರತ್ನ, ಗೌರಿ, ಕುಲವಧು ಎಲ್ಲದರಲ್ಲೂ ಹೊಸತನದ ಛಾಪು ಇದ್ದೇ ಇತ್ತು. ಬಾಂಡ್ ಚಿತ್ರಗಳಿಗೆ ಸಲ್ಲುವ ಸಂಗೀತ ನೀಡಿದ ವೆಂಕಟೇಶ್ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಗಮನಾರ್ಹ ತಿರುವನ್ನು ನೀಡಿದರು. ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ಭಕ್ತ ಕುಂಬಾರ, ಮಯೂರ, ಸೊಸೆ ತಂದ ಸೌಭಾಗ್ಯ ಎಲ್ಲವೂ ಒಂದಕ್ಕಿಂತ ಒಂದು ಮೇರು ಶಿಖರಗಳೇ. ಜಿ.ಕೆ.ವೆಂಕಟೇಶ್ ಅವರನ್ನು ಬಹು ವಿಶಿಷ್ಟವಾಗಿಸಿದ್ದು ಅಪಾರವಾದ ಸಂಗೀತಜ್ಞಾನ ಮತ್ತು ಪ್ರಯೋಗಶೀಲತೆ, ಭಾರತೀಯ ಸಂಗೀತ ದಿಗ್ಗಜರ ನಿಕಟ ಒಡನಾಟ ಪಡೆದಿದ್ದ ಅವರು ಚಿತ್ರಗೀತೆಗಳನ್ನು ಶಿಸ್ತು ಸಂಯಮಗಳಿಂದ ಶ್ರೇಷ್ಟತೆಯ ನೆಲೆಯಲ್ಲಿ ಬೆಳೆಸಿದರು. ಸಾಹಿತ್ಯ ಪತಿ-ಸಂಗೀತ ಪತ್ನಿ ಎರಡೂ ಕಲೆತು ಬೆರೆತರೇ ಸಂಸಾರ ಎಂದು ನಂಬಿ ಮಾಧುರ್ಯವನ್ನು ಸಾಧಿಸಿದರು. ರಾಗದ ಹಲವು ನೆಲೆಗಳನ್ನು ಅನ್ವೇಷಿಸಿ ಅದನ್ನು ಭಾವಕ್ಕೆ ತಕ್ಕಂತೆ ಚಿಮ್ಮಿಸಬಲ್ಲ ಅಸಾಧಾರಣ ಹಿಡಿತ ಅವರಿಗಿತ್ತು. ಉದಾಹರಣೆಗೆ ‘ಭೀಮ್ ಪಲಾಸ್’ ರಾಗದಲ್ಲಿ ಅವರು ಸಂಯೋಜಿಸಿರುವ ‘ಸುವ್ವಿ ಸುವ್ವಾಲೆ’ ಜನಪದದ ಛಾಯೆ ಇರುವ ಗೀತೆಯಾದರೆ ‘ನಗುನಗುತಾ ನಲಿ’ ಜೀವನ ದರ್ಶನವನ್ನು ಹೇಳುವ ಗೀತೆ. ‘ಕಣ್ಣಂಚಿನ ಈ ಮಾತಲಿ’ ಪ್ರೇಮದ ಭಾವ ತುಂಬಿದ ಗೀತೆ.
ಆಗಲೇ ಹೇಳಿದಂತೆ ಮೋಹನ ಅವರಿಗೆ ಬಹುಪ್ರಿಯವಾದ ರಾಗ. ಈ ರಾಗದಲ್ಲಿ ಭಾವಗಳ ಅಂತರಾಳವನ್ನು ಚಿಮ್ಮಿಸುವಂತಹ ‘ಯಾವ ಜನ್ಮದ ಮೈತ್ರಿ’ ಎಂಬ ಕುವೆಂಪು ಅವರ ರಚನೆಯನ್ನು ‘ಗೌರಿ’ ಚಿತ್ರಕ್ಕೆ ಸಂಯೋಜಿಸಿದ್ದರು. ವೀಣೆ ಮತ್ತು ಕೊಳಲಿನ ಮೂಲಕ ಗೀತೆಯಲ್ಲಿ ಚಿಮ್ಮಿಸಿರುವ ಭಾವಶರಧಿ, ಸ್ವರ ಸಾಗರದ ಮೂಲಕ ರೂಪಿಸಿರುವ ಪ್ರವಾಹ ಅಸಾಧಾರಣವಾದುದು. `ವಿಶ್ವ ಜೀವನವೊಂದು ಸಾರವಿಲ್ಲದ ಸಿಂಧು’ ಎಂಬ ಸಾಲಿಗೆ ಅವರು ಹೊಮ್ಮಿಸಿಬಿಟ್ಟಿರುವ ನಾದತರಂಗ ವಿಶಿಷ್ಟವಾಗಿತ್ತು. ಈ ಗೀತೆಯ ಸರ್ವಶ್ರೇಷ್ಠ ಎನ್ನಿಸಬಲ್ಲ ಸಂಯೋಜನೆ ಮೋಹನ ರಾಗವನ್ನು ಭಾವ ಸಂಯೋಜನೆಗೆ ಒಂದು ಮಹತ್ತರ ಮಾರ್ಗವಾಗಿಸಿತು. ಇಲ್ಲಿಂದ ಮುಂದೆ ಈ ರಾಗದಲ್ಲಿ ಕನಿಷ್ಟ ನೂರಾದರೂ ಚಿತ್ರಗೀತೆ, ಭಾವಗೀತೆಗಳು ಸೃಷ್ಟಿಯಾಗಿವೆ. ಈ ರಾಗದಲ್ಲಿ ವೆಂಕಟೇಶ್ ಸಂಯೋಜಿಸಿರುವ ಇನ್ನೊಂದು ವಿಶಿಷ್ಟ ಗೀತೆ `ಮಹಿಷಾಸುರ ಮರ್ಧಿನಿ’ ಚಿತ್ರದ ‘ತುಂಬಿತು ಮನವ’. ಇದರಲ್ಲೂ ವಿಶಿಷ್ಟ ಆರೋಹಣಗಳು ಪ್ರಣಯದ ಭಾವವನ್ನು ನವಿರಾಗಿ ಚಿಮ್ಮಿಸಿದ್ದವು. ಇದೇ ರಾಗದ ಭಕ್ತಿಭಾವ ತುಂಬಿದ ವೆಂಕಟೇಶ್ ಅವರ ಸಂಯೋಜನೆ ‘ಭಕ್ತ ಕುಂಬಾರ’ ಚಿತ್ರದ ‘ಹರಿನಾಮವೇ ಚಂದ’. ಇದರಲ್ಲಿ ಭಕ್ತಿಯ ತರಂಗಗಳು ಭಾವಸ್ಪರ್ಶಿಯಾಗಿ ಮೂಡಿಬಂದಿವೆ. ಮೋಹನದ ಬೆಡಗನ್ನು ವೆಂಕಟೇಶ್ ಕೌಶಲ್ಯಪೂರ್ಣವಾಗಿ ಬಳಸಿಕೊಂಡ ಇನ್ನೊಂದು ಗೀತೆ ‘ರಾಜ ನನ್ನ ರಾಜ’ ಚಿತ್ರದ ‘ನೂರು ಕಣ್ಣು ಸಾಲದು’. ಇವೆರಡು ರಾಗಗಳನ್ನು ಇಲ್ಲಿ ಉದಾಹರಣೆಯಾಗಿ ಮಾತ್ರ ನೀಡಿದ್ದೇನೆ. ವೆಂಕಟೇಶ್ ಉಳಿದ ಸಂಗೀತ ನಿರ್ದೇಶಕರಂತೆ ಕೆಲವು ರಾಗಗಳಿಗೆ ಸೀಮಿತವಾದವರಲ್ಲ. ಕರ್ನಾಟಕೀ, ಹಿಂದೂಸ್ಥಾನಿ ಮಾತ್ರವಲ್ಲ ಪಾಶ್ಚಾತ್ಯ ನೆಲೆಯ ಸಂಗೀತದ ಸಾರವನ್ನು ಎರಕಹೊಯ್ದು ನಾದ ಸೌಧ ಕಟ್ಟಿದ ಸಾರ್ವಭೌಮರಾಗಿದ್ದರು ವೆಂಕಟೇಶ್.

ವೆಂಕಟೇಶ್ ಅವರ ಇನ್ನೊಂದು ವಿಶಿಷ್ಟವಾದ ಸಾಧನೆ ಎಂದರೆ ವಿವಿಧ ಸಾಧ್ಯತೆಗಳ ಸಮಾವರ್ತನೆಯನ್ನು ಸಾಧಿಸಿದ್ದು. ಭಾರತದಲ್ಲೇ ಇಂತಹ ಪ್ರಯೋಗಗಳ ಆರಂಭಿಕರಲ್ಲೊಬ್ಬರು ಜಿ.ಕೆ.ವೆಂಕಟೇಶ್. ಎಪ್ಪತ್ತರ ದಶಕ ಒಂದು ಸಂಕ್ರಮಣ ಕಾಲ ಆಗ ಪಾಶ್ಚಿಮಾತ್ಯ ಸಂಗೀತದ ಗಾಳಿ ಬೀಸಲು ಆರಂಭವಾಗಿತ್ತು. ಅದನ್ನು ಭಾರತೀಯಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದವು. ವೆಂಕಟೇಶ್ ಹೀಗೆ ಎರಡೂ ಮಾದರಿಯ ಸಂಲಗ್ನತ್ವ ಸಾಧಿಸಿದ ಶ್ರೇಷ್ಠ ಸಂಯೋಜನೆ ‘ರಾಜ ನನ್ನ ರಾಜ’ ಚಿತ್ರದ ‘ತನುವು ಮನವು ಇಂದು ನಿಂದಾಗಿದೆ’ ಎಂಬ ಗೀತೆ. ಇದರಲ್ಲಿ ಸಂಲಗ್ನತ್ವ ಸ್ವರಪ್ರಸ್ತಾರದಲ್ಲಿ ಮಾತ್ರವಲ್ಲ ಹಾಡಿನ ನಡುವಿನ ಲಹರಿಯಲ್ಲೂ ಇದೆ. ಮಳೆಯ ಲಾಲಿತ್ಯವನ್ನು ಅಂತರ್ಗತವಾಗಿಸಿ ರಾಜ್‌ಕುಮಾರ್ ಮತ್ತು ಜಾನಕಿಯವರ ಧ್ವನಿಮಾದಕತೆಯನ್ನು ಪಡೆದು ಕೌಂಟರ್ ಮ್ಯೂಸಿಕ್ ಪ್ರಕಾರದ ಶ್ರೇಷ್ಠತೆಯನ್ನು ವೆಂಕಟೇಶ್ ಈ ಗೀತೆಯ ಮೂಲಕ ಸಾಧಿಸಿದ್ದರು. ಈ ಸಂಯೋಜನೆಗೆ ಸಹಾಯಕರಾಗಿದ್ದವರು ಇಳಿಯರಾಜ. ಇದು ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ ಗೀತೆ ಎಂದು ಅವರು ಗುರುತಿಸಿದ್ದಾರೆ. ಅವರ ಹಲವಾರು ಸಂಯೋಜನೆಗಳಲ್ಲಿ ಇದರ ಪ್ರಭಾವವನ್ನು ಗುರುತಿಸಬಹುದು. ವೆಂಕಟೇಶ್ ಇಂತಹ ಶ್ರೇಷ್ಠತೆ ಸಾಧಿಸಿದ ಇನ್ನೊಂದು ಗೀತೆ ‘ಕಸ್ತೂರಿ ನಿವಾಸ’ ಚಿತ್ರದ ‘ಆಡಿಸಿ ನೋಡು, ಬೀಳಿಸಿ ನೋಡು’. ಇದು ಆತ್ಮಾವಲೋಕನ, ಉಪದೇಶ, ವಿಷಾದ ಎಲ್ಲವನ್ನೂ ತುಂಬಿಕೊಂಡ ಗೀತೆ. ಚಿತ್ರದ ಜೀವಗೀತೆ ಎನ್ನಬಹುದಾದದ್ದು. ವೆಂಕಟೇಶ್ ಇದನ್ನು ರೂಪಿಸುವಾಗ ಸಾಹಿತ್ಯ ಭಾಗಕ್ಕೆ ಹಿನ್ನೆಲೆ ಎನ್ನಿಸಬಲ್ಲ ಸಂಗೀತದ ಆವರ್ತ ಇಟ್ಟರು. ಇದು ರೂಪುಗೊಂಡಿದ್ದು ಸೆಲ್ಲೊ ಎಂಬ ವಿಶಿಷ್ಟ ವಾದನದಿಂದ. ಇದು ಭಾರತೀಯ ಸಂಗೀತದ ಭಾವ ಚಿಮ್ಮಿಸಬಲ್ಲ ವಾದ್ಯ. ಇದರಿಂದ ವೆಂಕಟೇಶ್ ಪಾಶ್ಚಾತ್ಯ ಫ್ಯೂಶನ್‌ಗೆ ಹತ್ತಿರವಾಗಬಲ್ಲ ಆವರ್ತ ರೂಪಿಸಿದರು. ಗೀತೆ ಮೂಡಿಬಂದದ್ದು ಭಾರತೀಯ ಸ್ವರಾರೋಹೋಣದಲ್ಲಿ. ಇಂತಹ ಪ್ರಯೋಗದಲ್ಲೇ ಸಂಲಗ್ನತ್ವವನ್ನು ಕಾಣಬಹುದು. ಈ ಗೀತೆಯ ಸ್ವರ ಆವರ್ತ ಇಡೀ ಚಿತ್ರದಲ್ಲಿ ಜೀವಧ್ವನಿಯಾಗಿ ಮಿಡಿದಿದೆ. ಇದೇ ಗೀತೆ ಶೋಕವಾಗಿ ಮಾರ್ಪಡುವಾಗ ವೆಂಕಟೇಶ್ ಇನ್ನೊಂದು ಪ್ರಯೋಗ ಮಾಡಿದರು. ಸಾಮಾನ್ಯವಾಗಿ ಚಿತ್ರಗೀತೆಯ ಶೋಕದ ಅವತರಿಣಿಕೆ ಬರುವಾಗ ಪಲ್ಲವಿ ವಿಳಂಬಗತಿಯಲ್ಲಿ ಬರುತ್ತದೆ. ಆದರೆ ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ’ ಗೀತೆ ಚರಣದಲ್ಲಿ ವಿಳಂಬವನ್ನು ತಂದಿದೆ. ಇದರಿಂದ ಜೀವಧ್ವನಿಯಾದ ಪಲ್ಲವಿಯ ಶ್ರೀಮಂತಿಕೆ ಮುಕ್ಕಾಗದೆ ಉಳಿದಿದೆ. ಶೋಕವೂ ಮೂಲಧಾರೆಯ ವಿಸ್ತಾರವಾಗಿದೆ. ಹೀಗೆ ಆಡಿಸಿದಾತ ಆಟ ಜೀವನ ಸೂತ್ರವಾಗಿ ಮಿಡಿದಿದೆ.
‘ಕಸ್ತೂರಿ ನಿವಾಸ’ ಚಿತ್ರದ ಆಧಾರ ಸ್ತಂಭವಾಗಿರುವುದೇ ಈ ಗೀತೆ ಎನ್ನುವಲ್ಲೇ ವೆಂಕಟೇಶ್ ಅವರ ಸ್ವರ ಸಂಯೋಜನೆಯ ಸಾರ್ಥಕತೆಯನ್ನು ಕಾಣಬಹುದಾಗಿದೆ. ವೆಂಕಟೇಶ್ ಈ ಮಾದರಿಯಲ್ಲಿ ವಿಶಿಷ್ಟತೆ ಸಾಧಿಸಿದ ಇನ್ನೊಂದು ಪ್ರಮುಖವಾದ ಗೀತೆ ಎಂದರೆ ‘ಸೊಸೆ ತಂದ ಸೌಭಾಗ್ಯ’ ಚಿತ್ರದ ‘ರವಿವರ್ಮನ ಕುಂಚದ’. ಈ ಗೀತೆಯ ಸಾಹಿತ್ಯ ನೋಡಿದಾಗ ಪಲ್ಲವಿಯ ಜೊತೆ ಎರಡು ಪೂರ್ಣ ಸಾಲು ಮತ್ತೆ ಹಮ್ಮಿಂಗ್ಸ್ ಜೊತೆ ಸೇರುವ ಪದಪುಂಜಗಳ ಎರಡು ಚರಣ ಮಾತ್ರ ಇದೆ. ಇಂತಹ ವಿಶಿಷ್ಟತೆ ಇದರಲ್ಲೇನಿದೆ ಎಂದು ಯೋಚಿಸುವಾಗ ಗೀತೆಯ ಸಂಯೋಜನೆಯಲ್ಲಿರುವ ಅನನ್ಯತೆ ಕಾಣುತ್ತದೆ. ಸಾಹಿತ್ಯ ಭಾಗ ಒಂದು ನೆಲೆಯಲ್ಲಿದ್ದರೆ ಕೀಬೋರ್ಡ್ ಹಾರ್ಪೊವ್ ಎಂಬ ವಿಭಿನ್ನ ವಾದ್ಯ ಹೊಮ್ಮಿಸಿದ ನಾದಲಹರಿ ಇನ್ನೊಂದು ಕಡೆ ಇದೆ. ಇವೆರಡಕ್ಕೆ ಪೂರಕವಾಗಿ ಜಾನಕಿಯವರ ಕಂಠಸಿರಿ ಲಹರಿಯಂತೆ ಹರಿದಿದೆ. ಈ ಮೂರು ಒಟ್ಟಾಗುವುದು ಒಂದು ವಿಶಾಲ ನಾದ ಸಮುಚ್ಚಯದಲ್ಲಿ, ಅದೇ ಈ ಸಂಯೋಜನೆಯ ವಿಶಿಷ್ಟತೆ.

ಜಿ.ಕೆ.ವೆಂಕಟೇಶ್ ಅವರ ರಾಗ ಸಂಯೋಜನೆಯ ಇನ್ನೊಂದು ವೈಶಿಷ್ಟ್ಯವೆಂದರೆ ಜಾನಪದ ಮಾದರಿಯ ಛಾಯೆಗಳ ಗೀತೆಗಳನ್ನು ರೂಪಿಸಿದ್ದು. ಜಾನಪದ ಗೀತೆ ರೂಪಿಸುವುದು ಬೇರೆ, ಜನಪದದ ಛಾಯೆ ಕೊಡುವುದು ಬೇರೆ. ಇಂತಹ ವಿಶಿಷ್ಠ ಪ್ರಯೋಗಗಳಲ್ಲಿ ಬಹುಮುಖ್ಯವಾಗಿ ಕಾಣುವುದು. ‘ಬಾಳ ಬಂಗಾರ ನೀನು’ ಎನ್ನುವ ‘ಬಂಗಾರದ ಮನುಷ್ಯ’ ಚಿತ್ರದ ಗೀತೆ. ಇದರ ಸಾಹಿತ್ಯ ಭಾಗ ಭಾವಗೀತೆ ಮಾದರಿಗೆ ಒಪ್ಪುವಂತಿದೆ. ಪದ ಪ್ರಯೋಗಗಳೂ ಬಹು ವಿಶಿಷ್ಟವಾದ ನೆಲೆಯಲ್ಲಿವೆ. ಇದರಲ್ಲಿ ವೆಂಕಟೇಶ್ ಏಕನಾದ ತರುವ ಮೂಲಕ ಜಾನಪದದ ಸ್ಪರ್ಶ ನೀಡಿದರು. ‘ತಾನೇ ತಂದಾನ’ ಎಂಬ ಹಮ್ಮಿಂಗ್ಸ್ ನೀಡುವ ಮೂಲಕ ಅದನ್ನು ಮೂರ್ತರೂಪವಾಗಿಸಿದರು. ಮೂಲಸಂಯೋಜನೆ ‘ಹರಿ ಕಾಂಬೋಜಿ’ ಎಂಬ ಗಂಭೀರ ರಾಗದ ಮೂಲಕ ಪ್ರವಹಿಸುತ್ತಿದ್ದರೆ ಸುತ್ತಲೂ ಜನಪದದ ಸುವರ್ಣ ರೇಖೆಗಳು ಮೂಡಿ ಗೀತೆಗೆ ಶೋಭೆ ನೀಡಿದ್ದವು. ಇದೇ ಚಿತ್ರದ ‘ಆಹಾ ಮೈಸೂರು ಮಲ್ಲಿಗೆ’ ಗೀತೆಯಲ್ಲೂ ಇಂತಹ ಸೊಬಗನ್ನು ನೋಡಬಹುದು. ‘ಬೂತಯ್ಯನ ಮಗ ಅಯ್ಯು’ ಚಿತ್ರದ ‘ಮಲೆನಾಡ ಹೆಣ್ಣ ಮೈಬಣ್ಣ’ದಲ್ಲಿ ಜನಪದದ ಲಹರಿಗೆ ಹೆಚ್ಚು ಒತ್ತು ಸಿಕ್ಕಿದೆ. ಈ ಗೀತೆಯ ಸೌಂದರ್ಯವಿರುವುದು ಅದರ ಸುರಳಿ ಮಾದರಿಯ ಆವರ್ತನದಲ್ಲಿ ‘ಭಕ್ತ ಕುಂಬಾರ’ ಚಿತ್ರದ ‘ಜೋಡಿ ಬೇಡೋ ಕಾಲವಮ್ಮ’ ಭಾವಗೀತೆ ಗುಂಗಿನಲ್ಲೇ ಸಾಗುವ ಜನಪದ ಶೈಲಿಯ ಗೀತೆ. ‘ಎರಡು ನಕ್ಷತ್ರಗಳು’ ಚಿತ್ರದ ‘ಏಕೆ ಮಳ್ಳಿ ಹಾಗೆ ನನ್ನ ನೀನು’ ಗೀತೆಯಲ್ಲಿ ಜನಪದದ ಭಾಯೆ ಇನ್ನಷ್ಟು ಶ್ರೀಮಂತವಾಗಿದೆ. ವೆಂಕಟೇಶ್ ಹಾಗೆ ಮಾದರಿಗಳ ನಡುವಿನ ಸಂಲಗ್ನತ್ವವನ್ನು ಹಲವು ಮಾದರಿಯಲ್ಲಿ ಸಾಧಿಸಿದ್ದಾರೆ. ‘ಜೇಡರ ಬಲೆ’ ಚಿತ್ರದ ‘ಇನಿಯ ಬಂದ ಸಮಯ’ ಪಾಪ್ ಶೈಲಿಯಲ್ಲಿದ್ದರೂ ಭಾವಗೀತೆಯ ವಿಸ್ತರಣದಂತೆ ಕಾಣುವ ಗೀತೆ. ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರದ ‘ಇಫ್ ಯು ಕಮ್ ಟುಡೇ’ ರಾಕ್ ಶೈಲಿಯಲ್ಲಿದ್ದರೂ ಶಾಸ್ತ್ರೀಯ ನೆಲೆಯನ್ನು ಬಿಡದೆ ಸಾಗಿದೆ.
‘ಸಂಧ್ಯಾರಾಗ’ ಚಿತ್ರದ ‘ದೀನ ನಾ ಬಂದಿರುವೆ’ ಗೀತೆ ಕೀರ್ತನೆ ಮತ್ತು ಭಾವಗೀತೆ ಎರಡಕ್ಕೂ ಒಪ್ಪುವ ಮಾದರಿಯಲ್ಲಿ ರೂಪಿತವಾಗಿದೆ. ವೆಂಕಟೇಶ್ ಇದರಲ್ಲಿ ಪಾಶ್ಚಿಮಾತ್ಯ ಪ್ರಕಾರದ ವಾಯಲಿನ್ ಬಳಸಿ ಇನ್ನಷ್ಟು ವಿಸ್ತಾರವಾದ ನಾದಘನತೆಯನ್ನು ಸಾಧಿಸಿದ್ದಾರೆ. ಕುದುರೆ ಓಟದ ಗೀತೆ ಎನ್ನುವಾಗ ಚತುಶ್ರವನ್ನು ಬಳಸುವುದು ಭಾರತೀಯ ಸಂಗೀತ ಲೋಕದಲ್ಲೇ ಸಾಮಾನ್ಯ ಸಂಗತಿ. ಆದರೆ ವೆಂಕಟೇಶ್ ‘ಮಯೂರ’ ಚಿತ್ರದ ‘ಈ ಮೌನವ ತಾಳೆನು’ ಗೀತೆಗೆ ತಿಶ್ರವನ್ನು ಬಳಸಿದರು. ಇದರಿಂದ ಗೀತೆ ತಾಳದ ಏಕತಾನತೆಗೆ ಸಿಕ್ಕದೆ ಮಾಧುರ್ಯಭರಿತವಾಗಿ ಅರಳುವಂತಾಯಿತು. ‘ದೂರದ ಬೆಟ್ಟ’ ಕಮ್ಮಾರ ಕಸುಬಿನ ಹಿನ್ನೆಲೆಯಲ್ಲಿ ರೂಪುಗೊಂಡ ಚಿತ್ರ. ಇದಕ್ಕೆ ಹೊಂದುವಂತೆ ವೆಂಕಟೇಶ್ ‘ಪ್ರೀತಿನೇ ಆ ದ್ಯಾವ್ರು’ ತಂದ ಗೀತೆಯಲ್ಲಿ ಹೊಸ ಪ್ರಯೋಗ ಮಾಡಿದರು. ತಿಶ್ರದ ನಡೆತಂದು ಮೂರನೇ ತಾಳ ಬಿಟ್ಟರು. ಇದು ಕುಲುಮೆ ಶಬ್ದವನ್ನು ಗೀತೆಯ ಪ್ರಧಾನ ನಾದ ಸಮುಚ್ಚಯವಾಗಿಸುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿತು. ‘ದಶಾವತಾರ’ ಚಿತ್ರದ ‘ವೈದೇಹಿ ಏನಾದಳೋ’ ಬಹಳ ವಿಶಿಷ್ಟವಾದ ಶ್ರೀರಾಮ ವಿಲಾಪ. ಸಾಮಾನ್ಯವಾಗಿ ಶೋಕ ಸಂದರ್ಭದಲ್ಲಿ ಬಳಕೆಯಾಗುವ ತೋಡಿ ರಾಗದಲ್ಲೇ ಈ ಗೀತೆ ರೂಪುಗೊಂಡಿದ್ದರೂ ವೆಂಕಟೇಶ್ ಅದರ ಅವರೋಹಣದಲ್ಲಿ ಒಂದು ಸ್ವರ ಚ್ಯುತಿ ಸಾಧಿಸಿದ್ದಾರೆ. ಇದರಿಂದ ಸಂಯೋಜನೆಯ ಆವರಣದಲ್ಲೇ ಶೋಕದ ತೀವ್ರತೆ ಅಂತರ್ಗತವಾಗಿದೆ. ‘ಮಸಣ ಮೌನದಿ ಸುಳಿವ’ ಎಂಬ ಸಾಲಿಗೆ ಗದ್ಯದ ಗುಣ ಬೆರೆಸಿದ್ದಾರೆ. ಇದರಿಂದ ಒಂದು ಅನಿರೀಕ್ಷಿತ ಅವರೋಹಣ ಸಾಧ್ಯವಾಗಿದೆ. ಇಡೀ ಗೀತೆ ಶೋಕದ ವಾತಾವರಣವನ್ನು ಪರಿಣಾಮಕಾರಿಯಾಗಿ ನಿರ್ಮಿಸಿದೆ.
ಹಿನ್ನೆಲೆ ಸಂಗೀತದಲ್ಲೂ ಜಿ.ಕೆ.ವೆಂಕಟೇಶ್ ಮಹತ್ತರವಾದ ಪ್ರಯೋಗಗಳನ್ನು ಮಾಡಿದ್ದಾರೆ. ಅದರಲ್ಲೂ ವ್ಯಾಪಾರಿ ಚಿತ್ರಗಳಿಗೂ ಪ್ರಯೋಗಶೀಲತೆಯ ಸ್ಪರ್ಶ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿ ಹೊಡೆದಾಟದ ದೃಶ್ಯಕ್ಕೆ ಮಾನವ ಧ್ವನಿಗಳನ್ನೇ ಕೋರಸ್ ಆಗಿ ಬಳಸಿ ಅವರು ಹೊಸತನ ಮೆರೆದಿದ್ದಾರೆ. ‘ಮಯೂರ’ ಚಿತ್ರದಲ್ಲಿ ನಾಯಕನನ್ನು ರಥಕ್ಕೆ ಕಟ್ಟಿ ಎಳೆದುಕೊಂಡು ಹೋಗುವ ದೃಶ್ಯ. ಇದರ ಹಿನ್ನೆಲೆ ಸಂಗೀತಕ್ಕೆ ಹಲವಾರು ತಾರ್ ಶಹನಾಯ್ ತಂತಿ ವಾದ್ಯಗಳನ್ನು ಒಮ್ಮೆಲೆ ಬಳಸಿ ಪರಿಣಾಮ ತಂದಿದ್ದಾರೆ. ‘ಬೂತಯ್ಯನ ಮಗ ಅಯ್ಯು’ ಚಿತ್ರದ ‘ವಿರಸವೆಂಬ ವಿಷಕೆ’ ಹಿನ್ನೆಲೆ ಗೀತೆ ಹೇಗಿರಬೇಕು ಎಂಬುದಕ್ಕೆ ಉತ್ತಮವಾದ ಉದಾಹರಣೆ. ಚಿತ್ರದ ಕನಿಷ್ಟ 8-10 ದೃಶ್ಯಗಳನ್ನು ತುಂಬಿಕೊಡಬಲ್ಲ ತಂತ್ರಗಾರಿಕೆಯ ಈ ಗೀತೆ ದೃಶ್ಯಗಳಿಗಿಂತಲೂ ಹೆಚ್ಚಿನದಾದ ಪರಿಣಾಮವನ್ನು ಸಾಧಿಸಿದೆ. ಒಂದು ರೀತಿಯಲ್ಲಿ ಚಿತ್ರದ ಮೂಲ ನೆಲೆಯನ್ನೇ ಗೀತೆ ಬಿಂಬಿಸಿದೆ. ಈ ಚಿತ್ರದ ಮುಳುಗಡೆ ದೃಶ್ಯದಲ್ಲಿ ಅವರು ವೀಣೆ ಬಳಸಿದ ಕ್ರಮ ವಿಶಿಷ್ಟವಾಗಿದೆ.

‘ಹುಲಿಹಾಲಿನ ಮೇವು’ ಚಿತ್ರದಲ್ಲಿ ಹದಿನೆಂಟು ವಾದ್ಯಗಳ ಸುಸ್ವರ, ಅಪಸ್ವರದ ಹೊಂದಾಣಿಕೆ ರೂಪಿಸಿದ್ದರು. ಇದು ಸಾಕ್ಷಾತ್ ಯುದ್ದ ಭೂಮಿಯ ಅನುಭವವನ್ನೇ ನೀಡಿತ್ತು. ಹಾಡುಗಳೇ ಇಲ್ಲದ ‘ಯಾರು ಹೊಣೆ’ ಚಿತ್ರದಲ್ಲಿ ಹಿನ್ನೆಲೆ ಸಂಗೀತದ್ದೇ ಮುಖ್ಯವಾದ ಪಾತ್ರ. ಬಿಸ್ಮಿಲ್ಲಾಖಾನ್‌ರ ಶಹನಾಯ್ ವಾದನವನ್ನು ಪ್ರಥಮವಾಗಿ ಬಳಸಿದ ಚಿತ್ರ ಹಿಂದಿಯ ‘ಶಹನಾಯ್’. ಅದಕ್ಕಿಂತಲೂ ಪರಿಣಾಮಕಾರಿಯಾಗಿ ಶಹನಾಯಿಯನ್ನು ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಬಳಸಿದರು. ಹಿನ್ನೆಲೆ ಸಂಗೀತವಾಗಿ ಶಹನಾಯಿಯನ್ನು ಬಳಸುವ ಎಲ್ಲಾ ಸಾಧ್ಯತೆಯನ್ನು ಅವರು ಶ್ರೀಮಂತವಾಗಿಸಿಕೊಂಡಿದ್ದಾರೆ. ಅದರಲ್ಲಿ ಒಂದು ದೃಶ್ಯ-ಅಪ್ಪಣ್ಣ ಮದುವೆಗೆ ಶಹನಾಯ್ ನುಡಿಸಲು ಒಪ್ಪಿರುತ್ತಾರೆ, ನುಡಿಸುತ್ತಿರುವ ಸಂದರ್ಭದಲ್ಲಿ ಮನಸ್ಸಿಗೆ ಬೇಸರವಾಗಿರುತ್ತದೆ. ನುಡಿಸುತ್ತಿರುವ ಶಹನಾಯಿ ನಿಲ್ಲಿಸುವಂತಿಲ್ಲ. ಅವನಿಗಾದ ನೋವನ್ನು ಸೂಚಿಸುವಂತೆ ಅಪಸ್ವರ ಬರುತ್ತದೆ. ಅದು ಸಾಮಾನ್ಯರಿಗೆ ತಿಳಿಯುವಂತಹದಲ್ಲ. ಆ ವಾದನದಲ್ಲಿ ಪರಿಣಿತಿ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ. ಇಂತಹ ಸೂಕ್ಷ್ಮವಾದ ಅಂಶವನ್ನು ವೆಂಕಟೇಶ್ ಅವರ ಹೆಗ್ಗಳಿಕೆ ಎಂದೇ ಹೇಳಬಹುದು. ಈ ಚಿತ್ರದ ‘ಕರೆದರೂ ಕೇಳದೆ’ ವಿಶಿಷ್ಟವಾದ ಪ್ರಯೋಗಶೀಲವಾದ ಗೀತೆ. ಶಹನಾಯ್ ವಾದನಕ್ಕೆ ಹೊಂದುವ ಗೀತೆ ಎಂದರೆ ಸಹವರ್ತ ಗೀತೆಯಾಗಿ ಬಿಡುವುದೇ ಹೆಚ್ಚು. ಆದರೆ ವೆಂಕಟೇಶ್ ಇಲ್ಲಿ ಬೆಹಾಗ್ ರಾಗದ ವಿಶಾಲ ನಾದ ಸಮುಚ್ಚಯ ರೂಪಿಸಿ ಅದರಲ್ಲಿ ಚಿನ್ನದ ಗೆರೆಯಂತೆ ಬಿಸ್ಮಿಲ್ಲಾಖಾನರ ಶಹನಾಯ್ ನಾದ ಹರಿಯುವಂತೆ ಸಂಯೋಜನೆ ಮಾಡಿದ್ದಾರೆ. ಅದಕ್ಕೆ ಅಷ್ಟೇ ಶ್ರೀಮಂತವಾಗಿ ಜಾನಕಿಯವರ ಕಂಠಸಿರಿಯ ತಾಜಾತನವನ್ನು ಸರಿಹೊಂದಿಸಿದ್ದಾರೆ. ಈ ಸಂಯೋಜನೆಯ ಅನನ್ಯತೆಗೆ ಸ್ವತಃ ಬಿಸ್ಮಿಲ್ಲಾಖಾನರೇ ಬೆರಗಾಗಿ ಧನ್ಯತೆ ಭಾವ ತಂದಿದೆ ಎಂದು ಉದ್ಗರಿಸಿದ್ದಾರೆ.
‘ಸಂಧ್ಯಾರಾಗ’ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ’ ಗೀತೆಯನ್ನು ಪೂರ್ವ ಕಲ್ಯಾಣಿ ಎಂಬ ಹೊಸರಾಗದಲ್ಲಿ ಡಾ. ಬಾಲಮುರುಳಿ ಕೃಷ್ಣ ಸಂಯೋಜಿಸಿ ಹಾಡಿದ್ದರು. ಅದನ್ನು ಇನ್ನೊಬ್ಬ ಸಂಗೀತ ಕ್ಷೇತ್ರದ ದಿಗ್ಗಜ ಭೀಮ್‌ಸೇನ್ ಜೋಷಿಯವರು ಹಾಡಲು ಅನುಕೂಲವಾಗುವಂತೆ ಘರಾಣೆ ಮಾದರಿಗೆ ಬದಲಾಯಿಸಿದ್ದು ವೆಂಕಟೇಶ್ ಅವರ ಸಾಧನೆ. ಈ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಎರಡೂ ಮಾದರಿಯ ಶ್ರೇಷ್ಟತೆಯನ್ನು ಬೆರೆಸಿರುವುದು ಅವರ ಸಾಧನೆಯಾಗಿದೆ. ‘ಭಕ್ತ ಕುಂಬಾರ’ ಚಿತ್ರಕ್ಕೆ ಬಂದರೆ ಭಕ್ತ ಕುಂಬಾರನ ಪ್ರಾದೇಶಿಕತೆ ಕುರಿತು ಇರುವ ವಿವರಗಳು ಅತ್ಯಲ್ಪ. ವಿಠಲ್ ಪಂಥದವನು ಎನ್ನುವುದು ಲಭ್ಯವಿರುವ ಕತೆಗಳ ಮೂಲಕ ಸಿಕ್ಕ ಎಳೆ. ಇದನ್ನು ಪ್ರಯೋಗಶೀಲತೆಗೆ ಬಳಸಿದ ವೆಂಕಟೇಶ್, ಈ ಚಿತ್ರದಲ್ಲಿ ದಕ್ಷಿಣಾದಿಯ ಖಾಯಂ ವಾದ್ಯಗಳ ಜೊತೆ ಉತ್ತರಾಧಿಯ ಪಕವಾಜ್ ಸೇರಿಸಿದರು. ಇದರಿಂದ ಹೊಸತನ ಹೊಮ್ಮಿತು. ಅಭಂಗ್ ಜೊತೆ ಕೀರ್ತನೆ ಶೈಲಿ ಸೇರಿಸಿ ಹೊಸ ಮಾದರಿ ಸಾಧಿಸಿದರು. ಇದರಿಂದ ಚಿತ್ರದ ಭಕ್ತಿಗೀತೆಗಳೆಲ್ಲಾ ಭಿನ್ನವಾಗಿ ಕೇಳುವುದರ ಜೊತೆ ಇಡೀ ಚಿತ್ರವೇ ಸಂಗೀತಮಯವಾಗುವುದು ಸಾಧ್ಯವಾಯಿತು. ಕೆಲವೊಮ್ಮೆ ವಾದ್ಯದ ಆಯ್ಕೆಯೂ ಗೀತೆಯ ಶ್ರೀಮಂತಿಕೆಗೆ ಕಾರಣವಾಗುವಂತೆ ಮಾಡುವ ಶಕ್ತಿ ವೆಂಕಟೇಶ್ ಅವರಿಗಿತ್ತು. ಉದಾಹರಣೆಗೆ ‘ಕುಲವಧು’ ಚಿತ್ರದ ‘ಒಲವಿನ ಪ್ರಿಯಲತೆ’ ಗೀತೆ ಇಲ್ಲಿ ಅವರು ಬಳಸಿರುವ ಅಪರೂಪದ ವಾದ್ಯ ಹವಾಯ್ ಗಿಟಾರ್ ಅದರ ವಿಭಿನ್ನತೆಗೆ ಕಾರಣವಾಗಿದೆ.
ಜಿ.ಕೆ.ವೆಂಕಟೇಶ್ ಅವರ ಸಂಯೋಜನೆಯ ಹಿರಿಮೆಗಳು ಹಲವಾರು, ಅವರ ಪ್ರಯೋಗಗಳು ಪ್ರತ್ಯೇಕ ಪುಸ್ತಕಕ್ಕೆ ವಸ್ತುವಾಗುವಷ್ಟು ವಿಶಾಲವಾದವು. ಇಲ್ಲಿ ಕೆಲವು ಮುಖ್ಯವಾದ ಪ್ರಯೋಗಗಳನ್ನು ಮಾತ್ರ ಚರ್ಚಿಸಲಾಗಿದೆ. ಬಹಳ ವಿಶಿಷ್ಟ ಎನ್ನಿಸಬಲ್ಲ ಅವರ ಪ್ರಯೋಗವೊಂದರ ಬಗ್ಗೆ ಪ್ರಸ್ತಾವಿಸಿ, ಈ ಲೇಕನದ ಮಟ್ಟಿಗೆ ಅವರ ಸಾಧನೆಯ ಪರಾಮರ್ಶೆಯನ್ನು ಮುಗಿಸುವುದಾದರೆ `ಮರೆಯದ ಹಾಡು’ ಚಿತ್ರದ ಸುಖದಾ ಸ್ವಪ್ನ ಗಾನ ಗೀತೆ ಜೆರೋಟಿಕ್ಸ್ ಸಂಪ್ರದಾಯದ ಶ್ರೇಷ್ಟ ಆವಿಷ್ಕಾರ. ನಾದಾತೀತ ನೆಲೆ ತಲುಪುವ ಆ ಪ್ರಕಾರವನ್ನು ಕನ್ನಡಕ್ಕೆ ತರಬೇಕು ಎನ್ನುವುದು ಈ ಚಿತ್ರದ ನಿರ್ದೇಶಕ ಆರ್.ಎನ್.ಜಯಗೋಪಾಲ್ ಅವರ ಹಂಬಲವಾಗಿತ್ತು. ಅದನ್ನು ಅನುಸರಿಸಿ ವೆಂಕಟೇಶ್ ರೂಪಿಸಿದ ಪ್ರಯೋಗಶೀಲ ಗೀತೆ ಇದು. ಇದರ ಪಲ್ಲವಿ ನಂತರ ಪ್ರತೀ ಚರಣದಲ್ಲೂ ನಾದ ಸಮುಚ್ಚಯದ ವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ. ಕೊನೆಯಲ್ಲಿ ಗೀತೆ ಮುಗಿದ ನಂತರವೂ ಇನ್ನೊಂದು ವಿಸ್ತಾರ ಕೇಳುಗನ ಮನದಲ್ಲಿ ರೂಪ ತಾಳುತ್ತದೆ. ಅದೇ ‘ಸುಖದ ಸ್ವಪ್ನಗಾನ’ ಎಂದು ಜಯಗೋಪಾಲ್ ಬಯಸಿದ್ದರು. ಅವರ ಅಭಿಲಾಷೆಯನ್ನು ವೆಂಕಟೇಶ್ ಅಕ್ಷರಶಃ ಸಾಕ್ಷಾತ್ಕರಿಸಿದ್ದರು. ಕೀರವಾಣಿ ರಾಗದ ವಿಶಿಷ್ಟ ಸ್ವರ ಪ್ರಸ್ತಾರ ಇದಕ್ಕೆ ಪೂರಕವಾಗಿದ್ದರೆ, ಜಾನಕಿಯವರ ಕಂಠಸಿರಿ ಅದನ್ನು ವಾಸ್ತವಗೊಳಿಸಿತ್ತು. ಜಿ.ಕೆ.ವೆಂಕಟೇಶ್ ಇಮ್ಮಡಿ ಪುಲಿಕೇಶಿ, ತುಂಬಿದ ಕೊಡ, ಧೈರ್ಯ ಲಕ್ಷ್ಮಿ ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದರು. ಜಿ.ಕೆ.ವೆಂಕಟೇಶ್.. ನನಗೆ ಸಂಗೀತಗಾರರೊಬ್ಬರ ಕಥೆ ಹೇಳಿ.. ಇದನ್ನು ಕಾದಂಬರಿ ರೂಪದಲ್ಲಿ ಬರೆ ಎಂದಿದ್ದರು. ಅದು ಒಂದು ಎಳೆ ಅಷ್ಟೇ. ಅದರಿಂದಲೇ ಒಂದು ಕಥೆ ಕಟ್ಟುವುದು ಸುಲಭವಾಗಿರಲಿಲ್ಲ. ನಾನು ಅನೇಕ ವರ್ಷ ಪ್ರಯತ್ನಿಸಿ ಕೈ ಬಿಟ್ಟಿದ್ದೆ. ಕಳೆದ ವರ್ಷ ಅದಕ್ಕೆ ಒಂದು ರೂಪ ಬಂದು ‘ನಾದದ ನೆರಳು’ ಕಾದಂಬರಿ ಬಿಡುಗಡೆಯಾಗಿ ಉತ್ತಮ ಸ್ಪಂದನ ಕೂಡ ಪಡೆಯಿತು. ಈ ವರ್ಷದ ಜನ್ಮದಿನಕ್ಕೆ ಜಿ.ಕೆ.ವಿ.. ಸರ್‌ಗೆ ನನ್ನ ಗುರು ಕಾಣಿಕೆ ಸಲ್ಲಿಸಿದ್ದೇನೆ ಎನ್ನುವ ಧನ್ಯತೆಯನ್ನು ಪಡೆದುಕೊಂಡಿದ್ದೇನೆ.
