ಕನ್ನಡ ಚಿತ್ರರಂಗ ಕಂಡ ಯಶಸ್ವೀ ಮತ್ತು ಸದಭಿರುಚಿಯ ಚಿತ್ರನಿರ್ದೇಶಕರಲ್ಲೊಬ್ಬರು ಡಿ.ರಾಜೇಂದ್ರಬಾಬು. ಅವರು ಚಿತ್ರರಂಗಕ್ಕೆ ಬಂದಿದ್ದು ನಟನಾಗುವ ಇರಾದೆಯಿಂದ. ನಟನಾಗಿ ಅವರಿಗೆ ಯಶಸ್ಸು ಸಿಗಲಿಲ್ಲ. ನಿರ್ದೇಶನ ವಿಭಾಗದತ್ತ ಹೊರಳಿದ ಅವರು ಆರಂಭದಲ್ಲಿ ನಿರ್ದೇಶಕರಾಧ ಎಸ್.ವಿ.ರಾಜೇಂದ್ರಸಿಂಗ್ ಬಾಬು, ವಿ.ಸೋಮಶೇಖರ್ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ‘ಜಿದ್ದು’ ಚಿತ್ರದೊಂದಿಗೆ ಸ್ವತಂತ್ರ್ಯ ನಿರ್ದೇಶಕರಾದ ಬಾಬು ಮುಂದೆ ತಮ್ಮದೇ ಒಂದು ಹಾದಿ ಸೃಷ್ಟಿಸಿಕೊಂಡರು.
ಮುಂದೆ ಸಾಲು, ಸಾಲು ಯಶಸ್ವೀ ಚಿತ್ರಗಳೊಂದಿಗೆ ನಾಯಕನಟರ ವೃತ್ತಿಬದುಕಿಗೆ ತಿರುವು ನೀಡಿದ ಹೆಗ್ಗಳಿಕೆ ಬಾಬು ಅವರಿಗೆ ಸಂದಿತು. ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಒಲವಿನ ಉಡುಗೊರೆ, ಯುಗಪುರುಷ, ರಾಮಾಚಾರಿ, ಹಾಲುಂಡ ತವರು, ಪ್ರೀತ್ಸೆ, ದೇವರ ಮಗ, ಅಣ್ಣಯ್ಯ, ಸ್ವಾತಿಮುತ್ತು, ಅಪ್ಪಾಜಿ, ದಿಗ್ಗಜರು.. ಬಾಬು ನಿರ್ದೇಶನದ ಕೆಲವು ಜನಪ್ರಿಯ ಚಿತ್ರಗಳು. ಅವರ ಬಹುತೇಕ ಯಶಸ್ವೀ ಸಿನಿಮಾಗಳು ರೀಮೇಕ್ ಹೌದಾದರೂ ಮೂಲ ಚಿತ್ರಗಳ ಹೋಲಿಕೆಗೆ ಭಿನ್ನವಾಗಿವೆ. ಕನ್ನಡದ ನೇಟಿವಿಟಿಗೆ ಹೊಂದಿಸಿಕೊಂಡು ತಮ್ಮತನದ ಲೇಪನದೊಂದಿಗೆ ಸಿನಿಮಾ ಮಾಡಿದ್ದು ಬಾಬು ವಿಶೇಷ.

ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜಕುಮಾರ್, ಸುದೀಪ್ ಅವರ ಸಿನಿಮಾ ಬದುಕಿಗೆ ತಿರುವು ನೀಡಿದವರು ಬಾಬು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ನಲವತ್ತು ಚಿತ್ರಗಳನ್ನು ಬಾಬು ನಿರ್ದೇಶಿಸಿದ್ದಾರೆ. ರಾಜೇಂದ್ರ ಬಾಬು ಅವರಿಗೆ ಸಂಗೀತದ ಬಗ್ಗೆ ಅಪಾರ ಜ್ಞಾನವಿತ್ತು. ಅವರ ನಿರ್ದೇಶನದ ಚಿತ್ರಗಳ ಹಲವಾರು ಹಾಡುಗಳು ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಬಹುತಾರಾಗಣದ ‘ಹಬ್ಬ’ ಚಿತ್ರದ ಅತ್ಯುತ್ತಮ ಚಿತ್ರಕಥೆ ರಚನೆಗೆ ಅವರಿಗೆ ರಾಜ್ಯಪ್ರಶಸ್ತಿ ಸಂದಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಪರಿಗಣಿಸಿ ‘ಪುಟ್ಟಣ್ಣ ಕಣಗಾಲ್ ಪುರಸ್ಕಾರ’ (2012) ನೀಡಿ ಗೌರವಿಸಲಾಗಿದೆ.
ಡಿ.ರಾಜೇಂದ್ರ ಬಾಬು | ಜನನ: 30/03/1951 | ನಿಧನ: 03/11/2013
