ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ದೇವಿಕಾ ರಾಣಿ

ನಟಿ, ನಿರ್ಮಾಪಕಿ
ಪೋಸ್ಟ್ ಶೇರ್ ಮಾಡಿ

ದೇವಿಕಾ ರಾಣಿ ಜನಿಸಿದ್ದು ವಿಶಾಖಪಟ್ಟಣದಲ್ಲಿ (30/03/1908). ಪೋಷಕರು ಬೆಂಗಾಲಿ ಮೂಲದವರು. ಅವರ ತಂದೆ ಹೆಸರಾಂತ ವೈದ್ಯರಾದರೆ, ಚಿಕ್ಕಪ್ಪ ದೊಡ್ಡ ಲೇಖಕ. ರಾಷ್ಟ್ರಕವಿ, ನೋಬೆಲ್‌ ಪುರಸ್ಕೃತ ರವೀಂದ್ರನಾಥ ಟ್ಯಾಗೂರರು ದೂರದ ಸಂಬಂಧಿ. ದೇವಿಕಾ ರಾಣಿ ತಮ್ಮ ಬಹುಪಾಲು ಬಾಲ್ಯ ಕಳೆದದ್ದು ಲಂಡನ್‌ನಲ್ಲಿ. ಅಲ್ಲಿ ಅವರು ನಟನೆ, ಸಂಗೀತ, ವಾಸ್ತುಶಾಸ್ತ್ರ ಕಲಿತರು. ದೇವಿಕಾ ವೃತ್ತಿ ಜೀವನ ಆರಂಭಿಸಿದ್ದು ವಸ್ತ್ರ ವಿನ್ಯಾಸಕಿಯಾಗಿ. ಚಿತ್ರನಿರ್ಮಾಪಕ ಹಿಮಾನ್ಶು ರಾಯ್ ಅವರ ಭೇಟಿಯ ನಂತರ ದೇವಿಕಾ ಬದುಕಿಗೆ ತಿರುವು ಸಿಕ್ಕಿತು.

ತಮ್ಮೊಂದಿಗೆ ಸಿನಿಮಾ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಹಿಮಾನ್ಶು ಅವರು ದೇವಿಕಾರಿಗೆ ಆಹ್ವಾನ ನೀಡಿದರು. ಹಿಮಾನ್ಶು ನಿರ್ಮಾಣದ ‘ಎ ಥ್ರೋ ಆಫ್‌ ಡೈಸ್‌’ ಚಿತ್ರದಲ್ಲಿ ದೇವಿಕಾ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದರು. ಮುಂದಿನ ಕೆಲ ದಿನಗಳಲ್ಲಿ ಹಿಮಾನ್ಶು ಅವರನ್ನು ವಿವಾಹವಾದ ದೇವಿಕಾ ಸಿನಿಮಾ ಬಗ್ಗೆ ಕಲಿಯಲು ಬರ್ಲಿನ್‌ಗೆ ತೆರಳಿದರು. ಭಾರತಕ್ಕೆ ಮರಳಿದ ನಂತರ ದೇವಿಕಾ ಅವರು ಪತಿ ಹಿಮಾನ್ಶು ಜೋಡಿಯಾಗಿ ‘ಕರ್ಮ’ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದರು.

‘ಅಚ್ಯುತ್ ಕನ್ಯಾ’ ಚಿತ್ರದಲ್ಲಿ ಅಶೋಕ್ ಕುಮಾರ್ ಜೊತೆ

‘ಕರ್ಮ’ ಚಿತ್ರದ ದೇವಿಕಾ ರಾಣಿ ಪಾತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯ್ತು. ನಂತರ ದೇವಿಕಾ ಹಲವು ನಾಯಕಿಪ್ರಧಾನ ಚಿತ್ರಗಳಲ್ಲಿ ನಟಿಸಿದರು. ಈ ಪಟ್ಟಿಯಲ್ಲಿ ‘ಅಚ್ಯುತ್‌ ಕನ್ಯಾ’ ಪ್ರಮುಖವಾದುದು. ಜಾತಿ ಪದ್ಧತಿಯನ್ನು ಪ್ರಶ್ನಿಸಿದ ಈ ಚಿತ್ರವನ್ನು ಭಾರತೀಯ ಸಿನಿಮಾದ ದಿಟ್ಟ ಪ್ರಯೋಗವೆಂದು ಪರಿಗಣಿಸಲಾಗುತ್ತದೆ. ಜನ್ಮಭೂಮಿ, ಸಾವಿತ್ರಿ, ಜೀವನ್ ಪ್ರಭಾತ್‌, ಇಜ್ಜತ್‌, ಪ್ರೇಮ್ ಕಹಾನಿ, ನಿರ್ಮಲ, ವಚನ್‌, ದುರ್ಗಾ, ಅಂಜಾನ್‌, ಹಮಾರಿ ಬಾತ್‌.. ಅವರ ಇತರೆ ಪ್ರಮುಖ ಸಿನಿಮಾಗಳು. 1940ರಲ್ಲಿ ಪತಿ ಹಿಮಾನ್ಶು ಅವರ ಮರಣದ ನಂತರ ದೇವಿಕಾ ಅವರು ‘ಬಾಂಬೆ ಟಾಕೀಸ್‌’ನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು.

ಸ್ವಾತಂತ್ರ್ಯಪೂರ್ವದ ಯಶಸ್ವೀ ಮಹಿಳಾ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು ದೇವಿಕಾ. ಅಶೋಕ್‌ ಕುಮಾರ್, ಮಧುಬಾಲಾ, ದಿಲೀಪ್ ಕುಮಾರ್, ರಾಜ್‌ ಕಪೂರ್‌ ಅವರಂತಹ ಮೇರು ತಾರೆಯರು ನಟನಾ ಬದುಕು ಕಟ್ಟಿಕೊಂಡಿದ್ದು ‘ಬಾಂಬೆ ಟಾಕೀಸ್‌’ನಲ್ಲಿ ಎನ್ನುವುದು ವಿಶೇಷ. ಸ್ವತಂತ್ರ್ಯ ವ್ಯಕ್ತಿತ್ವದ ದೇವಿಕಾ ರಾಣಿ ದಿಟ್ಟತನದ ನಿರ್ಧಾರಗಳನ್ನು ತೆಗೆದುಕೊಂಡವರು. ಪತಿ ಹಿಮಾನ್ಶು ನಿಧನದ ನಂತರ ರಷ್ಯಾ ಮೂಲದ ಕಲಾವಿದ ಸ್ವೆಟೋಸ್ಲಾವ್ ರೋರಿಚ್‌ ಅವರನ್ನು ವರಿಸಿದರು. ಬೆಂಗಳೂರಿನ ರೋರಿಚ್‌ ಎಸ್ಟೇಟ್‌ನಲ್ಲಿ ದಂಪತಿ ಬಾಳ್ವೆ ನಡೆಸಿದರು. 1994ರ ಮಾರ್ಚ್‌ 9ರಂದು ಇಹಲೋಕ ತ್ಯಜಿಸಿದಾಗ ದೇವಿಕಾ ಅವರಿಗೆ 85 ವರ್ಷ.

ಪತಿ ರೋರಿಚ್‌ ಅವರೊಂದಿಗೆ ದೇವಿಕಾ ರಾಣಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಪೇಷನ್ಸ್ ಕೂಪರ್

ಭಾರತದ ಮೊದಲ ಸಿನಿಮಾ ಸ್ಟಾರ್‌ಗಳಲ್ಲಿ ನಟಿ ಪೇಷನ್ಸ್ ಕೂಪರ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಕೊಲ್ಕೊತ್ತಾ ಮೂಲದ ಆಂಗ್ಲೋ ಇಂಡಿಯನ್‌ ಪೇಷನ್ಸ್

‘ಜ್ಯುಬಿಲಿ ಸ್ಟಾರ್’ ರಾಜೇಂದ್ರ ಕುಮಾರ್

ಬೆಳ್ಳಿತೆರೆಗೆ ಪರಿಚಯವಾದ ಆರಂಭದ ದಿನಗಳಲ್ಲಿ ರಾಜೇಂದ್ರಕುಮಾರ್ ತೀವ್ರ ಹಿನ್ನೆಡೆ ಅನುಭವಿಸಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಅವರ ಸಾಲು, ಸಾಲು ಚಿತ್ರಗಳು ಯಶಸ್ವಿಯಾದವು.

ಮೀನಾ ಕುಮಾರಿ

ಹಣೆಯ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‍ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ