ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮೀನಾ ಕುಮಾರಿ

ಪೋಸ್ಟ್ ಶೇರ್ ಮಾಡಿ

ಹಣೆಯ ಮೇಲೆ ಮುಂಗುರುಳು, ಒಡಲಾಳದ ನೋವನ್ನು ಹೊರಹಾಕುವಂಥ ದನಿ.. ದುರಂತ ನಾಯಕಿಯ ಚಿತ್ರಣದ ಇಮೇಜ್‍ಗೆ ಮೀನಾಕುಮಾರಿ ಒಗ್ಗಿಹೋಗಿದ್ದರು. ಹಿಂದಿ ಚಿತ್ರರಂಗದ `ಟ್ರ್ಯಾಜಿಡಿ ಕ್ವೀನ್’ ಎನ್ನುವ ಪಟ್ಟವೂ ಅವರ ಹೆಸರಿಗೆ ಅನ್ವರ್ಥವಾಗಿತ್ತು. ಅಂದಿನ ದಿನಗಳ ಅತ್ಯಂತ ಸುಂದರ ನಾಯಕಿಯರಲ್ಲಿ ಮೀನಾ ಕುಮಾರಿ ಅಗ್ರ ಪಂಕ್ತಿಯಲ್ಲಿದ್ದವರು.

ಮೀನಾ ಕುಮಾರಿ ಅವರ ನಿಜ ನಾಮಧೇಯ ಮೆಹಜಬೀನ್. ಮುಂಬಯಿಯಲ್ಲಿ 1932, ಆಗಸ್ಟ್ 1ರಂದು ಜನಿಸಿದ್ದು. ಗಂಡು ಮಗು ನಿರೀಕ್ಷಿಸಿದ್ದ ತಂದೆ ಆಲಿ ಬಾಬಾಗೆ ಮೆಹಜಬೀನ್ ಜನನ ಬೇಸರ ತಂದಿತ್ತು. ಆತ ಪುಟ್ಟ ಹೆಣ್ಣು ಮಗುವನ್ನು ಅನಾಥಾಲಯಕ್ಕೆ ಕೊಟ್ಟು ಬಂದಿದ್ದರು! ಅದೇನಾಯ್ತೋ, ಕೆಲವೇ ಗಂಟೆಗಳಲ್ಲಿ ಅನಾಥಾಲಯಕ್ಕೆ ಹೋಗಿ ಮೆಹಜಬೀನ್‍ಳನ್ನು ಮತ್ತೆ ಮನೆಗೆ ತಂದಿದ್ದರು.

ಮೆಹಜಬೀನ್ ತಂದೆ ಆಲಿ ಬಾಬಾ ಪಾರ್ಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಾರ್ಮೋನಿಯಂ ಕಲಾವಿದ. ಉರ್ದು ಕವಿತೆಗಳನ್ನೂ ಬರೆಯುತ್ತಿದ್ದರಂತೆ. `ಈದ್ ಕಾ ಚಾಂದ್’ ಸೇರಿದಂತೆ ಐದಾರು ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. `ಶಾಹಿ ಲೂಟೇರೆ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಮೆಹಜಬೀನ್ ತಾಯಿ ಪ್ರಭಾವತಿ ದೇವಿ ಕೂಡ ರಂಗ ಕಲಾವಿದೆ ಮತ್ತು ನೃತ್ಯಗಾರ್ತಿ. ಆಕೆ ಆಲಿ ಬಾಬಾರ ಎರಡನೇ ಪತ್ನಿ.

ನಟ ದೇವಾನಂದ್‌ ಜೊತೆ

ಮೆಹಜಬೀನ್ ಬೆಳ್ಳಿತೆರೆಗೆ ಪರಿಚಯವಾದಾಗ ಆಕೆಗಿನ್ನೂ 6ರ ಪುಟ್ಟ ವಯಸ್ಸು. ಸಿನಿಮಾ ಇಷ್ಟವಿಲ್ಲ ಎಂದು ಅತ್ತಿದ್ದರಂತೆ. ಆದರೆ ತಂದೆಯ ಒತ್ತಾಯದ ಮೇರೆಗೆ `ಫರ್ಜಂದ್ – ಎ – ವತನ್’ (1939) ಚಿತ್ರದೊಂದಿಗೆ ಬಾಲನಟಿಯಾಗಿ ಸಿನಿಮಾಗೆ ಪರಿಚಯವಾದರು. ಮುಂದೆ `ವೀರ್ ಘಟೋತ್ಕಚ್’ (1949), `ಶ್ರೀ ಗಣೇಶ ಮಹಿಮಾ’ (1950) ಪೌರಾಣಿಕ ಚಿತ್ರಗಳಲ್ಲಿ ನಟಿಸಿದರೂ, ಆಕೆಯನ್ನು ಪ್ರೇಕ್ಷಕರು ಗುರುತಿಸಲಿಲ್ಲ.

`ಬೈಜು ಬಾವ್ರಾ’ (1952) ಚಿತ್ರದೊಂದಿಗೆ ಮೀನಾಕುಮಾರಿ ದಿನ ಬೆಳಗಾಗುವುದರೊಳಗೆ ಜನಪ್ರಿಯರಾದರು. ಆ ವೇಳೆಗಾಗಲೇ ಅವರ ಮೆಹಜಬೀನ್ ಜನ್ಮನಾಮ ಬದಲಾಗಿತ್ತು. ಮಧ್ಯ ಭಾರತದ ಹೆಸರಾಂತ ಗಾಯಕ ಬೈಜು ಬಾವ್ರಾ ಜೀವನಕಥೆಯನ್ನೇ ತೆರೆಗೆ ಅಳವಡಿಸಲಾಗಿತ್ತು. ಈ ಚಿತ್ರದ ನಾಯಕಿ ತಾನು ಪ್ರೀತಿಸುವ ವ್ಯಕ್ತಿಗಾಗಿ ತನ್ನ ಆಸೆ – ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾಳೆ. ಅತ್ಯುತ್ತಮ ಅಭಿನಯಕ್ಕಾಗಿ ಮೀನಾಕುಮಾರಿಗೆ ಫಿಲ್ಮ್‍ಫೇರ್ (1953, ಚೊಚ್ಚಲ ಫಿಲ್ಮ್‍ಫೇರ್) ಪುರಸ್ಕಾರ ಸಂದಿತ್ತು. ವಿಜಯ್ ಭಟ್ ನಿರ್ದೇಶನದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಚಿತ್ರದ ಗೆಲುವಿನೊಂದಿಗೆ ಮೀನಾಕುಮಾರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

ಕಿಶೋರ್ ಕುಮಾರ್ ಜೊತೆ

ಮುಂದೆ ಮೀನಾಕುಮಾರಿ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ. `ಪರಿಣೀತಾ’ (1953), `ಡಯಿರಾ’ (1953), `ಏಕ್ ಹೀ ರಾಸ್ತಾ’ (1956), `ಶಾರದಾ’ (1957), `ದಿಲ್ ಅಪ್ರಾ ಔರ್ ಪ್ರೀತ್ ಪರಾಯಿ’ (1960) ಚಿತ್ರಗಳೊಂದಿಗೆ ಆಕೆಗೆ `ಟ್ರ್ಯಾಜಿಡಿ ಹಿರೋಯಿನ್’ ಹಣೆಪಟ್ಟಿ ಅಂಟಿತು. 1962ರಲ್ಲಿ ಮೀನಾಕುಮಾರಿ ಅವರ ಹೆಸರಿನಲ್ಲಿ ವಿಶಿಷ್ಟ ದಾಖಲೆಯೊಂದು ಬರೆಯಲ್ಪಟ್ಟಿತು. `ಆರತಿ’, `ಮೇ ಚುಪ್ ರಹೇಂಗಿ’ ಮತ್ತು `ಸಾಹಿಬ್ ಬೀಬಿ ಔರ್ ಗುಲಾಮ್’ ಮೂರು ಚಿತ್ರಗಳ ಉತ್ತಮ ಅಭಿನಯಕ್ಕಾಗಿ ಅವರ ಹೆಸರು ಫಿಲ್ಮ್‍ಫೇರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿತ್ತು. ಕೊನೆಗೆ `ಸಾಹಿಬ್ ಬೀಬಿ ಔರ್ ಗುಲಾಮ್’ ಚಿತ್ರದ ಅಭಿನಯಕ್ಕೆ ಅವರಿಗೆ ಫಿಲ್ಮ್‍ಫೇರ್ ಪುರಸ್ಕಾರ ಸಂದಿತು.

ಮೀನಾಕುಮಾರಿ 1952ರಲ್ಲಿ ನಿರ್ದೇಶಕ ಕಮಲ್ ಅಮ್ರೋಹಿ ಅವರ ಎರಡನೇ ಪತ್ನಿಯಾದರು. ಕಮಲ್ ಆಕೆಗಿಂತ 15 ವರ್ಷಕ್ಕೆ ಹಿರಿಯರು. ಆನಂತರ `ದಿಲ್ ಏಕ್ ಮಂದಿರ್’ (1963), `ಕಾಜಲ್’ (1965), `ಫೂಲ್ ಔರ್ ಪತ್ಥರ್ (1966) ಚಿತ್ರಗಳೊಂದಿಗೆ ಮೀನಾ ಯಶಸ್ಸಿನ ಪಯಣ ಮುಂದುವರೆಯಿತು. 1964ರಲ್ಲಿ ಕಮಲ್‍ರಿಂದ ವಿಚ್ಛೇದನ ಪಡೆದ ನಂತರ ಮೀನಾ ಮಧ್ಯಪಾನಕ್ಕೆ ಮೊರೆಹೋದರು. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಮೀನಾಕುಮಾರಿ ಯಕೃತ್ ದುರ್ಬಲವಾಯ್ತು. ಚಿಕಿತ್ಸೆಗೆಂದು ಮೀನಾಕುಮಾರಿ ಅವರನ್ನು ಲಂಡನ್ ಮತ್ತು ಸ್ವಿಟ್ಜರ್‍ಲ್ಯಾಂಡ್‍ಗೆ ಕರೆದೊಯ್ಯಲಾಗಿತ್ತು.

ಮೀನಾ ಕುಮಾರಿ – ವೈಜಯಂತಿ ಮಾಲಾ

ಆರೋಗ್ಯ ಸುಧಾರಿಸಿಕೊಂಡು ಭಾರತಕ್ಕೆ ಮರಳಿದ ಮೀನಾಕುಮಾರಿ ಪೋಷಕ ಪಾತ್ರಗಳಲ್ಲಿ ನಟಿಸಿದರು. `ಜವಾಬ್’ (1970), `ಮೇರೆ ಅಪ್ನೇ’ (1971), `ದುಷ್ಮನ್’ (1972) ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಚಿತ್ರಗಳು. ಹಿಂದೆ ಮೀನಾಕುಮಾರಿ ತಮ್ಮ ಪತಿ ಕಮಲ್ ಅವರೊಡಗೂಡಿ `ಪಾಕೀಜಾ’ ಸಿನಿಮಾ ಆರಂಭಿಸಿದ್ದರು. ಅದು ಆಕೆಯ ಮಹತ್ವಾಕಾಂಕ್ಷೆಯ ಚಿತ್ರವೂ ಆಗಿತ್ತು. ದಂಪತಿಯ ವಿಚ್ಛೇದನದ ನಂತರ ಚಿತ್ರವೂ ನನೆಗುದಿಗೆ ಬಿದ್ದಿತ್ತು.

ನಟ ಧರ್ಮೇಂದ್ರ ಜೊತೆ

ಕೊನೆಗೆ 14 ವರ್ಷಗಳ ನಂತರ 1972, ಫೆಬ್ರವರಿ 4ರಂದು `ಪಾಕೀಜಾ’ ತೆರೆಕಂಡಿತು. ಮೊದಲು ಚಿತ್ರವನ್ನು ಫ್ಲಾಪ್ ಎಂದು ಘೋಷಿಸಲಾಗಿತ್ತು. ಆದರೆ 1972, ಮಾರ್ಚ್ 31ರಲ್ಲಿ ಮೀನಾಕುಮಾರಿ ನಿಧನರಾದ ನಂತರ ಒಮ್ಮೆಗೇ `ಪಾಕೀಜಾ’ ಗೆಲುವಿನ ಹಾದಿ ಹಿಡಿಯಿತು! ಸಾವಿನೊಂದಿಗೆ ಮೀನಾಕುಮಾರಿ ಅವರ ಗೆಲುವಿನ ಕನಸು ಕೂಡ ಕೈಗೂಡಿತ್ತು. `ಪಾಕೀಜಾ’, ಮೀನಾಕುಮಾರಿ ಅವರ ಸಿನಿಮಾ ಜೀವನದ ಮಹತ್ವದ ಪ್ರಯೋಗ. ಚಿತ್ರದ ಉತ್ತಮ ಅಭಿನಯಕ್ಕಾಗಿ ಮೀನಾಕುಮಾರಿ 12ನೇ ಬಾರಿ ಫಿಲ್ಮ್‍ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ತಮ್ಮ ಸಿನಿಮಾದ ಗೆಲುವನ್ನು ಕಣ್ತುಂಬಿಕೊಳ್ಳಲು ಅವರೇ ಈ ಜಗತ್ತಿನಲ್ಲಿರಲಿಲ್ಲ. ಇಹಲೋಕ ತ್ಯಜಿಸಿದಾಗ ಅವರಿಗೆ 38 ವರ್ಷವಷ್ಟೆ.

ಮೀನಾ ಕುಮಾರಿ | ಜನನ: 01/08/1933 | ನಿಧನ: 31/03/1972

ನೆನಪು ಸಾಧನೆ - ಸ್ಫೂರ್ತಿ

ಮಹಾನಟಿ ಮನೋರಮ

‘ಮಾಳಯಿಟ್ಟ ಮಂಗೈ’ (1958) ತಮಿಳು ಚಿತ್ರದೊಂದಿಗೆ ಮನೋರಮ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1985ರಲ್ಲಿ

ಜನಪ್ರಿಯ ಪೋಸ್ಟ್ ಗಳು

ಮಾತನಾಡಲು ಬಂದ ಬಿ.ಜಯ ಮೌನವಾಗಿದ್ದೇಕೆ?

2012ರ ಮಾರ್ಚ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಹಿರಿಯ ನಟಿ ಬಿ.ಜಯ ಅತಿಥಿಯಾಗಿ ಪಾಲ್ಗೊಂಡಿದ್ದರು. ನಿನ್ನೆ (ಜೂನ್‌

ಡಿ.ಕೆ.ಸಪ್ರು

ಕಾಶ್ಮೀರ ಮೂಲದ ದಯಾ ಕಿಶನ್ ಸಪ್ರು ಹಿಂದಿ ಸಿನಿಮಾ ನಟ. ಆರಂಭದಲ್ಲಿ ನಾಯಕನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಸಪ್ರು ಮುಂದೆ

‘ಅಂಕಲ್‌’ ಲೋಕನಾಥ್

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಉಪ್ಪಿನಕಾಯಿ ಪ್ರಿಯ ಮಾಚ, ಪುಟ್ಟಣ್ಣರ ‘ನಾಗರಹಾವು’ ಚಿತ್ರದ ಖಡಕ್ ಪ್ರಿನ್ಸಿಪಾಲ್‌ ಶ್ಯಾಮರಾಯರ