ಬೆಂಗಳೂರು ಮೂಲದ ಹರಿದಾಸ್ ಕನ್ನಡ, ತಮಿಳಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. `ಫಲಿತಾಂಶ’ ಸೇರಿದಂತೆ ಪುಟ್ಟಣ್ಣನವರ `ಬಿಳಿ ಹೆಂಡ್ತಿ’, `ಕಥಾ ಸಂಗಮ’ ಮತ್ತು `ಕಾಲೇಜು ರಂಗ’ ಚಿತ್ರಗಳಿಗೆ ಹರಿದಾಸ್ ಕ್ಯಾಮೆರಾ ಕೆಲಸವಿದೆ. ಅಮರಶಿಲ್ಪಿ ಜಕಣಾಚಾರಿ (1964), ಮಹಾಸತಿ ಅನಸೂಯ, ಚಂದ್ರಹಾಸ, ಬಂಗಾರದ ಹೂವು, ಭಲೇ ಬಸವ, ಹಾಸ್ಯರತ್ನ ರಾಮಕೃಷ್ಣ, ಶ್ರೀಗಂಧ, ಗಾನಯೋಗಿ ಪಂಚಾಕ್ಷರ ಗವಾಯಿ (1995) ಅವರ ಛಾಯಾಗ್ರಾಹಣದ ಕೆಲವು ಪ್ರಮುಖ ಸಿನಿಮಾಗಳು.

`ಒಡಹುಟ್ಟಿದವರು’ (1969), `ಆಶಾಕಿರಣ’, `ಸೂರ್ಯಪುತ್ರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ತಂತ್ರಜ್ಞರೊಲ್ಲಬ್ಬರಾದ ಬಿ.ಎಸ್.ರಂಗಾ ಅವರ ಭಾಮೈದ ಹರಿದಾಸ್. ಮದರಾಸಿನಲ್ಲಿದ್ದ ರಂಗಾ ಅವರ ವಿಕ್ರಂ ಸ್ಟುಡಿಯೋ ಯಶಸ್ಸಿನಲ್ಲಿ ಇವರ ಕೊಡುಗೆಯೂ ಇದೆ. ಉತ್ತಮ ಕ್ಯಾಮೆರಾ ತಂತ್ರಗಾರಿಕೆಯಿಂದ ಹಲವು ಉತ್ತಮ ಪ್ರಯೋಗಗಳಿಗೆ ಸಾಕ್ಷಿಯಾದ ಹರಿದಾಸ್ ಈಗ ನಮ್ಮೊಂದಿಗಿಲ್ಲ.
