ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಗಜಾನನ ಜಾಗೀರ್‌ದಾರ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟ್ರದ ವಿವಿಧ ನಗರದಲ್ಲಿ ನಾಟಕಗಳ ಪ್ರದರ್ಶನ ನೀಡಿದ ಅನುಭವ ಅವರದಾಯ್ತು. ಓದು ಮುಗಿಸಿದ ನಂತರ ಶಿಕ್ಷಕ ವೃತ್ತಿ ಕೈಗೊಂಡ ಅವರಿಗೆ ರಂಗಭೂಮಿ ಸೆಳೆತ ತೀವ್ರವಾಯ್ತು. ಕೆಲ ದಿನಗಳಲ್ಲೇ ವೃತ್ತಿ ತೊರೆದು ನಟನಾಗುವ ಇರಾದೆಯಿಂದ ಸಿನಿಮಾರಂಗದತ್ತ ಹೊರಳಿದರು.
ವಿ.ಶಾಂತಾರಾಂ ಅವರಲ್ಲಿ ಸಹಾಯಕರಾಗಿ ಸೇರಿದ ಜಾಗೀರ್‌ದಾರ್ ಅವರಿಗೆ ಶಾಂತಾರಾಂ ಅವರ ‘ಜಲ್ತಿ ನಿಶಾನಿ’ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮುಂದೆ ಬಾಲ್‌ಜಿ ಪೆಂಡಾರ್ಕರ್ ಅವರಲ್ಲಿ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಅನುಭವ ಪಡೆದರು. ಹಿಂದಿ, ಉರ್ದು, ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿಯಿದ್ದ ಅವರು ನಟ-ನಟಿಯರಿಗೆ ಸಂಭಾಷಣೆ ಉಚ್ಛಾರಣೆಗೆ ಸಂಬಂಧಿಸಿದಂತೆ ತರಬೇತಿ ನೀಡುತ್ತಿದ್ದರು. ‘ಸಂತ ತುಳಸೀದಾಸ್’ ಚಿತ್ರಕ್ಕೆ ಹದಿಮೂರು ಹಾಡುಗಳನ್ನು ರಚಿಸಿದ ಅವರಿಗೆ ನಟನೆ ಮತ್ತು ಬರವಣಿಗೆಯಲ್ಲಿ ರಂಗಭೂಮಿ ಅನುಭವ ನೆರವಿಗೆ ಬಂತು.

‘ಸಿನ್ಹಾಸನ್’ ಚಿತ್ರದೊಂದಿಗೆ ನಿರ್ದೇಶಕರಾದ ಗಜಾನನ ‘ಬೇಗುನಾಹ್’, ‘ವಸಂತಸೇನಾ’ ಚಿತ್ರಗಳ ನಿರ್ದೇಶನಕ್ಕೆ ಮೆಚ್ಚುಗೆ ಗಳಿಸಿದರು. ನಟ ಮತ್ತು ನಿರ್ದೇಶಕನಾಗಿ ‘ರಾಮಶಾಸ್ತ್ರಿ’ ಅವರಿಗೆ ಹೆಸರು ತಂದುಕೊಟ್ಟಿತು. ನಟನಾ ಬದುಕಿನುದ್ದಕ್ಕೂ ಅವರು ಹಿಂದಿ ಮತ್ತು ಮರಾಠಿ ಎರಡೂ ಭಾಷೆಗಳ ಚಿತ್ರಗಳಲ್ಲಿ ಕೆಲಸ ಮಾಡುತ್ತಾ ಬಂದರು. ಅಸಿತ್ ಸೇನ್ ನಿರ್ದೇಶನದ ‘ಅಪರಾಧಿ ಕೌನ್’ ಅವರ ಮತ್ತೊಂದು ಮಹತ್ವದ ಸಿನಿಮಾ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಗಮನ ಸೆಳೆದರು. ಎರಡು ವರ್ಷ ಅವರು ಪುಣೆಯ ಸಿನಿಮಾ ಮತ್ತು ಟೀವಿ ಇನ್‌ಸ್ಟಿಟ್ಯೂಟ್ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು.
ಹಮ್ ದೋನೋ, ಗೈಡ್, ದೇಸ್ ಪರ್‌ದೇಸ್, ಉಮ್ರಾವೋ ಜಾನ್, ಸೂತ್ರಧಾರ್, ಪ್ಯಾಸೆ ನಯನ್… ಪೋಷಕ ಪಾತ್ರಗಳಲ್ಲಿ ಗಜಾನನ ಅವರು ನಟಿಸಿದ ಕೆಲವು ಪ್ರಮುಖ ಹಿಂದಿ ಚಿತ್ರಗಳು. ತಮ್ಮ ಸಿನಿಮಾ – ಬದುಕಿನ ಕುರಿತಾಗಿ ಅವರು ಎರಡು ಆತ್ಮಚರಿತ್ರೆ ಪುಸ್ತಕಗಳನ್ನು ರಚಿಸಿದ್ದು, ಸಿನಿಮಾ ಕಲೆಯ ಬಗ್ಗೆ ಪುಸ್ತಕ ಬರೆದಿದ್ದಾರೆ.
ಗಜಾನನ ಜಾಗೀರ್‌ದಾರ | ಜನನ: 02/04/1907 | ನಿಧನ: 13/08/1988
