
ಸಾಹಿತಿ, ಚಿತ್ರನಿರ್ದೇಶಕ
ರಾಜಕುಮಾರ್ ಅವರು ನನ್ನೊಂದಿಗೆ ಮಾತಾಡುತ್ತಾ ಹೇಳಿದರು : ‘ಆಪರೇಷನ್ ಮಾಡಿಸ್ದೆ ಇದ್ದಿದ್ರೆ ಏನಾಗ್ತಿತ್ತು ಸಾರ್. ನೋವು ಇರ್ತಾ ಇತ್ತು. ನಾವು, ಮನುಷ್ಯರು, ನೋವಿನ ಜೊತೆ ಬದುಕೋದ್ ಕಲೀಬೇಕು. ನೋವಿನ ಜೊತೆ ವಿಶ್ವಾಸ ಬೆಳೆಸ್ಬೇಕು; ಸ್ನೇಹ ಬೆಳೆಸ್ಬೇಕು ಇಬ್ಬರೂ ವಿಶ್ವಾಸದಿಂದ ಜೊತೇಲ್ ಬಾಳ್ಬೇಕು; ಅಷ್ಟೇ.’
ಡಾ.ರಾಜಕುಮಾರ್ ಇನ್ನಿಲ್ಲ ಎಂಬ ಸುದ್ದಿ ಗೊತ್ತಾದಾಗ ನನ್ನ ಮನಸ್ಸಿನ ಒರತೆ ಉಕ್ಕಿ ಕಣ್ಣಲ್ಲಿ ತುಂಬಿ ಕೆನ್ನೆ ಮೇಲೆ ಹರಿದಿತ್ತು. ಅದು ನನ್ನ ಅವರ ವೈಯಕ್ತಿಕ ಸಂಬಂಧದ ಅಭಿವ್ಯಕ್ತಿಯಷ್ಟೇ ಆಗಿರಲಿಲ್ಲ. ಅದರ ಜೊತೆಗೆ ಸಾಮಾಜಿಕ ಆಯಾಮವೂ ಇತ್ತು.
ಡಾ.ರಾಜಕುಮಾರ್ ಅವರ ನಿಧನದಿಂದ ಸದಭಿರುಚಿಯ ಒಂದು ಯುಗದ ಅಂತ್ಯವಾಗಿದೆಯೆಂದರೆ ಅದು ಅತಿಶಯೋಕ್ತಿಯಲ್ಲ. ಯಾರಾದರೂ ಸತ್ತಾಗ ಸಾಮಾನ್ಯವಾಗಿ ಸಂತಾಪ ಸೂಚನೆಗಳೂ ಕ್ಲೀಷೆಯಾಗಿ ಬಿಡುವುದುಂಟು. ಆದರೆ ರಾಜಕುಮಾರ್ ಅವರ ಸಜ್ಜನಿಕೆ, ಸರಳತೆ, ಸದಭಿರುಚಿ ನಿರ್ಮಾಣದ ಸಂಕಲ್ಪಗಳ ಬಗ್ಗೆ ಮಾಡುವ ಪ್ರಶಂಸೆಯ ಯಾವ ಮಾತುಗಳೂ ಕ್ಲೀಷೆಯಾಗುವುದಿಲ್ಲ. ಅವರು ಅಭಿನಯಿಸಿದ ಚಿತ್ರಗಳು ಮತ್ತು ನಿಜ ನಡೆವಳಿಕೆಯ ಗುರುತುಗಳು ತಮಗೆ ತಾವೇ ಸ್ಪಷ್ಟ ಸಾಕ್ಷಿಯಾಗಿ – ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತವೆ.
ಡಾ.ರಾಜಕುಮಾರ್ ಅವರು ಕೇವಲ ಸಿನಿಮಾ ಕಲಾವಿದರಾಗಿದ್ದರೆ ಇಷ್ಟೆಲ್ಲ ಜನಪ್ರೀತಿಗೆ ಪಾತ್ರರಾಗುತ್ತಿದ್ದರೋ ಇಲ್ಲವೋ ಹೇಳಲಾಗದು ಅಥವಾ ಅದು ಸಿನಿಮಾ ಪ್ರೇಮಿಗಳ ಪ್ರೀತಿ ಮಾತ್ರವಾಗಿರುತ್ತಿತ್ತು. ರಾಜಕುಮಾರ್ ಚಿತ್ರರಂಗದೊಳಗಿದ್ದು, ಅದನ್ನು ಮೀರಿ ಬೆಳೆದರು; ಸಾಂಸ್ಕೃತಿಕವಾಗಿ ಮಹತ್ವಪೂರ್ಣ ವ್ಯಕ್ತಿತ್ವದಾದರು; ‘ಜನಪ್ರಿಯ ಸಂಸ್ಕೃತಿ’ಯೊಳಗೆ ಸಾರ್ಥಕ ರೂಪಕವಾಗಿ ಅರ್ಥಪೂರ್ಣವಾದರು; ಜನಪ್ರಿಯ ಸಂಸ್ಕೃತಿಯನ್ನು ನಕಾರಾತ್ಮಕ ನೆಲೆಯಲ್ಲಿ ನೋಡುವವರಿಗೆ ಸಕಾರಾತ್ಮಕ ಉತ್ತರವಾದರು. ಅಪಾರ ಪ್ರಭಾವ ಬೀರುವ ಚಲನಚಿತ್ರದಂತಹ ಜನಪ್ರಿಯ ಮಾಧ್ಯಮವನ್ನು ಸರಿದಾರಿಯಲ್ಲಿ ನಡೆಸುವ ಸಾರ್ಥಕ ಸಾರ್ಥಕ ಸಾಧನವಾದದ್ದು ರಾಜಕುಮಾರ್ ಅವರ ಒಂದು ಸಾಧನೆ.

ಚಲನಚಿತ್ರ ಸೃಷ್ಟಿಯಲ್ಲಿ ನಿರ್ದೇಶಕನೇ ನಾಯಕ ಎನ್ನುವುದು ನಿಜವಾದರೂ ಮುಖ್ಯವಾಹಿನಿಯ ಚಲನಚಿತ್ರಗಳಲ್ಲಿ ನಾಯಕನಟನ ಪಾತ್ರ ತನಗೆ ತಾನೇ ಮುಖ್ಯವಾಗುವುದು ಒಂದು ವಾಸ್ತವವಾಗಿದೆ. ಯಾಕೆಂದರೆ ನಾಯಕನಟನ ಜನಪ್ರಿಯತೆಯ ಮೇಲೆ ಬಂಡವಾಳ ಹೂಡುವವರೇ ಹೆಚ್ಚು. ಆತ ತಾರಾ ಮೌಲ್ಯದ ನಾಯಕನಟ ತಾನು ಪಾತ್ರವಹಿಸುವ ಚಿತ್ರವ ವಸ್ತು ಹೇಗಿರಬೇಕೆಂಬ ಬಗ್ಗೆ ನಿರ್ಧರಿಸುವ ಪರಿಪಾಠ ನಮ್ಮಲ್ಲಿದೆ. ತನಗೆ ಒಪ್ಪಿಗೆಯಾದ ಕಥಾವಸ್ತುವುಳ್ಳ ಚಿತ್ರದಲ್ಲಿ ನಟಿಸಲು ಜನಪ್ರಿಯ ನಾಯಕನಟರು ಒಪ್ಪುವುದರಿಂದ ಜನಪ್ರಿಯ ಸಿನಿಮಾ ನಿರ್ಮಾಣದಲ್ಲಿ ಅವರ ಅಭಿಪ್ರಾಯ-ಆಯ್ಕೆಗಳಿಗೆ ಮಹತ್ವ ಇದ್ದೇ ಇದೆ. ರಾಜಕುಮಾರ್ ಅವರು ಆಯ್ಕೆ ಮಾಡಿದ ಕಥಾವಸ್ತುಗಳು ಯಾವತ್ತೂ ಸಮಾಜ ವಿರೋಧಿ ಆಶಯ ಹೊಂದಿರಲಿಲ್ಲ. ನಿರೂಪಣೆಯ ವಿಧಾನವು ಯಾವತ್ತೂ ಅಭಿರುಚಿಗೆ ಧಕ್ಕೆ ತರಲಿಲ್ಲ. ಅವರ ಮುಖ್ಯಚಿತ್ರಗಳು ಯಥಾಸ್ಥಿತಿ ವಾದವನ್ನು ಪೋಷಿಸಲಿಲ್ಲ. ಮುಖ್ಯವಾಹಿನಿಯ ಇತಿಮಿತಿಯಲ್ಲೇ ಚಲನಶೀಲ ಆಶಯಗಳನ್ನು ಅಭಿವ್ಯಕ್ತಿಸಿದವು. ಅವರು ಆಯ್ಕೆ ಮಾಡಿ ಅಭಿನಯಿಸಿದ ಭಕ್ತಿಪ್ರಧಾನ ಚಿತ್ರಗಳು ‘ಸಾಂಸ್ಥಿಕ ಧರ್ಮ’ವನ್ನು ಪೋಷಿಸಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಅಲ್ಲದೆ, ಅವರು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ದಲ್ಲಿದ್ದ ಮುಗ್ಧಭಕ್ತಿಯು ಅವರ ವ್ಯಕ್ತಿತ್ವದಲ್ಲೂ ಬೆಳೆಯುತ್ತ ಬಂತು. ಮುಂದಿನ ಚಿತ್ರಗಳಲ್ಲೂ ಮೂಡಿಬಂತು. (ಬೇಡರ ಕಣ್ಣಪ್ಪ ಚಿತ್ರಕ್ಕೆ ಮುಂಚೆ 1942ರಲ್ಲಿ ‘ಪ್ರಹ್ಲಾದ’ ಚಿತ್ರದಲ್ಲಿ ಬಾಲನಟನಾಗಿ, 1952ರಲ್ಲಿ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಸಹನಟರಾಗಿ ರಾಜಕುಮಾರ್ ಅವರು ನಟಿಸಿದ್ದರು. ಆದ್ದರಿಂದ, ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ಎಂದಿದ್ದೇನೆ).
ಇದೇ ಸಂದರ್ಭದಲ್ಲಿ ಡಾ.ರಾಜಕುಮಾರ್ ಅವರ ಭಕ್ತಿಭಾವಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಹೇಳಬೇಕು. ಆಂಧ್ರದಲ್ಲಿ ಎನ್‌ಟಿಆರ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜಕುಮಾರ್ ಅವರನ್ನು ತಿರುಪತಿ ಟ್ರಸ್ಟ್‌ನ ಒಬ್ಬ ಟ್ರಸ್ಟಿಯನ್ನಾಗಿ ನೇಮಿಸಿದರು. ಒಮ್ಮೆ ಟ್ರಸ್ಟ್‌ನ ಸಭೆಗೆ ಹೋಗಿದ್ದಾಗ ತಿರುಪತಿ ತಿಮ್ಮಪ್ಪನ ‘ದರ್ಶನ’ ಮಾಡಲು ಸಾಮಾನ್ಯ ಜನರ ಜೊತೆ ರಾಜಕುಮಾರ್ ಕ್ಯೂನಲ್ಲಿ ನಿಂತುಕೊಂಡರು. ಇವರನ್ನು ನೇರವಾಗಿ ಗರ್ಭಗುಡಿಗೆ ಕರೆದುಕೊಂಡು ಹೋಗುತ್ತಿದ್ದರಾದರೂ ಅದಕ್ಕೆ ಅವರು ಒಪ್ಪಲಿಲ್ಲ. ಭಕ್ತಿಯೆನ್ನುವುದು ವಿಶೆಷ ಸವಲತ್ತುಗಳಲ್ಲಿ ಪಡೆಯುವ ‘ದರ್ಶನ’ದಲ್ಲಿ ಇಲ್ಲ – ಎಂಬುದು ಅವರ ಅಭಿಪ್ರಾಯವಾಗಿತ್ತು. ಭಕ್ತಿ ಇರುವುದೇ ನಿಜವಾದರೆ ತಾನೂ ಎಲ್ಲರಂತೆ ಎಲ್ಲರೊಂದಿಗೆ ಸಾಲಿನಲ್ಲಿ ನಿಂತು ಹೋಗಬೇಕು ಎಂದು ಅವರು ಭಾವಿಸಿದ್ದರು.
ಹೀಗೆ ಕ್ಯೂನಲ್ಲಿ ನಿಂತಿದ್ದಾಗ ಗುರುತಿಸಿದ ಜನರು ‘ಏನ್ ಅಣ್ಣಾವ್ರೆ, ನೀವು ಇಲ್ಲಿ ನಮ್ಮಂಗೇ ನಿಂತಿದ್ದೀರಿ. ನಿಜವಾಗ್ಲೂ ನಿಮ್ಮಲ್ಲೇ ದೇವರನ್ನು ನೋಡಿದಂಗಾಯ್ತು’ ಎಂದರಂತೆ. ಈ ಘಟನೆಯನ್ನು ನೆನೆಯುತ್ತ ರಾಜಕುಮಾರ್ ಅವರು ನನಗೊಮ್ಮೆ ಹೇಳಿದರು: ‘ಆ ಜನರು ನನ್ನಲ್ಲೇ ದೇವರನ್ನು ಕಾಣಬೇಕಾದ್ರೆ ಅವ್ರಲ್ಲೂ ದೇವರಿರಬೇಕು. ಅವರಲ್ಲಿ ದೇವರು ಇರೋದ್ರಿಂದ್ಲೇ ನನ್ನಲ್ಲಿ ದೇವರನ್ನು ಕಂಡರು. ಅವತ್ತೆ ನನಗನ್ನಿಸಿತು – ಈ ಜನರೇ ದೇವರು ಅಂತ. ಹಾಗಾಗಿ ನಾನು ಅಭಿಮಾನಿ ದೇವರುಗಳೇ – ಅಂತ ಸಂಬೋಧನೆ ಮಾಡಲು ಶುರುಮಾಡಿದೆ. ನಿಜವಾಗ್ಲೂ ನನ್ನ ದೇವರುಗಳು ಅವರೇ. ಈ ದೇವಸ್ಥಾನ, ಪೂಜೆ ಎಲ್ಲಾ ಸುಮ್ಮನೆ ಸಂಕೇತ ಅಷ್ಟೆ. ಅವೆಲ್ಲ ಏನೂ ಪ್ರಯೋಜನ ಇಲ್ಲ. ತೋರಿಕೆ ಎಲ್ಲಾ ತೋರಿಕೆ.’

ಡಾ.ರಾಜಕುಮಾರ್ ಅವರು ಮೊಟ್ಟಮೊದಲು ‘ಅಭಿಮಾನಿ ದೇವರುಗಳೇ’ ಎಂದು ಬಹಿರಂಗವಾಗಿ ಸಂಬೋಧಿಸಿದ್ದು ಅವರಿಗೆ ‘ಕರ್ನಾಟಕ ರತ್ನ’ ಗೌರವ ಪ್ರದಾನ ಮಾಡಿದ ಸಮಾರಂಭದಲ್ಲಿ.
ಕನ್ನಡ ಸಾಹಿತ್ಯ ಕ್ಷೇತ್ರದ ಶಿಖರ ಪ್ರಾಯ ಚೇತನವಾದ ಕುವೆಂಪು ಅವರು ನಿಸರ್ಗದಲ್ಲಿ ದೇವರನ್ನು ಕಂಡರೆ, ಕನ್ನಡ ಚಲನಚಿತ್ರ ಕ್ಷೇತ್ರದ ಶಿಖರಪ್ರಾಯ ಪ್ರತಿಭೆಯಾದ ರಾಜಕುಮಾರ್, ಅಭಿಮಾನಿ ಜನರಲ್ಲಿ ದೇವರನ್ನು ಕಂಡರು. ಕುವೆಂಪು ಸಾಹಿತ್ಯ ಕ್ಷೇತ್ರವನ್ನು ಮೀರಿ ಸಾಂಸ್ಕೃತಿಕ ನಾಯಕರಾದಂತೆ ರಾಜಕುಮಾರ್ ಸಿನಿಮಾ ಕ್ಷೇತ್ರವನ್ನು ಮೀರಿದ ಸಾಂಸ್ಕೃತಿಕ ನಾಯಕರಾಗಿ ಬೆಳೆದರು. ಜನರು ಇವರನ್ನು ಕೇವಲ ಸಿನಿಮಾ ನಟರೆಂದು ಗೌರವಿಸಲಿಲ್ಲ. ಇವರೂ ಕೇವಲ ಸಿನಿಮಾ ನಟರಾಗಿ ಉಳಿಯಲಿಲ್ಲ. ಗೋಕಾಕ್ ಚಳುವಳಿಯನ್ನೂ ಒಳಗೊಂಡಂತೆ ಕನ್ನಡನಾಡು- ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದರು. ಭೂಕಂಪ ಪೀಡಿತರಿಗೆ ಸ್ವಂತ ಹಣ ಕೊಟ್ಟುದ್ದಲ್ಲದೆ ಬೀದಿಗೆ ಬಂದು ಹಣ ಸಂಗ್ರಹ ಮಾಡಿದರು. ಜೊತೆಯ ಕಲಾವಿದರು ಸಂಕಷ್ಟದಲ್ಲಿದ್ದಾಗ ಹಣ ಸಹಾಯ ಮಾಡಿ ಪ್ರಚಾರ ಮಾಡಿಕೊಳ್ಳದೆ ಮನದಲ್ಲೇ ಮಿಡಿದರು. ಸಹಾಯ ಮಾಡಿದ್ದು ಸ್ವಪ್ರಚಾರದ ಸಾಧನ ಆಗಬಾರದೆಂದು ಅವರು ಭಾವಿಸಿದ್ದರು. ಅರವತ್ತರ ದಶಕದಲ್ಲಿ ಕರ್ನಾಟಕದ ಜನರು ಪ್ರವಾಹ ಪೀಡಿತರಾದಾಗ ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಸೇರಿ ನಾಡಿನುದ್ದಕ್ಕೂ ಪ್ರವಾಸ ಮಾಡಿದರು; ಹಣ ಸಂಗ್ರಹ ಮಾಡಿ ಪ್ರವಾಹ ಪರಿಹಾರ ನಿಧಿಗೆ ಅರ್ಪಿಸಿದರು. ಈ ಸಾಮಾಜಿಕ ಕಾಳಜಿಯ ಕ್ರಿಯೆಯಲ್ಲಿ ನಾಯಕತ್ವ ನೀಡಿದವರು ಡಾ.ರಾಜಕುಮಾರ್.
ಡಾ.ರಾಜಕುಮಾರ್ ಅವರು ಚಿತ್ರಗಳಿಗಾಗಿ ಹಾಡಿದಾಗ ಬಂದ ಸಂಭಾವನೆಯ ಹಣವನ್ನು ಬೀದಿ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ನೀಡಿದರು. ರಸಮಂಜರಿ ಕಾರ್ಯಕ್ರಮ ನೀಡಿದಾಗ ಬಂದ ಸಂಭಾವನೆಯನ್ನು ಇದೇ ಕಾರ್ಯಕ್ಕೆ ನೀಡುತ್ತ ಬಂದರು. ಚಿತ್ರನಟನೆಗೆ ಹೊರತಾಗಿ ಬಂದ ಯಾವುದೇ ಹಣವನ್ನು ಸಾಮಾಜಿಕ ಕೆಲಸಗಳಿಗೆ ಕೊಡಬೇಕೆಂದು ಅವರು ಬಯಸಿದ್ದರು. ಅದರಂತೆ ಮನೆಯವರಲ್ಲಿ ಹೇಳಿದ್ದರು. ದಾದಾಫಾಲ್ಕೆ ಪ್ರಶಸ್ತಿಯಿಂದ ಬಂದ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟದ್ದನ್ನು ಸಾಂಕೇತಿಕವಾಗಿ ಉದಾಹರಿಸಬಹುದು. ಸಾಹಿತಿಗಳಾದಿಯಾಗಿ ಸಾಂಸ್ಕೃತಿಕ ಕ್ಷೇತ್ರದ ಎಲ್ಲರಿಗೂ ವಿಶೇಷ ಗೌರವ ತೋರುತ್ತ ಬಂದರು. ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವದಿಂದಲೇ ಹಿರಿಯರಾದರು.
ಮತ್ತೆ ‘ಭಕ್ತಿಭಾವ’ದ ವಿಷಯಕ್ಕೆ ಬರುತ್ತೇನೆ. ಅವರು ಹಾಡಿದ ಭಕ್ತಿಗೀತೆಗಳ ಧ್ವನಿಸುರಳಿಗಳು ಜನರ ಮನೆ-ಮನ ತಲುಪಿದವು. ನನ್ನಂಥವರು ದೇವರು – ಧರ್ಮಗಳ ವಿಷಯದಲ್ಲಿ ವಿರೋಧಿ ನೆಲೆಯಲ್ಲಿದ್ದರೂ ರಾಜಕುಮಾರ್ ಅವರು ‘ಸಾಂಸ್ಥಿಕ ಧರ್ಮ’ಕ್ಕೆ ನೆರವಾಗಲಿಲ್ಲವೆಂಬುದನ್ನು ಮೆಚ್ಚಬೇಕಾಗುತ್ತದೆ. ಯಾಕೆಂದರೆ ಇವತ್ತು ‘ಧರ್ಮ’ವು ಸಂಸ್ಥೆಯಾಗಿ ಜಡವಾಗಿದೆ. ಸಾಂಸ್ಥಿಕ ಧರ್ಮದ ಜಡಸೂತ್ರಗಳನ್ನು ಮೀರಿದ ಧಾರ್ಮಿಕತೆಯು ಒಂದು ಮನೋಧರ್ಮವಾಗಿದೆ. ಧಾರ್ಮಿಕ ಮನೋಧರ್ಮದ ಅನೇಕ ಜನಸಾಮಾನ್ಯರಿಗೆ ಸಾಂಸ್ಥಿಕ ಧರ್ಮದ ಸೂತ್ರಗಳು ಗೊತ್ತಿಲ್ಲ. ಅವರಲ್ಲಿರುವುದು ಭಕ್ತಿ ಮಾತ್ರ. ರಾಜಕುಮಾರ್ ಅವರಲ್ಲಿ ಇದ್ದುದು ಜನಸಾಮಾನ್ಯರಲ್ಲಿದ್ದ ಭಕ್ತಿ. ಇನ್ನೂ ಬಿಡಿಸಿ ಹೇಳಬೇಕೆಂದರೆ ಬೇಡರಕಣ್ಣಪ್ಪನ ಭಕ್ತಿ. ಧರ್ಮ, ಧಾರ್ಮಿಕತೆ, ಭಕ್ತಿ – ಇವುಗಳನ್ನು ಕುರಿತ ವಿಭಿನ್ನ ಚರ್ಚೆಗಳು ಸಾಧ್ಯವಿದ್ದರೂ ರಾಜಕುಮಾರ್ ಅವರ ಭಕ್ತಿ ಜನರನ್ನು ಒಡೆಯುವ ಸಾಧನವಾಗಲಿಲ್ಲ ಎಂಬುದು ಇಲ್ಲಿ ಮುಖ್ಯ. ಅವರಲ್ಲಿದ್ದ ಧಾರ್ಮಿಕತೆ ಕೋಮುವಾದಕ್ಕೆ ಕುಮ್ಕಕ್ಕು ಕೊಡಲಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬೇಕು. ಅಂತರಂಗಕ್ಕೆ ಸಂಬಂಧಿಸಿದ ಭಕ್ತಿಭಾವದಲ್ಲಿ ಮಾತ್ರ ಡಾ.ರಾಜಕುಮಾರ್ ಅವರಿಗೆ ನಂಬಿಕೆಯಿತ್ತು. ಜನಪದ ದೇವರುಗಳ ಬಗ್ಗೆ ವಿಶೇಷ ಆಸಕ್ತಿಯಿತ್ತು. ಅವರ ಗಾಯನದಲ್ಲಿ ಮೂಡಿದ ಮಲೆಮಹದೇಶ್ವರನನ್ನು ಕುರಿತ ಹಾಡುಗಳನ್ನು ಇಲ್ಲಿ ನೆನಯಬಹುದು.
ಬಹುಮುಖ್ಯವಾದ ಸಂಗತಿಯೆಂದರೆ, ತಮ್ಮ ದುಡಿಮೆಯ ಹಣವನ್ನು ರಾಜಕುಮಾರ್ ಅವರು ಸಾಮಾಜಿಕ ಕಾಳಜಿಯ ಕೆಲಸಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಕೊಟ್ಟಂತೆ, ದೇವಾಲಯಗಳಿಗೆ ಕೊಡಲಿಲ್ಲ. ದೇವಸ್ಥಾನ ಕಟ್ಟಿಸಲು, ದೇವರಿಗೆ ಕಿರೀಟ ಮಾಡಿಸಲು ಅವರ ಹಣ ಬಳಕೆಯಾಗಲಿಲ್ಲ. ಭಕ್ತಿ ಭಾವವಷ್ಟೇ ಮುಖ್ಯವಾಗಿತ್ತು. ‘ದೇಗುಲೀಕರಣ’ದ ಮೂಲಕ ಕೋಮುವಾದವನ್ನು ಬೆಳೆಸುತ್ತಿರುವ ಇಂದಿನ ದಿನಗಳಲ್ಲಿ ಈ ಅಂಶ ನನಗೆ ಮುಖ್ಯವೆನಿಸುತ್ತದೆ.

ಧರ್ಮ ಧುರೀಣರೆಲ್ಲ ಡಾ.ರಾಜಕುಮಾರ್ ಅವರನ್ನು ಸಮಾನವಾಗಿಯೇ ನಡೆಸಿಕೊಂಡರೆಂದು ಹೇಳಲಾಗದು. ಎಲ್ಲರೂ ಅವರಿಗೆ ಗೌರವ ಕೊಡತೊಡಗಿದ್ದು ಜನರು ಗೌರವಿಸತೊಡಗಿದ ಮೇಲೆ. ಇಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸಬೇಕು : ‘ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿ ಪಾತ್ರ ಮಾಡಲು ರಾಜಕುಮಾರ್ ಅವರನ್ನು ಆಯ್ಕೆ ಮಾಡಿದಾಗ ಕೆಲವು ಜಾತಿವಾದಿಗಳು ಬಹಿರಂಗವಾಗಿಯೇ ವಿರೋಧಿಸಿದರು. ಜಾತಿವ್ಯವಸ್ಥೆಯ ಬಿಸಿಗೆ ಆಗಾಗ್ಗೆ ತುತ್ತಾಗುತ್ತಲೇ ಅದನ್ನು ಅನಿವಾರ್ಯ ತುತ್ತು ಎಂದು ನುಂಗಿಕೊಂಡು ನಗುತ್ತ ವೃತ್ತಿ ಬದುಕನ್ನು ಸಾಗಿಸುತ್ತಿದ್ದ ರಾಜಕುಮಾರ್ ಅವರಿಗೆ ಬಹಿರಂಗವಾಗಿ ಎದುರಾದ ಜಾತಿವಾದಿಗಳ ಬಿರುನುಡಿಗಳು ಸಾಕಷ್ಟು ನೋಯಿಸಿದವು. ‘ಹಿಂದುಳಿದ ಜಾತಿಗೆ ಸೇರಿದ ಇವರಿಗೆ ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಲು ಯಾವ ಅರ್ಹತೆಯಿದೆ’ ಎಂಬಂಥ ಟೀಕೆ ಎದುರಾದಾಗ, ಯಾವತ್ತೂ ಜಾತಿಯ ಬಗ್ಗೆ ಯೋಚಿಸದೆ ಇದ್ದ ಮತ್ತು ಹಿಂದುಳಿದ ಜಾತಿ-ವರ್ಗಗಳನ್ನು ಸ್ವಹಿತಕ್ಕೆ ಬಳಸದೇ ಇದ್ದ ರಾಜಕುಮಾರ್ ಪ್ರತಿಭೆಯಿಂದಲೇ ಉತ್ತರ ಕೊಡಲು ಮುಂದಾದರು.
‘ಮಂತ್ರಾಲಯ ಮಹಾತ್ಮೆ’ ಚಿತ್ರ ಮುಗಿಯುವವರೆಗೆ ತಮಗೆ ತುಂಬ ಪ್ರಿಯವಾದ ಮಾಂಸಾಹಾರ ಬಿಟ್ಟಿದ್ದರು. ಕಾಲಿಗೆ ಚಪ್ಪಲಿ ಹಾಕಲಿಲ್ಲ. ಕಾಲಕಾಲಕ್ಕೆ ಉಪವಾಸ ವ್ರತ ಕೈಗೊಂಡರು. ಈ ಮಡಿವಂತಿಕೆಯ ಕ್ರಮ ನಮ್ಮಂಥವರಿಗೆ ಇಷ್ಟವಾಗದಿರಬಹುದು. ಸರಿಯೆನ್ನಿಸದೆ ಇರಬಹುದು. ಆದರೆ ಮಡಿವಂತಿಕೆಯ ಕ್ರಮಗಳಿಂದಲೇ ಮಡಿವಂತಿಕೆಯನ್ನು ಹತ್ತಿಕ್ಕುವ ಉತ್ತರಗಳಾಗಿ ಇವಕ್ಕೆ ಸಾಮಾಜಿಕ ಮಹತ್ವವಿದೆ. ನಮ್ಮಂಥವರಾದರೆ ಆ ಜಾತಿವಾದಿಗಳನ್ನು ವೇರವಾಗಿ ವಿರೋಧಿಸುತ್ತಿದ್ದೆವು. ರಾಜಕುಮಾರ್ ಅವರು ಜಾತಿವಾದದ ನಿಲುವುಗಳನ್ನು ನಿರರ್ಥಕಗೊಳಿಸಲು ಅವರದೇ ವಿಧಾನ ಮತ್ತು ತಮ್ಮದೇ ಆದ ಅನನ್ಯ ಪ್ರತಿಭೆಯನ್ನು ಬಳಸಿಕೊಂಡರು; ಗೆದ್ದರು.
ಡಾ.ರಾಜಕುಮಾರ್ ಅವರು ರಾಘವೇಂದ್ರ ಸ್ವಾಮಿ ಪಾತ್ರ ಮಾಡಬಾರದೆಂದು ಹೇಳಿದ್ದವರು ಆಮೇಲೆ ಬಾಯಿ ಮುಚ್ಚಿಕೊಂಡದ್ದು ನಿಜವಾದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕವಿದ್ದವರೊಬ್ಬರು ಮತ್ತೆ ‘ರಾಘವೇಂದ್ರ ವೈಭವ’ ಎಂಬ ಚಿತ್ರ ಮಾಡಿದರು. ಶ್ರೀನಾಥ್ ಅವರು ಮುಖ್ಯ ಪಾತ್ರ ವಹಿಸಿದ್ದರು. ಆದರೆ ಈ ಚಿತ್ರ ನೆಲಕಚ್ಚಿತು. ರಾಜಕುಮಾರ್ ಅವರ ಅಭಿನಯದ ‘ಭಕ್ತ ಪುರಂದರದಾಸ’ ಚಿತ್ರ ತೆರೆಕಂಡ ಮೇಲೆ ಮತ್ತೊಬ್ಬರು ಕೆ.ಎಸ್.ಅಶ್ವಥ್ ಅವರನ್ನು ಹಾಕಿಕೊಂಡು ‘ಶ್ರೀ ಪುರಂದರದಾಸರು’ ಚಿತ್ರ ತೆಗೆದರು. ಇದು ಸಹ ಯಶಸ್ವಿಯಾಗಲಿಲ್ಲ. ಯಶಸ್ವಿಯಾದದ್ದು ಜಾತಿಯನ್ನು ಮೀರಿ ಬೆಳೆದ ರಾಜಕುಮಾರ್ ಅವರ ಅಭಿನಯದ ಚಿತ್ರಗಳು. ಇದು ರಾಜಕುಮಾರ್ ಮತ್ತು ಸಾಮಾನ್ಯ ಕನ್ನಡಿಗರು ನಾಡಿಗೆ ನೀಡಿದ ಮೌನ ಸಂದೇಶವೆಂದೇ ನನ್ನ ತಿಳುವಳಿಕೆ.
ಈ ಹಿನ್ನೆಲೆಯಲ್ಲಿ ರಾಜಕುಮಾರ್ ಅವರನ್ನು ಮೆಚ್ಚಿಕೊಳ್ಳಲು ಇನ್ನಷ್ಟು ಕಾರಣಗಳಿವೆ. ರಾಜಕುಮಾರ್ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ವಲಯದಿಂದ ಬಂದವರು. ಶೈಕ್ಷಣಿಕವಾಗಿಯೂ ಹಿಂದುಳಿದವರು. ಮೂರನೇ ತರಗತಿಯನ್ನೂ ಪೂರೈಸದ ಇವರು ಕಲಿತದ್ದು ಕಲೆಯ ಮೂಲಕ; ಬದುಕಿನ ಮೂಲಕ. ಜಾತಿ ಮತ್ತು ವರ್ಗವ್ಯವಸ್ಥೆಯ ಕರಾಳತೆ ಪ್ರಖರವಾಗಿರುವ ನಮ್ಮ ಸಾಮಾಜಿಕ ಸಂದರ್ಭದಲ್ಲಿ ನಿರ್ಲಕ್ಷಿತ ಸಾಮಾಜಿಕ-ಆರ್ಥಿಕ ವಲಯದಿಂದ ಬಂದವರೂ ಮೂರನೇ ತರಗತಿಯನ್ನೂ ಮುಗಿಸದೆ ಇರುವವರೂ ಆದ ರಾಜಕುಮಾರ್ ದೇಶದ ದೊಡ್ಡ ಪ್ರತಿಭೆಯಾಗಿ ಬೆಳೆದದ್ದೇ ಒಂದು ಅನನ್ಯ ಸಾಧನೆ. ‘ದೊಡ್ಡ’ ಜಾತಿಯ ಹಿನ್ನೆಲೆಯಿಲ್ಲ; ಶ್ರೀಮಂತಿಕೆಯ ಬೆಂಬಲವಿಲ್ಲ. ಶಿಕ್ಷಣದ ಒತ್ತಾಸೆಯಿಲ್ಲ. ಪ್ರತಿಭೆ; ಕೇಲವ ಪ್ರತಿಭೆ. ಅದಕ್ಕೆ ತಕ್ಕುದಾದ ಶ್ರದ್ಧೆ; ಶ್ರಮ; ಸಂಕಲ್ಪ; ಇವುಗಳಿಂದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಕರಾಳ ಕಟ್ಟಳೆಗಳನ್ನು ಮೀರಿ ಬೆಳೆದದ್ದು ರಾಜಕುಮಾರ್ ಅವರ ಅಸಾಧಾರಣ ಹಾದಿ. ರಾಜಕುಮಾರ್ ಕಲೆಯನ್ನು ಕಸುಬು ಎಂದುಕೊಂಡರು.
‘ಕಲಾ ಸೇವೆ ಮಾಡ್ತೇನೆ ಅನ್ನೋದೆಲ್ಲ ಬರೀ ಮಾತು, ಹೊಟ್ಟೆಪಾಡಿಗಾಗಿ ಅಭಿನಯ ಮಾಡ್ತಾ ಬಂದೆ. ಅಭಿನಯ ಕಲೆ ಅನ್ನೋದೆಲ್ಲ ಬರೀ ಮಾತು, ಹೊಟ್ಟೆಪಾಡಿಗಾಗಿ ಅಭಿನಯ ಮಾಡ್ತಾ ಬಂದೆ. ಅಭಿನಯ ಕಲೆ ನನ್ನ ಕಸುಬು, ಆಮೇಲೆ ಹಾಡಿದೆ, ಅದೂ ನನ್ನ ಕಸುಬು. ಹೀಗಾಗಿ ಕಲೆ ಅನ್ನೋದು ನನ್ನ ಪಾಲಿಗೆ ಕಸುಬು. ನನಗೆ ಗೊತ್ತಿರೋದು ಅದೊಂದೇ ಅದನ್ನ ಮಾಡ್ತಾ ಬಂದೆ. ಮೊದಲು ರಂಗಭೂಮೀಲಿ, ಆಮೇಲೆ ಚಿತ್ರಂಗದಲ್ಲಿ’ – ಇದು ಡಾ.ರಾಜಕುಮಾರ್ ಅವರ ಅಂತರಾಳದ ಮಾತು. ಕಲೆಯನ್ನು ಕಸುಬು ಎಂದುಕೊಂಡು ಬಾಳಿದವರು ಶ್ರಮಜೀವಿ ವಲಯದಿಂದ ಬಂದ ಜನಪದ ಕಲಾವಿದರು. ರಾಜಕುಮಾರ್ ಅವರು ಸಹ ಶ್ರಮಜೀವಿ ವಲಯದಿಂದ ಬಂದವರು; ಒಪ್ಪೊತ್ತಿನ ಊಟಕ್ಕಾಗಿ ಕಡು ಕಷ್ಟಗಳನ್ನು ಅನುಭವಿಸಿದರು; ಕಲೆಯನ್ನು ನಂಬಿ ಹಸಿವಿಗೆ ಉತ್ತರ ಹುಡುಕಿದವರು. ಹೀಗಾಗಿ ಅವರನ್ನು ನಾನು ‘ಬಂಗಾರದ ಮನುಷ್ಯ’ ಎನ್ನುವ ಬದಲು ‘ಬೆವರಿನ ಮನುಷ್ಯ’ ಎಂದು ಕರೆಯುತ್ತ ಬಂದಿದ್ದೇನೆ. ಅವರಿಗೆ ಬೆವರಿನ ಬೆಲೆ ಗೊತ್ತಿತ್ತು. ಬಡತನದ ಬೇಗೆ, ಭಾವನೆಗಳ ಭಾಗವಾಗಿತ್ತು. ಹೀಗಾಗಿ ಅವರಲ್ಲಿದ್ದ ‘ಭಕ್ತಿ’ಗೂ ಬೆವರಿನ ಆಯಾಮ ಲಭ್ಯವಾಗಿತ್ತು.
ಹಾಗಾದರೆ ಚಿತ್ರರಂಗದಿಂದ ಗಳಿಸಿದ ಶ್ರೀಮಂತಿಕೆಯ ಬಗ್ಗೆ ಏನು ಹೇಳುತ್ತೀರಿ? ಎಂದು ಕೇಳಬಹುದು. ಈ ಪ್ರಶ್ನೆ ಸಹಜವೂ ಹವದು. ವಿಶೇಷವೆಂದರೆ, ರಾಜಕುಮಾರ್ ಅವರು ಸಂಪತ್ತನ್ನು ಗಳಿಸಿದ ಮೇಲೆಯೂ ಅದಕ್ಕೆ ಸವಾಲಾಗುವಂತೆ ಸರಳತೆಯನ್ನು ರೂಢಿಸಿಕೊಂಡರು. ಜೇಬಲ್ಲಿ ಹಣ ಇಡಲಿಲ್ಲ. ತಮಗೆ ಬರುವ ಸಂಭಾವನೆಯನ್ನು ಎಣಿಸಲಿಲ್ಲ. ಐದು ನೂರು, ಸಾವಿರ ನೋಟುಗಳು ಹೇಗಿವೆಯೆಂದು ನೋಡಲಿಲ್ಲ. ಆರಂಭದ ದಿನಗಳಲ್ಲಿ ಇವರಷ್ಟೇ ಸರಳವಾದ ಕಿರಿಯ ಸೋದರ ವರದರಾಜು ಅವರು ವ್ಯವಹಾರಗಳನ್ನು ನೋಡಿಕೊಂಡರು. ಅನಂತರ ಪತ್ನಿ ಪಾರ್ವತಮ್ಮನವರೇ ವ್ಯವಹಾರದ ಚುಕ್ಕಾಣಿ ಹಿಡಿದರು. ರಾಜಕುಮಾರ್ ಕಲೆಯ ಕಸುಬುದಾರರಾಗಿ ಪೂರ್ಣ ತೊಡಗಿಸಿಕೊಂಡರು. ತಾನು ಕೇಲವ ಕಲೆಯ ಕಸುಬುದಾರ ಎಂದು ಭಾವಿಸಿದರು. ಶ್ರೀಮಂತಿಕೆಯ ಸೋಂಕು ತಗುಲದಂತೆ ವೈಯಕ್ತಿಕ ಎಚ್ಚರ ವಹಿಸಿದರು. ಸರಳ ಉಡುಪು, ಸೌಜನ್ಯದ ನಡವಳಿಕೆ, ಸಜ್ಜನಿಕೆಯ ದಾರಿ, ನೈತಿಕ ಮಾದರಿ – ಇವೇ ಅವರ ದಾರಿ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಅವರು ಅಹಂಕಾರ ಪಡಲಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ಸಾಮಾನ್ಯ ಶ್ರಮಜೀವಿಗಳೊಂದಿಗೆ ಒಟ್ಟಿಗೇ ಕೂತು ಊಟ ಮಾಡುತ್ತಿದ್ದ ಏಕೈಕ ನಾಯಕನಟ ಎಂದರೆ – ರಾಜಕುಮಾರ್. ಸಹಪಂಕ್ತಿ ಭೋಜನದ ಮೂಲಕ ಚಿತ್ರೀಕರಣದ ವೇಳೆಯಲ್ಲಿ ಸಮಭಾವದ ವಾತಾವರಣ ನಿರ್ಮಾಣ ಮಾಡುತ್ತ ಬಂದದ್ದು ಒಂದು ಕಡೆ; ಯಾವತ್ತೂ ಹಣದ ಕಾರಣಕ್ಕೆ ನಿರ್ಮಾಪಕರಿಗೆ ತೊಂದರೆ ಕೊಡದ ಕಲಾವಿದ ಮನಸ್ಸು ಇನ್ನೊಂದು ಕಡೆ. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಹಾಜರಾಗುವ ಕರ್ತವ್ಯನಿಷ್ಠೆ ಮತ್ತೊಂದು ಕಡೆ; ಜೊತೆಗೆ ಕಿಂಚಿತ್ತು ಕಳಂಕವಿಲ್ಲದೆ ಕಲೆಯ ಕಸುಬು. ಯಶಸ್ಸಿಗೆ ಇನ್ನೇನು ಬೇಕು?
‘ಡಾ.ರಾಜಕುಮಾರ್ ಅವರು ನೆಲದ ಮೇಲೆ ಹಾಸಿಗೆ ಹಾಸಿ ಮಲಗುತ್ತಿದ್ದರೆಂದರೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಮದ್ರಾಸಿನಲ್ಲಿದ್ದಾಗ ಬೆಲೆ ಬಾಳುವ ಮಂಚವೊಂದನ್ನು ಖರೀದಿಸಿ ಮನೆಗೆ ತಂದರಂತೆ. ಅದರ ಮೇಲೆ ಮಲಗಿದಾಗ ನಿದ್ದೆಯೇ ಬರಲಿಲ್ಲವಂತೆ. ಹೊಸಮಂಚ, ಮುಂದೆ ಅಭ್ಯಾಸವಾಗುತ್ತದೆ ಎಂದುಕೊಂಡರು. ಮಾರನೇ ದಿನವೂ ಅದೇ ಅನುಭವ. ಎಷ್ಟು ಕಷ್ಟಪಟ್ಟರೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಎದ್ದರು; ಕೂತರು; ಮತ್ತೆ ಮಲಗಿದರು; ಇಲ್ಲ, ಸರಿಯಾಗಿ ನಿದ್ದೆ ಬರಲೇ ಇಲ್ಲ. ಇದೇ ರೀತಿಯಾಯಿತು. ಆಗ ಅವರಿಗೆ ಅರಿವಾಯಿತು – ಅವರ ಮನಸ್ಸು ಒಣ ಶ್ರೀಮಂತಿಕೆಯ ಜೊತೆ ಹೊಂದಿಕೊಳ್ಳಲು ಸಿದ್ಧವಾಗಿಲಿಲ್ಲ – ಎಂದು; ‘ಈ ಶ್ರೀಮಂತ ಮಂಚ ನನ್ನದಲ್ಲ’ ಎಂದು ನಿರ್ಧರಿಸಿದರು. ಮೂರು ದಿನ ಮಂಚದ ಮೇಲೆ ತಳಮಳಿಸಿ ಅನಂತರ ನೆಲವೇ ನನ್ನ ನೆಲೆಯೆಂದು ಭಾವಿಸಿ ಮಂಚದ ಮೇಲೆ ಮಲಗುವುದನ್ನು ಬಿಟ್ಟರು. ಹೊರಗೆ ಹೋದಾಗ ಮಾತ್ರ ಮಂಚ. ಮನೆಯಲ್ಲಿ ನೆಲ. ಆಗ ಸುಖವಾದ ನಿದ್ದೆ. ಕೇವಲ ಸರಳತೆಯಲ್ಲ. ಶ್ರೀಮಂತಿಕೆಯ ಸವಲತ್ತುಗಳಿಗೆ ದಾಸನಾಗದೆ ಇರಲು ನಡೆಸಿದ ಆಂತರಿಕ ಹೋರಾಟದ ಫಲ. ಇತ್ತೀಚಿನ ವರ್ಷಗಳಲ್ಲಂತೂ ಅವರು ಸದಾ ಬಸವಣ್ಣ, ಅಲ್ಲಮ, ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮುಂತಾದವರ ವಚನಗಳಣ್ನು ಮಾತಿನ ಮಧ್ಯೆ ಸಾಕಷ್ಟು ಹೇಳುತ್ತಿದ್ದರು. ಕನಕದಾಸ, ಸರ್ವಜ್ಞರೂ ಬಂದು ಹೋಗುತ್ತಿದ್ದರು. ಅನೇಕ ತತ್ವಪದಗಳನ್ನು ಉಲ್ಲೇಖಿಸುತ್ತಿದ್ದರು. ಅವರ ಸರಳತೆ, ಸಜ್ಜನಿಕೆಗಳು ಸಂತನ ರೂಪಾಂತರವನ್ನು ಪಡೆಯುತ್ತ ಬಂದವು. ರಾಜಕುಮಾರ್ ‘ಸಂತ ಮನಸ್ಸಿನ ಮನುಷ್ಯ’ರಾಗುತ್ತ ಬಂದರು.
ಡಾ.ರಾಜಕುಮಾರ್ ಅವರೊಳಗೆ ಮೂಲದ ‘ಮುತ್ತುರಾಜ್’ ಸದಾ ಜೀವಂತವಾಗಿದ್ದುದು ಅವರ ವ್ಯಕ್ತಿತ್ವದ ಬಹುಮುಖ್ಯ ವಿಶಿಷ್ಟತೆ. (ಮುತ್ತುರಾಜ್ – ರಾಜಕುಮಾರ್ ಅವರ ಮೂಲ ಹೆಸರು). ಬದುಕಿನ ಬೆಂಕಿಯಲ್ಲಿ ಹಾದು ಬಂದವರು – ಮುತ್ತುರಾಜ್. ಕಲಾವಿದನಾಗಿದ್ದರ ಜೊತೆಗೆ ಸಾಮಾಜಿಕ ಆರ್ಥಿಕ ಅನುಭವಗಳ ಮೂಸೆಯಲ್ಲಿ ಆಕಾರಗೊಂಡವರು – ಮುತ್ತುರಾಜ್. ಈ ಮುತ್ತುರಾಜ್ ಪ್ರಸಿದ್ಧ ಕಲಾವಿದರಾಗಿ ‘ಡಾ.ರಾಜಕುಮಾರ್’ ಆದರು. ಆದರೆ ಡಾ.ರಾಜಕುಮಾರ್ ಒಳಗೆ ಮುತ್ತುರಾಜ್ ಎಂಬ ಮನುಷ್ಯ ಬದುಕಿದ್ದ; ಸಾಕ್ಷಿಪ್ರಜ್ಞೆಯಾಗಿದ್ದ; ಅನುಭವಮಂಟಪವಾಗಿದ್ದ. ಡಾ.ರಾಜಕುಮಾರ್ ಅವರ ನಡೆ-ನುಡಿಯನ್ನು ನಿಯಂತ್ರಿಸುತ್ತಿದ್ದ; ಬೆಳೆಸುತ್ತಿದ್ದ; ಬಹಿರಂಗದ ಕಾಂತಿಗೆ ಅಂತರಂಗದ ಬೆಳಕಾಗಿದ್ದ.

ಅಂತರಂಗದಲ್ಲಿ ‘ಮುತ್ತುರಾಜ್’ ಇದ್ದಂತೆ ಬಹಿರಂಗದಲ್ಲಿ ಕಿರಿಯ ಸೋದರ ‘ವರದರಾಜ್’ ಇದ್ದರು. ಉತ್ತಮ ಹಾಸ್ಯನಟರಾಗಿದ್ದ ಇವರು ಅಣ್ಣ ರಾಜಕುಮಾರ್ ಅವರ ಕಲಾಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅನೇಕ ನಾಟಕಗಳು ಮತ್ತು ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ ಇವರು ಅಣ್ಣ ರಾಜಕುಮಾರ್ ಅವರಿಗೆ ಬೆಂಬಲವಾಗಿ ನಿಂತು ಆತ್ಮೀಯ ಮಾರ್ಗದರ್ಶಿಯಾದರು. ತಮ್ಮ ನಟನೆಯನ್ನು ಬಿಟ್ಟರು. ಅಣ್ಣನ ಅಭ್ಯುದಯದಲ್ಲಿ ಆನಂದ ಕಂಡರು. ಒಳಗಿನ ಮುತ್ತುರಾಜ್ ಮತ್ತು ಹೊರಗಿನ ವರದರಾಜ್ – ಇಬ್ಬರೂ ಡಾ.ರಾಜಕುಮಾರ್ ಅವರ ವ್ಯಕ್ತಿತ್ವ ವಿಕಾಸದ ಪ್ರಮುಖ ಪ್ರೇರಕರು. ಮುಂದೆ ಆರ್ಥಿಕ ಬದುಕಿನ ಭದ್ರತೆಯಲ್ಲಿ ಪಾರ್ತತಮ್ಮನವರ ಪಾತ್ರ ಹಿರಿದು.
ಬಹುದೊಡ್ಡದಾಗಿ ಬೆಳೆದ ವ್ಯಕ್ತಿತ್ವಕ್ಕೆ ಗೌರವ ಕೊಡಲು ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಜನಪ್ರಿಯ ಸಂಸ್ಕೃತಿಯ ಭಾಗವಾದ ಸಿನಿಮಾ ಜಗತ್ತಿನಲ್ಲಿ ‘ಅಣ್ಣ’ ಎಂದು ಕರೆಯುವುದೂ ಕಾಲಿಗೆ ಬಿದ್ದು ಗೌರವ ಸೂಚಿಸುವುದೂ ಒಂದು ರೂಢಿ. ಇದು ರಾಜಕುಮಾರ್ ಅವರ ವಿಷಯದಲ್ಲೂ ನಿಜ. ಆದರೆ ತನ್ನನ್ನು ‘ಅಣ್ಣ’ ಎನ್ನಬೇಕೆಂದೂ ಕಾಲಿಗೆ ಬೀಳಬೇಕೆಂದೂ ಅವರೆಂದೂ ಅಪೇಕ್ಷಿಸಿರಲಿಲ್ಲ. ‘ಸ್ಟಾರ್ ವ್ಯಾಲ್ಯೂ’ ಎಂಬ ಪ್ರತಿಷ್ಠೆಯ ಪರಿಭಾಷೆಯೊಳಗೆ ಇವೆಲ್ಲ ಸಾಮಾನ್ಯವೆಂಬಂತೆ ನಡೆದುಬಿಡುತ್ತವೆ; ಆರಂಭದಲ್ಲಿ ಗೌರವ ಸೂಚಕವಾಗುತ್ತ ಆನಂತರ ರೂಢಿಯಾಗುತ್ತವೆ; ಅಭಿನಯವೂ ಆಗುತ್ತವೆ. ಇದೆಲ್ಲ ರಾಜಕುಮಾರ್ ಅವರಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಕೆಲವು ವರ್ಷಗಳ ಹಿಂದೆ, ನನ್ನ ಮತ್ತು ಅವರ ಪರಿಚಯದ ಆರಂಭದಲ್ಲಿ ನಾನು ಹೇಳಿದೆ : ‘ಸರ್, ನನಗೆ ಕಾಲಿಗೆ ಬಿದ್ದು ಅಭ್ಯಾಸವಿಲ್ಲ. ಹಾಗಂತ ಗೌರವ ಇಲ್ಲ ಅಂತ ಅಲ್ಲ. ನೀವು ತಪ್ಪು ತಿಳೀಬಾರ್ದು. ಮೊದ್ಲೇ ಹೇಳ್ತಿದೀನಿ’ ಎಂದೆ. ಆಗ ಅವರು ನಕ್ಕು ನುಡಿದರು : ‘ನಿಮ್ಮ ಮುಖ ನೋಡಿದ್ರೆ ಗೊತ್ತಾಗಲ್ವ ಸಾರ್. ಬಂಡಾಯದ ಕಳೆ ಇದೆ ಅಲ್ಲಿ. ಪ್ರೀತಿ-ಗೌರವ ಅನ್ನೋದು ಕಾಲಿಗ್ ಬೀಳೋದ್ರಲ್ಲಿಲ್ಲ. ಇಲ್ಲಿ, ಇಲ್ಲಿರ್ಬೇಕು’ ಎಂದು ಎದೆ ಮುಟ್ಟಿಕೊಂಡು ಹೇಳಿದರು. ‘ಕಾಲಿಗ್ ಬಿದ್ದೋರೆಲ್ಲ ಗೌರವ ತೋರಿಸ್ತಾರೆ ಅಂತ ನಾನ್ಯಾಕೆ ಅಹಂಕಾರ ಪಡ್ಲಿ, ಎಲ್ಲಾ ಒಳಗಿರ್ಬೇಕು, ಎದೆ ಒಳಗೆ’ ಎನ್ನುತ್ತ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಹೀಗೆ ಆರಂಭವಾದ ಪರಿಚಯ ಮುಂದೆ ಮನಬಿಚ್ಚಿ ಮಾತಾಡುವ ಆತ್ಮೀಯತೆಯಾಯಿತು. ನನ್ನ ನೇರ ಸ್ವಭಾವವನ್ನು ಅವರೆಂದೂ ಅಪಾರ್ಥ ಮಾಡಿಕೊಳ್ಳಲಿಲ್ಲ. ಆದರೆ ರಾಜಕುಮಾರ್ ಅವರನ್ನು ಅಪಾರ್ಥ ಮಾಡಿ, ವಿಘ್ನ ಸಂತೋಷ ಪಟ್ಟ ಸಿನಿಕರು ನಮ್ಮಲ್ಲಿದ್ದಾರೆ. ಇಂಥವರು ಕುವೆಂಪು ಅವರಂಥ ಮಹಾಕವಿಯನ್ನೂ ಬಿಟ್ಟಿರಲಿಲ್ಲ. ರಾಜಕುಮಾರ್ ಅವರಂಥ ಮಹಾನ್ ಕಲಾವಿದರನ್ನೂ ಬಿಡಲಿಲ್ಲ.
ವೈಯಕ್ತಿಕ ಮತ್ತು ಸಾಮಾಜಿಕ ಅಸಹನೆಗಳನ್ನು ಎದುರಿಸಿಯೇ ಅನೇಕರು ಬೆಲೆಯಬೇಕಾದ ಸನ್ನಿವೇಶ ನಮ್ಮದು. ಆದರೆ ಅಪಕ್ವ, ಅತಾರ್ಕಿಕ, ಅಪ್ರಬುದ್ಧ ಅಂಶಗಳು ತಾನಾಗಿಯೇ ಮೂಲೆ ಸೇರುವಂತೆ ಮಾಡಿದ ಮೌನಶಕ್ತಿಯ ಮಹಾನ್ ಪ್ರತಿಭೆಗಳು ನಮ್ಮಲ್ಲಿವೆ. ಅಂಥ ಪ್ರಮುಖ ಸಮಕಾಲೀನ ಶಕ್ತಿಗಳಲ್ಲಿ ರಾಜಕುಮಾರ್ ಪ್ರಮುಖರು. ರಾಜಕುಮಾರ್ ಅವರು ಅದ್ಭುತ ಕಲಾವಿದರು, ನಿಜ. ಆದರೆ ಚಿತ್ರರಂಗಕ್ಕೆ ಏನು ಮಾಡಿದರು? – ಎಂದು ಕೆಲವರು ಕೇಳುವುದುಂಟು; ನನ್ನದೊಂದು ಪ್ರಶ್ನೆಯಿದೆ. ಪುಸ್ತಕ ಬರೆಯುವವರೆಲ್ಲ ಪ್ರಿಂಟಿಂಗ್ ಪ್ರೆಸ್ ಇಡಬೇಕೆ? ಪುಸ್ತಕ ಬರೆಯುವುದೇ ಪುಸ್ತಕೋದ್ಯಮಕ್ಕೆ ಪೂರಕವಲ್ಲವೆ? ಅದೇ ರೀತಿ ಕಲಾವಿದರೆಲ್ಲ ಸ್ಟುಡಿಯೋ ಕಟ್ಟಬೇಕೆ? ಅಭಿನಯದ ಮೂಲಕ ಚಿತ್ರಮಂದಿರಕ್ಕೆ ಜನರು ಬರುವಂತೆ ಮಾಡುವುದೇ ಚಿತ್ರೋದ್ಯಮಕ್ಕೆ ಪೂರಕವಲ್ಲವೆ? ಖ್ಯಾತ ಕಾದಂಬರಿಕಾರರಾದ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳಿಂದ ಕನ್ನಡದಲ್ಲಿ ಓದುವ ಅಭಿರುಚಿ ವಿಸ್ತಾರವಾಯಿತು. ಅಷ್ಟೇ ಅಲ್ಲ ಸದಭಿರುಚಿಯ ನಿರ್ಮಾಣವಾಯಿತು. ಇದು ಸಂಸ್ಕೃತಿಯ ಕೆಲಸವಲ್ಲವೆ?
ಅನೇಕರಿಗೆ ಗೊತ್ತಿಲ್ಲದ ಒಂದು ವಿಷಯವನ್ನು ತಿಳಿಸಬಯಸುತ್ತೇನೆ. ಹಿರಿಯ ನಟ ಟಿ.ಎನ್.ಬಾಲಕೃಷ್ಣ ಅವರು ನಿರ್ಮಿಸಿದ ಅಭಿಮಾನ್ ಸ್ಟುಡಿಯೋಗೆ ಆರಂಭದಲ್ಲಿ ರಾಜಕುಮಾರ್ ಅವರೂ ಒಬ್ಬ ಪಾಲುದಾರರಾಗಿದ್ದರು. ಆದರೆ ವ್ಯವಹಾರದಲ್ಲಿ ಕೆಟ್ಟ ಹೆಸರು ಬಂದೀತೆಂಬ ನೈತಿಕ ಅಳುಕಿನಿಂದ ಆರಂಭದ ದಿನಗಳಲ್ಲೇ ಪಾಲುದಾರಿಕೆಯಿಂದ ಹಿಂದಕ್ಕೆ ಬಂದರು. ಆದರೆ ತಮ್ಮ ಪಾಲಿನ ಹಣವನ್ನು ಹಿಂದಕ್ಕೆ ಪಡೆಯಲಿಲ್ಲ. ಹೆಸರನ್ನು ಮಾತ್ರ ಹಿಂದಕ್ಕೆ ಪಡೆದರು. ಕೆಲವರ ಸ್ವಭಾವಕ್ಕೆ ಒಗ್ಗದ ವಿಷಯಗಳಿರುತ್ತವೆ. ಅವುಗಳನ್ನು ಮಾಡಬೇಕೆಂದು ಒತ್ತಾಯಿಸುವ ಬದಲು ಸಾಮಾಜಿಕ ಜವಾಬ್ದಾರಿಯ ನಡವಳಿಕೆಯನ್ನು ನಿರೀಕ್ಷಿಸುವುದು ಸರಿ. ಎನ್.ಟಿ.ಅರ್. ಮತ್ತು ಎಂ.ಜಿ.ಆರ್ ರಾಜಕೀಯ ಕ್ಷೇತ್ರಕ್ಕೆ ಬಂದರು. ಡಾ.ರಾಜಕುಮಾರ್ ಬರಲಿಲ್ಲ. ಯಾರನ್ನೂ ಆಕ್ಷೇಪಿಸುವಂತಿಲ್ಲ. ಅದು ಅವರವರ ಆಲೋಚನೆ ಮತ್ತು ಸ್ವಭಾವಕ್ಕೆ ಸಂಬಂಧಪಟ್ಟ ಸಂಗತಿ. ಡಾ.ರಾಜಕುಮಾರ್ ಅವರು ಡಬ್ಬಿಂಗ್ ಚಿತ್ರಗಳ ವಿರುದ್ಧ ಚಳುವಳಿ ಹೂಡಿದ್ದು, ಗೋಕಾಕ್ ಚಳವಳಿಯ ಮುಂಚೂಣಿಗೆ ಬಂದು ಶಕ್ತಿ ತುಂಬಿದ್ದು ಕನ್ನಡಕ್ಕೆ ಧಕ್ಕೆಯಾದಾಗಲೆಲ್ಲ ಬೀದಿಗಿಳಿದಿದ್ದು –ಸಾಮಾನ್ಯ ಸಂಗತಿಗಳಲ್ಲ. ಅ.ನ.ಕೃ ಅವರು ಒಂದು ಮಾತು ಹೇಳಿದ್ದರು: ‘ಡಾ.ರಾಜಕುಮಾರ್ ಅವರು ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆಂದು ನಿರ್ಧಾರ ಮಾಡದಿದ್ದರೆ ಕನ್ನಡ ಚಿತ್ರರಂಗವೆಂಬ ಪ್ರತ್ಯೇಕ ಅಸ್ತಿತ್ವವೇ ಇರುತ್ತಿರಲಿಲ್ಲ.’
ಡಾ.ರಾಜಕುಮಾರ್ ಅವರನ್ನು ಅರ್ಥ ಮಾಡಿಕೊಳ್ಳಲು ಕೆಲವು ಘಟನೆಗಳನ್ನು ಹೇಳಬಯಸುತ್ತೇನೆ.
1) ನಾನು ರಾಜಕುಮಾರ್ ಅವರ ಸಂಸ್ಥೆಗಾಗಿ ಕೆಲಸ ಮಾಡಿದ ಒಂದೇ ಒಂದು ಚಿತ್ರ ‘ಜನುಮದ ಜೋಡಿ’. ಇದಕ್ಕಾಗಿ ನಾನು ಮೂರು ಹಾಡು ಬರೆದೆ. ಚಿತ್ರಕತೆ ರಚನೆಯಲ್ಲಿ ಭಾಗವಹಿಸಿದೆ. ಪೂರ್ಣವಾಗಿ ಸಂಭಾಷಣೆ ಬರೆದೆ. ಶ್ರೀಮತಿ ಪಾರ್ವತಮ್ಮನವರು ತಮ್ಮ ಸಂಸ್ಥೆಯ ಚಿತ್ರಗಳಿಗೆಲ್ಲ ಬರೆಯುವಂತೆ ಹೇಳಿದರು. ‘ನನಗೆ ಇಷ್ಟವಾಗುವ ಕಥಾ ವಸ್ತುವಿದ್ದರೆ ಮಾತ್ರ ಬರೆಯುತ್ತೇನೆ’ ಎಂದು ನಾನು ಹೇಳಿದಾಗ ಅವರು ತಪ್ಪು ತಿಳಿಯಲಿಲ್ಲ. ಒಂದುದಿನ ಮಾತನಾಡುತ್ತ ಕೂತಿದ್ದಾಗ ನಾನು ಕಾಲ ಮೇಲೆ ಕಾಲು ಹಾಕಿಕೊಂಡಿದ್ದೆ. ಎದುರಿಗೆ ರಾಜಕುಮಾರ್ ಅವರಿದ್ದರು. ಅವರ ಎದುರು ನಾನುಹಾಗೆ ಕೂತದ್ದು ಸರಿಯಲ್ಲ ಎನ್ನಿಸಿ ಮಾತಾಡುತ್ತಲೇ ಅರಿವಾಗದಂತೆ ಕಾಲನ್ನು ತೆಗೆದು ‘ಸರಿಯಾಗಿ’ ಕೂತೆ. ಇದನ್ನು ಹೇಗೋ ಗಮನಿಸಿದ ರಾಜಕುಮಾರ್ ಅವರಿಗೆ ನಾನು ಕಾಲು ತೆಗೆದದ್ದು ಸರಿಯೆನಿಸಲಿಲ್ಲ. ‘ಯಾಕ್ ಹಾಗ್ ಮಾಡಿದ್ರಿ? ಕಾಲ್ ಮೇಲ್ ಕಾಲು ಹಾಕ್ಕೊಂಡೇ ಕೂತ್ಕೊಳ್ಳಿ. ನಿಮಗೆ ಅದೇ ಕಂಫರ್ಟಬಲ್ ಅನ್ಸುತ್ತೆ. ನನ್ನ ನೋಡಿ ಇವ್ನ್ ಎದುರಿಗೆ ಕಾಲ್ ಮೇಲ್ ಕಾಲ್ ಹಾಕ್ಕೊಂಡ್ ಕೂತ್ರೆ ಹೆಂಗೊ ಏನೋ ಅಂತ ತೆಗೆದಿದ್ದೀರಿ ಅನ್ಸುತ್ತೆ. ದಯವಿಟ್ಟು ಮೊದಲ್ನಂಗೇ ಕೂತ್ಕೊಳ್ಳಿ. ನಾನ್ ಖಂಡಿತ ತಪ್ ತಿಳ್ಯಲ್ಲ’ ಎಂದು ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮೊದಲಿನಂತೆ ಕಾಲ ಮೇಲೆ ಕಾಲು ಹಾಕಿ ಕೂತೆ. ಆದರೆ ತುಂಬಾ ಅನ್ ಕಂಫರ್ಟಬಲ್ ಆಗಿತ್ತು! ಮತ್ತೆ ತೆಗೆದೆ.
2) ಡಾ.ರಾಜಕುಮಾರ್ ಅವರು ತಮ್ಮ ಬೆಂಗಾವಲಿಗಿರುವ ‘ಚನ್ನ’ ಎಂಬ ವ್ಯಕ್ತಿಯ ಜೊತೆ ವಾಕಿಂಗ್ ಹೋಗುತ್ತಿದ್ದರು. ರಾತ್ರಿ ಹೊತ್ತು. ಮುಖಕ್ಕೆ ಮಫ್ಲರ್ ಸುತ್ತಿಕೊಂಡು ಹೋಗುತ್ತಿದ್ದಾರೆ. ಸದಾಶಿವನಗರದ ಒಂದು ಬೀದಿ. ಹೊಸ ಮನೆ ಕಟ್ಟುತ್ತಿದ್ದಾರೆ. ಮನೆ ಕಟ್ಟುವ ಕಾರ್ಮಿಕರ ಗುಡಿಸಲು ಅಲ್ಲೇ ಇದೆ. ಗುಡಿಸಲಿನಿಂದ ಕೋಳಿಸಾರಿನ ಸುವಾಸನೆ ಬರುತ್ತಿದೆ. ಡಾ.ರಾಜಕುಮಾರ್ ಅವರು ಕ್ಷಣಕಾಲ ನಿಂತರು. ‘ಚನ್ನ, ಕೋಳಿಸಾರು ತುಬಾ ಚೆನ್ನಾಗಿ ಮಾಡಿದಾರೆ ಅನ್ಸುತ್ತೆ. ಇಂಥ ವಾಸನೆ ನನಗೆಂದೂ ತಟ್ಟೇ ಇಲ್ಲ. ಸ್ವಲ್ಪ ಊಟ ಹಾಕ್ತಾರೇನೋ ಕೇಳ್ತೀಯ?’ ಎಂದರು. ಆತ ಎಷ್ಟು ಬೇಡವೆಂದರೂ ಕೇಳಲಿಲ್ಲ. ‘ಕೆಲಸಗಾರರ ಗುಡಿಸಲಾದ್ರೇನು? ನಾವೂ ಹಂಗೇ ಇದ್ದೋರಲ್ವ? ಹೋಗಿ ಸುಮ್ನೆ ಕೇಳು’ ಎಂದರು. ಆತ ಗುಡಿಸಲಿಗೆ ಹೋಗಿ ವಿಷಯ ತಿಳಿಸಿದ. ಅವರು ‘ಬಡವರ ಊಟ’ ಎಂದು ಹಿಂಜರಿದರು. ಡಾ.ರಾಜಕುಮಾರ್ ಬಿಡಲಿಲ್ಲ. ಗುಡಿಸಲಿನ ಒಳಗೆ ಹೋಗಿ ಮುದ್ದೆ, ಕೋಳಿಸಾರಿನ ಊಟ ಮಾಡಿ ಅವರಿಗೆ ನಮಸ್ಕರಿಸಿ ಹಿಂತಿರುಗಿದರು. ಡಾ.ರಾಜಕುಮಾರ್ ‘ಮುತ್ತುರಾಜ್’ ಆಗಿದ್ದರು.
3) ಡಾ.ರಾಜಕುಮಾರ್ ಅವರು ಒಮ್ಮೆ ನನಗೊಂದು ಘಟನೆಯನ್ನು ಹೇಳಿದರು : ‘ನನಗೆ ಇವತ್ತು ನಿರೀಕ್ಷೆ ಮಾಡದೆ ಇರೋದೆಲ್ಲ ಸಿಕ್ಕಿದೆ. ಆದರೆ ನಮ್ಮ ಊರಿಗೆ ಹೋದಾಗ ಆಗೋ ಆನಂದ ಇನ್ನೆಲ್ಲೂ ಸಿಗೋದಿಲ್ಲ. ನಾನು ಊರಿಗೆ ಹೋದಾಗೆಲ್ಲ ಹೊಲ, ತೋಪು, ಅಂತ ತಿರುಗಾಡ್ತೇನೆ. ಆಗ ಎಲ್ಲ ನೆನಪುಗಳೂ ಒತ್ತರಿಸಿ ಬರುತ್ವೆ. ಅದೆಷ್ಟು ಜನ ನನ್ನ ಜೊತೆ ಆಡಿದ್ರು. ನನ್ ಜೊತೆ ಬೆಳೆದಿದ್ರು! ಎಲ್ಲಾ ನೆನಪಿಗೆ ಬರುತ್ವೆ. ಈಗ ಅವರಲ್ಲಿ ಅನೇಕರು ಬದುಕಿಲ್ಲ. ಅವರ ನೆನಪು ಕಾಡ್ಸುತ್ತೆ. ಒಬ್ನೇ ಅಲ್ಲಿ ಓಡಾಡ್ತಾ ಇದ್ರೆ ಮರಗಿಡಗಳಲ್ಲಿ ಎಲೆ ಅಲುಗಾಡೋ ಸದ್ದು, ಹಕ್ಕಿಗಳ ಚಿಲಿಪಿಲಿ, ಜೊತೆಗೆ ನನ್ ಕವೀಲಿ ಯಾರೋ ಪಿಸುಗುಟ್ಟಿದ ಅನುಭವ. ಗಾಳಿ ಮೂಲಕ ಮಾತಾಡಿದ ಹಾಗೆ; ಹಕ್ಕಿಗಳ ಮೂಲಕ ಮಿಡಿದ ಹಾಗೆ. ದೂರದಲ್ಲಿ ನೋಡಿದ್ರೆ ಸಮಾಧಿಗಳು. ಆಗ ನಾನು ಒಬ್ನೇ ಅಂದ್ಕೋತೀನಿ – ಅಯ್ಯೋ ನಿಮ್ ಮನೆ ಕಾಯ್ವಾಗ ಸುಮ್ನೆ ಯಾಕ್ ಪಿಸುಗುಡ್ತೀರಿ? ಗಾಳೀಲ್ ಯಾಕೆ ತೇಲ್ತೀರಿ? ರೂಪುಗಳಾಗ್ ಬನ್ರಪ್ಪ ರೂಪುಗಳಾಗ್ ಬನ್ರಿ ಅಂದ್ರೆ ಒಂದ್ ರೂಪಾನೂ ಇಲ್ಲ; ಬರೀ ಪಿಸುಗುಡೋ ಸದ್ದು! ಸಮಾಧಿ! ಆಗ ನಂಗೆ ಸಂಕಟ ತಡ್ಕಳಾಕಾಗಲ್ಲ. ಒಬ್ನೇ ಕೂತು ಅತ್‌ಬಿಡ್ತೇನೆ.’
ರಾಜಕುಮಾರ್ ಅವರ ಈ ಮಾತುಗಳಲ್ಲಿ ಕವಿತೆಯೊಂದರ ರೂಪಕ ಶಕ್ತಿಯಿದೆ. ಇಲ್ಲಿ ಕಾಡಿಸುವ, ತಳಮಳಿಸುವ ಮನಸ್ಸು ಬೇರಾವುದೂ ಅಲ್ಲ – ಮುತ್ತುರಾಜ್! ಮಹಾ ಮಾನವ ಮುತ್ತುರಾಜ್.
4) ವೀರಪ್ಪನ್ ಅಪಹರಣ ಮಾಡಿದಾಗ ೧೦೮ ದಿನಗಳ ಕಾಲ ಕಾಡುವಾಸ. ದಿನವೂ ಕಾಲ್ನಡಿಗೆ. ಮೊದಲೇ ಇದ್ದ ಮಂಡಿನೋವು ಹೆಚ್ಚಾಯಿತು. ಕಾಡಿನಿಂದ ಬಂದ ಮೇಲೆ ಕೆಲ ಕಾಲಾನಂತರ ಮಂಡಿ ಮತ್ತು ಸೊಂಟದ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆದರೂ ಪೂರ್ಣ ಗುಣವಾಗಿರಲಿಲ್ಲ. ತೀರಾ ಇತ್ತೀಚೆಗೆ ರಾಜಕುಮಾರ್ ಅವರು ನನ್ನೊಂದಿಗೆ ಮಾತಾಡುತ್ತಾ ಹೇಳಿದರು : ‘ಆಪರೇಷನ್ ಮಾಡಿಸ್ದೆ ಇದ್ದಿದ್ರೆ ಏನಾಗ್ತಿತ್ತು ಸಾರ್. ನೋವು ಇರ್ತಾ ಇತ್ತು. ನಾವು, ಮನುಷ್ಯರು, ನೋವಿನ ಜೊತೆ ಬದುಕೋದ್ ಕಲೀಬೇಕು. ನೋವಿನ ಜೊತೆ ಬದುಕೋದ್ ಕಲೀಬೇಕು. ನೋವಿನ ಜೊತೆ ವಿಶ್ವಾಸ ಬೆಳೆಸ್ಬೇಕು; ಸ್ನೇಹ ಬೆಳೆಸ್ಬೇಕು ಇಬ್ಬರೂ ವಿಶ್ವಾಸದಿಂದ ಜೊತೇಲ್ ಬಾಳ್ಬೇಕು; ಅಷ್ಟೇ.’
ದೈಹಿಕ ನೋವುಗಳನ್ನು ಕುರಿತ ಈ ಮಾತುಗಳಲ್ಲಿ ಎಂಥ ರೂಪಕ ಶಕ್ತಿಯಿದೆ!
ಇಂತಹ ನೂರಾರು ಪ್ರಸಂಗಗಳ ಮೂಲಕ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತ ಹೋಗಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನನಗೆ ತುಂಬಾ ಮಹತ್ವಪೂರ್ಣವೆನ್ನಿಸಿದ್ದು – ರಾಜಕುಮಾರ್ ಎಂಬ ರೂಪದೊಳಗಿನ ರೂಪಕ ಮತ್ತು ಮೈಯ್ಯೊಳಗಿನ ಮನಸ್ಸು ಮುತ್ತುರಾಜ್. ಮುತ್ತುರಾಜ್ ಮಣ್ಣಾಗಿದ್ದಾರೆ, ಆದರೆ ರೂಪಕಗಳ ಮೂಲಕ ಮಾತಾಡುತ್ತಲೇ ಇರುತ್ತಾರೆ.
