ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಡೂರ್ ಎಂಬ ಅನನ್ಯ ಚಿತ್ರಜೀವಿ

ಪೋಸ್ಟ್ ಶೇರ್ ಮಾಡಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

‘ಪಾತ್ರಗಳನ್ನು ವಿಶ್ಲೇಷಿಸುವುದು ಕಲಾವಿದರ ಕೆಲಸವಲ್ಲ. ಪಾತ್ರದ ಬಗೆಗಿನ ನನ್ನ ಒಳನೋಟಕ್ಕೆ ಧಕ್ಕೆಯಾಗಕೂಡದು. ನಾನಂದುಕೊಂಡಂತೆ ಪಾತ್ರ ಮೂಡಿಬರಬೇಕೆನ್ನುವುದು ನಿರ್ದೇಶಕನಾಗಿ ನನ್ನ ಸ್ವಾರ್ಥ…’ ಎನ್ನುವ ಅಡೂರ್ ಗೋಪಾಲಕೃಷ್ಣನ್, ಚಿತ್ರ, ಪಾತ್ರ ಬೇಡುವ ತನ್ಮಯತೆಗೆ ಹೆಚ್ಚು ಒತ್ತು ಕೊಟ್ಟವರು. ಇಂದು (ಜುಲೈ 3) ಅವರ 80ನೇ ಹುಟ್ಟುಹಬ್ಬ.

ಸಿನಿಮಾ ಎನ್ನುವುದು ಜನಪ್ರಿಯ ಮಾಧ್ಯಮ, ಮನರಂಜನೆಯ ಕ್ಷೇತ್ರ, ಕೋಟಿಗಟ್ಟಲೆ ವಹಿವಾಟುಳ್ಳ ಭಾರೀ ಉದ್ಯಮ. ಭಾರತದ ಸಂದರ್ಭದಲ್ಲಿ ಇಂತಹ ದೃಶ್ಯ ಮಾಧ್ಯಮವನ್ನು ಕೇವಲ ಮನರಂಜನೆಯ ಸರಕಾಗಿ ನೋಡದ, ಸೂಕ್ಷ್ಮ ಸಂವೇದನೆಗೆ ಸಂಪರ್ಕ ಸಾಧನವಾಗಿ ಬಳಸಿದ, ಮಹೋನ್ನತ ಕಲೆಯಾಗಿ ಮಾರ್ಪಡಿಸಿದ ಹಲವು ಮಹಾನುಭಾವರಿದ್ದಾರೆ. ಪ್ರಭಾವಿ ಮಾಧ್ಯಮವಾದ ಸಿನಿಮಾಗಳ ಮೂಲಕವೇ ಜನರಲ್ಲಿ ಜಾಗೃತಿ ಮೂಡಿಸಿದ, ಸಮಾಜಕ್ಕೆ ಸಂದೇಶ ಸಾರಿದ, ಸಾಮಾಜಿಕ ಕ್ರಾಂತಿಗೆ ಕಾರಣರಾದ ಕಲಿಗಳಿದ್ದಾರೆ. ಅಂಥವರ ಪೈಕಿ ಮಲಯಾಳಂ ಚಿತ್ರನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಕೂಡ ಒಬ್ಬರು. ಐದು ದಶಕಗಳನ್ನು ಚಿತ್ರಲೋಕದಲ್ಲಿಯೇ ಕಳೆದಿರುವ ಅವರಿಗೀಗ 80ರ ಪ್ರಾಯ.

ಕೇರಳದ ಅಡೂರು ಸಮೀಪದ ಮನ್ನಾಡಿಯಲ್ಲಿ, 1941 ಜುಲೈ 3ರಂದು ಜನಿಸಿದ ಗೋಪಾಲಕೃಷ್ಣನ್, ಕಲಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಕೇರಳದ ಕಲೆ-ಸಂಸ್ಕೃತಿಯನ್ನು ಕರುಳಿಗಿಳಿಸಿಕೊಂಡೇ ಬೆಳೆದವರು. ಬಾಲ್ಯದಲ್ಲಿಯೇ ಕಥಕ್ಕಳಿ ನೃತ್ಯದಲ್ಲಿ ಪರಿಣತಿ ಸಾಧಿಸಿದ್ದರು. 8ನೇ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಂತರ ನಟನೆ ಬಿಟ್ಟು ಬರವಣಿಗೆ ಮತ್ತು ನಿರ್ದೇಶನದತ್ತ ಮುಖ ಮಾಡಿದರು. ನಾಟಕ ರಚನೆಯ ಗಂಭೀರ ಅಧ್ಯಯನದಲ್ಲಿ ತೊಡಗಿ ಎರಡು ಕೃತಿಗಳನ್ನು ರಚಿಸಿದರು. ಈ ನಡುವೆ ಪದವಿ ಪಡೆದು ಸರಕಾರಿ ನೌಕರನಾದರು. ಸರಕಾರಿ ಕೆಲಸ ನೆಮ್ಮದಿಯ ಬದುಕು, ನಿಶ್ಚಿಂತೆಯ ನಿವೃತ್ತ ಜೀವನಕ್ಕೆ ದಾರಿ ಎಂಬ ರೂಢಿಗತ ನಂಬಿಕೆಯಲ್ಲಿ, ಎಲ್ಲರೊಳಗೊಂದಾಗಿ ಇರಬಹುದಾಗಿತ್ತು. ಆದರೆ 1962ರಲ್ಲಿ ಏಕತಾನತೆಯ ಸರಕಾರಿ ಕೆಲಸ ಬಿಟ್ಟು, ಕ್ರಿಯಾಶೀಲ ಕಾಲು ದಾರಿಯತ್ತ ಹೊರಳಿದರು. ಚಿತ್ರಕಥೆ ಮತ್ತು ನಿರ್ದೇಶನದ ತರಬೇತಿ ಪಡೆಯಲು ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಡೂರ್ ತರಬೇತಿ ಮುಗಿಸಿ 1965ರಲ್ಲಿ ಹೊರಬರುವ ವೇಳೆಗೆ, ತಮ್ಮಂತಹ ಸಮಾನ ಮನಸ್ಕ ಚಿತ್ರಜೀವಿಗಳ ಭವಿಷ್ಯಕ್ಕಾಗಿ ಚಿತ್ರಲೇಖ ಫಿಲ್ಮ್ ಸೊಸೈಟಿ ಮತ್ತು ಚಲನಚಿತ್ರ ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಅದು ಆ ವೇಳೆಗೆ, ಕೇರಳದ ಮಟ್ಟಿಗೆ ಮೊದಲ ಪ್ರಯತ್ನವಾಗಿತ್ತು. ಆ ಮೂಲಕ ಕ್ರಿಯಾಶೀಲರು ಒಂದೆಡೆ ಕಲೆಯುವಂತಾಗಿ, ಕೇರಳ ಚಲನಚಿತ್ರರಂಗದ ಬೆಳವಣಿಗೆಗೆ ಅನುಕೂಲಕರ ಹಾದಿ ತೆರೆಯಿತು.

ಚಿತ್ರೋತ್ಸವವೊಂದರಲ್ಲಿ ನಿರ್ದೇಶಕರಾದ ಸತ್ಯಜಿತ್ ರೇ ಮತ್ತು ಗಿರೀಶ್ ಕಾರ್ನಾಡ್ ಅವರೊಂದಿಗೆ ಅಡೂರು (Photo Courtesy : adoorgopalkrishnan.com)

‘ಪಾತ್ರಗಳನ್ನು ವಿಶ್ಲೇಷಿಸುವುದು ಕಲಾವಿದರ ಕೆಲಸವಲ್ಲ. ಪಾತ್ರದ ಬಗೆಗಿನ ನನ್ನ ಒಳನೋಟಕ್ಕೆ ಧಕ್ಕೆಯಾಗಕೂಡದು. ನಾನಂದುಕೊಂಡಂತೆ ಪಾತ್ರ ಮೂಡಿಬರಬೇಕೆನ್ನುವುದು ನಿರ್ದೇಶಕನಾಗಿ ನನ್ನ ಸ್ವಾರ್ಥ…’ ಎನ್ನುವ ಅಡೂರ್ ಗೋಪಾಲಕೃಷ್ಣನ್, ಚಿತ್ರ, ಪಾತ್ರ ಬೇಡುವ ತನ್ಮಯತೆಗೆ ಹೆಚ್ಚು ಒತ್ತು ಕೊಟ್ಟವರು. ಚಿತ್ರ ನಿರ್ಮಾಣದ ವಿಷಯದಲ್ಲಿ ಶಿಸ್ತಿನ ನಿರ್ದೇಶಕರೆಂದೇ ಹೆಸರಾದವರು. ಇಂತಹ ಅಡೂರ್ ಕೇರಳದ ಸಂಸ್ಕೃತಿ, ಪರಂಪರೆ ಮತ್ತು ಸಮಕಾಲೀನ ಬದುಕನ್ನೇ ಬೆಳ್ಳಿತೆರೆಗಿಳಿಸಿದರು. ಇಳಿಸುವ ಕ್ರಮದಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ನಿಕಷಕ್ಕೆ ಒಡ್ಡಿದರು. ರಂಗಭೂಮಿ, ಕಥಕ್ಕಳಿ, ಬಾಲ್ಯದ ಅನುಭವದ್ರವ್ಯವನ್ನೆಲ್ಲ ಬಸಿದು ಮೊತ್ತ ಮೊದಲ ಬಾರಿಗೆ ‘ಸ್ವಯಂವರಂ’(1972) ಚಿತ್ರ ನಿರ್ದೇಶಿಸಿದರು. ಯುವ ಪ್ರೇಮಿಗಳಿಬ್ಬರು ಕಟ್ಟುಪಾಡುಗಳನ್ನು ಕಳಚಿಟ್ಟು, ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಮನೆಯವರ ವಿರೋಧದ ನಡುವೆಯೇ ಮದುವೆಯಾಗುವ, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ, ಕಷ್ಟಗಳಿಗೆ ಸಿಕ್ಕಿ ಹೈರಾಣಾಗುವ, ಬದುಕು ಮೂರಾಬಟ್ಟೆಯಾಗುವ ದುರಂತ ಕತೆಯನ್ನೊಳಗೊಂಡ ಚಿತ್ರ.

ಮಧು ಮತ್ತು ಶಾರದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ‘ಬದುಕಿನ ಆ ಆಯ್ಕೆಯೂ ಅವರದೇ ಆಗಿತ್ತು’ ಎನ್ನುವುದನ್ನು ನೋಡುಗರ ಹೃದಯಕ್ಕೆ ದಾಟಿಸುವಲ್ಲಿ ಯಶಸ್ವಿಯಾಗಿತ್ತು. ಆ ಕಾಲಕ್ಕೇ ಮಲಯಾಳಂ ಚಿತ್ರರಂಗವನ್ನು ಹೊಸ ಆಲೋಚನಾಕ್ರಮಕ್ಕೆ ಅಣಿಗೊಳಿಸಿತ್ತು. ವಾಸ್ತವವಾದಿ ನೆಲೆಯ ಹೊಸ ಅಲೆಯ ಚಿತ್ರಗಳಿಗೆ ಮುನ್ನುಡಿ ಬರೆದಿತ್ತು. ಅಷ್ಟೇ ಅಲ್ಲ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರಶಂಸೆ ಪುರಸ್ಕಾರಗಳಿಗೆ ಒಳಗಾಗಿ ಅಡೂರರನ್ನು ಅಟ್ಟಕ್ಕೇರಿಸಿತ್ತು. ಭಾರತೀಯ ಚಿತ್ರರಂಗದ ಹೊಸ ಅಲೆಯ ಹರಿಕಾರರಾದ ಸತ್ಯಜಿತ್ ರೇ, ಮೃಣಾಲ್ ಸೇನ್, ಮಣಿ ಕೌಲ್, ಋತ್ವಿಕ್ ಘಟಕ್, ಅಪರ್ಣಾ ಸೇನ್, ಶ್ಯಾಂ ಬೆನಗಲ್, ಗೋವಿಂದ ನಿಹಲಾನಿ, ದೀಪಾ ಮೆಹ್ತಾರ ಸಾಲಿನಲ್ಲಿ ಅವರನ್ನು ನಿಲ್ಲಿಸಿತ್ತು.

ಅಡೂರರ ‘ಸ್ವಯಂವರಂ’ ಚಿತ್ರದಲ್ಲಿ ಶಾರದಾ

‘ಸ್ವಯಂವರಂ’ನಿಂದ ಶುರುವಾದ ಅಡೂರರ ಸಿನಿಪ್ರಯಾಣ ‘ಪಿನ್ನೆಯುಂ’ವರೆಗೆ, ಸುಮಾರು 12 ಚಿತ್ರಗಳನ್ನು ನಿರ್ಮಿಸಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ನೆಲೆಯ, ವಿಭಿನ್ನ ಕಥಾವಸ್ತುವಿನಿಂದ ಕೂಡಿದ ಚಿತ್ರಗಳಾಗಿವೆ. ಅದರಲ್ಲೂ ಅವರ ‘ಎಲಿಪತ್ತಾಯಂ’(ಇಲಿಬೋನು -1981) ವಿನೂತನ ವಸ್ತು ವಿನ್ಯಾಸ ಹಾಗೂ ಕಾವ್ಯಾತ್ಮಕ ನಿರೂಪಣೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಅಡೂರರ ಮೂರನೆ ಚಿತ್ರ. ಕೇರಳದ ಫ್ಯೂಡಲ್ ವ್ಯವಸ್ಥೆಯ ಅವನತಿ ಮತ್ತು ಅದನ್ನು ಎದುರುಗೊಂಡ ಭೂಮಾಲೀಕರ ಕತೆಯನ್ನು; ವ್ಯವಸ್ಥೆ ಎಂಬ ಬೋನಿನಲ್ಲಿ ಇಲಿಯಂತಾಗುವ ಭೂಮಾಲೀಕರ ಸ್ಥಿತಿಯನ್ನು ‘ಇಲಿಬೋನು’ ಎಂಬ ರೂಪಕದಲ್ಲಿ ಅಳವಡಿಸಿ ನಿರೂಪಿಸಿದ್ದು ಸಿನಿಮಾಗೊಂದು ಹೊಸ ಭಾಷ್ಯ ಬರೆದಿತ್ತು. ಶಬ್ದ ಮತ್ತು ಮೌನಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದು ಗಂಭೀರ ಚಿತ್ರವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಕೇರಳ ಎಂಬ ಪುಟ್ಟ ರಾಜ್ಯವನ್ನು, ಮಲಯಾಳಂ ಭಾಷೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿತ್ತು.

‘ಎಲಿಪತ್ತಾಯಂ’ ಚಿತ್ರ ಕೇರಳದ ಸಂಸ್ಕೃತಿ, ಇತಿಹಾಸ, ಊಳಿಗಮಾನ್ಯ ಪದ್ಧತಿ, ಹೊಸಗಾಲದ ಪ್ರಜಾಪ್ರಭುತ್ವ… ಎಲ್ಲವನ್ನೂ ಒಳಗೊಂಡಿದೆ. ಅಸಲಿ ಕತೆ, ಅದ್ಭುತ ಪರಿಕಲ್ಪನೆಯ ಚಿತ್ರ. ನಿರೂಪಿಸಿದ ರೀತಿಯೂ ಅನನ್ಯ. ಆ ಕಾರಣಕ್ಕಾಗಿಯೇ ಸಿನಿಮಾ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ, ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಕೊಡಮಾಡುವ ಸಥರ್ ಲ್ಯಾಂಡ್ ಟ್ರೋಫಿಗೆ ಪಾತ್ರವಾಗಿದೆ. 1959ರಲ್ಲಿ, ಸತ್ಯಜಿತ್ ರೇ ಅವರ ‘ಅಪೂರ್ ಸಂಸಾರ್’ ಚಿತ್ರ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಚಿತ್ರವಾಗಿತ್ತು. ಜಾಗತಿಕ ಚಿತ್ರಜಗತ್ತಿನ ಬರ್ನಾರ್ಡೋ ಬರ್ಟಲೂಸಿಯಂತಹ ಅತಿರಥ ಮಹಾರಥರು ಪಡೆದ ಪ್ರಶಸ್ತಿ, 1982ರಲ್ಲಿ ಅಡೂರ್ ಗೋಪಾಲಕೃಷ್ಣನ್ ರನ್ನು ಅರಸಿ ಬರುವ ಮೂಲಕ ಭಾರತೀಯ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿತ್ತು.

‘ಸ್ವಯಂವರಂ’ ಸಿನಿಮಾ ಚಿತ್ರೀಕರಣದ ಸಂದರ್ಭ (Photo Courtesy : adoorgopalkrishnan.com)

‘ನಾನು ಚಿತ್ರ ಮಾಡುವುದು, ನನ್ನೊಳಗಿನ ತುಡಿತಗಳನ್ನು ನನ್ನ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಬೇಕೆನಿಸಿದಾಗ ಮಾತ್ರ’ ಎನ್ನುವ ಅಡೂರ್ ಗೋಪಾಲಕೃಷ್ಣನ್ ಬರೀ ಸಿನಿಮಾಗಳನ್ನಷ್ಟೇ ಅಲ್ಲ, 30 ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನೂ ನಿರ್ಮಿಸಿದ್ದಾರೆ. ವಾಸ್ತವ ಬದುಕು, ಸಂಪ್ರದಾಯ, ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಮಾನವೀಯ ಸಂಬಂಧಗಳ ಸುತ್ತಲಿನ ಈ ಚಿತ್ರಗಳು ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಹಾಗೆಯೇ ದೃಶ್ಯ ಮಾಧ್ಯಮಕ್ಕೆ ಬರುವ ಹೊಸಬರಿಗೆ ಈ ಕಿರುಚಿತ್ರಗಳು ಕಲಿಕೆಗೆ ಯೋಗ್ಯವಾಗಿವೆ. ಇಲ್ಲಿಯವರೆಗೆ 16 ರಾಷ್ಟ್ರಪ್ರಶಸ್ತಿ, 17 ಕೇರಳ ರಾಜ್ಯ ಪ್ರಶಸ್ತಿ, ಬ್ರಿಟಿಷ್ ಫಿಲ್ಮ್ ಇನ್ಸ್ ಟಿಟ್ಯೂಟ್ ಗೌರವ ಸೇರಿ ಜಗತ್ತಿನ ಹಲವಾರು ದೇಶಗಳ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಕಂಡು ಸಿನಿಮಾಸಕ್ತರ ಪ್ರಶಂಸೆಗೆ ಪಾತ್ರವಾಗಿವೆ. ಅಡೂರ್ ಗೋಪಾಲಕೃಷ್ಣನ್ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗೆ ಭಾರತ ಸರಕಾರ 1984 ರಲ್ಲಿ ಪದ್ಮಶ್ರಿ, 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಒಟ್ಟಾರೆ ದೃಶ್ಯ ಮಾಧ್ಯಮದ ಸಾಧನೆಯನ್ನು ಪರಿಗಣಿಸಿ 2004 ರಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

‘ಹಿಂದಿ ಸುಂದರವಾದ ಭಾಷೆ, ಆದರೆ ಅದನ್ನು ಪ್ರಾದೇಶಿಕ ಭಾಷೆಯನ್ನಾಗಿ ಪರಿಗಣಿಸಬೇಕೇ ಹೊರತು ಇತರರ ಮೇಲೆ ಹೇರಬಾರದು’ ಎಂದಿದ್ದ; ಹಿಂದಿಯ ‘ಪದ್ಮಾವತಿ’ ಚಿತ್ರವನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬಂದಾಗ, ‘ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಹೇಳಿದ್ದ; ತಮ್ಮ ‘ಮುಖಾಮುಖಂ’ ಚಿತ್ರವನ್ನು ಕಮ್ಯುನಿಸ್ಟರು ಕಟುವಾಗಿ ಟೀಕಿಸಿದಾಗ, ‘ಪಿನ್ನೆಯುಂ’ ಚಿತ್ರವನ್ನು ಚಿತ್ರವೇ ಅಲ್ಲ ಲೇವಡಿ ಮಾಡಿದಾಗ, ಟೀಕೆ-ಲೇವಡಿಗಳನ್ನು ಸವಾಲಾಗಿ ಸ್ವೀಕರಿಸಿದ್ದೂ ಇದೆ. ಇಂತಹ ಅನನ್ಯ ಚಿತ್ರಜೀವಿ ಅಡೂರ್ ಪಕ್ಕದ ರಾಜ್ಯದವರು ಎಂಬ ಹೆಮ್ಮೆಯೊಂದೇ ಅಲ್ಲ, ಕನ್ನಡ ಚಿತ್ರರಂಗದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡವರು. ಎಪ್ಪತ್ತರ ದಶಕದ ಹೊಸ ಅಲೆಯ ಚಿತ್ರಗಳೊಂದಿಗೆ ಪೈಪೋಟಿಗೆ ಬಿದ್ದು, ಪರಸ್ಪರ ಬೆಳೆದು ಬೆಳೆಸಿದವರು. ಅಡೂರರನ್ನು ಮತ್ತು ಅವರ ಚಿತ್ರಗಳನ್ನು ನೋಡಿಕೊಂಡೇ ಬೆಳೆದ ಗಿರೀಶ್ ಕಾಸರವಳ್ಳಿಯವರು, 2015ರಲ್ಲಿ, ಫಿಲ್ಮ್ ಡಿವಿಷನ್ ಆಫ್ ಇಂಡಿಯಾಗಾಗಿ ಅಡೂರರ ಮೇಲೆ ‘ಇಮೇಜಸ್ ಅಂಡ್ ರಿಫ್ಲೆಕ್ಷನ್’ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದೂ ಇದೆ. ಬಹುತ್ವದ ಭಾರತದಲ್ಲಿ ವರ್ಷಕ್ಕೆ ಹತ್ತಾರು ಭಾಷೆಗಳ ನೂರಾರು ಚಿತ್ರಗಳು ತೆರೆಕಾಣುತ್ತವೆ. ಕೆಲವು ಕ್ಲಿಕ್ ಆದರೆ ಹಲವು ಡಬ್ಬ ಸೇರುತ್ತವೆ. ಆದರೆ ಎಲ್ಲೋ ಬೆರಳೆಣಿಕೆಯಷ್ಟು ಚಿತ್ರಗಳು ಭಾವಬಿತ್ತಿಯಲ್ಲಿ ಉಳಿದು ಬೆಳೆಯುತ್ತಲೇ ಹೋಗುತ್ತವೆ. ಭಿನ್ನ ಆಲೋಚನಾಕ್ರಮಕ್ಕೆ ಆಹ್ವಾನಿಸುತ್ತವೆ. ಸಿನಿಮಾದ ಅನಂತ ಸಾಧ್ಯತೆಗಳನ್ನು ಸಾಕ್ಷಾತ್ಕರಿಸುತ್ತವೆ. ಅಂತಹ ಚಿತ್ರಗಳನ್ನು ಕೊಟ್ಟ ಅಡೂರ್ ಗೋಪಾಲಕೃಷ್ಣನ್ ರಂತಹ ನಿರ್ದೇಶಕರನ್ನು ಮತ್ತೆ ಮತ್ತೆ ಎದುರುಗೊಳ್ಳುವುದಕ್ಕಾದರೂ; ಅವರ ಸ್ವಯಂವರಂ, ಮಥಿಲುಕಳ್, ಎಲಿಪತ್ತಾಯಂ, ವಿಧೇಯನ್, ಮುಖಾಮುಖಂ, ನಾಲು ಪೆಣ್ಣಂಗಳ್, ಕಥಾಪುರುಷನ್, ಕೋಡಿಯಟ್ಟಂ, ಪಿನ್ನೆಯುಂನಂತಹ ಚಿತ್ರಗಳನ್ನು ನೋಡಬೇಕಾಗಿದೆ.

(Photo Courtesy : adoorgopalkrishnan.com)

ಈ ಬರಹಗಳನ್ನೂ ಓದಿ