ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಲೆ ಬಗ್ಗಿಸಿ ನಡೆದರೆ ಕಾಮನಬಿಲ್ಲು ಕಾಣುವುದಾದರೂ ಹೇಗೆ ಎಂದ ಚಾಪ್ಲಿನ್!

ಪೋಸ್ಟ್ ಶೇರ್ ಮಾಡಿ
ಭಾರತಿ ಬಿ.ವಿ.
ಲೇಖಕಿ

ಜಾಗತಿಕ ಸಿನಿಮಾ ಕಂಡ ಶ್ರೇಷ್ಠ ನಟ – ನಿರ್ದೇಶಕ ಚಾರ್ಲಿ ಚಾಪ್ಲಿನ್‌. ಬದುಕಿನ ವಾಸ್ತವಗಳನ್ನು ಮಾತಿಲ್ಲದ ಸಿನಿಮಾಗಳ ಮೂಲಕವೇ ಮನುಕುಲಕ್ಕೆ ದಾಟಿಸಿದ ಕಲಾವಿದ. ಲೇಖಕಿ ಭಾರತಿ ಬಿ.ವಿ. ಅವರು ಚಾರ್ಲಿಯ ವರ್ಣರಂಜಿತ ಸಿನಿಮಾ – ಬದುಕಿನ ಕುರಿತು ‘ತುಷಾರ’ ಪತ್ರಿಕೆಗಾಗಿ ಬರೆದ ಆಪ್ತ, ಮಾಹಿತಿಪೂರ್ಣ ಬರಹ.

Comedy is a very serious business ಎಂಬ ಮಾತಿದೆ. ಜನರನ್ನು ಸುಲಭವಾಗಿ ಅಳಿಸಿ ಬಿಡಬಹುದು. ಆದರೆ ಈ ನಗಿಸುವ ವ್ಯವಹಾರ ಸುಲಭದ್ದಲ್ಲ. ಬರಹದ ಮೂಲಕ ನಗೆ ಉಕ್ಕಿಸುವುದು ಸ್ವಲ್ಪ ಮಟ್ಟಿಗೆ ಸುಲಭ ಎನ್ನಬಹುದು. ಆದರೆ ನಟನೆಯಲ್ಲಿ ಹಾಸ್ಯವನ್ನು ನೋಡುಗರಿಗೆ ಮುಟ್ಟಿಸಲು ಅದ್ಭುತವಾದ body language, ಹಾಸ್ಯದ ಟೈಮಿಂಗ್ ಮತ್ತು ನಗೆ ಉಕ್ಕಿಸುವ ಮಾತು ಎಲ್ಲವೂ ಒಟ್ಟಾಗಿ ಮೇಳೈಸಬೇಕು. ಆಗ ಮಾತ್ರ ಎದುರಿಗಿರುವ ವ್ಯಕ್ತಿಯನ್ನು ನಗಿಸಲು ಶಕ್ತರಾಗುತ್ತೇವೆ. ಬರೀ ನಗಿಸುವುದೇ ಇಷ್ಟು ಕಷ್ಟವಾಗಿರುವಾಗ ‘ಜೊತೆ ಜೊತೆಗೇ ಅಷ್ಟೇ ತೀವ್ರವಾಗಿ ಅಳಿಸುವುದು ಸಾಧ್ಯವೇ? ಮಾತೇ ಇಲ್ಲದೇ ಹಾಸ್ಯವನ್ನು ಮುಟ್ಟಿಸುವುದು ಸಾಧ್ಯವೇ?’ ಹೀಗೆಲ್ಲ ಯಾರಾದರೂ ಕೇಳಿದರೆ ‘ಏ ಸುಮ್ನಿರಿ ತಮಾಷೆ ಮಾಡಬೇಡಿ’ ಎನ್ನುವ ಉತ್ತರ ಕೊಡಬೇಕಾಗುತ್ತಿತ್ತೇನೋ ಈ ಒಬ್ಬ ನಟ ಜಗತ್ತಿನಲ್ಲಿ ಜನ್ಮ ತಾಳದಿದ್ದರೆ! ಹೀಗೆ ಮಾತೇ ಇಲ್ಲದ, ತುಟಿಯಂಚಿನಲ್ಲಿ ನಗು ಹಾಗೂ ಕಣ್ಣಂಚಿನಲ್ಲಿ ನೀರು ಎರಡನ್ನೂ ಏಕಕಾಲಕ್ಕೆ ತರಿಸಿದವನ ಹೆಸರು ಅಸಾಮಾನ್ಯ ಚಾರ್ಲಿ ಚಾಪ್ಲಿನ್! ಹಾಗೆಂದೇ ಅವನು ಭೌತಿಕವಾಗಿ ಇಲ್ಲವಾದ 43 ವರ್ಷಗಳ ನಂತರವೂ ಜಗತ್ತು ಅವನ ಬಗ್ಗೆ ಮಾತನಾಡುತ್ತಲೇ ಇದೆ, ಅವನ ಬಗ್ಗೆ ಓದುತ್ತಲೇ ಇದೆ ಮತ್ತು ಅವನ ಸಿನಿಮಾಗಳನ್ನು ನೋಡುತ್ತಲೇ ಇದೆ.

ಬಾಲಕ ಚಾಪ್ಲಿನ್‌

ಎಲ್ಲ ಮಕ್ಕಳ ಜೀವನ ಶುರುವಾಗುವುದೇ ಅಳುವಿನಿಂದ. ಆದರೆ ಕೆಲವು ನತದೃಷ್ಟರಿಗೆ ಆ ಅಳು ಬಾಲ್ಯದುದ್ದಕ್ಕೂ ಹಿಂಬಾಲಿಸಿಕೊಂಡೇ ಬಂದುಬಿಡುತ್ತದೆ. ಅಂಥ ನತದೃಷ್ಟರಲ್ಲಿ ಒಬ್ಬ ಚಾಪ್ಲಿನ್. ಅವನ ಅಪ್ಪ ಚಾರ್ಲ್ಸ್ ಚಾಪ್ಲಿನ್ ಸೀನಿಯರ್‌ ಅವನ ತಾಯಿ ಹ್ಯಾನಾ ಇಬ್ಬರೂ ರಂಗಸ್ಥಳದ ಜೊತೆ ನಂಟು ಇದ್ದವರೇ. ಅಪ್ಪ ಒಳ್ಳೆಯ ನಟ ಮತ್ತು ಹಾಡುಗಾರನಾಗಿದ್ದರೆ, ಅಮ್ಮ ಕೂಡಾ ಒಳ್ಳೆಯ ಹಾಸ್ಯ ನಟಿ ಮತ್ತು ಹಾಡುಗಾರ್ತಿ. ಚಾಪ್ಲಿನ್ ಸೀನಿಯರ್‌ಗೆ ಹ್ಯಾನಾಳ ಮೇಲೆ ಪ್ರೇಮವಾಯಿತು. ಆ ನಂತರ ಮದುವೆಯಾದರು. ಹ್ಯಾನಾಗೆ ಮದುವೆಗೆ ಮೊದಲು ಸಿಡ್ನಿ ಎನ್ನುವ ಮಗ ಹುಟ್ಟಿದ್ದ. ಮದುವೆಯಾದ ನಂತರ ಅಪ್ಪ ಚಾಪ್ಲಿನ್, ಸಿಡ್ನಿಯ ಗಾರ್ಡಿಯನ್ ಆದ. ಮದುವೆಯಾದ ನಾಲ್ಕು ವರ್ಷಗಳ ಚಾರ್ಲಿ ಚಾಪ್ಲಿನ್ ಹುಟ್ಟಿದ. ಅಪ್ಪ-ಅಮ್ಮ ಇಬ್ಬರಿಗೂ ಹೊಟ್ಟೆ ಬಟ್ಟೆಗೆ ಸಾಲುವಷ್ಟು ಆದಾಯವಿತ್ತು. ಒಟ್ಟಿನಲ್ಲಿ ನೋಡಿದರೆ ಅಪ್ಪ-ಅಮ್ಮ- ಇಬ್ಬರು ಮಕ್ಕಳ ಸುಖ ಸಂಸಾರ. ಮೊದಲ ಎರಡು ವರ್ಷ ಚಾಪ್ಲಿನ್ ಬದುಕು ಆರಾಮವಾಗಿಯೇ ಕಳೆಯಿತು. ಆ ನಂತರ ಅವನ ಅಪ್ಪ-ಅಮ್ಮನ ಮದುವೆಯಲ್ಲಿ ಬಿರುಕು ಉಂಟಾಯಿತು. ಅದಕ್ಕೆ ಕಾರಣ ಹ್ಯಾನಾಗೆ ಅವಳ ಜೊತೆ ಕೆಲಸ ಮಾಡುತ್ತಿದ್ದ ಲಿಯೋ ಡ್ರೈಡೆನ್ ಜೊತೆ ಸಂಬಂಧವಾಗಿದ್ದು ಎನ್ನುತ್ತಾರೆ ಕೆಲವರು. ಕಾರಣವದೇನೇ ಇರಲಿ, ಒಟ್ಟಿನಲ್ಲಿ ಚಾಪ್ಲಿನ್ ಎರಡು ವರ್ಷದವನಿರುವಾಗ ಅವರಿಬ್ಬರೂ ಬೇರಾಗುತ್ತಾರೆ.

ಆ ನಂತರ ಹ್ಯಾನಾಗೆ ಲಿಯೋ ಡ್ರೈಡೆನ್ ಜೊತೆ ಸಂಬಂಧದಿಂದ ಮತ್ತೊಬ್ಬ ಮಗ ಜಾರ್ಜ್ ವೀಲರ್ ಡ್ರೈಡೆನ್ ಹುಟ್ಟುತ್ತಾನೆ. ವೀಲರ್‌ಗೆ ಆರು ತಿಂಗಳಾಗಿರುವಾಗ ಲಿಯೋ ಮತ್ತು ಹ್ಯಾನಾ ಕೂಡಾ ಬೇರ್ಪಡುತ್ತಾರೆ. ಲಿಯೋ ಮಗನನ್ನು ಹ್ಯಾನಾಳಿಂದ ಬೇರ್ಪಡಿಸಿ ಕರೆದುಕೊಂಡು ಹೊರಟು ಹೋಗುತ್ತಾನೆ. ಹೀಗೆ ಮೂರು ಸಂಬಂಧದಿಂದ ಹುಟ್ಟಿದ ಮೂರು ಗಂಡು ಮಕ್ಕಳಲ್ಲಿ ಹ್ಯಾನಾಗೆ ಉಳಿಯುವುದು ಮೊದಲೆರಡು ಮಕ್ಕಳು ಮಾತ್ರ. ಹ್ಯಾನಾ ಚಾಪ್ಲಿನ್ ಸೀನಿಯರ್‌ನಿಂದ ಬೇರೆಯಾದ ನಂತರ ಅವನು ಕುಡಿತಕ್ಕೆ ದಾಸನಾಗುತ್ತಾನೆ. ಹಾಗಾಗಿ ಹ್ಯಾನಾಳಿಗೆ ಮಕ್ಕಳನ್ನು ಸಾಕಲು ಯಾವುದೇ ರೀತಿಯ ಸಹಾಯವನ್ನೂ ಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಹ್ಯಾನಾ ಒಂಟಿಯಾಗಿ ಇಬ್ಬರು ಮಕ್ಕಳನ್ನು ಸಾಕಬೇಕಾಗುತ್ತದೆ. ಬರಬರುತ್ತಾ ಅವಳಿಗೂ ಕೆಲಸ ಸಿಗುವುದು ಕಡಿಮೆಯಾಗುತ್ತ ಹೋಗುತ್ತದೆ. ಆಗ ನರ್ಸ್ ಕೆಲಸ, ಬಟ್ಟೆ ಹೊಲೆಯುವುದು ಈ ರೀತಿಯಲ್ಲಿ ಒಂದಿಷ್ಟು ಹಣ ಸಂಪಾದಿಸುತ್ತಾಳೆ. ಆದರೆ ಮೂರು ಜನರ ಸಂಸಾರಕ್ಕೆ ಅದು ಯಾತಕ್ಕೂ ಸಾಲದು. ಅವಳಿಗೆ ಸಿಡ್ನಿ ಮತ್ತು ಚಾಪ್ಲಿನ್‌ರನ್ನು ಸಾಕುವುದು ಕಷ್ಟವಾಗತೊಡಗುತ್ತದೆ. ಆಗ ಮಕ್ಕಳಿಬ್ಬರನ್ನೂ ಅನಾಥಾಶ್ರಮಕ್ಕೆ ಕಳಿಸಿ ಬಿಡುತ್ತಾಳೆ. ಆಗ ಚಾಪ್ಲಿನ್‌ಗೆ ಕೇವಲ 7 ವರ್ಷ. ಅಲ್ಲಿ ಒಂದೂವರೆ ವರ್ಷ ಕಳೆದ ನಂತರ ಚಾಪ್ಲಿನ್ ಮತ್ತೆ ತಾಯಿಯ ಹತ್ತಿರ ಬರುತ್ತಾನೆ. ಕೆಲವು ತಿಂಗಳು ತಾಯಿಯ ಜೊತೆಗೆ ಇರುವಷ್ಟರಲ್ಲಿಯೇ ಬಡತನದ ಕಾರಣದಿಂದ ಮತ್ತೆ ಮಕ್ಕಳನ್ನು ಬೇರೊಂದು ಅನಾಥಾಶ್ರಮಕ್ಕೆ ಕಳಿಸುತ್ತಾಳೆ. ಅದಾದ ಎರಡು ತಿಂಗಳಿಗೆ‌ ಅವಳು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಮಾನಸಿಕ ರೋಗಿಗಳ ಆಸ್ಪತ್ರೆ ಸೇರುತ್ತಾಳೆ. ಆಗ ಸ್ವಲ್ಪ ಕಾಲ ಸಿಡ್ನಿ ಮತ್ತು ಚಾಪ್ಲಿನ್ ಅಪರಿಚಿತ ತಂದೆಯೊಡನೆ ಇರಬೇಕಾಗುತ್ತದೆ. ಅಷ್ಟರಲ್ಲಾಗಲೇ ಕುಡಿತಕ್ಕೆ ಸಂಪೂರ್ಣವಾಗಿ ಅಂಟಿಕೊಂಡಿದ್ದ ಚಾರ್ಲ್ಸ್ ಜೊತೆ ಬದುಕಿದ ಆ ದಿನಗಳು ಚಾಪ್ಲಿನ್ ಮತ್ತು ಸಿಡ್ನಿಗೆ ಅತ್ಯಂತ ಕಷ್ತದ ದಿನಗಳು ಎನ್ನಬೇಕು.

ಹರೆಯದಲ್ಲಿ ಚಾರ್ಲಿ

ಆ ನಂತರ ಪುಣ್ಯಕ್ಕೆ ಹ್ಯಾನಾ ಸ್ವಲ್ಪ ಗುಣವಾಗಿ ಮನೆಗೆ ಬರುತ್ತಾಳೆ. ಮಕ್ಕಳಿಬ್ಬರೂ ಮತ್ತೆ ತಾಯಿಯ ಬಳಿಗೆ ಬರುತ್ತಾರೆ. ಅಲ್ಪ ಕಾಲ ಎಲ್ಲರೂ ಒಟ್ಟಿಗೆ ಇರುತ್ತಾರೆ. ಅಂಥ ಸ್ಥಿತಿಯಲ್ಲಿ ಚಾಪ್ಲಿನ್ ಹೊಟ್ಟೆಪಾಡಿಗೆ ರಂಗಭೂಮಿಯ ಮೊರೆ ಹೋಗುತ್ತಾನೆ. ಹಿಂದೊಮ್ಮೆ ಹ್ಯಾನಾ ಕಾರ್ಯಕ್ರಮವೊಂದರಲ್ಲಿ ಗಂಟಲು ಕಟ್ಟಿ ಹಾಡಲಾಗದ ಸ್ಥಿತಿಯಲ್ಲಿರುವಾಗ ಅವಳ ಬದಲು ತಾನೇ ಪ್ರೇಕ್ಷಕರನ್ನು ರಂಜಿಸಿರುತ್ತಾನೆ. ಆಗ ಅವನಿಗೆ ಬರೀ 5 ವರ್ಷ! ಪುಟ್ಟ ಮಗುವೊಂದು ಜನರನ್ನು ರಂಜಿಸಿದಾಗ ಅತ್ಯಂತ ಖುಷಿಯಾದ ಪ್ರೇಕ್ಷಕರು ಒಂದಿಷ್ಟು ಹಣವನ್ನು ರಂಗದ ಮೇಲೆ ಎಸೆದಾಗ ಚಾಪ್ಲಿನ್ ‘ನಾನು ಮೊದಲು ಆ ದುಡ್ಡನ್ನು ತೆಗೆದುಕೊಂಡು ನಂತರ ಕಾರ್ಯಕ್ರಮ ಮುಂದುವರೆಸಲಾ?’ ಎಂದು ಮುಗ್ಧವಾಗಿ ಕೇಳಿದ್ದಕ್ಕೆ ಜನರೆಲ್ಲ ನಕ್ಕಿರುತ್ತಾರೆ. ಆ ನಂತರ ತಾಯಿ ಅವನನ್ನು ಸದಾ ಪ್ರೋತ್ಸಾಹಿಸುತ್ತಿದ್ದುದರಿಂದ ಚಾಪ್ಲಿನ್‌ಗೆ ರಂಗಭೂಮಿಯ ಮೇಲೆ ಆಸಕ್ತಿ ಬೆಳೆದಿರುತ್ತದೆ. ಈಗ ಮನೆಯ ಪರಿಸ್ಥಿತಿ ಹೀಗಿರುವಾಗ 9 ವರ್ಷದವನಾದ ಚಾಪ್ಲಿನ್‌ಗೆ ಅದೇ ಕೆಲಸ ಕೈ ಹಿಡಿಯುತ್ತದೆ. ಕ್ಲಾಗ್ ನೃತ್ಯಗಾರನಾಗಿ ಕೆಲಸ ಶುರು ಮಾಡುವ ಚಾಪ್ಲಿನ್ ನೃತ್ಯತಂಡವೊಂದರ ಖಾಯಂ ಸದಸ್ಯನಾಗಿ ಕಾರ್ಯಕ್ರಮಗಳನ್ನು ಕೊಡುತ್ತಾ ಇಂಗ್ಲೆಂಡ್ ಪೂರಾ ಸುತ್ತುತ್ತಾನೆ. ಅವನ ಕೆಲಸ ಜನರಿಗೆ ಸಾಕಷ್ಟು ಇಷ್ಟವೂ ಆಗುತ್ತದೆ. ಆದರೆ ಎರಡು ವರ್ಷ ನೃತ್ಯ ಕಾರ್ಯಕ್ರಮಗಳನ್ನು ಕೊಟ್ಟರೂ ಚಾಪ್ಲಿನ್‌ಗೆ ಕಾಮೆಡಿಯಲ್ಲಿ ಅತೀವ ಆಸಕ್ತಿ. ಬಾಲ್ಯದಲ್ಲಿ ರಂಗದ ಮೇಲೆ ನಿಂತಾಗ ಜನರು ನಕ್ಕಿದ್ದ ಆ ಕ್ಷಣವೇ ಅದಕ್ಕೆ ಪ್ರೇರೇಪಣೆಯೋ ಏನೋ ಗೊತ್ತಿಲ್ಲ… ಒಟ್ಟಿನಲ್ಲಿ ಜನರನ್ನು ನಗಿಸುವ ಹಾಸ್ಯನಟನೆ ಮಾಡಬೇಕೆನ್ನುವ ತುಡಿತ.

ಅವನು ಹೀಗೆ ಕೆಲಸ ಮಾಡುತ್ತಿರುವಾಗಲೂ ಹ್ಯಾನಾ ಅವನು ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವಂತೆ ನೋಡಿಕೊಳ್ಳುತ್ತಿರುತ್ತಾಳೆ. ಆದರೆ ಅವಳಿಗೆ ಆ ನಂತರ ಆಗಾಗ ಆರೋಗ್ಯ ಕೆಡಲು ಶುರುವಾಗುತ್ತದೆ. ಚಾಪ್ಲಿನ್‌ಗೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವೂ ಹೆಗಲೇರುತ್ತದೆ. ಅಷ್ಟರಲ್ಲಿ ಸಿಡ್ನಿ ನೌಕಾದಳದಲ್ಲಿ ಕೆಲಸಕ್ಕೆ ಸೇರಿ ಮನೆಯಿಂದ ದೂರವಿರುತ್ತಾನೆ. ಎಲ್ಲ ಜವಾಬ್ದಾರಿ ಒಬ್ಬನೇ ನಿರ್ವಹಿಸಬೇಕಾದ ಒತ್ತಡದಲ್ಲಿ ಚಾಪ್ಲಿನ್ ವಿದ್ಯಾಭ್ಯಾಸಕ್ಕೆ ವಿದಾಯ ಕೋರಲೇಬೇಕಾಗುತ್ತದೆ. ಅವನಿಗೆ 14 ವರ್ಷವಾಗಿರುವಾಗ ತಾಯಿಯ ಆರೋಗ್ಯ ಹದಗೆಡುತ್ತದೆ. ಆಗ ಅವಳು ಮತ್ತೆ ಮಾನಸಿಕ ಆಸ್ಪತ್ರೆಗೆ ದಾಖಲಾಗುತ್ತಾಳೆ. ಅಷ್ಟರಲ್ಲಾಗಲೇ ಅಪ್ಪ ಕುಡಿದು ಕುಡಿದು ಯಕೃತ್ತಿನ ಸಿರೋಸಿಸ್‌ನಿಂದ ಸತ್ತು ಹೋಗಿರುತ್ತಾನೆ. ಹಾಗಾಗಿ ಈ ವಿಶಾಲ ಜಗತ್ತಿನಲ್ಲಿ ಚಾಪ್ಲಿನ್ ಒಂಟಿಯಾಗುತ್ತಾನೆ. ಎಲ್ಲಿಯೋ ಮಲಗುತ್ತ, ದುಡಿಯುತ್ತ ಇರುವುದು ಚಾಪ್ಲಿನ್‌ಗೆ ಅನಿವಾರ್ಯವಾಗಿ ಬಿಡುತ್ತದೆ. ಅದಾದ ನಂತರ ಎರಡು ವರ್ಷವಾದ ಮೇಲೆ ಅಣ್ಣ ಹಿಂತಿರುಗುತ್ತಾನೆ. ಒಮ್ಮೆ ಚೇತರಿಸಿಕೊಂಡು ಮನೆಗೆ ಮರಳಿದ ತಾಯಿ 1905ರಲ್ಲಿ ಮತ್ತೆ ಆರೋಗ್ಯ ತಪ್ಪುತ್ತಾಳೆ. ಆ ನಂತರ ಬೇರೆ ದಾರಿಯೇ ಇಲ್ಲದೇ ಅವಳನ್ನು ಶುಶ್ರೂಶಾ ಮಂದಿರಕ್ಕೆ ಸೇರಿಸಬೇಕಾಗುತ್ತದೆ. ಆ ನಂತರ ಅವಳು ಸಾಯುವವರೆಗೆ ಅಲ್ಲಿಯೇ ಬದುಕು ಕಳೆಯುತ್ತಾಳೆ. ಇದೆಲ್ಲದರ ಬಗ್ಗೆ ಬರೆಯುತ್ತ ಚಾಪ್ಲಿನ್ ಹೇಳುತ್ತಾನೆ ‘ನನಗೆ ಇಷ್ಟೆಲ್ಲ ಕೆಟ್ಟ ಪರಿಸ್ಥಿತಿ ಇದೆ ಅಂತ ಗೊತ್ತೇ ಆಗಲಿಲ್ಲ. ಯಾಕೆಂದರೆ ನಾವು ಸದಾಕಾಲ ಬದುಕುತ್ತಿದ್ದುದೇ ಅಂಥ ಪರಿಸ್ಥಿತಿಯಲ್ಲಿ’ ಎಂದು!

ಆಗ ಚಾಪ್ಲಿನ್‌ಗೆ 16 ವರ್ಷ. ನಟನೆಯ ಕಡೆಗೆ ಒಲವಿದ್ದ ಅವನು ಕೆಲವು ಕಂಪನಿಗಳನ್ನು ಸಂಪರ್ಕಿಸಿ ಒಂದಿಷ್ಟು ಕಾಮೆಡಿ ಪಾತ್ರಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಆ ಶೋಗಳು ಹೆಚ್ಚಿನ ಯಶಸ್ಸನ್ನು ಪಡೆಯುವುದಿಲ್ಲವೆಂಬ ಕಾರಣಕ್ಕೆ ನಿಂತುಹೋದರೂ ಚಾಪ್ಲಿನ್‌ನ ನಟನೆ ಎಲ್ಲರ ಗಮನ ಸೆಳೆಯುತ್ತದೆ. ಹೀಗೆ ಪಳಗುತ್ತಾ ಹೋದ ಚಾಪ್ಲಿನ್ 1907ರ ವೇಳೆಗೆ ಕಾಮೆಡಿಯಲ್ಲಿ ಸಾಕಷ್ಟು ಹೆಸರು ಗಳಿಸುತ್ತಾನೆ. ಅಷ್ಟರಲ್ಲಾಗಲೇ ಅಣ್ಣ ಸಿಡ್ನಿ ಕೂಡಾ ಮನರಂಜನಾ ಜಗತ್ತನ್ನು ಪ್ರವೇಶಿಸಿರುತ್ತಾನೆ. ಫ಼್ರೆಡ್ ಕಾರ್ನೋ ಎನ್ನುವ ಹೆಸರುವಾಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಡ್ನಿ ಚಾಪ್ಲಿನ್‌ಗೆ ಕೂಡಾ ಕೆಲಸ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಅವರು ಎರಡು ವಾರಗಳು ಅವನು ಹೇಗೆ ಕೆಲಸ ಮಾಡುತ್ತಾನೆಂದು ನೋಡಿ ನಂತರ ಕೆಲಸದ ಬಗ್ಗೆ ಯೋಚಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಕಾರ್ನೋಗೆ ಮೊದಲ ನೋಟದಲ್ಲಿಯೇ ಚಾಪ್ಲಿನ್ ಹೆಚ್ಚು ಇಷ್ಟವೇನೂ ಆಗಿರುವುದಿಲ್ಲ. ‘ಈ ಮಂಕಾದ, ಸಪ್ಪೆ ಮುಖದ, ಶಕ್ತಿಗುಂದಿದಂತೆ ಕಾಣುವ ಹುಡುಗನಿಂದ ಏನಾಗುತ್ತದೆ’ ಎಂಬ ಭಾವದಲ್ಲಿಯೇ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಕೊಟ್ಟಿರುತ್ತಾರೆ!

ಎಂಥ ವಿಚಿತ್ರ ನೋಡಿ! ತನ್ನ ಹಾವಭಾವದಿಂದ, ಸಣಕಲು ದೇಹದಿಂದ, ಬಾಡಿ ಲ್ಯಾಗ್ವೇಜ್‌ನಿಂದ ಸಿನಿಮಾ ಜಗತ್ತಿನ ಐಕಾನ್ ಆದ ಚಾಪ್ಲಿನ್‌ ಬಗ್ಗೆ ಕಾರ್ನೋಗೆ ಈ ರೀತಿಯ ಅಭಿಪ್ರಾಯ ಮೂಡಿರುತ್ತದೆ! ದನಿ ಸರಿ ಇಲ್ಲವೆಂದು ಆಲ್ ಇಂಡಿಯಾ ರೇಡಿಯೋ ತಿರಸ್ಕರಿಸಿದ ಅಮಿತಾಬ್ ಬಚ್ಚನ್ ಅವನ ಬಣ್ಣ, ರೂಪದ ಕಾರಣದಿಂದ ತಿರಸ್ಕೃತಗೊಂಡ ರಜನಿಕಾಂತ್ ನೂರಾರು ಬಾರಿ ಪ್ರಕಟಣೆಗೆ ಯೋಗ್ಯವಲ್ಲವೆಂದು ತಿರಸ್ಕೃತವಾದ ಜೆ ಕೆ ರೋಲಿಂಗ್‌ಳ ಹ್ಯಾರಿ ಪಾಟರ್ ಟಿವಿ ನ್ಯೂಸ್ ರೀಡರ್ ಆಗಿ ತಿರಸ್ಕೃತಳಾದ ಓಪ್ರಾ ವಿನ್‌ಫ಼್ರೆ… ಹೀಗೆ ಯೋಗ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅದೇ ಜಗತ್ತಿನಲ್ಲಿಯೇ ಅವರು ಐಕಾನ್‌ಗಳಾಗಿ ಪ್ರಖರವಾಗಿ ಬೆಳಗಿದವರ ವಿಜಯದ ಕಥೆಗಳು ಯಾವತ್ತೂ ಕೇಳಲು ಚೆಂದ. ಅದರಲ್ಲೂ ಬದುಕಿನಲ್ಲಿ ಕಾಲೂರಲು ಪ್ರಯತ್ನಿಸುತ್ತಿರುವ ಪ್ರತಿ ಹೋರಾಟದ ಜೀವಕ್ಕೂ ಇಂಥ ಗೆಲುವು ಕಂಡವರು ಭರವಸೆಯ ಕಿರಣಗಳಾಗುತ್ತಾರೆ. ಇವರೆಲ್ಲರ ಸಾಲಿಗೆ ಮೊದಲಿಗನಾಗಿ ನಿಲ್ಲುತ್ತಾನೆ ಚಾರ್ಲಿ ಚಾಪ್ಲಿನ್!

ಆದರೆ ಮೊದಲ ದಿನವೇ ಚಾಪ್ಲಿನ್‌ನ ಶೋ ಜನರಿಗೆ ತುಂಬ ಮೆಚ್ಚಿಗೆಯಾಗಿ, ಕೂಡಲೆ ಕಂಪನಿ ಅವನ ಜೊತೆ ಕರಾರು ಒಪ್ಪಂದಕ್ಕೆ ಸಹಿ ಹಾಕುತ್ತದೆ! ಮೊದಲಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಚಾಪ್ಲಿನ್‌, ಕೇವಲ ಎರಡು ವರ್ಷಗಳಲ್ಲಿ ಮುಖ್ಯ ಪಾತ್ರಗಳನ್ನು ಕೊಡುವಷ್ಟು ವಿಶಿಷ್ಟ ಛಾಪು ಮೂಡಿಸುತ್ತಾನೆ. 1910ರ ವೇಳೆಗೆ ಅವನ ಪಾತ್ರಗಳು ಎಷ್ಟು ಮೆಚ್ಚಿಗೆ ಗಳಿಸುತ್ತದೆಂದರೆ, ಕಾರ್ನೋ ಅಮೆರಿಕಾಗೆ ಶೋಗಳನ್ನು ಮಾಡಿಸುವ ಟೂರ್ ಹಾಕಿದಾಗ ಅದಕ್ಕೆ ಚಾಪ್ಲಿನ್ ಕೂಡಾ ಆಯ್ಕೆಯಾಗುತ್ತಾನೆ! ಎರಡು ವರ್ಷಗಳ ಕಾಲ ನಡೆದ ಆ ಟೂರ್‌ನಲ್ಲಿ ಚಾಪ್ಲಿನ್ ಸಾಕಷ್ಟು ಹೆಸರು ಮಾಡುತ್ತಾನೆ. ಆ ನಂತರ ಎರಡು ವರ್ಷ ಅಮೆರಿಕಾದಲ್ಲಿ ಟೂರ್ ಮಾಡುತ್ತಾ ಕಾರ್ಯಕ್ರಮಗಳನ್ನು ಕೊಡುತ್ತಿರುವಾಗ 1913ರಲ್ಲಿ ಅವನ ಬದುಕಿನಲ್ಲಿ ಒಂದು ವಿಚಿತ್ರ ಘಟಿಸುತ್ತದೆ…

ಒಂದು ದಿನ ಫ಼್ರೆಡ್ ಕಾರ್ನೋ ಥಿಯೆಟ್ರಿಕಲ್ ಕಂಪನಿಯ ಮ್ಯಾನೇಜರ್ ಆಲ್ಫ್ರೆಡ್ ರೀವ್ಸ್‌ಗೆ ಒಂದು ಟೆಲಿಗ್ರಾಮ್ ಬರುತ್ತದೆ ‘ನಿಮ್ಮ ಕಂಪನಿಯಲ್ಲಿ ಚಾಫಿನ್‌ ಅನ್ನುವ ವ್ಯಕ್ತಿ ಇದ್ದಾನಾ. ಇದ್ದರೆ ಈ ಸ್ಥಳಕ್ಕೆ ಬಂದು ಇಂಥವರನ್ನು ಭೇಟಿಯಾಗಲಿ’ ಎಂದು ಅಡ್ರೆಸ್ ಕೊಟ್ಟಿರುತ್ತಾರೆ. ಆ ರೀತಿಯ ಹೆಸರಿನವರು ಯಾರೂ ಅಲ್ಲಿ ಇರುವುದಿಲ್ಲ. ಹಾಗಾಗಿ ಆ ಟೆಲಿಗ್ರಾಮನ್ನು ನಿರ್ಲಕ್ಷಿಸಲು ಹೋದವನಿಗೆ ಇದ್ದಕ್ಕಿದ್ದಂತೆ ಅದು ಚಾಪ್ಲಿನ್ ಇರಬಹುದಾ ಅನ್ನಿಸಿ, ಅವನ ಬಳಿ ಬಂದು ‘ಇದು ನಿನಗೆ ಇರಬಹುದಾ’ ಎಂದು ಆ ಟೆಲಿಗ್ರಾಮ್ ತೋರಿಸುತ್ತಾನೆ. ಚಾಪ್ಲಿನ್ ಆ ಅಡ್ರೆಸ್ ಬಗ್ಗೆ ವಿಚಾರಿಸಿದಾಗ ಅದು ನ್ಯೂಯಾರ್ಕ್‌ನ Longacre buildinನಿಂದ ಬಂದಿರುವುದು ಎಂದು ತಿಳಿಯುತ್ತದೆ. ಅದರಲ್ಲಿ ಬರೀ ಲಾಯರ್‌ಗಳೇ ಇರುವುದನ್ನು ನೋಡಿದವನು ಎಲ್ಲೋ ಅವನ ದೊಡ್ಡಜ್ಜಿ ಎಲಿಜ಼ಬೆತ್ ಸತ್ತು ಹೋಗಿ ಆಸ್ತಿಯನ್ನೆಲ್ಲ ಅವನ ಹೆಸರಿಗೇನಾದರೂ ಬರೆದಿರಬಹುದಾ ಎಂದು ಕಲ್ಪನೆ ಮಾಡಿಕೊಂಡು ಸಂಭ್ರಮಿಸುತ್ತಾ ನ್ಯೂಯಾರ್ಕ್‌ಗೆ ಓಡುತ್ತಾನೆ! ಅಲ್ಲಿಗೆ ಹೋದ ನಂತರ ನೋಡಿದರೆ ಅದು ನ್ಯೂಯಾರ್ಕ್ ಮೋಷನ್ ಪಿಕ್ಚರ್ ಕಂಪನಿಯವರ ಅಡ್ರೆಸ್ ಎಂದು ತಿಳಿಯುತ್ತದೆ. ಆಸ್ತಿಯ ನಿರೀಕ್ಷೆಯಲ್ಲಿದ್ದ ಚಾಪ್ಲಿನ್‌ಗೆ ಇದರಿಂದ ನಿರಾಶೆಯಾಗುತ್ತದೆ. ಆದರೆ ಆ ನಂತರ ತಿಳಿಯುವುದೇನೆಂದರೆ – ಅವರು ಚಾಪ್ಲಿನ್‌ನ ಯಾವುದೋ ಶೋ ನೋಡಿ ಅದನ್ನು ಮೆಚ್ಚಿ ಅವರ ಅಧೀನದಲ್ಲಿದ್ದ ಕೀಸ್ಟೋನ್ ಕಂಪನಿ ತಯಾರಿಸುವ ಸಿನೆಮಾಗಳಲ್ಲಿ ಮುಖ್ಯ ನಟನ ಸ್ಥಾನಕ್ಕೆ ಕೆಲಸಕ್ಕೆ ಕರೆಯುತ್ತಿದ್ದಾರೆ ಎಂದು! ಅದು ಚಾಪ್ಲಿನ್‌ಗೆ ಸಿನಿಮಾ ಜಗತ್ತಿನ ಮೊತ್ತಮೊದಲ ಆಹ್ವಾನ… ಅದೂ ಅವನ ವಾರಕ್ಕೆ 150 ಡಾಲರ್ ಸಂಬಳಕ್ಕೆ! ಫ್ರೆಡ್ ಕಾರ್ನೋ

ಕಂಪನಿಯಲ್ಲಿ ಆಗ ಚಾಪ್ಲಿನ್‌ಗೆ ಸಿಗುತ್ತಿದ್ದ ಸಂಬಳ ವಾರಕ್ಕೆ 75 ಡಾಲರ್‌ಗಳು! ಅವರ ಆಹ್ವಾನವನ್ನು ಒಪ್ಪಿ ಒಂದು ವರ್ಷದ ಕರಾರಿಗೆ ಸಹಿ ಹಾಕುತ್ತಾನೆ. ಅದು ಇಸವಿ 1913. ಚಾಪ್ಲಿನ್‌ಗೆ ಸಿನಿಮಾದಲ್ಲಿ ನಟಿಸಬೇಕೆನ್ನುವ ಕನಸಿರುತ್ತದಾದರೂ, ಕೀಸ್ಟೋನ್ ಕಂಪನಿಯ ಕರಾರು ಅವನಿಗೆ ತುಂಬ ಸಂತೋಷವನ್ನೇನೂ ತರುವುದಿಲ್ಲ. ಏಕೆಂದರೆ ಅವರು ತಯಾರಿಸುತ್ತಿದ್ದ ಚಿತ್ರಗಳೆಲ್ಲ ತುಂಬ ಸಾಧಾರಣ ಗುಣಮಟ್ಟದ ಕಾಮೆಡಿ. ಅವನು ತಯಾರಿಸುತ್ತಿದ್ದ ಚಿತ್ರಗಳೆಲ್ಲ ಬಾಳೆ ಹಣ್ಣಿನ ಸಿಪ್ಪೆ ಜಾರಿ ಯಾರೋ ಬೀಳುವುದು, ಹಾಕಿದವರನ್ನು ಅಟ್ಟಿಸಿಕೊಂಡು ಹೋಗುವುದು ತೋಟದಲ್ಲಿನ ನೀರಿನ ಪೈಪ್ ಮೇಲೆ ಕಾಲಿಟ್ಟು ಅದು ಯಾರದ್ದೋ ಮುಖಕ್ಕೆ ಸಿಡಿದು ಕಾಲಿಟ್ಟವರನ್ನು ಅಟ್ಟಿಸಿಕೊಂಡು ಹೋಗುವುದು ಯಾರದ್ದೋ ಪೃಷ್ಟಕ್ಕೆ ಯಾರೋ ಒದೆಯುವುದು, ಒದ್ದವರನ್ನು ಅಟ್ಟಿಸಿಕೊಂಡು ಹೋಗುವುದು ಈ ರೀತಿಯ ಅತಿ ಸಾಧಾರಣ ಚಿತ್ರಗಳು. ಯಾವುದಕ್ಕೂ ಸ್ಕ್ರಿಪ್ಟ್ ಎನ್ನುವುದೇ ಇಲ್ಲ. ಚಾಪ್ಲಿನ್ ಈ ರೀತಿ ಅಟ್ಟಿಸಿಕೊಂಡು ಹೋಗುವ ಚಿತ್ರಗಳು ಬಹಳ ಕಳಪೆ ಎನ್ನಿಸಲಾರಂಭಿಸುತ್ತದೆ. ಆದರೆ ಒಳ್ಳೆಯ ಸಂಬಳವಾದ್ದರಿಂದ ನಿರಾಕರಿಸುವಂತೆ ಇರಲಿಲ್ಲ. ಅವರು ಒಂದು ತಿಂಗಳಿಗೆ ಒಂದು ರೀಲ್‌ನ 12 ಸಿನಿಮಾಗಳು ಮತ್ತು ಎರಡು ರೀಲ್‌ನ 1 ಸಿನಿಮಾ ತಯಾರಿಸುತ್ತಿರುತ್ತಾರೆ. ಅವುಗಳಲ್ಲಿ ಪಾತ್ರ ಮಾಡುವ ಕರಾರಿಗೆ ಸಹಿ ಮಾಡುತ್ತಾನೆ ಚಾಪ್ಲಿನ್.

‘ಮೇಕಿಂಗ್ ಎ ಲಿವಿಂಗ್‌’ (1914)

ಕೀಸ್ಟೋನ್ ಕಂಪನಿಗೆ ಅವನು ಕಾಲಿಟ್ಟ ಕೂಡಲೇ ಅಲ್ಲಿನ ಮುಖ್ಯಸ್ಥ ಸೆನೆಟ್‍ಗೆ ಅವನನ್ನು ಕಂಡು ನಿರಾಸೆಯಾಗುತ್ತದೆ. ಅಲ್ಲಿಯವರೆಗೆ ವಯಸ್ಸಾದವರ ಜೊತೆ ಕೆಲಸ ಮಾಡಿದ ಸೆನೆಟ್‌ಗೆ ಚಾಪ್ಲಿನ್ ಬಹಳ ಎಳಸು ಅನ್ನಿಸಲಾರಂಭಿಸುತ್ತದೆ. ಆದರೂ ಚಾಪ್ಲಿನ್ ಜೊತೆ ಮೊದಲ ಸಿನಿಮಾ ‘ಮೇಕಿಂಗ್ ಎ ಲಿವಿಂಗ್’ ಪ್ರಾರಂಭವಾಗುತ್ತದೆ. ಶೂಟಿಂಗ್‌ಗೆ ಮೊದಲು ಸೆನೆಟ್ ‘ಈಗ ಈ ಶೂಟಿಂಗ್ ಹೇಗಿರತ್ತೆ ಅಂದರೆ ಒಂದು ಐಡಿಯಾ ತಗೊಳೋದು. ಅದರ ಪ್ರಕಾರ ಶುರು ಮಾಡೋದು. ಆಮೇಲೆ ಹಾಗೇ ಅದರ ಪಾಡಿಗದು ಚೇಸ್ ಸೀನ್ ಥರ ಶುರುವಾಗತ್ತಲ್ಲ, ಅದನ್ನ ಶೂಟಿಂಗ್ ಮಾಡ್ತಾ ಹೋಗೋದು. ಅಂಥ ಕಾಮೆಡಿ ಚಿತ್ರ ಇದು’ ಅಂದಾಗ ಚಾಪ್ಲಿನ್‌ಗೆ ನಿರಾಸೆಯಾಗುತ್ತದೆ. ಮೊದಲಿಗೆ ಅದು ಮತ್ತೊಂದು ಕಳಪೆ ಚೇಸ್ ಚಿತ್ರ ಅನ್ನುವ ನಿರಾಸೆ. ಮತ್ತೊಂದೆಡೆ ಕಾರ್ನೋ ಕಂಪನಿಯಲ್ಲಿ ತಿಂಗಳುಗಟ್ಟಲೆ ರಿಹರ್ಸಲ್ ನಡೆಸಿ. ಮತ್ತೆ ಪ್ರತಿ ಸ್ಟೇಜ್ ಶೋ ನಂತರವೂ ತಿದ್ದಿ ತೀಡಿ ಪಾತ್ರವನ್ನು ಒಪ್ಪ ಓರಣ ಮಾಡುತ್ತಿದ್ದಂಥ ವಾತಾವರಣದಲ್ಲಿ ಕೆಲಸ ಮಾಡಿದವನಿಗೆ ‘ಹೀಗೂ ಚಿತ್ರ ಮಾಡುತ್ತಾರಾ’ ಎನ್ನುವ ನಿರಾಸೆ. ನಿಧಾನವಾಗಿ ಕಥೆ ಹೇಳುವ ರೀತಿಯಲ್ಲಿ ಸಿನಿಮಾ ಮಾಡುವುದರ ಕಡೆಗೆ ಒಲವಿದ್ದ ಚಾಪ್ಲಿನ್‌ಗೆ ಅಲ್ಲಿ ಇಲ್ಲಿ ತುಂಡುಗಳನ್ನೆಲ್ಲ ಸೇರಿಸಿ ಸಿನಿಮಾ ಆಗಿಸುವ ಪ್ರಕ್ರಿಯೆ ಅರಗಿಸಿಕೊಳ್ಳುವುದೇ ಕಷ್ಟವಾಗುತ್ತದೆ.

ಅದು ಚಾಪ್ಲಿನ್‍ನ ಮೊದಲ ಸಿನಿಮಾ ನಟನೆಯ ಅನುಭವ. ಮೂರು ದಿನದಲ್ಲಿ ಚಿತ್ರ ಮುಗಿಯುತ್ತದೆ. ಇದ್ದುದರಲ್ಲೇ ಏನೋ ಹೊಸತನ ತರಲು ಪ್ರಯತ್ನಿಸುತ್ತಾನೆ ಚಾಪ್ಲಿನ್. ತನ್ನ ಪಾತ್ರಕ್ಕೆ ಏನೇನೋ ಸೇರಿಸಿ ನಟಿಸಿ ‘ಓ ಪರವಾಗಿಲ್ಲ ಚೆನ್ನಾಗಿ ಮಾಡಿದ್ದೀನಿ’ ಎಂದು ಸಮಾಧಾನ ತಾಳುತ್ತಾನೆ. ಆದರೆ ಚಿತ್ರ ಪೂರ್ತಿ ತಯಾರಾದ ಮೇಲೆ ಅದನ್ನು ನೋಡಿದಾಗ ಚಾಪ್ಲಿನ್ ಆಘಾತಗೊಳ್ಳುತ್ತಾನೆ. ಅವನ ಪಾತ್ರವನ್ನು ಮನಸ್ಸು ಬಂದ ಕಡೆ ಕಸಾಯಿ ಖಾನೆಯಲ್ಲಿ ಪ್ರಾಣಿಯ ದೇಹದಂತೆ ತರಿದು ಹಾಕಲಾಗಿರುತ್ತದೆ! ಅವನು ಅಷ್ಟೆಲ್ಲ ಯೋಚಿಸಿ ಮಾಡಿದ ಕಾಮೆಡಿಯ ದೃಶ್ಯಗಳೆಲ್ಲ ನಡುನಡುವೆ ಎಡಿಟ್ ಆಗಿ ಅವನ ಪ್ರಯತ್ನವೆಲ್ಲ ನೀರಿನಲ್ಲಿ ಹುಳಿ ಹಿಂಡಿದಂತಾಗಿ ಹೋಗಿರುತ್ತದೆ. ಚಾಪ್ಲಿನ್‌ಗೆ ಅಷ್ಟೆಲ್ಲ ಅಸಮಾಧಾನ ಮೂಡಿಸಿದ್ದರೂ ಚಿತ್ರ ಸಾಕಷ್ಟು ಚೆನ್ನಾಗಿ ಓಡುತ್ತದೆ ಮತ್ತು ಚಾಪ್ಲಿನ್‌ನ ಪಾತ್ರ ಪ್ರಶಂಸೆಗೆ ಒಳಗಾಗುತ್ತದೆ. ಪತ್ರಿಕೆಗಳಲ್ಲಿ ಅವನ ಪಾತ್ರದ ಬಗ್ಗೆಯೇ ವಿಶೇಷವಾಗಿ ಉಲ್ಲೇಖಿಸಿ ಬರೆಯುತ್ತಾರೆ ಕೂಡಾ.

‘ಮೇಬಲ್ಸ್‌ ಸ್ಟ್ರೇಂಜ್ ಪ್ರೆಡಿಕಮೆಂಟ್‌

ಆ ನಂತರ 1914ರಲ್ಲಿ ಎರಡನೆಯ ಚಿತ್ರ ‘ಮೇಬಲ್ಸ್ ಸ್ಟ್ರೇಂಜ್ ಪ್ರೆಡಿಕಮೆಂಟ್‌’ಗೆ ಸಿದ್ದತೆ ನಡೆಯುತ್ತದೆ. ಅದರಲ್ಲಿ ಒಂದು ಸಣ್ಣ ಪಾತ್ರ ಕೊಟ್ಟ ಸೆನೆಟ್ ಚಾಪ್ಲಿನ್‌ಗೆ ‘ಏನಾದರೊಂದು ಕಾಮೆಡಿ ಮೇಕಪ್ ಹಾಕಿಕೋ’ ಎನ್ನುತ್ತಾನೆ. ಇದ್ದಕ್ಕಿದ್ದಂತೆ ಮೇಕಪ್ ಹಾಕಿಕೋ ಎಂದರೆ ಏನು ಹಾಕಿಕೊಳ್ಳಬೇಕು! ಅವನಿಗೆ ಮೇಕಪ್‌ನಲ್ಲಿ ಯಾವ ಅನುಭವವೂ ಇರುವುದಿಲ್ಲ. ಏನೂ ತೋಚದ ಚಾಪ್ಲಿನ್ ತನ್ನ ವೇಷಭೂಷಣ ವಿಚಿತ್ರವಾಗಿ ಕಾಣಿಸಲಿ ಎಂದು ಒಂದು ದೊಗಲೆ ಪ್ಯಾಂಟ್, ಬಿಗಿಯಾದ ಕೋಟ್, ಹ್ಯಾಟ್, ಕೈಲೊಂದು ಬೆತ್ತ ಮತ್ತು ತನ್ನ ಅಳತೆಗಿಂತ ತುಂಬ ದೊಡ್ಡದಾದ ಶೂ ಹಾಕಿಕೊಂಡು ತಯಾರಾಗುತ್ತಾನೆ. ಸೆನೆಟ್‌ಗೆ ಹೆಚ್ಚು ವಯಸ್ಸಾಗಿರುವ ನಟ ಬೇಕೆಂದು ಗೊತ್ತಿದ್ದರಿಂದ ಕೊನೆ ಘಳಿಗೆಯಲ್ಲಿ ಒಂದು ಸಣ್ಣ ನೊಣದಂಥ ಮೀಸೆಯನ್ನು ಅಂಟಿಸಿಕೊಳ್ಳುತ್ತಾನೆ. ದೊಡ್ಡ ಮೀಸೆ ಮುಖದ ಭಾವನೆಗಳೆಲ್ಲ ಮರೆಮಾಚುತ್ತದಾದ್ದರಿಂದ ಸಣ್ಣ ಮೀಸೆ ಸಾಕೆಂದು ನಿರ್ಧರಿಸುತ್ತಾನೆ. ಹೀಗೆ ಸಿಕ್ಕಿದ್ದನ್ನೆಲ್ಲ ಹಾಕಿಕೊಂಡ ಆ ಕ್ಷಣಕ್ಕೆ ಚಾಪ್ಲಿನ್‌ಗೆ ‘ಇದು… ಇದೇ ಆ ಪಾತ್ರಕ್ಕೆ ತಕ್ಕ ವೇಷ’ ಎನ್ನಿಸಲಾರಂಭಿಸುತ್ತದೆ. ಹಾಗೆ ಹುಟ್ಟಿರುತ್ತದೆ ಚಾಪ್ಲಿನ್‌ನ ಎಲ್ಲ ಚಿತ್ರಗಳಲ್ಲಿ ಪ್ರಸಿದ್ಧವಾದ ‘‘ಟ್ರ್ಯಾಂಪ್”ನ ವೇಷ! ಅದು ನಂತರ ಚಾಪ್ಲಿನ್‌ನ ಪಾತ್ರಗಳ ಭಾಗವೇ ಆಗಿ ಉಳಿಯುತ್ತದೆ ‘The great Dictator’ ಚಿತ್ರದವರೆಗೂ ಮತ್ತು ಚಲನಚಿತ್ರರಂಗದಲ್ಲಿ ಚರಿತ್ರೆಯಲ್ಲಿಯೂ ಈ ಪಾತ್ರ ಚಿರಸ್ಥಾಯಿಯಾಗಿ ಉಳಿಯುತ್ತದೆ!!

‘ಕಿಡ್ ಆಟೋ ರೇಸಸ್‌ ಅಟ್ ವೆನಿಸ್‌, ಕಾಲ್‌

ಚಾಪ್ಲಿನ್‌ನ ಆ ಪಾತ್ರ ಶೂಟಿಂಗ್ ನಡೆಸಿದಷ್ಟು ಭಾಗದಲ್ಲಿ ಒಂದೇ ಒಂದು ಇಂಚನ್ನೂ ಕತ್ತರಿಸದಂತೆ ಇಡೀ ಪಾತ್ರ ಚಿತ್ರದಲ್ಲಿ ಉಳಿಯುತ್ತದೆ. ಅದು ಚಾಪ್ಲಿನ್ ಮಟ್ಟಿಗೆ ಆ ದಿನಕ್ಕೆ ದೊಡ್ಡ ಗೆಲುವು ಎಂದೇ ಹೇಳಬೇಕು. ಆ ಪಾತ್ರವನ್ನು ತುಂಬ ಮೆಚ್ಚಿದ ಸೆನೆಟ್, ಇಡೀ ಚಿತ್ರದುದ್ದಕ್ಕೂ ಅಲ್ಲಲ್ಲಿ ಎಲ್ಲ ಸೀನ್‌ಗಳಲ್ಲಿಯೂ ಸೇರಿಸುತ್ತಾನೆ. ಆಗ ಚಾಪ್ಲಿನ್ ‘ಇನ್ನು ಮುಂದೆ ಏನೇ ಆಗಲಿ ಈ ಟ್ರ್ಯಾಂಪ್ ವೇಷವನ್ನು ಎಲ್ಲ ಸಿನಿಮಾಗಳಲ್ಲಿಯೂ ಉಳಿಸಿಕೊಳ್ಳಬೇಕು’ ಎಂದು ಯೋಚಿಸುತ್ತಾನೆ. ಆ ಚಿತ್ರದಲ್ಲಿ ಮೊದಲು ಟ್ರ್ಯಾಂಪ್‌ನ ವೇಷ ಹಾಕಿದರೂ, ಅದರ ನಂತರ ತಯಾರಿಸಿದ ‘Kid auto races at Venice, cal.’ ಮೊದಲು ಬಿಡುಗಡೆಯಾಗುತ್ತದೆ. ಅದರಲ್ಲಿಯೂ ಚಾಪ್ಲಿನ್ ಅದೇ ಟ್ರ್ಯಾಂಪ್ ಪಾತ್ರವನ್ನೇ ಧರಿಸಿರುತ್ತಾನೆ. ಅದು ಟ್ರ್ಯಾಂಪ್ ಪಾತ್ರದ ಮೊದಲು ಅಧಿಕೃತವಾಗಿ ಬಿಡುಗಡೆಯಾದ ಚಿತ್ರ. ಆ ಚಿತ್ರದಲ್ಲಿನ ಅವನ ಪಾತ್ರ ಜನರಿಗೆ ಕಚಗುಳಿ ಇಟ್ಟು ನಗಿಸುತ್ತದೆ, ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ, ಉರುಳಾಡಿ ನಗಿಸಿ ಬಿಡುತ್ತದೆ! ಅನಿರೀಕ್ಷಿತ ಸನ್ನಿವೇಶದಲ್ಲಿ ತಬ್ಬಿಬ್ಬಾಗುವ, ತೊಂದರೆಗೆ ಸಿಲುಕುವ ಆ ಪಾತ್ರದೊಡನೆ ಜನರು ತಮ್ಮನ್ನೇ ಗುರುತಿಸಿಕೊಳ್ಳಲು ಪ್ರಾರಂಭಿಸುತ್ತಾರೆ.

‘ಟ್ವೆಂಟಿ ಮಿನಿಟ್ಸ್ ಆಫ್ ಲವ್‌’

ಆ ನಂತರ ಚಾಪ್ಲಿನ್ ತನ್ನ ಪಾತ್ರಗಳಲ್ಲಿ ಹೊಸತನ ತರುವ ರೀತಿಯಲ್ಲಿ ನಾನಾ ಬದಲಾವಣೆಗಳನ್ನು ಸೂಚಿಸುತ್ತ ಹೋಗುತ್ತಾನೆ. ಅದು ಸೆನೆಟ್‌ಗೆ ಇಷ್ಟವಾಗುವುದಿಲ್ಲ. ಅವನಿಗೆ ಎಷ್ಟು ತಲೆ ಕೆಡುತ್ತದೆ ಎಂದರೆ ಚಾಪ್ಲಿನ್‌‌ಗೆ ಕಂಪನಿಯಿಂದ ಗೇಟ್‌ಪಾಸ್ ಕೊಡಲು ಸಿದ್ದನಾಗುತ್ತಾನೆ. ಅಷ್ಟರಲ್ಲಿ ಕಂಪನಿಯಿಂದ ಹೆಚ್ಚು ಹೆಚ್ಚು ಚಾಪ್ಲಿನ್ ಚಿತ್ರಗಳನ್ನು ತಯಾರಿಸಲು ಸೂಚಿಸುವ ಟೆಲಿಗ್ರಾಮ್ ಬರುತ್ತದೆ! ಆಗ ಸೆನೆಟ್‌ ಚಾಪ್ಲಿನ್ ಜೊತೆ ರಾಜಿ ಸಂಧಾನಕ್ಕಿಳಿಯುತ್ತಾನೆ. ಅದೇ ಅವಕಾಶಕ್ಕೆ ಕಾಯುತ್ತಿದ್ದ ಚಾಪ್ಲಿನ್, ತನ್ನ ಚಿತ್ರಗಳನ್ನು ತಾನೇ ನಿರ್ದೇಶಿಸುತ್ತೇನೆ ಎನ್ನುತ್ತಾನೆ. ಅವನು ಹಿಂದೆ ಮುಂದೆ ನೋಡುವಾಗ ಚಾಪ್ಲಿನ್ ತನ್ನ ಆವರೆಗಿನ ಉಳಿಕೆ ಹಣವಾದ 1500 ಡಾಲರ್‌ಗಳನ್ನು ಠೇವಣಿಯಾಗಿ ಇಡುತ್ತೇನೆ, ಚಿತ್ರ ಬಿಡುಗಡೆಯಾಗದಿದ್ದರೆ ಆ ಹಣವನ್ನು ಕಂಪನಿ ಮುಟ್ಟುಗೋಲು ಹಾಕಿಕೊಳ್ಳಿ ಎನ್ನುತ್ತಾನೆ. ಅದಕ್ಕೆ ಒಪ್ಪಿದ ಸೆನೆಟ್ ಬಿಡುಗಡೆಯಾದ ಪ್ರತಿ ಚಿತ್ರಕ್ಕೆ 25 ಡಾಲರ್ ಬೋನಸ್ ಕೊಡುತ್ತೇನೆ ಎನ್ನುವಷ್ಟು ಧಾರಾಳಿಯಾಗುತ್ತಾನೆ! ಆ ನಂತರ ಚಾಪ್ಲಿನ್ ‘Twenty minutes of love’ ಮತ್ತು `Caught in the rain’ ಎಂಬ ಎರಡು ಚಿತ್ರಗಳನ್ನು ತಯಾರಿಸುತ್ತಾನೆ. ಪಾತ್ರಗಳ ಕಟ್ಟುವಿಕೆಯಲ್ಲಿ ಕುಸುರಿ ಕೆಲಸ ಮಾಡಿದ ಚಾಪ್ಲಿನ್‌ನ ಆ ಸದಭಿರುಚಿಯ ಕಾಮೆಡಿ ಸಿನೆಮಾಗಳು ಅತ್ಯಂತ ಜನಪ್ರಿಯವಾಗುತ್ತದೆ. ಟ್ರ್ಯಾಂಪ್ ಪಾತ್ರ ವಹಿಸಿದ ಚಾಪ್ಲಿನ್‌ನ ಚಿತ್ರಗಳಿಗೆ ಜನರು ಎದುರು ನೋಡಲಾರಂಭಿಸುತ್ತಾರೆ.

ಆ ನಂತರದ ದಿನಗಳಲ್ಲಿ ಟ್ರ್ಯಾಂಪ್‌ನ ಪಾತ್ರಕ್ಕೆ ಹೊಸ ಹೊಸ ಮ್ಯಾನೆರಿಸಂಗಳನ್ನು ಸೇರಿಸುತ್ತಾ ಹೋಗುತ್ತಾನೆ ಚಾಪ್ಲಿನ್. ಅಡ್ಡಡ್ಡಲಾಗಿ ಹೆಜ್ಜೆ ಹಾಕುತ್ತ ನಡೆಯುವ ರೀತಿ, ವಿಚಿತ್ರವಾಗಿ ಓಡುವ ರೀತಿ, ಬ್ರೇಕ್ ಹಾಕಿದಂತೆ ನಿಲ್ಲುವ ರೀತಿ, ಮೀಸೆ ಕುಣಿಸುವ ರೀತಿ, ಕ್ಯಾಮೆರಾದ ಕಡೆ ನೋಡುತ್ತ ಅವನು ತೋರುವ ಮುಖಭಾವಗಳು ಎಲ್ಲವೂ ಸೇರುತ್ತ ಹೋದಂತೆ ಜನ ಅವನ ಚಿತ್ರಗಳಿಗೆ ಹುಚ್ಚೆದ್ದು ಕಾಯುವಂತಾಗಿ ಬಿಡುತ್ತದೆ. ಆ ದಿನದಲ್ಲೇ ಅವನ ಹೊಸ ಸಿನಿಮಾ ‘The New Janitor’ನಲ್ಲಿ ಹೊಸದೊಂದು ಪ್ರಯೋಗ ನಡೆಸುತ್ತಾನೆ ಚಾಪ್ಲಿನ್. ಅದರಲ್ಲಿ ಮ್ಯಾನೇಜರ್ ಚಾಪ್ಲಿನ್ನನ್ನು ಕೆಲಸದಿಂದ ತೆಗೆದು ಹಾಕಿದಾಗ ‘ದೊಡ್ಡ ಸಂಸಾರ, ಮನೆಯಲ್ಲಿ ಪುಟ್ಟ ಮಕ್ಕಳು’ ಎಂದು ಬೇಡಿಕೊಳ್ಳುತ್ತಾ ಮ್ಯಾನೇಜರ್ ಹಿಂದೆ ಅಲೆಯುವ ಆ ಪಾತ್ರ ಮಾಡುವಾಗ ಕಾಮೆಡಿಯ ಜೊತೆಜೊತೆಗೆ ಆ ಪಾತ್ರಕ್ಕೆ ಒಂದು ರೀತಿಯ ದೈನ್ಯತೆ, ಕಾರುಣ್ಯದ ಸೆಂಟಿಮೆಂಟ್ ಸೇರಿಸುತ್ತಾನೆ. ಆ ಶೂಟಿಂಗ್ ನಡೆಯುವಾಗ ಅಲ್ಲಿಯೇ ಇದ್ದ ನಟಿಯೊಬ್ಬಳು ‘ನಿನ್ನ ಪಾತ್ರ ನಗೆ ತರಿಸಲೆಂದೇ ಮಾಡಿದ್ದು, ಗೊತ್ತು. ಆದರೆ ನನಗೆ ಅದನ್ನು ನೋಡುತ್ತಾ ಅಳು ಬಂತು’ ಎನ್ನುತ್ತಾಳೆ. ಅಷ್ಟರಲ್ಲಾಗಲೇ ಚಾಪ್ಲಿನ್ ಮನಸ್ಸಿನಲ್ಲಿಯೂ ತಾನು ನಗುವಿನ ಜೊತೆಗೆ ಕಣ್ಣೀರನ್ನೂ ತರಿಸಬಲ್ಲ ಶಕ್ತಿ ಇರುವಂಥವನು ಎನ್ನುವ ಯೋಚನೆ ಬಂದಿರುತ್ತದೆ. ಈಗ ಆ ನಟಿಯ ಮಾತು ಕೇಳಿ ಆ ನಿರ್ಧಾರ ಗಟ್ಟಿಯಾಗುತ್ತದೆ. ‘ಅದು ಮುಂದಿನ ಸಿನಿಮಾಗಳಲ್ಲಿನ ತನ್ನ ಪಾತ್ರ ಹೇಗಿರಬೇಕೆಂದು ರೂಪುಗೊಂಡ ಘಳಿಗೆ’ ಎನ್ನುತ್ತಾನೆ ಚಾಪ್ಲಿನ್. ನಂತರದ ದಿನಗಳಲ್ಲಿ ಚಾಪ್ಲಿನ್ ಸಿನಿಮಾ ಪ್ರದರ್ಶನವಿರುವ ಕಡೆ ಟ್ರ್ಯಾಂಪ್‌ನ ಚಿತ್ರವಿರುವ ರಟ್ಟೊಂದನ್ನು ಸಿಕ್ಕಿಸಿ ‘ನಾನು ಬರುತ್ತಿದ್ದೇನೆ’ ಎಂದು ಹಾಕಿದರೆ ಸಾಕು ಜನ ಮುಗಿಬಿದ್ದು ಚಿತ್ರ ನೋಡುವಂತಾಗಿ ಬಿಡುತ್ತದೆ!

ಅಷ್ಟರಲ್ಲಿ ಕೀಸ್ಟೋನ್ ಕಂಪನಿಯ ಕರಾರು ಮುಗಿಯುವ ಸಮಯವಾಗಿರುತ್ತದೆ. ಅವನ ಕರಾರುಪತ್ರವನ್ನು ನವೀಕರಿಸಲು ಬಂದಾಗ ಚಾಪ್ಲಿನ್ ವಾರವೊಂದಕ್ಕೆ 1000 ಡಾಲರ್ ಸಂಬಳ ಬೇಕೆಂದು ಕೇಳುತ್ತಾನೆ. ಸೆನೆಟ್ ‘ಇದು ತೀರ ಅತಿಯಾಯಿತು. ನನಗೇ ಅಷ್ಟು ಸಂಬಳ ಬರುವುದಿಲ್ಲ’ ಎನ್ನುತ್ತಾನೆ. ಆಗ ಚಾಪ್ಲಿನ್ ‘ಹೌದು ಅದು ನಿಜ. ಆದರೆ ಜನರು ನಿನ್ನ ಹೆಸರು ನೋಡಿ ಕ್ಯೂ ನಿಲ್ಲುವುದಿಲ್ಲ… ನನ್ನ ಹೆಸರು ನೋಡಿಯಷ್ಟೇ ನಿಲ್ಲುತ್ತಾರೆ’ ಎನ್ನುತ್ತಾನೆ! ಆದರೆ ಸೆನೆಟ್ ಅವನ ಬೇಡಿಕೆಯನ್ನು ನಿರಾಕರಿಸುತ್ತಾನೆ. ಆ ನಂತರ ಅಲ್ಲಿಂದ ಹೊರಬೀಳುತ್ತಾನೆ. ಎಸ್ಸೆನೆ ಕಂಪನಿಯು ಅವನಿಗೆ ವಾರಕ್ಕೆ 1250 ಡಾಲರ್‌ ಕೊಡುತ್ತೇನೆಂದು ಮುಂದೆ ಬರುತ್ತದೆ! ಜೊತೆಗೆ ಹತ್ತು ಸಾವಿರ ಡಾಲರ್‌ಗಳ ಬೋನಸ್ ಬೇರೆ! 1914ರ ಡಿಸೆಂಬರ್‌ನಲ್ಲಿ ಚಾಪ್ಲಿನ್ ಎಸ್ಸೆನೆ ಕಂಪನಿಗೆ ಸೇರಿಕೊಳ್ಳುತ್ತಾನೆ.

ಚಾಪ್ಲಿನ್, ಎಡ್ನಾ ಪರ್ವಿಯೆನ್ಸ್‌

ಎಸ್ಸೆನೆ ಕಂಪನಿ ತಯಾರಿಸುವ ಸಿನಿಮಾಗಳಲ್ಲಿ ನಟಿಸುವ ನಟರ ಒಂದು ತಂಡವನ್ನು ಕಟ್ಟುತ್ತಾನೆ ಚಾಪ್ಲಿನ್. ಹಾಗೆ ಹೆಣ್ಣು ಪಾತ್ರ ವಹಿಸಲು ನಟಿಯೊಬ್ಬಳ ಹುಡುಕಾಟದಲ್ಲಿರುವಾಗ ಎದುರಾಗುತ್ತಾಳೆ ಎಡ್ನಾ ಪರ್ವಿಯೆನ್ಸ್! ಅತ್ಯಂತ ಸುಂದರಿಯಾಗಿದ್ದ ಎಡ್ನಾ ಎಸ್ಸೆನೆ ಕಂಪನಿಗೆ ಕಾಲಿಡುವುದರ ಜೊತೆಗೆ ಚಾಪ್ಲಿನ್ ಬದುಕಿನಲ್ಲೂ ಕಾಲಿಡುತ್ತಾಳೆ. ಅದು ಹಾಪ್ಲಿನ್ ಬದುಕಿನಲ್ಲಿ ಮೊದಲ ಪ್ರೀತಿ. ಎಡ್ನಾಳಲ್ಲಿ ನಟಿಯಾಗುವ ಮಹತ್ವಾಕಾಂಕ್ಷೆಯಾಗಲಿ, ಬೇರೆ ಯಾವುದೇ ರೀತಿಯ ಕುಟಿಲತೆಯಾಗಲಿ ಇರಲಿಲ್ಲ. ಹಾಗಾಗಿಯೇ ಅವಳ ಅದ್ಭುತ ಸೌಂದರ್ಯದ ಜೊತೆಗೆ, ಅವಳ ಸರಳತೆ, ಪ್ರೀತಿಸುವ ಗುಣ ಎಲ್ಲವೂ ಸೇರಿಕೊಂಡು ಚಾಪ್ಲಿನ್‌ ಅನ್ನು ಮರುಳು ಮಾಡುತ್ತದೆ. ಅವಳ ಜೊತೆ ಪ್ರೀತಿಯಲ್ಲಿ ಬಿದ್ದ ಚಾಪ್ಲಿನ್, ಆ ನಂತರ ಅವಳೊಟ್ಟಿಗೆ 35 ಸಿನಿಮಾಗಳಲ್ಲಿ ನಟಿಸುತ್ತಾನೆ. ಅವಳಂಥ ಪ್ರೇಮಿ ಸಿಕ್ಕ ನಂತರ ಚಾಪ್ಲಿನ್‌ನ ಟ್ರ್ಯಾಂಪ್ ಹೆಚ್ಚು ಭಾವನಾತ್ಮಕವಾಗುತ್ತಾನೆ, ಹೆಚ್ಚು ಪ್ರಬುದ್ಧನಾಗುತ್ತಾನೆ. ಅವರಿಬ್ಬರ ನಿಜ ಜೀವನದ ಪ್ರೇಮ ತೆರೆಯ ಮೇಲೆ ಕೂಡಾ ಪರಿಣಾಮ ಬೀರುತ್ತಾ, ಅವರಿಬ್ಬರ ನಡುವಿನ ಉತ್ಕಟ ಪ್ರೇಮದ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಾ ಹೋಗುತ್ತದೆ. 1914-15ರಲ್ಲಿ ಚಾಪ್ಲಿನ್ ಒಟ್ಟು 14 ಚಿತ್ರಗಳನ್ನು ನಿರ್ಮಿಸುತ್ತಾನೆ. 1915ರ ಡಿಸೆಂಬರ್‌ನಲ್ಲಿ ಎಸ್ಸೆನೆಯ ಜೊತೆಗಿನ ಕರಾರು ಮುಗಿಯುವುದರಲ್ಲಿ ಚಾಪ್ಲಿನ್‌ನ ಖ್ಯಾತಿ ಉತ್ತುಂಗಕ್ಕೇರಿರುತ್ತದೆ. ಅದನ್ನು ಅರಿತ ಚಾಪ್ಲಿನ್ ಮುಂದಿನ ಕರಾರು ಮಾಡಿಕೊಳ್ಳುವವರು ಒಂದೂವರೆ ಲಕ್ಷ ಡಾಲರ್‌ಗಳ ಬೋನಸ್ ಕೊಡಬೇಕೆಂಬ ಬೇಡಿಕೆ ಮುಂದಿಡುತ್ತಾನೆ. ಆಗ ಮ್ಯೂಚುಯಲ್ ಕಂಪನಿಯು ವರ್ಷಕ್ಕೆ 6,70,000 ಡಾಲರ್‌ಗಳಿಗೆ ಕರಾರು ಮಾಡಿಕೊಳ್ಳುತ್ತದೆ! ಬಡತನದಲ್ಲಿ ಮುಳುಗಿದ್ದ ಚಾಪ್ಲಿನ್‌ಗೆ ಈಗ ಹಣದ ಸುರಿಮಳೆ…!! ಚಾಪ್ಲಿನ್ ಈಗ ಜಗತ್ತಿನ ಸಿರಿವಂತರಲ್ಲಿ ಒಬ್ಬನಾಗಿರುತ್ತಾನೆ!!

ಚಾಪ್ಲಿನ್‌ಗೆ ಈಗ ಚಿತ್ರವೊಂದರ ಗುಣಮಟ್ಟ ಅತ್ಯಂತ ಮುಖ್ಯವಾಗುತ್ತದೆ. ತನ್ನದೇ ಸಮಯ ತೆಗೆದುಕೊಂಡು ನಿಧಾನವಾಗಿ ಚಿತ್ರಗಳನ್ನು ನಿರ್ಮಿಸುವುದನ್ನು ಅವನಿಗೆ ಹೆಚ್ಚು ಪ್ರಿಯವಾಗುತ್ತಾ ಹೋಗುತ್ತದೆ. ಮ್ಯೂಚುಯಲ್‌ ಕಂಪನಿಯ ಆತುರಕ್ಕೆ ಸಿನಿಮಾಗಳನ್ನು ನಿರ್ಮಿಸುವುದು ಅವನಲ್ಲಿ ತೀವ್ರ ಅಸಂತೃಪ್ತಿ ಉಂಟುಮಾಡುತ್ತದೆ. ಆಗ ಚಾಪ್ಲಿನ್‍ನ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಸಿಡ್ನಿ ‘ಚಾಪ್ಲಿನ್‌ಗೆ ಎಂತೆಂಥದ್ದೋ ಚಿತ್ರ ನಿರ್ಮಿಸಲು ಒತ್ತಾಯ ಹೇರಬಾರದು’ ಎಂಬ ಅಭಿಪ್ರಾಯ ಒಪ್ಪುವ ಹೊಸ ಕಂಪನಿ ಹುಡುಕಾಟಕ್ಕೆ ಬೀಳುತ್ತಾನೆ. ಆಗ First National exhibitors’circuit ಎನ್ನುವ ಕಂಪನಿ 1917ರಲ್ಲಿ 8 ಚಿತ್ರಗಳಿಗೆ 1 ಮಿಲಿಯನ್ ಡಾಲರ್‌ಗಳ ಕರಾರು ಮಾಡಿಕೊಳ್ಳುತ್ತದೆ! ಚಾಪ್ಲಿನ್‌ಗೆ ಚಿತ್ರದ ಗುಣಮಟ್ಟದ ಬಗ್ಗೆ obsession. ಹಾಗಾಗಿ ಅವನದ್ದೇ ರೀತಿಯಲ್ಲಿ ಚಿತ್ರಗಳನ್ನು ತಯಾರಿಸುತ್ತ ಹೋಗುವಾಗ ಆಗ ಕೊಡುತ್ತಿರುವ ಹಣ ಏನೇನೂ ಸಾಲದು ಎನ್ನಿಸಿ ಒಂದೆರಡು ಚಿತ್ರಗಳ ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾನೆ. ಕಂಪನಿ ಅದನ್ನು ಕೊಡಲು ನಿರಾಕರಿಸುತ್ತದೆ. ತೀವ್ರವಾಗಿ ಅಸಾಮಾಧಾನಗೊಂಡ ಚಾಪ್ಲಿನ್ ತನಗೆ ಬೇಕಿದ್ದಂಥ ಗುಣಮಟ್ಟದ ಚಿತ್ರ ತೆಗೆಯಬೇಕೆಂದರೆ ತನ್ನದೇ ಆದ ನಿರ್ಮಾಣ ಸಂಸ್ಥೆಯೊಂದಿರಬೇಕು ಎಂದು ನಿರ್ಧರಿಸುತ್ತಾನೆ. ಆಗಲೇ ಯುನೈಟೆಡ್ ಆರ್ಟಿಸ್ಟ್ಸ್ಎನ್ನುವ ಸಂಸ್ಥೆಯ ಕಲ್ಪನೆ ಮೊಳಕೆಯೊಡೆಯುತ್ತದೆ. ಆ ನಂತರ ಅವನ ಸಿನಿಮಾಗಳಿಗೆ ಅವನೆ ಕಥೆ, ನಿರ್ದೇಶನ, ಸಂಗೀತ, ನಟನೆ, ಎಡಿಟಿಂಗ್ ಎಲ್ಲವನ್ನೂ ಮಾಡುತ್ತಾನೆ…

ಚಾರ್ಲಿ, ಮಿಲ್ಡ್ರೆಡ್ ಹ್ಯಾರಿಸ್‌

ಚಾಪ್ಲಿನ್‌ಗೆ ಆ ಸಮಯದಲ್ಲಿಯೇ ನಟಿ ಮಿಲ್ಡ್ರೆಡ್ ಹ್ಯಾರಿಸ್ ಜೊತೆ ಸಂಬಂಧ ಬೆಳೆಯುತ್ತದೆ. ಆಗ ಚಾಪ್ಲಿನ್‌ಗೆ 29 ವರ್ಷ ಅಮತ್ತು ಹ್ಯಾರಿಸ್‌ಗೆ ಕೇವಲ 16! ಆದರೆ ಅವಳು ಚಾಪ್ಲಿನ್ ಮಗುವಿಗೆ ಬಸುರಿಯಾಗಿದ್ದೇನೆಂದು ಹೇಳಿದ್ದರಿಂದ ಆತುರದಲ್ಲಿ ಅವಳನ್ನು ಮದುವೆಯಾಗಬೇಕಾಗುತ್ತದೆ. ಆದರೆ ಆ ನಂತರ ಅವಳು ಬಸುರಿಯಾಗಿರಲಿಲ್ಲವೆಂದು ತಿಳಿದಾಗ ಚಾಪ್ಲಿನ್ ಮತ್ತು ಹ್ಯಾರಿಸ್ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಅವಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಆ ನಂತರ ಹ್ಯಾರಿಸ್ ಬಸುರಿಯಾಗಿ ಮಗು ಹುಟ್ಟಿ ಅದು ಕೇವಲ ಮೂರೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಆದರೆ ಚಾಪ್ಲಿನ್‌ಗೆ ಹ್ಯಾರಿಸ್ ತಲೆ ಕಂಡರೆ ಆಗದ ಸ್ಥಿತಿ ಬಂದುಬಿಡುತ್ತದೆ. ಅವಳು ತನಗೆ ಬುದ್ದಿವಂತಿಕೆಯಲ್ಲಿ ಸಮನಿಲ್ಲ ಎಂದು ಸದಾ ಜರಿಯುವುದರ ಜೊತೆಗೆ, ಅವಳಿಗೆ ಮದುವೆಯಾಚೆಗೆ ಸಂಬಂಧವಿದೆ ಎಂದು ಅನುಮಾನಿಸುತ್ತ ಅವಳಿಂದ ದೂರವಿರಲು ಪ್ರಾರಂಭಿಸುತ್ತಾನೆ. 1919ರಲ್ಲಿ ಚಾಪ್ಲಿನ್ ಹೆಂಡತಿಯಿಂದ ದೂರವಾಗಿ ಬೇರೆ ಕಡೆ ಉಳಿಯುತ್ತಾನೆ. ಆದರೂ ಹ್ಯಾರಿಸ್ ಮೊದಲಲ್ಲಿ ‘ಎಲ್ಲವೂ ಸರಿಯಿದೆ’ ಎಂದು ಸೋಗು ಹಾಕುತ್ತಾಳೆ. ಆದರೆ ಒಂದು ವರ್ಷ ಕಳೆಯುವುದರಲ್ಲಿ ಅದು ಉಳಿಯುವ ಸಂಬಂಧ ಅಲ್ಲವೆಂದು ತಿಳಿದು ಅವನಿಂದ ಬೇರೆಯಾಗುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಕೊನೆಗೆ 1920ರಲ್ಲಿ ಆ ಮದುವೆ ಮುರಿದು ಬೀಳುತ್ತದೆ. ಚಾಪ್ಲಿನ್ 1 ಲಕ್ಷ ಡಾಲರ್‌ಗಳನ್ನು ಕೊಟ್ಟು ಆ ಮದುವೆಯಿಂದ ಆಚೆ ಬೀಳುತ್ತಾನೆ.

ಲಿಟಾ ಗ್ರೇ ಜೊತೆ ಚಾಪ್ಲಿನ್

ಹೀಗೆ ಶುರುವಾದ ಅವನ ಬದುಕಿನಲ್ಲಿ ನಂತರ ಸಾಲುಸಾಲಾಗಿ ಹೆಂಗಸರು ಬಂದು ಹೋಗುತ್ತಾರೆ. ಅವನೇ ಒಮ್ಮೆ ತನಗೆ 2000 ಹೆಂಗಸರ ಜೊತೆ ಸಂಬಂಧವಿತ್ತು ಎಂದು ಹೇಳಿಕೊಂಡಿದ್ದಾನೆ! ತೆರೆಯ ಮೇಲಿದ್ದ ಮಾರ್ದವ ಹೃದಯದ ಟ್ರ್ಯಾಂಪ್, ನಿಜ ಜೀವನದ ಚಾಪ್ಲಿನ್ ಇಬ್ಬರೂ ಬೇರೆಯೇ ಆಗಿರುತ್ತಾರೆ! ಇದಾದ ನಂತರ ಚಾಪ್ಲಿನ್ ಬದುಕಿಗೆ ಬರುತ್ತಾಳೆ ಲಿಟಾ ಗ್ರೇ. ಚಾಪ್ಲಿನ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಲಿಟಾ ‘ದಿ ಗೋಲ್ಡ್ ರಶ್’ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗುತ್ತಾಳೆ. ಆಗಲೇ ಚಾಪ್ಲಿನ್ ಜೊತೆ ಸಂಬಂಧ ಶುರುವಾಗಿ ಗರ್ಭಿಣಿಯಾಗುತ್ತಾಳೆ. ಆಗ ಅವಳಿಗೆ 16 ವರ್ಷ. ಮೈನರ್ ಹುಡುಗಿಯ ಜೊತೆಗಿನ ಸಂಬಂಧ ಅಪಾಯ ತಂದೊಡ್ಡಬಹುದು ಎಂದು ಹೆದರಿದ ಚಾಪ್ಲಿನ್ ಗುಟ್ಟಾಗಿ ಅವಳನ್ನು ಮದುವೆಯಾಗುತ್ತಾನೆ. ಆ ನಂತರ ಆ ಸಿನಿಮಾದಲ್ಲಿ ಬೇರೆಯವರು ಪಾತ್ರ ಮಾಡುತ್ತಾರೆ. 1924ರ ನವೆಂಬರ್‌ನಲ್ಲಿ ಮದುವೆಯಾದ ನಂತರ ಆರು ತಿಂಗಳಿಗೆ ಮಗು ಹುಟ್ಟುತ್ತದೆ. ಅದಾದ 10 ತಿಂಗಳಿಗೆ ಮತ್ತೊಂದು ಮಗು ಹುಟ್ಟುತ್ತದೆ. ಆ ನಂತರ ಚಾಪ್ಲಿನ್‌ಗೆ ಅವಳಲ್ಲಿ ಆಸಕ್ತಿ ಹೊರಟುಹೋಗುತ್ತದೆ. ಅವಳ ಜೊತೆ ಇರುವುದನ್ನು ತಪ್ಪಿಸಲೆಂದೇ ಸ್ಟುಡಿಯೋದಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಾರಂಭಿಸುತ್ತಾನೆ. ಒಂದು ವರ್ಷ ಅವನ ಜೊತೆ ಹೊಂದಿಕೊಂಡು ಬದುಕಲು ಪ್ರಯತ್ನಿಸಿದ ನಂತರ ಲಿಟಾ ಎರಡು ಮಕ್ಕಳನ್ನೂ ಕರೆದುಕೊಂಡು ಮನೆ ಬಿಟ್ಟು ಹೊರಟು ಹೋಗುತ್ತಾಳೆ. ಆ ನಂತರ ಡೈವೋರ್ಸ್‌ಗೆ ಅಪ್ಲಿಕೇಷನ್ ಹಾಕುತ್ತಾಳೆ. ಅವನು ವಿಕೃತ ಕಾಮಿ, ತುಂಬ ಹೆಂಗಸರ ಜೊತೆಗೆ ಸಂಬಂಧವಿದೆ, ದೈಹಿಕವಾಗಿ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದ… ಹೀಗೆ ಅವನ ಮೇಲೆ ರಾಶಿರಾಶಿ ಆಪಾದನೆಗಳನ್ನು ಮಾಡಿದ ಅವಳ ಅಪ್ಲಿಕೇಷನ್ ಪ್ರೆಸ್‍ ಕೈಗೆ ಸಿಕ್ಕಿ ಆ ಕಾಲಕ್ಕೆ ತುಂಬ ಸುದ್ದಿ ಮಾಡಿಬಿಡುತ್ತದೆ. ಇದರಿಂದ ಚಾಪ್ಲಿನ್‌ಗೆ ನರ್ವಸ್ ಬ್ರೇಕ್‌ಡೌನ್ ಆಗುತ್ತದೆ. ಪೇಪರ್‌ಗಳಲ್ಲಿ ಅವನ ಸಿನಿಮಾಗಳನ್ನು ಬ್ಯಾನ್ ಮಾಡಲು ಹಲವರು ಕರೆ ಕೂಡಾ ಕೊಡುತ್ತಾರೆ. ಇದೆಲ್ಲರಿಂದ ಬಿಡಿಸಿಕೊಳ್ಳಲು ಚಾಪ್ಲಿನ್ 6 ಲಕ್ಷ ಡಾಲರ್‌ಗಳ ಅಗಾಧ ಮೊತ್ತ ಕೊಟ್ಟು ಅಂತೂ ಈ ಮದುವೆ ಡೈವೋರ್ಸ್‌ನಲ್ಲಿ ಕೊನೆಗೊಳ್ಳುತ್ತದೆ. ಆದರೆ ಜನರ ನೆನಪಿನ ಶಕ್ತಿ ಅತ್ಯಂತ ಕಿರಿದಾದದ್ದು. ಅವನ ಫ್ಯಾನ್‌ಗಳ ಸಂಖ್ಯೆ ಹಾಗೆಯೇ ಉಳಿಯುತ್ತದೆ ಮತ್ತು ಅವರು ಮೊದಲಿನಂತೆಯೇ ಅವನ ಸಿನಿಮಾಗಳಿಗೆ ಕಾಯುತ್ತ ಕೂರುತ್ತಾರೆ!

ಪಾಲೆಟ್ ಗೊಡಾರ್ಡ್‌ – ಚಾಪ್ಲಿನ್‌

ಆ ನಂತರ ಚಾಪ್ಲಿನ್ 1932ರಲ್ಲಿ ತನ್ನ 43ನೆಯ ವಯಸ್ಸಿನಲ್ಲಿ ಪಾಲೆಟ್ ಗೊಡಾರ್ಡ್‌ಳನ್ನು ಭೇಟಿಯಾಗುತ್ತಾನೆ. ಅವಳಿಗೆ ಆಗ 25 ವರ್ಷ ವಯಸ್ಸು. ಅವಳೊಡನೆ ಅವನ ಪ್ರೀತಿ ಶುರುವಾಗುತ್ತದೆ. ಅವಳು ಮಹತ್ವಾಕಾಂಕ್ಷೆಯ ನಟಿ. ಜೊತೆಗೆ ತುಂಬ ಗಟ್ಟಿ ಸ್ವಭಾವದವಳು. ಅವನ ಮೊದಲಿನ ಇಬ್ಬರು ಹೆಂಡತಿಯರ ಹಾಗಲ್ಲದೆ ಅವಳ ಕೆಲಸದ ಬಗ್ಗೆ ತುಂಬ ಕನಸುಗಳಿರುವವಳು. ಅವಳದ್ದೇ ಆದ ವ್ಯಕ್ತಿತ್ವ ಇರುವಂಥವಳು. ಆ ನಂತರ ಅವಳು ಚಾಪ್ಲಿನ್‌ನ Modern Timesನಲ್ಲಿ ನಾಯಕಿಯಾಗುತ್ತಾಳೆ. ಆ ಸಿನಿಮಾ ಬಿಡುಗಡೆಯಾದ ನಂತರ ಚಾಪ್ಲಿನ್ ಅವಳನ್ನು ಮದುವೆಯಾಗುತ್ತಾನೆ. ಅವಳೊಡನೆ ಆರು ವರ್ಷ ಸಂಸಾರ ಮಾಡುತ್ತಾನೆ ಚಾಪ್ಲಿನ್. ಆ ನಂತರ 1940ರ ಮತ್ತೊಂದು ಅದ್ಭುತ ಸಿನಿಮಾ The great Dictatorಗೂ ಅವಳು ನಾಯಕಿಯಾಗುತ್ತಾಳೆ. ನಂತರ ಚಾಪ್ಲಿನ್ ಮತ್ತು ಪಾಲೆಟ್ 1942ರಲ್ಲಿ ಬೇರೆಯಾಗುತ್ತಾರೆ. ಆದರೆ ಪಾಲೆಟ್ ಇದನ್ನೇನೂ ದೊಡ್ಡ ಸುದ್ದಿ ಮಾಡುವುದಿಲ್ಲ. ಇಬ್ಬರೂ ಸ್ವಂತ ಇಚ್ಛೆಯಿಂದ, ಪರಸ್ಪರ ಒಪ್ಪಿಗೆಯಿಂದಲೆ ಬೇರಾಗುತ್ತಾರೆ. ಚಾಪ್ಲಿನ್‌ನ ಮೊದಲ ಮೂರು ಮದುವೆಗಳು ಹೀಗೆ ಮುರಿದು ಬಿದ್ದ ನಂತರ, 1943ರಲ್ಲಿ ಊನಾಳನ್ನು ಮದುವೆಯಾಗುತ್ತಾನೆ. ಊನಾಗೆ ಆಗ 18 ವರ್ಷ ಮತ್ತು ಚಾಪ್ಲಿನ್‌ಗೆ 54! ಊನಾಳ ಅಪ್ಪನಿಗಿಂತ ಕೇವಲ ಆರು ತಿಂಗಳು ಚಿಕ್ಕವನಾಗಿರುತ್ತಾನೆ ಚಾಪ್ಲಿನ್! ಇದು ಇನ್ನೆಷ್ಟು ದಿನವೋ ಎಂಬ ಎಲ್ಲರ ಸಿನಿಕತೆಗೆ ಉತ್ತರವೆನ್ನುವಂತೆ ಅವಳು ಚಾಪ್ಲಿನ್‌ನ 8 ಮಕ್ಕಳನ್ನು ಹೆತ್ತು, ಕೊನೆಗೆ ಅವನು 1977ರಲ್ಲಿ ಸಾಯುವವರೆಗೆ ಒಟ್ಟಿಗೇ ಬದುಕುತ್ತಾರೆ. ಅವನ ಏಳುಬೀಳುಗಳಲ್ಲಿ ಜೊತೆಯಾಗುತ್ತಾಳೆ ಊನಾ.

ಚಾಪ್ಲಿನ್‌ನ ವೈಯುಕ್ತಿಕ ಜೀವನದಲ್ಲಿ ಅದೇನೇ ನಡೆಯುತ್ತಿರಲಿ, ಈ ಅವಧಿಯಲ್ಲಿಯೇ ಅವನು ಅದ್ಭುತ ಸಿನಿಮಾಗಳನ್ನು ತೆಗೆಯುತ್ತಾನೆ. ಎಲ್ಲವೂ ಸೂಪರ್ ಹಿಟ್ ಆಗುತ್ತದೆ. perfectionist ಆದ ಅವನು ದಿ ಕಿಡ್, ದಿ ಗೋಲ್ಡ್ ರಶ್, ದಿ ಸರ್ಕಸ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್, ದಿ ಗ್ರೇಟ್ ಡಿಕ್ಟೇಟರ್ ಮೊದಲಾದ ಮಾಸ್ಟರ್‌ಪೀಸ್‌ಗಳನ್ನು ತೆರೆಗೆ ತರುತ್ತಾನೆ. 1928ರಲ್ಲಿ ‘ದಿ ಸರ್ಕಸ್’ ಬರುವ ವೇಳೆಗಾಗಲೇ ಟಾಕಿ ಸಿನಿಮಾಗಳ ಯುಗ ಆರಂಭವಾಗಿರುತ್ತದೆ. ಆವರೆಗೆ ಮೂಕಿ ಸಿನಿಮಾಗಳಲ್ಲಿ ಯಶಸ್ಸು ಕಂಡವನಿಗೆ ಟಾಕಿ ಸಿನೆಮಾ ಇಷ್ಟವೇ ಆಗುವುದಿಲ್ಲ. ಅವನ ಟ್ರ್ಯಾಂಪ್ ಒಂದು ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ ಕೂಡಲೇ ಅವನು ಒಂದಿಷ್ಟು ಜನರಿಗೆ. ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿ ಹೋಗುತ್ತಾನೆ ಎಂದು ವಾದಿಸುತ್ತಾನೆ. ಜನ ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವ ಭಯದಲ್ಲಿಯೇ ಸಿಟಿ ಲೈಟ್ಸ್ ಸಿನಿಮಾ ಮಾಡುತ್ತಾನೆ. ಅದು ಹಿಟ್ ಆಗುತ್ತದೆ.

‘ಮಾಡರ್ನ್‌ ಟೈಮ್ಸ್‌’

ಆದರೆ 1936ರಲ್ಲಿ ಚಾಪ್ಲಿನ್ ಸಿನಿಮಾ ಬದುಕಿನಲ್ಲಿ ಒಂದು ತಿರುವು ತರುತ್ತದೆ. ಅಲ್ಲಿಯವರೆಗೆ ಹಾಸ್ಯ ಚಿತ್ರಗಳನ್ನು ಮಾಡುತ್ತಿದ್ದವನು ಮೊದಲ ಬಾರಿಗೆ ವ್ಯವಸ್ಥೆಯನ್ನು ಪ್ರಶ್ನಿಸುವಂಥ ಮಾಡರ್ನ್ ಟೈಮ್ಸ್ ತೆಗೆಯುವ ನಿರ್ಧಾರ ಮಾಡುತ್ತಾನೆ. ಮನುಷ್ಯರ ಜಾಗವನ್ನು ಯಂತ್ರಗಳು ಆಕ್ರಮಿಸುತ್ತಿರುವ ವಿಡಂಬನಾತ್ಮಕ ವಿಷಯದ ಈ ಸಿನಿಮಾಗೆ 1931ರಲ್ಲಿ ಮಾಹಾತ್ಮಾ ಗಾಂಧಿಯ ಭೇಟಿಯೇ ಪ್ರೇರಣೆಯಾಗಿರುತ್ತದೆ! ಗಾಂಧೀಜಿಯ ಜೊತೆ ಚಾಪ್ಲಿನ್ ಈ ವಿಷಯವಾಗಿ ಸುದೀರ್ಘ ಚರ್ಚೆ ಮಾಡಿದ ಬಗ್ಗೆ ಅವರ ಕಾರ್ಯದರ್ಶಿ ಮಹದೇವ್ ದೇಸಾಯಿ ಅವರು ‘ಆ ವಿಷಯದ ಬಗ್ಗೆ ಅಷ್ಟು ಆಳವಾಗಿ ಗ್ರಹಿಸಿದ ವಿದೇಶೀಯ’ ಎಂದು ಬರೆದಿದ್ದಾರೆ. ಮಾಡರ್ನ್ ಟೈಮ್ಸ್‌ಗೆ ಮಿಶ್ರ ಪ್ರತಿಕ್ರಿಯೆ ಬರುತ್ತದೆ. ಸಾಕಷ್ಟು ಜನ ಇಷ್ಟಪಟ್ಟರೂ ಕೆಲವರು ‘ಸುಮ್ಮನೆ ಕಾಮೆಡಿ ಮಾಡಿಕೊಂಡಿರುವುದು ಬಿಟ್ಟು ಇವನಿಗೆ ಯಾಕೆ ಬೇಕಿತ್ತು ಈ ಉಸಾಬರಿ’ ಎಂತಲೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಲ್ಲಿಯವರೆಗೆ ಅವನ ಸಿನಿಮಾಗಳಲ್ಲಿ ವ್ಯವಸ್ಥೆಯನ್ನು ಹಾಸ್ಯ ಮಾಡುವಂಥ ವಿಷಯಗಳಿದ್ದಾಗ ಸುಮ್ಮನಿದ್ದ ಸರಕಾರ, ಇದರಲ್ಲಿ ಅದರ ಬಗ್ಗೆ ವಿಡಂಬನೆ ಮಾಡಿದ ನಂತರ ಅವನ ಕಮ್ಯುನಿಸಂ ಪರವಾದ ಒಲವನ್ನು ಕಂಡು ಅವನ ಮೇಲೆ ಕಣ್ಣಿಡುತ್ತದೆ! 1939ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿರುತ್ತದೆ. ಆಗಲೇ ಚಾಪ್ಲಿನ್ ಹಿಟ್ಲರ್‌ನನ್ನು ವಿರೋಧಿಸುವ ‘The great dictator’ ಎನ್ನುವ ಟಾಕಿ ಸಿನಿಮಾ ತೆಗೆಯುವ ನಿರ್ಧಾರ ಮಾಡುತ್ತಾನೆ! ಅದರಲ್ಲಿ ಅವನು

ಮೊದಲ ಬಾರಿಗೆ ಟ್ರ್ಯಾಂಪ್‌ನ ವೇಷಭೂಷಣವನ್ನೂ ತ್ಯಜಿಸಿರುತ್ತಾನೆ. ಅವನ ರಾಜಕೀಯ ನಿಲುವಿನ ಬಗ್ಗೆ ಈ ಸಿನಿಮಾದಲ್ಲಿ ಸ್ಪಷ್ಟವಾಗಿಯೇ ಹೇಳುತ್ತಾನೆ ಚಾಪ್ಲಿನ್. ಈ ಚಿತ್ರದ ಗೆಲುವಿನ ಬಗ್ಗೆ ಚಾಪ್ಲಿನ್‌ಗೆ ಇದ್ದ ಎಲ್ಲ ಆತಂಕವನ್ನು ಕಿತ್ತೊಗೆದು ಚಿತ್ರ ಸೂಪರ್ ಹಿಟ್ ಆಗುತ್ತದೆ! ಅದರ ಜೊತೆಗೇ FBI ಅವನ ಬೆನ್ನು ಬೀಳುತ್ತದೆ. ಸಲ್ಲದ ವಿವಾದಗಳಲ್ಲಿ, ಕೋರ್ಟ್ ಕೆಸ್‌ಗಳಲ್ಲಿ ಸಿಲುಕಿಕೊಂಡು 1942ರಲ್ಲಿ ಅದರಿಂದೆಲ್ಲ ಮುಕ್ತನಾದ ಚಾಪ್ಲಿನ್ ಮೆಸಿಯರ್ ವರ್ಡೂ ಎನ್ನುವ ಚಿತ್ರ ತಯಾರಿಕೆಗೆ ಇಳಿಯುತ್ತಾನೆ. 1947 ಬಿಡುಗಡೆಯಾದ ಚಿತ್ರ ಸೋಲು ಕಾಣುತ್ತದೆ. ಆ ನಂತರ 1951ರಲ್ಲಿ ರಾಜಕೀಯದ ಸುಳಿವೂ ಇಲ್ಲದ ಲೈಮ್‌ಲೈಟ್ ಚಿತ್ರ ತಯಾರಿಸಿ ಅದರ ಪ್ರೀಮಿಯರ್ ಶೋಗೆ ಲಂಡನ್‌ಗೆ ಹೊರಡುತ್ತಾನೆ. ಮರುದಿನ ಅಮೆರಿಕಾ ಅವನು ಅಲ್ಲಿಗೆ ಕಾಲಿಡುವಂತಿಲ್ಲ ಎನ್ನುವ ಆದೇಶ ಹೊರಡಿಸಿ ಅವನ ಪರ್ಮಿಟ್ ರದ್ದು ಮಾಡುತ್ತದೆ…. ಆ ನಂತರ ಅವನು ಸ್ವಿಟ್ಜ಼ರ್‌ಲೆಂಡ್‌ನಲ್ಲಿ ಮನೆ ಮಾಡುತ್ತಾನೆ. ಊನಾ ಅಮೆರಿಕಾಗೆ ಹೋಗಿ ಚಾಪ್ಲಿನ್ ಆಸ್ತಿಯನ್ನೆಲ್ಲ ಹೇಗೋ ಮಾಡಿ ಸ್ವಿಟ್ಜರ್ಲೆಂಡಿಗೆ ವರ್ಗಾವಣೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾಳೆ ಮತ್ತು ಅವರಿಬ್ಬರೂ ಅಲ್ಲಿಯೇ ಬದುಕಿನ ಕೊನೆಯವರೆಗೆ ಉಳಿಯುತ್ತಾರೆ. ಅದಾದ ನಂತರ 1972 ರಲ್ಲಿ ಒಮ್ಮೆ ಮಾತ್ರ ಚಾಪ್ಲಿನ್ ಅಮೆರಿಕಾ ನೆಲದಲ್ಲಿ ಕಾಲಿಡುತ್ತಾನೆ ಗೌರವ ಆಸ್ಕರ್ ಪುರಸ್ಕಾರ ಪಡೆಯುವ ಸಮಾರಂಭಕ್ಕೆ!

‘ದಿ ಗ್ರೇಟ್ ಡಿಕ್ಟೇಟರ್‌’

ಅದ್ಭುತ ನಟನ ಜೀವನ ಚರಿತ್ರೆ ಕೂಡಾ ಒಂದು ಸಿನಿಮಾದಂತೆಯೇ ಇದೆಯಲ್ಲವಾ! ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಎಲ್ಲಿಯೋ ಬದುಕು ಕಟ್ಟಿಕೊಂಡು, ಪ್ರತಿಭೆಯ ಜೊತೆಗೆ, ಅನೇಕ ದೌರ್ಬಲ್ಯಗಳನ್ನೂ ಮೈಗೂಡಿಸಿಕೊಂಡು ಅಪಾರ ಯಶಸ್ಸಿನ ಜೊತೆಗೆ, ಅಷ್ಟೇ ಸೋಲುಗಳನ್ನೂ ಉಂಡು… ಚಾಪ್ಲಿನ್ ಬದುಕು ಥೇಟ್ ಪ್ರೀತಿಯಂತೆ! ಎಷ್ಟು ಅರಿತರೂ ಏನೋ ಬಾಕಿ ಉಳಿದಂತೆ, ಎಷ್ಟು ಬಾರಿ ಪ್ರೀತಿಸಿದರೂ ಪ್ರತಿ ಬಾರಿಯೂ ಪ್ರೀತಿ ಹೊಸತೇ ಆಗಿರುವಂತೆ, ಎಷ್ಟು ಸಿಕ್ಕಿದರೂ ಮತ್ತಿಷ್ಟು ಬೇಕೆನ್ನಿಸುವಂತೆ…!

ನಿಮಗೆ ಗೊತ್ತೇ!

  • ರಷ್ಯನ್ ಖಗೋಳಶಾಸ್ತ್ರಜ್ಞ ಒಂದು ಲೂದ್ಮಿಲಾ ಕರಷ್ಕಿನ ತಾನು ಕಂಡು ಹಿಡಿದ ಕ್ಷುದ್ರಗ್ರಹಕ್ಕೆ ಚಾಪ್ಲಿನ್‌ 3623 ಎಂದು ಹೆಸರಿಟ್ಟಿದ್ದಾನೆ.
  • ಚಾಪ್ಲಿನ್‌ನ ಶವಪೆಟ್ಟಿಗೆಯನ್ನೂ ಇಬ್ಬರು ಕಿಡ್ನ್ಯಾಪ್ ಮಾಡಿ ಹಿಂತಿರುಗಿ ಕೊಡಲು ಹಣದ ಬೇಡಿಕೆ ಮುಂದಿಟ್ಟಿದ್ದರು.
  • ಚಾಪ್ಲಿನ್‌ಗೆ ಕಡುನೀಲ ಕಣ್ಣುಗಳಿದ್ದವು.
  • ಗೋಲ್ಡ್ ರಶ್ ಸಿನೆಮಾದಲ್ಲಿ ಶೂ ತಿನ್ನುವ ಶೂಟಿಂಗ್ ನಡೆಯುವಾಗ 63 ಸಲ ರೀಟೇಕ್ ಮಾಡುತ್ತಲೇ ಹೋಗಿ, ಬ್ಲಾಕ್ ಲಿಕೋರಸ್ ಅನ್ನುವ ವಸ್ತುವಿನಿಂದ ಮಾಡಿದ ಶೂ ತಿಂದು ತಿಂದು ಇನ್ಸುಲಿನ್ ಶಾಕ್‌ ಆಗಿ ಆಸ್ಪತ್ರೆಗೆ ಹೋಗಬೇಕಾಯಿತು.
  • ಜಪಾನ್‌ನಲ್ಲಿ ಚಾಪ್ಲಿನ್ ಹತ್ಯೆ ಪ್ರಯತ್ನ ನಡೆದಾಗ, ಅವನ ಬದಲು ಪ್ರಧಾನಿ ಇನುಕಾಯ್ ತುಯೋಷಿ ಹತ್ಯೆಯಾಗಿದ್ದರು * ಅವನು ಸತ್ತ ಸಂತರ ಪಶ್ಚಿಮ ಬಂಗಾಳದಲ್ಲಿ ಶ್ರದ್ಧಾಂಜಲಿ ಸಭೆ ನಡೆದಿತ್ತು ಮತ್ತು ಅದರಲ್ಲಿ ಮಾತನಾಡಿದವರು ಮೃಣಾಲ್ ಸೇನ್!

ಈ ಬರಹಗಳನ್ನೂ ಓದಿ