ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜಯಮ್ಮ ಹೊರಟರು…

ಪೋಸ್ಟ್ ಶೇರ್ ಮಾಡಿ

(ಬರಹ : ಶಶಿಧರ ಚಿತ್ರದುರ್ಗ)

“ನನ್ನ ಬಗ್ಗೆ ಬರೆಯುವಂಥದ್ದು ಏನಿದೆ? ನಾನೇನು ಅಂಥ ಸಾಧನೆ ಮಾಡಿದೀನಿ?”

ನಿಮ್ಮ ಬಗ್ಗೆ ನಾನೊಂದು ಪುಸ್ತಕ ಮಾಡಬೇಕೆಂದಿದ್ದೇನೆ ಎಂದಾಗ, ಹಿರಿಯ ನಟಿ ಬಿ.ಜಯ ಅವರು ಮೇಲಿನಂತೆ ಹೇಳಿದ್ದರು. ಅವರ ಸಹೋದರ, ಚಿತ್ರನಿರ್ದೇಶಕ ಬಿ.ಮಲ್ಲೇಶ್ ಅವರಿಂದ ಶಿಫಾರಸು ಮಾಡಿಸಿದ ನಂತರ ಜಯಮ್ಮ ‘ಸರಿ’ ಎಂದಿದ್ದರು. ಆಗ ನಾನು ‘ವಿಜಯ ಕರ್ನಾಟಕ’ ಪತ್ರಿಕೆ ಬಳಗದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಜಯಮ್ಮ ಚಾಮರಾಜಪೇಟೆಯಲ್ಲಿ ತಮ್ಮ ತಂದೆಯ ಕಾಲದ ಪುಟ್ಟ ಮನೆಯಲ್ಲೇ ಒಬ್ಬರೇ ಇದ್ದರು.

ನಾನು ಸಂಜೆ ಕೆಲಸ ಮುಗಿಸಿದ ನಂತರ ಅವರಲ್ಲಿಗೆ ಹೋಗಿ, ಅವರು ಮಾತನಾಡಿದ್ದನ್ನು ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದೆ. ತೆರೆಯ ಮೇಲೆ ಪಟಪಟನೆಂದು ಸಂಭಾಷಣೆ ಹೇಳುವ, ಲೈವ್ಲೀಯಾಗಿ ನಟಿಸುವ ಜಯಮ್ಮ ತಮ್ಮ ಬಗ್ಗೆ ಹೇಳಿಕೊಳ್ಳಲು ತಡಕಾಡುತ್ತಿದ್ದರು. ಒಂದೆರೆಡು ಸಾಲುಗಳಲ್ಲಿ ಹೇಳಿ ಮುಗಿಸಿಬಿಡುತ್ತಿದ್ದರು. ನಾನು ಹಳೆಯ ನೆನಪುಗಳನ್ನು ಕೆದಕಿ, ಕೆದಕಿ ಅವರಿಂದ ಮಾತು ಹೊರಡಿಸುತ್ತಿದ್ದೆ.

ಅವರ ರಂಗಭೂಮಿ, ಸಿನಿಮಾ, ಕಿರುತೆರೆ ಮಾಹಿತಿ ಕಲೆಹಾಕಿದ್ದಾಯ್ತು. ವೈಯಕ್ತಿಕ ಬದುಕು? ತಂದೆ ಅಗಲಿದ ನಂತರ ಕುಟುಂಬ ನಡೆಸುವ ಸಂಪೂರ್ಣ ಜವಾಬ್ದಾರಿ ಜಯಮ್ಮನವರ ಹೆಗಲಿಗೇರಿತ್ತು. ನಂತರದ್ದು ಹೋರಾಟದ ಬದುಕು. ಸಿನಿಮಾ, ನಾಟಕ, ಸ್ವಂತ ನಾಟಕ ಕಂಪನಿ ಕಟ್ಟಿದ್ದು… ತಮ್ಮಂದಿರನ್ನು ಓದಿಸಿ ಅವರ ಬದುಕು ರೂಪಿಸುವ ಭರದಲ್ಲಿ ತಮ್ಮ ಬಗ್ಗೆ ಯೋಚಿಸಲು ಅವರಿಗೆ ಸಮಯವೇ ಸಿಗಲಿಲ್ಲ. ಅವಿವಾಹಿತರಾಗಿಯೇ ಉಳಿದರು. ಆಂತರ್ಯದಲ್ಲಿ ಅದೆಷ್ಟು ನೋವು – ಸಂಕಟಗಳಿದ್ದವೋ? ತೆರೆ ಮೇಲೆ (ಸಿನಿಮಾ – ಕಿರುತೆರೆ) ಅದೇನನ್ನೂ ತೋರಗೊಡಲಿಲ್ಲ. ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದರು.

ಪುಸ್ತಕ ಪ್ರಿಂಟ್ ಆದಾಕ್ಷಣ ಅವರಲ್ಲಿಗೆ ಹೋಗಿ ಮೊದಲ ಪ್ರತಿಯನ್ನು ಅವರ ಕೈಗಿಟ್ಟಿದ್ದೆ. ನಾನು ಅಂದುಕೊಂಡಂತೆ ಅವರೇನೂ ಭಾವುಕರಾಗಲಿಲ್ಲ! ಅದೇ ನಿರ್ಲಿಪ್ತತೆ. ಪುಸ್ತಕ ನೇವರಿಸಿ, ಪುಟ ತಿರುಗಿಸಿದ ಅವರು ಸುಮ್ಮನೆ ಒಮ್ಮೆ ನಕ್ಕಿದ್ದರು. ನನಗೆ ಆ ನಗು ಈಗಲೂ ನೆನಪಾಗುತ್ತದೆ. ಹತ್ತರ ಹರೆಯದಲ್ಲೇ ನಾಟಕಕ್ಕೆ ಬಣ್ಣ ಹಚ್ಚಿದ ಅವರು ಮೊನ್ನೆ ಮೊನ್ನೆಯವರೆಗೂ ಕಿರುತೆರೆ ಸರಣಿಗಳಲ್ಲಿ ನಟಿಸುತ್ತಾ, ನಗಿಸುತ್ತಾ ಇದ್ದರು. ಈಗ ನಮ್ಮನ್ನು ಬಿಟ್ಟು ಹೊರಟಿದ್ದಾರೆ. ಮತ್ತೆ ಹುಟ್ಟಿ ಬನ್ನಿ ಜಯಮ್ಮ. (ಪುಸ್ತಕ ಪ್ರಕಟಸಿದ್ದು ‘ಅವಿರತ’ ಪ್ರಕಾಶನದ ಹರೀಶ್. ಲೇಖಕ – ಪತ್ರರ‍್ತ ಜೋಗಿ ಸರ್ ಮುನ್ನುಡಿ ಬರೆದುಕೊಟ್ಟಿದ್ದರು. ಪುಸ್ತಕದ ಕವರ್ ಪೇಜ್ ವಿನ್ಯಾಸ – ಅಪಾರ. ಮುಖಪುಟದಲ್ಲಿ ಬಳಕೆಯಾಗಿರುವ ಫೋಟೊ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಲಿಕ್. ಪುಸ್ತಕಕ್ಕೆ ಅಗತ್ಯ ಫೋಟೋಗಳನ್ನು ಒದಗಿಸಿ, ಮಾರ್ಗದರ್ಶನ ನೀಡಿದವರು – ಲೇಖಕ ಎನ್.ಜಗನ್ನಾಥ ಪ್ರಕಾಶ್)

ಈ ಬರಹಗಳನ್ನೂ ಓದಿ