ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಾಡುವ ಸಿನಿಮಾ ‘ಸಾಗರ ಸಂಗಮಂ’ಗೆ 38 ವರ್ಷ

ಪೋಸ್ಟ್ ಶೇರ್ ಮಾಡಿ

ನಾಯಕ ಬಾಲು ಒಬ್ಬ ಬಡವ, ತಾನೊಬ್ಬ ಉತ್ತಮ ನೃತ್ಯಗಾರ, ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳುವ ಒಂದೇ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಅಂತಹ ಅವಕಾಶ ಕಲ್ಪಿಸಿಕೊಡುವಲ್ಲಿ ನಾಯಕಿ ಮಾಧವಿ ಸಹಕರಿಸುತ್ತಾಳೆ. ದುರಾದೃಷ್ಟವಶಾತ್ ಆ ಅವಕಾಶವೂ ತನ್ನ ತಾಯಿಯ ಸಾವಿನಿಂದ  ತಪ್ಪಿಹೋಗುತ್ತದೆ. ಪತಿಯಿಂದ ದೂರವಾಗಿ ಮಾಧವಿ ಒಂಟಿಯಾಗಿ ಬದುಕುತ್ತಿರುತ್ತಾಳೆ. ಈ ನಡುವೆ ಇಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ. ತನ್ನ ಮನಸ್ಸಿನ ಭಾವನೆಗಳನ್ನು  ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ  ಪತಿ ತನ್ನ ತಪ್ಪಿನ ಅರಿವಾಗಿ ಮತ್ತೆ ಮಾಧವಿಯ ಜೊತೆ ಜೀವನ ನಡೆಸಲು ಬಂದಿರುತ್ತಾನೆ. ಇವರಿಬ್ಬರನ್ನು ಒಂದು ಮಾಡಿ, ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ ನಾಯಕ.

ಕಾಲಕಳೆದಂತೆ ಮಾಧವಿಯನ್ನು ಮರೆತ ನಾಯಕ ಒಂಟಿ ಜೀವನ ನಡೆಸುತ್ತಾ ಪತ್ರಕರ್ತನಾಗಿ ಬದುಕು ಕಟ್ಟಿಕೊಳ್ಳಲು ಹೊರಡುತ್ತಾನೆ. ಈಡೇರದ ಕನಸುಗಳಿಂದ ಖಿನ್ನನಾಗಿ ಕುಡಿತಕ್ಕೆ ದಾಸನಾಗಿ, ಖಾಯಿಲೆಗೆ ಒಳಗಾಗಿರುತ್ತಾನೆ.  ಬೆಳೆದು ದೊಡ್ಡವಳಾದ ಮಾಧವಿ ಮಗಳು ನೃತ್ಯಗಾರ್ತಿಯಾಗಿ ಪ್ರದರ್ಶನ ನೀಡಿರುತ್ತಾಳೆ. ಎಲ್ಲಾ ಪತ್ರಿಕೆಗಳಿಂದಲೂ ಭರಪೂರ ಹೊಗಳಿಕೆಗಳ ಸುರಿಮಳೆ ಬಂದಿರುತ್ತದೆ. ಆದರೆ ಒಬ್ಬ ಪತ್ರಕರ್ತ ಮಾತ್ರ ಕಟುವಾಗಿ ಬರೆದಿರುತ್ತಾನೆ.  ಮಾಧವಿ ಆತನ ಬಗ್ಗೆ ವಿಚಾರಿಸಿದಾಗ ತನ್ನ  ಸ್ನೇಹಿತ, ಪ್ರೇಮಿ ಬಾಲುವೇ ಎಂದು ತಿಳಿಯುತ್ತದೆ. ಬಾಲುವಿನ ಸ್ನೇಹಿತ ಆತನ ಆರೈಕೆ ಮಾಡುತ್ತಿರುತ್ತಾನೆ.  ವಿಷಯ ಅರಿತ ಮಾಧವಿ ಬಾಲುವಿನ ಆರೋಗ್ಯ ದೃಷ್ಟಿಯಿಂದ ತನ್ನ ಗಂಡ ನಿಧನರಾಗಿರುವ ವಿಷಯ ಮುಚ್ಚಿಟ್ಟು  ತನ್ನ ಮಗಳಿಗೆ ನೃತ್ಯಾಭ್ಯಾಸ ಹೇಳಿಕೊಡಬೇಕೆಂದೂ, ದೊಡ್ಡ ಡಾನ್ಸರ್ ಮಾಡಬೇಕೆ೦ದು  ಬಾಲುವಿನ ಬಳಿ ನಿವೇದಿಸಿಕೊಳ್ಳುತ್ತಾಳೆ. ಅದರಂತೆ ಬಾಲು ಆಕೆಯನ್ನು ದೊಡ್ಡ ನೃತ್ಯಗಾರ್ತಿಯನ್ನಾಗಿ ಮಾಡುತ್ತಾನೆ. ಆಕೆಯ ಸ್ಟೇಜ್ ಶೋ ನೋಡುತ್ತಲೇ ಬಾಲು ಅಸುನೀಗುತ್ತಾನೆ.

ಇಂಥ ಒಂದು ಕಥೆಯನ್ನು ಹೆಣೆದು ಸುಂದರವಾಗಿ ತೆರೆಗೆ ತಂದವರು ಖ್ಯಾತ ತೆಲುಗು ಚಿತ್ರನಿರ್ದೇಶಕ ಕೆ.ವಿಶ್ವನಾಥ್. ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದ ಇವರು ಕಮಲ ಹಾಸನ್ ಅವರಿಗಾಗಿಯೇ ಈ ಕಥೆಯನ್ನು ಹೆಣೆದಿದ್ದರು. ಕಾಕತಾಳೀಯವೆಂಬಂತೆ ಕಮಲಹಾಸನ್ ಮತ್ತು ಆರ್.ಸಿ.ಶಕ್ತಿ ಎಂಬುವವರು ಮಧ್ಯವ್ಯಸನಿ ನೃತ್ಯಗಾರನ ಬಗ್ಗೆ ‘ಅನುಪಲ್ಲವಿ’ ಎಂಬ ಚಿತ್ರ ಮಾಡುವ ಆಲೋಚನೆಯಲ್ಲಿದ್ದರು. ಅದೃಷ್ಟವಶಾತ್ ಅದೇ ಸಮಯಕ್ಕೆ ಕೆ.ವಿಶ್ವನಾಥ್ ರವರು ಅದೇ ತರಹದ ಕಥೆಯನ್ನು ಕಮಲ್ ಮುಂದಿಟ್ಟಾಗ ಸಂತೋಷದಿಂದ ಒಪ್ಪಿದರು. ಚಿತ್ರದಲ್ಲಿ ಭರತನಾಟ್ಯಕ್ಕೆ ಪ್ರಾಮುಖ್ಯತೆ ಇರುವುದರಿಂದ ಕೋರಿಯೋಗ್ರಾಫರ್  ಗೋಪಿಕೃಷ್ಣ ರವರ ಅಭಿಲಾಷೆಯಂತೆ ತಮ್ಮ ಬಿಡುವಿಲ್ಲದ, ದಿನಕ್ಕೆ ಎರಡು ಶಿಫ್ಟ್ ದುಡಿಯುತ್ತಿದ್ದ ಸಮಯದಲ್ಲಿ ಒಂದು ತಿಂಗಳ ಕಾಲ ನೃತ್ಯಾಭ್ಯಾಸ ತಾಲೀಮು ನಡೆಸಿದ್ದರು. ಅವರ ಕಷ್ಟ ಸಿನಿಮಾದಲ್ಲಿ ವರ್ಕ್‌ಔಟ್‌  ಆಗಿತ್ತು.

ಈ ಚಿತ್ರದಲ್ಲಿ ಮಾಧವಿಯ ಮಗಳಾಗಿ ಎಸ್.ಪಿ.ಶೈಲಜಾ (ಗಾಯಕ ಎಸ್‌ಪಿಬಿ ಅವರ ಸಹೋದರಿ) ನಟಿಸಿದ್ದು ಒಂದೇ ಚಿತ್ರವಾದರೂ  ಅಮೋಘ ಅಭಿನಯ ನೀಡಿದ್ದಾರೆ. ಇನ್ನು ಜಯಪ್ರಧಾ ಮಾಧವಿಯಾಗಿ  ಮನಸೂರೆಗೊಳ್ಳುತ್ತಾರೆ. ನಾಯಕನ ಸ್ನೇಹಿತನಾಗಿ ತನ್ನ ಸಹಜ ಅಭಿನಯದಿಂದ ಶರತ್ ಬಾಬು ತುಂಬಾ ಆತ್ಮೀಯವಾಗುತ್ತಾರೆ. ಈ ಎಲ್ಲರನ್ನು ಮೊದಲೇ ಊಹಿಸಿಕೊಂಡು ಚಿತ್ರಕಥೆ ಹೆಣೆದವರು ಕೆ. ವಿಶ್ವನಾಥ್ ರವರು. ಈ ಚಿತ್ರಕ್ಕೆ ಹಣ ಸುರಿದುವರು ಏಡಿದ ನಾಗೇಶ್ವರರಾವು, ತಮ್ಮ ಸ್ವರಗಳಿಂದ ಚಿತ್ರವನ್ನು ಶ್ರೀಮಂತಗೊಳಿಸಿದ್ದು ಇಳಯರಾಜಾ ಎಂಬ ಸ್ವರಸಾಮ್ರಾಟ. ಅವರ ಸಂಗೀತಕ್ಕೆ ಅದ್ಭುತವಾದ  7 ಹಾಡುಗಳನ್ನು ರಚಿಸಿದ್ದು  ತೆಲುಗಿಗೆ ವೇಟೂರಿ ಸುಂದರ ರಾಮಮೂರ್ತಿ ಎಂಬ ಮಹಾನ್ ಸಾಹಿತಿ ವೈರಮುತ್ತು. ಒಂದೊಂದು ಹಾಡು ಸಹ ಇಂದಿಗೂ, ಎಂದೆಂದಿಗೂ ಅಮರ, ಅದ್ಭುತ. ಅವರ ಸಾಹಿತ್ಯಕ್ಕೆ ನಿಜವಾದ ಅರ್ಥ ತಂದುಕೊಟ್ಟಿದ್ದು ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಎಸ್.ಪಿ. ಶೈಲಜಾ.  ಜಂದ್ಯಾಲ ರವರ ಸಂಭಾಷಣೆ ಸೂಪರ್. ಸಂಕಲನ  ಕೃಷ್ಣರಾವ್, ಛಾಯಾಗ್ರಹಣ  ಪಿ.ಎಸ್.ನಿವಾಸ್.

ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. ಬೆಂಗಳೂರು ಪಲ್ಲವಿಯಲ್ಲಿ 511 ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಕರ್ನಾಟಕಕ್ಕೆ ವಿತರಕರು ಕೆ.ಆರ್.ಪ್ರಭು ರವರು. ಚಿತ್ರ ತೆಲುಗು, ತಮಿಳು, ಮಲಯಾಳಂ ಮೂರು ಭಾಷೆಯಲ್ಲಿ ಬಂದಿದ್ದು, ಮೂರೂ ಭಾಷೆಯಲ್ಲೂ ಸ್ವತಃ ಕಮಲ್ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ. ತೆಲುಗು- ಮಲಯಾಳಂ ನಲ್ಲಿ  ‘ಸಾಗರ ಸಂಗಮಂ’. ತಮಿಳು ‘ಸಲೆಂಗೈ ಒಳಿ’.

ಈ ಚಿತ್ರ ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ವಿಶೇಷವಾಗಿ ಉತ್ತಮ ಸಂಗೀತಕ್ಕಾಗಿ  ಇಳಯರಾಜಾ ಹಾಗೂ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ಎಸ್.ಪಿ.ಬಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. 1984ರ ಫಿಲ್ಮ್‌ಫೇರ್‌ ಅತ್ಯುತ್ತಮ ನಿರ್ದೇಶಕ ಕೆ.ವಿ,  ನಿರ್ಮಾಪಕ ಎ. ನಾಗೇಶ್ವರರಾವು, ನಟ ಕಮಲಹಾಸನ್, ನಟಿ ಜಯಪ್ರಧಾ, ಹಿನ್ನೆಲೆ ಗಾಯಕಿ ಎಸ್.ಜಾನಕಿ, ಅಡಿಯೋಗ್ರಾಫರ್ ಎ. ಆರ್.ಸ್ವಾಮಿನಾಧನ್, ಕಲೆ ತೋಟ ತರಣಿ ಹಾಗೂ ಅತ್ಯುತ್ತಮ ಚಲನಚಿತ್ರ ವಿಭಾಗಗಳಲ್ಲಿ ಮನ್ನಣೆ ಸಿಕ್ಕಿತ್ತು. ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸದಲ್ಲಿ ಸಿಎನ್ಎನ್ ಐಬಿಎನ್ ನಲ್ಲಿ ಈ ಚಿತ್ರವೂ ಸಹ 100ರಲ್ಲಿ ಸ್ಥಾನ ಪಡೆದಿದೆ. ಭಾರತ ಮತ್ತು ಮಾಸ್ಕೊ ದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ , ಏಷ್ಯನ್ ಪೆಸಿಫಿಕ್ ಸಿನಿಮೋತ್ಸವ ಹಾಗೂ AISFM ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಇಂದಿಗೆ (ಜೂನ್‌ 3) ಚಿತ್ರ ಬಿಡುಗಡೆಯಾಗಿ 38 ವರ್ಷಗಳು ಸಂದಿವೆ. ತುಂಬಾ ಕಾಡುವ ಚಿತ್ರ, ಹಾಡುಗಳಿಗಾಗಿ ಹಲವು ಬಾರಿ ಈ ಚಿತ್ರ ನೋಡಿದ್ದೇನೆ.

ಈ ಬರಹಗಳನ್ನೂ ಓದಿ