ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಗೀತಾಂಜಲಿ’ ಮತ್ತು ಊಟಿಯ ತಂಗಾಳಿ

ಪೋಸ್ಟ್ ಶೇರ್ ಮಾಡಿ
ಮಾಸ್ತಿ
ಚಿತ್ರಸಾಹಿತಿ

‘ಇಬ್ಬರಿಗೂ ಜೀವ ಹೋಗೋ ಅಂತ ಖಾಯಿಲೆಯಿದೆ.. ಇಬ್ಬರಲ್ಲೂ ಜೀವಕ್ಕಿಂತಾ ಹೆಚ್ಚಾಗಿರೋ ಪ್ರೀತಿಯಿದೆ.. ಎಷ್ಟು ದಿನ ಬದುಕಿರ್ತಾರೋ ಗೊತ್ತಿಲ್ಲ. ಆದರೆ ಬದುಕಿದ್ದಷ್ಟು ಕಾಲ ಪ್ರೀತಿಯಿಂದ ಇರುತ್ತಾರೆ’ – ಮಣಿರತ್ನಂ ನಿರ್ದೇಶನದ ‘ಗೀತಾಂಜಲಿ’ ತೆಲುಗು ಸಿನಿಮಾ ಕುರಿತು ಚಿತ್ರಸಾಹಿತಿ ಮಾಸ್ತಿ ಅವರ ಆಪ್ತ ಬರಹ.

‘ಪಲ್ಲವಿ ಅನುಪಲ್ಲವಿ ‘ ಸಿನಿಮಾದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ನಿರ್ದೇಶಕ ಮಣಿರತ್ನಂ ತದನಂತರ ತಮಿಳಿನಲ್ಲಿ ನಿರ್ದೇಶಿಸಿದ ‘ಅಗ್ನಿನಕ್ಷತ್ರಂ’ ಬಿಡುಗಡೆಯಾಗಿ ತೆರೆಕಂಡ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಂಡಿತ್ತು. ಆ ಸಿನಿಮಾ ಸೂಪರ್ ಹಿಟ್ ಆಗಿದ್ದೇ ತಡ ಅವರ ಮನೆಯ ಮುಂದೆ ಸೌತ್ ಇಂಡಸ್ಟ್ರೀಯ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರು ಮುಂಗಡ ಹಣದೊಂದಿಗೆ ಸರತಿಯಲ್ಲಿ ನಿಂತಿದ್ದರು.

ಅಷ್ಟೊತ್ತಿಗಾಗಲೇ ಕನ್ನಡ, ತಮಿಳಿನಲ್ಲಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಣಿರತ್ನಂಗೆ ಒಂದು ತೆಲುಗು ಸಿನಿಮಾ ಮಾಡುವ ಅಭಿಲಾಷೆಯಿತ್ತು. ಅದರಂತೆ ಅವರು ಹೈದರಾಬಾದಿನ ನಿರ್ಮಾಪಕರೊಬ್ಬರಿಗೆ ಸಿನಿಮಾ ಮಾಡುವುದಾಗಿ ಒಪ್ಪಿಗೆ ನೀಡಿದ್ದರು. ಆ ನಿರ್ಮಾಪಕರಿಗೆ ಈಗಾಗಲೇ ಹಿಟ್ ಆಗಿರುವ ‘ಅಗ್ನಿ ನಕ್ಷತ್ರಂ’ ಸಿನಿಮಾವನ್ನೇ ನಾಗಾರ್ಜುನ ಮತ್ತು ವೆಂಕಟೇಶ್ ರನ್ನು ಹಾಕಿಕೊಂಡು ತೆಲುಗಿನಲ್ಲಿ ಮಾಡುವಾಸೆ. ಆದರೆ ಈ ಇಬ್ಬರು ಸ್ಟಾರ್‌ಗಳ ಮಧ್ಯೆ ಒಂದು ಘರ್ಷಣೆಯಿದ್ದ ಕಾರಣ ಆ ಸಿನಿಮಾ ಆಗಲಿಲ್ಲ. ಬದಲಾಗಿ ಅದೇ ಸಿನಿಮಾ ‘ಘರ್ಷಣ’ ಅನ್ನೊ ಹೆಸರಿನಲ್ಲಿ ಡಬ್ಬಿಂಗ್ ಆಗಿ ಸಕ್ಸಸ್ ಆಯಿತು.

ಈ ಮಧ್ಯೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಹದಿಮೂರು ವರುಷದ ಕ್ಯಾನ್ಸರ್ ಪೀಡಿತ ಹೆಣ್ಣುಮಗುವೊಂದು ಬದುಕಿನ ತನ್ನ ಅಂತಿಮ ದಿನಗಳ ಅನುಭವಗಳನ್ನು ಒಂದು ಆಂಗ್ಲ ಪತ್ರಿಕೆಗೆ ಬರೆಯುತ್ತಿದ್ದಳು. ಪ್ರತೀ ವಾರ ತಪ್ಪದೇ ಅದನ್ನು ಓದುತ್ತಿದ್ದ ಮಣಿರತ್ನಂ ಆಕೆಯ ಅನುಭವಗಳನ್ನು ಸಿನಿಮಾ ಮಾಡುವ ಆಲೋಚನೆಯಲ್ಲಿದ್ದರು ಮತ್ತು ಈ ವಿಷಯವನ್ನು ಅದೇ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ ಮಾಡಲು ಮುಂದಾದರು.  ಆ ಸಿನಿಮಾಗೆ ಶೀರ್ಷಿಕೆಯಾಗಿ ಅಸುನೀಗಿದ ಆ ಹೆಣ್ಣುಮಗಳ ಹೆಸರನ್ನೇ ಇಡುತ್ತಾರೆ. ಅದೇ ‘ಗೀತಾಂಜಲಿ’.

‘ಗೀತಾಂಜಲಿ’ ಸಿನಿಮಾ ಶೂಟಿಂಗ್‌ನಲ್ಲಿ ನಿರ್ದೇಶಕ ಮಣಿರತ್ನಂ, ನಟ ನಾಗಾರ್ಜು ಮತ್ತು ನಟಿ ಗಿರಿಜ (Photo courtesy: Maniratnam – The Guru)

ನಾಯಕ ನಾಗಾರ್ಜುನನಿಗೆ ಹೊಸ ನಾಯಕಿಯನ್ನು ತರೋಣವೆಂದು ತಲಾಷಿಯಲ್ಲಿದ್ದಾಗಲೇ ಮಣಿಗೂ ಸುಹಾಸಿನಿಗೂ ಮದುವೆ ಏರ್ಪಾಟಾಗುತ್ತದೆ. ಆ ಮದುವೆಗೆ ಅಂತರಾಷ್ಟ್ರೀಯ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆಗಮಿಸಿರುತ್ತಾರೆ. ಅವರ ಜೊತೆಗೊಬ್ಬಳು ಹುಡುಗಿ ಬಂದಿರುತ್ತಾಳೆ. ಆಕೆ ಹುಟ್ಟಿ ಬೆಳೆದಿದ್ದು ಇಂಗ್ಲೆಂಡಿನಲ್ಲಿ. ತಾಯಿ ತಮಿಳು ಭಾಷಿಕಳು ತಂದೆ ಕನ್ನಡಿಗ. ವೃತ್ತಿಯಲ್ಲಿ ವೈದ್ಯರಾಗಿರುತ್ತಾರೆ. ಮದುವೆ ಮಂಟಪದಲ್ಲಿದ್ದ ಮಣಿರತ್ನಂ ನಾಯಕಿಯನ್ನಾಗಿ ಆಕೆಯನ್ನು ಅವರ ಮನೆಯವರನ್ನು ಮನವೊಲಿಸುತ್ತಾರೆ. ಆಕೆಯ ಹೆಸರೇ ‘ಗಿರಿಜ’. ಗೀತಾಂಜಲಿ ಚಿತ್ರದ ನಾಯಕಿ. ಆಕೆಯ ಹೆಸರಿನ ಹಿಂದೆ ಕನ್ನಡ ಮೂಲದ ತಂದೆಯ ಸರ್‌ನೇಮ್ ‘ಶೆಟ್ಟರ್‌’, ಗಿರಿಜ ಶೆಟ್ಟರ್‌ ಇತ್ತು. ಸಿನಿಮಾದಲ್ಲಿ ಅವರು ‘ಗಿರಿಜ’ ಎಂದು ಕರೆಸಿಕೊಂಡರು.

ತನ್ನ ಕೈಹಿಡಿದ ನವವಧು ಸುಹಾಸಿನಿ ಕೈಯಿಂದಲೇ ಆರಂಭ ಫಲಕ ತೋರಿಸುವುದರ ಮೂಲಕ ಆರಂಭವಾದ ‘ಗೀತಾಂಜಲಿ’ ಚಿತ್ರೀಕರಣ ನಿರ್ವಿಘ್ನವಾಗಿ ನೆರವೇರುತ್ತದೆ. ಈ ಚಿತ್ರದ ಕತೆಯಲ್ಲಿ ನಾಯಕನಿಗೆ ವಾಸಿಯಾಗದ ಮಾರಣಾಂತಿಕ ಖಾಯಿಲೆಯಿರುತ್ತದೆ. ಸಾವೆಂಬ ಸುಡುಬೆಂಕಿಯನ್ನು ತಣ್ಣಗೆ ಆಲಂಗಿಸಿಕೊಳ್ಳಲು ಮತ್ತು ತನ್ನ ಕೊನೆಯ ದಿನಗಳನ್ನು ಕಳೆಯಲು ನಾಯಕ ಊಟಿಗೆ ತೆರಳುತ್ತಾನೆ. ಅಲ್ಲಿ ಸಾವಿನ ದಾರಿ ಕಾಯುತ್ತಿದ್ದ ಅವನಿಗೆ ಸುಂದರವಾದ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಪಕ್ಷಿಯಂತೆ ಅವಳು ಸ್ವಚ್ಛಂದವಾಗಿ ಹಾರಾಡುತ್ತಾ ತನ್ನ ಬದುಕಿನ ಪ್ರತಿ ಕ್ಷಣವನ್ನೂ ಆಹ್ಲಾದಕರವಾಗಿ ಅನುಭವಿಸುತ್ತಿರುತ್ತಾಳೆ. ಅಂದದ ಜೊತೆಗೆ ಚೆಂದದ ಅವಳ ಉತ್ಸಾಹವನ್ನು ಕಂಡ ನಾಯಕನಿಗೆ ಅವಳ ಮೇಲೆ ಪ್ರೇಮಾಂಕುರವಾಗುತ್ತದೆ. ಅವಳಿಗೋಸ್ಕರ ಅವಳ ಪ್ರೀತಿಗೋಸ್ಕರ ಬದುಕಲು ಹಪಾಹಪಿಸುತ್ತಾನೆ . ಸಾವಿನಂಚಿನಲ್ಲಿದ್ದುಕೊಂಡೇ ಪ್ರೇಮದಂಚಿಗೆ ಹಾತೊರೆಯುತ್ತಾನೆ.

ನಾಗಾರ್ಜುನ – ಗಿರಿಜ

ಸಾವಂತ ಸಾವನ್ನೇ ದೂರ ಸರಿಸುವ ಪ್ರಕ್ರಿಯೆಯಲ್ಲಿದ್ದ ಅವನಿಗೆ ಆಘಾತಕಾರಿ ಸುದ್ಧಿಯೊಂದು ತಿಳಿಯುತ್ತದೆ. ಅದೇನೆಂದರೆ ‘ಅವಳಿಗೂ ತನಗಿರುವ ಖಾಯಿಲೆಯೇ ಇದೆಯೆಂದು’. ಆ ಸುದ್ದಿ ಕೇಳಿದೊಡನೆ ಅವನಿಗೆ ತಾನು ನಿಂತಿದ್ದ ನೆಲ ಕುಸಿದ ಅನುಭವವಾಗುತ್ತದೆ. ಊಟಿಯ ತಂಪು ಪರ್ವತ ಇವನ ಪಾಲಿಗೆ ಅಗ್ನಿ ಪರ್ವತವಾಗುತ್ತದೆ. ಪ್ರಕೃತಿಯ ಮಡಿಲು ಏಕಾಏಕಿ ಇವನಿಗೆ ವಿಕೃತಿಯ ಒಡಲೆನಿಸುತ್ತದೆ. ತನ್ನೊಳಗೇ ತಾನೇ ಬಿಕ್ಕಳಿಸುತ್ತಾನೆ. ಇವನೊಂದು ಕಡೆ ಅವಳನ್ನು ನೆನೆದು ಮರುಗುತ್ತಿದ್ದಾಗಲೇ, ಮತ್ತೊಂದು ಕಡೆ ಅವಳು ಯಾವುದಕ್ಕೂ ಹೆದರದೇ ಉತ್ಸಾಹದ ಚಿಲುಮೆಯಂತೆ ಪುಟಿಯುತ್ತಿರುತ್ತಾಳೆ. ಸಾವೇ ಸಮೀಪ ಬಂದ್ರೂ ಅವಳ ಜೀವನೋತ್ಸಾಹ ಕಂಡು ಹೊಟ್ಟೆ ಉರ್ಕೋಬೇಕು. ಹಂಗ್ ಬದುಕನ್ನ ಸವೀತಿರ್ತಾಳೆ. ಸಾವಿಗೆದರದ ಅವಳು ನಾಯಕನಿಗೆ ಜೀವನ್ಮುಖಿಯಂತೆ ಕಾಣಿಸುತ್ತಾಳೆ.

ಚಿತ್ರದ ನಿರ್ದೇಶಕರು ಅಂತ್ಯದಲ್ಲಿ ….

‘ಇಬ್ಬರಿಗೂ ಜೀವ ಹೋಗೋ ಅಂತ ಖಾಯಿಲೆಯಿದೆ.. ಇಬ್ಬರಲ್ಲೂ ಜೀವಕ್ಕಿಂತಾ ಹೆಚ್ಚಾಗಿರೋ ಪ್ರೀತಿಯಿದೆ.. ಎಷ್ಟು ದಿನ ಬದುಕಿರ್ತಾರೋ ಗೊತ್ತಿಲ್ಲ. ಆದರೆ ಬದುಕಿದ್ದಷ್ಟು ಕಾಲ ಪ್ರೀತಿಯಿಂದ ಇರುತ್ತಾರೆ’ ಅಂತ ಒಂದು ಸಾಲು ಹಾಕಿ ಸಿನಿಮಾನ ಊಟಿಯ ತಂಗಾಳಿಯಂತೆ ಮುಗಿಸಿಬಿಡುತ್ತಾರೆ. ಮಣಿರತ್ನಂರ ಚಿತ್ರಕತೆ, ಪಿ.ಸಿ.ಶ್ರೀರಾಮ್ ಛಾಯಾಗ್ರಹಣ, ಇಳಯರಾಜಾರ ಮಾಂತ್ರಿಕತೆ ‘ಗೀತಾಂಜಲಿ’ ಅನ್ನೊ ದೃಶ್ಯಕಾವ್ಯ ಅಷ್ಟು ಅತ್ಯದ್ಭುತವಾಗಿ ಮೂಡಿಬರೋದಕ್ಕೆ ಕಾರಣವಾಗಿತ್ತು.

ಈ ಬರಹಗಳನ್ನೂ ಓದಿ