
ಸಿನಿಮಾ ವಿಶ್ಲೇಷಕ
‘ಭಗವಂತ ಕೈ ಕೊಟ್ಟ ದುಡಿಯೋಕಂತ/ ಅದನ್ಯಾಕೆ ಎತ್ತುವೆ ಹೊಡೆಯೋಕಂತಾ …’ ಹಾಡು ನನಗೆ ಅಸಹಾಯಕರ ಮೇಲಿನ ಅನ್ಯಾಯದ ವಿರುದ್ಧ ಇರುವುದು ಸರಿಯಾದ ನಡವಳಿಕೆ ಎಂಬುದನ್ನು ಕಲಿಸಿಕೊಟ್ಟಿತು. – ಗೀತಪ್ರಿಯ ನಿರ್ದೇಶನದ ‘ಮಣ್ಣಿನ ಮಗ’ ಚಿತ್ರದ ಕುರಿತು ಪರಮೇಶ್ವರ ಗುರುಸ್ವಾಮಿ ಅವರ ಬರಹ.
ಗೀತಪ್ರಿಯ ಅವರು ಹಾಡುಗಳು, ಚಿತ್ರಕತೆ ರಚಿಸಿ 1968ರಲ್ಲಿ ನಿರ್ದೇಶಿಸಿದ ಅವರ ಮೊದಲ ಚಿತ್ರ ‘ಮಣ್ಣಿನ ಮಗ’. ರಾಜ್ಯದ ಮೂರನೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗಳನ್ನು, ‘ಕನ್ನಡ ಅತ್ಯುತ್ತಮ ಚಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ನೂರು ದಿನ ಪ್ರದರ್ಶನ ಕಂಡಿತು.
ಈ ಚಿತ್ರವನ್ನು ನೋಡಿದಾಗ ನನಗೆ 14 ವರ್ಷ. ಇಂದಿನ ಇದೇ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ ಅವರಿಗಿರುವ ಲೋಕ ಮತ್ತು ಸಾಮಾನ್ಯಜ್ಞಾನದಲ್ಲಿ ನನಗೆ ಶೇ.1ರಷ್ಟೂ ಇರಲಿಲ್ಲ. ನಾವು ಹಸುಕರುಗಳಂತೆ ಬೆಳೆದವರು. ‘ಮಕ್ಳೆಂಗ್ ಇರ್ಬೇಕೋ ಅಂಗಿದ್ದ’ವರು. ಇದ್ದುದರಲ್ಲಿ ಕದ್ದು ನಾಟಕ ಸಿನಿಮಾ ಎಂಬ ಸೊಪ್ಪುಸದೆಗಳನ್ನು ಮೇಯುತ್ತಿದ್ದವರು ನಾನು ಮತ್ತ ನನ್ನ ಗೆಳೆಯ ಬೋರಣ್ಣ. ನಾನು ಕಾದಂಬರಿ ಕತೆ ಎಂಬ ಹಸಿರನ್ನೂ ಆಡಿನಂತೆ ಮೇಯುತ್ತಿದ್ದೆ!
ಈ ಚಿತ್ರದ ಕತೆ ನಮ್ಮನ್ನು ಗೆದ್ದುಬಿಟ್ಟಿತ್ತು. ‘ಭಗವಂತ ಕೈ ಕೊಟ್ಟ ದುಡಿಯೋಕಂತ/ ಅದನ್ಯಾಕೆ ಎತ್ತುವೆ ಹೊಡೆಯೋಕಂತಾ …’ ಹಾಡು (ಮುಂದೆ ರಾಜ್‌ರವರೇ ಅಬಿನಯಿಸಿರುವ ‘ಹಾವಿನ ಹೆಡೆ’ಯ ‘ತುಂಟರ ಕಂಡರೆ ಸೊಂಟವ ಮುರಿಯುವೆ/ ಪುಂಡರ ರುಂಡ ಚೆಂಡಾಡುವೆ’ ಪರಿಕಲ್ಪನೆ ಇರುವ) ನನಗೆ ಅಸಹಾಯಕರ ಮೇಲಿನ ಅನ್ಯಾಯದ ವಿರುದ್ಧ ಇರುವುದು ಸರಿಯಾದ ನಡವಳಿಕೆ ಎಂಬುದನ್ನು ಕಲಿಸಿಕೊಟ್ಟಿತು.

‘ಇದೇನ ಸಭ್ಯತೆ. ಇದೇನ ಸಂಸ್ಕೃತಿ…’ ಎನ್ನುವ ಹಾಡು, ರಾಷ್ಟ್ರೀಯತೆಯ ಕಲ್ಪನೆಯನ್ನು ಸ್ಪಷ್ಟ ಪಡಿಸಿತ್ತು. ಅಂದು ಅದು ಬೇಕಿತ್ತೇನೊ. ಇಂದು ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಹಾಡು ಅನಿಸುತ್ತದೆ. ಈ ಹಾಡಿನ ಇನ್ನೊಂದು ರೂಪ ಹಿಂದೂ ಸನಾತನತೆಯನ್ನು ಹೇರುವ ನಿಲುವನ್ನು ಹೊಂದಿ ಮುಂದೆ ಪುಟ್ಟಣ್ಣನವರ ‘ಕಪ್ಪು ಬಿಳುಪು’ ಚಿತ್ರದ ‘ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ’. ಈ ಹಾಡನ್ನು ಇವತ್ತು ಪುನಃ ನೋಡುವಾಗ ಫ಼ೆಬ್ರವರಿ 14ರ ಇತ್ತೀಚಿನ ಪ್ರಸಂಗಗಳನ್ನು ನೆನಪಿಸಿತು.
ಡಿ.ಡಬ್ಲ್ಯು.ಗ್ರಿಫೆತ್ ಗೊತ್ತಲ್ಲ. ಚಲನಚಿತ್ರ ಪಿತಾಮಹ. ಇವನು ಸಿನಿಮಾಕಥನಕ್ಕೆ ಸಾಮಾಜಿಕ ನೈತಿಕತೆಯನ್ನು ತಂದವನು. 1909ರ ಇವನ ‘ಗೋಧಿಯ ಏಕಸ್ವಾಮ್ಯ’ (A corner in wheat) ಚಿತ್ರದಲ್ಲಿ ಬಡವರ ಅಸಹಾಯಕತೆ ಮತ್ತು ಉಳ್ಳವರ ಭೋಗದ ಅಟ್ಟಹಾಸದ ಚಿತ್ರಿಕೆಗಳನ್ನು ಜೊತೆಜೊತೆಯಾಗಿ ಸಂಕಲಿಸಿ ಸಾಮಾಜಿಕ ವೈದೃಶ್ಯವನ್ನು ಪರಿಣಾಮಕಾರಿಯಾಗಿ ಮೊದಲ ಸಾರಿ ಸಿನೆಮಾ ಮೂಲಕ ಸಂವಹನಿಸಿದ್ದಾನೆ. ಈ ‘ಇದೇನ ಸಭ್ಯತೆ’ ಹಾಡಿನಲ್ಲಿ ಗೀತಪ್ರಿಯರು ಈ ತಂತ್ರವನ್ನು ಬಳಸಿದ್ದಾರೆ.
ಇನ್ನು, ‘ಬರೆಯದ ಕೈಗಳು ಬರೆಯುತಿವೆ/ ಭಾರತ ದೇಶದ ಭಾಗ್ಯವನು… ನೇಗಿಲೇ ನಮ್ಮ ಲೇಖನಿಯು…’ ಹಾಡಂತೂ ಭಾರತದ ಭವಿಷ್ಯಕ್ಕೆ ಸಾಕ್ಷರತೆಯ ಆಗತ್ಯವನ್ನು ಮನಗಾಣಿಸಿತ್ತು. ನೇಗಿಲು ಭೂಮಿಯನ್ನು ಉಳುತ್ತಿರುವ ಕ್ಲೋಸ್ ಷಾಟ್‌ಗಳು ಭೂಮಿಯೆಂಬ ಸ್ಲೇಟಿನ ಮೇಲೆ ಬರೆಯುತ್ತಿರುವ ನೇಗಿಲೆಂಬ ಲೇಖನಿ ಅನಿಸಿಬಿಟ್ಟಿತ್ತು. ಈ ಚಿತ್ರದ ನಾಯಕ ರಾಜನ ಕೆಲ ಅಂಶಗಳನ್ನು ‘ಸಂಪತ್ತಿಗೆ ಸವಾಲ್’ನ ಭದ್ರನಲ್ಲು ಕಾಣಬಹುದು. ರಾಜ, ಬಹಳ ಅಪ್ತನೆನಿಸುತ್ತಾನೆ. ರಾಜ್‌ರವರ ಎಲ್ಲ ಸಾಮಾಜಿಕ ಚಿತ್ರಗಳಲ್ಲೂ ಒಂದು ಸಾಮಾಜಿಕ ನೈತಿಕ ಸಂದೇಶ ಇರುತ್ತದೆ.