ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಈಸಿ – ಜೈಸಿದವನ ರೋಚಕ ಕಥೆ

ಪೋಸ್ಟ್ ಶೇರ್ ಮಾಡಿ
ರಾಘವನ್ ಚಕ್ರವರ್ತಿ
ಲೇಖಕ

ಟಾಮ್‌ ಹ್ಯಾಂಕ್‌ ಅವರ ಬಹುತೇಕ ಚಿತ್ರಗಳು ಕಥಾಹಂದರ – ಅಭಿನಯ – ತಾಂತ್ರಿಕತೆಯ ದೃಷ್ಟಿಯಿಂದ ಸ್ಮರಣೀಯವಾಗಿವೆ. ಮಾರ್ಲನ್ ಬ್ರಾಂಡೊ, ಗ್ರೆಗರಿ ಪೆಕ್, ಕ್ಲಿಂಟ್ ಈಸ್ಟ್ ವುಡ್‌ರಂತಹವ ಸಾಲಲ್ಲಿ ಹೆಮ್ಮೆಯಿಂದ ಸೇರ್ಪಡೆಯಾಗಬಹುದಾದ ಹೆಸರು ಟಾಮ್ ಹ್ಯಾಂಕ್ಸ್. ಮೊನ್ನೆಗೆ (ಜುಲೈ 9) ಅವರಿಗೆ 65 ತುಂಬಿತು – ರಾಘವನ್‌ ಚಕ್ರವರ್ತಿ ಬರಹ.

“ದೇವರೆಲ್ಲೋ ನಿನ್ನ ಆಯುಸ್ಸನ್ನು ಕಲ್ಲುಬಂಡೆಯ ಮೇಲೆ ಬರೆದಿದ್ದಾನೆ”. ಯಾವುದೋ ಅಪಘಾತದಲ್ಲಿ ಕೂದಲೆಳೆಯಲ್ಲಿ ಪಾರಾದವರನ್ನು, ಇನ್ನ್ಯಾವುದೋ ಅಪಾಯದಿಂದ ಬದುಕುಳಿದವರನ್ನು ಕುರಿತು ಈ ರೀತಿ ಪ್ರತಿಕ್ರಿಯಿಸುವುದುಂಟು. ಮೊನ್ನೆ ಥೈಲ್ಯಾಂಡ್ ನ ಗುಹೆಗಳಲ್ಲಿ ಸಾವನ್ನು ಚಪ್ಪರಿಸಿ, ಅದರೊಂದಿಗೆ ಕಣ್ಣಾ-ಮುಚ್ಚಾಲೆಯಾಡಿ, ‘ಮತ್ತೆ ಸಿಕ್ಕೋಣ’ ಎಂದು ಅದರಿಂದ ಬೀಳ್ಕೊಂಡು ಜೀವಸಮೇತ ಬಂದ ಫುಟ್ ಬಾಲ್ ವೀರರನ್ನು ನೆನೆಸಿಕೊಂಡಾಗ ಈ ಮಾತು ನೆನಪಾಯಿತು.

ನೆನಪಿನ ಬುತ್ತಿ ಬಿಚ್ಚುತ್ತಾ ಹೋದಾಗ ಗೋಚರಿಸಿದ್ದು 2000ರಲ್ಲಿ ಬಿಡುಗಡೆಯಾದ ಇಂತಹದೇ ಸಾಹಸಗಾಥೆಯಿದ್ದ, ಬದುಕುಳಿಯಲು ಸತತ ಹೋರಾಟನಡೆಸುವಾತನ ‘ಕಾಸ್ಟ್ ಅವೇ’(ಸರಿ ಸುಮಾರು ಅರ್ಥ: ‘ಬಹಿಷೃತ’ ) (Cast Away) ಚಿತ್ರ. ರಾಬರ್ಟ್ ಜ಼ೆಮೆಕಿಸ್ ನಿರ್ದೇಶನವಿರುವ ಈ ಚಿತ್ರದ ಜೀವ – ಜೀವಾಳ ಟಾಮ್‌ಹ್ಯಾಂಕ್ಸ್‌ನ ಅಭಿನಯ. ಮೊನ್ನೆ ಜುಲೈ 9ರಂದು ತನ್ನ 65ನೇ ಹುಟ್ಟುಹಬ್ಬ ಆಚರಿಸಿಕೊಂಡ ಟಾಮ್, ಹಾಲಿವುಡ್ಡಿಗರನ್ನು ಬೆರಗುಗೊಳಿಸಿದ ನಟ. ಟಾಮ್ ರ Philadelphia’, ‘Saving Private Ryan’ ಗಳದ್ದು ಒಂದು ತೂಕವಾದರೆ, ‘ಕಾಸ್ಟ್ ಅವೇ’ಯದ್ದೇ ಒಂದು ತೂಕ. ಮುಖ್ಯವಾಗಿ ‘ಕಾಸ್ಟ್ ಅವೇ’ ತರದ ಚಿತ್ರಗಳನ್ನು ಮಾಡಲು ಬೇಕಾಗಿರುವುದು ಅಪ್ರತಿಮ ಇಚ್ಛಾಶಕ್ತಿ ಹಾಗೂ ಅಚಲ ಸಿನಿಮಾ ನಿಷ್ಟತೆ. ಜ಼ೆಮೆಕಿಸ್ – ಟಾಮ್ ಇಬ್ಬರಲ್ಲೂ ಈ ಗುಣಗಳಿವೆ.

ಫೆಡೆಕ್ಸ್ ಕಾರ್ಗೋ ಹಾಗೂ ಕೊರಿಯರ್ ಕಂಪನಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾದ ‘ಚಕ್ ನೋಲ್ಯಾಂಡ್’ (ಟಾಮ್ ಹ್ಯಾಂಕ್ಸ್), ‘ಸಮಯ ಪಾಲನೆ’ಯನ್ನು ವ್ಯಸನವಾಗಿ ಮಾಡಿಕೊಂಡಾತ. ತನ್ನ ಸಂಸ್ಥೆಯ ಯಾವುದೇ ಸಮಸ್ಯೆಯನ್ನು ವಿಶ್ವದ ಯಾವುದೇ ಶಾಖೆಯಲ್ಲಾದರೂ ಸರಿ, ಆತ ಪರಿಹರಿಸಬಲ್ಲ. ಸದಾ ಸಮಯದ ಒತ್ತಡದಲ್ಲಿ ಕೆಲಸ ಮಾಡುವ ಚಕ್ ಇನ್ನೂ ಅವಿವಾಹಿತ. ಆತನಿಗೊಬ್ಬ ಬಹುಕಾಲದ ಸಂಗಾತಿಯಿದ್ದಾಳೆ. ‘ಕಾಯಕವೇ ಕೈಲಾಸ’ವಾದ, ತನ್ನ ಕುರಿಯರ್/ಕಾರ್ಗೋ ಮಳಿಗೆಗಳಲ್ಲಿ ಬಂದು ಬೀಳುವ ಸಾಮಗ್ರಿಗಳು ಸಮಯಕ್ಕೆ ಸರಿಯಾಗಿ ಗ್ರಾಹಕರನ್ನು ತಲುಪುವುದಕ್ಕೆ ಬದ್ಧನಾದ ಚಕ್‌ನಿಗೆ ಮದುವೆಯಾಗಲೂ ಸಮಯವಿಲ್ಲ. “The World on Time” ಎಂಬ ತನ್ನ ಸಂಸ್ಥೆಯ ಘೋಷವಾಕ್ಯಕ್ಕೆ ಚಕ್ ನಿಷ್ಟ.

‘ಕಾಸ್ಟ್‌ ಅವೇ’ ಸಿನಿಮಾ ಚಿತ್ರೀಕರಣದ ಸಂದರ್ಭ

ಹೀಗಿರುವಾಗ ಕ್ರಿಸ್ಮಸ್ನ ಮುನ್ನಾ ದಿನ, ರಾತ್ರಿ ಕೂಟದಲ್ಲಿ ಭಾಗಿಯಾಗಿದ್ದ ಚಕ್ನ ಪೇಜರ್‌ಗೆ ಸಂದೇಶವೊಂದು ಬರುತ್ತದೆ. ಮಲೇಷಿಯದ ಫೆಡೆಕ್ಸ್ ಕಛೇರಿಯಲ್ಲಿ ತುರ್ತಾಗಿ ಪರಿಹರಿಸಬೇಕಾದ ಸಮಸ್ಯೆಯೊಂದು ತೋರಿದೆ. ಹಾಗಾಗಿ ಚಕ್ ಕೂಡಲೇ ಹೊರಡಬೇಕಿದೆ. ಅನಿವಾರ್ಯವಾಗಿ ಚಕ್ ತನ್ನ ಸಂಗಾತಿಯಿಂದ ಬೀಳ್ಕೊಂಡು ಪೆಸಿಫಿಕ್ ಸಾಗರದ ಮೇಲೆ ಹಾರಲಿರುವ ಜೆಟ್ ವಿಮಾನವೊಂದನ್ನು ಹತ್ತಿ ಹೊರಟೇ ಬಿಡುತ್ತಾನೆ. (ಫೆಡೆಕ್ಸ್ ದಿನಕ್ಕೆ ನಾಲ್ಕು ಬಾರಿಯಾದರೂ, ಅಮೆರಿಕ ಕರಾವಳಿಯಿಂದ, ಏಷ್ಯಾ-ಪೆಸಿಫಿಕ್ ಕಡೆಗೆ ಅಂದರೆ ಮಲೇಷಿಯಾ-ಸಿಂಗಪುರ-ಹಾಂಗ್ ಕಾಂಗ್ ದೇಶಗಳಿಗೆ ತನ್ನ ಕಾರ್ಗೋ ವಿಮಾನಗಳನ್ನು ಹಾರಾಟ ಮಾಡುತ್ತದೆ). ದುರದೃಷ್ಟವಶಾತ್, ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಅಪಘಾತಕ್ಕೀಡಾಗಿ ಪೆಸಿಫಿಕ್ ಸಾಗರದಲ್ಲಿ ಪತನವಾಗುತ್ತದೆ. ವಿಮಾನದ ‘ಕಪ್ಪುಪೆಟ್ಟಿಗೆ’ (black box) ನಾಶವಾಗಿರುತ್ತದೆ. ಮೂರ್ಛಿತನಾದ ಚಕ್‌ನನ್ನು ಸಾಗರದ ಅಲೆಗಳು ಯಾವುದೋ ದ್ವೀಪದಲ್ಲಿ ಎಸೆದಿರುತ್ತವೆ. ಪೈಲಟ್‌ನ ಶವ, ವಿಲೇವಾರಿಯಾಗಬೇಕಿದ್ದ ಹಲವು ಫೆಡೆಕ್ಸ್‌ನ ಡಬ್ಬಗಳೂ ದಡದ ಪಾಲಾಗಿರುತ್ತವೆ.

ಅದೊಂದು ಮಾನವರಹಿತ ದ್ವೀಪ. ಪೈಲಟ್ ನ ಕೊಳೆಯುತ್ತಿದ್ದ ಶವಕ್ಕೆ ಚಕ್ ತಾನೇ ಸಂಸ್ಕಾರ ಮಾಡುತ್ತಾನೆ. ಅಳಿದುಳಿದ ವಸ್ತುಗಳಿಂದ ತೆಪ್ಪ (Raft) ಮಾಡಿಕೊಂಡು ದ್ವೀಪದಿಂದ ಹೊರಸಾಗಲು ವಿಫಲ ಯತ್ನ ನಡೆಸುತ್ತಾನೆ. ಅಲೆಗಳ ರಭಸಕ್ಕೆ ಸೋಲೊಪ್ಪುತ್ತಾನೆ. ಅವನ ಎಲ್ಲಾ ಪ್ರಯತ್ನಗಳೂ ಸೋಲಲಾರಂಭಿಸಿದಾಗ, ಚಕ್ ಕ್ರಮೇಣ ನಾಗರೀಕತೆಯ ಸಂಪರ್ಕ ಕಡಿದುಕೊಳ್ಳುತ್ತಾನೆ. ಅನ್ನಾಹಾರವಿಲ್ಲ. ಮನುಷ್ಯ ಜೀವದ ಸುಳಿವೂ ಇಲ್ಲ. ಸದಾ ಚಕ್ರದಂತೆ ಸುತ್ತುತ್ತಿದ್ದ, ಅರಳುಹುರಿದಂತೆ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ, ಓಟವೇ ಗುರಿಯಾಗಿದ್ದ, ಗಡಿಯಾರ ದೇವರಾಗಿದ್ದ ಚಕ್ ಜೀವನದಲ್ಲಿ ಇದೊಂದು ಅನಿರೀಕ್ಷಿತ ತಿರುವು. ಚಕ್‌ನ ದಿನಂಪ್ರತಿ ಜೀವನಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಸಂದರ್ಭ.

‘ಕಾಸ್ಟ್‌ ಅವೇ’ ಚಿತ್ರದ ನಿರ್ದೇಶಕ ರಾಬರ್ಟ್‌ ಜೆಮೆಕಿಸ್‌, ನಟ ಟಾಮ್‌ ಹ್ಯಾಂಕ್‌

ಹೊಸಜೀವನ ಮಾರ್ಗ ಆವಿಷ್ಕರಿಸುತ್ತಾ, ಸಾಗರತಟದ ಜೀವನಕ್ಕೆ ಅನಿವಾರ್ಯವಾಗಿ ಹೊಂದಿಕೊಳ್ಳುತ್ತಾ ಸಾಗುವ ಚಕ್, ದಡಕ್ಕೆ ಬಂದುಬಿದ್ದಿದ್ದ ಯಾರನ್ನೋ ತಲುಪಬೇಕಿದ್ದ ಡಬ್ಬವೊಂದರಲ್ಲಿ ಸಿಕ್ಕುವ ‘ವಾಲೀಬಾಲ್’ನಲ್ಲಿ ಆಪ್ತಮಿತ್ರನನ್ನು ಕಾಣಲಾರಂಭಿಸುತ್ತಾನೆ. ತನ್ನ ಕೈಗೆ ಆಗಿದ್ದ ಗಾಯದಿಂದ ಒಸರುತ್ತಿದ್ದ ರಕ್ತದಿಂದ, ಆ ಚೆಂಡಿನ ಮೇಲೆ ಮನುಷ್ಯನ ಚಿತ್ರ ಬಿಡಿಸಿ, ಅದಕ್ಕೆ ‘ವಿಲ್ಸನ್’ ಎಂದು ಹೆಸರಿಸುತ್ತಾನೆ. ವಾಲೀಬಾಲ್ ‘ವಿಲ್ಸನ್’ ನೊಂದಿಗೆ ಚಕ್ ಸಂಭಾಷಿಸಲು, ತನ್ನ ಭಾವನೆಗಳನ್ನು ತೋಡಿಕೊಳ್ಳಲು ಆರಂಭಿಸುತ್ತಾನೆ. ವಿಲ್ಸನ್‌ನೊಂದಿಗೆ ಜಗಳವನ್ನೂ ಆಡುತ್ತಾನೆ. ತನ್ನ ಹಸಿವು – ಒಂಟಿತನ ಮರೆಯಲು ಯತ್ನಿಸುತ್ತಾನೆ. ನಾಲ್ಕು ವರ್ಷಗಳು ಕಳೆಯುತ್ತವೆ. ಕೃಶದೇಹ, ಜಟೆಗಟ್ಟಿದ ತಲೆಕೂದಲು -ಗಡ್ಡ, ಮೈಮೇಲೊಂದು ತುಂಡು ಬಟ್ಟೆ ಮಾತ್ರವಿರುವ ಚಕ್ ಶಿಲಾಯುಗದ ಮಾನವನಂತೆ ಒರಟಾಗಿದ್ದಾನೆ, ಒಂದು ಕಾಲದ ಮಹಾನ್ sophisticated ಅಧಿಕಾರಿ ಚಕ್.

ವಿಲ್ಸನ್ ಹೊರತು ಇನ್ನ್ಯಾರೂ ಅವನೊಟ್ಟಿಗಿಲ್ಲ. ನಾಗರಿಕತೆಗೆ ಹಿಂದಿರುಗುವ ಹಂಬಲ ಸಾಗರದಷ್ಟೇ ಬೆಳೆದು ನಿಂತಿದೆ. ತಾನು, ವಿಲ್ಸನ್ ಇಬ್ಬರೇ.. ಎದುರಿಗೆ ದಿಗಂತದಾಚೆಗೂ ವ್ಯಾಪಿಸಿದೆಯೋ ಎಂಬ ಅಚ್ಚರಿ -ಆತಂಕ ಮೂಡಿಸುವ ಸಾಗರ. ಮಾನವ ಪ್ರಯತ್ನಕ್ಕೆ ಎಣೆಯುಂಟೆ?? ದಡದಲ್ಲಿ ಸಿಕ್ಕ ದಿಮ್ಮಿಗಳು, ಅಳಿದುಳಿದ ವಸ್ತುಗಳನ್ನೆಲ್ಲಾ ಪೇರಿಸಿ, ತೆಪ್ಪವೊಂದನ್ನು ಮತ್ತೊಮ್ಮೆ ನಿರ್ಮಿಸಿಯೇ ಬಿಡುತ್ತಾನೆ ಚಕ್. ಸಾಗರ ಪ್ರಶಾಂತವಾಗಿದ್ದಾಗ ತನ್ನ ‘ಆಪ್ತ’ ವಿಲ್ಸನ್ ಜೊತೆಗೂಡಿ, ತೆಪ್ಪ ಹತ್ತಿ ಹೊರಟೇ ಬಿಡುತ್ತಾನೆ. ದೈತ್ಯಸಾಗರವನ್ನು ದಾಟಲು ಒಂದು ಬಡಕಲು ತೆಪ್ಪ. ಸಾಗರ ಮಣಿಸುವ ಮನುಷ್ಯನ ಭಂಡಧೈರ್ಯ, ಅದಮ್ಯ – ವಿಶ್ವಾಸಗಳನ್ನು ಸಂಕೇತಿಸುವ ಆ ಮನಸೋಲುವ ದೃಶ್ಯದಲ್ಲಿ ತೆಪ್ಪ ಒಂದು ರೂಪಕವಾಗಿದೆ. ವಿಲ್ಸನ್‌ನೊಂದಿಗೆ ಚಕ್ ತನ್ನ ಪಯಣ ಆರಂಭಿಸುತ್ತಾನೆ. ಅಲೆಗಳ ಉಬ್ಬರ – ಇಳಿತಗಳೊಂದಿಗೆ ಆಡುತ್ತಾ, ಸಾಗರವನ್ನೇ ಅಟ್ಟಹಾಸ ಮಾಡುವನಂತೆ ಹೊರಟ ಚಕ್, ದಣಿವರಿತು ತೆಪ್ಪದ ಮೇಲೆಯೇ ನಿದ್ರಿಸಿಬಿಡುತ್ತಾನೆ.

ದೈತ್ಯ ಅಲೆಯೊಂದಕ್ಕೆ ಸಿಕ್ಕ ತೆಪ್ಪ ಸುಯ್ದಾಡಿದಾಗ ಥಟ್ಟನೆ ಎಚ್ಚರಗೊಳ್ಳುವ ಚಕ್ ನಿಗೆ ಆಘಾತ ಕಾದಿರುತ್ತದೆ. ವಿಲ್ಸನ್ ತೆಪ್ಪದಿಂದ ಬೇರ್ಪಟ್ಟು ಅಲೆಗಳೊಂದಿಗೆ ದೂರನಡೆದಿರುತ್ತಾನೆ. ಜೀವದ ಹಂಗು ತೊರೆದು ವಿಲ್ಸನ್ ನನ್ನು ಎಳೆದುತರಲು ಅಲೆಗಳೊಂದಿಗೆ ಬಡಿದಾಡುತ್ತಾ ಸಾಗಲೆತ್ನಿಸುವ ಚಕ್ ಗೆ, ಇತ್ತ ಕೈಬಿಟ್ಟು ಹೋಗುತ್ತಿದ್ದ ತೆಪ್ಪ ಹಿಡಿದಿಡಬೇಕಿದೆ. ಆದರೆ ಸಮಯ ಮಿಂಚಿರುತ್ತದೆ. ವಿಲ್ಸನ್, ಚಕ್‌ನನ್ನು ಬಿಟ್ಟು ದೂರ, ಬಹುದೂರ ಸಾಗಿಬಿಟ್ಟಿರುತ್ತಾನೆ. ವಿಷಣ್ಣನಾದ ಚಕ್, ‘ಸಂಗಾತಿ’ಯನ್ನು ಕಳೆದುಕೊಂಡ ವೇದನೆಯಿಂದಾಗಿ ತೆಪ್ಪದಲ್ಲೇ ಕುಸಿದು ಬೀಳುತ್ತಾನೆ. ದೂರದಲ್ಲಿ ಸಾಗುತ್ತಿದ್ದ ಕಾರ್ಗೋ ಹಡಗಿನ ಸಿಬ್ಬಂದಿ ತೆಪ್ಪದಲ್ಲಿ ತೇಲುತ್ತಿದ್ದ ಚಕ್‌ನನ್ನು ಗಮನಿಸುತ್ತಾರೆ. ತೆಪ್ಪದಿಂದ, ಹಡಗಿಗೆ ರವಾನಿಸಲ್ಪಡುವ ಚಕ್ ಸಾಂಕೇತಿಕವಾಗಿ ನಾಗರೀಕತೆಗೆ ಹಿಂದಿರುಗುತ್ತಾನೆ. ವಿಮಾನಾಪಘಾತಕ್ಕೊಳಗಾಗಿ ನಾಲ್ಕು ವರ್ಷ ಬಾರದ ಚಕ್ ಇನ್ನಿಲ್ಲ ಎಂದು ಅವರ ಕುಟುಂಬದವರು ಆಗಲೇ ನಿರ್ಧರಿಸಿಯಾಗಿರುತ್ತದೆ. ಅವನ ದೀರ್ಘಕಾಲದ ಸಂಗಾತಿ ಕೆಲ್ಲಿಗೆ ಮತ್ತೊಬ್ಬನೊಂದಿಗೆ ಮದುವೆಯಾಗಿದೆ. ಚಕ್ ಅದೇ ಸಮಯ ಪಾಲನೆ, ಶಿಸ್ತಿನ ಜೀವನಕ್ಕೆ ವಾಪಸಾಗುತ್ತಾನೆ. ಚಿತ್ರದ ಕೊನೆಯ ದೃಶ್ಯದಲ್ಲಿ, ಚಕ್ ಹಲವು ದಾರಿಗಳು ಕೂಡುವ ಟೆಕ್ಸಾಸ್ ಬಳಿಯ ವೃತ್ತವೊಂದರಲ್ಲಿ ತಾನು ಬಂದದಾರಿಯತ್ತ ಅವಲೋಕಿಸುತ್ತಾ ನಿಲ್ಲುತ್ತಾನೆ.

ಇಡೀ ಚಿತ್ರವನ್ನು ತಮ್ಮ ಭುಜಗಳ ಮೇಲೆ ಹೊತ್ತು ಮೆರೆಸಿರುವ ಟಾಮ್ ಹ್ಯಾಂಕ್ಸ್‌ರ ಅಭಿನಯದಲ್ಲಿನ ತಾದಾತ್ಮ್ಯತೆ, ಮನುಷ್ಯ ತನ್ನ ಅಸ್ಮಿತೆ – ಆಸ್ತಿತ್ವಗಳನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟವನ್ನು ಹೊರಹೊಮ್ಮಿಸಿರುವ ಪರಿ ಸ್ತುತ್ಯಾರ್ಹ. ಚಿತ್ರದ ಮೊದಲ ಭಾಗದ, ಅಂದರೆ ವಿಮಾನಾಪಘಾತದ ಪೂರ್ವ ದೃಶ್ಯಗಳಿಗಾಗಿ ಸುಮಾರು 25 ಕೆ.ಜಿ. ತೂಕ ಹೆಚ್ಚಿಸಿಕೊಂಡ ಟಾಮ್, ವಿಮಾನ ಪತನದ ನಂತರದ ದೃಶ್ಯಗಳಿಗೆ ಹೆಚ್ಚು ತೂಕ ಇಳಿಸಿಕೊಳ್ಳಬೇಕಾಯಿತು. ಜ಼ೆಮೆಕಿಸ್ ರ ಸಿನಿಮಾ ಬದ್ಧತೆ ಗಮನಿಸಿ. ಒಂದು ವರ್ಷಕಾಲ ಅವರು ಚಿತ್ರೀಕರಣ ಸ್ಥಗಿತಗೊಳಿಸಿಯೇ ಬಿಟ್ಟರು. ಟಾಮ್ ಕೃಶರಾಗಿ. ತಲೆಗೂದಲು, ಗಡ್ಡಗಳು ಜಟೆಗಟ್ಟಿ, ನಾಲ್ಕು ವರ್ಷ ದ್ವೀಪದಲ್ಲಿ ಏಕಾಂಗಿಯಾಗಿದ್ದವನ ಪ್ರೇತಕಳೆ ಬರುವುದಕ್ಕಾಗಿ ಪಟ್ಟ ಶ್ರಮದ ಬಗ್ಗೆ ಬರೆದಷ್ಟೂ ಕಡಿಮೆಯೇ. ಟಾಮ್ ಈ ಚಿತ್ರವನ್ನು ಒಂದು ತಪಸ್ಸಿನಂತೆ ಸ್ವೀಕರಿಸಿದರು. ಫ಼ಿಜಿ ಯ ಸುಂದರ, ಮಾನವ ಸಂಪರ್ಕವಿಲ್ಲದ, ಮುಖ್ಯದ್ವೀಪದಿಂದ ಸುಮಾರು 500 ಕಿ.ಮೀ. ದೂರದಲ್ಲಿದ್ದ ಏಕಾಂಗಿ ದ್ವೀಪದಲ್ಲಿ ಚಿತ್ರೀಕರಣ ನಡೆಸಲಾಯಿತು. ಸಾಗರದ ಅಲೆಗಳ ಶಬ್ದ, ಅಲ್ಲಿ ಬೀಸುವ ತಂಗಾಳಿ, ಮಗದೊಮ್ಮೆ ವೇಗವಾಗಿ ಬೀಸುವ ಗಾಳಿಯ ಶಬ್ದ ಹೊರತು ಪಡಿಸಿ ಹೆಚ್ಚಿಗೆ ಹಿನ್ನಲೆ ಸಂಗೀತವನ್ನು ಬಳಸಿದಿರುವುದು ಗಮನಾರ್ಹ ಅಂಶ. ಸಾಗರದ ಅಲೆಗಳನ್ನು, ಅದಕ್ಕೆ ಪೂರಕವೆನಿಸುವ ಟಾಮ್‌ರ ಮೂಡ್ ಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಛಾಯಗ್ರಾಹಕ ಡಾನ್ ಬರ್ಜೆಸ್ ಕುಸುರಿ ಕೆಲಸ ಈ ಚಿತ್ರದ ವಿಶೇಷ.

ಈ ಚಿತ್ರದ ಬಳಿಕ, ಆ ದ್ವೀಪವೂ ಪ್ರವಾಸೀ ಸ್ಥಳವಾಯಿತು. ಫೆಡೆಕ್ಸ್ ಸಂಸ್ಥೆ ಮೊದಲು ಚಿತ್ರವನ್ನು ವಿರೋಧಿಸಿತ್ತು. ಜ಼ೆಮೆಕಿಸ್, ಸಂಸ್ಥೆಯ ಅಧಿಕಾರಿಗಳಿಗೆ ತಮ್ಮ ಚಿತ್ರದ ಕಾನ್ಸೆಪ್ಟ್ ಅನ್ನು ವಿಷದವಾಗಿ ವಿವರಿಸಿದರು. ಸಂಸ್ಠೆಯವರನ್ನೂ ಟಾಮ್ ಚಿತ್ರೀಕರಣಕ್ಕೆ ಆಹ್ವಾನಿಸಿದರು. ಕ್ರಮೇಣ ವಿಶ್ವಾಸ ಮೂಡಿದ ಸಂಸ್ಥೆಯವರು, ಚಿತ್ರ ವೀಕ್ಷಿಸಿ ಮೂಕರಾದರು. ಫೆಡೆಕ್ಸ್ ಸಂಸ್ಥೆ ಮತ್ತಷ್ಟು ಜನಪ್ರಿಯವಾಯಿತು. ನಾಲ್ಕು ವರ್ಷ ನಾಗರೀಕತೆಯ ಸಂಪರ್ಕ ಕಳೆದುಕೊಂಡ ವ್ಯಕ್ತಿಗೆ ‘ಆತ್ಮಹತ್ಯೆ’ಯಂತಹ ವಿಚಾರ ಬರಬಹುದಲ್ಲ… ಚಕ್ ಸಾಗರದಲ್ಲೇ ವಿಲ್ಸನ್ ನೊಂದಿಗೆ ಮುಳುಗಿ ತನ್ನ ಬದುಕು ಮುಗಿಸುವಂತಹ ಅಂತ್ಯವನ್ನು ಕಥೆಗಾರ ವಿಲಿಯಮ್ ಬ್ರಾಯೆಲ್ಸ್ ಹೇಳಿದಾಗ ಟಾಮ್ ವಿರೋಧಿಸಿದರು. ಕಥೆಯನ್ನು ತಿದ್ದಿ ತೀಡಿ, ಬರೆದು, ಹರೆದು, ಮತ್ತೆ ಬರೆದ ವಿಲಿಯಮ್ ಕೊನೆಗೆ ಚಿತ್ರಕ್ಕೆ ಪ್ರಯೋಗಾತ್ಮಕ ಸ್ಪರ್ಶ ನೀಡಿ, ಮತ್ತಷ್ಟು ಜೀವಂತವಾಗಿಸಿದರು. ‘ಫಿಲಡೆಲ್ಫಿಯಾ’ ದಲ್ಲಿ ಸಲಿಂಗಕಾಮಿ ವಕೀಲನಾಗಿ, ಬಹುಶಃ ತಮ್ಮ ಜೀವಮಾನದ ಶ್ರೇಷ್ಟ ಅಭಿನಯ ನೀಡಿದ ಟಾಮ್, ‘ಫಾರೆಸ್ಟ್ ಗಂಪ್’ನಲ್ಲೂ ಸ್ಮರಣೀಯ ಅಭಿನಯ ನೀಡಿದ್ದರು. ಸ್ಪೀಲ್ ಬರ್ಗ್‌ರಂತಹ ದೈತ್ಯ ಪ್ರತಿಭಾವಂತರ ಫೇವರೀಟ್ ಆಗಿರುವ ಟಾಮ್ ರ ಬಹುತೇಕ ಚಿತ್ರಗಳು ಕಥಾಹಂದರ – ಅಭಿನಯ – ತಾಂತ್ರಿಕತೆಗಳ ದೃಷ್ಟಿಯಿಂದ ಸ್ಮರಣೀಯವಾಗಿವೆ. ಮಾರ್ಲನ್ ಬ್ರಾಂಡೊ, ಗ್ರೆಗರಿ ಪೆಕ್, ಕ್ಲಿಂಟ್ ಈಸ್ಟ್ ವುಡ್ ರಂತಹವ ಸಾಲಲ್ಲಿ ಹೆಮ್ಮೆಯಿಂದ ಸೇರ್ಪಡೆಯಾಗಬಹುದಾದ ಹೆಸರು ಟಾಮ್ ಹ್ಯಾಂಕ್ಸ್. ಸೋಲಿಗೆ ಹೆದರುವವರು, ಹಿಂಜರಿಕೆಯಿರುವವರು, ಖಿನ್ನತೆಯಿರುವವರು, ‘ಕಾಸ್ಟ್ ಅವೇ’ಯನ್ನು ಒಮ್ಮೆ ನೋಡಬೇಕು.

ಈ ಬರಹಗಳನ್ನೂ ಓದಿ