ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪಾತ್ರವೇ ತಾವಾಗುವ ಸರಿತ

ಪೋಸ್ಟ್ ಶೇರ್ ಮಾಡಿ
ವಿನಯ್ ಪಾಂಡವಪುರ
ಗೀತರಚನೆಕಾರ

ದಕ್ಷಿಣ ಭಾರತ ಚಿತ್ರರಂಗ ಕಂಡ ಸಹಜ, ಸರಳ, ಪ್ರಬುದ್ಧ ನಟಿ ಸರಿತ. ಕನ್ನಡ ಸಿನಿಮಾಗಳ ಹತ್ತಾರು ವಿಶಿಷ್ಟ ಪಾತ್ರಗಳ ಮೂಲಕ ಅವರು ನೆನಪಾಗುತ್ತಾರೆ. ಸರಿತ ಅವರ 61ನೇ ಹುಟ್ಟುಹಬ್ಬದ ಸಂದರ್ಭವಿದು (ಜೂನ್ 7). ನಟಿಯ ಕುರಿತ ಗೀತರಚನೆಕಾರ ವಿನಯ್ ಪಾಂಡವಪುರ ಅವರ ಅಭಿಮಾನದ ಬರಹ ಇಲ್ಲಿದೆ.

ಬ್ರಹ್ಮಗಂಟು! ನಟಿ ಸರಿತ ಅಭಿನಯದ ಈ ಸಿನಿಮಾ ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲೊಂದು. ಈ ಸಿನಿಮಾಗೆ ಸಂಬಂಧಿಸಿದಂತೆ ನನ್ನ ಮನಸ್ಸಿಗೆ ಬಂದ ವಿಚಾರವೊಂದನ್ನು ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ. ‘ಬ್ರಹ್ಮಗಂಟು’ (1985) ಪಾತ್ರದಲ್ಲಿ ನಟಿಸುವ ಹೊತ್ತಿಗೆ ಅದಾಗಲೇ ಸರಿತ ಸುಮಾರು 70 ಸಿನಿಮಾಗಳ ನಟಿ. ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗಿನ ಹಲವು ಸೂಪರ್‌ಹಿಟ್‌ ಸಿನಿಮಾಗಳ ತಾರೆಯಾಗಿದ್ದರು. ಕನ್ನಡದಲ್ಲಿ ಡಾ.ರಾಜಕುಮಾರ್ ಜೊತೆಗಿನ ಹೊಸಬೆಳಕು, ಚಲಿಸುವ ಮೋಡಗಳು, ಕಾಮನಬಿಲ್ಲು ಹಾಗೂ ಎರಡು ರೇಖೆಗಳು, ಮುಗಿಲ ಮಲ್ಲಿಗೆ ಚಿತ್ರಗಳು ಯಶಸ್ಸು ಕಂಡಿದ್ದವು. ಜೊತೆಗೆ ಸಾಕಷ್ಟು ದೊಡ್ಡ ನಟಿಯರಿಗೆ ಡಬ್ಬಿಂಗ್ ಕಲಾವಿದೆಯಾಗಿಯೂ ಸರಿತ ಕೆಲಸ ಮಾಡಿದ್ದರು.

ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ, ಎತ್ತರಕ್ಕೆ ಬೆಳೆದ ನಟಿ ‘ಬ್ರಹ್ಮಗಂಟು’ ಚಿತ್ರದಲ್ಲಿನ ಪೆದ್ದು, ರೂಪವತಿಯಲ್ಲದ ಯುವತಿಯ ಪಾತ್ರವನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ತಾನೊಬ್ಬ ಸ್ಟಾರ್ ನಾಯಕನಟಿ, ಇಂಥದ್ದೊಂದು ಪಾತ್ರ ತಮ್ಮ ಇಮೇಜಿಗೆ ಅಡ್ಡಿಯಾಗಬಹುದೆಂದು ಅವರು ಕಿಂಚಿತ್ತೂ ಯೋಚಿಸಿರಲು ಸಾಧ್ಯವಿಲ್ಲ. ಬಹುಶಃ ಹಾಗಾಗಿಯೇ ಅವರು ವಿಶಿಷ್ಠ ಮತ್ತು ಸವಾಲಿನ ಪಾತ್ರಗಳ ಮೂಲಕ ನಮ್ಮ ನೆನಪಿನಲ್ಲಿ ಉಳಿಯಲು ಸಾಧ್ಯವಾಯ್ತೇನೋ?

‘ಕಾಮನಬಿಲ್ಲು’ ಚಿತ್ರದಲ್ಲಿ ರಾಜಕುಮಾರ್, ಸರಿತ (ಫೋಟೊ: ಎಸ್‌.ತಿಪ್ಪೇಸ್ವಾಮಿ)

ಕನ್ನಡ ಸಿನಿಮಾ ಸಂದರ್ಭದಲ್ಲಿ ಸಹಜ ನಟನೆಯ, ಅಸಂಬದ್ಧ ಮಾತುಗಳಿಲ್ಲದ, ಅತಿ ಮುಖ್ಯವಾಗಿ ನಟನಾ ಪ್ರಬುದ್ಧತೆಯ ಪಾತ್ರಗಳಲ್ಲಿ ನೆನಪಾಗುವ ನಟಿಯರ ಪಟ್ಟಿಯಲ್ಲಿ ಸರಿತಾ ಪ್ರಮುಖವಾಗಿ ಕಾಣಿಸುತ್ತಾರೆ. ವರನಟ ರಾಜ್‌ ಅವರೊಂದಿಗಿನ ಚಿತ್ರಗಳದ್ದು ಒಂದು ತೂಕವಾದರೆ.. ತಪ್ಪಿದ ತಾಳ, ಬ್ರಹ್ಮಗಂಟು, ಮುಗಿಲ ಮಲ್ಲಿಗೆ, ಮಲಯಮಾರುತ, ಮಾನಸ ವೀಣೆ ಮುಂತಾದ ಚಿತ್ರಗಳ ನಟನೆ ಮತ್ತಷ್ಟು ಆಪ್ತವಾಗಿಸುತ್ತದೆ. ರಾಜ್ಯ ಪ್ರಶಸ್ತಿ ಪಡೆದ ‘ಸಕ್ರಾಂತಿ’ ಚಿತ್ರದ ಅವರ ಪಾತ್ರವನ್ನು ಯಾರು ತಾನೇ ಮರೆಯಲು ಸಾಧ್ಯ?

‘ಮುಗಿಲ್ಲ ಮಲ್ಲಿಗೆ’ಯ ಕ್ಲೈಮಾಕ್ಸ್ ಸನ್ನಿವೇಶದಲ್ಲಿ ಕಣ್ಣಂಚಲ್ಲಿ ನೋವಿನ ಕಂಬನಿಯನ್ನು ತುಂಬಿಕೊಂಡು, ಕೈಯಲ್ಲಿ ಮಾತ್ರೆಗಳನ್ನು ಎಣಿಸುತ್ತಾ ಕವನ, ಕಥೆಗಳನ್ನು ಹೇಳುತ್ತಾ. ಒಂದೊಂದಾಗಿ ಮಾತ್ರೆ ನುಂಗುತ್ತಾ, ಮುಖದಲ್ಲಿ ಮಂದಹಾಸದ ನಗು ಬೀರುತ್ತಿದ್ದ ನಟನೆ ಇಂದಿಗೂ ನನ್ನ ಕಣ್ಗಳಲ್ಲಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾ‍ಷಾ ಸಿನಿಮಾಗಳಲ್ಲೂ ಸರಿತ ಅವರ ಹತ್ತಾರು ಪಾತ್ರಗಳು ನೆನಪಿನಲ್ಲುಳಿಯುವಷ್ಟು ಶಕ್ತವಾಗಿವೆ. ನಿರ್ದೇಶಕ ಬಾಲು ಮಹೇಂದ್ರ ಅವರ ‘ಜ್ಯೂಲಿ ಗಣಪತಿ’ (2003) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಸರಿತ ಹೊರತಾಗಿ ಮತ್ತಾರು ನಟಿಸಿದ್ದರೂ ಆ ಪಾತ್ರಕ್ಕೆ ನ್ಯಾಯ ಸಿಗುತ್ತಿರಲಿಲ್ಲವೇನೋ? ನಾಯಕಿಯಾಗಿ ಯಶಸ್ವಿಯಾದ ಅವರು ಆನಂತರವೂ ತಮಗೊಪ್ಪುವ ಪಾತ್ರಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರ ಸಿನಿಮಾಯಾನ ಹೀಗೇ ಜಾರಿಯಲ್ಲಿರಲಿ. ಜನ್ಮದಿನದ ಶುಭಾಶಯಗಳು.

ಈ ಬರಹಗಳನ್ನೂ ಓದಿ