ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹಳೆಯ ನೋಟ! ಕಡೆಯ ಆಟ?

ಪೋಸ್ಟ್ ಶೇರ್ ಮಾಡಿ
ರಘುನಾಥ ಚ.ಹ.,
ಹಿರಿಯ ಪತ್ರಕರ್ತ

ಎರಡು ದಶಕದ ಹಿಂದಿನ ಚಿತ್ರಣವನ್ನು ನೆನಪಿಸಿಕೊಳ್ಳಿ. ಆನಂದರಾವ್ ವೃತ್ತದಿಂದ ಮೈಸೂರು ಬ್ಯಾಂಕ್‍ವರೆಗಿನ ನಡಿಗೆ ಸಹೃದಯರ ಪಾಲಿಗೆ ಅಪೂರ್ವ ಅನುಭೂತಿಯನ್ನು ನೀಡುವ ಸಂಗತಿಯಾಗಿತ್ತು. ಅಡಿಗಡಿಗೆ ಸ್ವಪ್ನಮಂದಿರಗಳು ಎದುರಾಗುತ್ತಿದ್ದವು. ಪ್ರತಿಯೊಂದು ಚಿತ್ರಮಂದಿರವೂ ಚಿತ್ರರಸಿಕರ ಪಾಲಿಗೆ ಅಪೂರ್ವ ಅನುಭವ ನೀಡುವ ತಾಣಗಳಾಗಿದ್ದವು.

ಪ್ರಸಂಗ-1

1960ನೇ ಇಸವಿ. `ಕನ್ನಡ ಚಲನಚಿತ್ರ ಕಲಾವಿದರ ಸಂಘ’ (ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ. ಅಯ್ಯರ್) ನಿರ್ಮಿಸಿದ `ರಣಧೀರ ಕಂಠೀರವ’ ಸಿನಿಮಾ ತೆರೆಕಂಡ ಸಂದರ್ಭ. ದಸರೆ ಹಬ್ಬದ ದಿನಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ (ಮೈಸೂರಿನಲ್ಲಿ ಸಿನಿಮಾ ತೆರೆಕಂಡ ಒಂದು ವಾರದ ನಂತರ ಬೆಂಗಳೂರಿನಲ್ಲಿ ತೆರೆಕಂಡರೂ) ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಗಲಿಲ್ಲ. ಆಗ, `ವಿಕ್ರಮ್ ಪಿಕ್ಚರ್ಸ್’ ಸಂಸ್ಥೆಯವರು `ಹಿಮಾಲಯ’ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದ ಹಿಂದಿಯ ಚಿತ್ರವೊಂದನ್ನು ತಾವೇ ಖರೀದಿಸಿ, ಅದರ ಬದಲಿಗೆ `ರಣಧೀರ ಕಂಠೀರವ’ ಚಿತ್ರವನ್ನು ಅಲ್ಲಿ ತೆರೆಕಾಣಿಸಿದರು. ಆದರೆ, `ರಣಧೀರ ಕಂಠೀರವ’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೇನೂ ಉತ್ತಮವಾಗಿರಲಿಲ್ಲ. ಆಗ, ಕನ್ನಡ ಚಳವಳಿಗಾಗರ ವಾಟಾಳ್ ನಾಗರಾಜ್, ಕೆಂಪೇಗೌಡ ರಸ್ತೆಯಲ್ಲಿ ಪರಭಾಷಾ ಚಿತ್ರಮಂದಿರಗಳ ಎದುರು ನಿಂತು, `ಹಿಮಾಲಯದಲ್ಲಿನ ಕನ್ನಡ ಸಿನಿಮಾ ಚೆನ್ನಾಗಿದೆ. ಅಲ್ಲಿಗೆ ಹೋಗಿ’ ಎಂದು ಪ್ರೇಕ್ಷಕರ ಮನವೊಲಿಸಲು ಪ್ರಯತ್ನಿಸುತ್ತಿದ್ದರಂತೆ.

ಪ್ರಸಂಗ-2

1964ನೇ ಇಸವಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಗಳು ಪ್ರಕಟಗೊಂಡ ಸಂದರ್ಭ. `ನಾಂದಿ’ ಚಿತ್ರಕ್ಕೆ ಪ್ರಶಸ್ತಿ ದೊರೆಯದೆ ಹೋದುದನ್ನು ಪ್ರತಿಭಟಿಸಿ ಕನ್ನಡ ಚಿತ್ರರಸಿಕರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದರು. ಹೀಗೆ ಚಿತ್ರವೊಂದಕ್ಕೆ ಪ್ರಶಸ್ತಿ ದೊರೆಯದೆ ಹೋದ ಕಾರಣಕ್ಕಾಗಿ, ಭಾರತೀಯ ಸಿನಿಮಾ ಇತಿಹಾಸದಲ್ಲಿ ಪ್ರೇಕ್ಷಕರು ಸ್ವಯಂಪ್ರೇರಣೆಯಿಂದ ಪ್ರತಿಭಟನೆ ನಡೆಸಿದ ಮೊದಲ ಉದಾಹರಣೆ ಇದು.

ಈ ಎರಡು ಘಟನೆಗಳು ಕನ್ನಡ ಚಿತ್ರರಂಗದೊಂದಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಸೂಚಿಸುವಂತಿವೆ. ಕನ್ನಡ ಸಿನಿಮಾ ಹಾಗೂ ಕನ್ನಡ ಪ್ರೇಕ್ಷಕರ ನಡುವಣ ಅನನ್ಯ ಸಂಬಂಧಕ್ಕೂ ಈ ಘಟನೆಗಳು ಉದಾಹರಣೆಯಾಗಿವೆ. `ಹಿಮಾಲಯ’ ಚಿತ್ರಮಂದಿರದಲ್ಲಿ `ರಣಧೀರ ಕಂಠೀರವ’ ಚಿತ್ರವನ್ನು ಪಟ್ಟುಹಿಡಿದು ತೆರೆಕಾಣಿಸಿದ ಘಟನೆ, ಕೆಂಪೇಗೌಡ ರಸ್ತೆಯಲ್ಲಿ ಕನ್ನಡ ಸಿನಿಮಾಗಳ ಪ್ರಾಬಲ್ಯಕ್ಕೆ ಒತ್ತು ನೀಡಿತು. ಅಷ್ಟುಮಾತ್ರವಲ್ಲ, ಆಗ ಕನ್ನಡ ಚಿತ್ರರಂಗವನ್ನು ಬಾಧಿಸುತ್ತಿದ್ದ ಡಬ್ಬಿಂಗ್ ಸಮಸ್ಯೆಗೆ ವಿರೋಧದ ಧ್ವನಿ ರೂಪುಗೊಳ್ಳಲು ಈ ಪ್ರಸಂಗ ಪ್ರೇರಣೆಯಾಯಿತು. ಬೆಂಗಳೂರಿನಲ್ಲಿ ಆಗಷ್ಟೇ ರೂಪುಗೊಳ್ಳುತ್ತಿದ್ದ ಕನ್ನಡ ಚಳವಳಿಯೊಂದಿಗೆ ಚಿತ್ರರಂಗ ತಳಕು ಹಾಕಿಕೊಳ್ಳಲು ಕೂಡ ಈ ಪ್ರಸಂಗ ಒಂದು ನೆಪವಾಯಿತು. ಈ ಚಟುವಟಿಕೆಗಳ ಮುಂದುವರಿದ ಭಾಗವಾಗಿ – 1963ರಲ್ಲಿ `ಕನ್ನಡ ಚಲನಚಿತ್ರ ಅಭಿಮಾನಿಗಳ ಸಂಘ’ ಆರಂಭವಾದುದನ್ನು ಹಾಗೂ `ರಾಜ್‍ಕುಮಾರ್ ಅವರನ್ನು ಕನ್ನಡದ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಿ’ ಎಂದು ಅ.ನ. ಕೃಷ್ಣರಾಯರು ನೀಡಿದ ಕರೆಯನ್ನು ಗುರ್ತಿಸಬಹುದು.

ಬೆಂಗಳೂರಿನ ಗಾಂಧಿನಗರ ಚಲನಚಿತ್ರಗಳ ವಿತರಣೆ, ನಿರ್ಮಾಣ, ಪ್ರದರ್ಶನ ಚಟುವಟಿಕೆಗಳ ಕೇಂದ್ರಸ್ಥಾನ. ಹೀಗೆ ಸಿನಿಮಾಕ್ಕೆ ಸಂಬಂಧಿಸಿದ ಬಹುತೇಕ ಚಟುವಟಿಕೆಗಳು ಒಂದೇ ಸ್ಥಳದಲ್ಲಿ ಕೇಂದ್ರೀಕತ ಆದ ಉದಾಹರಣೆಗಳು ಭಾರತದಲ್ಲಿ ಅಪರೂಪ. ಗಾಂಧಿನಗರಕ್ಕೆ ಹೊಂದಿಕೊಂಡಂತೆ ಇರುವ ಚಿತ್ರಮಂದಿರಗಳು, ಕನ್ನಡ ಸಿನಿಮಾಗಳ ಸವಿಸ್ವಪ್ನಗಳನ್ನು ಚಿತ್ರರಸಿಕರಿಗೆ ತಲುಪಿಸುವ ರಾಯಭಾರಿಗಳು.

ಎರಡು ದಶಕದ ಹಿಂದಿನ ಚಿತ್ರಣವನ್ನು ನೆನಪಿಸಿಕೊಳ್ಳಿ. ಆನಂದರಾವ್ ವೃತ್ತದಿಂದ ಮೈಸೂರು ಬ್ಯಾಂಕ್‍ವರೆಗಿನ ನಡಿಗೆ ಸಹೃದಯರ ಪಾಲಿಗೆ ಅಪೂರ್ವ ಅನುಭೂತಿಯನ್ನು ನೀಡುವ ಸಂಗತಿಯಾಗಿತ್ತು. `ಮೂವಿಲ್ಯಾಂಡ್’, `ಕಪಾಲಿ’, `ಅಪರ್ಣ’, `ತ್ರಿವೇಣಿ’, `ಸಂಗಮ್’, `ಹಿಮಾಲಯ’, `ತ್ರಿಭುವನ್’, `ಕೈಲಾಷ್’, `ಮೆಜೆಸ್ಟಿಕ್’, `ಸಂತೋಷ್’, `ನರ್ತಕಿ’, `ಸಪ್ನಾ’, `ಕಲ್ಪನಾ’, `ಕೆಂಪೇಗೌಡ’, `ಅಭಿನಯ್’, `ಸಾಗರ್’, `ಸ್ಟೇಟ್ಸ್’, `ಮೇನಕಾ’ – ಹೀಗೆ, ಅಡಿಗಡಿಗೆ ಸ್ವಪ್ನಮಂದಿರಗಳು ಎದುರಾಗುತ್ತಿದ್ದವು. ಪ್ರತಿಯೊಂದು ಚಿತ್ರಮಂದಿರವೂ ಚಿತ್ರರಸಿಕರ ಪಾಲಿಗೆ ಅಪೂರ್ವ ಅನುಭವ ನೀಡುವ ತಾಣಗಳಾಗಿದ್ದವು. ನಾಡಿನ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವವರಿಗೆ, ಕೆಂಪೇಗೌಡ ರಸ್ತೆಯಲ್ಲಿ ಒಂದು ಸಿನಿಮಾ ನೋಡದೆ ಹೋದರೆ ಬೆಂಗಳೂರು ಭೇಟಿ ಅಪೂರ್ಣ ಎನ್ನುವ ಭಾವನೆಯಿತ್ತು.

`ನರ್ತಕಿ’, `ಸಂತೋಷ್’, `ಕಪಾಲಿ’ – ಇವುಗಳೆಲ್ಲ ಗಾಂಧಿನಗರದ ಪ್ರತಿಷ್ಠಿತ ಚಿತ್ರಮಂದಿರಗಳು. ರಾಜಕುಮಾರ್ ಸಿನಿಮಾಗಳು ತೆರೆಕಾಣುವ ಸಮಯದಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಸರತಿಯಲ್ಲಿ ನಿಂತು ಟಿಕೆಟ್ ಪಡೆಯುವವರಿದ್ದರು. ಪೊಲೀಸರ ಲಾಠಿ ಪ್ರಹಾರ ನಡೆಯದೆ ರಾಜ್ ಸಿನಿಮಾ ತೆರೆಕಾಣುವಂತೆಯೇ ಇರಲಿಲ್ಲ. ಆಗ ಸಿನಿಮಾ ನೋಡುವುದಷ್ಟೇ ಸಂಭ್ರಮವಾಗಿರಲಿಲ್ಲ. ಸಿನಿಮಾಕ್ಕೆ ಬರುವವರನ್ನು ನೋಡುವುದೂ ಒಂದು ವಿಶೇಷ ಅನುಭವವಾಗಿತ್ತು. ನೆಚ್ಚಿನ ತಾರೆಗಳ ಸಿನಿಮಾಗಳು ತೆರೆಕಂಡಾಗ ಥಿಯೇಟರ್‍ಗಳ ಆವರಣ ಅಭಿಮಾನಿಗಳು ಕಟ್ಟುವ `ನಕ್ಷತ್ರ’ಗಳಿಂದ ತುಂಬಿಹೋಗುತ್ತಿತ್ತು. ನರ್ತಕಿ ಚಿತ್ರಮಂದಿರದಲ್ಲಿ ರಾಜಕುಮಾರರ ಕೊನೆಯ ಚಿತ್ರಗಳಾದ `ಜೀವನಚೈತ್ರ’, `ಆಕಸ್ಮಿಕ’ ತೆರೆಕಂಡಾಗ ಕೆಂಪೇಗೌಡ ವೃತ್ತದಲ್ಲಿ ಚಿತ್ರರಸಿಕರ ಸುನಾಮಿಯೇ ಕಾಣಿಸಿಕೊಂಡಿತ್ತು.

ವಿಷ್ಣುವರ್ಧನ್‍ರ `ಮುತ್ತಿನಹಾರ’ ತೆರೆಕಂಡಾಗ ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡು ಬಂದ ನೂರಾರು ಗುಂಡಣ್ಣಂದಿರು ಸಂತೋಷ್ ಚಿತ್ರಮಂದಿರ ಸಮುಚ್ಚಯದಲ್ಲಿ ನೆರೆದಿದ್ದರು. ಕೆಂಪೇಗೌಡ ವೃತ್ತದಲ್ಲಿನ ಆಕಾಶಮಾರ್ಗದ ಸೇತುವೆಯ ಕೆಳಗಿನ ಇರುಕಿನಲ್ಲಿ ಮುದುಕಿಯೊಬ್ಬಳು ಸಿನಿಮಾ ಹಾಡುಗಳ ಪುಸ್ತಕಗಳ ಜೊತೆಗೆ, `ಚಕೋರಿ, `ರತಿವಿಜ್ಞಾನ’ಗಳನ್ನು ಗುಡ್ಡೆ ಹಾಕಿಕೊಂಡು, `ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ’ ಎಂದು ಸವಾಲು ಎಸೆಯುವಂತೆ ನಿಂತಿರುತ್ತಿದ್ದಳು. ಚಿತ್ರರಸಿಕರ ನೆನಪುಗಳಲ್ಲಿರುವ ಇಂಥ ಸಾವಿರ ಸವಿಗಳಿಗೆಗಳನ್ನು ದಾಖಲಿಸುತ್ತಾ ಹೋದರೆ, ಅದು ಕನ್ನಡ ಚಿತ್ರರಂಗದ `ಜನಸಾಮಾನ್ಯರು ರೂಪಿಸಿದ ಇತಿಹಾಸ’ವಾಗಿ ಗಮನಸೆಳೆಯುತ್ತದೆ.

ಕನ್ನಡ ಚಿತ್ರಗಳ ಮಾತು ಬಿಡಿ, ಪೋಲಿ ಸಿನಿಮಾಗಳನ್ನು ನೋಡಲಿಕ್ಕೆಂದು `ಸಂಗಮ್’ ಥಿಯೇಟರ್‍ಗೆ ಹೋದವರು, ಜಗತ್ತಿನ ಅತ್ಯುತ್ತಮ ಇಂಗ್ಲಿಷ್ ಸಿನಿಮಾಗಳನ್ನು ನೋಡಿ, ಅಲ್ಲಿ ಯಾವ ಪೋಲಿತನವನ್ನೂ ಕಾಣದೆ ತಬ್ಬಿಬ್ಬಾಗುತ್ತಿದ್ದರು. ಅಂಥವರನ್ನು ಟ್ರೇಲರ್‍ಗಳು ಬೆಚ್ಚಗೆ ಮಾಡುತ್ತಿದ್ದವು.

ಬೆಂಗಳೂರಿನಲ್ಲಿ ಸಿನಿಮಾ ಪ್ರದರ್ಶನ ಶುರುವಾದುದು ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ. ಸಮುದಾಯ ಭವನಗಳಲ್ಲಿ ಪ್ರೊಜೆಕ್ಟರ್‍ಗಳನ್ನು ತಂದು ಮೂಕಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಬೆಂಗಳೂರಿನ ಮೊದಲ ಚಿತ್ರಮಂದಿರ ಎಂದು ಗುರ್ತಿಸಲಾಗುವ `ಪ್ಯಾರಾಮೌಂಟ್’ ನಿರ್ಮಾಣಗೊಂಡಿದ್ದು 1905ಲ್ಲಿ. ಕಲಾಸಿಪಾಳ್ಯದಲ್ಲಿದ್ದ ಜನೋಪಕಾರಿ ದೊಡ್ಡಣ್ಣ ಶೆಟ್ಟರ `ಶ್ರೀ ಲಕ್ಷ್ಮೀನರಸಿಂಹ ಧರ್ಮಸಂಸ್ಥೆ’ (ದೊಡ್ಡಣ್ಣ ಹಾಲ್) ಆವರಣದಲ್ಲಿ ಇದ್ದ ಈ ಚಿತ್ರಮಂದಿರವನ್ನು, ಇಂಗ್ಲಿಷರ ಪ್ರಭಾವದಿಂದ ಪ್ಯಾರಾಮೌಂಟ್ ಎಂದು ಕರೆದರೂ, ಜನ ಇದನ್ನು `ದೊಡ್ಡಣ್ಣ ಹಾಲ್’ ಎಂದೇ ಕರೆದರು. ಶ್ರೀನಿವಾಸುಲು ನಾಯ್ಡು, ರಂಗಸ್ವಾಮಿ ನಾಯ್ಡು ಮತ್ತು ಸಾಹುಕಾರ್ ಮಲ್ಲಪ್ಪನವರ ಮಗ ರುದ್ರಪ್ಪ – ಮೂವರೂ ಸೇರಿ ಈ ಚಿತ್ರಮಂದಿರ ಆರಂಭಿಸಿದರು. ಕರ್ನಾಟಕದಲ್ಲಿ ಚಿತ್ರಮಂದಿರಗಳ ಶಕೆ ಆರಂಭಿಸಿದ ಈ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ವಾಕ್ಚಿತ್ರ `ಸತಿ ಸುಲೋಚನಾ’ (1934) ತೆರೆಕಂಡಿದ್ದು ವಿಶೇಷ. ಹಳ್ಳಿಗಳಿಂದ ಬಂದು ವಾಪಸ್ಸಾಗಲು ಸಾಧ್ಯವಾಗದವರಿಗೆ ದೊಡ್ಡಣ್ಣ ಛತ್ರದಲ್ಲಿ ಊಟ, ವಸತಿಯ ಏರ್ಪಾಡು ನಡೆಯುತ್ತಿತ್ತು. 1974ರಲ್ಲಿ `ಪ್ಯಾರಾಮೌಂಟ್’ ನೆಲಸಮಗೊಂಡಿತು. ಆ ಸ್ಥಳದಲ್ಲೀಗ `ಪ್ರದೀಪ್’, `ಪರಿಮಳ’ ಹೆಸರಿನ ಅವಳಿ ಚಿತ್ರಮಂದಿರಗಳು ಸಿನಿಮಾ ಪ್ರದರ್ಶಿಸುತ್ತಿವೆ.

`ಸತಿ ಸುಲೋಚನಾ’ದ ಬೆನ್ನಿಗೆ, 1934ರಲ್ಲೇ ತೆರೆಕಂಡ `ಭಕ್ತ ಧ್ರುವ’ ಬೆಂಗಳೂರಿನ ಕೆಂಪೇಗೌಡ ವೃತ್ತದ ಸಮೀಪದ `ಸೆಲೆಕ್ಟ್’ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತು. ನಂತರದ ವರ್ಷಗಳಲ್ಲಿ `ಸೆಲೆಕ್ಟ್’ ಚಿತ್ರಮಂದಿರವನ್ನು ಕೆಡವಿ `ಗೀತಾ’ ಹೆಸರಿನ ಚಿತ್ರಮಂದಿರ ಕಟ್ಟಲಾಯಿತು. `ಗೀತಾ’ ಕೂಡ ಈಗ ಇತಿಹಾಸದ ಪುಟಗಳಲ್ಲಷ್ಟೇ ಇದೆ.

ಸ್ವಾತಂತ್ರ್ಯಪೂರ್ವ ಸಂದರ್ಭದಲ್ಲಿ, 1944-45ರ ಸುಮಾರಿನಲ್ಲಿ, ಅನೇಕ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ನಿರ್ಮಾಣಗೊಂಡವು. ಇದೇ ಸಂದರ್ಭದಲ್ಲಿ ಹಳೇ ಒಕ್ಕಲಿಗರ ಸಂಘದ ಆವರಣದಲ್ಲಿ `ಶಾರದಾ’ ಚಿತ್ರಮಂದಿರ ತಲೆಯೆತ್ತಿತು. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮಾರ್ನಿಂಗ್ ಶೋಗಳು (ಬೆಳಗಿನ ಪ್ರದರ್ಶನಗಳು) ನಡೆದುದು ಇಲ್ಲಿ. ಆನಂತರ `ಪ್ಯಾರಾಮೌಂಟ್’ ಕೂಡ ಬೆಳಗಿನ ಪ್ರದರ್ಶನಗಳನ್ನು ಆರಂಭಿಸಿತು. ಶುಕ್ರವಾರ, ಶನಿವಾರ, ಭಾನುವಾರ, ಸರ್ಕಾರಿ ರಜಾದಿನಗಳು ಹಾಗೂ ಅಮಾವಾಸ್ಯೆಗಳಂದು ಬೆಳಗಿನ ಪ್ರದರ್ಶನಗಳು ನಡೆಯುತ್ತಿದ್ದವು. ನಂತರದ ವರ್ಷಗಳಲ್ಲಿ ಮಧ್ಯಾಹ್ನದ ಪ್ರದರ್ಶನಗಳು ಆರಂಭವಾದವು. ಆಗ `ಸಾಗರ್’ ಚಿತ್ರಮಂದಿರದಲ್ಲಿ `ಬಾಲ ನಾಗಮ್ಮ’ ಹಾಗೂ ಮೂವಿಲ್ಯಾಂಡ್ ಥಿಯೇಟರ್‍ನಲ್ಲಿ `ಭಕ್ತ ಪೋತ’ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಅವುಗಳ ನಡುವಣ ಪೈಪೋಟಿ ಮಧ್ಯಾಹ್ನದ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿತು.

ಕೆಂಪೇಗೌಡ ರಸ್ತೆ – ಗಾಂಧಿನಗರ ಪರಿಸರದ ಮತ್ತೊಂದು ಚಾರಿತ್ರಿಕ ಚಿತ್ರಮಂದಿರ `ಮೂವಿಲ್ಯಾಂಡ್’. ಸುಬೇದಾರ್ ಛತ್ರಂ ರಸ್ತೆಯಲ್ಲಿ ಗುಬ್ಬಿ ವೀರಣ್ಣನವರು ನಿರ್ಮಿಸಿದ್ದ `ಶಿವಾನಂದ’ ಚಿತ್ರಮಂದಿರದ ಜಾಗದಲ್ಲಿ, `ಮೂವೀಲ್ಯಾಂಡ್’ ಕಾಣಿಸಿಕೊಂಡಿತು. 1945-46ರಲ್ಲಿ ಕ್ಯೂ ಪದ್ಧತಿಯನ್ನು ಮೊದಲ ಬಾರಿಗೆ ಜಾರಿಗೆ ತಂದ ಅಗ್ಗಳಿಕೆ `ಮೂವಿಲ್ಯಾಂಡ್’ ಚಿತ್ರಮಂದಿರದ್ದು. ಸರತಿ ಸಾಲಿಗಳಾಗಿ ಮರದ ಬೊಂಬುಗಳು ಕಟ್ಟಲಾಗಿತ್ತಂತೆ.

ಕೆಂಪೇಗೌಡ ರಸ್ತೆಗೆ ಹೊಂದಿಕೊಂಡ ಜೆ.ಸಿ. ರಸ್ತೆಯಲ್ಲಿದ್ದ `ಭಾರತ್’ ಚಿತ್ರಮಂದಿರ ಕನ್ನಡ ಸಿನಿಮಾ ಇತಿಹಾಸದಲ್ಲಿ ಮರೆಯಲಾಗದ ಹೆಸರು. 1960ರಲ್ಲಿ ಈ ಚಿತ್ರಮಂದಿರವನ್ನು ತಮ್ಮ ವಶಕ್ಕೆ ತೆಗೆದುಕೊಂಡು ನವೀಕರಿಸಿದ ಷರೀಫ್ ಸೋದರರು, ಕನ್ನಡ ಚಿತ್ರಗಳಿಗೆ `ಭಾರತ್’ ಚಿತ್ರಮಂದಿರವನ್ನು ಮೀಸಲಿಟ್ಟರು. `ಹಿಮಾಲಯ’ ಚಿತ್ರಮಂದಿರದ ಜೊತೆಗೆ `ಭಾರತ್’ನಲ್ಲೂ `ರಣಧೀರ ಕಂಠೀರವ’ ತೆರೆಕಂಡಿತ್ತು. ಡಬ್ಬಿಂಗ್ ವಿರೋಧಿ ಚಟುವಟಿಕೆಗಳಿಗೆ `ಭಾರತ್’ ಚಿತ್ರಮಂದಿರ ಕೇಂದ್ರಸ್ಥಾನವಾಗಿತ್ತು.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನ, ರಾಜಕುಮಾರ್ ಅಭಿನಯದ `ಸತ್ಯ ಹರಿಶ್ಚಂದ್ರ’ ಚಿತ್ರ `ಭಾರತ್’ ಚಿತ್ರಮಂದಿರದಲ್ಲಿ ಮೊದಲ ಬಾರಿಗೆ ನೂರು ದಿನಗಳ ಪ್ರದರ್ಶನ ಕಂಡಿತು. ಕನ್ನಡ ಚಿತ್ರೋದ್ಯಮದಲ್ಲಿ ಶತದಿನೋತ್ಸವ ಸಂಭ್ರಮದ ಕಾರ್ಯಕ್ರಮಗಳಿಗೆ `ಸತ್ಯ ಹರಿಶ್ಚಂದ್ರ’ ಹಾಗೂ `ಭಾರತ್’ ಚಿತ್ರಮಂದಿರ ಮುನ್ನುಡಿ ಬರೆದವು. `ಸ್ಕೂಲ್ ಮಾಸ್ಟರ್’ ಹಾಗೂ `ಮಣ್ಣಿನ ಮಗ’ ಭಾರತ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಮತ್ತೆರಡು ಪ್ರಮುಖ ಸಿನಿಮಾಗಳು.

1944ರಲ್ಲಿ ಕೆಂಪೇಗೌಡ ರಸ್ತೆಯಲ್ಲಿ `ಸ್ಟೇಟ್ಸ್’ ಚಿತ್ರಮಂದಿರದ ನಿರ್ಮಾಣ ಆರಂಭವಾಯಿತು. ಆಧಾರ ಸ್ತಂಭಗಳಿಲ್ಲದೆ ನಿರ್ಮಿಸಿದ್ದುದು ಈ ಚಿತ್ರಮಂದಿರದ ವಿಶೇಷ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಮಿಲಿಟರಿ ಗೋಡೌನ್ ಆಗಿಯೂ ಬಳಕೆಯಾದ `ಸ್ಟೇಟ್ಸ್’ 1946ರಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು. `ಬಂಗಾರದ ಮನುಷ್ಯ’ ಚಿತ್ರದ ಎರಡು ವರ್ಷಗಳ ಕಾಲ ದಾಖಲೆಯ ಪ್ರದರ್ಶನ ನಡೆದದ್ದು ಈ ಚಿತ್ರಮಂದಿರದ್ದು. ಕನ್ನಡ ಚಿತ್ರರಂಗದ ಮತ್ತೊಂದು ದಾಖಲೆ ಪ್ರದರ್ಶನದ `ನಂಜುಂಡಿ ಕಲ್ಯಾಣ’ ತೆರೆಕಂಡಿದ್ದೂ ಇಲ್ಲಿಯೇ. ಪ್ರಸ್ತುತ `ಭೂಮಿಕಾ’ ಹೆಸರಿನಲ್ಲಿ `ಸ್ಟೇಟ್ಸ್’ ನವೀಕರಣಗೊಂಡಿದೆ.

ಕೆಂಪೇಗೌಡ ರಸ್ತೆಯ ಒಂದು ತುದಿಯಲ್ಲಿರುವ, ಈಗಲೂ ಕ್ರಿಯಾಶೀಲವಾಗಿರುವ `ಮೇನಕಾ’ ಚಿತ್ರಮಂದಿರದ ಇತಿಹಾಸ ಕೂಡ ವರ್ಣರಂಜಿತವಾಗಿದೆ. 1949ರಲ್ಲಿ ಆಟ ಆರಂಭಿಸಿದ `ಜೈ ಹಿಂದ್’ ಚಿತ್ರಮಂದಿರ `ಮೇನಕಾ’ ಚಿತ್ರಮಂದಿರದ ಪೂರ್ವಸೂರಿ. ಮರದಲ್ಲಿ ನಿರ್ಮಾಣವಾಗಿದ್ದ `ಜೈಹಿಂದ್’ ಚಿತ್ರಮಂದಿರವನ್ನು ಪ್ರತಿ ವರ್ಷ ನವೀಕರಿಸಬೇಕಾಗಿತ್ತು. ಪದೇ ಪದೇ ನವೀಕರಣದ ಉಸಾಬರಿಯೇ ಬೇಡವೆಂದು, 1967ರಲ್ಲಿ ಎನ್.ಕೆ. ಸುಬ್ಬಯ್ಯ ಶೆಟ್ಟಿ ಎನ್ನುವವರು `ಜೈಹಿಂದ್’ ಜಾಗದಲ್ಲಿ `ಮೇನಕಾ’ ಚಿತ್ರಮಂದಿರ ನಿರ್ಮಿಸಿದರು. 1967ರ ಮಾರ್ಚ್ 17ರಂದು `ನಕ್ಕರದೇ ಸ್ವರ್ಗ’ ಸಿನಿಮಾ ಪ್ರದರ್ಶನದ ಮೂಲಕ ಮೇನಕಾದಲ್ಲಿ ಚಿತ್ರ ಪ್ರದರ್ಶನಗಳು ಆರಂಭವಾದವು. `ನಾ ನಿನ್ನ ಮರೆಯಲಾರೆ’, `ಬೂತಯ್ಯನ ಮಗ ಅಯ್ಯು’ ಮೇನಕಾದಲ್ಲಿ ಸಿಲ್ವರ್ ಜ್ಯುಬಿಲಿ ಕಂಡ ಪ್ರಸಿದ್ಧ ಚಿತ್ರಗಳು. ಶಿವರಾಜ್‍ಕುಮಾರ್ ಅವರ ಆರಂಭಿಕ ಐದು ಚಿತ್ರಗಳು ತೆರೆಕಂಡಿದ್ದು ಈ ಥಿಯೇಟರ್‍ನಲ್ಲೇ.

1973ರ ಯುಗಾದಿ ಹಬ್ಬದಂದು `ನರ್ತಕಿ’ ಹಾಗೂ `ಸಂತೋಷ್’ ಚಿತ್ರಮಂದಿರಗಳು ಕೆಂಪೇಗೌಡ ರಸ್ತೆಯಲ್ಲಿ ಆರಂಭವಾದವು. ಇದೇ ದಿನ ಶಿವಾಜಿನಗರದಲ್ಲಿ `ಸಂಗೀತಾ’ ಚಿತ್ರಮಂದಿರದ ಆರಂಭೋತ್ಸವವೂ ನಡೆಯಿತು. ನರ್ತಕಿ ಚಿತ್ರಮಂದಿರದ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಖರ್ಚಾಗಿದ್ದರೆ, ಸಂತೋಷ್ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ವೆಚ್ಚ ತಗುಲಿತ್ತು. ನಂತರ `ನರ್ತಕಿ’ ಆವರಣದಲ್ಲೇ `ಸಪ್ನಾ’ ಮಿನಿ ಚಿತ್ರಮಂದಿರ ಶುರುವಾಯಿತು. ಇದು ಬೆಂಗಳೂರಿನ ಮೊದಲ ಮಿನಿ ಚಿತ್ರಮಂದಿರ. `ಸಂತೋಷ್’ನಲ್ಲಿ `ಸಹ ಧರ್ಮಿಣಿ’, `ನರ್ತಕಿ’ಯಲ್ಲಿ `ಬಿಡುಗಡೆ’ ಹಾಗೂ `ಸಪ್ನಾ’ದಲ್ಲಿ `ಯಾವ ಜನ್ಮದ ಮೈತ್ರಿ’ ಮೊದಲು ಪ್ರದರ್ಶನ ಕಂಡ ಚಿತ್ರಗಳು.

`ಸಂತೋಷ್’ ಹಾಗೂ `ನರ್ತಕಿ’ ಚಿತ್ರಮಂದಿರಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು – “ಕೆಂಪೇಗೌಡ ರಸ್ತೆಯಲ್ಲಿ ಹೆಚ್ಚು ಚಿತ್ರಮಂದಿರಗಳಿದ್ದು, ಇನ್ನು ಈ ಪ್ರದೇಶದಲ್ಲಿ ಹೊಸ ಚಿತ್ರಮಂದಿರಗಳ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ” ಎಂದು ಹೇಳಿದ್ದರು. ವಿಪರ್ಯಾಸ ನೋಡಿ: ಅರಸು ಅವರ ಮಾತೇ ದೃಷ್ಟಿಯಾಯಿತು ಎನ್ನುವಂತೆ, ಕೆಂಪೇಗೌಡ ರಸ್ತೆಯಲ್ಲಿನ ಅನೇಕ ಚಿತ್ರಮಂದಿರಗಳು ನೆಲಸಮಗೊಂಡಿವೆ.

`ಸಂತೋಷ್’ ಹಾಗೂ `ನರ್ತಕಿ’ ಅಚ್ಚುಕಟ್ಟುತನಕ್ಕೆ ಪ್ರಸಿದ್ಧವಾದ ಚಿತ್ರಮಂದಿರಗಳು. ಈ ಚಿತ್ರಮಂದಿರಗಳ ಸಾಲಿನಲ್ಲೇ ಗುರ್ತಿಸಿಕೊಳ್ಳುವ ಮತ್ತೊಂದು ಪ್ರತಿಷ್ಠಿತ ಚಿತ್ರಮಂದಿರ `ಅಲಂಕಾರ್’. 1957ರ ಜುಲೈನಲ್ಲಿ ಆರಂಭವಾದ ಈ ಚಿತ್ರಮಂದಿರ ಒಪ್ಪ ಓರಣ, ಆರಾಮ ಆಸನಗಳಿಂದ ದಕ್ಷಿಣ ಭಾರತದಲ್ಲೇ ಪ್ರಖ್ಯಾತವಾಗಿತ್ತು. ತಾಂತ್ರಿಕವಾಗಿ ಉತ್ಕೃಷ್ಟ ಸವಲತ್ತುಗಳನ್ನು ಹೊಂದಿತ್ತು. ಈಗ ಆ ಸ್ಥಳದಲ್ಲಿ `ಅಲಂಕಾರ್ ಪರ್ಲ್ ಪ್ಲಾಜ’ ಎನ್ನುವ ವಾಣಿಜ್ಯ ಸಂಕೀರ್ಣ ಜಗಮಗಿಸುತ್ತಿದೆ.

1965ರಲ್ಲಿ ಆರಂಭವಾದ `ತ್ರಿವೇಣಿ’ ಚಿತ್ರಮಂದಿರಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ `ಪ್ಯಾರಲಾಕ್ಸ್’ ಸ್ಕ್ರೀನ್ ಅಳವಡಿಸಿಕೊಂಡ ಅಗ್ಗಳಿಕೆಯಿದೆ. ಅದರ ಪಕ್ಕದಲ್ಲೇ ಇದ್ದ `ಅಪರ್ಣ’ ಈಗ `ಅನುಪಮ’ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. 1968ರ ಜ. 22ರಂದು ಆರಂಭವಾದ `ಕಪಾಲಿ’ ಚಿತ್ರಮಂದಿರ ಕರ್ನಾಟಕದ ಅಪೂರ್ವ ಚಿತ್ರಮಂದಿರಗಳಲ್ಲೊಂದು. ಆಗ ಅದರ ನಿರ್ಮಾಣಕ್ಕೆ ತಗುಲಿದ್ದ ವೆಚ್ಚ 32 ಲಕ್ಷ ರೂಪಾಯಿ. ಭಾರತದ ಪ್ರಪ್ರಥಮ `ಸಿನೆರಮಾ ಚಿತ್ರಮಂದಿರ’ ಎನ್ನುವುದು ಇದರ ವಿಶೇಷ. ಏಷ್ಯಾದಲ್ಲೇ ಅತಿ ದೊಡ್ಡ ಚಿತ್ರಮಂದಿರ ಎನ್ನುವ ಅಗ್ಗಳಿಕೆ ಹೊಂದಿದ್ದ `ಕಪಾಲಿ’, ವಿಶ್ವದ ಪ್ರಮುಖ 59 ಥಿಯೇಟರ್‍ಗಳಲ್ಲಿ ಮೂರನೇ ಸ್ಥಾನ ಪಡೆದಿತ್ತು. 83 ಅಡಿ ಅಗಲ, 33 ಅಡಿ ಎತ್ತರದ ಭವ್ಯ ಪರದೆ, ನಾಲ್ಕು ಪ್ರೊಜೆಕ್ಟರ್‍ಗಳಿದ್ದವು. 1983ರಲ್ಲಿ ಗಂಗಾರಾಂ ಕಟ್ಟಡ ಕುಸಿದಾಗ `ಕಪಾಲಿ’ ಚಿತ್ರಮಂದಿರದ ಸ್ವಲ್ಪ ಭಾಗ ಹಾನಿಗೊಳಗಾಗಿತ್ತು.

ಆರ್.ಎನ್. ಮಾಂಡ್ರೆ ನಿರ್ಮಾಣದ `ಸಂಗಮ್’ ರಾಜ್ಯದ ಮೊದಲ ಹವಾನಿಯಂತ್ರಿತ ಚಿತ್ರಮಂದಿರ. 1977ರ ಆಗಸ್ಟ್ 17ರಂದು ಉದ್ಘಾಟನೆಗೊಂಡ `ಅಭಿನಯ್’ ದಕ್ಷಿಣ ಭಾರತದಲ್ಲೇ ಚಲಿಸುವ ಮೆಟ್ಟಿಲುಗಳನ್ನೊಳಗೊಂಡ ಮೊದಲ ಚಿತ್ರಮಂದಿರ ಎನ್ನುವ ಅಗ್ಗಳಿಕೆ. `ಸಾಗರ್’, `ತ್ರಿಭುವನ್’, `ಕೈಲಾಷ್’, `ಕೆಂಪೇಗೌಡ’, `ಕಲ್ಪನ’ ಹಾಗೂ `ಮೆಜೆಸ್ಟಿಕ್’ ಕೆಂಪೇಗೌಡ ರಸ್ತೆಯ ಇತರ ಪ್ರಮುಖ ಚಿತ್ರಮಂದಿರಗಳು.

ಕೆಲವು ಊರು-ರಸ್ತೆಗಳು ತಮ್ಮ ಚೌಕಟ್ಟನ್ನು ಮೀರಿ, ಒಂದು ಸಮುದಾಯದ ಅಥವಾ ನಾಡಿನ ಸಾಂಸ್ಕೃತಿಕ ಚಹರೆಗಳಾಗಿ ಮಹತ್ವ ಪಡೆದುಕೊಂಡಿರುತ್ತವೆ. ಅಂಥದೊಂದು ಸಾಂಸ್ಕೃತಿಕ ಮಹತ್ವ, ಬೆಂಗಳೂರಿನ ಕೆಂಪೇಗೌಡ ರಸ್ತೆಗೂ ಇತ್ತು. ಇಂದ್ರಸಭೆಯ ಸುರಾಂಗನೆಯರಂತೆ ಕಂಗೊಳಿಸುತ್ತಿದ್ದ ಚಿತ್ರಮಂದಿರಗಳ ನೆರವಿಯಿಂದಾಗಿ ರಾಜಧಾನಿಯ ಕನಸುಗಳ ಮೊಗಸಾಲೆಯಂತೆ ಕೆಂಪೇಗೌಡ ರಸ್ತೆ ಕಂಗೊಳಿಸುತ್ತಿತ್ತು. ಇಲ್ಲಿನ ಸಾಲು ಸಾಲು ಚಿತ್ರಮಂದಿರಗಳು ಕನ್ನಡಿಗರ ಕನಸು ಮನಸುಗಳನ್ನು ಸಿನಿಮಾ ಸ್ವಪ್ನಗಳಿಂದ ರಂಗುಗೊಳಿಸಿದ್ದು ಈಗ ಇತಿಹಾಸ. ಈ ಹೊತ್ತು, ಆ ರಸ್ತೆಯ ಸ್ವಪ್ನಮಹಲುಗಳು ಒಂದೊಂದಾಗಿ ಇತಿಹಾಸದ ಪುಟಕ್ಕೆ ಸೇರುತ್ತಿವೆ.

ಬೆಂಗಳೂರಿನ ಸಾಂಸ್ಕೃತಿಕ ಚಹರೆ ಮಗ್ಗುಲು ಬದಲಿಸಿದೆ. ಕವಿ ಮನೆಗಳು, ಕಾದಂಬರಿ ಸಾರ್ವಭೌಮನ ಮನೆ, ಅಂಗಡಿ ಮಳಿಗೆಗಳಾಗಿವೆ. ಜನಸಾಮಾನ್ಯರ ಮಾತಿನಲ್ಲಿ ಬಳಕೆಯಾಗುತ್ತಿದ್ದ ಲ್ಯಾಂಡ್‍ಮಾರ್ಕ್‍ಗಳು ಬದಲಾಗಿವೆ. ಈ ಲ್ಯಾಂಡ್‍ಮಾರ್ಕ್‍ಗಳ ಜಾಗದಲ್ಲಿ ಬಿಗ್‍ಬಜಾರ್, ಮಾಲ್-ಮಲ್ಟಿಪ್ಲೆಕ್ಸ್‍ಗಳು ಬಂದು ನಿಂತಿವೆ. ವಾಸ್ತವ ಹೀಗಿರುವಾಗ ಕೆಂಪೇಗೌಡ ರಸ್ತೆ ಬದಲಾಗದೆ ಉಳಿದೀತೆ?

ಆನಂದರಾವ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಈಗ ನಡೆದುನೋಡಿ. ಸುತ್ತಲಿನ ಅಂಗಡಿ ಮುಂಗಟ್ಟುಗಳಲ್ಲಿ ಸಿನಿಮಾಸ್ವಪ್ನಗಳು ನರಳುತ್ತಿರುವ ಅನುಭವವಾಗುತ್ತದೆ. `ಕಪಾಲಿ’, `ತ್ರಿವೇಣಿ’, `ಸಂಗಮ್’, `ಹಿಮಾಲಯ’, `ಮೆಜೆಸ್ಟಿಕ್’, `ಅಲಂಕಾರ್, `ಕಲ್ಪನಾ’, `ಕೆಂಪೇಗೌಡ’, `ಸಾಗರ್’ ಚಿತ್ರಮಂದಿರಗಳಲ್ಲಿ ಸಿನಿಮಾ ಆಟಗಳು ಕೊನೆಗೊಂಡಿವೆ. ಮಿನರ್ವ, ಭಾರತ್, ಶಿವಾಜಿ, ಪ್ರಭಾತ್, ಅಲಂಕಾರ್, ಗೀತಾ, ಸ್ವಸ್ತಿಕ್, ಸೆಂಟ್ರಲ್, ಸಂಜಯ್, ನಾಜ್, ಲಿಬರ್ಟಿ, ನ್ಯೂ ಎಂಪೈರ್, ಬ್ಲೂಮೂನ್, ಬ್ಲೂ ಡೈಮಂಡ್, ಗ್ಲೋಬ್, ಜಯಶ್ರೀ – ಇವೆಲ್ಲ ಚಿತ್ರಮಂದಿರಗಳು ಒಂದೋ ವಾಣಿಜ್ಯಮಳಿಗೆಗಳಾಗಿವೆ ಇಲ್ಲವೇ ಗೋದಾಮುಗಳಾಗಿವೆ.

ಸಿಂಫೋನಿ ಹಾಗೂ ಪೂನಮ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿದ್ದ ಚಿತ್ರಮಂದಿರಗಳು. ‘ಶಂಕರ್‍ನಾಗ್ ಚಿತ್ರಮಂದಿರ’ ಹೆಸರಿನಲ್ಲಿ ಸಿಂಫೋನಿ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಆದರೆ, ‘ಪುಟ್ಟಣ್ಣ ಚಿತ್ರಮಂದಿರ’ ಹೆಸರಿನಲ್ಲಿ ಗುರ್ತಿಸಿಕೊಂಡಿದ್ದ ‘ಪೂನಮ್’ ಈಗ ಇತಿಹಾಸದ ಪುಟ ಸೇರಿದೆ. ‘ಪುಟ್ಟಣ್ಣ ಚಿತ್ರಮಂದಿರ’ವನ್ನು ಉಳಿಸಿಕೊಳ್ಳಲು ವಿಷ್ಣುವರ್ಧನ್, ಅಂಬರೀಶ್ ನೇತೃತ್ವದಲ್ಲಿ ಚಿತ್ರರಸಿಕರ ತಂಡವೊಂದು ನಡೆಸಿದ ಪ್ರಯತ್ನ ಯಶಸ್ವಿಯಾಗಲಿಲ್ಲ. ಪ್ರಸ್ತುತ ಸಿನಿಮಾ ಪ್ರದರ್ಶಿಸುತ್ತಿರುವ ಏಕತೆರೆ ಚಿತ್ರಮಂದಿರಗಳಲ್ಲಿ ಕೂಡ ಉತ್ಸಾಹ ಕಾಣಿಸುತ್ತಿಲ್ಲ. ಅವು ಯಾವುದೋ ರೂಪಾಂತರಕ್ಕೆ ಸಜ್ಜಾಗಿರುವಂತೆ ಕಾಣಿಸುತ್ತವೆ. ಆ ಚಿತ್ರಮಂದಿರಗಳ ಕಾರ್ಮಿಕರ ಕಣ್ಣುಗಳಲ್ಲಿನ ಕನಸುಗಳು ಕ್ಷೀಣಿಸುತ್ತಿವೆ.

ಮತ್ತೊಂದು ಕಡೆ ಬಹುತೆರೆಯ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಹೆಚ್ಚುತ್ತಿವೆ. ಇನ್ನೊಂದು ಕಡೆ – ಹೊಸ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಗಾಂಧಿನಗರದಲ್ಲಿ ಹೊಸ ಕನಸುಗಳನ್ನು ಕಾಣುತ್ತ ಅಲೆಯುತ್ತಿದ್ದಾರೆ. ಪ್ರೇಕ್ಷಕನದು ಅಯೋಮಯ ಸ್ಥಿತಿ. ಹಿರೀಕರು ನಿರ್ಗಮಿಸಿದ ಮಹಾಮನೆಯ ಜಗಲಿಯ ಖಾಲಿತನ `ಸೆಲ್ಫೀ’ ತಲೆಮಾರಿಗೆ ಅರ್ಥವಾಗುವುದು ಕಷ್ಟ. ಈಗ, ಇಂಟರ್ನೆಟ್‍ನಲ್ಲಿ ಸಿನಿಮಾ ಟಿಕೇಟು ಕಾದಿರಿಸುವ, ಮೊದಲ ಆಟದ ಸಂದರ್ಭದಲ್ಲೇ ಮೊಬೈಲ್‍ಗಳ ಮೂಲಕ ಸಿನಿಮಾಗಳ ಹಣೆಬರಹ ನಿರ್ಧರಿಸುವ ದಿನಗಳಿವು.
(ರಘುನಾಥ ಚ.ಹ. ಅವರ ‘ಬೆಳ್ಳಿತೊರೆ’ ಪುಸ್ತಕದಿಂದ ಆಯ್ದ ಬರಹ)

ಈ ಬರಹಗಳನ್ನೂ ಓದಿ