ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬೆಳ್ಳಿಪರದೆ ಮೇಲೆ ತಮ್ಮದೇ ಛಾಪನ್ನೊತ್ತಿದ ನಿರ್ದೇಶಕ ಶಂಕರ್‌ನಾಗ್‌

ಪೋಸ್ಟ್ ಶೇರ್ ಮಾಡಿ
ಮ ಶ್ರೀ ಮುರಳೀಕೃಷ್ಣ

‘ಆಕ್ಸಿಡೆಂಟ್‌’ಚಲನಚಿತ್ರದ ವಸ್ತುವಿನಲ್ಲಿ ರಾಜಕಾರಣ, ಪತ್ರಿಕಾರಂಗ, ಪೊಲೀಸ್ ವ್ಯವಸ್ಥೆ, ಬಡವರ ಅಸಹಾಯಕ ಪರಿಸ್ಥಿತಿ, ಶ್ರೀಮಂತಿಕೆಯ ದೌಲತ್ತಿನಿಂದ ಹಾದಿ ತಪ್ಪಿದ ಮಕ್ಕಳು, ಡ್ರಗ್ಸ್ ಇತ್ಯಾದಿಗಳಿವೆ. ಫುಟ್‍ಪಾತ್‍ನಲ್ಲಿ ಮಲಗಿರುವ ಸೂರಿಲ್ಲದ ನಿರ್ಗತಿಕರ ಮೇಲೆ ವಿದೇಶಿ ಕಾರನ್ನು ಓಡಿಸುವ ಬೆಚ್ಚಿಬೀಳಿಸುವ ದೃಶ್ಯ ನಂತರದ ಕಾಲದ ಸಲ್ಮಾನ್ ಖಾನ್‍ನ ನೈಜ ಜೀವನದಲ್ಲಿ ಜರುಗಿದ ಇಂತಹದ್ದೇ ಘಟನೆಯನ್ನು ನೆನಪಿಗೆ ತರುತ್ತದೆ.

ಶಂಕರ್‌ನಾಗ್‌ ನಿರ್ದೇಶನದ ಎರಡು ಚಲನಚಿತ್ರಗಳ ಮೂಲಕ ಅವರು ನಿರ್ದೇಶನದಲ್ಲಿ ತೋರಿದ ಹೊಸತನ, ಜಾಣ್ಮೆ, ತಾಂತ್ರಿಕ ಕೌಶಲ, ಚಲನಚಿತ್ರರಂಗದ ಬಗೆಗೆ ಅವರಿಗಿದ್ದ ದೃಷ್ಟಿಕೋನ ಮುಂತಾದುವುಗಳ ಕುರಿತು ತೀರ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.  ಅವರ ನಿರ್ದೇಶನದ ಚೊಚ್ಚಲ ಚಲನಚಿತ್ರ- ‘ಮಿಂಚಿನ ಓಟ’.  ವಿಶ್ವದ ಚಲನಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆದರೆ, ದರೋಡೆ/ಡಕಾಯಿತಿ ವಸ್ತುವಿರುವ ಚಲನಚಿತ್ರಗಳು ತೆರೆಕಂಡಿವೆ.  ಕನ್ನಡ ಚಲನಚಿತ್ರರಂಗದಲ್ಲಿ ಇವುಗಳ ಸಂಖ್ಯೆ ತೀರ ಕಡಿಮೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ತಕ್ಷಣ ನೆನಪಿಗೆ ಬರುತ್ತಿರುವುದು 1990ರ ದಶಕದಲ್ಲಿ ತೆರೆಕಂಡ ಸುನಿಲ್‍ಕುಮಾರ್ ದೇಸಾಯಿಯವರ ‘ನಿಷ್ಕರ್ಷ’ಚಲನಚಿತ್ರ.

ಆದರೆ ‘ಮಿಂಚಿನ ಓಟ’ಕ್ಕೆ ವಿಶೇಷ ಸ್ಥಾನವಿದೆ.  ಬ್ಯಾಂಕ್ ದರೋಡೆ, ಬಂದೀಖಾನೆಯಿಂದ ಪರಾರಿಯ ಪ್ರಯತ್ನ, ಬಡತನದ ಬೇಗೆಯಿಂದ ಮುಕ್ತಿಹೊಂದಿ ಬೇಗನೆ ಶ್ರೀಮಂತರಾಗುವ ಹಪಾಹಪಿ ಮುಂತಾದ ಅಂಶಗಳಿರುವ ಈ ಚಲನಚಿತ್ರದಲ್ಲಿ ಹುಡುಕಾಟಗಳಿವೆ.  ಅಂತೆಯೇ ಚಲನಚಿತ್ರದ ಶೀರ್ಷಿಕೆಯಿರುವಂತೆ ಇಲ್ಲಿ ಓಟವಿದೆ.  ಬೇರೆ ಮಾತುಗಳಲ್ಲಿ ಹೇಳುವುದಾದರೇ, ಚಲನಚಿತ್ರದ ಗತಿ ಹಂತ ಹಂತವಾಗಿ ಏರುಮುಖವಾಗುತ್ತ ಸಾಗುತ್ತದೆ.  ಕಟ್ಟೆ(ನಟ ಶಂಕರ್‌ನಾಗ್), ಟೋನಿ(ನಟ ಅನಂತ್‍ನಾಗ್) ಮತ್ತು ತಾತ(ನಟ ಲೋಕನಾಥ್) ಅವರ ಪಾತ್ರಪೋಷಣೆ ಕೂಡ ಗಟ್ಟಿಗೊಳ್ಳತ್ತ ಮುಂದುವರೆಯುತ್ತದೆ.  ಚಿತ್ರಕಥೆಯಲ್ಲಿ ಬಿಗಿಯಿದೆ.  ಕೃತಕ ಬೆಳಕಿನ ಕಡಿಮೆ ಪ್ರಯೋಗ ಎದ್ದು ಕಾಣುತ್ತದೆ.  ರಾತ್ರಿ ದೃಶ್ಯಗಳಿರುವ ಶಾಟ್‍ಗಳು ನೈಜವಾಗಿ ಮೂಡಿಬಂದಿವೆ.  ಹಾಡುಗಳಿಗೆ ಕಮರ್ಷಿಯಲ್ ಚಲನಚಿತ್ರಗಳ ಟಚ್ ಇದೆ. ಈ ಚಲನಚಿತ್ರದಲ್ಲಿ ಅನಂತ್‍ನಾಗ್ ಅವರಿಗಿದ್ದ ರೋಮ್ಯಾಂಟಿಕ್ ಇಮೇಜನ್ನು ಭಿನ್ನಗೊಳಿಸಲಾಗಿದೆ.

‘ಮಿಂಚಿನ ಓಟ’ ಚಿತ್ರದಲ್ಲಿ ಶಂಕರ್‌ನಾಗ್‌, ಲೋಕನಾಥ್‌

ನಮ್ಮ ದೇಶದ ಚಲನಚಿತ್ರರಂಗದ ಇತಿಹಾಸದಲ್ಲಿ 1970ರ ದಶಕ ಒಂದು ‘ಪ್ರಯೋಗ ಪರ್ವ’ಎಂದರೆ ತಪ್ಪಾಗುವುದಿಲ್ಲವೇನೋ.  ಚಲನಚಿತ್ರ ವ್ಯಾಕರಣವನ್ನು ಒಂದು ಬಗೆಯಲ್ಲಿ ಮುರಿದ ಹಲವು ಪರ್ಯಾಯ ಸಿನಿಮಾಗಳು ತಯಾರಾದ ಕಾಲಘಟ್ಟವದು.  ಕನ್ನಡ ಚಲನಚಿತ್ರರಂಗದಲ್ಲೂ ಇದರ ಪ್ರತಿಫಲನವಾಯಿತು.  ಈ ನಿಟ್ಟಿನಲ್ಲಿ ‘ಮಿಂಚಿನ ಓಟ’ ಒಂದು ‘ಬ್ರಿಡ್ಜ್ ಚಲನಚಿತ್ರ’ ಎಂದು ಕರೆಯಬಹುದು (ಕಲಾತ್ಮಕ ಮತ್ತು ಕಮರ್ಷಿಯಲ್ ಚಲನಚಿತ್ರಗಳ ನಡುವಿನ ಚಲನಚಿತ್ರಗಳನ್ನು ಹೀಗೆಂದು ಬಣ್ಣಿಸುವುದು ವಾಡಿಕೆ).  ಚರ್ವಿತಚರ್ವಣ ಚಲನಚಿತ್ರಗಳ ಹಾದಿ ಹಿಡಿಯದೆ, ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಟ್ಟ ‘ಮಿಂಚಿನ ಓಟ’, ಶಂಕರ್‍ನಾಗ್ ನಿರ್ದೇಶನದ ಇತರ ಚಲನಚಿತ್ರಗಳಿಗೆ ಭದ್ರ ಬುನಾದಿ ಹಾಕಿತು.

1984ರಲ್ಲಿ ತೆರೆಕಂಡ ಅವರ ‘ಆಕ್ಸಿಡೆಂಟ್’ ಚಲನಚಿತ್ರದ ವಸ್ತುವಿನಲ್ಲಿ ರಾಜಕಾರಣ, ಪತ್ರಿಕಾರಂಗ, ಪೊಲೀಸ್ ವ್ಯವಸ್ಥೆ, ಬಡವರ ಅಸಹಾಯಕ ಪರಿಸ್ಥಿತಿ, ಶ್ರೀಮಂತಿಕೆಯ ದೌಲತ್ತಿನಿಂದ ಹಾದಿ ತಪ್ಪಿದ ಮಕ್ಕಳು, ಡ್ರಗ್ಸ್ ಇತ್ಯಾದಿಗಳಿವೆ. ಫುಟ್‍ಪಾತ್‍ನಲ್ಲಿ ಮಲಗಿರುವ ಸೂರಿಲ್ಲದ ನಿರ್ಗತಿಕರ ಮೇಲೆ ವಿದೇಶಿ ಕಾರನ್ನು ಓಡಿಸುವ ಬೆಚ್ಚಿಬೀಳಿಸುವ ದೃಶ್ಯ ನಂತರದ ಕಾಲದ ಸಲ್ಮಾನ್ ಖಾನ್‍ನ ನೈಜ ಜೀವನದಲ್ಲಿ ಜರುಗಿದ ಇಂತಹದ್ದೇ ಘಟನೆಯನ್ನು ನೆನಪಿಗೆ ತರುತ್ತದೆ.

ಚಲನಚಿತ್ರದ ಟೈಟಲ್ ಕಾರ್ಡ್ ಹಂತದಲ್ಲಿ ಒಂದು ಟೈಪ್‍ರೈಟರ್ ಬಳಸುವಾಗಿನ ಶಬ್ಧ ಕೇಳಿಬರುತ್ತದೆ.  ಚಲನಚಿತ್ರದಲ್ಲಿ ಹಾಡುಗಳು, ತಮಾಷೆಯ ದೃಶ್ಯಗಳು, ರೋಮ್ಯಾಂಟಿಕ್ ಸನ್ನಿವೇಶಗಳು ಇಲ್ಲದೇ ವಸ್ತುವಿನತ್ತಲೇ ಕೇಂದ್ರೀಕೃತವಾಗಿರುವುದು ಚಿತ್ರಕಥೆಗೆ ಗಟ್ಟಿತನವನ್ನು ನೀಡಿದೆ.  ಕಮರ್ಷಿಯಲ್ ಚಲನಚಿತ್ರಗಳ ಹೂರಣ ಹೊಂದಿರದಿದ್ದರೂ, ಚಲನಚಿತ್ರ ಎಲ್ಲೂ ಲಂಬಿಸಿದೆ ಎಂದೆನಿಸುವುದಿಲ್ಲ.  ಇಳಯರಾಜ ಅವರ ಹಿನ್ನೆಲೆ ಸಂಗೀತ ಕೂಡ ಅಲ್ಲಲ್ಲಿ ಮೌನವಹಿಸಿರುವುದು ಯತಾರ್ಥವಾಗಿದೆ.  ತಕ್ಷಣ ಬ್ರೇಕ್ ಹಾಕಿದಾಗ ಕೇಳುವ ಟೈರುಗಳ ಶಬ್ಧ, ಪಿಸ್ತೂಲಿನ ಒಳಗೆ ಗುಂಡುಗಳನ್ನು ತೂರಿಸುವಾಗ ಹೊರಬರುವ ಸದ್ದು ಇತ್ಯಾದಿ ‘ಡೈಜಿಟಿಕ್ ಸೌಂಡ್ಸ್’ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ.  ಅಂದಿನ ಬೆಂಗಳೂರು ನಗರದ ಕತ್ತಲೆ/ಬೆಳಕಿನ ದೃಶ್ಯಗಳನ್ನು ಸಿನಿಮಾಟೋಗ್ರಾಫರ್ ದೇವ್‍ಧರ್ ಗಮನಾರ್ಹವಾಗಿ ಸೆರೆಹಿಡಿದಿದ್ದಾರೆ.

‘ಆಕ್ಸಿಡೆಂಟ್‌’ ಚಿತ್ರದಲ್ಲಿ ಶಂಕರ್‌ನಾಗ್ ಮತ್ತಿತರರು

ಜೀವನವನ್ನು ನಿರ್ವಹಿಸಲು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆಹೋಗುವ ಬಡವರು ರಸ್ತೆಯ ಪಾಲಾಗುವುದು, ಘೋರವಾದ ತಪ್ಪನ್ನು ಅವರ ಮೇಲೆ ಎಸಗಿದರೂ ಪಾರಾಗುವ ಶಕ್ತಿಯುಳ್ಳ(ಎಲ್ಲ ರೀತಿಯ) ಬಲಾಢ್ಯರ ಅಟ್ಟಹಾಸ, ವ್ಯವಸ್ಥೆಯ ಪಟ್ಟಭದ್ರ ಹಿತಾಸಕ್ತಿಗಳ ಕರಾಮತ್ತು, ಬಡವರಿಗೆ ಸಿಗದ ನ್ಯಾಯ ಮುಂತಾದುವುಗಳನ್ನು ಶಂಕರ್‍ನಾಗ್ ವೀಕ್ಷಕರಿಗೆ ತಟ್ಟುವಂತೆ ದೃಶ್ಯಕಲೆಯ ಮೂಲಕ ಈ ಚಲನಚಿತ್ರದಲ್ಲಿ ರವಾನಿಸಿದ್ದಾರೆ.  ಚಲನಚಿತ್ರ ತಯಾರಿಕೆಗೆ ಸಂಬಂಧಿಸಿದ ಎಲ್ಲ ವಿಭಾಗಗಳನ್ನು ಅಚ್ಚುಕಟ್ಟಾಗಿ ಬಳಸಿಕೊಂಡು ಟೀಂ ಲೀಡರಾಗಿ ಶಂಕರ್‍ನಾಗ್ ತಮ್ಮ ಛಾಪನ್ನು ಒತ್ತಿದ್ದಾರೆ. ಶಂಕರ್‍ನಾಗ್ ನಿರ್ದೇಶಿಸಿದ ಚಲನಚಿತ್ರಗಳನ್ನು ವಿಶ್ಲೇಷಿಸಿದಾಗ, ಅವರು ವಿಶ್ವ ಚಲನಚಿತ್ರಗಳ ಸೂಕ್ಷ್ಮಗ್ರಾಹಿಗಳಾಗಿದ್ದರು ಎಂಬುದು ವೇದ್ಯವಾಗುತ್ತದೆ.
(ಶಂಕರ್‍ನಾಗ್ ತಮ್ಮ ಹನ್ನೆರಡು ವರ್ಷಗಳ ಸಿನಿಮಾ ಕ್ಷೇತ್ರದ ಒಡನಾಟದಲ್ಲಿ ಹತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಅವೆಂದರೆ- ‘ಮಿಂಚಿನ ಓಟ(1979), ‘ಜನ್ಮ ಜನ್ಮದ ಅನುಬಂಧ’(1980), ‘ಗೀತಾ’(1980), ಲಾಲಚ್ (ಹಿಂದಿ-1982, ‘ಮಿಂಚಿನ ಓಟ’ದ ರೀಮೇಕ್), ‘ಹೊಸ ತೀರ್ಪು’(1982), ‘ನೋಡಿ ಸ್ವಾಮಿ ನಾವಿರೋದು ಹೀಗೆ’(1983), ‘ಆಕ್ಸಿಡೆಂಟ್’(1984), ‘ದಿ ವಾಚ್‍ಮ್ಯಾನ್’(1986), ‘ಒಂದು ಮುತ್ತಿನ ಕಥೆ’(1987).)

ಈ ಬರಹಗಳನ್ನೂ ಓದಿ