ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಸ್ಕಾರ ತಂದಿತು ಸ್ವರ್ಣ ಕಮಲ

ಪೋಸ್ಟ್ ಶೇರ್ ಮಾಡಿ
ಪ್ರವೀಣ್ ಕುಮಾರ್‌, ಸಿನಿಮಾ ಸಂಬಾಷಣೆಕಾರ

ಸಂಸ್ಕಾರ ಚಿತ್ರವು ಮನುಷ್ಯನ ಹಸಿವು ಅವನು ಕಲಿತ ಪದ್ಧತಿಗಳನ್ನು ಮರೆಸುವುದನ್ನು ಹೇಳುತ್ತದೆ. ಒಬ್ಬರ ಹೊಟ್ಟೆ ಹಸಿವು, ಸೂತಕದ ಸಮಯದ ಆಚಾರಗಳನ್ನು ಬಿಟ್ಟು ಬೇರೆಯವರ ಮನೆಯಲ್ಲಿ ಊಟ ಮಾಡುವ ಸಂದರ್ಭ ತಂದರೆ, ಇನ್ನೊಬ್ಬರ ಕಾಮದ ಹಸಿವು ಅವರ ಗುರು ಸ್ಥಾನವನ್ನು ಮರೆಸಿ ವೇಶ್ಯೆಯ ಸಂಘವನ್ನು ಮಾಡುವ ಸಂದರ್ಭ ತರುತ್ತದೆ. ಸತ್ತವನ ಸಂಸ್ಕಾರದ ವಿಷಯ ಬದುಕಿರುವ ಯಾರ್ಯಾರಲ್ಲಿ, ಯಾವುದೆಲ್ಲದರ ಸಂಸ್ಕಾರ ಮಾಡಿತು ಎನ್ನುವುದು ಚಿತ್ರದ ಸಾರ.

ಎನ್.ಲಕ್ಷ್ಮೀನಾರಾಯಣರವರು ಡಾ.ರಾಜಕುಮಾರ್ ಅವರ ನಾಂದಿ(1964) ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದರು. ಆದರೆ ಹೊಸ ಅಲೆಯ ಚಿತ್ರಗಳ ಪ್ರಸಿದ್ಧಿಯನ್ನು ಹೆಚ್ಚಿಸಿದ್ದು ಪಟ್ಟಾಭಿರಾಮರೆಡ್ಡಿ ಅವರ ನಿರ್ದೇಶನದ ‘ಸಂಸ್ಕಾರ’ ಚಿತ್ರ ಎಂದೇ ಹೇಳಬೇಕು. ಯು.ಆರ್ ಅನಂತಮೂರ್ತಿಯವರ ಅದೇ ಹೆಸರಿನ ಕೃತಿ 1970ರಲ್ಲಿ ಕನ್ನಡ ಬೆಳ್ಳಿತೆರೆಯನ್ನು ಅಲಂಕರಿಸಿ ಕನ್ನಡಕ್ಕೆ ಮೊದಲ ಸ್ವರ್ಣ ಕಮಲ ಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು.

ದುರ್ವಾಸಪುರದ ಅಗ್ರಹಾರದ ಮೇಲೆ ಹದ್ದೊಂದು ಹಾರಾಡತೊಡಗುತ್ತದೆ. ಜಾತಿಭ್ರಷ್ಟನೆಂದು ಹೆಸರಾದ ನಾರಾಣಪ್ಪನ ಸಾವಿನೊಂದಿಗೆ ಕಥೆ ಶುರುವಾಗುತ್ತದೆ. ಅವನ ಶವ ಸಂಸ್ಕಾರ ಮಾಡಬೇಕೇ, ಮಾಡಬಾರದೇ? ಎಂಬುವ ಪ್ರಶ್ನೆ ಅಗ್ರಹಾರವನ್ನು ಅಲ್ಲಾಡಿಸುತ್ತದೆ. ಸಾವಿನ ನೆಪದಲ್ಲಿ ತಮ್ಮ ಕಾರ್ಯ ಸಾಧಿಸಲು ಸುಮಾರು ವ್ಯಕ್ತಿಗಳು ಹೊಂಚುಹಾಕುತ್ತಾರೆ. ಸತ್ತ ನಾರಾಣಪ್ಪನ ಮನೆ ಮತ್ತು ತೋಟಗಳನ್ನು, ಅವನು ತನ್ನ ಸಹವಾಸದ ಚಂದ್ರಿಗೆ ಕೊಟ್ಟಿದ್ದ ಬಂಗಾರವನ್ನು ತಮ್ಮದಾಗಿಸಿಕೊಳ್ಳುವತ್ತ ಅವನ ಸಂಬಂಧಿಕರು ನಿರತರಾಗುತ್ತಾರೆ. ನಾರುತ್ತಿರುವ ಹೆಣ ಮತ್ತು ಉರುಳುತ್ತಿರುವ ದಿನಗಳು ಅಗ್ರಹಾರದ ಗುರುಗಳಾದ ಪ್ರಾಣೇಶಾಚಾರ್ಯರ ನಿದ್ದೆಗೆಡಿಸುತ್ತವೆ. ಧರ್ಮಗ್ರಂಥಗಳು ಮತ್ತು ದೇವರ ಮೇಲಿಡುವ ಹೂವುಗಳೂ ಸಂಸ್ಕಾರದ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ. ಪ್ರಾಣೇಶಾಚಾರ್ಯರು ಕಂಗಾಲಾಗುತ್ತಾರೆ. ದೇವರ ಪ್ರಸಾದವಿಲ್ಲದೇ ನಿರಾಸೆಯಿಂದ ಗುಡಿಯಿಂದ ಹೊರಬರುವಾಗ ಸಿಗುವ ಚಂದ್ರಿಯನ್ನು ಸೇರುವುದರಿಂದ ಕಥೆ ಇನ್ನೊಂದು ತಿರುವು ಪಡೆಯುತ್ತದೆ. 

ಪ್ಲೇಗಿನಿಂದಾಗಿ ನೂರಾರು ಇಲಿಗಳು ಒದ್ದಾಡಿ ಸಾಯುತ್ತವೆ. ಹಿಂಡು ಹಿಂಡು ಹದ್ದುಗಳು ಅಗ್ರಹಾರಕ್ಕೆ ಬರುತ್ತವೆ. ಸಂಸ್ಕಾರದ ಪ್ರಸಂಗದಿಂದ ಪಾಠ ಕಲಿಯುವ ಮೊದಲೇ ಎಷ್ಟೋ ಜನ ಪ್ಲೇಗಿನಿಂದಾಗಿ ಅಸುನೀಗುತ್ತಾರೆ. ಮನುಷ್ಯರು ಮತ್ತು ಮಾನವೀಯತೆಯ ಸಾವು ತಾರಕ್ಕೇರುತ್ತದೆ. ಕೊನೆಗೆ ನಾರಾಣಪ್ಪ ಬೇಕಾದಂತೆ ಬದುಕಿದ ತಾನು ಕದ್ದುಮುಚ್ಚಿ ಬದುಕುತ್ತಿದ್ದೇನೆ ಎಂಬ ಅರಿವು ಮೂಡಿ ಪ್ರಾಣೇಶಾಚಾರ್ಯರು ನಿರಾಳರಾಗಿ ಅಗ್ರಹಾರದಲ್ಲಿ ತನಗಾಗಿ ಕಾದ ಚಂದ್ರಿಯ ಬಳಿಗೆ ಹಿಂದಿರುಗಿ ಬರುವುದರೊಂದಿಗೆ ಚಿತ್ರ ಕೊನೆಯಾಗುತ್ತದೆ.

‘ಸಂಸ್ಕಾರ’ ಚಿತ್ರದಲ್ಲಿ ಸ್ನೇಹಲತಾ ರೆಡ್ಡಿ, ಪಿ.ಲಂಕೇಶ್

ಸಂಸ್ಕಾರ ಚಿತ್ರವು ಮನುಷ್ಯನ ಹಸಿವು ಅವನು ಕಲಿತ ಪದ್ಧತಿಗಳನ್ನು ಮರೆಸುವುದನ್ನು ಹೇಳುತ್ತದೆ. ಒಬ್ಬರ ಹೊಟ್ಟೆ ಹಸಿವು, ಸೂತಕದ ಸಮಯದ ಆಚಾರಗಳನ್ನು ಬಿಟ್ಟು ಬೇರೆಯವರ ಮನೆಯಲ್ಲಿ ಊಟ ಮಾಡುವ ಸಂದರ್ಭ ತಂದರೆ, ಇನ್ನೊಬ್ಬರ ಕಾಮದ ಹಸಿವು ಅವರ ಗುರು ಸ್ಥಾನವನ್ನು ಮರೆಸಿ ವೇಶ್ಯೆಯ ಸಂಘವನ್ನು ಮಾಡುವ ಸಂದರ್ಭ ತರುತ್ತದೆ. ಸತ್ತವನ ಸಂಸ್ಕಾರದ ವಿಷಯ ಬದುಕಿರುವ ಯಾರ್ಯಾರಲ್ಲಿ, ಯಾವುದೆಲ್ಲದರ ಸಂಸ್ಕಾರ ಮಾಡಿತು ಎನ್ನುವುದು ಚಿತ್ರದ ಸಾರ. 

ಇಲಿಗಳ ಸಾವು, ಯಕ್ಷಗಾನ, ಹದ್ದುಗಳನ್ನು ಓಡಿಸುವ ಅಗ್ರಹಾರದ ಜನ, ಕಾಡಿನ ನೆಲದಲ್ಲಿ ಒದ್ದಾಡುವ ಪ್ರಾಣೇಶಾಚಾರ್ಯರು, ಅಡ್ಡಬರುವ ಹಾವನ್ನು ಹೊಡೆದು ಸಾಯಿಸುವ ದಾರಿಯಲ್ಲಿ ಸಿಕ್ಕ ಪುಟ್ಟ, ತಲೆ ತಗ್ಗಿಸಿ ಮಠದಲ್ಲಿ ಊಟ ಮಾಡುವ ಪ್ರಾಣೇಶಾಚಾರ್ಯರ ದೃಶ್ಯಗಳು, ಪುಟ್ಟನಿಗೆ ಸತ್ಯ ಹೇಳುವ ಪ್ರಾಣೇಶಾಚಾರ್ಯರು, ಸತ್ಯವನ್ನು ಅರಗಿಸಿಕೊಳ್ಳಲಾಗದೇ ಪ್ರಾಣೇಶಾಚಾರ್ಯರಿಂದ ದೂರಾಗುವ ಪುಟ್ಟನ ದೃಶ್ಯಗಳು ವಾತಾವರಣವನ್ನು ಚೆನ್ನಾಗಿ ಕಟ್ಟಿ ಸಂಸ್ಕಾರವನ್ನು ಹೆಚ್ಚು ಅರ್ಥ ಮಾಡಿಸುತ್ತವೆ. ಪಂಡಿತ ತಾರಾನಾಥ ಅವರ ಸಂಗೀತ ಚಿತ್ರದ ಸನ್ನಿವೇಶಗಳ ಭಾವೋದ್ವೇಗಗಳಿಗೆ ಪೂರಕವಾಗಿದೆ. ಹಿನ್ನೆಲೆ ಸಂಗೀತವನ್ನು ಚಿತ್ರದ ಉದ್ದಕ್ಕೂ ಬಳಸಿಕೊಂಡಿಲ್ಲದಿರುವುದೂ ಒಂದು ಸಿನಿಮಾ ತಂತ್ರ ಇರಬಹುದು ಅಥವಾ ತಂತ್ರದಂತೆ ಕೆಲಸ ಮಾಡಿದೆ. ಹೆಚ್ಚು ದೃಶ್ಯಗಳಲ್ಲಿ ಮತ್ತು ಕಡಿಮೆ ಮಾತುಗಳಲ್ಲಿ ಚಿತ್ರವನ್ನು ಕಟ್ಟಿರುವುದು ಖುಷಿ ಕೊಡುತ್ತದೆ.

ಗಿರೀಶ್ ಕಾರ್ನಾಡರು, ಲಂಕೇಶರು ಮತ್ತು ದಾರಿಯಲ್ಲಿ ಸಿಗುವ ಪುಟ್ಟನ ಪಾತ್ರಧಾರಿಗಳ ಅಭಿನಯಗಳು ಸೊಗಸಾಗಿವೆ. ಗಿರೀಶ್ ಕಾರ್ನಾಡ್ ಅವರ ಚಿತ್ರಕಥೆ ಮತ್ತು ಸಂಭಾಷಣೆಗಳು ಚಿತ್ರವನ್ನು ಚುರುಕಾಗಿಸಿವೆ. ಆನಂದ್, ಹಾಲು ಜೇನು, ಪುಷ್ಪಕ ವಿಮಾನ ಮುಂತಾದ ಸದಭಿರುಚಿಯ ಚಿತ್ರಗಳ ಸಿಂಗೀತಂ ಶ್ರೀನಿವಾಸ್ ಅವರು ಸಂಸ್ಕಾರದ ಸಹ-ನಿರ್ದೇಶಕರು.

ಕಥಾವಸ್ತುವಿನಿಂದ ಆಗಿನ ಮದ್ರಾಸು ಸೆನ್ಸಾರ್ ಮಂಡಳಿಯು ಸಂಸ್ಕಾರದ ಬಿಡುಗಡೆಯನ್ನು ತಡೆದಿತ್ತು. ಸಂಸತ್ತಿನಲ್ಲೂ ಚಿತ್ರದ ವಿಷಯ ಪ್ರಸ್ತಾಪವಾಗಿ ಕಡೆಗೂ 1970 ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತು. ಕನ್ನಡ ಚಿತ್ರರಂಗದ ಪಯಣದಲ್ಲಿ ಮೈಲುಗಲ್ಲು ಚಿತ್ರಗಳಲ್ಲಿ ಸಂಸ್ಕಾರವೂ ಒಂದಾಯಿತು. ಸಂಸ್ಕಾರ ಚಿತ್ರವು ಯು.ಆರ್ ಅನಂತಮೂರ್ತಿಯವರಿಗೆ 1970 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ತಂದಿತು. ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯ ಜೊತೆಗೆ ಟಾಮ್ ಕವನ್ ಅವರ ಛಾಯಾಗ್ರಹಣಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ಬಿ.ಆರ್ ಜಯರಾಮ್ ಅವರಿಗೆ ಅತ್ಯುತ್ತಮ ಪೋಷಕ ನಟ ರಾಜ್ಯಪ್ರಶಸ್ತಿ ಲಭಿಸಿವೆ.

‘ಸಂಸ್ಕಾರ’ದಲ್ಲಿ ಗಿರೀಶ್ ಕಾರ್ನಾಡ್‌

ಈ ಬರಹಗಳನ್ನೂ ಓದಿ