ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಭಿಮಾನಿ ದೇವರು

ಪೋಸ್ಟ್ ಶೇರ್ ಮಾಡಿ
ವಸುಧೇಂದ್ರ‌
ಲೇಖಕ – ಕತೆಗಾರ

ವರನಟ ಡಾ.ರಾಜಕುಮಾರ್ ಅಗಲಿ ಇಂದಿಗೆ ಹದಿನೈದು ವರ್ಷ. ಆದರೇನಂತೆ, ಅವರ ನೆನಪು ಸದಾ ಹಸಿರು. ಕನ್ನಡಿಗರಿಗೆ ಅಣ್ಣಾವ್ರ ಮೇಲೆ ಅಪಾರ ಪ್ರೀತಿ. ಈ ಪ್ರೀತಿ ವಿವಿಧ ರೀತಿಯಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತದೆ. ಲೇಖಕ – ಕತೆಗಾರ ವಸುಧೇಂದ್ರ ಅಂಥದ್ದೊಂದು ಆಪ್ತ ಪ್ರಸಂಗವನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

ವಿಧಾನಸೌಧದ ಬಳಿ ಏನೋ ಕೆಲಸವಿತ್ತು. ಅಲ್ಲಿಯ ಕೆಲಸ ಮುಗಿಸಿಕೊಂಡು ಆಫೀಸಿಗೆ ಹೋಗುವ ಯೋಜನೆ ಹಾಕಿಕೊಂಡೆ. ಆದರೆ ವಿಧಾನಸೌಧದ ಬಳಿ ಕಾರ್ ಪಾರ್ಕಿಂಗ್ ತುಂಬಾ ಕಷ್ಟ, ಜೊತೆಗೆ ಆ ವಾಹನ ದಟ್ಟಣೆಯಲ್ಲಿ ಕಾರನ್ನು ಚಲಾಯಿಸುವುದು ಮಹಾ ತಲೆನೋವು. ಆದ್ದರಿಂದ ವಿಧಾನಸೌಧದ ತನಕ ಆಟೋದಲ್ಲಿ ಹೋಗುವದೆಂದೂ, ಅಲ್ಲಿಂದ ಮುಂದೆ ವೈಟ್‌ಫೀಲ್ಡಿನಲ್ಲಿರುವ ನನ್ನ ಕಛೇರಿಗೆ ಹಾಯಾಗಿ ಹವಾನಿಯಂತ್ರಿತ ವೋಲ್ವೋ ಬಸ್ಸಿನಲ್ಲಿ ಹೋಗುವದೆಂದೂ ನಿಶ್ಚಯಿಸಿದೆ.

ಕೆಲಸ ಮುಗಿಸಿಕೊಂಡು, ಕಾರ್ಪೊರೇಷನ್ ಸರ್ಕಲ್ಲಿನಲ್ಲಿ ಕೆಂಪು ವೋಲ್ವೋ ಬಸ್ಸಿನಲ್ಲಿ ತೂರಿಕೊಂಡೆ. ಅಲ್ಲಿಂದ ನಮ್ಮ ಆಫೀಸಿಗೆ ನಲವತ್ತೈದು ರೂಪಾಯಿ. ಸ್ವಚ್ಛ ಬಿಳಿಯ ಉಡುಪಿನಲ್ಲಿದ್ದ ಕಂಡಕ್ಟರ್, ಮೈಕ್ರೋಸಾಫ್ಟ್ ಯಂತ್ರವನ್ನು ಕೈಯಲ್ಲಿ ಹಿಡಿದುಕೊಂಡು ಚೀಟಿ ಕೊಡಲು ನನ್ನ ಮುಂದೆ ಬಂದು ನಿಂತ. ನನ್ನ ಬಳಿಯಲ್ಲಿ ಹತ್ತರ ನಾಲ್ಕು ನೋಟುಗಳು, ನೂರರ ಎರಡು ನೋಟುಗಳು ಇದ್ದವು. ಅವನ ಬಳಿ ಚಿಲ್ಲರೆಯಿರಲಿಲ್ಲ. ‘ನೂರು ರೂಪಾಯಿ ಕೊಟ್ಟಿರಿ, ಉಳಿದ ಚಿಲ್ಲರೆಯನ್ನು ಚೀಟಿಯ ಮೇಲೆ ಬರೆದುಕೊಡುತ್ತೇನೆ, ಇಳಿಯುವಾಗ ತೆಗೆದುಕೊಳ್ಳಿ’ಎಂದ.

ನಾನೋ ಮಹಾ ಮರೆಗುಳಿ. ಇಳಿಯುವಾಗ ಯಾವುದೋ ಕತೆಯ ಗುಂಗಿನಲ್ಲಿ ಮುಳುಗಿ ಹೋಗಿ ಅದನ್ನು ಮರೆಯುವುದು ಖಚಿತವೆಂದು ನನಗೀಗಾಗಲೇ ಹಲವು ಬಾರಿ ಅನುಭವವಾಗಿತ್ತು. ಸುಮ್ಮನೆ ಐವತ್ತೈದು ರೂಪಾಯಿ ಕಳೆದುಕೊಳ್ಳಲು ಮನಸ್ಸಿರಲಿಲ್ಲ. ‘ನೂರು ರೂಪಾಯಿ ಕೊಡ್ತೀನಿ, ದಯವಿಟ್ಟು ಈಗಲೇ ಚಿಲ್ಲರೆ ಕೊಟ್ಟುಬಿಡಿ’ಎಂದು ಹಠ ಹಿಡಿದೆ. ಅವನ ಹೆಗಲಿನ ಆ ಚರ್ಮದ ಚೀಲದಲ್ಲಿ ಚಿಲ್ಲರೆಯಿದೆಯೆಂದೂ, ಬೇಕೆಂದೇ ನಾನೇ ಚಿಲ್ಲರೆ ಕೊಡಬೇಕೆಂದು ಸುಳ್ಳು ಹೇಳುತ್ತಿದ್ದಾನೆಂದು ನನ್ನ ಅನುಮಾನ. ಆ ಅನುಮಾನವನ್ನು ಗುರುತಿಸಿದ ಆ ಕಂಡಕ್ಟರ್ ತನ್ನ ಚೀಲವನ್ನು ತೆರೆದು ನನ್ನ ಕಣ್ಣ ಮುಂದೆ ಹಿಡಿದ. ಅದರಲ್ಲಿ ಚಿಲ್ಲರೆಯಿರಲಿಲ್ಲ. ‘ಅದಕ್ಕೇ ಸಾರ್ ನಿಮಗೇ ಚಿಲ್ಲರೆ ಕೊಡಲಿಕ್ಕೆ ಹೇಳಿದ್ದು’ ಎಂದ. ಈಗ ಅವನ ಧ್ವನಿಯಲ್ಲಿ ನಾನು ಚಿಲ್ಲರೆಯಿಲ್ಲವೆಂದು ಸುಳ್ಳು ಹೇಳುತ್ತಿದ್ದೇನೆಂಬ ಅನುಮಾನವಿರುವುದು ನನಗೆ ಗೋಚರಿಸಿತು. ನಾನೇನು ಕಡಿಮೆ? ತಕ್ಷಣ ನನ್ನ ಪರ್ಸನ್ನು ಬಿಡಿಸಿ ಅವನ ಮುಖದ ಮುಂದೆ ಹಿಡಿದು ‘ನನ್ನ ಹತ್ತಿರಾನೂ ಚಿಲ್ಲರೆ ಇಲ್ಲ. ಬೇಕಾದ್ರೆ ನೋಡಿಕೊಳ್ಳಿ’ ಎಂದೆ.

ಆಗಲೇ ಪವಾಡ ಜರುಗಿದ್ದು. ಪರ್ಸಿನಲ್ಲಿ ಅಣ್ಣಾವ್ರ ಐದು ರೂಪಾಯಿ ಮೌಲ್ಯದ ನಾಲ್ಕು ಸ್ಟಾಂಪುಗಳಿದ್ದವು. ಕಂಡಕ್ಟರ್ ಹಗೂರಕ್ಕೆ ಅದನ್ನು ಪ್ರೀತಿಯಿಂದ ತೆಗೆದುಕೊಂಡ. ‘ಎಲ್ಲಿ ಸಿಗ್ತಾವೆ ಸಾರ್?’ ಎಂದು ಅತ್ಯಂತ ಸ್ನೇಹದ ಧ್ವನಿಯಲ್ಲಿ ಕೇಳಿದ. ‘ಜಿಪಿಓನಲ್ಲಿ ಮಾತ್ರ ಸಿಗ್ತಾವೆ. ಹೋದ ತಿಂಗಳು ತೊಗೊಂಡೆ. ಆದರೆ ಈಗ ಸ್ಟಾಕ್ ಇರಲ್ಲ’ಅಂದೆ. ‘ಸಾರ್, ನಾನೊಂದು ಸ್ಟಾಂಪ್ ತೊಗೊಳ್ಲಾ?’ ಎಂದು ಆಸೆಯಿಂದ ಕೇಳಿದ. ನನಗೆ ಇದು ಒಳ್ಳೆಯ ಉಪಾಯವೆನ್ನಿಸಿತು. ಹೇಗೂ ಅಣ್ಣಾವ್ರ ಸ್ಟಾಂಪಿನ ಬೆಲೆ ಐದು ರೂಪಾಯಿ, ಅದರ ಜೊತೆಗೆ ನನ್ನ ಬಳಿ ಇರುವ ನಲವತ್ತು ರೂಪಾಯಿ ಕೊಟ್ಟರೆ ಸರಿಹೋಯಿತು ಎಂದು ಹೇಳಿದೆ. ಅವನು ಅತ್ಯಂತ ಜಾಗರೂಕತೆಯಿಂದ ಒಂದು ಸ್ಟಾಂಪನ್ನು ಹರಿದುಕೊಂಡು ಉಳಿದ ಮೂರನ್ನು ನನಗೆ ಕೊಟ್ಟ. ನಂತರ ನನ್ನ ಚೀಟಿ ಹರಿದು ಕೊಟ್ಟ. ನಾನು ನಲವತ್ತು ರೂಪಾಯಿ ಕೊಡಲು ಹೋದರೆ ನಿರಾಕರಿಸಿದ. ನನಗೆ ಅಚ್ಚರಿಯಾಯ್ತು. ‘ಆ ಸ್ಟಾಂಪಿನ ಬೆಲೆ ಬರೀ ಐದು ರೂಪಾಯಿ ಕಣ್ರೀ. ಈ ನಲವತ್ತು ರೂಪಾಯಿ ಯಾಕೆ ಬೇಡ ಅಂತೀರಾ?’ ಎಂದೆ. ಅವನು ಮುಖದ ತುಂಬಾ ಅಭಿಮಾನದ ನಗು ಚೆಲ್ಲಿ ‘ಅಣ್ಣಾವ್ರ ಸ್ಟಾಂಪಿಗೆ ಬೆಲೆ ಕಟ್ತೀರಾ ಸಾರ್?’ ಎಂದು ಕೇಳಿದ. ‘ಸಾರಿ’ಎಂದೆ. ‘ರೈಟ್, ರೈಟ್’ಎಂದು ಕೂಗಿದ. ಬಸ್ಸು ಚಲಿಸಿತು.

ಅಣ್ಣಾವ್ರನ್ನ ‘ಅಭಿಮಾನಿ ದೇವರು’ಎಂದಿದ್ದು ಯಾಕೆಂದು ಚೂರು ಚೂರೇ ಅರ್ಥವಾಗಲಾರಂಭಿಸಿತು.

19ನೇ ಜನವರಿ 2009

ಈ ಬರಹಗಳನ್ನೂ ಓದಿ