ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತೆರೆಯ ಮೇಲೆ ಡಾಕ್ಟರ್

ಪೋಸ್ಟ್ ಶೇರ್ ಮಾಡಿ

ಕಾದಂಬರಿ ಆಧಾರಿತ ಹಳೆಯ ಕನ್ನಡ ಸಿನಿಮಾಗಳಲ್ಲಿನ ವೈದ್ಯರ ಪಾತ್ರಗಳು ಈ ಹೊತ್ತಿಗೂ ನೆನಪಾಗುತ್ತವೆ. ಕತೆಯೊಂದಿಗೆ ಬೆಸೆದುಕೊಂಡ ಪಾತ್ರಗಳವು. ಬದಲಾದ ದಿನಗಳಲ್ಲಿ ಅಂತಹ ಕತೆ, ಪಾತ್ರಗಳಿಗೆ ಜಾಗವಿಲ್ಲದಂತಾಗಿದೆ. ವೈದ್ಯರ ದಿನದ (ಜುಲೈ 1) ನೆಪದಲ್ಲಿ ಒಂದು ಹೊರಳುನೋಟ.

`ಬಂಧನ’ ಚಿತ್ರದಲ್ಲಿನ ಡಾ.ಹರೀಶ್ ಪಾತ್ರ ವಿಷ್ಣುವರ್ಧನ್ ವೃತ್ತಿ ಬದುಕಿನ ಮಹತ್ವದ ಪಾತ್ರವಾಯ್ತು. ಉಷಾ ನವರತ್ನರಾಂ ಕೃತಿಯನ್ನು ಆಧರಿಸಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ್ದ ಚಿತ್ರವಿದು. ತ್ರಿಕೋನ ಪ್ರೇಮಕತೆಯ ವಸ್ತು ಇದ್ದರೂ ಇಲ್ಲಿ ವೈದ್ಯ ವೃತ್ತಿಗೊಂದು ಘತನೆ ಸಂದಿತ್ತು. ಸಹಪಾಠಿ ಡಾ.ನಂದಿನಿ ಪ್ರೀತಿ ಸಿಗದಿದ್ದರೂ, ಆಕೆಯ ಒಳಿತಿಗಾಗಿ ಪ್ರಾರ್ಥಿಸುವ, ಕೊನೆಗೆ ನಂದಿನಿಯ ಕುಡಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಡಾ.ಹರೀಶ್ ಪಾತ್ರದಲ್ಲಿ ವಿಷ್ಣು ಅಮೋಘವಾಗಿ ನಟಿಸಿದ್ದರು. ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ಲವ್, ಹಳ್ಳಿಗಳಲ್ಲಿ ಬೀಡು ಬಿಟ್ಟ ತಪಾಸಣಾ ಶಿಬಿರ, ಕೊನೆಗೆ ಆಪರೇಷನ್ ಥಿಯೇಟರ್‍ನಲ್ಲಿ ಕೊನೆಗೊಳ್ಳುವ ಸಿನಿಮಾದಲ್ಲಿ ನಿರ್ದೇಶಕ ಸಿಂಗ್ ಬಾಬು `ಡಾಕ್ಟರ್ ಥೀಮ್’ಗೆ ಮೆರುಗು ಕೊಟ್ಟಿದ್ದರು.

‘ಬಂಧನ’ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ (ಫೋಟೊ ಕೃಫೆ: NFAI)

`ಅರುಣರಾಗ’ ಚಿತ್ರದ ವೈದ್ಯ ಪಾತ್ರಗಳಲ್ಲಿ ಅನಂತನಾಗ್ ಮತ್ತು ಗೀತಾ ಅವರದ್ದು ಅತ್ಯುತ್ತಮ ಅಭಿನಯ. ವಿವಾಹಕ್ಕೆ ಅಡ್ಡಿಯಾಗುವ ದೊಡ್ಡ ಓದಿನ ಅಹಂ, ಇದನ್ನು ಮೆಟ್ಟಿ ನಿಂತು ಸಾಧನೆಯ ಹಾದಿ ಹಿಡಿಯುವ ನಾಯಕಿ, ಅಂತಿಮವಾಗಿ ತನ್ನ ತಪ್ಪನ್ನರಿತು ಸೋಲಿನಲ್ಲೇ ಗೆಲ್ಲುವ ನಾಯಕ… ಅನಂತನಾಗ್ ಮತ್ತು ಗೀತಾ ಪ್ರಬುದ್ಧ ಅಭಿನಯ, ಕೆ.ವಿ.ಜಯರಾಂ ಅವರ ಸಮರ್ಥ ನಿರ್ದೇಶನದೊಂದಿಗೆ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಗೀತಪ್ರಿಯ ನಿರ್ದೇಶನದ `ಹೊಂಬಿಸಿಲು’ ಚಿತ್ರದಲ್ಲೊಂದು ಸುಮಧುರ `ಡಾಕ್ಟರ್ ಕತೆ’ಯಿತ್ತು. ನಿರ್ದೇಶಕರು ಡಾಕ್ಟರ್ ಥೀಮ್ ಜತೆ ಪ್ರೇಮಕತೆಯನ್ನು ಸೊಗಸಾಗಿ ಬೆರೆಸಿದ್ದರು.

‘ಶ್ರುತಿ ಸೇರಿದಾಗ’ ಚಿತ್ರದಲ್ಲಿ ರಾಜಕುಮಾರ್, ಬಾಲಕೃಷ್ಣ (ಫೋಟೊ ಕೃಪೆ: ಕನ್ನಡ ದೊರೆ)

`ಪ್ರತಿಜ್ಞೆ’, `ಶ್ರುತಿ ಸೇರಿದಾಗ’ ಚಿತ್ರಗಳಲ್ಲಿ ರಾಜಕುಮಾರ್ ವೈದ್ಯನ ಪಾತ್ರಗಳಲ್ಲಿದ್ದರು. `ಶ್ರುತಿ ಸೇರಿದಾಗ’ ಚಿತ್ರದಲ್ಲಿ ನಿರ್ದೇಶಕ ದತ್ತರಾಜ್ ಇಬ್ಬರು ನಾಯಕಿಯರ ಪ್ರೀತಿಯ ಸುಳಿಯಲ್ಲಿ ಸಿಲುಕುವ ಡಾ.ಮೂರ್ತಿ (ರಾಜ್) ಪಾತ್ರವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದರು. ಸಿನಿಮಾ ಕತೆಗೆ ತಿರುವು ನೀಡುವಂತಹ ಕೆಲವು ವೈದ್ಯಕೀಯ ಅಂಶಗಳೂ ಇಲ್ಲಿ ಪ್ರಸ್ತಾಪವಾಗಿದ್ದವು. ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. `ಪ್ರತಿಜ್ಞೆ’ ಚಿತ್ರದಲ್ಲಿಯೂ ವೈದ್ಯನ ಪಾತ್ರದಲ್ಲಿ ರಾಜ್ ಗಮನ ಸೆಳೆದಿದ್ದರು. `ಗುರಿ’ ಚಿತ್ರದಲ್ಲಿ ರಾಜ್ ಡಾಕ್ಟರ್ ಕೋಟ್ ಹಾಕಿ ಮಾರು ವೇಷದಲ್ಲಿ ಕಾಣಿಸಿಕೊಂಡಿದ್ದರೆ, ಇದೇ ಚಿತ್ರದಲ್ಲಿ ಫಂಡರೀಬಾಯಿ ವೈದ್ಯೆಯಾಗಿ ನಟಿಸಿದ್ದರು.

‘ಹೃದಯ ಹಾಡಿತು’ ಚಿತ್ರದಲ್ಲಿ ಅಂಬರೀಶ್‌

ಇನ್ನು 60, 70ರ ದಶಕಗಳಲ್ಲಿ ತೆರೆಕಂಡ ಬಹಳಷ್ಟು ಸಿನಿಮಾಗಳಲ್ಲಿ ನಟ ಸಂಪತ್ ವೈದ್ಯನಾಗಿ ಕಾಣಿಸಿಕೊಂಡಿದ್ದಿದೆ. ಕನ್ನಡ ಸಿನಿ ಪ್ರೇಮಿಗಳಿಗೆ ಮೃದು ಮಾತಿನ, ಕೊರಳಿಗೆ ಸ್ಟೆಷೋಸ್ಕೋಪ್ ತೊಟ್ಟ ಸಂಪತ್ ಕಣ್ಮುಂದೆ ಬರಬಹುದೇನೋ? ನಟರಾದ ಎಚ್.ಜಿ.ಸೋಮಶೇಖರ್ ರಾವ್, ಲೋಕನಾಥ್ ವೈದ್ಯರ ಪಾತ್ರಗಳಲ್ಲಿ ನೆನಪಾಗುವುದಿದೆ. ಇವರ ನಟನೆಯ ಅನುಭವ, ತೂಕದ ಮಾತು, ಹದವರಿತ ನೋಟ… ವೈದ್ಯ ಪಾತ್ರಗಳಿಗೆ ಜೀವ ತುಂಬಿದೆ ಎಂದೇ ಹೇಳಬಹುದು. `ಶುಭಮಂಗಳ’ ಚಿತ್ರದಲ್ಲಿ ನಟ ಅಶ್ವಥ್‍ರ `ಕಾಮಿಡಿ ಡಾಕ್ಟರ್’ ಪಾತ್ರ ಕಚಗುಳಿಯಿಡುತ್ತದೆ.

‘ಹೊಂಬಿಸಿಲು’ ಚಿತ್ರದಲ್ಲಿ ಶಿವರಾಂ

ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ತಯಾರಾದ `ಹೃದಯ ಹಾಡಿತು’ ಡಾಕ್ಟರ್ ಥೀಮ್‍ನ ಕತೆಯೂ ಗಮನ ಸೆಳೆಯುತ್ತದೆ. ಡಾ.ಪ್ರಸಾದ್ (ಅಂಬರೀಶ್), ಡಾ.ಅಭಿಲಾಶಾ (ಭವ್ಯ) ಮತ್ತು ಹೃದಯ ರೋಗಿ ಆಶಾ (ಮಾಲಾಶ್ರೀ) ಮಧ್ಯೆ ತ್ರಿಕೋನ ಪ್ರೇಮಕತೆಯ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸುರೇಶ್ ಹೆಬ್ಳೀಕರ್ ನಿರ್ದೇಶನದ `ಪ್ರಥಮ ಉಷಾ ಕಿರಣ’ ಒಂದೊಳ್ಳೆಯ ಮನೋವೈಜ್ಞಾನಿಕ ಚಿತ್ರವಾಗಿ ದಾಖಲಾಗಿದೆ. `ಮಾನಸ ಸರೋವರ’ ಚಿತ್ರದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮನೋವೈದ್ಯ ಶ್ರೀನಾಥ್ ಪಾತ್ರವನ್ನು ಅಮರವಾಗಿಸಿದ್ದಾರೆ. ‘ಕುಂಕುಮ ರಕ್ಷೆ’ ಈ ಹಾದಿಯಲ್ಲಿ ಮತ್ತೊಂದು ಯಶಸ್ವೀ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಸಿನಿಮಾದಲ್ಲಿ ಹೀರೋ ವಿಜಯ್ ಸೂರ್ಯ ‘ಡಾ.ಆಕರ್ಷ್’ ಪಾತ್ರದಲ್ಲಿ ಮಿಂಚಿದ್ದರು. ದೊಡ್ಡೇರಿ ವೆಂಟಕಗಿರಿರಾವ್ ಅವರ ಕೃತಿಯನ್ನಾಧರಿಸಿ ತಯಾರಾಗಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  

‘ಮುಗಿಲ ಮಲ್ಲಿಗೆ’ ಚಿತ್ರದಲ್ಲಿ ಸರಿತಾ, ಶ್ರೀನಾಥ್, ಲೋಕನಾಥ್‌

ಡಾಕ್ಟರ್ ಥೀಮ್‍ನ ಹತ್ತಾರು ಉತ್ತಮ ಚಿತ್ರಗಳು ಹಿಂದಿಯಲ್ಲಿ ತೆರೆಕಂಡಿವೆ. ರಾಜ್‍ಕುಮಾರ್ ಹಿರಾನಿ ನಿರ್ದೇಶನದಲ್ಲಿ ತಯಾರಾಗಿದ್ದ `ಮುನ್ನಾಭಾಯ್ ಎಂಬಿಬಿಎಸ್’ ವಿಡಂಬನೆಯೊಂದಿಗೆ ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿತು. ಪ್ರೀತಿ, ಜೀವನೋತ್ಸಾಹದಿಂದ ರೋಗಿಗಳಿಗೆ ಮರುಜೀವ ನೀಡಬಹುದು ಎನ್ನುವ ಸಂದೇಶವಿದ್ದ ಚಿತ್ರ ಕನ್ನಡ, ತೆಲುಗು, ತಮಿಳಿಗೆ ರೀಮೇಕ್ ಆಗಿತ್ತು. `ಉಪ್ಪಿದಾದಾ ಎಂಬಿಬಿಎಸ್’ ಕನ್ನಡ ಅವತರಣಿಕೆಯಲ್ಲಿ ಉಪೇಂದ್ರ ನಟಿಸಿದ್ದರು. ರಾಜೇಶ್ ಖನ್ನಾ ಮತ್ತು ಅಮಿತಾಭ್ ಬಚ್ಚನ್ ಅಭಿನಯದ `ಆನಂದ್’ ಮಹೋನ್ನತ ಚಿತ್ರವಾಗಿ ದಾಖಲಾಗಿದೆ. ಕ್ಯಾನ್ಸರ್‍ಗೆ ತುತ್ತಾದ ಸ್ನೇಹಿತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗದೆ ತೊಳಲಾಡುವ ಡಾ.ಭಾಸ್ಕರ್ ಬ್ಯಾನರ್ಜಿಯಾಗಿ ಅಮಿತಾಭ್ ಅಮೋಘ ಅಭಿನಯ ನೀಡಿದ್ದರು. `ಅಮರ್ ಕಹಾನಿ’ (ವಿ.ಶಾಂತಾರಾಂ), `ಏಕ್ ಡಾಕ್ಟರ್ ಕಿ ಮೌತ್’ (ಪಂಕಜ್ ಕಪೂರ್), `ಅಪ್ನಾ ಆಸ್ಮಾನ್’ (ಅನುಪಮ್ ಖೇರ್), `ವಿಕ್ಕಿ ಡೋನರ್’ (ಅನ್ನು ಕಪೂರ್) ನೆನಪಾಗುವ `ಡಾಕ್ಟರ್ ಥೀಮ್’ನ ಕೆಲವು ಪ್ರಮುಖ ಹಿಂದಿ ಚಿತ್ರಗಳು.

‘ಮುನ್ನಾಭಾಯ್ ಎಂಬಿಬಿಎಸ್‌’ ಹಿಂದಿ ಚಿತ್ರದಲ್ಲಿ ಸಂಜಯ್ ದತ್‌

ಈ ಬರಹಗಳನ್ನೂ ಓದಿ