ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆರ್‌ಜಿವಿ ಜನ್ಮದಿನ | ನಟ ಸುದೀಪ್ ಕಂಡಂತೆ ನಿರ್ದೇಶಕ ವರ್ಮಾ

ಪೋಸ್ಟ್ ಶೇರ್ ಮಾಡಿ
ಸುದೀಪ್‌
ನಟ, ನಿರ್ದೇಶಕ

ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ತಂತ್ರಜ್ಞ ರಾಮ್‌ಗೋಪಾಲ್ ವರ್ಮಾ. ಇಂದು (ಏ 7) ಅವರು 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ಸುದೀಪ್‌ ತಾವು ಕಂಡ ವರ್ಮಾರನ್ನು ಇಲ್ಲಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಲೇಖಕ – ಚಿತ್ರಕಲಾವಿದ ಸೃಜನ್‌ ಅವರ ‘ನನ್ನಿಷ್ಟ’ ಅನುವಾದಿತ ಕೃತಿಯಲ್ಲಿನ ಬರಹವಿದು.

ಆಗ ನಾನು ಕಾಲೇಜು ವಿದ್ಯಾರ್ಥಿ. ನಾವು ಕೆಲವರು ಸ್ನೇಹಿತರು ಸಿನಿಮಾ ಬಗ್ಗೆ ವಿಪರೀತ ಕ್ರೇಜ್ ಬೆಳೆಸಿಕೊಂಡಿದ್ದೆವು. ಎಲ್ಲರೂ ಗುಂಪುಗೂಡಿ ಥಿಯೇಟರ್‌ಗೆ ಹೋಗಿ ವಾರಕ್ಕೆರೆಡಾದರೂ ಸಿನಿಮಾ ನೋಡುವುದು ಕಡ್ಡಾಯವಾಗಿತ್ತು. ಅದೇ ಅವಧಿಯಲ್ಲಿ ತೆರೆಕಂಡು ದೊಡ್ಡ ಸುದ್ದಿ ಮಾಡಿದ್ದ ಸಿನಿಮಾ ‘ಶಿವ’! ಆ ಚಿತ್ರದ ನಿರ್ದೇಶಕರ ಬಗ್ಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಅದೊಂದು ತೆಲುಗು ಎನ್ನುವುದಷ್ಟೇ ನಮಗಿದ್ದ ಮಾಹಿತಿ. ಅಲ್ಲಿಯವರೆಗೆ ನಾವು ತೆಲುಗು ಸಿನಿಮಾ ನೋಡಲೆಂದು ಥಿಯೇಟರ್‌ಗೆ ಹೋದವರೇ ಅಲ್ಲ. ಏಕೆಂದರೆ ನಮಗ್ಯಾರಿಗೂ ತೆಲುಗು ಅರ್ಥವಾಗುತ್ತಿರಲಿಲ್ಲ.

‘ಶಿವ’ ಸಿನಿಮಾ ಸೃಷ್ಟಿಸಿದ ಸಂಚಲನದಿಂದ ನಾವು ತೆಲುಗು ಚಿತ್ರವೊಂದನ್ನು ನೋಡಲು ಥಿಯೇಟರ್‌ಗೆ ಹೋಗುವಂತಾಯಿತು. ಎಲ್ಲರೂ ನಿಬ್ಬೆರಗಾಗಿ ಸಿನಿಮಾ ನೋಡಿದೆವು. ಚಿತ್ರದ ನಿರ್ದೇಶಕರ ಬಗ್ಗೆ ತಿಳಿಯುವ ಮನಸ್ಸಾಯ್ತು. ಅಲ್ಲಿಯವರೆಗೆ ನಾವೆಂದೂ ಚಿತ್ರವೊಂದರ ನಿರ್ದೇಶಕರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಹಾಗೆ ಮೊದಲ ಬಾರಿಗೆ ಚಿತ್ರದ ನಿರ್ದೇಶಕನ ಬಗ್ಗೆ ತಲೆ ಕೆಡೆಸಿಕೊಳ್ಳುವಂತೆ ಮಾಡಿದ ಸಿನಿಮಾ ‘ಶಿವ’. ಸರಿ, ನಾವು ನೋಡಿದ ಅಪರೂಪದ ಸಿನಿಮಾ ಮಾಡಿದವರ ಬಗ್ಗೆ ವಿಚಾರಿಸಿದೆವು. ಆಗ ಕೇಳಿ ಬಂದ ಹೆಸರು ರಾಮ್‌ಗೋಪಾಲ್ ವರ್ಮಾ.

ತಮ್ಮ ಚೊಚ್ಚಲ ನಿರ್ದೇಶನದಲ್ಲೇ ವರ್ಮಾ ಸಿನಿಮಾ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದರು. ತೆಲುಗು ಹೊರತಾದ ಇತರೆ ಪ್ರೇಕ್ಷಕರನ್ನೂ ‘ಶಿವ’ ಥಿಯೇಟರ್‌ಗೆ ಆಕರ್ಷಿಸಿತ್ತು. ಎಲ್ಲರಿಗೂ ಚಿತ್ರದ ನಿರ್ದೇಶಕ ಯಾರೆಂದು ತಿಳಿಯುವ ಕುತೂಹಲ! ಆಫ್‌ಕೋರ್ಸ್‌, ಚಿತ್ರದ ನಾಯಕನಾಗಿ ಅಭಿನಯಿಸಿದ್ದ ನಾಗಾರ್ಜುನ್‌ ದೊಡ್ಡ ಹೆಸರು. ಆದರೆ ಹೀರೋಗಿಂತ ಅಲ್ಲಿ ಚಿತ್ರದ ತಂತ್ರಜ್ಞ ಎಲ್ಲರ ಗಮನ ಸೆಳೆದಿದ್ದ. ನನ್ನ ಪ್ರಕಾರ ‘ಶಿವ’ ಒಂದು ಯಶಸ್ವೀ ಸಿನಿಮಾ ಅಷ್ಟೇ ಅಲ್ಲ. ಬದಲಿಗೆ ನಮ್ಮ ಕಮರ್ಷಿಯಲ್ ಸಿನಿಮಾಗಳ ವ್ಯಾಕರಣವನ್ನೇ ಬದಲಿಸಿದ ಪ್ರಯೋಗ. ಆಕ್ಷನ್‌, ಅಂಡರ್‌ವರ್ಲ್ಡ್‌ ವಸ್ತುವನ್ನು ಪುನರ್‌ ವ್ಯಾಖ್ಯಾನ ಮಾಡಿದ ಪ್ರಯೋಗ. ಮುಂದೆ ‘ಶಿವ’ ನಂತರ ವರ್ಮಾರ ಎಲ್ಲ ಸಿನಿಮಾಗಳನ್ನೂ ನೋಡತೊಡಗಿದೆವು. ಅವರ ದೊಡ್ಡ ಅಭಿಮಾನಿ ಬಳಗಕ್ಕೆ ನಮ್ಮ ಗುಂಪೂ ಸೇರ್ಪಡೆಯಾಗಿತ್ತು.
ವರ್ಮಾರ ಪ್ರತಿ ಸಿನಿಮಾ ತೆರೆಕಂಡಾಗಲೂ ಥಿಯೇಟರ್‌ಗೆ ಓಡುತ್ತಿದ್ದೆವು. ಅಲ್ಲೇನು ಹೊಸತನವಿದೆ ಎನ್ನುವುದೇ ನಮ್ಮ ಕುತೂಹಲಕ್ಕೆ ಕಾರಣವಾಗುತ್ತಿತ್ತು. ಅವರ ಹಿಂದಿ ಸಿನಿಮಾ ‘ರಂಗೀಲಾ’ ಬಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದು ಹೌದು. ದಕ್ಷಿಣ ಭಾರತದ ತಂತ್ರಜ್ಞನೊಬ್ಬ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುವದು ಅಷ್ಟು ಸುಲಭವಲ್ಲ. ಆದರೆ ವರ್ಮಾ ಅತಿ ಕಡಿಮೆ ಅವಧಿಯಲ್ಲೇ ಅಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು. ಈ ಹೊತ್ತಿಗೂ ಯಾರೂ ಅಳಿಸಲಾಗದಂಥ ಛಾಪು ಅದು. ಹಾಗೆ ವರ್ಮಾ ತಮ್ಮದೇ ಒಂದು ಶೈಲಿ, ಮಾರ್ಗ ಸೃಷ್ಟಿಸಿಕೊಂಡು ಬಂದರು. ಎಷ್ಟರಮಟ್ಟಿಗೆ ಅಂದರೆ ಯಾವುದೋ ಒಂದು ಚಿತ್ರ ನೋಡಿ ಇದು ರಾಮ್‌ಗೋಪಾಲ್‌ ವರ್ಮಾ ಶೈಲಿ ಸಿನಿಮಾ ಎನ್ನುವಷ್ಟು. ಭಾರತೀಯ ಸಿನಿಮಾದ ಮೇಲೆ ಅವರ ಪ್ರಭಾವ ಅಂಥದ್ದು.

‘ಕ್ಷಣ ಕ್ಷಣಂ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ

ನಾನು ಆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾದ ನೆಲೆ ಕಂಡುಕೊಳ್ಳುತ್ತಿದ್ದೆ. ಅದೊಮ್ಮೆ ವರ್ಮಾರ ‘ಸರ್ಕಾರ್‌’ ಚಿತ್ರದ ರಿಮೇಕ್‌ ಹಕ್ಕು ಪಡೆಯಲೆಂದು ಅವರನ್ನು ಭೇಟಿಯಾಗಿದ್ದೆವು. ಅವರೊಂದಿಗೆ ಎರಡು ನಿಮಿಷಗಳ ಕಾಲ ಮಾತನಾಡುವ ಅವಕಾಶ ನನ್ನದಾಯ್ತು. ಆ ಎರಡು ನಿಮಿಷಗಳಲ್ಲಿ ನನ್ನಲ್ಲಿ ಅವರೇನು ಕಂಡಿದ್ದರೋ ಅದಾಗಿ ಕೆಲವೇ ದಿನಗಳಲ್ಲಿ ಅವರಿಂದ ನನಗೆ ಫೋನ್‌ ಕರೆ ಬಂತು. ಅಷ್ಟರಲ್ಲಿ ವರ್ಮಾ ನನ್ನ ಎರಡು ಸಿನಿಮಾಗಳನ್ನು ನೋಡಿದ್ದರು. ತಮ್ಮನ್ನು ಭೇಟಿಯಾಗುವಂತೆ ಅವರು ಆಹ್ವಾನಿಸಿದರು. ಬಹುಶಃ ಅವರ ಸಿನಿಮಾದಲ್ಲಿ ನನಗೆ ಅವಕಾಶ ಸಿಗಬಹುದು ಎಂದು ಅನಿಸಿತ್ತು. ಆದರೆ ಅತಿಯಾದ ಭರವಸೆಯೇನೂ ಇರಲಿಲ್ಲ. ಅವರನ್ನು ಭೇಟಿಯಾದಾಗ ನನಗೆ ‘ಫೂಂಕ್‌’ ಚಿತ್ರದ ಕಥೆ ಹೇಳಿದರು. ಅಲ್ಲಿಯವರೆಗೂ ನಾನು ಹಾರರ್‌ ಸಿನಿಮಾಗಳಲ್ಲಿ ನಟಿಸಿದವರನಲ್ಲ. ಆದರೆ ರಾಮ್‌ಗೋಪಾಲ್ ವರ್ಮಾರಂಥ ಅದ್ಭುತ ನಿರ್ದೇಶಕನ ಚಿತ್ರವದು ಎನ್ನುವುದೇ ನನ್ನಲ್ಲಿ ಆಸಕ್ತಿ ಕೆರಳಿಸಿತು. ಒಂದೊಮ್ಮೆ ಸಿನಿಮಾ ವಿಫಲವಾದರೂ ನಾನು ಕಳೆದುಕೊಳ್ಳುವಂಥದ್ದು ಏನೂ ಇರಲಿಲ್ಲ.

‘ಫೂಂಕ್‌’ ಚಿತ್ರದಲ್ಲಿ ಅಭಿನಯಿಸಿದೆ. ವರ್ಮಾ ಶ್ರೇಷ್ಠ ತಂತ್ರಜ್ಞನೆಂದು ಕರೆಸಿಕೊಳ್ಳುವುದೇಕೆ ಎನ್ನುವುದು ಅವರನ್ನು ಹತ್ತಿರದಿಂದ ನೋಡಿದಾಗ ಮನದಟ್ಟಾಯಿತು. ಚಿತ್ರವೊಂದಕ್ಕೆ ಅವರ ನಡೆಸುವ ಪೂರ್ವ ತಯಾರಿ, ಚಿಕ್ಕಚಿಕ್ಕ ವಿಷಯಗಳಿಗೂ ಅವರು ನೀಡುವ ಟ್ರೀಟ್‌ಮೆಂಟ್‌… ಇವೇ ಅವರ ಯಶಸ್ಸಿನ ಗುಟ್ಟು. ನನ್ನ ಚೊಚ್ಚಲ ಹಿಂದಿ ಸಿನಿಮಾ ‘ಪೂಂಕ್‌’ ದೊಡ್ಡ ಯಶಸ್ಸು ಕಂಡಿತು. ಮುಂದೆ ವರ್ಮಾರಿಂದ ‘ರಣ್‌’ ಚಿತ್ರಕ್ಕೆ ಆಫರ್ ಬಂತು. ಆಗ ಮಾತ್ರ ತುಂಬಾ ಭಯಪಟ್ಟಿದ್ದೆ. ಏಕೆಂದರೆ ಆ ಚಿತ್ರದಲ್ಲಿ ನಾನು ಮೇರು ನಟ ಅಮಿತಾಭ್‌ ಬಚ್ಚನ್‌ ಎದುರು ಅಭಿನಯಿಸಬೇಕಿತ್ತು.

ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಎನ್‌.ಟಿ.ರಾಮರಾವ್ ಅವರೊಂದಿಗೆ ಆರ್‌ಜಿವಿ

ಬಚ್ಚನ್‌ರಂಥ ನಟನ ಎದುರು ನನ್ನನ್ನು ಆಯ್ಕೆ ಮಾಡಲು ವರ್ಮಾಗೆ ಅದು ಹೇಗೆ ಧೈರ್ಯ ಬಂತೋ! ‘ರಣ್‌’ ಅವಕಾಶಕ್ಕಾಗಿ ವರ್ಮಾಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಪ್ರಯೋಗವದು. ‘ರಣ್‌’ ನಂತರ ತಮ್ಮ ‘ರಕ್ತಚರಿತ್ರ’ ಚಿತ್ರಕ್ಕೂ ನನ್ನನ್ನು ಆಯ್ಕೆ ಮಾಡಿದರು. ನನಗೆ ‘ಈಗ’ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲು ಪರೋಕ್ಷವಾಗಿ ಕಾರಣವಾಗಿದ್ದೂ ಅವರೇ. ವರ್ಮಾ ಸಿನಿಮಾಗಳಲ್ಲಿ ನನ್ನನ್ನು ನೋಡಿಯೇ ರಾಜಮೌಳಿf ತಮ್ಮ ‘ಈಗ’ ಚಿತ್ರಕ್ಕೆ ಆಯ್ಕೆ ಮಾಡಿದ್ದು. ವರ್ಮಾ ಜೊತೆ ಕೆಲಸ ಮಾಡಲು ನಾನು ಸದಾ ಉತ್ಸುಕನಾಗಿರುತ್ತೇನೆ. ಏಕೆಂದರೆ ಅಲ್ಲಿ ಕಲಿಯುವುದು ಸಾಕಷ್ಟಿರುತ್ತದೆ. ಈ ಹಿಂದೆ ಕೂಡ ಅವರೊಂದಿಗೆ ಕೆಲಸ ಮಾಡಿದಾಗ ಸಿನಿಮಾ ಪಾಠ ಕಲಿತು ಬಂದಿದ್ದೇನೆ.

ವರ್ಮಾ ತಾವು ನಂಬುವ ವ್ಯಕ್ತಿಯ ಮೇಲೆ ಭರವಸೆಯಿಡುತ್ತಾರೆ. ಹೊಗಳಿಕೆ, ಓಲೈಕೆ ಅವರಿಗೆ ಇಷ್ಟವಾಗದು. ಧನ್ಯವಾದಗಳನ್ನೂ ಅಪೇಕ್ಷಿಸುವುದಿಲ್ಲ. ಅರ್ಹ ವ್ಯಕ್ತಿಯಾದ್ದರಿಂದ ಪಾತ್ರಕ್ಕೆ ಆಯ್ಕೆ ಮಾಡಿದ್ದೇನೆ ಎನ್ನುತ್ತಾರಷ್ಟೆ. ಅವರಿಗೆ ಗೊತ್ತಿರುವುದು ಸಿನಿಮಾ ಒಂದೇ. ಅತ್ಯುತ್ತಮವಾದ ಅಭಿನಯ, ಕೆಲಸವನ್ನಷ್ಟೇ ತಮ್ಮಕಲಾವಿದರು ಹಾಗೂ ತಂತ್ರಜ್ಞರಿಂದ ಅವರು ಅಪೇಕ್ಷಿಸುವುದು. ಅಂತಿಮವಾಗಿ ಸಿನಿಮಾಗೆ ಏನು ಬೇಕೋ ಅದನ್ನು ಕೊಡಿ ಎನ್ನುತ್ತಾರೆ. ಬಾಲಿವುಡ್‌ನ ಬಹುತೇಕ ಎಲ್ಲಾ ತಾರೆಯರೂ ಅವರ ಒಂದಾದರೂ ಸಿನಿಮಾದಲ್ಲಿ ನಟಿಸಬೇಕೆಂದು ಕನಸು ಕಾಣುತ್ತಾರೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.

ಆರ್‌ಜಿವಿ ನಿರ್ದೇಶನದ ‘ಫೂಂಕ್‌’ ಹಿಂದಿ ಚಿತ್ರದಲ್ಲಿ ಸುದೀಪ್‌

ಅತಿಯಾದ ಭರವಸೆ ಮೂಡಿಸಿದ ವರ್ಮಾ ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿದ್ದೂ ಇದೆ. ಇನ್ನೇನು ಅವರ ಯುಗ ಮುಗಿಯಿತು ಎನ್ನುವಷ್ಟರಲ್ಲೇ ಅದ್ಭುತ ಚಿತ್ರದೊಂದಿಗೆ ಅವರು ಮರಳುತ್ತಾರೆ. ಅವರೆಂದೂ ಹಣಕ್ಕಾಗಿ ಸಿನಿಮಾ ಮಾಡುತ್ತೇನೆಂದು ಹೇಳಿದವರಲ್ಲ. ಸಿನಿಮಾ ಅವರ ಪ್ಯಾಷನ್‌. ಸದಾ ಹೊಸತನಕ್ಕೆ ತುಡಿಯುವ ವ್ಯಕ್ತಿ. ಭಾರತೀಯ ಸಿನಿಮಾದಲ್ಲಿ ಸ್ಟಡಿ ಕ್ಯಾಮ್‌ ಅಂದರೆ ಏನೆಂದೇ ಗೊತ್ತಿರಲಿಲ್ಲ. ಅವರು ತಮ್ಮ ಚೊಚ್ಚಲ ಸಿನಿಮಾ ‘ಶಿವ’ದಲ್ಲೇ ಸ್ಟಡಿ ಕ್ಯಾಮೆರಾ ಬಳಕೆ ಮಾಡಿದ್ದರು. ಅವರೊಬ್ಬ ಪ್ರಯೋಗಶೀಲ ತಂತ್ರಜ್ಞ. ಚಿಕ್ಕ ಬಜೆಟ್‌ ಸೇರಿದಂತೆ ಎಲ್ಲಾ ಮಾದರಿಯ ಸಿನಿಮಾಗಳ ನಿರ್ಮಾಪಕರಿಗೂ ಹೊಂದುವ ನಿರ್ದೇಶಕ.

ಈಗೇನು ನಾವು ಚಿತ್ರರಂಗದಲ್ಲಿ ಕಾರ್ಪೋರೆಟ್ ಬಿಸ್ನೆಸ್ ನೋಡುತ್ತಿದ್ದೇವೆಯೋ ಅದಕ್ಕೆ ಮಾರ್ಗ ಹಾಕಿಕೊಟ್ಟವರು ವರ್ಮಾ. ಅವರು ಭವಿಷ್ಯದ ದಿನಗಳನ್ನು ಗ್ರಹಿಸಿ ಆಗಲೇ ಚಿತ್ರನಿರ್ಮಾಣಕ್ಕಾಗಿ ‘ಫ್ಯಾಕ್ಟರಿ’ ಆರಂಭಿಸಿದ್ದರು. ಈ ಸಂಸ್ಥೆಯಿಂದ ವರ್ಷವೊಂದಕ್ಕೆ ಏಳೆಂಟು ಚಿತ್ರಗಳು ತಯಾರಾಗುತ್ತಿದ್ದವು. ದುರದೃಷ್ಟವತಾಶ್‌ ಅಂದು ಅವರಿಗೆ ಸೂಕ್ತ ನೆರವು ಸಿಗಲಿಲ್ಲ. ಹಾಗಾಗಿ ಈ ವ್ಯವಸ್ಥೆ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಆದರೆ ಅವರ ಫ್ಯಾಕ್ಟರಿ ಮುಂದೆ ಅಂಥಹದ್ದೇ ಹಲವು ಕಾರ್ಪೋರೆಟ್‌ ಸಂಸ್ಥೆಗಳಿಗೆ ದಾರಿದೀಪವಾಯ್ತು.

ವರ್ಮಾ ನಿರ್ದೇಶನದ ‘ರಣ್‌’ ಹಿಂದಿ ಚಿತ್ರದಲ್ಲಿ ಸುದೀಪ್‌, ಅಮಿತಾಭ್‌ ಬಚ್ಚನ್‌

ತಾವು ಭಾವುಕರಲ್ಲ, ತಮಗೆ ಅಟ್ಯಾಚ್‌ಮೆಂಟ್‌ ಇಲ್ಲ ಎಂದೇನೋ ಅವರು ಹೇಳಿಕೊಳ್ಳುತ್ತಾರೆ. ಆದರೆ ಆಂತರ್ಯದಲ್ಲಿ ಅವರು ತುಂಬಾ ಭಾವುಕ ಮನುಷ್ಯ. ಅವರಿಗೆ ಅಟ್ಯಾಚ್‌ಮೆಂಟ್‌ ಜಾಸ್ತಿ. ಡಿಟ್ಯಾಚ್‌ಮೆಂಟ್‌ಗೆ ಹೆದರಿಕೊಂಡು ಅವರು ಅಟ್ಯಾಚ್‌ಮೆಂಟ್ ಬೆಳೆಸಿಕೊಳ್ಳೋಲ್ಲ ಅಷ್ಟೇ. ವರ್ಮಾ ಸದಾ ವಿವಾದಗಳನ್ನು ಸೃಷ್ಟಿಸುತ್ತಾರೆ ಎಂದು ಕೆಲವರು ಮಾತನಾಡುತ್ತಾರೆ. ಇದಕ್ಕೆ ಕಾರಣ ಅವರ ನೇರ ನಡೆ, ನುಡಿ. ತಮ್ಮ ನೇರವಂತಿಕೆಯಿಂದಲೇ ಅವರು ವಿವಾದಗಳಿಗೆ ಸಿಲುಕುವುದು.

ಸಿನಿಮಾ ಹೊರತಾಗಿ ಅವರು ಬೇರೇನೂ ಮಾತನಾಡುವುದನ್ನು ನಾನು ನೋಡಿಲ್ಲ. ಅವರು ಜೀವಿಸಿರುವುದೇ ಸಿನಿಮಾಗಾಗಿ. ಶೂಟಿಂಗ್‌, ಎಡಿಟಿಂಗ್‌, ಇಲ್ಲವೇ ಹೊಸ ಸಿನಿಮಾ ತಯಾರಿ, ಇದೇನೂ ಇಲ್ಲದಿದ್ದರೆ ಸಿನಿಮಾ ನೋಡುತ್ತಾ ಕುಳಿತಿರುತ್ತಾರೆ. ಸದಾ ಅವರಲ್ಲಿ ಐಡಿಯಾಗಳು ತುಂಬಿರುತ್ತವೆ. ನಿರಂತರವಾಗಿ ನಿರ್ದೇಶನದ ಸಂದರ್ಭದಲ್ಲಿ ಅವರು ಹಗಲು ರಾತ್ರಿ ಎನ್ನದೆ ದುಡಿಯುತ್ತಾರೆ. ಯುವ ತಂತ್ರಜ್ಞರು ಅವರನ್ನು ಅನುಕರಿಸವುದು ಹೊಸ ಸಂಗತಿಯೇನಲ್ಲ. ಹಿಂದೆ ವರ್ಮಾಗೆ ಸಹಾಯಕರಾಗಿದ್ದವರು ಈಗ ಉದ್ಯಮದಲ್ಲಿ ಹೆಸರು ಮಾಡುತ್ತಿರುವುದನ್ನು ನಾವು ನೋಡಬಹುದು. ಕಲಾವಿದರಿಗೂ ಅವರ ಮೇಲೆ ಅಪಾರ ವಿಶ್ವಾಸ, ಅಭಿಮಾನ. ವರ್ಮಾ ಸಿನಿಮಾಗಳಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಇತಿಹಾಸ ಸದಾ ಅವರನ್ನು ನೆನಪಿಸಿಕೊಳ್ಳುತ್ತದೆ. ವರ್ಮಾಗೆ ಪರ್ಯಾಯವೇ ಇಲ್ಲ. ಅವರು ಇರುವುದು ಹಾಗೆ. ಮುಂದೆ ಕೂಡ ಹಾಗೆಯೇ ಇರುತ್ತಾರೆ.

(ನಿರೂಪಣೆ: ಶಶಿಧರ ಚಿತ್ರದುರ್ಗ)

(ಫೋಟೊಗಳು: RGV Fan Page)

ಈ ಬರಹಗಳನ್ನೂ ಓದಿ