ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಭಿಮಾನಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಮೋಹನ್‌ ಬಾಬು

ಪೋಸ್ಟ್ ಶೇರ್ ಮಾಡಿ
ಮಾಸ್ತಿ
ಸಂಭಾಷಣೆಕಾರ

“ನನಗೆ ನೀವು ಅಂದ್ರೆ ದೇವರ ಸಮಾನ. ನಾನು ಮದುವೆ ಆದ್ರೆ ಬರೋವ್ಳು ಇದನ್ನೆಲ್ಲಾ ಇಷ್ಟ ಪಡ್ಲಿಲ್ಲ ಅಂದ್ರೆ ನನಗೆ ತುಂಬಾನೇ ನೋವಾಗುತ್ತೆ. ಅದಕ್ಕೇ ನಾನು ಮದುವೇನೆ ಆಗ್ಲಿಲ್ಲ” ಎಂದ ಅಭಿಮಾನಿ. – ತೆಲುಗು ನಟ ಮೋಹನ್ ಬಾಬು ಕುರಿತು  ಸಂಭಾಷಣೆಕಾರ ಮಾಸ್ತಿ ಬರಹ.

ಮಂಚು ಮೋಹನ್ ಬಾಬು ಅವರು ನೆರೆಯ ತೆಲುಗು ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಅಂತಲೇ ಪ್ರಸಿದ್ಧಿ. ನಮ್ಮ ಅಂಬರೀಶಣ್ಣನಿಗೂ ತುಂಬಾನೇ ಆಪ್ತ. ಒಮ್ಮೆ ಇವರು ಯಾವುದೋ ಒಂದು ಶೂಟಿಂಗ್ ನಲ್ಲಿ ಭಾಗವಹಿಸಿದ್ದರಂತೆ. ಆ ಸಿನಿಮಾದಲ್ಲಿ ಇವರದೊಂದು ಸಣ್ಣ ಕೇಡಿ ಪಾತ್ರ, ಆ ಚಿತ್ರದ ಹೀರೋ ಒಂದು ಕಾಲಕ್ಕೆ ಇಡೀ ಆಂಧ್ರ ಪ್ರದೇಶವನ್ನೇ ಆಳಿದ ಎನ್‌ಟಿಆರ್‌ ಎಂದು ಕರೆಸಿಕೊಳ್ಳೋ ನಂದಮೂರಿ ತಾರಕ ರಾಮಾರಾವ್ ರವರು.

ಆ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಎನ್‌ಟಿಆರ್‌ ಅವರು ಒಂದು ಬದಿಯಲ್ಲಿ ಕುಳಿತಿದ್ದರಂತೆ. ಅವರ ಎದುರೇ ಅನತಿ ದೂರದಲ್ಲಿ ಮೋಹನ್ ಬಾಬು ಒಂದು ಚೇರಲ್ಲಿ ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕೂತಿದ್ದಾನೆ. ಅಲ್ಲಿ ಸೀನ್ ಪೇಪರ್ ಹಿಡಿದು ಹಾದು ಹೋಗುತ್ತಿದ್ದ ಆ ಚಿತ್ರದ ನಿರ್ದೇಶಕ ರಾಘವೇಂದ್ರರಾವ್ ಇವರನ್ನು ನೋಡಿ “ಏಯ್ ಅಲ್ಲಿ ದೊಡ್ಮನುಷ್ಯ ಕೂತಿದಾನೆ. ಅವರ ಎದರುಗಡೇನೇ ಹಿಂಗ್ ಕಾಲ್ ಮೇಲೆ ಕಾಲ್ ಹಾಕ್ಕೊಂಡ್ ಧಿಮಾಕಾಗಿ ಕೂತಿದ್ದೀಯಲ್ಲ. ಎಷ್ಟು ಅಹಂಕಾರ ಇರಬೇಕು ನಿನಗೆ ಇಳಿಸಯ್ಯ ಕಾಲು” ಅಂತ ಗದರಿದ್ದಾರೆ. ಸರಿ ಮೋಹನ್ ಬಾಬು ಕಾಲು ಕೆಳಗಿಳಿಸಿ ತೆಪ್ಪಗೆ ಕುಳಿತಿದ್ದಾರೆ.

ಹತ್ತು ನಿಮಿಷದ ನಂತರ ವಾಪಸ್ಸಾಗುತ್ತಿದ್ದ ರಾಘವೇಂದ್ರರಾಯರಿಗೆ ಮೋಹನ್ ಬಾಬು ಪುನಃ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವುದು ಕಣ್ಣಿಗೆ ಬಿದ್ದಿದೆ. ಸರ್ರನೆ ಅವರ ಪಿತ್ತ ನೆತ್ತಿಗೇರಿದೆ. ಕೋಪದಿಂದ ಇವನಲ್ಲಿಗೆ ಬಂದ ಅವರು, “ನಿನಗೆ ಇರೋದು ಅಹಂಕಾರ ಅಲ್ಲ ಕಣಯ್ಯ, ದುರಹಂಕಾರ!” ಅಂತ ಬೈಯಲು ಶುರು ಮಾಡಿದ್ದಾರೆ. ಆ ಕಡೆಯಿಂದ ಖುದ್ದು ಎನ್‌ಟಿಆರ್‌ “ನಿರ್ದೇಶಕರೇ ಆ ಹುಡುಗ ನನ್ಹತ್ರ ಪರ್ಮಿಷನ್‌ ತಗೊಂಡು ಹೋಗೇ ಕೂತಿದಾನೆ, ತಲೆಕೆಡಸ್ಕೋಬೇಡಿ” ಅಂತ ಹೇಳಿದ್ದಾರೆ.

ಇಲ್ಲಿ ಏನ್ ಆಗಿದೆ ಅಂದ್ರೆ ರಾಘವೇಂದ್ರ ರಾಯರು ಮೊದಲ ಬಾರಿಗೆ ಬೈದು ಅತ್ತ ಹೋದ ತಕ್ಷಣ ಈವಯ್ಯ ಸೀದಾ ಎನ್ಟಿಆರ್ ಅವರ ಬಳಿ ಹೋಗಿ ಕೈ ಮುಗಿಯುತ್ತಾ, “ಅಣ್ಣಾ ನನಗೆ ಕಾಲು ಉದ್ದ, ಅಲ್ಲದೇ ಸ್ವಲ್ಪ ನೋವು ಇದೆ. ಅದಕ್ಕೆ ಕಾಲ್ ಮೇಲೆ ಹಾಕ್ಕೊಂಡು ಕೂತ್ಕೋತೀನಿ. ನೀವು ಅನ್ಯಥಾ ಭಾವಿಸಬೇಡಿ” ಎಂದಿದ್ದಾನೆ. ಆಗ ಅವರು ‘ ಏಯ್ ಬ್ರದರ್ ಅಗತ್ಯವಾಗಿ ಕಾಲು ಹಾಕ್ಕೋಂಡು ಆರಾಮಾಗಿ ಕೂತ್ಕೋ ಅದರಲ್ಲೇನಿದೆ ‘ ಎಂದು ಅನುಮತಿಸಿದ್ದಾರೆ.

ಹೀಗೆ ಎಲ್ಲೇ ಆಗಲಿ, ಯಾರಿಗೇ ಆಗಲಿ ತನಗನ್ನಿಸಿದ್ದನ್ನು ನೇರವಾಗಿ ಹೇಳುವ ಮನುಷ್ಯ ಮೋಹನ್ ಬಾಬು. ಮೊದಲೆಲ್ಲಾ ಸಣ್ಣ ಪುಟ್ಟ ನೆಗೆಟಿವ್ ಪಾತ್ರಗಳನ್ನು ಮಾಡಿಕೊಂಡಿದ್ದ ಇವರು ಮುಂದೆ ಸ್ವಲ್ಪ ಹಣ ಹೊಂದಿಸಿಕೊಂಡು ಸೀದಾ ಇದೇ ರಾಘವೇಂದ್ರ ರಾಯರ ಬಳಿ ಹೋಗಿ “ಗುರುಗಳೇ ನನ್ನತ್ರ ಇರೋದಿಷ್ಟು, ದಯವಿಟ್ಟು ನೀವೇ ನಿರ್ದೇಶನ ಮಾಡ್ಕೊಡಬೇಕು” ಅಂತ ‘ಅಲ್ಲುಡುಗಾರು’ ಎಂಬ ಸಿನಿಮಾದ ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ಮಾಣ ಮಾಡುತ್ತಾರೆ. ಅದು ದೊಡ್ಡ ಮಟ್ಟದ ಹಿಟ್ ಆಗುತ್ತದೆ. ಮೋಹನ್ ಬಾಬು ತೆಲುಗು ಚಿತ್ರರಂಗದಲ್ಲಿ ನಾಯಕನಾಗಿ ನೆಲೆನಿಲ್ಲುತ್ತಾರೆ. ಮುಂದೆ ಅವರ ನಿರ್ಮಾಣ ಸಂಸ್ಥೆಯಲ್ಲೇ ಮೇರುನಟ ಎನ್‌ಟಿಆರ್‌ ಅವರನ್ನು ಹಾಕಿಕೊಂಡು ‘ಮೇಜರ್ ಚಂದ್ರಕಾಂತ್‌’ ಸಿನಿಮಾ ನಿರ್ಮಿಸುತ್ತಾರೆ. ಅದು ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ಣ ಯಶಸ್ಸು ಪಡೆಯುವುದರೊಂದಿಗೆ ಇತಿಹಾಸ ಸೃಷ್ಟಿಸುತ್ತದೆ.

‘ಮೇಜರ್ ಚಂದ್ರಕಾಂತ್‌’ ಸಿನಿಮಾ ಸೆಟ್‌ನಲ್ಲಿ ನಿರ್ದೇಶಕ ರಾಘವೇಂದ್ರರಾವ್‌, ಎನ್‌ಟಿಆರ್‌, ಶಾರದ, ಮೋಹನ್ ಬಾಬು

ಮೋಹನ್ ಬಾಬು ಮನೆಯ ಮುಂದೆ ಸದಾ ಅಭಿಮಾನಿಗಳ ದಂಡೇ ನೆರೆದಿರುತ್ತದೆ. ಅಂತಾ ಅಭಿಮಾನಿಗಳಲ್ಲಿ ಒಬ್ಬ ವಿಶೇಷ ಅಂತಲೇ ಹೇಳಬಹುದು… ಅಂತಾವ್ನೊಬ್ಬ ಅಭಿಮಾನಿ ಇರ್ತಾನೆ. ಅವನು ಪ್ರತಿದಿನ ಬೆಳಿಗ್ಗೆ ಹೀರೋ ಮನೇಲಿರಲಿ, ಇಲ್ಲದೇ ಇರಲಿ ಅವರ ಮನೆ ಮುಂದೆ ಬಂದು ಸ್ವಲ್ಪ ಹೊತ್ತು ಇದ್ದು ಮೋಹನ್ ಬಾಬು ಅವರು ಕಂಡ್ರೆ ಅವರನ್ನ ಹತ್ತಿರದಿಂದಲೋ ದೂರದಿಂದಲೋ ಒಟ್ಟಿನಲ್ಲಿ ಅವರ ದರ್ಶನ ಪಡೆದು ಹೋಗುತ್ತಿರುತ್ತಾನೆ. ಹೀರೋ ಮನೆಯ ಸೆಕ್ಯೂರಿಟಿ, ಡ್ರೈವರು ಇವನು ಬರೋದನ್ನ ಕಾಯೋದನ್ನ ಹೋಗೋದನ್ನ ಸದಾ ಗಮನಿಸ್ತಾ ಇರ್ತಾರೆ.

ಇವನ ಬಗ್ಗೆ ಅವರು ಒಮ್ಮೆ ಮೋಹನ್ ಬಾಬು ಅವರಿಗೆ ತಿಳಿಸುತ್ತಾರೆ. ಎಲ್ಲರ ಥರ ಇವನೂ ಒಬ್ಬ ಫ್ಯಾನು ಅಂತ ಅವರು ಈ ವಿಷಯವನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಒಮ್ಮೆ ಮೋಹನ್ ಬಾಬು ಡ್ರೈವರು ತನ್ನ ಕುತೂಹಲ ತಡಿಯಕ್ಕಾಗದೇ ಇವನನ್ನು ಫಾಲೋ ಮಾಡ್ಕೊಂಡೋಗಿ ಅವನ ಮನೆ ಒಳಗೆ ಹೋಗಿ ನೋಡ್ತಾನೆ. ಅವನಿಗೆ ಷಾಕ್ ಆಗುತ್ತದೆ. ಅದೇನು ಅಂದ್ರೆ ಮನೆಯ ತುಂಬಾ ಮೋಹನ್ ಬಾಬು ಫೋಟೋಗಳಿರುತ್ತವೆ. ಒಂದಿಷ್ಟೂ ಜಾಗ ಬಿಡದಂಗೆ ಎಲ್ಲಾ ಕಡೇನೂ ಮೋಹನ್ ಬಾಬು ಅವರ ತರಹೇವಾರಿ ಫೋಟೋಗಳು, ಅವರ ಚಿತ್ರಗಳ ಹೆಸರುಗಳು ಸಂದರ್ಶನದ ಪ್ರತಿಗಳು ಹೀಗೆ ಎಲ್ಲಾ ಕಡೇನೂ ಅಂಟಿಸಿರುತ್ತಾನೆ. ಈ ವಿಚಾರವನ್ನು ಡ್ರೈವರ್ ಬಂದು ಮೋಹನ್ ಬಾಬು ಅವರಿಗೆ ತಿಳಿಸಿದಾಗ ಅವರಿಗೆ ಇವನ ಮನೆಯನ್ನು ನೋಡಬೇಕೆನಿಸುತ್ತದೆ.

ಅವರು ಒಮ್ಮೆ ಸರ್ಪೈಸ್‌ ಅಗಿ ಅವನ ಮನೆಗೆ ಭೇಟಿ ನೀಡುತ್ತಾರೆ. ಅವನ ಹುಚ್ಚು ಅಭಿಮಾನವನ್ನು ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಜೊತೆಗೆ ಖುಷಿಯಾಗುತ್ತದೆ. ತನ್ನ ನೆಚ್ಚಿನ ಹೀರೋ ತನ್ನ ಮನೆಬಾಗಿಲಿಗೆ ಬಂದಿರೋದನ್ನ ನೋಡಿ ಅವನಿಗೆ ಸ್ವರ್ಗದ ಅನುಭವವಾಗುತ್ತದೆ. ತುಂಬು ಮನಸ್ಸಿನಿಂದ ಉಪಚರಿಸುತ್ತಾನೆ. ಆತಿಥ್ಯ ಸ್ವೀಕರಿಸಿದ ಮೋಹನ್ ಬಾಬು ಇವನ ಕುಟುಂಬದವರ ಬಗ್ಗೆ ಕೇಳಿದಾಗ, “ಇಲ್ಲ ಸಾರ್ ಅವರೆಲ್ಲಾ ಹಳ್ಳೀಲಿದಾರೆ ನಾನು ನಿಮ್ಮ ಮೇಲಿನ ಅಭಿಮಾನಕ್ಕೆ ಹೈದರಾಬಾದಿಗೆ ಬಂದೆ. ಈಗ ಇಲ್ಲಿ ಕೆಲಸ ಮಾಡ್ಕೊಂಡಿದೀನಿ” ಅಂತಾನೆ. “ಮತ್ತೆ ನೀನು ಮದುವೆ ಆಗಿಲ್ವಾ?” ಅಂತ ಕೇಳಿದಾಗ , “ಇಲ್ಲ ಸಾರ್ ಆಗಿಲ್ಲಾ” ಅಂತಾನೆ. ಅದಕ್ಕೆ ಮೋಹನ್ ಬಾಬು ಆಶ್ಚರ್ಯದಿಂದ, “ಅಲ್ಲ ಕಣಯ್ಯ ಈಗಾಗ್ಲೇ ನಿನಗೆ ವಯಸ್ಸು ಹತ್ರತ್ರ ಐವತ್ತಾದಂಗಿದೆ. ಇನ್ನೂ ಯಾಕ್ ಮದುವೆ ಆಗಿಲ್ಲ?” ಅಂತ ವಿಚಾರಿಸುತ್ತಾರೆ. “ಇಲ್ಲ ಸಾರ್ ನನಗೆ ನೀವು ಅಂದ್ರೆ ದೇವರ ಸಮಾನ. ಈ ಮನೆಯಲ್ಲಿ ನಿಮ್ಮನ್ನ ನಾನು ಪೂಜೆ ಮಾಡ್ತೀನಿ. ನಾನು ಮದುವೆ ಆದ್ರೆ ಬರೋವ್ಳು ಇದನ್ನೆಲ್ಲಾ ಇಷ್ಟ ಪಡ್ಲಿಲ್ಲ ಅಂದ್ರೆ ನನಗೆ ತುಂಬಾನೇ ನೋವಾಗುತ್ತೆ! ಅದಕ್ಕೇ ನಾನು ಮದುವೇನೆ ಆಗ್ಲಿಲ್ಲ” ಅಂತಾನೆ .

ಈ ಮಾತನ್ನು ಕೇಳಿ ದಂಗಾದ ಮೋಹನ್ ಬಾಬು ನಿಂತಲ್ಲೇ ಸಣ್ಣಗೆ ನಡುಗುತ್ತಾರೆ, ಕಣ್ಣೀರಿನಿಂದ ಅವರ ಕಣ್ಣು ಮಂಜಾಗುತ್ತದೆ. ಎದುರುಗಿದ್ದ ಅವನನ್ನು ಬಾಚಿ ಅಪ್ಪಿಕೊಂಡು ಮಗುವಿನಂತೆ ಗಳಗಳನೆ ಅತ್ತುಬಿಡುತ್ತಾರೆ. ಇಂತಹ ಘಟನೆಗಳನ್ನು ಕೇಳಿದಾಗ ಅಣ್ಣಾವ್ರು ಅಭಿಮಾನಿಗಳನ್ನ ‘ದೇವರುಗಳು’ ಅಂತ ಕರೆಯುತ್ತಿದ್ದಿದ್ದು ನೆನಪಾಗುತ್ತದೆ.

ತಂದೆ – ತಾಯಿ ಜೊತೆ ಮೋಹನ್ ಬಾಬು

ಈ ಬರಹಗಳನ್ನೂ ಓದಿ