ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಮ್ಮ ಆದರ್ಶ ಬಂಡುಕೋರತನದ ರೊಚ್ಚು ಹತಾಶೆಯ ಬೆಳಕಿನ ಕೋಲಾಗಿತ್ತು ಶಂಕರ್ ನಾಗ್ ‘ಆಕ್ಸಿಂಡೆಂಟ್’

ಪೋಸ್ಟ್ ಶೇರ್ ಮಾಡಿ
ಕೆ.ಫಣಿರಾಜ್‌
ಸಿನಿಮಾ ವಿಶ್ಲೇಷಕ

ಶಂಕರ್ ಹಾಗೆ ಮಾಡದಿದ್ದಾಗ, ನಾವು ಶಂಕರ್‌ಗೆ ನಮ್ಮ ಅಸಮಾಧಾನ ಹೇಳಲು ಕಾರ್ಡ್ ಚಳುವಳಿ ಮಾಡಿದ್ದೆವು. ಇಂಥಹ ಅಸಮಾಧಾನವನ್ನು ಸಾವಿರಾರು ಯುವಕರು ಮಾಡಿದ್ದರೆಂಬುದು, ನಂತರ ಶಂಕರ್ ಚಿತ್ರದ ಕೊನೆಯ ಬಗ್ಗೆ ಕೊಟ್ಟ ಸಮಜಾಯಿಷಿಯಿಂದ ತಿಳಿಯಿತು.

ತುರ್ತು ಪರಿಸ್ಥಿತಿ ನಂತರದ ಯುವ ಆಂಗರ್ ಕಾಲದಲ್ಲಿದ್ದ ನನ್ನಂಥವರಿಗೆ ಒಂದು ಕಡೆ ಎಡ ಸಾಮೂಹಿಕ ಚಳುವಳಿಯ ಸಖ್ಯ ಸೆಳೆದರೆ ಮತ್ತೊಂದು ಕಡೆ ಬ್ರಿಡ್ಜ್ ಸಿನಿಮಾಗಳು ಸೆಳೆಯುತ್ತಿದ್ದವು. ಅಂಥಾ ಕಾಲದಲ್ಲಿ ಜನಪ್ರಿಯ ವೇದಿಕೆಯಲ್ಲಿ ತೆರೆ ಕಂಡ ‘ಒಂದಾನೊಂದು ಕಾಲದಲ್ಲಿ’ ಸಿನಿಮಾ ಹಾಗು ಭಿನ್ನ ನಾಯಕ ಪ್ರತಿಮೆಯ ಶಂಕರ್ ನಾಗ್ ಒಮ್ಮೆಲೇ ಆಪ್ತರಾಗಿಬಿಟ್ಟರು. ಅವರ ‘ಮಿಂಚಿನ ಓಟ’ವು ನನ್ನಂಥವರಲ್ಲಿ ಕನ್ನಡ ಸಿನಿಮಾದ ಟರ್ನಿಂಗ್ ಪಾಯಿಂಟ್ ಎಂಬ ಆಸೆ ಹುಟ್ಟಿಸಿತು.

‘ಆಕ್ಸಿಡೆಂಟ್’ ಆ ಕಾಲದ ನಮ್ಮ ಆದರ್ಶ ಬಂಡುಕೋರತನದ ರೊಚ್ಚು ಹತಾಶೆಯ ಬೆಳಕಿನ ಕೋಲಾದರೂ, ಇಂದಿರಾ ಹತ್ಯೆಯ ಕಾರಣ ಕೊನೆಯನ್ನು ಧುತ್ತನೇ ಬದಲಾಯಿಸಿದಂತೆ ಕಂಡು ಕೊಂಚ ನಿರಾಶೆಯಾದರೂ, ಶಂಕರ್ ದುಡುಕುವವರಲ್ಲ ಎಂಬ ಭರವಸೆ ಮೂಡಿಸಿತು. ಆದ್ರೆ ಆ ಸಿನಿಮಾಕ್ಕೆ ‘ರಾಷ್ಟ್ರೀಯ ಐಕ್ಯತೆಯ ಸದ್ಭಾವನೆ ಮೂಡಿಸುವ ಸಿನಿಮಾ’ ರಾಷ್ಟ್ರಪ್ರಶಸ್ತಿ ನೀಡಿದಾಗ, ಅದು ಸಿನೆಮಾದ ಒಟ್ಟೂ ವ್ಯವಸ್ಥೆ ವಿರೋಧಿ ಆಕ್ರೋಶಕ್ಕೆ ಅಪಚಾರವೆಸಗಿ ಮಣಿಸುವ ತಂತ್ರವಾಗಿದ್ದು, ಅದನ್ನು ಶಂಕರ್ ಧಿಕ್ಕರಿಸುವರು ಎಂಬ ಆಸೆ ನಮಗಿತ್ತು.

ಶಂಕರ್ ಹಾಗೆ ಮಾಡದಿದ್ದಾಗ, ನಾವು ಶಂಕರ್‌ಗೆ ನಮ್ಮ ಅಸಮಾಧಾನ ಹೇಳಲು ಕಾರ್ಡ್ ಚಳುವಳಿ ಮಾಡಿದ್ದೆವು. ಇಂಥಹ ಅಸಮಾಧಾನವನ್ನು ಸಾವಿರಾರು ಯುವಕರು ಮಾಡಿದ್ದರೆಂಬುದು, ನಂತರ ಶಂಕರ್ ಚಿತ್ರದ ಕೊನೆಯ ಬಗ್ಗೆ ಕೊಟ್ಟ ಸಮಜಾಯಿಷಿಯಿಂದ ತಿಳಿಯಿತು. ‘ಹಿಂಸೆಯ ಬಗ್ಗೆ ಮತ್ತೊಮ್ಮೆ ಯೋಚಿಸೋಣ, ಎಲ್ಲರೂ ಕೂಡಿ ಯೋಚಿಸೋಣ’ ಎಂಬ ಅರ್ಥ ಬರುವ ಹೇಳಿಕೆಯನ್ನು ನೀಡಿದಾಗ ನಾವು ಅರೆಸಮಾಧಾನಗೊಂಡಿದ್ದೆವು.

1985ರ ನಂತರದಲ್ಲಿ, ದೇಶದ ಇತರ ಭಾಷೆಯ ಸಿನಿಮಾ, ಜಾಗತಿಕ ಸಿನಿಮಾಗಳಿಗೆ ತೆರೆದುಕೊಳ್ಳುವವರೆಗೂ, ಶಂಕರ್ ನನ್ನಂಥ ಹಸಿ ಯೌವನಿಗರ Icon ಆಗಿದ್ದರು. ಅವರು ಪುನರ್ಜನ್ಮದ ವಸ್ತುವಿನ ಸಿನಿಮಾ ಮಾಡಿದಾಗ, ನಾವು ಕಸವಿಸಿಗೊಂಡಿದ್ದರೂ, ಯಾವ್ಯಾವುದೋ ತರ್ಕ ಹೊಸೆದು ಡಿಫೆಂಡ್ ಮಾಡಿಕೊಂಡದ್ದನ್ನು ನೆನೆದರೆ ನಗು ಬರುತ್ತದೆ. ಬದುಕಿರುವವರೆಗೂ ಶಂಕರ್ ನಾಗರಕಟ್ಟೆ ನಮ್ಮನ್ನು ಮೇನ್‌ಸ್ಟ್ರೀಂ ಸಿನಿಮಾದಲ್ಲಿ ಪ್ರತಿನಿಧಿಸುವ ನಾಯಕ ಎಂಬ ಭಾವಾಭಿಮಾನ ಇದ್ದದ್ದು ಸುಳ್ಳಲ್ಲ.

ಈ ಬರಹಗಳನ್ನೂ ಓದಿ