ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಣ್ಣಿಗೆ ಕಾಣದ ಚಾರ್ಲಿ ತಳಮಳ

ಪೋಸ್ಟ್ ಶೇರ್ ಮಾಡಿ
ಪಿ.ಲಂಕೇಶ್,
ಸಾಹಿತಿ, ಪತ್ರಕರ್ತ

ದೂರದಿಂದ ನೋಡುವವರ ದೃಷ್ಟಿಯಲ್ಲಿ ಚಾರ್ಲಿ ಅದೃಷ್ಟವಂತ. ಕೋಟಿಗಟ್ಟಲೆ ಹಣ, ಜಗತ್ತನ್ನು ಹಬ್ಬಿದ್ದ ಖ್ಯಾತಿ ಇದ್ದವನು ಈತ. ಆದರೆ ಕೋಮಲ ಮನಸ್ಸಿನ ಚಾರ್ಲಿ ಎಂದೂ ನೆಮ್ಮದಿ ಪಡೆಯಲಿಲ್ಲ.

ನಿಜಕ್ಕೂ ಪ್ರತಿಭಾವಂತನಾದವನಲ್ಲಿ ಉಗ್ರ ವಸ್ತುನಿಷ್ಠೆ ಮತ್ತು ನಿಸ್ಸೀಮ ಪ್ರೀತಿ ಇರುತ್ತದೆ. ಚಾರ್ಲಿ ಚಾಪ್ಲಿನ್ ಎಂಬ ನಟನನ್ನು ನಾವು ಬರೀ ನಟ ಎಂದು ಕರೆಯಲಾಗುವುದಿಲ್ಲ. ಅವನೊಬ್ಬ ಭಿಕಾರಿ, ತಿರುಕ, ದ್ರಷ್ಟಾರ ಮತ್ತು ಕಲಾವಿದ; ಒಮ್ಮೆ ಕೋಡಂಗಿಯಂತೆ ಕಾಣುವ ಈತ ಇನ್ನೊಮ್ಮೆ ನಮ್ಮನ್ನು ಕತ್ತರಿಸಿ ಹಾಕುವ ಕಟುಕ. ಕಡು ಬಡವನ ಮಗನಾಗಿ ಹುಟ್ಟಿದ ಚಾರ್ಲಿ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ. ಅಮ್ಮ ಪದೇ ಪದೇ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು.

ಹಾಡುವುದರಿಂದ ಆರಂಭಿಸಿದ ಅನಾಥ ಚಾರ್ಲಿ ದೊಂಬರಂತೆ ಲಾಗ ಹಾಕುವುದನ್ನು ಕಲಿತ. ಜನರನ್ನು ರಂಜಿಸುತ್ತಲೇ ಚಿಂತೆಗೆ ಹಚ್ಚಬಲ್ಲ ಈತ ಇಂಗ್ಲೆಂಡಿನ ವರ್ಗ ವೈಷಮ್ಯದಲ್ಲಿ ನಲುಗಿ ಅಮೆರಿಕಕ್ಕೆ ಹೋದ. ಅಲ್ಲಿ ಮಿಂಚಿನಂತೆ ಕುಪ್ಪಳಿಸಿ ಕ್ಲಿಕ್ಕಾದ. ಆತ ತನ್ನ ಬಡತನ, ತಬ್ಬಲಿತನವನ್ನು ಅಮೆರಿಕಕ್ಕೆ ತಂದಿದ್ದ. ಬಡವನ ವಿಚಿತ್ರ ಸ್ವಾತಂತ್ರ್ಯ ಮತ್ತು ಮುಖಭಂಗವನ್ನು ಕೂಡ. ಇಂಗ್ಲೆಂಡಿನಲ್ಲಿ ಹೊರಗಿನವನಾಗಿದ್ದ ಚಾರ್ಲಿ ಅಮೆರಿಕದಲ್ಲೂ ಪರಕೀಯನಾಗೇ ಉಳಿದ. ವ್ಯಭಿಚಾರ ಮತ್ತು ಪ್ರೇಮಕ್ಕೆ ಇರುವ ವ್ಯತ್ಯಾಸವನ್ನು, ಸರ್ಕಾರ ಮತ್ತು ವ್ಯಕ್ತಿಗಿರುವ ಸಂಬಂಧವನ್ನು, ಮನುಷ್ಯನಾಳದ ಕಾತರ ಮತ್ತು ನ್ಯಾಯಾಲಗಳಿಗೆ ಇರುವ ನಂಟನ್ನು ಅರಿಯದೆ ಇದ್ದ ಚಾರ್ಲಿ ಪ್ರೇಮದಲ್ಲಿ, ಮದುವೆಯಲ್ಲಿ, ತೆರಿಗೆಯಲ್ಲಿ, ಶ್ರೀಮಂತಿಕೆಯಲ್ಲಿ ನುಚ್ಚುನೂರಾದ.

ದೂರದಿಂದ ನೋಡುವವರ ದೃಷ್ಟಿಯಲ್ಲಿ ಚಾರ್ಲಿ ಅದೃಷ್ಟವಂತ. ಕೋಟಿಗಟ್ಟಲೆ ಹಣ, ಜಗತ್ತನ್ನು ಹಬ್ಬಿದ್ದ ಖ್ಯಾತಿ ಇದ್ದವನು ಈತ. ಆದರೆ ಕೋಮಲ ಮನಸ್ಸಿನ ಚಾರ್ಲಿ ಎಂದೂ ನೆಮ್ಮದಿ ಪಡೆಯಲಿಲ್ಲ.

ಮೊನ್ನೆ ನನ್ನ ಮಗಳು ರಿಚರ್ಡ್‌ ಅಟೆನ್‌ಬರೋ ನಿರ್ದೇಶಿಸಿದ ಚಾರ್ಲಿಯ ಜೀವನಚರಿತ್ರೆಯ ಕ್ಯಾಸೆಟ್‌ ತಂದಳು. ಈ ಚಿತ್ರದ ರಂಜನೆಗಾಗಿ ಕಾದಿದ್ದ ನಾನು ವಿಸ್ಮಿತನಾಗಿ ಕೂತೆ. ಅಷ್ಟು ಪ್ರತಿಭಾವಂತನಾಗಿದ್ದರೂ ಚಾರ್ಲಿಗೆ ಎಂದೂ ಆಸ್ಕರ್ ಪ್ರಶಸ್ತಿ ದೊರೆತಿರಲಿಲ್ಲ.

ಇವತ್ತಿಗೂ ಚಾರ್ಲಿಯ ಯಾವ ಚಿತ್ರವೂ ಪ್ರಪಂಚದ ಹತ್ತು ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ಇರುವುದಿಲ್ಲ. ಏಕೆಂದರೆ, ಚಾರ್ಲಿಯ ದರ್ಶನ ಇವನ್ನೆಲ್ಲಾ ಮೀರಿದ್ದು, ಆತನ ಸಾಧನೆ ಕೇವಲ ಒಬ್ಬ ನಟನ, ನಿರ್ದೇಶಕನ ಸಾಧನೆಯಲ್ಲ. ಎಂದೂ ಆಸ್ಕರ್‌ ಪಡೆಯದಿದ್ದ ಚಾರ್ಲಿಗೆ ವಿಶೇಷ ಆಸ್ಕರ್ ಕೊಡುವ ಸಮಾರಂಭ… ಸಾವಿರಾರು ಜನ ಚಾರ್ಲಿಯ ಕ್ಯಾಸೆಟ್‌ಗಳಾದ ‘ಕಿಡ್‌’, ‘ಮಾಡರ್ನ್‌ ಟೈಂಸ್‌’, ‘ಗ್ರೇಟ್ ಡಿಕ್ಟೇಟರ್‌’, ‘ಲೈಮ್‌ಲೈಟ್‌’ ನೋಡಿ ನಕ್ಕು ನಲಿದಾಡುತ್ತಿದ್ದಾಗ ಚಾರ್ಲಿ ತನ್ನ ಎಳೆತನದ ಅಭಿನಯ ನೋಡುತ್ತಾ ಕಂಬನಿದುಂಬಿ ಕೂತಿದ್ದ. ಆತ ಕಳೆದುಹೋದ ತನ್ನ ಮುಗ್ಧತೆ, ಬಾಲ್ಯ, ಜೀವಂತಿಕೆ ನೋಡಿ ವಿಹ್ವಲಗೊಂಡಿದ್ದನೆ? ಅಥವಾ ತನ್ನ ಸಾಧನೆಗೆ ಹೆಮ್ಮೆಯಿಂದ ಕಂಬನಿಗರೆಯುತ್ತಿದ್ದನೇ? ಅಥವಾ ತನ್ನ ಬದುಕಿನ ವಿಹ್ವಲತೆಗೆ ಖೇದಗೊಂಡಿದ್ದನೇ?
(ಸೆಪ್ಟೆಂಬರ್‌ 9, 1988)
(ಪಿ.ಲಂಕೇಶರ ‘ಈ ನರಕ ಈ ಪುಲಕ’ ಪುಸ್ತಕದಿಂದ ಆಯ್ದ ಬರಹ)

ಈ ಬರಹಗಳನ್ನೂ ಓದಿ