ಬುಚ್ಚಿಬಾಬು ನಿರ್ದೇಶನದ, ರಾಮ್ ಚರಣ್ ತೇಜಾ ಅಭಿನಯದ ‘ಪೆದ್ದಿ’ ಸಿನಿಮಾ ಇದೇ ಜೂನ್ 4ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ನಿನ್ನೆ (ಮೇ 25) ಬೆಂಗಳೂರಿನಲ್ಲಿ ಪ್ರಚಾರಕಾರ್ಯ ಹಮ್ಮಿಕೊಂಡಿತ್ತು.
ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾದ ಪ್ರಚಾರ ಜೋರಾಗಿದೆ. ಮುಂಬೈನಲ್ಲಿ ಅದ್ಧೂರಿಯಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ ಸಿನಿಮಾದ ಪ್ರಚಾರ ನಡೆದಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿ ಗೋಷ್ಟಿ ನಡೆಯಿತು. ನಟ ರಾಮ್ ಚರಣ್ ತೇಜಾಗೆ ನಟಿ ಜಾಹ್ನವಿ ಕಪೂರ್ ಹಾಗೂ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ಶಿವರಾಜ್ ಕುಮಾರ್ ಸಾಥ್ ನೀಡಿದರು.
ನಟ ರಾಮ್ ಚರಣ್ ತೇಜಾ ಮಾತನಾಡಿ, ‘ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಸಾರ್ ನನ್ನ ಗುರು ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ಮಾಡಿದ್ದು ನನಗೆ ಬಹಳ ಖುಷಿಯಾಯಿತು. ಯಾಕೆಂದರೆ ಅವರು ಬಿಟ್ಟು ಬೇರೆಯವರು ಮಾಡಿದ್ರೆ ಅಷ್ಟು ಚೆನ್ನಾಗಿ ಇರ್ತಾ ಇರಲಿಲ್ಲ. ಇವತ್ತು ಈ ಕಾರ್ಯಕ್ರಮಕ್ಕೆ ಶಿವಣ್ಣ ಸರ್ ಬಂದಿರೋದಿಕ್ಕೆ ನನಗೆ ಬಹಳ ಸಂತೋಷ ಆಗುತ್ತಿದೆ. ಅಷ್ಟೇ ಅಲ್ಲದೆ ನಮ್ಮ ಚಿತ್ರದ ನಿರ್ದೇಶಕ ಬುಚ್ಚಿಬಾಬು, ಜಾಹ್ನವಿ ಕಪೂರ್, ಜಗಪತಿ ಬಾಬು, ಬೊಮ್ಮನ್ ಇರಾನಿ ಸೇರಿದಂತೆ ಸಾಕಷ್ಟು ಕಲಾವಿದರು ಇದ್ದಾರೆ’ ಎಂದರು.
ಬಳಿಕ ಮಾತನಾಡಿದ ಶಿವರಾಜ್ ಕುಮಾರ್, ‘ಚಿರಂಜೀವಿ ಸರ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ. ನನಗೆ ಡೈರೆಕ್ಟರ್ ಬುಚ್ಚಿಬಾಬು ಪೆದ್ದಿ ಚಿತ್ರದಲ್ಲಿ ನೀವು ಅಭಿನಯಿಸಬೇಕು ಅಂದಾಗ ನಾನು ಕಥೆ ಕೇಳಿದೆ ಒಪ್ಪಿಕೊಂಡೆ. ಯಾಕೆಂದರೆ ಒಂದು ಚಿರಂಜೀವಿ ಸಾರ್ ಫ್ಯಾಮಿಲಿ ಜೊತೆ ಇರುವ ಬಾಂಡಿಂಗ್ ಮತ್ತೊಂದು ರಾಮ್ ಚರಣ್ ತೇಜಾ ಮೇಲೆ ಇರುವ ಪ್ರೀತಿಗೆ. ನಾನು ರಾಮ್ ಅವರು ಈ ಸಿನಿಮಾಗೆ ಹಾಕಿರುವ ಎಫರ್ಟ್ ನೋಡಿದ್ರೆ ಈ ಬಾರಿ ಅವರಿಗೆ ನ್ಯಾಷನಲ್ ಅವಾರ್ಡ್ ಕೊಡಬೇಕು. ಯಾಕೆಂದರೆ ಅಷ್ಟು ಚೆನ್ನಾಗಿ ಈ ಸಿನಿಮಾ ಬಂದಿದೆ ಅದಕ್ಕೆ ನಾನು ಗ್ಯಾರಂಟಿ. ಇಲ್ಲಿ ಅಷ್ಟೇ ಅಲ್ಲಾ ರಾಮ್ ಚರಣ್ ತೇಜಾ ನನ್ನ ಸಹೋದರ ಇದ್ದ ಹಾಗೇ ಪುನೀತ್ ನಂತರ ರಾಮ್ ಚರಣ್ ತೇಜಾ ನನ್ನ ಬ್ರದರ್ ಆಗಿದ್ದಾರೆ. ಅದು ನನಗೆ ತುಂಬಾನೇ ಖುಷಿ ಕೊಡುತ್ತೆ’ ಎಂದು ಶಿವರಾಜ್ ಕುಮಾರ್ ಮೆಚ್ಚುಗೆಯ ಮಾತುಗಳನ್ನ ಹಾಡಿದರು.
ನಟಿ ಜಾಹ್ನವಿ ಕಪೂರ್ ಮಾತನಾಡುತ್ತಾ, ‘ಈ ಚಿತ್ರ ವಿಭಿನ್ನವಾದ ಚಿತ್ರ, ಅದರಲ್ಲೂ ರಾಮ್ ಚರಣ್ ತೇಜಾ ಸಾರ್ ಜೊತೆ ವರ್ಕ್ ಮಾಡಿದ್ದು ಒಳ್ಳೆ ಅನುಭವ, ನನಗೆ ಬೆಂಗಳೂರು ಅಂದ್ರೆ ಇಷ್ಟ ಅಂದ್ರು. ಇನ್ನು ರಾಮ್ ಚರಣ್ ಸಾರ್ ಒಂದು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ರೆ ಸಾಕು ಒಂದೇ ಸಿನಿಮಾದಲ್ಲಿ ಸಣ್ಣ ಆಗ್ತೀರಾ’ ಎಂದು ರಾಮ್ ಚರಣ್ ತೇಜಾ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಶಿವಣ್ಣ ಗೌರನಾಯ್ಡು ಪಾತ್ರ ಮಾಡಿದ್ದು, ರಾಮ್ ಚರಣ್ ಪಾತ್ರದ ಗುರುವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಕುಸ್ತಿ ಪಟುವಾಗಿದ್ದು, ರಾಮ್ ಚರಣ್‌ಗೆ ಕುಸ್ತಿ ಹೇಳಿಕೊಡುವ ಗುರುವಾಗಿ ಶಿವ ರಾಜಕುಮಾರ್ ಅಭಿನಯಿಸಿದ್ದಾರೆ. ಇದೇ ಜೂನ್ 4ಕ್ಕೆ ಸಿನಿಮಾ ಬಿಡುಗಡೆಗೆ ಆಗಲಿದೆ.








